Tag: Holi festival

  • ಏಳು ಸಮುದ್ರ ದಾಟಿ ಬರುವ ಶಕ್ತಿ ಪ್ರೀತಿಗಿದೆ ಎಂದು ತೋರಿಸಿದ ನವ ಜೋಡಿ

    ಏಳು ಸಮುದ್ರ ದಾಟಿ ಬರುವ ಶಕ್ತಿ ಪ್ರೀತಿಗಿದೆ ಎಂದು ತೋರಿಸಿದ ನವ ಜೋಡಿ

    ಭೋಪಾಲ್: ಪ್ರೀತಿಗೆ ಎಂತಹ ಸವಾಲು ಬಂದರೂ ಎದುರಿಸುವ ಶಕ್ತಿ ಇರುತ್ತದೆ. ಅದೇ ರೀತಿ ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈಗ ದಕ್ಷಿಣ ಅಮೆರಿಕದ ಹುಡುಗಿಯೂ ಒಬ್ಬ ರೈತನನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಹೋಷಂಗಾಬಾದ್‍ನಲ್ಲಿ ನಡೆದಿದೆ.

    ವರ ದೀಪಕ್ ರಜಪೂತ್ ಮತ್ತು ಜೆಲ್ಲಿ ಲಿಝೆತ್ ಇಂದು ಹೋಳಿ ಹಬ್ಬದ ದಿನದಂದು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀಪಕ್ ಬೈಸನಿ ಜಿಲ್ಲೆಯ ಸಿವ್ನಿ ಮಾಲ್ವದವರಾಗಿದ್ದು, ಅಮೆರಿಕಾದ ಜೆಲ್ಲಿ ಲಿಝೆತ್ ಅವರನ್ನು ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದರು. ಜೆಲ್ಲಿ ದಕ್ಷಿಣ ಅಮೆರಿಕದಲ್ಲಿ ಮಹಿಳಾ ಸಂಪನ್ಮೂಲ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪ್ರೀತಿ ಹುಟ್ಟಿದ್ದು:
    ಇಬ್ಬರೂ ತಮ್ಮ ನಂಬರ್ ತೆಗೆದುಕೊಂಡು ಫೇಸ್‍ಬುಕ್ ನಲ್ಲಿ ಸ್ನೇಹಿತರಾಗಿದ್ದರು. ನಂತರ ಇಬ್ಬರು ವಾಟ್ಸಪ್, ಮೆಸೆಂಜರ್ ಮೂಲಕ ಚಾಟ್ ಮಾಡಲು ಆರಂಭಿಸಿದರು. ಮುಂದುವರಿದಂತೆ ಇಬ್ಬರು ಪರಸ್ಪರ ಫೋನಿನ ಮೂಲಕ ಮಾತನಾಡುತ್ತಿದ್ದರು. ಒಮ್ಮೆ ಜೆಲ್ಲಿ ಪ್ರವಾಸಕ್ಕೆಂದು ಬಂದಾಗ ಎರಡು ತಿಂಗಳು ಭಾರತದಲ್ಲಿದ್ದರು. ಈ ವೇಳೆ ಎರಡು ಬಾರಿ ಮಾತ್ರ ಇಬ್ಬರು ಭೇಟಿಯಾಗಿದ್ದರು. ಬಳಿಕ ತಮ್ಮ ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದು, ಇಬ್ಬರು ಇಂದು ನರ್ಮದಾ ನದಿಯ ದಡದ ಚಿತ್ರಗುಪ್ತ ದೇವಸ್ಥಾನದಲ್ಲಿ ಹೋಳಿ ಹಬ್ಬದ ದಿನವೇ ಮದುವೆಯಾಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಹೋಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.

    ಜೆಲ್ಲಿಗೆ ಮೂರು ವರ್ಷಗಳಿಂದ ದೀಪಕ್ ಪರಿಚಯವಿದ್ದು, ದೀಪಕ್ ಬಿಕಾಂ ಪದವಿ ಓದಿದ್ದಾರೆ. ದೀಪಕ್ ತಾನು ಮಾತನಾಡುವ ವಿಷಯ ಮತ್ತು ಇಂಗ್ಲಿಷ್ ಮೂಲಕ ಜೆಲ್ಲಿಯ ಹೃದಯವನ್ನು ಗೆದ್ದಿದ್ದರು. ಸ್ನೇಹಿತರಂತೆ ಮಾತನಾಡುತ್ತಾ ದಿನಕಳೆದಂತೆ ಪ್ರೀತಿ ಮಾಡಿದ್ದಾರೆ. ನಂತರ ದೀಪಕ್ ಮದುವೆಯ ಬಗ್ಗೆ ಹೇಳಿದಾಗ ಜೆಲ್ಲಿ ಒಪ್ಪಿಕೊಂಡಿದ್ದಾರೆ. ಇಬ್ಬರ ಪ್ರೀತಿಯನ್ನು ಕುಟುಂಬದವರು ಒಪ್ಪಿ ಮದುವೆ ಮಾಡಿಸಿದ್ದಾರೆ.

