Tag: HLH

  • HLH ರಾಜ್ಯದಲ್ಲಿ ಹಬ್ಬಿಲ್ಲ, ಒಂದೆರಡು ಪ್ರಕರಣಗಳು ಮಾತ್ರ ಪತ್ತೆಯಾಗಿವೆ: ಸುಧಾಕರ್

    HLH ರಾಜ್ಯದಲ್ಲಿ ಹಬ್ಬಿಲ್ಲ, ಒಂದೆರಡು ಪ್ರಕರಣಗಳು ಮಾತ್ರ ಪತ್ತೆಯಾಗಿವೆ: ಸುಧಾಕರ್

    ಚಿಕ್ಕಮಗಳೂರು: ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್(ಎಚ್‍ಎಲ್‍ಎಚ್) ಪ್ರಕರಣ ರಾಜ್ಯದಲ್ಲಿ ಬೇರೆ ಎಲ್ಲೂ ಜನರಲ್ ಆಗಿ ಕಂಡು ಬಂದಿಲ್ಲ. ಎಲ್ಲೋ ಒಂದೆರಡು ಕೇಸ್ ಪತ್ತೆಯಾಗಿವೆ ಅಷ್ಟೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.

    ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಿರುವ ಹಿನ್ನೆಲೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದು, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಎಷ್ಟು ಬೆಡ್ ಖಾಲಿ ಇದೆ, ಎಷ್ಟು ವೆಂಟಿಲೇಟರ್ ಖಾಲಿ ಇದೆ ಎಂದು ಆಸ್ಪತ್ರೆಯಲ್ಲಿ ಬೋರ್ಡ್ ಹಾಕಬೇಕು. ಎಲ್ಲಿದೆ ಬೋರ್ಡ್ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸರ್ಜನ್‍ಗೆ ತರಾಟೆಗೆ ತೆಗೆದುಕೊಂಡರು. ಬಳಿಕ ಆಕ್ಸಿಜನ್ ಘಟಕದ ತಪಾಸಣೆ ನಡೆಸಿದರು. ಇದನ್ನೂ ಓದಿ: ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ HLH ಸಮಸ್ಯೆ ರಾಯಚೂರಿನಲ್ಲಿ ಪತ್ತೆ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ನಿಧಾನವಾಗಿ ಪಾಸಿಟಿವಿಟಿ ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಒಂದನೇ ಅಲೆಯಲ್ಲಿ ಕೂಡ ತಡವಾಗಿ ಪಾಸಿಟಿವಿಟಿ ಹೆಚ್ಚಾಗಿತ್ತು, ತಡವಾಗಿ ಕಡಿಮೆಯಾಗಿತ್ತು. ಈ ಬಾರಿಯೂ ತಡವಾಗಿ ಪಾಸಿಟಿವಿಟಿ ಹೆಚ್ಚಾಗಿದೆ. ಮುಂದಿನ ಎರಡು ವಾರಗಳಲ್ಲಿ ಸಂಪೂರ್ಣ ಹತೋಟಿಗೆ ಬಂದು ಶೇ.5ರ ಒಳಗೆ ಪಾಸಿಟಿವಿಟಿ ರೇಟ್ ಬರಲಿದೆ. ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಮಾಡಿರುವ ಹಣವನ್ನೇ ತೆಗೆದುಕೊಳ್ಳಬೇಕು. ಹೆಚ್ಚಿನ ಹಣ ವಸೂಲಿ ