Tag: HN Valley

  • ಸಚಿವ ಮಾಧುಸ್ವಾಮಿ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್

    ಸಚಿವ ಮಾಧುಸ್ವಾಮಿ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್

    – ಸಾಮಾಜಿಕ ಅಂತರವನ್ನೇ ಮರೆತ ಸಚಿವರು, ಶಾಸಕರು, ಸಂಸದರು.
    – ಚಿಂತಾಮಣಿಯಲ್ಲಿ ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಮಾಜಿ, ಹಾಲಿ ಶಾಸಕರ ನಡ್ವೆ ಫೈಟ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರಿಗೆ ಕೋಲಾರ ಸಂಸದ ಮುನಿಸ್ವಾಮಿ, ಚಿಂತಾಮಣಿ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಾಥ್ ನೀಡಿದ್ದರು.

    ಭೇಟಿ ವೇಳೆ ಸಚಿವರು, ಶಾಸಕರು ಹಾಗೂ ಸಂಸದರು ಸಾಮಾಜಿಕ ಅಂತರವನ್ನು ಮರೆತಿದ್ದರು. ಸಂಸದ ಮುನಿಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರೆ, ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೂಡ ತಮ್ಮ ಬೆಂಬಲಿಗರೊಂದಿಗೆ ಗುಂಪು ಗುಂಪಾಗಿ ಆಗಮಿಸಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಲಿಲ್ಲ.

    ಸಚಿವರ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್: ಇದೇ ವೇಳೆ ಬಿಜೆಪಿ ಕಾರ್ಯಕರ್ತ ಸಂಸದ ಮುನಿಸ್ವಾಮಿ, ಸಚಿವರು ತಮ್ಮ ತಾಲೂಕಿಗೆ ಬರುವ ಮಾಹಿತಿಯನ್ನೇ ಕೊಟಿಲ್ಲ. ನಾವು ನಿಮಗೆ ಮತ ಹಾಕಿದ್ದು, ನೀವೇ ಹೀಗೆ ಮಾಡಿದರೇ ಹೇಗೆ ಎಂದು ಆಕ್ರೋಶ ಹೊರಹಾಕಿದ್ದರು. ಈ ವೇಳೆ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ, ಶಿವು ಪ್ರದೀಪ್ ವಿರುದ್ಧ ತಿರುಗಿಬಿದ್ದು ಮಾತಿನ ಚಕಮಕಿ ಆರಂಭಿಸಿದ್ದರು. ಅಲ್ಲದೇ ಅಂತಿಮವಾಗಿ ಎಂಪಿ ಆದವನಿಗೆ ಮಾನ ಇಲ್ಲ. ಯಾರ್ಯಾರನ್ನೋ ಜೊತೆಯಲ್ಲಿ ಇಟ್ಟುಕೊಂಡು ಬರ್ತಾನೆ ಎಂದು ಬಿಜೆಪಿ ಕಾರ್ಯಕರ್ತ ಪ್ರದೀಪ್ ಏಕವಚನದಲ್ಲೇ ತಮ್ಮದೇ ಪಕ್ಷದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದ.

    ಮಾಧುಸ್ವಾಮಿ ಗರಂ: ಕುರುಟಹಳ್ಳಿ ಕೆರೆಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತೆ ಹಾಗೂ ನೀರಾವರಿ ಹೋರಾಟಗಾರ್ತಿ ಆಯಿಷಾ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಚಿವರ ಉತ್ತರಿಸುತ್ತಿದ್ದರೂ ಮರು ಪ್ರಶ್ನೆ ಮಾಡುತ್ತಿದ್ದ ವೇಳೆ ಗರಂ ಆದ ಸಚಿವ ಮಾಧುಸ್ವಾಮಿ ಅವರು, ‘ನಾನು ನೀನು ಹೇಳಿದ ಹಾಗೆ ಕೇಳಲು ಮಂತ್ರಿ ಆಗಿಲ್ಲ’ ಎಂದು ತಿರುಗೇಟು ನೀಡಿದರು. ಇತ್ತ ಮಾಧ್ಯಮದವರಿಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡುವ ವೇಳೆ, ಆಯಿಷಾರನ್ನು ಉದ್ದೇಶಿಸಿ ಮಾತು ಸ್ವಲ್ಪ ಸಾಕು ಮಾಡಮ್ಮ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಇದರಿಂದ ಮತ್ತಷ್ಟು ಕೆರಳಿದ ಆಯಿಷಾ ಸಚಿವರು ಹಾಗೂ ಸಂಸದರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

    ನೀರಿಗಾಗಿ ಮಾಜಿ, ಹಾಲಿ ಶಾಸಕರ ರಾಜಕಾರಣ: ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್.ವ್ಯಾಲಿ ಹಾಗೂ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಹೆಬ್ಬಾಳ ನಾಗವಾರ ಕೆರೆಯ ನೀರನ್ನು ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಆದರೆ ಚಿಂತಾಮಣಿ ತಾಲೂಕಿನ 5 ಕೆರೆಗಳಿಗೆ ಕೆ.ಸಿ.ವ್ಯಾಲಿಯ ನೀರನ್ನು ಹರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಈಗಾಗಲೇ ಕುರುಟಹಳ್ಳಿ ಕೆರೆಗೆ ಕಳೆದ ಒಂದು ವಾರದಿಂದ ನೀರು ಹರಿಸಲಾಗುತ್ತಿದೆ.

    ಆದರೆ ಈ ನಡುವೆ ಕೆರೆಗೆ ಭೇಟಿ ನೀಡಿದ್ದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು, ಕೆರೆಯಲ್ಲಿನ ಜಾಲಿ ಮರಗಳನ್ನು ಸ್ವಚ್ಚಗೊಳಿಸದೆ ನೀರು ಹರಿಸೋದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಪರಿಣಾಮ ನೀರಿನ ಹರಿಯುವಿಕೆ ನಿಲ್ಲಿಸಿಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈಗಾಗಲೇ ಬಿಜೆಪಿಯವರ ಜೊತೆ ಗುರುತಿಸಿಕೊಂಡಿರುವ ಮಾಜಿ ಶಾಸಕ ಎಂ.ಸಿ.ಸುಧಾಕರ್ ರೆಡ್ಡಿ ಬೆಂಬಲಿಗರೊಂದಿಗೆ ಕುರುಟಹಳ್ಳಿ ಕೆರೆ ಬಳಿ ಪ್ರತಿಭಟನಾ ಧರಣಿ ನಡೆಸಿದರು. ಸದ್ಯ ಈ ವಿಚಾರದಲ್ಲಿ ಹಾಲಿ, ಮಾಜಿ ಶಾಸಕರ ರಾಜಕಾರಣದ ಫೈಟ್ ಜೋರಾಗಿ ನಡೆಯುತ್ತಿದೆ. ಹೀಗಾಗಿ ಇಂದು ಸಚಿವ ಮಾಧುಸ್ವಾಮಿ ಕುರುಟಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಸಚಿವರು, ಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೀವಿ. ಸಂಸದರು, ಶಾಸಕರು ಎಲ್ಲಾ ಸೇರಿ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಹೇಳಿ ಸ್ಥಳದಿಂದ ಹೊರಟರು.

  • ಸುಧಾಕರ್ ಕನಸಿನ ಯೋಜನೆ ಎಚ್‍ಎನ್ ವ್ಯಾಲಿ ಸಾಕಾರ- ಸಿದ್ದರಾಮಯ್ಯ ಸಂತಸ

    ಸುಧಾಕರ್ ಕನಸಿನ ಯೋಜನೆ ಎಚ್‍ಎನ್ ವ್ಯಾಲಿ ಸಾಕಾರ- ಸಿದ್ದರಾಮಯ್ಯ ಸಂತಸ

    – ಸುಧಾಕರ್ ಸಚಿವರಾದ ದಿನವೇ ಕಂದವಾರದ ಕೆರೆಗೆ ನೀರು

    ಚಿಕ್ಕಬಳ್ಳಾಪುರ: ಬಯಲುಸೀಮೆ ಬರ ಪೀಡಿತ ಜಿಲ್ಲೆಗಳ ಜನರ ಬದುಕಿಗೆ ಆಶಾದಾಕವಾದ ಎಚ್‍ಎನ್ ವ್ಯಾಲಿ ಯೋಜನೆ ಸಾಕಾರಗೊಂಡಿದೆ. ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದ ಎಚ್‍ಎನ್ ವ್ಯಾಲಿ ಹೆಬ್ಬಾಳ-ನಾಗವಾರ ಕೆರೆಗಳ ಏತ ನೀರಾವರಿ ಯೋಜನೆಯ ನೀರು ಇಂದು ಚಿಕ್ಕಬಳ್ಳಾಪುರ ದ ಕಂದವಾರ ಕೆರೆಗೆ ಹರಿದುಬಂದಿದೆ.

    ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಚಿಕ್ಕಬಳ್ಳಾಪುರ ಭಾಗದ ನೀರಿನ ಸಮಸ್ಯೆ ಪರಿಹರಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ 44 ಕೆರೆಗಳಿಗೆ ನೀರು ತುಂಬಿಸುವ 900 ಕೋಟಿ ರೂ. ವೆಚ್ಚದ ಎನ್‍ಎಚ್ ವ್ಯಾಲಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದೆ. ಯೋಜನೆಯ ಕಾಮಗಾರಿ ಪೂರ್ಣಗೊಂಡು ಇಂದು ಕಂದವಾರ ಕೆರೆಗೆ ನೀರು ಹರಿಯುತ್ತಿರುವುದು ನನ್ನಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದ್ದಾರೆ.

    ಬೆಳಗ್ಗೆಯಿಂಲೂ ತಿರ್ನಹಳ್ಳಿ-ಮುದ್ದೇನಹಳ್ಳಿ ರಸ್ತೆಯ ಬಂಡಹಳ್ಳಿ ಕ್ರಾಸ್ ಬಳಿಯ ಓಪನ್ ಛೆಂಬರ್ ಮೂಲಕ ಕಂದವಾರ ಕೆರೆಗೆ ನೀರು ಹರಿದುಬರುತ್ತಿದೆ. ಹೀಗಾಗಿ ಬಂಡಹಳ್ಳಿ ಕ್ರಾಸ್ ಬಳಿ ಜನ ತಂಡೋಪ ತಂಡವಾಗಿ ಆಗಮಿಸಿ ನೀರಿನ ಆಗಮನ ಕಂಡು ಆನಂದಿಸುತ್ತಿದ್ದಾರೆ. ಈ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕರಾಗಿದ್ದ ಸುಧಾಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಾಕಷ್ಟು ಶ್ರಮ ಹಾಕಿ ಯೋಜನೆಯನ್ನ ಜಾರಿಮಾಡಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚಿಕ್ಕಬಳ್ಳಾಪುರದ ಹಾಲಿ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾಗಿದೆ.

    ಇತ್ತ ಸುಧಾಕರ್ ಅವರು ಸಚಿವರಾದ ಇಂದೇ ಚಿಕ್ಕಬಳ್ಳಾಪುರದ ಕಂದವಾರದ ಕೆರೆಗೆ ಎಚ್‍ಎನ್ ವ್ಯಾಲಿ ನೀರು ಸಹ ಹರಿದುಬಂದಿರುವುದು ಜಿಲ್ಲೆಯ ಜನರ ಸಂತಸ ಮತ್ತಷ್ಟು ಹೆಚ್ಚು ಮಾಡಿದೆ. ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸುವ ಯೋಜನೆ ಇದಾಗಿದೆ.

  • ಎಚ್‍ಎನ್ ವ್ಯಾಲಿ ಯೋಜನೆ ನಿಲ್ಲಿಸಲೂ ಯಾರಿಂದಲೂ ಸಾಧ್ಯವಿಲ್ಲ – ಶಾಸಕ ಸುಧಾಕರ್

    ಎಚ್‍ಎನ್ ವ್ಯಾಲಿ ಯೋಜನೆ ನಿಲ್ಲಿಸಲೂ ಯಾರಿಂದಲೂ ಸಾಧ್ಯವಿಲ್ಲ – ಶಾಸಕ ಸುಧಾಕರ್

    ಚಿಕ್ಕಬಳ್ಳಾಪುರ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಹೆಬ್ಬಾಳ-ನಾಗವಾರ(ಎಚ್‍ಎನ್) ವ್ಯಾಲಿ ಯೋಜನೆ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲೂ ಸಾಧ್ಯವಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿದ್ದಾರೆ.

    ಎಚ್‍ಎನ್ ವ್ಯಾಲಿ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದು ಗಂಟೆ ಅವಧಿಯಲ್ಲಿ ಶುದ್ಧೀಕರಿಸದ ನೀರನ್ನ ಲಕ್ಷ್ಮೀಸಾಗರ ಕೆರೆಗೆ ಬಿಟ್ಟಿದ್ದಾರೆ. ಇದನ್ನೇ ಕೆಲವರು ರಾಜಕೀಯ ಆಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

    ಈಗಾಗಲೇ ಕೆರೆಗೆ ಹರಿಸಲಾಗುತ್ತಿರುವ ನೀರನ್ನು 2 ಹಂತದಲ್ಲಿ ಶುದ್ಧೀಕರಿಸಲಾಗುತ್ತಿದೆ. 3ನೇ ಹಂತದಲ್ಲಿ ಶುದ್ಧೀಕರಣ ನಡೆಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಈ ಕುರಿತ ಆದೇಶವನ್ನು ಸಿಎಂ ಘೋಷಣೆ ಮಾಡುವ ಭರವಸೆ ಇದೆ. ಯಾವುದೇ ಅಭಿವೃದ್ಧಿ ಯೋಜನೆ ಎಂದೂ ದುಡ್ಡು ಮಾಡುವ ಯೋಜನೆ ಆಗುವುದಿಲ್ಲ. ಎತ್ತಿನ ಹೊಳೆ ಯೋಜನೆಗೆ ಈ ಬಾರಿ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಎಚ್ ಎನ್ ವ್ಯಾಲಿ ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರು ಸಮರ್ಪಕ ವಾದ ಮಂಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದು.