    “ನಾವು ಮೂರು ವರ್ಷಗಳ ಹಿಂದೆ ಫೇಸ್‍ಬುಕ್ ಮೂಲಕ ನಮ್ಮ ಪರಿಚಯ ಆರಂಭವಾಯಿತು. ಕಳೆದ ಆರು ತಿಂಗಳುಗಳಿಂದ ನಾವು ವಾಟ್ಸಪ್ ಮತ್ತು ಫೋನಿನಲ್ಲಿ ಮಾತನಾಡುತ್ತಿದ್ದೆವು. 2 ತಿಂಗಳುಗಳಿಂದ ಜೆಲ್ಲಿ ಭಾರತ ಪ್ರವಾಸ ಮಾಡುತ್ತಿದ್ದರು. ಈ ವೇಳೆ ಆಕೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ತುಂಬಾ ಇಷ್ಟವಾಗಿದೆ” ಎಂದು ದೀಪಕ್ ಹೇಳಿದ್ದಾರೆ.

    “ದೀಪಕ್ ನನ್ನ ಬಳಿ ಬಂದು ನಾನು ದಕ್ಷಿಣ ಅಮೆರಿಕದ ಹುಡುಗಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದು ಹೇಳಿದರು. ನಂತರ ನಾನು ನ್ಯಾಯಾಲಯದಲ್ಲಿ ವಿವಾಹ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಈಗ ಅವರು ಹಿಂದೂ ಪದ್ಧತಿಯ ಪ್ರಕಾರ ಮದುವೆಯಾಗಿದ್ದಾರೆ” ವಕೀಲರಾದ ಆನಂದ್ ದುಬೆ ತಿಳಿಸಿದ್ದಾರೆ.

  • ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಕೆಲ ದಿನಗಳಲ್ಲಿ ಬಣ್ಣಗಳ ಹೋಳಿ ಹಬ್ಬ ಬಂದೇ ಬಿಡುತ್ತದೆ. ಎಲ್ಲರೂ ಓಕುಳಿ ಹಬ್ಬದಲ್ಲಿ ಮಿಂದೇಳಲು ಈಗಿನಿಂದಲೇ ಸಿದ್ಧರಾಗುತ್ತಿದ್ದೀರ. ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಬಣ್ಣದ ಹಬ್ಬವನ್ನು ಆಚರಿಸುತ್ತೇವೆ. ವಿಶೇಷ ಪೂಜೆ ಮಾಡಿ ಸಿಹಿ ಹಂಚಿ ಕಾಮನ ದಹನ ಮಾಡಿ ಸಂಭ್ರಮಿಸುತ್ತೇವೆ. ಜೊತೆಗೆ ಎಲ್ಲದರಗಿಂತ ಮಿಗಿಲಾಗಿ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಫುಲ್ ಎಂಜಾಯ್ ಮಾಡುತ್ತೀರಿ.

    ಆದರೆ ಎಲ್ಲಿಂದರಲ್ಲಿ ಕಡಿಮೆ ಬೆಲೆಗೆ ಸಿಗುವ ಬಣ್ಣಗಳ ಖರೀದಿ ಬಗ್ಗೆ ಎಚ್ಚರವಿರಬೇಕು. ಕೆಲ ಹೊತ್ತಿನ ಬಣ್ಣ ಬದುಕಿನ ರಂಗನ್ನೇ ಕಿತ್ತುಕೊಳ್ಳಬಾರದು. ಹೀಗಾಗಿ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ದೂರವಿದ್ದರೆ ಒಳಿತು. ನಿಮ್ಮ ಚರ್ಮ, ತ್ವಚೆ, ಕೂದಲಿನ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆ ವಹಿಸಬೇಕು. ಹಾಗಾದರೆ ಆರೋಗ್ಯಕರ ಕಲರ್ ಫುಲ್ ಹೋಳಿಯಾಟ ಹೇಗೆ ಆಡಬೇಕು ಎಂಬ ಬಗ್ಗೆ ಸರಳವಾದ ಸಲಹೆಗಳು ನಿಮಗಾಗಿ. ಒಮ್ಮೆ ಈ ಸಲಹೆಗಳನ್ನು ಪಾಲಿಸಿ ನೋಡಿ ನೀವು ಕಾಮನ ಹಬ್ಬಕ್ಕಿಂತಲೂ ಹೆಚ್ಚು ಸಂಭ್ರಮಿಸುತ್ತೀರ.

