Tag: HM Rewanna

  • ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರದ್ದು ನಾಲಿಗೆಯಾ ಅಥವಾ ಬೇರೆನಾ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಪಕ್ಷ ಜನನಾಯಕನನ್ನಾಗಿ ಮಾಡಿದೆ. ಮಾತನಾಡುವುದಕ್ಕೂ ಮುನ್ನ ಒಮ್ಮೆ ಅವರು ಬೆಳೆದು ಬಂದ ರೀತಿಯನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ತಲಘಟ್ಟಪುರದಲ್ಲಿ ಎಸ್.ಟಿ.ಸೋಮಶೇಖರ್ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾನು ಜನಪ್ರತಿನಿಧಿಯಾಗಿದ್ದು ಹೇಗೆ ಎಂಬುದನ್ನು ಮೊದಲು ಅವರು ಅರಿಯಬೇಕು. ಯಾವುದೇ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಈ ಸ್ಥಾನ ನೀಡಿದ್ದು, ಪಕ್ಷ, ಜನತೆ. ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು ಎಂದು ಸ್ಪಷ್ಟಪಡಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಅನುದಾನ ಕೊಡದಿದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತಿರಲಿಲ್ಲ. ಹಣ ಸಿಗುತ್ತಿರಲಿಲ್ಲ ಎನ್ನುತ್ತಿದ್ದವರು ಇಂದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾತನಾಡುವುದಕ್ಕೂ ಮೊದಲು ಏನಾಗಿದ್ದರು ಎಂಬುದನ್ನು ಅರಿಯಬೇಕು. ಬಿಡಿಎ ಸದಸ್ಯರಾಗಿ, ಅಧ್ಯಕ್ಷತೆಯೇ ಬೇಕು ಎಂದು ಪಟ್ಟು ಹಿಡಿದು, ಪಡೆದಿದ್ದರು. ಬಿಡಿಎನಲ್ಲಿ ಏನೇನು ಮಾಡಿದ್ದೀರಿ ನೋಡಬೇಕಿದೆ. ಗುಂಡೂರಾವ್ ಅವರ ಮಗ ಎಂಬ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಸಂಘಟನೆ ಮಾಡಿ, ರಾಜ್ಯಾದ್ಯಂತ ಪ್ರಚಾರ ಮಾಡಿ ರಾಜ್ಯಾಧ್ಯಕ್ಷರಾದರು. ಮಾತನಾಡುವ ಮೊದಲು ಹಿಂದೆ ಏನಾಗಿದ್ದೆ ಎಂಬುದನ್ನು ಅರಿಯಬೇಕು. ಒಬ್ಬ ಸಾಮಾನ್ಯ ಟಿಕೆಟ್ ಏಜೆಂಟ್ ಅಗಿದ್ದವರು ಜನಪ್ರತಿನಿಧಿಯಾಗಿ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎಂಬುದನ್ನು ಅರಿಯಬೇಕು ಎಂದರು.

    ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‍ಬಿಎಂ ಮೂವರು ಆಡಿದ ಆಟ ಗೊತ್ತಿಲ್ಲವೇ, ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ದವರ ನಾಲಿಗೆ ಈಗ ಏನಾಗಿದೆ? ಎಲ್ಲ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ, ನಿಮಗೇನಾದರೂ ಮಾನ ಮರ್ಯಾದೆ ಇದೆಯಾ? ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಅವರ ವಿರುದ್ಧವೇ ಮಾತನಾಡುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರ ಮನೆಗೆ ಬಂದರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡುತ್ತೀರಲ್ಲ ನಾಚಿಕೆ ಆಗಲ್ವಾ? ಕೃಷ್ಣ ಭೈರೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂದಿದ್ದರಲ್ಲ ಈಗ ನಿಮ್ಮ ನಾಲಿಗೆಗೆ ಏನಾಗಿದೆ. ಬಹಳ ದಿನ ನಿಮ್ಮ ಆಟ ನಡೆಯುವುದಿಲ್ಲ. ಮುಂದೆ ನಿಮಗೆ ಮಾರಿಹಬ್ಬ ಇದೆ ಎಂದು ಹರಿಹಾಯ್ದರು.

  • ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣರಲ್ಲ- ಎಚ್.ಎಂ.ರೇವಣ್ಣ

    ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣರಲ್ಲ- ಎಚ್.ಎಂ.ರೇವಣ್ಣ

    ಬೆಂಗಳೂರು: ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಖಂಡಿತ ಕಾರಣ ಅಲ್ಲ, ಸರ್ಕಾರ ಬೀಳಲು ಎರಡೂ ಪಕ್ಷಗಳೂ ಕಾರಣ. ಆಡಳಿತ ನಡೆಸುವವರು ಸರಿಯಾಗಿ ನಡೆಸಬೇಕಿತ್ತು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೆಪಿಎಸ್‍ಸಿ ಸದಸ್ಯರಾಗಿ ಮಾಡಿ ಎಂದು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದರು. ಆದರೆ ಕುಮಾರಸ್ವಾಮಿ ಮಾಡಲಿಲ್ಲ. ಬಜೆಟ್ ಅನುದಾನವನ್ನು ಯಾರಿಗೆ ಎಷ್ಟು ನೀಡಿದ್ದಾರೆ ಎಂದು ಪರಿಶೀಲಿಸಿಕೊಳ್ಳಲಿ. ಬಜೆಟ್ ಅನುದಾನ ಕಾಂಗ್ರೆಸ್‍ನವರಿಗಿಂತ ಜೆಡಿಎಸ್ ಶಾಸಕರಿಗೆ ಹೆಚ್ವು ಸಿಕ್ಕಿದೆ. ಸಿದ್ದರಾಮಯ್ಯ ಶಾಸಕರನ್ನು ಮುಂಬೈಗೆ ಕಳುಹಿಸಿಲ್ಲ. ಅವರೇ ಶಾಸಕರನ್ನು ಮುಂಬೈಗೆ ಕಳುಹಿಸಿದ್ದಾರೆ ಎನ್ನುವುದಾದರೆ, ಜೆಡಿಎಸ್ ಶಾಸಕರನ್ನೂ ಅವರೇ ಕಳುಹಿಸಿದ್ದಾರಾ ಎಂದು ಪ್ರಶ್ನಿಸಿದರು.

    ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಅಲ್ಲ, ಆಡಳಿತ ನಡೆಸೋರು ಸರಿಯಾಗಿ ನಡೆಸಬೇಕಿತ್ತು. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ. ಶಾಸಕರು ಮುಂಬೈಗೆ ಹೋಗುವ ಕುರಿತು ಕುಮಾರಸ್ವಾಮಿಯವರಿಗೆ ಮಾಹಿತಿ ಇತ್ತಲ್ಲ. ಅವರೇಕೆ ತಡೆಯಲಿಲ್ಲ, ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು ಸಿದ್ದರಾಮಯ್ಯ ಆಪ್ತರಲ್ಲ. ಸೋಮಶೇಖರ್ ಮೊದಲಿಂದಲೂ ಕಾಂಗ್ರೆಸ್‍ನಲ್ಲಿದ್ದವರು. ಶಾಸಕ ಮುನಿರತ್ನ ಬಿ.ಕೆ.ಹರಿಪ್ರಸಾದ್ ಬೆಂಬಲಿಗರು ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.

    ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯರನ್ನು ಸಿದ್ದರಾಮಯ್ಯ ಕಳಿಸಿದ್ದಾರಾ, ಕುಮಾರಸ್ವಾಮಿಗೆ ಹೇಳೋದಕ್ಕೇನು ಎಲ್ಲವನ್ನೂ ಹೇಳುತ್ತಾರೆ. ಲೋಕಸಭೆ ಚುನಾವಣೆ ನಂತರ ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎಂದು ಮೈತ್ರಿ ಮಾಡಿಕೊಂಡೆವು. ಬಳಿಕ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳು, ವ್ಯತ್ಯಾಸಗಳಾದವು. ಅವುಗಳನ್ನು ಸರಿಪಡಿಸಿಕೊಳ್ಳಬೇಕಿತ್ತು. ಆದರೆ ಸರಿಪಡಿಸಿಕೊಳ್ಳಲಿಲ್ಲ, ಹೀಗಾಗಿ ಅದು ಕೈಮೀರಿ ಹೋಗಿ ಸರ್ಕಾರ ಬೀಳುವ ಹಂತ ತಲುಪಿತು ಎಂದು ತಿಳಿಸಿದರು.