Tag: Home Minister Basavaraj Bommai

  • ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಲಕ್ಷ್ಮಣ ಸವದಿ

    ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಲಕ್ಷ್ಮಣ ಸವದಿ

    ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಸಂಧಾನದ ಮಾತುಕತೆ ನಡೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಆ ರೀತಿಯ ಯಾವುದೇ ಸಂಧಾನದ ಪ್ರಕ್ರಿಯೆ ನಡೆದಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.

    ಸಾರಿಗೆ ನೌಕರರ ಮುಷ್ಕರದ ಪ್ರಾರಂಭದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳು ಯಾವುದೇ ಮಾತುಕತೆ, ಸಂಧಾನದ ಅವಶ್ಯಕತೆ ಇರುವುದಿಲ್ಲ. ಮೊದಲು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿ ಎಂದು ತಾಕೀತು ಮಾಡಿದ್ದರು. ಕೆಲವು ಮುಖಂಡರು ತಾವು ಮುಷ್ಕರ ನಿರತರ ಪರವಾಗಿ ಇಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಗಿ ತಿಳಿಸಿರುತ್ತಾರೆ. ಅದನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಆದರೆ ಬೊಮ್ಮಾಯಿ ಅವರನ್ನು ಈ ಬಗ್ಗೆ ಕೇಳಿದಾಗ, ಮುಖ್ಯಮಂತ್ರಿಗಳ ಮಾತನ್ನು ಮೀರಿ ಈಗ ಸಂಧಾನದ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ತಿಳಿಸಿದಂತೆ ಮೊದಲು ಅವರು ಕರ್ತವ್ಯಕ್ಕೆ ಹಾಜರಾಗಲಿ ಎಂದು ಅವರು ತಿಳಿಸಿದ್ದಾರೆ.

    ಆದರೆ ಇದನ್ನು ತಿರುಚಿ ಮುಷ್ಕರ ನಿರತ ಸಾರಿಗೆ ನೌಕರರ ಮುಖಂಡರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಇನ್ನೂ ಕಾಲ ಮಿಂಚಿಲ್ಲ. ಎಲ್ಲಾ ಸಾರಿಗೆ ನೌಕರ ಬಂಧುಗಳೂ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಲಕ್ಷ್ಮಣ ಸವದಿ ಮನವಿ ಮಾಡಿಕೊಂಡರು.

    ಮುಷ್ಕರದ ಕಾಲವಲ್ಲ: ಪ್ರಸ್ತುತ ಇಡೀ ಮನುಕುಲವನ್ನೇ ಬೆಚ್ಚಿಬೀಳಿಸಿರುವ ಕೋವಿಡ್ 2ನೇ ಅಲೆಯ ತೀವ್ರ ಅಪಾಯದ ನಡುವೆಯೂ ನಮ್ಮ ಸಾರಿಗೆ ನೌಕರ ಮಿತ್ರರು ಸಾರಿಗೆ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಮತ್ತು ನೌಕರರ ಹಿತದೃಷ್ಟಿಯಿಂದಲೂ ಸೂಕ್ತವಲ್ಲ.

     

    ಕಳೆದ ವರ್ಷ ಕೋವಿಡ್ ಸಮಸ್ಯೆ ಉಲ್ಬಣವಾದಾಗ ನಮ್ಮ ಸಾರಿಗೆ ನೌಕರರೂ ಸಹ ಕೊರೊನಾ ವಾರಿಯರ್ಸ್ ಗಳಾಗಿ ಹಗಲಿರುಳೂ ಕೆಲಸ ಮಾಡಿದ್ದನ್ನು ಯಾರೂ ಮರೆತಿಲ್ಲ. ಸರ್ಕಾರವೂ ಈ ಸೇವೆಯನ್ನು ಗೌರವಿಸಿ ಸಾರಿಗೆ ನೌಕರರ ಸಂಕಷ್ಟಗಳಿಗೆ ಸ್ಪಂದಿಸಿತ್ತು. ಆದರೆ ಈಗ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೆ ಅದೇ ರೀತಿ ಕೊರೋನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದರೂ ಮುಷ್ಕರದ ಕಾರಣದಿಂದ ಇದೇ ಸಾರಿಗೆ ನೌಕರರಿಗೆ ಕೆಟ್ಟ ಹೆಸರು ಬರುವಂತಾಗಿ ಅವರ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಕ್ಕೆ ಬಲಿಯಾಗದೇ ಬಸ್ಸುಗಳ ಸುಗಮ ಸಂಚಾರಕ್ಕೆ ಕೈಜೊಡಿಸುವ ಮೂಲಕ ಮತ್ತೊಮ್ಮೆ ತಾವು ಸಾರ್ವಜನಿಕ ಸ್ನೇಹಿ ನೌಕರರು ಎಂಬುದನ್ನು ಸಾಬೀತುಪಡಿಸುವುದಕ್ಕೆ ಇದು ಸೂಕ್ತ ಸಂದರ್ಭವಾಗಿದೆ. ಆದ್ದರಿಂದ ಕೂಡಲೇ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

    ಕೋವಿಡ್ ಮಹಾಮಾರಿಯ ಪಿಡುಗಿನಿಂದ ಜನಜೀವನ ತತ್ತರಿಸಿ ಹೋಗುತ್ತಿರುವ ದೃಶ್ಯ ನಮ್ಮ ಕಣ್ಮುಂದೆಯೇ ಇದೆ. ಇಂಥ ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ಹೆಚ್ಚಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರಿ ಸಾರಿಗೆ ಸೇವೆಯ ಅಗತ್ಯ ತೀರಾ ಹೆಚ್ಚಾಗಿರುತ್ತದೆ. ಆದಾಗ್ಯೂ 13ನೆಯ ದಿನದವರೆಗೂ ಈ ಮುಷ್ಕರವನ್ನು ಮುಂದುವರೆಸಿರುವುದು ಎಷ್ಟರ ಮಟ್ಟಿಗೆ ಸರಿ?

    ಈ ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ. ಸರ್ಕಾರದ ಈ ಪ್ರಯತ್ನಕ್ಕೆ ಅನೇಕ ಇಲಾಖೆಗಳ ಸಿಬ್ಬಂದಿಗಳು ಕೈಜೋಡಿಸಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಮ್ಮ ಸಾರಿಗೆ ನಿಗಮಗಳ ನೌಕರರು ಮಾತ್ರ ಇಂಥ ಸೂಕ್ಷ್ಮ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲೂ ಈ ರೀತಿ ಮುಷ್ಕರ ನಿರತರಾದರೆ ಅವರಿಗೆ ಇದು ದೊಡ್ಡ ಕಪ್ಪು ಚುಕ್ಕೆಯಾಗುತ್ತದೆ ಎಂಬುದನ್ನು ಮರೆಯಬಾರದು.

    ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಇತರ ಸಚಿವ ಸಹೋದ್ಯೋಗಿಗಳೂ ಹಲವು ಬಾರಿ ಮುಷ್ಕರ ನಿರತರಿಗೆ ಮನವಿ ಮಾಡಿಕೊಂಡಿದ್ದರೂ ಸಹ ಅವರು ಮುಷ್ಕರ ನಡೆಸುತ್ತಿರುವುದು ತೀರಾ ಬೇಸರದ ಸಂಗತಿಯಾಗಿದೆ. ಅಷ್ಟೇ ಅಲ್ಲ, ಹಲವಾರು ನೌಕರ ಕುಟುಂಬದವರು ಮತ್ತು ಹಿರಿಯ ಕಾರ್ಮಿಕ ಮುಖಂಡರೂ ಸಹ ಈ ವಿಪತ್ತಿನ ಕಾಲದಲ್ಲಿ ಮುಷ್ಕರ ನಡೆಸುವುದು ಸರ್ವಥಾ ಸರಿಯಲ್ಲ ಎಂದು ಪ್ರತಿಪಾದಿಸಿದ್ದರೂ ಮೊಂಡುತನದ ಹಠಕ್ಕೆ ಬಿದ್ದು ಮುಷ್ಕರ ನಡೆಸುವುದು ಎಷ್ಟರಮಟ್ಟಿಗೆ ಸರಿ?

    ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಇನ್ನುಳಿದ ಒಂದು ಬೇಡಿಕೆಯಾದ ವೇತನ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಪ್ರಸ್ತುತ ಮೇ-04 ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ವೇತನ ಹೆಚ್ಚಳದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆಯು ಮುಗಿದ ನಂತರ ವೇತನ ಹೆಚ್ಚಳದ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಮತ್ತೊಮ್ಮೆ ಸಾರಿಗೆ ನೌಕರ ಮಿತ್ರರಿಗೆ ತಿಳಿಸಬಯಸುತ್ತೇನೆ.

    ಹಿಂಸಾಕೃತ್ಯಗಳಿಂದ ಬೇಡಿಕೆ ಈಡೇರುವುದಿಲ್ಲ:
    ಪ್ರಸ್ತುತ ಸಹಸ್ರಾರು ಮಂದಿ ಸಾರಿಗೆ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದರ ಫಲಶೃತಿಯಾಗಿ ಈಗ ಪ್ರತಿನಿತ್ಯವೂ ಸುಮಾರು 7 ಸಾವಿರ ಸರ್ಕಾರಿ ಬಸ್ಸುಗಳು ಸಂಚರಿಸುವಂತಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನಗಳೂ ಸಂಚಾರ ಸೇವೆಗೆ ಲಭ್ಯವಾಗಿ ಒಟ್ಟಾರೆ ಬಸ್ಸುಗಳ ಸಂಚಾರದ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಕೆಲವು ಮುಷ್ಕರ ನಿರತರ ಮುಖಂಡರು ಹತಾಶರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ನಿಷ್ಠಾವಂತ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಪ್ರಚೋದಿಸುತ್ತಿರುವುದು ಖಂಡನೀಯ.

    ಈಗಾಗಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪ ನಿಷ್ಠಾವಂತ ಚಾಲಕರಾಗಿದ್ದ ಅವಟಿ ಅವರು ಕರ್ತವ್ಯದಲ್ಲಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಅವರ ಜೀವವನ್ನೇ ಬಲಿ ತೆಗೆದುಕೊಂಡಿದ್ದು ಅತ್ಯಂತ ಹೀನ ಘಟನೆಯಾಗಿದೆ. ಇದರಿಂದಾಗಿ ತೀವ್ರ ಸಂಕಷ್ಟಕ್ಕೀಡಾದ ಅವಟಿ ಅವರ ಕುಟುಂಬಸ್ಥರಿಗೆ ಈಗಾಗಲೇ 30 ಲಕ್ಷ ರೂಪಾಯಿ ಪರಿಹಾರ ನೀಡಿದ್ದಲ್ಲದೇ, ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸೂಕ್ತ ಉದ್ಯೋಗವನ್ನು ನಮ್ಮ ಸಾರಿಗೆ ನಿಗಮದಲ್ಲೇ ಕಲ್ಪಿಸಲು ಸೂಚಿಸಿದ್ದೇನೆ.