    ಸಲಹೆಗಳು:
    * ಮೊಟ್ಟಮೊದಲಿಗೆ ಹೋಳಿ ಹಬ್ಬಕ್ಕೆ ಪರಿಸರ ಸ್ನೇಹಿ ಬಣ್ಣ ಬಳಸಿರಿ.
    * ಒತ್ತಾಯದಿಂದ ಬಣ್ಣ ಎರಚುವುದು, ತಲೆ ಮೇಲೆ ಮೊಟ್ಟೆ ಒಡೆಯುವುದು, ಕೊಳತೆ ತರಕಾರಿ ಬಳಕೆ ಬೇಡ.
    * ಚರ್ಮದ ಸಮಸ್ಯೆ ಹಾಗೂ ಅಲರ್ಜಿ ಇರುವವರು ಬಣ್ಣದಾಟದಿಂದ ಹೊರಗಿದ್ದರೆ ಒಳಿತು. ಇಲ್ಲವಾದಲ್ಲಿ ಧೂಳು, ರಾಸಾಯನಿಕ ನಿಮ್ಮ ದೇಹ ಸೇರಿ ಉಸಿರಾಟ ಸಮಸ್ಯೆ, ಕೆಮ್ಮು, ಅಸ್ತಮಾ ಸಮಸ್ಯೆ ಎದುರಾಗಬಹುದು.
    * ಆಚರಣೆ ಬಳಿಕ ಉತ್ತಮವಾದ ಸೋಪ್ ಬಳಿಸಿ ಸ್ನಾನ ಮಾಡುವುದು ಅಗತ್ಯ.
    * ರಾಸಾಯನಿಕ ಮಿಶ್ರಣದ ಬಣ್ಣದ ಬಳಕೆಯಿಂದ ಕಣ್ಣಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ನ್ಯಾಚುರಲ್ ಕಲರ್ ಬಳಸಬೇಕು. ಕಣ್ಣಿನ ಹಾನಿ ತಪ್ಪಿಸಲು ಕನ್ನಡಕ ಬಳಸಿ.

    * ಒಂದು ವೇಳೆ ಕಣ್ಣಿಗೆ ಬಣ್ಣ ಬಿದ್ದರೆ, ಕಣ್ಣನ್ನು ಉಜ್ಜುವುದು, ರಬ್ ಮಾಡುವುದು ಮಾಡಲೇ ಬಾರದು. ಎರಡೂ ರೆಪ್ಪೆಗಳನ್ನು ಅಗಲವಾಗಿ ತೆರೆದು ಶುದ್ಧ ನೀರಿನಿಂದ ತೊಳೆಯಬೇಕು.
    * ಸಾವಯವ ಬಣ್ಣಗಳನ್ನು ಮನೆಯಲ್ಲೇ ತಯಾರಿಸಬಹುದು. ಗೋರಂಟಿ ಸೊಪ್ಪು, ಚೆಂಡು ಹೂ, ಅರಿಶಿನ ಪುಡಿ ಬಳಸಿ ಮನೆಯಲ್ಲಿ ಬಣ್ಣ ತಯಾರಿಸಬಹುದು.
    * ಹೋಳಿ ವೇಳೆ ತುಂಬು ತೋಳಿನ ಬಟ್ಟೆ ಧರಿಸಿದ್ದರೆ ಉತ್ತಮ.
    * ಮಕ್ಕಳು ಬಣ್ಣ ಆಡುವಾಗ ಪಾಲಕರು ಜಾಗೃತೆ ವಹಿಸಿರಿ.
    * ಮುಖ, ತೋಳು, ಕಾಲುಗಳು ಮತ್ತು ಚರ್ಮದ ಯಾವುದೇ ತೆರೆದ ಭಾಗಕ್ಕೆ ಕ್ರೀಮ್ ಹಚ್ಚಿ ಹೊರಡಿ.
    * ಕಣ್ಣುಗಳ ರಕ್ಷಣೆಗಾಗಿ ಸನ್‍ಗ್ಲಾಸ್ ಧರಿಸುವುದು ಉತ್ತಮ.