    ಕಳೆದ ತಿಂಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀ ಸಾಗರ ಕೆರೆಗೆ ಕೋರಮಂಗಲ ಚಲ್ಲಘಟ್ಟ ವ್ಯಾಲಿ ನೀರು ಹರಿಸಿದ್ದರಿಂದ ನೀರಿನಲ್ಲಿ ನೊರೆ ಕಾಣಿಸಿಕೊಂಡು ಜಿಲ್ಲೆಯ ಜನರಲ್ಲಿ ಆಂತಕ ಸೃಷ್ಟಿಸಿತ್ತು. ಇದಾದ ಬಳಿಕ ಕೆಲ ಹೋರಾಟಗಾರರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನೀರಿನ ಗುಣಮಟ್ಟ ಕುರಿತು ಶಂಕೆ ವ್ಯಕ್ತಪಡಿಸಿ ನೀರು ಹರಿಸದಂತೆ ತಡೆಯಾಜ್ಞೆ ತಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಎಚ್.ಎನ್ ವ್ಯಾಲಿ ಯೋಜನೆಯ ನೀರು ಜಿಲ್ಲೆಗೆ ಬರೋ ಮುನ್ನವೇ ಕನ್ನ ಹಾಕಿದ ರೈತ

    ಎಚ್.ಎನ್ ವ್ಯಾಲಿ ಯೋಜನೆಯ ನೀರು ಜಿಲ್ಲೆಗೆ ಬರೋ ಮುನ್ನವೇ ಕನ್ನ ಹಾಕಿದ ರೈತ

    ಚಿಕ್ಕಬಳ್ಳಾಪುರ: ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸಿದ್ರು ಅನ್ನೋ ಹಾಗೆ ಎಚ್.ಎನ್ ವ್ಯಾಲಿ ಯೋಜನೆಯ ನೀರು ಜಿಲ್ಲೆಗೆ ಬರುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ರೈತನೋರ್ವ ಕೊಳಚೆ ನೀರಿಗೆ ಕನ್ನ ಹಾಕಲು ಪ್ಲಾನ್ ಮಾಡಿದ್ದಾನೆ.

    ಎಚ್‍ಎನ್ ವ್ಯಾಲಿ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಆದರೆ ಇನಮಿಂಚೇನಹಳ್ಳಿ ಬಳಿ ರೈತ ನಾರಾಯಣಪ್ಪ ಎಂಬಾತ ಬೃಹತ್ ಗಾತ್ರದ ಪೈಪ್‍ಗೆ ಕನ್ನ ಕೊರೆದು ಪ್ಲಾಸ್ಟಿಕ್ ಪೈಪ್ ಆಳವಡಿಸಿ, ತನ್ನ ದ್ರಾಕ್ಷಿ ಬೆಳೆ ಇರುವ ಜಮೀನಿಗೆ ಕೊಳಚೆ ನೀರು ಹರಿಸಿಕೊಳ್ಳಲು ಮುಂದಾಗಿದ್ದಾನೆ.

    ಇತ್ತ ನೀರಿನ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್ ಕೋಲಾರದ ಕೆಸಿ ವ್ಯಾಲಿ ಹಾಗೂ ಎಚ್‍ಎನ್ ವ್ಯಾಲಿ ಯೋಜನೆಯ ನೀರನ್ನ ಜಿಲ್ಲೆಗಳಿಗೆ ಹರಿಸದಂತೆ ತಾಕೀತು ಮಾಡಿದೆ. ಆದರೂ ಯಾವುದಾದ್ರೂ ಪರವಾಗಿಲ್ಲ, ಒಟ್ಟಿನಲ್ಲಿ ನೀರು ಸಿಕ್ರೆ ಸಾಕು ಅನ್ನೋ ಮನಸ್ಥಿತಿಯಲ್ಲಿರುವ ರೈತ ಕೊಳಚೆ ನೀರನ್ನೇ ಜಮೀನಿಗೆ ಹರಿಸಲು ಮುಂದಾಗಿದ್ದಾನೆ. ಇದು ರೈತರ ನೀರಿನ ಕೊರತೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.