    ಈ ಮುಷ್ಕರದ ನೆಪದಲ್ಲಿ ಈಗಾಗಲೇ ಒಟ್ಟು 110ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರಿಗೆ ನಿಗಮಗಳಿಗೆ ಅಪಾರ ಹಾನಿ ಉಂಟು ಮಾಡಲಾಗಿದೆ. ಇಂದು ಕೂಡ ಕೆ.ಎಸ್.ಆರ್.ಟಿ.ಸಿ.ಯ 3 ಬಸ್ಸುಗಳಿಗೆ ಕನಕಪುರ-ಹಾರೋಹಳ್ಳಿ ಮಾರ್ಗದಲ್ಲಿ ಕಲ್ಲು ಹೊಡೆದು, ಕರ್ತವ್ಯಕ್ಕೆ ಬರುತ್ತಿದ್ದ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು ತೀವ್ರ ಖಂಡನೀಯವಾಗಿದೆ. ಈ ರೀತಿಯ ಗೂಂಡಾಗಿರಿಯನ್ನು ನಮ್ಮ ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂಬುದನ್ನು ಈ ದುಷ್ಕರ್ಮಿಗಳು ಅರ್ಥಮಾಡಿಕೊಳ್ಳಬೇಕು. ಮುಷ್ಕರದ ನೆಪದಲ್ಲಿ ಕೆಲವರು ನೌಕರ ವರ್ಗದವರಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಸಿ ಸರ್ಕಾರದ ವಿರುದ್ಧ ಹಾಗೂ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ನಮ್ಮ ಸಾರಿಗೆ ನೌಕರರ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಈ ರೀತಿಯ ಕಾನೂನುಬಾಹಿರ ಕೃತ್ಯಗಳಿಗೆ ಮುಂದಾಗುವವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಬಯಸುತ್ತೇನೆ. ಸಾರ್ವಜನಿಕರ ಅಮೂಲ್ಯ ಆಸ್ತಿಯಾಗಿರುವ ಈ ಬಸ್ಸುಗಳನ್ನು ಧ್ವಂಸಗೊಳಿಸಲು ಯಾರಿಗೂ ಹಕ್ಕಿಲ್ಲ. ಅಷ್ಟೆ ಅಲ್ಲದೆ ನಮ್ಮ ಸಾರಿಗೆ ನೌಕರರ ಮಕ್ಕಳು ಮತ್ತು ಕುಟುಂಬದವರನ್ನು ಬೀದಿಗೆ ತಂದು ಭಿಕ್ಷಾಟನೆಗೆ ತಳ್ಳಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು.

    ಒಂದೆಡೆ ಮುಷ್ಕರ ನಿರತರು ಶಾಂತಿಯುತ ಹೋರಾಟ ನಡೆಸುತ್ತೇವೆ ಎಂದು ಹೇಳುತ್ತಲೇ ಮತ್ತೊಂದೆಡೆ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸುವುದು ಹಾಗೂ ಬಸ್ಸುಗಳ ಮೇಲೆ ಕಲ್ಲು ತೂರಾಟಗಳಂತಹ ಹಿಂಸಾಕೃತ್ಯಗಳನ್ನು ನಡೆಸುವುದು ನಿಜಕ್ಕೂ ನಿಜಕ್ಕೂ ಜನವಿರೋಧಿ ಬೆಳವಣಿಗೆಯಾಗಿದೆ. ಈ ಸಂಬಂಧ ಈಗಾಗಲೇ ಹಲವು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿ ಕಠಿಣ ಕ್ರಮ ಜರುಗಿಸುತ್ತಿದ್ದಾರೆ.

    ಪ್ರಸ್ತುತ ಸಾರಿಗೆ ವ್ಯವಸ್ಥೆಯಲ್ಲಿ ಸರ್ಕಾರ ಕೈಗೊಂಡಿರುವ ಪರ್ಯಾಯ ವ್ಯವಸ್ಥೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಹತಾಶಗೊಂಡಿರುವ ಕೆಲವು ಮುಷ್ಕರ ನಿರತರು ಸರ್ಕಾರದ ಪ್ರಾಮಾಣಿಕ ಸ್ಪಂದನೆಯ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಕೆಲವು ಪಟ್ಟಭದ್ರರು ಸರ್ಕಾರದ ವಿರುದ್ಧ ನೌಕರರನ್ನು ಎತ್ತಿಕಟ್ಟಿ ನೌಕರರಿಗೇ ಗಂಡಾಂತರ ತಂದೊಡ್ಡಲು ಹವಣಿಸುತ್ತಿದ್ದಾರೆ. ಆದರೆ ಇವರ ದಾಳಕ್ಕೆ ಯಾರೂ ಬಲಿಯಾಗಬಾರದು ಎಂದು ನಾನು ಕಿವಿಮಾತು ಹೇಳಬಯಸುತ್ತೇನೆ.