    * ಕಡುಗಾಢವಾದ ಬಣ್ಣಗಳ ಬಳಕೆ ಬೇಡ. ರಾಸಾಯನಿಕಗಳ ಬಳಕೆ ಹೆಚ್ಚಿರುವುದರಿಂದ ಹಾನಿಯೂ ಹೆಚ್ಚಿರುತ್ತದೆ..
    * ದೇಹದ ತೆರೆದ ಭಾಗದಲ್ಲಿ ಬಣ್ಣ ತಗುಲಿ ತುರಿಕೆ, ಕೆರೆತ, ನವೆ ಉಂಟಾದರೆ ತಕ್ಷಣವೇ ಶುದ್ಧ ನೀರಿನಿಂದ ತೊಳೆದುಕೊಳ್ಳಿ.
    * ಮುಖಕ್ಕೆ ತಗುಲಿರುವ, ಅಂಟಿರುವ ಬಣ್ಣ ತೆಗೆಯಲು ಮೊದಲು ಮುಖವನ್ನು ತಣ್ಣೀರಿನಲ್ಲಿ ಅದ್ದಿ ಬಳಿಕ ಸೌಮ್ಯವಾದ ಕ್ರೀಮ್ ಹಚ್ಚಿ, ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಮುಖಕ್ಕೆ ಅಂಟಿರುವ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.

    * ಹಾಲಿಗೆ ಸೂರ್ಯಕಾಂತಿ, ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಯಾವುದಾದರೊಂದು ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಚರ್ಮಕ್ಕೆ ಹಚ್ಚಿ. ಇದರಿಂದ ಮುಖ ಮಾತ್ರವಲ್ಲದೇ, ದೇಹದಿಂದಲೂ ಬಣ್ಣವನ್ನು ತೆಗೆಯಬಹುದಾಗಿದೆ
    * ಜೊತೆಗೆ ಅರ್ಧ ಕಪ್ ಗಟ್ಟಿ ಮೊಸರಿಗೆ 2 ಚಮಚ ಜೇನುತುಪ್ಪ ಹಾಗೂ ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮುಖ, ಕುತ್ತಿಗೆಗೆ ಹಚ್ಚಿ ಸುಮಾರು ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ತೊಳೆಯುವುದರಿಂದ ಅಂಟಿರುವ ಬಣ್ಣ ಹೋಗುತ್ತದೆ. ಚರ್ಮದ ತಾಜತೆ ಹಾಗೇ ಉಳಿದಿರುತ್ತದೆ.

    ಇನ್ನು ಓಕುಳಿಯಾಟದ ವೇಳೆ ಕೂದಲಿಗಾಗುವ ಹಾನಿಯನ್ನು ತಡೆಯಬೇಕಾದ್ರೆ:
    * ಕೂದಲಿಗೆ ಬಣ್ಣವಾದಲ್ಲಿ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಕೂದಲಿಗೆ ಅಂಟಿಕೊಂಡಿದ್ದ ಬಣ್ಣ ಹೋಗೋವರೆಗೂ ನಿಧಾನವಾಗಿ ಉಜ್ಜಿ ತೊಳೆಯಬೇಕು.
    * ಗಟ್ಟಿ ಮೊಸರಿನಲ್ಲಿ ಮೆಂತ್ಯಕಾಳುಗಳನ್ನು ನೆನಸಿಡಿ. 5-10 ನಿಮಿಷದ ನಂತರ ಅದನ್ನು ತಲೆಗೆ ಹಚ್ಚಿ ಅರ್ಧಗಂಟೆ ಹಾಗೇ ಬಿಡಬೇಕು. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
    * ಪರಸ್ಪರ ಬಣ್ಣ ಎರಚಾಡುವುದಕ್ಕೂ ಮುಂಚೆಯೇ ಹೇರ್ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮೆದುಳಿನ ರಕ್ತ ಸಂಚಲನ ಹೆಚ್ಚಾಗಿ, ಕೂದಲಿನ ಬುಡ ಗಟ್ಟಿಯಾಗುತ್ತದೆ.
    * ಬೆಚ್ಚಗಿನ ಕೊಬ್ಬರಿಯನ್ನು ತಲೆಕೂದಲಿಗೆ ಹಚ್ಚಿ, ಕೂದಲ ಬುಡಕ್ಕೆ ಮಸಾಜ್ ಮಾಡಬೇಕು. ಇದರಿಂದ ಕೂದಲಿಗೆ ರಾಸಾಯನಿಕ ಮಿಶ್ರಿತ ಬಣ್ಣ ಅಂಟುವುದನ್ನು ತಡೆಯಬಹುದು.
    * ಓಕುಳಿಯಾಟದ ವೇಳೆ ಕೂದಲು ಬಿಡುವ ಬದಲಾಗಿ ಕೂದಲನ್ನು ಒಟ್ಟು ಮಾಡಿ ಜಡೆ ಎಣೆದುಕೊಂಡರೆ ಉತ್ತಮ.

