Tag: Home minister

  • ಹುಬ್ಬಳ್ಳಿ ಪೊಲೀಸರ ನಡೆಗೆ ಪ್ರತಾಪ್ ಸಿಂಹ ಗರಂ

    ಹುಬ್ಬಳ್ಳಿ ಪೊಲೀಸರ ನಡೆಗೆ ಪ್ರತಾಪ್ ಸಿಂಹ ಗರಂ

    ಮೈಸೂರು: ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡಿದ ವಿಚಾರವಾಗಿ ಮೈಸೂರಿನಲ್ಲಿ ಸಂಸದ ಪ್ರತಾಪ್‍ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಇದು ಬೇಲ್ ಕೊಟ್ಟವರು ಮಾಡಿದ ದೊಡ್ಡ ಅನಾಹುತ. ನಾನು ಇದನ್ನು ಖಂಡಿಸುತ್ತೇನೆ. ಏಕೆಂದರೆ ನಮ್ಮ ದೇಶದ ಅನ್ನ ತಿಂದು ನಮ್ಮ ದೇಶದಲ್ಲಿ ಓದಿ ಬೇರೆ ದೇಶಕ್ಕೆ ಜೈ ಎನ್ನುವವರನ್ನು ಇಷ್ಟು ಸುಲಭವಾಗಿ ಜಾಮೀನು ನೀಡಿದ್ದು ಮಹಾ ಅಪರಾಧ ಇದು. ಅವರು ಯಾಕೆ ಸ್ಟೇಷನ್ ಬೇಲ್ ನೀಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ದೇಶದ್ರೋಹ ಮಾಡಿದ ಆರೋಪಿಗಳನ್ನು ಇಷ್ಟು ಸುಲಭವಾಗಿ ಬಿಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ದೇಶದ್ರೋಹಿಗಳ ಬೆನ್ನಿಗೆ ನಿಂತಿದ್ಯಾ ಸರ್ಕಾರ?- ಪೊಲೀಸರಿಗೆ, ಬೊಮ್ಮಾಯಿಗೆ ‘ಪಬ್ಲಿಕ್’ ಪ್ರಶ್ನೆಗಳು

    ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳುವವರನ್ನು ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾರೆ ಎಂದರೆ ಇದಕ್ಕಿಂತ ದುರಾದೃಷ್ಟಕರ ಸಂಗತಿ ಮತ್ತೊಂದು ಇಲ್ಲ. ಇದು ನಮ್ಮ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಹಲ್ಲೆ- ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ದೂರು ದಾಖಲು

    ಅಲ್ಲದೆ ಗೃಹ ಸಚಿವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಮಂಗಳೂರಿನಲ್ಲಿ ನಡೆದ ಘಟನೆ ಸಂದರ್ಭದಲ್ಲೂ ತಮ್ಮ ಕಾರ್ಯದಕ್ಷತೆಯನ್ನು ತೋರಿಸಿದ್ದಾರೆ. ಈ ವಿಷಯದಲ್ಲಿ ಗೃಹ ಸಚಿವರು ಎಲ್ಲಾ ಸ್ಟೇಷನ್‍ಗೂ ಫೋನ್ ಮಾಡುವುದಕ್ಕೆ ಸಾಧ್ಯವಾಗಿರುವುದಿಲ್ಲ. ಈ ಪ್ರಕರಣದ ಬಗ್ಗೆ ಅವರು ಪರಿಶೀಲನೆ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

  • ಹುಬ್ಬಳ್ಳಿ ದೇಶದ್ರೋಹಿಗಳ ಬೆನ್ನಿಗೆ ನಿಂತಿದ್ಯಾ ಸರ್ಕಾರ?- ಪೊಲೀಸರಿಗೆ, ಬೊಮ್ಮಾಯಿಗೆ ‘ಪಬ್ಲಿಕ್’ ಪ್ರಶ್ನೆಗಳು

    ಹುಬ್ಬಳ್ಳಿ ದೇಶದ್ರೋಹಿಗಳ ಬೆನ್ನಿಗೆ ನಿಂತಿದ್ಯಾ ಸರ್ಕಾರ?- ಪೊಲೀಸರಿಗೆ, ಬೊಮ್ಮಾಯಿಗೆ ‘ಪಬ್ಲಿಕ್’ ಪ್ರಶ್ನೆಗಳು

    – ಶ್ಯೂರಿಟಿ ಕೊಟ್ಟವರ ಬಗ್ಗೆ ಬಾಯ್ಬಿಡದ ಪೊಲೀಸರು
    – ಗೃಹ ಸಚಿವ ಬೊಮ್ಮಾಯಿ ಮೇಲೆ ಹೈಕಮಾಂಡ್ ಸಿಟ್ಟು

    ಹುಬ್ಬಳ್ಳಿ: ದೇಶದ್ರೋಹಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸ್ಟೇಷನ್ ಬೇಲ್ ಕೊಟ್ಟ ಪ್ರಕರಣ ಹುಬ್ಬಳ್ಳಿ ಪೊಲೀಸರಿಗೆ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಉರುಳಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ದೇಶದ್ರೋಹಿಗಳಿಗೆ ಬೇಲ್ ಕೊಟ್ಟ ಪ್ರಕರಣವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.