    ಸಾರಿಗೆ ನೌಕರರನ್ನೂ ಒಳಗೊಂಡಂತೆ ನಮ್ಮೆಲ್ಲರ ಮೇಲೂ ಕೋವಿಡ್ ತಡೆಗಟ್ಟುವ ಸಾಮಾಜಿಕ ಜವಾಬ್ದಾರಿಯಿದೆ. ಹೀಗಿರುವಾಗ ನಾವು ನಮ್ಮ ಕರ್ತವ್ಯಕ್ಕೆ ಚ್ಯುತಿ ತರಬಾರದು. ನಮ್ಮ ಸಾರಿಗೆ ನೌಕರರು ಮತ್ತೆ ಮೊದಲಿನಂತೆ ಉತ್ಸಾಹದಿಂದ ಕರ್ತವ್ಯಕ್ಕೆ ಮರಳಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ ಈ ಸೂಕ್ಷ್ಮ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಎಂದು ಸಾರ್ವಜನಿಕರಿಂದ ಮತ್ತೊಮ್ಮೆ ಪ್ರಶಂಸೆಗೆ ಪಾತ್ರರಾಗ ಎಂದು ಸವದಿ ಅವರು ಹಾರೈಸಿದ್ದಾರೆ.

  • ಗಲಭೆಕೋರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು: ಬೊಮ್ಮಾಯಿ

    ಗಲಭೆಕೋರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು: ಬೊಮ್ಮಾಯಿ

    – ಸಂಘ ಮತ್ತು ಬಿಎಸ್‍ವೈ ಎರಡೂ ಒಂದೇ

    ಬೆಂಗಳೂರು: ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಕ್ಲೈಮ್ ಕಮಿಷನ್ ನೇಮಕಕ್ಕೆ ಹೈಕೋರ್ಟಿಗೆ ಮನವಿ ಮಾಡಿಕೊಳ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಹೈಕೋರ್ಟಿಗೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಕ್ಲೈಮ್ ಕಮಿಷನ್ ನೇಮಕ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಈ ಸಂಬಂಧ ಪ್ರಕ್ರಿಯೆ ಶುರು ಮಾಡಿದ್ದೇವೆ. ಕ್ಲೈಮ್ ಕಮಿಷನ್ ನೇಮಕವಾದರೆ ಅವರಿಗೆ ಎಲ್ಲ ಸಹಕಾರ ನೀಡುತ್ತೇವೆ. ಕಮಿಷನ್ ಮೂಲಕ ಘಟನೆಯಲ್ಲಿ ಉಂಟಾದ ಆಸ್ತಿಗಳ ನಷ್ಟ ಮೌಲ್ಯ ಪರಿಶೀಲಿಸಲಾಗುತ್ತೆ. ಆ ಬಳಿಕ ಆರೋಪಿಗಳಿಂದ ಎಷ್ಟು ದಂಡ ವಸೂಲು ಮಾಡಬೇಕೆಂಬ ಪ್ರಕ್ರಿಯೆ ಆರಂಭವಾಗುತ್ತೆ ಎಂದು ವಿವರಿಸಿದರು.

    ಇದೇ ವೇಳೆ ಎನ್‍ಐಎ ಪ್ರಕಟಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಮಯ್ಯ ಕಾಲೇಜಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ)ಯಿಂದ ಒಬ್ಬ ವೈದ್ಯನ ಬಂಧನ ಆಗಿದೆ. ಈ ಬಗ್ಗೆ ಈಗಾಗಲೇ ಎನ್‍ಐಎ ಪ್ರಕಟಣೆ ಹೊರಡಿಸಿದೆ. ಈಗಾಗಲೇ ಎರಡು ಉಗ್ರ ಗುಂಪುಗಳ ಲಿಂಕ್ ಇರುವುದು ಬಹಿರಂಗ ಪಡಿಸಲಾಗಿದೆ. ದೇಶದ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ. ಎನ್‍ಐಎ ಜೊತೆ ನಮ್ಮ ಐಎಸ್‍ಡಿ ನಿರಂತರ ಸಂಪರ್ಕದಲ್ಲಿದ್ದಾರೆ. ನಾವು ಎನ್‍ಐಎ ಗೆ ಸಹಕಾರ ನೀಡುತ್ತಿದ್ದೇವೆ ಎಂದರು.