    ಹೋಳಿ ಹಬ್ಬದಲ್ಲಿ ಬಣ್ಣ ಎರಚಾಡಲು ತಯಾರಿ ಇಲ್ಲದಿದ್ದರೆ ಏನಾಗುತ್ತೆ?:
    * ನಿಮ್ಮ ಅವಶ್ಯಕತೆಯೆ, ಕ್ರೇಜ್‍ಅನ್ನೇ ಬಂಡವಾಳ ಮಾಡಿಕೊಂಡು ಮಾರುಕಟ್ಟೆಯಲ್ಲಿ ಮನಸೋಇಚ್ಛೆ ಕಲರ್‍ಗಳು ದಾಂಗುಡಿ ಇಟ್ಟಿವೆ. ಇದರಿಂದ ಎಚ್ಚರವಾಗಿರಬೇಕು. ಇಲ್ಲವಾದಲ್ಲಿ ತೊಂದರೆ ಕಟ್ಟಿಟ್ಟಬುತ್ತಿ.
    * ಕ್ವಾಲಿಟಿ ಇಲ್ಲದ ಬಣ್ಣಗಳ ಬಳಕೆಯಿಂದ ಚರ್ಮದ ಸಮಸ್ಯೆ, ಉಸಿರಾಟದ ಸಮಸ್ಯೆ, ಕಣ್ಣಿನ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಇವೆ.
    * ಸಾಮಾನ್ಯವಾಗಿ ಬಣ್ಣಗಳಲ್ಲಿ ಟಾಕ್ಸಿಕ್ ರಾಸಾಯನಿಕ ಇರುವುದರಿಂದ ಅದು ಕಣ್ಣಿಗೆ ಬಿದ್ದ ಕೂಡಲೇ ಕಣ್ಣು ಕೆಂಪಗಾಗುವುದು, ನೋಯುವುದು, ಇಲ್ಲವೆ ಕಣ್ಣಿನ ಕಣ್ಣಗುಡ್ಡೆಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ.
    * ಅಸ್ತಮಾ, ಉಸಿರಾಟದ ತೊಂದರೆ ಇರುವವರು ಶ್ವಾಸಕೋಶದ ತೊಂದರೆ ಅನುಭವಿಸಬೇಕಾಗುತ್ತದೆ.
    * ಬಣ್ಣ ಗುಣಮಟ್ಟದಲ್ಲವಾದರೆ ಅಲರ್ಜಿ, ತುರಿಕೆಯಂತಹ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

    ಯಾವ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಯವ್ಯಾವ ತೊಂದರೆಗಳು ಉಂಟಾಗುತ್ತೆ:
    * ಹಸಿರು ರಾಸಾಯನಿಕ ಬಣ್ಣದಲ್ಲಿರುವ ಕಾಪರ್ ಸಲ್ಫೇಟ್ – ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ.
    * ನೇರಳೆ ರಾಸಾಯನಿಕ ಬಣ್ಣದಲ್ಲಿರುವ ಕ್ರೋಮಿಯಂ ಅಯೋಡೈಡ್ – ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತೆ.
    * ಕಪ್ಪು ರಾಸಾಯನಿಕ ಬಣ್ಣದಲ್ಲಿರುವ ಲೆಡ್ ಆಕ್ಸೈಡ್ – ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತೆ.
    * ಕೆಂಪು ರಾಸಾಯನಿಕ ಬಣ್ಣದಲ್ಲಿರುವ ಮಕ್ರ್ಯೂರಿಕ್ ಸಲ್ಫೇಟ್ – ಚರ್ಮ ಸಮಸ್ಯೆಗೆ ಕಾರಣವಾಗುತ್ತೆ
    * ಸಿಲ್ವರ್ ರಾಸಾಯನಿಕ ಬಣ್ಣದಲ್ಲಿರುವ ಅಲ್ಯುಮಿನಿಯಂ ಬ್ರೋಮೈಡ್ – ತುರಿಕೆ, ಕೆರೆತ ಸಮಸ್ಯೆಗೆ ಕಾರಣವಾಗುತ್ತೆ.