    ದೇಶದಲ್ಲಿ ದೇಶದ್ರೋಹ ಕೇಸ್‍ಗಳ ವಿರುದ್ಧ ವ್ಯಾಪಕ ಹೋರಾಟ ನಡೆಯುತ್ತಿದೆ. ಹಲವು ಬಾರಿ ದೇಶದ್ರೋಹ ಕೇಸ್ ದಾಖಲಿಸುವಂತೆ ಬಿಜೆಪಿಯೇ ಒತ್ತಾಯಿಸಿದೆ. ಆದ್ರೀಗ ಬಿಜೆಪಿ ಸರ್ಕಾರವೇ ಆಡಳಿತವಿರುವ ಕರ್ನಾಟಕದಲ್ಲೇ ದೇಶದ್ರೋಹಿಗಳಿಗೆ ಸ್ಟೇಷನ್ ಬೇಲ್ ಕೊಡಲಾಗಿದೆ. ಈ ಬೇಲ್ ಹಿಂದೆ ಯಾರೆಲ್ಲಾ ಇದ್ದಾರೆ? ಯಾರ ಒತ್ತಡವಿದೆ? ಎನ್ನುವ ಬಗ್ಗೆ ವಿವರಣೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಸೂಚಿಸಿದೆ. ಆರ್‌ಎಸ್‍ಎಸ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಇಷ್ಟೆಲ್ಲಾ ಆದರೂ ಹುಬ್ಬಳ್ಳಿ ಪೊಲೀಸರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ದೇಶದ್ರೋಹಿಗಳಿಗೆ ಬೇಲ್ ಕೊಟ್ಟವರ್ಯಾರು? ಅನ್ನೋದರ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಗದಂತೆ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರನ್ನೆ ಪ್ರಶ್ನೆ ಕೇಳಿದರೆ ಪ್ರಕರಣ ತನಿಖಾ ಹಂತದಲ್ಲಿದೆ. ನೋ ಕಾಮೆಂಟ್ಸ್ ಎನ್ನುತ್ತಾರೆ. ಇನ್ನೊಂದೆಡೆ, ದೇಶದ್ರೋಹಿಗಳ ಭೇಟಿಗೆ ಬಂದ ಕುಟುಂಬಸ್ಥರನ್ನು ಮಾಧ್ಯಮಗಳ ಕಣ್ತಪ್ಪಿಸಿ ಜೀಪ್‍ನಲ್ಲಿ ಬೇರೆಡೆಗೆ ಕರೆದೊಯ್ಯಲಾಗಿದೆ. ಇವೆಲ್ಲಾ ಬೆಳವಣಿಗೆಗಳ ಮಧ್ಯೆ, ರಾತ್ರೋರಾತ್ರಿ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

    ಹುಬ್ಬಳ್ಳಿ ಪೊಲೀಸರ ಪ್ರತಿಯೊಂದು ನಡೆಯೂ ಅನುಮಾನಗಳನ್ನು ಮೂಡಿಸುತ್ತಿದೆ. ಸಾರ್ವಜನಿಕ ವಲಯದಲ್ಲಿ ಎದ್ದಿರುವ ಒಂದಿಷ್ಟು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕೊಡಲೇಬೇಕಿದೆ.

    ಪೊಲೀಸರೇ ಉತ್ತರ ಕೊಡಿ:
    ಪಬ್ಲಿಕ್ ಪ್ರಶ್ನೆ 1 – ಸ್ಟೇಷನ್ ಬೇಲ್‍ಗೆ ಶ್ಯೂರಿಟಿ ಕೊಟ್ಟಿದ್ದು ಯಾರು? ಯಾಕೆ ಗೌಪ್ಯತೆ?
    ಪಬ್ಲಿಕ್ ಪ್ರಶ್ನೆ 2 – ದೇಶದ್ರೋಹಿಗಳ ಕುಟುಂಬಸ್ಥರು ನೀಡಿದ್ರಾ? ಕಾಲೇಜಿನ ಮ್ಯಾನೇಜ್‍ಮೆಂಟ್ ನೀಡ್ತಾ?
    ಪಬ್ಲಿಕ್ ಪ್ರಶ್ನೆ 3 – ತನಿಖೆ ದೃಷ್ಟಿಯಿಂದ ಬಹಿರಂಗಪಡಿಸುತ್ತಿಲ್ಲ ಅಂದ್ರೆ ಏನರ್ಥ?
    ಪಬ್ಲಿಕ್ ಪ್ರಶ್ನೆ 4 – ಆರೋಪಿಗಳ ಪೋಷಕರು ಯಾರಿಗೂ ಸಿಗದಂತೆ ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ಯಾಕೆ?

    ಕೇವಲ ಪೊಲೀಸರ ಮೇಲೆ ಅಷ್ಟೇ ಅಲ್ಲ, ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ನಡೆಯೂ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬೊಮ್ಮಾಯಿ ಅವರು ಕೂಡ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಒಂದಿಷ್ಟು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕೊಡಲೇಬೇಕಿದೆ.

    ಗೃಹ ಸಚಿವರೇ ಉತ್ತರ ಕೊಡಿ:
    ಪಬ್ಲಿಕ್ ಪ್ರಶ್ನೆ 1 – ಹುಬ್ಬಳ್ಳಿ ಪ್ರಕರಣದಲ್ಲಿ ಮೃದು ಧೋರಣೆ ಏಕೆ ತಳೆದಿದ್ದೀರಿ?
    ಪಬ್ಲಿಕ್ ಪ್ರಶ್ನೆ 2 – ಸ್ಟೇಷನ್ ಬೇಲ್‍ಗೆ ಮುನ್ನ ಪೊಲೀಸರು ನಿಮ್ಮ ಗಮನಕ್ಕೆ ತಂದಿರಲಿಲ್ವಾ?
    ಪಬ್ಲಿಕ್ ಪ್ರಶ್ನೆ 3 – ಆಯುಕ್ತರ ವರದಿ ಕೇಳಿದ್ದೇನೆ ಎಂದಿದ್ರಿ? ವರದಿ ಬಂತಾ, ಇಲ್ವಾ?
    ಪಬ್ಲಿಕ್ ಪ್ರಶ್ನೆ 4 – ಯಾರ ರಕ್ಷಣೆಗೆ ನಿಂತಿದ್ದೀರಿ? ಯಾರ ಹಿತಾಸಕ್ತಿ ಕಾಪಾಡುತ್ತಿದ್ದೀರಿ?
    ಪಬ್ಲಿಕ್ ಪ್ರಶ್ನೆ 5 – ಬೀದರ್ ಮತ್ತು ಮೈಸೂರು ಪ್ರಕರಣದಲ್ಲಿ ವೀರಾವೇಶ ತೋರಿಸಿದ್ರಿ, ಈಗ್ಯಾಕೆ ಮೌನ?