    ಇದೇ ವೇಳೆ ಸಿಎಂ ಬಿಎಸ್‍ವೈ ಪದಚ್ಯುತಿಗೆ ಆರ್.ಎಸ್.ಎಸ್ ಹತ್ತಿರದ ನಾಯಕರಿಂದ ಸಂಚು ಎಂಬ ಸಿದ್ದರಾಮಯ್ಯ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲೇ ಒಳಗಿನ ವಾತಾವರಣ ಸೂಕ್ಷ್ಮವಾಗಿದೆ. ಆದ್ದರಿಂದ ಅವರು ಬಿಜೆಪಿ ಬಗ್ಗೆ ಅವರು ಮಾತಾಡೋದು ಬೇಡ. ಬಿಎಸ್‍ವೈ ಅವರು ಸಂಘದ ಹಿನ್ನೆಲೆಯಿಂದ ಬಂದವರು. ಸಂಘ ಮತ್ತು ಬಿಎಸ್‍ವೈ ಎರಡೂ ಒಂದೇ. ನಮ್ಮಲ್ಲಿ ವ್ಯತ್ಯಾಸಗಳು ಯಾವುದೂ ಇಲ್ಲ. ವ್ಯತ್ಯಾಸಗಳಿದ್ದರೆ ಅದು ಕಾಂಗ್ರೆಸ್‍ನಲ್ಲಿ ಮಾತ್ರ ಎಂದು ತಿರುಗೇಟು ನೀಡಿದರು.

  • ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ

    ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.25 ಕೋಟಿ ರೂ. ಮೌಲ್ಯದ ಮಾಧಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಕ ವಸ್ತುಗಳ ನಿರ್ಮೂಲನೆಗೆ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ನಮ್ಮ ದೇಶಿ ಗಾಂಜಾದಿಂದ ಹಿಡಿದು ವಿದೇಶದಲ್ಲಿನ ಬೇರೆ ರೂಪದಲ್ಲಿ ಡ್ರಗ್ಸ್ ಮಾರಾಟ ಜಾಲ ಬೆಳೆದಿದೆ. ಆದ್ದರಿಂದ ‘ಡ್ರಗ್ಸ್ ಫ್ರೀ ಸಿಟಿ’ ಮಾಡುವ ಉದ್ದೇಶದಿಂದ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ರಾಜ್ಯಕ್ಕೆ ಎಲ್‍ಎಸ್‍ಡಿ ಸೇರಿದಂತೆ ಬೇರೆ ರೂಪದಲ್ಲಿ ಮಾದಕ ವಸ್ತುಗಳು ಬರುತ್ತಿದೆ. ಶಾಲಾ, ಕಾಲೇಜುಗಳ ಬಳಿಯೇ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ವ್ಯವಸ್ಥಿತವಾದ ದಂಧೆಯನ್ನಾಗಿ ನಡೆಸಲಾಗುತ್ತಿದ್ದು, ಸರ್ಕಾರ ಕಡಿವಾಣಕ್ಕೆ ಸೂಚನೆ ನೀಡಿದೆ. ಇನ್ನು ಮುಂದೆ ಕಾಲೇಜುಗಳ ಕ್ಯಾಂಪಸ್‍ನಲ್ಲಿ ಡ್ರಗ್ಸ್ ಪತ್ತೆಯಾದರೆ ಮ್ಯಾನೇಜ್‍ಮೆಂಟ್ ವಿರುದ್ಧ ದೂರು ದಾಖಲಿಸಲಾಗುತ್ತದೆ. ಡ್ರಗ್ಸ್ ಕ್ಯಾಂಪಸ್ ಒಳಗೆ ಬರದಂತೆ ತಡೆಯುವುದು ಮ್ಯಾನೇಜ್‍ಮೆಂಟ್ ಜವಾಬ್ದಾರಿ ಎಂದು ಸಚಿವರು ತಿಳಿಸಿದರು.