    ಹುಬ್ಬಳ್ಳಿ ಕೆಎಲ್‍ಇ ಪ್ರಕರಣ ವಿಧಾನಪರಿಷತ್ ಕಲಾಪದಲ್ಲಿಯೂ ಪ್ರತಿಧ್ವನಿಸಿದೆ. ದೇಶದ್ರೋಹಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಯಾಕೆ? ಪೊಲೀಸರ ಮೇಲೆ ಒತ್ತಡ ಹೇರಿದವರು ಯಾರು? ಎಂದು ಜೆಡಿಎಸ್‍ನ ಬಸವರಾಜ ಹೊರಟ್ಟಿ ಪ್ರಶ್ನೆ ಮಾಡಿದರು. ಸಮಗ್ರ ತನಿಖೆಗೆ ಆಗ್ರಹಿಸಿದರು. ಇದಕ್ಕೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ದನಿಗೂಡಿಸಿ, ಇಲ್ಲಿ ಪಾಕಿಸ್ತಾನ ಪರ ಕೆಲಸ ಆಗಿದೆ. ನಮ್ಮ ದೇಶಕ್ಕೆ ದ್ರೋಹವಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು. ಕೂಡಲೇ ಪೊಲೀಸ್ ಕಮೀಷನರ್ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

    ಬಳಿಕ ಸ್ಪಷ್ಟನೆ ಕೊಟ್ಟ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ದೇಶದ್ರೋಹಿಗಳನ್ನು ಸರ್ಕಾರ ಬಿಡುವ ಮಾತಿಲ್ಲ. ಅನಗತ್ಯವಾಗಿ ಬೇರೆ ಪ್ರಕರಣ ಪ್ರಸ್ತಾಪಿಸಿ ಪೊಲೀಸರ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದರು. ಆಗ ವಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಈ ವೇಳೆ ಮಾತಿನ ಚಕಮಕಿ ನಡೀತು. ಆಡಳಿತ ಪಕ್ಷದ ವಿರೋಧದ ನಡೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಅಂತ ಕಾಂಗ್ರೆಸ್ ನಿಲುವಳಿ ಮಂಡಿಸಿತು. ಇತ್ತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ, ಪೊಲೀಸರನ್ನು ದೇವದಾಸಿಯರಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡರು.

  • ಶಾಂತವಾಗಿರೋ ಮಂಗ್ಳೂರನ್ನು ಮತ್ತೆ ಕೆಣಕಿದ್ದಾರೆ- ಹೆಚ್‍ಡಿಕೆ ವಿರುದ್ಧ ಬೊಮ್ಮಾಯಿ ವಾಗ್ದಾಳಿ

    ಶಾಂತವಾಗಿರೋ ಮಂಗ್ಳೂರನ್ನು ಮತ್ತೆ ಕೆಣಕಿದ್ದಾರೆ- ಹೆಚ್‍ಡಿಕೆ ವಿರುದ್ಧ ಬೊಮ್ಮಾಯಿ ವಾಗ್ದಾಳಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಶಾಂತವಾಗಿರುವ ರಾಜ್ಯ ಮತ್ತು ಮಂಗಳೂರನ್ನು ಮತ್ತೆ ಕೆಣಕಿದ್ದಾರೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿಯವರು ಹರಿಹಾಯ್ದಿದ್ದಾರೆ.

    ಇಂದು ಕುಮಾರಸ್ವಾಮಿಯವರಿಂದ ಮಂಗಳೂರು ವೀಡಿಯೋ ಬಿಡುಗಡೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತಾಡಿದ ಅವರು, ಸಿಡಿ ಬಿಡುಗಡೆ ಮೂಲಕ ಕುಮಾರಸ್ವಾಮಿ ಬೇಜವಾಬ್ದಾರಿಯ ನಡವಳಿಕೆ ತೋರಿದ್ದಾರೆ. ಪೊಲೀಸರು ಗಲಭೆ ಮಾಡಲ್ಲ, ಗಲಭೆ ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಇದೇ ಪೋಲಿಸರಿದ್ದರು. ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಮಾಡೋದು ಸರಿಯಿಲ್ಲ. ಪೊಲೀಸರ ಕಡೆ ಬೊಟ್ಟು ತೋರಿಸಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಕುಮಾರಸ್ವಾಮಿ ವಿಡಿಯೋ ಸಮರ್ಪಕವಾಗಿಲ್ಲ, ಸರಿಯಿಲ್ಲ. ವಿಡಿಯೋದಲ್ಲಿ ಹಿಂದೆ ಇರೋದು ಮುಂದೆ, ಮುಂದೆ ಇರೋದು ಹಿಂದೆ ಹಾಕಿ ತೋರಿಸಿದ್ದಾರೆ. ಜನ ಸೇರಿದಾಗ, ಕಲ್ಲು ಎಸೆದಾಗ ಲಾಠಿ ಚಾರ್ಜ್ ಆಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ಆಗಿದೆ. ಈಗ ಕುಮಾರಸ್ವಾಮಿ ಘಟನೆಯನ್ನು ತಿರುಚಿ ಹೇಳಲು ಮುಂದಾಗಿದ್ದಾರೆ ಎಂದು ಹೆಚ್‍ಡಿಕೆ ವಿರುದ್ಧ ಕಿಡಿಕಾರಿದ್ರು. ಇದನ್ನೂ ಓದಿ: ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

    ಕುಮಾರಸ್ವಾಮಿ ಅವರು ತಮ್ಮ ವೀಡಿಯೋವನ್ನು ಮ್ಯಾಜಿಸ್ಟ್ರಿಯಲ್ ತನಿಖೆ ಮಾಡುತ್ತಿರುವವರಿಗೆ ಕೊಡಲಿ. ನಾನೂ ಕೂಡ ಆ ವೀಡಿಯೋಗಳ ಪರಿಶೀಲಿಸಿ ಅಂತ ಡಿಸಿಗೆ ಹೇಳಿದ್ದೇನೆ. ಕುಮಾರಸ್ವಾಮಿ ಅವರು ಈಗ ಜನರಲ್ಲಿ ಗೊಂದಲ ಎಬ್ಬಿಸುತ್ತಿರೋದು ಸರಿಯಲ್ಲ. ಕುಮಾರಸ್ವಾಮಿ ಪೊಲೀಸರೇ ಪ್ರಚೋದನೆ ಕೊಟ್ರು ಅಂದಿದ್ದಾರೆ. ಇದು ತಪ್ಪು, ಬೇಜವಾಬ್ದಾರಿಯ ಹೇಳಿಕೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಲ್ಲೆಲ್ಲಿ ಗಲಭೆ ಆಯ್ತು, ಏನೇನಾಯ್ತು ಅಂತ ಎಲ್ರಿಗೂ ಗೊತ್ತು. ಮತ್ತಷ್ಟು ವೀಡಿಯೋ ಇದೆ ಅಂತಲೂ ಅವರು ಅಂದಿದ್ದಾರೆ. ಅವುಗಳನ್ನು ಸಹ ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳೋದು ಸರಿಯಿಲ್ಲ ವಾಗ್ದಾಳಿ ನಡೆಸಿದರು.

  • ರಾಯಚೂರಿನ ಗಬ್ಬೂರು ಪೊಲೀಸ್ ಠಾಣೆ ಈಗ ರಾಜ್ಯದಲ್ಲೇ ನಂ. 1

    ರಾಯಚೂರಿನ ಗಬ್ಬೂರು ಪೊಲೀಸ್ ಠಾಣೆ ಈಗ ರಾಜ್ಯದಲ್ಲೇ ನಂ. 1

    -ದೇಶದ ಅತ್ಯುತ್ತಮ ಪೊಲೀಸ್ ಠಾಣೆ ಪಟ್ಟಿಯಲ್ಲಿ 17ನೇ ಸ್ಥಾನ
    -ಕೇಂದ್ರ ಗೃಹ ಸಚಿವಾಲಯ ಸಮೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ಈಗ ರಾಜ್ಯದಲ್ಲೇ ಅತ್ಯುತ್ತಮ ಪೊಲೀಸ್ ಠಾಣೆ ಎನ್ನುವ ಹೆಗ್ಗಳಿಕೆಯನ್ನ ಗಳಿಸಿದೆ. ಕೇಂದ್ರ ಗೃಹ ಸಚಿವಾಲಯ ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಗಬ್ಬೂರು ಠಾಣೆಗೆ ಉತ್ತಮ ರ‌್ಯಾಂಕ್ ಸಿಕ್ಕಿದೆ. ರಾಜ್ಯಕ್ಕೆ ನಂ. 1 ಆದರೆ ದೇಶಕ್ಕೆ 17ನೇ ಅತ್ಯುತ್ತಮ ಜನ ಸ್ನೇಹಿ ಪೊಲೀಸ್ ಠಾಣೆ ಎನ್ನುವ ಗರಿಮೆ ಪಡೆದಿದೆ.

    ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಆ್ಯಂಡ್ ಡೆವೆಲಪ್ಮೆಂಟ್ ನೀಡಿದ ಮಾನದಂಡಗಳ ಆಧಾರದ ಮೇಲೆ 2019ರ ಅಕ್ಟೋಬರ್ ನಲ್ಲಿ ಗ್ರ್ಯಾಂಟ್ ತೋರಟನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗಬ್ಬೂರು ಠಾಣೆ ರ‌್ಯಾಂಕ್ ಪಡೆದಿದೆ. 2015ರಲ್ಲಿ ಗುಜರಾತಿನ ಕಚ್‍ನಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪ್ರಧಾನ ಮಂತ್ರಿಗಳ ನಿರ್ದೇಶನದಂತೆ ಕಾರ್ಯಕ್ಷಮತೆ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸಮೀಕ್ಷೆ ನಡೆದಿದೆ.

    ಅಪರಾಧ ತಡೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ತನಿಖೆಯ ಗುಣಮಟ್ಟ, ಕಾನೂನು ಸುವ್ಯವಸ್ಥೆ, ಸಾರ್ವಜನಿಕರಿಗೆ ಪೊಲೀಸ್ ಲಭ್ಯತೆ, ಪೊಲೀಸ್ ಸಿಬ್ಬಂದಿ ವರ್ತನೆ, ರಸ್ತೆ ಸುರಕ್ಷತೆ ಕ್ರಮಕ್ಕೆ ಸಂಬಂಧಿಸಿದ ಸಮೀಕ್ಷೆಗೆ ಶೇ. 80 ಅಂಕ. ಸಾರ್ವಜನಿಕರ ಅಭಿಪ್ರಾಯ ಠಾಣೆಯಲ್ಲಿನ ವ್ಯವಸ್ಥೆ, ಸ್ವಚ್ಛತೆಗೆ ಶೇ. 20 ಅಂಕ ನಿಗದಿ ಮಾಡಲಾಗಿರುತ್ತದೆ.