    ಪೋಷಕರಿಂದ ಹಣ ಹೆಚ್ಚಿಗೆ ಪಡೆದು ಇಂತಹ ಚಟಗಳಿಗೆ ದಾಸರಾಗುತ್ತಿದ್ದಾರೆ. ಬಹಳ ದೊಡ್ಡವರು ಹಾಗೂ ಅವರ ಮಕ್ಕಳು ಜಾಲದಲ್ಲಿ ಇರುವ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಮುಂದೆ ಇದು ಕಂಡು ಬಂದರೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ವಿದೇಶದಿಂದ ಬಂದು ಇಲ್ಲಿ ಸಾಕಷ್ಟು ಜನ ನೆಲೆಸಿದ್ದಾರೆ. ಇದುವರೆಗೂ 533 ಪ್ರಕರಣ ದಾಖಲಿಸಿ, 14 ವಿದೇಶಿಯರು ಸೇರಿ 799 ಜನ ಬಂಧನವಾಗಿದೆ. 2019 ರಲ್ಲಿ 1260 ಆರೋಪಿಗಳನ್ನ ಬಂಧಿಸಿದ್ದು, 768 ಕೇಸ್ ಹಾಕಲಾಗಿತ್ತು. ಕೋವಿಡ್ 19 ಮುಗಿದ ಕೂಡಲೇ ಎಲ್ಲಾ ಕಾಲೇಜು, ಹಾಸ್ಟಲ್ ಮಾದಕ ವಸ್ತು ವಿರೋಧಿ ಅಭಿಯಾನ ಮಾಡುತ್ತೇವೆ. ಈಗಾಗಲೇ ಎಂಟು ಸೆನ್ ಪೊಲೀಸ್ ಸ್ಟೇಷನ್ ಗಳು ಮಾಡಿದ್ದು, ಟೆಕ್ನಿಕಲ್ ಎಕ್ಸ್ ಪರ್ಟ್ ಬೇಕಾಗಿದ್ದು ಅಂಥವರನ್ನು ನೇಮಕ ಮಾಡಲಾಗುತ್ತಿದೆ. ಅಲ್ಲದೇ ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು, ಅದರ ಕಡಿವಾಣಕ್ಕೆ ಮುಂದಾಗಿದ್ದಾವೆ ಎಂದು ವಿವರಿಸಿದರು.

    ಕೇರಳ ಮೂಲದ ಡ್ರಗ್ ಡೀಲರ್ ಗಳಾದ ಶಹದ್ ಮೊಹಮ್ನದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್, ನಿತಿನ್ ಮೋಹನ್ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕಿಂಗ್ ಪಿನ್ ಧೀರಜ್ ಹೇಳಿದಂತೆ ಡ್ರಗ್ ಡೀಲ್ ಮಾಡುತ್ತಿದ್ದರು. ಧೀರಜ್ ಈತ ನೆದರ್‍ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಡ್ರಗ್ ತರಿಸುತ್ತಿದ್ದ. ತನ್ನ ಹುಡುಗರ ಮೂಲಕ ಡ್ರಗ್ ರಿಸೀವ್ ಮಾಡಿಸಿಕೊಂಡು ಮಾರಾಟ ಮಾಡುತ್ತಿದ್ದ. ಇಂಥವರಿಗೆ ಮಾರಾಟ ಮಾಡಬೇಕು ಎಂದು ಮೆಸೇಜ್ ಮಾಡುತ್ತಿದ್ದ. ನೋಡಲು ಬಣ್ಣ ಬಣ್ಣ, ಚಿತ್ರ ವಿಚಿತ್ರದ ಪೇಪರ್ ರೀತಿ ಕಾರಣುತ್ತಿದ್ದ ಅವುಗಳಿಗೆ ಒಂದಕ್ಕೆ 5 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದಂತೆ ಕಿಂಗ್ ಪಿನ್ ಧೀರಜ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.