    ದೇಶದ 15, 579 ಠಾಣೆಗಳ ಪೈಕಿ ಮೊದಲ ಹಂತದ ಸಮೀಕ್ಷೆ ನಡೆಸಿ ರಾಜ್ಯದ ಮೂರು ಠಾಣೆಗಳಂತೆ 79 ಪೊಲೀಸ್ ಠಾಣೆಗಳನ್ನು ಗುರುತಿಸಿ ಅವುಗಳ ಕಾರ್ಯಕ್ಷಮತೆ, ಕಟ್ಟಡ ಸೌಲಭ್ಯ, ಸಾರ್ವಜನಿಕರೊಂದಿಗಿನ ಸಂಪರ್ಕದ ಆಧಾರದ ಮೇಲೆ ಗಬ್ಬೂರು ಪೊಲೀಸ್ ಠಾಣೆಯನ್ನು ರಾಜ್ಯದ ನಂ. 1 ಠಾಣೆ ಎಂದು ರ‌್ಯಾಂಕ್ ನೀಡಲಾಗಿದೆ.

    ಗಬ್ಬೂರು ಪೊಲೀಸ್ ಠಾಣೆಗೆ ನಂ. 1 ಗರಿ ಬಂದಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ, ಠಾಣೆ ಪಿಎಸ್ ಐ ರಂಗಯ್ಯ ಖುಷಿ ವ್ಯಕ್ತಪಡಿಸಿದ್ದಾರೆ.

  • ಕಾರು ನಿಲ್ಲಿಸದೆ ಬಸವರಾಜ್ ಬೊಮ್ಮಾಯಿ ಉದ್ಧಟತನ

    ಕಾರು ನಿಲ್ಲಿಸದೆ ಬಸವರಾಜ್ ಬೊಮ್ಮಾಯಿ ಉದ್ಧಟತನ

    ಮಂಡ್ಯ: ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದು, ಚುನಾವಣಾ ಸಿಬ್ಬಂದಿಗೂ ಕ್ಯಾರೆ ಎನ್ನದೇ ಮುಂದೆ ಸಾಗಿದ್ದಾರೆ.

    ಬಸವರಾಜ್ ಬೊಮ್ಮಾಯಿ ಕಾರಿನಲ್ಲಿ ಹೋಗುತ್ತಿದ್ದಾಗ ವಾಹನ ತಪಾಸಣೆಗೆಂದು ಚುನಾವಣಾ ಸಿಬ್ಬಂದಿ ಕಾರನ್ನು ತಡೆಯಲು ಮುಂದಾದರು. ಆದರೆ ಬೊಮ್ಮಾಯಿ ವಾಹನ ತಪಾಸಣೆಗೆ ಸಹಕರಿಸದೆ ಚುನಾವಣಾ ಸಿಬ್ಬಂದಿಗೂ ಕ್ಯಾರೆ ಎನ್ನದೇ ಮುಂದೆ ಸಾಗಿದ್ದಾರೆ.

    ಈಗಾಗಲೇ ಗೃಹ ಮಂತ್ರಿ ಎರಡು ಕಡೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಬುಧವಾರ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಅವರು ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟ ಹಾಗೂ ಮಂಡ್ಯ ತಾಲೂಕಿನ ಹನಕೆರೆ ಬಳಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

    ಬುಧವಾರ ಎರಡು ಕಡೆ ಚೆಕ್ ಪೋಸ್ಟ್ ಸಿಬ್ಬಂದಿ ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಬಸವರಾಜ್ ಅವರ ವಾಹವನ್ನು ತಡೆದಿದ್ದರು. ಮೊದಲು ನಿಡಘಟ್ಟ ಬಳಿ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಹನಕೆರೆ ಬಳಿ ವಾಹನ ತಪಾಸಣೆಗೆ ಚೆಕ್ ಪೋಸ್ಟ್ ಸಿಬ್ಬಂದಿ ಸಿದ್ಧವಾಗಿದ್ದರು. ಇಲ್ಲೂ ವಾಹನ ನಿಲ್ಲಿಸದೆ ಸಚಿವರ ಉದ್ಧಟತನ ಪ್ರದರ್ಶಿಸಿದ್ದಾರೆ.

  • ದೇವರ ಪ್ರಸಾದವೆಂದು ಒಡೆದಿದ್ದಕ್ಕೆ ಕೈ ಹೋಯ್ತು- ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

    ದೇವರ ಪ್ರಸಾದವೆಂದು ಒಡೆದಿದ್ದಕ್ಕೆ ಕೈ ಹೋಯ್ತು- ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

    – ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆತಂಕದ ವಾತಾವರಣ
    – ಎಂಟು ಬಾಕ್ಸ್‌ಗಳಲ್ಲಿ 12 ಸಕ್ರಿಯ ಬಾಂಬ್

    ಹುಬ್ಬಳ್ಳಿ: ದೇವರ ಪ್ರಸಾದವೆಂದು ತಿಳಿದು ಬಾಕ್ಸ್ ನಲ್ಲಿದ್ದ ವಸ್ತವನ್ನು ಒಡೆದಿದ್ದಕ್ಕೆ ಕೈ ಹೋಯಿತು ಎಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಗಾಯಳು ಹುಸೇನ್‍ಸಾಬ್ ಹೇಳಿದ್ದಾರೆ.

    ವಿಜಯವಾಡ-ಅಮರಾವತಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ನಿಂತಿತ್ತು. ಈ ವೇಳೆ ಅನುಮಾನಾಸ್ಪದ ಬಾಕ್ಸ್‌ವೊಂದನ್ನು ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ವಶಕ್ಕೆ ಪಡೆದು, ರೈಲ್ವೇ ಮ್ಯಾನೇಜರ್ ಕಚೇರಿಗೆ ಒಪ್ಪಿಸಿದ್ದರು. ರಟ್ಟಿನ ಬಾಕ್ಸ್‍ನೊಳಗೆ ಬಕೀಟ್‍ನಲ್ಲಿ ಚಿಕ್ಕಚಿಕ್ಕದಾದ 8 ಬಾಕ್ಸ್‌ನಲ್ಲಿದ್ದ ನಿಂಬೆಹಣ್ಣಿನ ಗಾತ್ರದ ಬಾಂಬ್‍ಗಳ ಪೈಕಿ ಒಂದನ್ನು ಓಪನ್ ಮಾಡಲು ಪೇದೆ ಹಾಗೂ ರೈಲ್ವೆ ಮಾನೇಜರ್ ಮುಂದಾಗಿದ್ದರು.

    ಈ ವೇಳೆ ಪೇದೆ ರವಿಕುಮಾರ್ ತಮಗೆ ಪರಿಚಯವಿದ್ದ ಹುಸೇನ್‍ಸಾಬ್ (22) ಅವರನ್ನು ಕರೆದು ಬಾಕ್ಸ್ ಓಪನ್ ಮಾಡುವಂತೆ ಸೂಚನೆ ನೀಡಿದ್ದರು. ಬಾಕ್ಸ್ ತೆಗೆದ ಹುಸೇನ್‍ಸಾಬ್ ನಿಂಬೆಹಣ್ಣು ಗಾತ್ರದ ವಸ್ತುವನ್ನು ಕಲ್ಲಿನಿಂದ ಒಡೆಯುತ್ತಿದ್ದಂತೆ ಬ್ಲಾಸ್ಟ್ ಆಗಿದೆ. ಪರಿಣಾಮ ಹುಸೇನ್‍ಸಾಬ್ ಕೈ ಕಟ್ ಆಗಿದೆ. ರಕ್ತಸ್ರಾವದಿಂದ ಬಿದ್ದು ಕಣ್ಣೀರು ಹಾಕುತ್ತಿದ್ದ ಹುಸೇನ್‍ಸಾಬ್ ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಕ್ಸ್‍ನಲ್ಲಿ ಇದ್ದ 12 ಬಾಂಬ್‍ಗಳು ಸಕ್ರಿಯವಾಗಿದ್ದು, ಸ್ಥಳಕ್ಕೆ ಬರುವಂತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೆ ತಿಳಿಸಲಾಗಿತ್ತು. ರೈಲು ನಿಲ್ದಾಣದ ಗಾರ್ಡನ್ ನಲ್ಲಿ ಮರಳಿನ ಮೂಟೆಗಳ ಮಧ್ಯೆ ಬಾಂಬ್‍ಗಳನ್ನು ಇರಿಸಲಾಗಿದೆ.

    ಬಕೀಟ್ ಮೇಲೆ ನೋ ಬಿಜೆಪಿ, ನೋ ಆರ್‌ಎಸ್‍ಎಸ್ ಒನ್ಲೀ ಶಿವಸೇನಾ ಎಂದು ಬರೆಯಲಾಗಿದೆ. ಜೊತೆ ಕೊಲ್ಲಾಪುರ ಶಾಸಕರ ಹೆಸರನ್ನು ನಮೂದಿಸಲಾಗಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಸೋಮವಾರ ಎನ್‍ಐಎ ಅಧಿಕಾರಿಗಳು ಹುಬ್ಬಳ್ಳಿಗೆ ಆಗಮಿಸಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಗಾಯಾಳು ಹುಸೇನ್‍ಸಾಬ್, ಗದಗನಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದಿದ್ದೆ. ಈ ವೇಳೆ ಆರ್‌ಪಿಎಫ್‌ ಪೇದೆ ರವಿಕುಮಾರ್ ಅವರು ಕರೆದು, ಇದನ್ನು ತಗೊಂಡು ಆಫೀಸ್ ಹೊರಗೆ ಹೋಗಿ ಏನು ಅಂತ ನೋಡು ಅಂದ್ರು. ದೇವರ ಪ್ರಸಾದ ಗಟ್ಟಿಯಾಗಿದೆ ಅಂತ ತಿಳಿದು ಕಲ್ಲಿನಿಂದ ಒಂದು ಪೆಟ್ಟು ಹಾಕಿದ್ದೆ ತಡ ಬ್ಲಾಸ್ಟ್ ಆಯಿತು. ಪರಿಣಾಮ ನನ್ನ ಕೈಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದ ಅನುಮಾನಾಸ್ಪದ ಬಾಕ್ಸ್ ಪತ್ತೆ ವಿಚಾರವಾಗಿ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ಬಾಕ್ಸ್ ಪತ್ತೆ ಹಚ್ಚಿದ್ದಾರೆ. ಬಕೆಟ್ ಆಕಾರದಲ್ಲಿ ಸ್ಫೋಟಕ ವಸ್ತು ಇತ್ತು. ಅದರಲ್ಲಿ ಸಣ್ಣಸಣ್ಣ ಬಾಕ್ಸ್ ಇಡಲಾಗಿದ್ದು, ಅವುಗಳಲ್ಲಿ ನಿಂಬೆಹಣ್ಣು ತರದ ವಸ್ತು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸ್ಫೋಟಕಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದ್ದು, ಯುವಕ ಹುಸೇನ್‍ಸಾಬ್ ಅದನ್ನು ತೆಗೆಯಲು ಹೋದಾಗ ಸ್ಫೋಟವಾಗಿದೆ. ಆತನಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ವಿಜಯವಾಡದ ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆ ಬಾಕ್ಸ್ ಮೇಲೆ ಗಾರ್ಗೋಟಿ ಶಾಸಕ ಹೆಸರು ಬರೆಯಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕ ಸಾಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

    ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಪೊಲೀಸರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ತನಿಖೆ ಮಾಡುತ್ತೇವೆ. ಬಾಂಬ್ ನಿಷ್ಕ್ರಿಯ ದಳ ಹುಬ್ಬಳ್ಳಿಗೆ ಬಂದಿದ್ದು, ಬಾಂಬ್‍ಗಳನ್ನು ನಿಷ್ಕ್ರಿಯಗೊಳಿಸಲಿದ್ದಾರೆ. ಹುಬ್ಬಳ್ಳಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

  • ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್, ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ: ಬೊಮ್ಮಾಯಿ

    ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್, ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ: ಬೊಮ್ಮಾಯಿ

    ಮೈಸೂರು: ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್ ಹಾಗೂ ಒಂದು ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ ಆಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ನಗರದಲ್ಲಿ ನಡೆದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಸಚಿವರು, ತಂತ್ರಜ್ಞಾನ ಹೆಚ್ಚಾದಂತೆ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಇದನ್ನು ಭೇದಿಸುವುದು ಸವಾಲಿನ ಕೆಲಸ. ಪೊಲೀಸರು ಪ್ರಾಮಾಣಿಕರಾಗಿರಬೇಕು ಎಂದು ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಬಾಂಗ್ಲಾ ಮೂಲದ ಉಗ್ರಗಾಮಿ ಸಂಘಟನೆ ಸದಸ್ಯರು ರಾಜ್ಯಕ್ಕೆ ನುಸುಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕರಾವಳಿ, ಬೆಂಗಳೂರು, ಮೈಸೂರಿನಲ್ಲಿ ಅವರ ಚಟುವಟಿಕೆ ಹೆಚ್ಚಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜಮ್ಮು-ಕಾಶ್ಮೀರ ಹಾಗೂ ಬಾಂಗ್ಲಾದೇಶದ ಗಡಿ ಮೂಲಕ ಉಗ್ರರು ದೇಶವನ್ನು ಪ್ರವೇಶಿಸಿದ್ದಾರೆ. ಬಾಂಗ್ಲಾದೇಶದವರು ಹೆಚ್ಚಾಗಿ ರಾಜ್ಯಕ್ಕೆ ಪ್ರವೇಶ ಮಾಡಿದ್ದಾರೆಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ ಎಂದು ತಿಳಿಸಿದರು.

    ಮಹಾರಾಷ್ಟ್ರದ ಹಲವು ಗ್ರಾಮಗಳಿಗೆ ನೀರು ಒದಗಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಪ್ರಚಾರದ ವೇಳೆ ಅಲ್ಲಿ ನೆರೆದಿದ್ದ ಜನರ ಕೋರಿಕೆಗೆ ಸ್ಪಂದಿಸಿ ಸಿಎಂ ಆ ರೀತಿ ಹೇಳಿದ್ದಾರೆ. ಅಲ್ಲಿನ ಜನರು ಕುಡಿಯಲು ನೀರು ಕೇಳುತ್ತಿದ್ದಾರೆ. ಕೊಡು ಕೊಳ್ಳುವಿಕೆ ಆಧಾರದ ಮೇಲೆ ಮಹಾರಾಷ್ಟ್ರ ನೀರು ಕೇಳಿದೆ. ನೀರು ಬಿಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದರು.

  • ಅನರ್ಹ ಶಾಸಕರನ್ನ ಯಾವುದೇ ಕಾರಣಕ್ಕೂ ಕೈ ಬಿಡೋ ಪ್ರಶ್ನೆ ಇಲ್ಲ: ಗೃಹ ಸಚಿವ

    ಅನರ್ಹ ಶಾಸಕರನ್ನ ಯಾವುದೇ ಕಾರಣಕ್ಕೂ ಕೈ ಬಿಡೋ ಪ್ರಶ್ನೆ ಇಲ್ಲ: ಗೃಹ ಸಚಿವ

    ಕಲಬುರಗಿ: ಅನರ್ಹ ಶಾಸಕರನ್ನ ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಕಲಬುರಗಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರದ್ದು ಕಾನೂನಾತ್ಮಕ ವಿಚಾರ ಇಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಅದಕ್ಕಾಗಿ ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಅನರ್ಹ ಎಲ್ಲ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಈಗಲೇ ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.

    ಔರಾದ್ಕರ್ ವರದಿಯನ್ನು ಸ್ಟೇಟ್ ಪೇ ಕಮಿಷನ್ ಕೆಲವೊಂದು ಒಪ್ಪಿದೆ. ಕೆಲವೊಂದು ಒಪ್ಪಿಲ್ಲ. ಈ ಹಿಂದೆ ಜೈಲ್ ಮತ್ತು ಫೈರ್ ಇಲಾಖೆಗಳನ್ನು ವರದಿಯಲ್ಲಿ ಕೈ ಕೈಬಿಡಲಾಗಿತ್ತು. ನಾನು ಗೃಹ ಸಚಿವನಾದ ಬಳಿಕ ಅವೆರಡು ಇಲಾಖೆಗಳನ್ನು ಸೇರಿಸಿದ್ದೇನೆ. ಹೀಗಾಗಿ ಯಾವ ರೀತಿ ಸ್ಕೇಲ್‍ಗಳನ್ನ ಕೊಡಬೇಕು ಎಂದು ಗೃಹ ಮತ್ತು ಹಣಕಾಸು ಇಲಾಖೆ ಮಧ್ಯೆ ಸಭೆ ನಡೆದಿದೆ. ಈ ಬಗ್ಗೆ ಶೀಘ್ರವೇ ಅಂತಿಮ ನೋಟಿಫಿಕೆಶನ್ ಹೊರಡಿಸಿ, ಔರಾದ್ಕರ್ ವರದಿಯನ್ನು ಜಾರಿ ಮಾಡೆ ಮಾಡುತ್ತೇವೆ ಎಂದು ಹೇಳಿದರು.

    ಇದೇ ವೇಳೆ ಸರ್ಕಾರ ಬಿದ್ದು ಹೋಗುವ ಬಗ್ಗೆ ಕೋಡಿ ಶ್ರೀಗಳ ಭವಿಷ್ಯ ಬಗ್ಗೆ ಪ್ರಶ್ನಿಸಿದಾಗ, ಬೊಮ್ಮಾಯಿ ಅವರು ನಾನೇನು ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದ್ದಾರೆ.

  • ರಾಹುಲ್ ಗಾಂಧಿಯನ್ನು ಪಾಕ್ ಹೊಗಳುತ್ತಿದ್ದು, ಕಾಂಗ್ರೆಸ್ಸಿಗೆ ನಾಚಿಕೆಯಾಗ್ಬೇಕು- ಅಮಿತ್ ಶಾ

    ರಾಹುಲ್ ಗಾಂಧಿಯನ್ನು ಪಾಕ್ ಹೊಗಳುತ್ತಿದ್ದು, ಕಾಂಗ್ರೆಸ್ಸಿಗೆ ನಾಚಿಕೆಯಾಗ್ಬೇಕು- ಅಮಿತ್ ಶಾ

    ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ತಿದ್ದುಪಡಿ ಸಂಬಂಧ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಕೈ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನೇ ಪಾಕಿಸ್ತಾನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್ಸಿನವರಿಗೆ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜನ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಗಾಂಧಿ ಕುಟುಂಬ ಮಾತ್ರ ವಿರೋಧಿಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿರುವುದನ್ನು ಕಾಂಗ್ರೆಸ್ ವಿರೋಧಿಸಿದೆ. ಈ ಬಗ್ಗೆ ರಾಹುಲ್ ಗಾಂಧಿಯವರು ಯಾವುದೇ ಹೇಳಿಕೆಯನ್ನು ಕೊಟ್ಟರೂ ಪಾಕಿಸ್ತಾನ ಸ್ವಾಗತಿಸುತ್ತದೆ. ಪಾಕಿಸ್ತಾನ ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ರಾಹುಲ್ ಹೇಳಿಕೆಯನ್ನು ಸೇರಿಸಿಕೊಂಡಿದೆ. ಭಾರತದ ವಿರುದ್ಧ ಇಂತಹ ಹೇಳಿಕೆಗಳನ್ನು ಕೊಡುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು ಎಂದು ಗರಂ ಆಗಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ 35ಎ ಹಾಗೂ 370ನೇ ವಿಧಿ ರದ್ದುಪಡಿಸಿದ ನಂತರ ಪರಿಸ್ಥಿತಿ ಬಿಗಡಾಯಿಸಿದ್ದು, ಅಲ್ಲಿ `ಜನ ಸಾಯುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದೇ ಹೇಳಿಕೆಯನ್ನಿಟ್ಟುಕೊಂಡು ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಆದರೆ ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ತನ್ನ ಹೇಳಿಕೆಯನ್ನು ಪ್ರಸ್ತಾಪ ಮಾಡಿದ್ದಕ್ಕೆ ರಾಹುಲ್ ಗಾಂಧಿ ಪಾಕಿಸ್ತಾನದ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

  • ಸಾರ್ವಜನಿಕರಿಗೆ ತೊಂದರೆಯಾಗುತ್ತೆ, ಝಿರೋ ಟ್ರಾಫಿಕ್ ಬೇಡ: ಬಸವರಾಜ ಬೊಮ್ಮಾಯಿ

    ಸಾರ್ವಜನಿಕರಿಗೆ ತೊಂದರೆಯಾಗುತ್ತೆ, ಝಿರೋ ಟ್ರಾಫಿಕ್ ಬೇಡ: ಬಸವರಾಜ ಬೊಮ್ಮಾಯಿ

    ಹಾವೇರಿ: ಝಿರೋ ಟ್ರಾಫಿಕ್ ಬೇಡ ಹಾಗೂ ಜಿಲ್ಲೆಗೆ ಭೇಟಿ ನೀಡಿದಾಗೊಮ್ಮೆ ಗಾರ್ಡ್ ಆಫ್ ಆನರ್ ಬೇಡ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್, ಫೇಸ್‍ಬುಕ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಝಿರೋ ಟ್ರಾಫಿಕ್‍ನಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಝಿರೋ ಟ್ರಾಫಿಕ್ ಬೇಡ. ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೆ ಶುಕ್ರವಾರ ಭೇಟಿ ನೀಡಿದ್ದಾಗ ಝಿರೋ ಟ್ರಾಫಿಕ್‍ನಿಂದ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಯನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

    ಝಿರೋ ಟ್ರಾಫಿಕ್ ಜೊತೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಪ್ರತಿ ಬಾರಿಯೂ ಗಾರ್ಡ್ ಆಫ್ ಹಾನರ್ ಸಲ್ಲಿಸುವುದು ಬೇಡ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಝಿರೋ ಟ್ರಾಫಿಕ್‍ನಿಂದಾಗಿ ಮಾಜಿ ಡಿಸಿಎಂ ಪರಮೇಶ್ವರ್ ಅವರು ವಿವಾದಕ್ಕೆ ಗುರಿಯಾಗಿದ್ದರು. ಈ ವಿಚಾರವಾಗಿ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್, ತಮ್ಮ ಉಪ ಮುಖ್ಯಮಂತ್ರಿಗಳಿಗೆ ಝಿರೋ ಟ್ರಾಫಿಕ್ ಸೌಲಭ್ಯ ಪಡೆಯದಂತೆ ಖಡಕ್ ಸೂಚನೆ ನೀಡಿದೆ.

    ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಝಿರೋ ಟ್ರಾಫಿಕ್ ತೆಗೆದುಕೊಳ್ಳಬಾರದು. ಝಿರೋ ಟ್ರಾಫಿಕ್‍ನಿಂದ ಸಂಚಾರ ಅಸ್ತವ್ಯಸ್ತವಾಗಲಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಇದರಿಂದಾಗಿ ಜನರಿಗೆ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು.

    ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ ಅವರು, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಝಿರೋ ಟ್ರಾಫಿಕ್ ವ್ಯವಸ್ಥೆಯ ಅನುಕೂಲವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು.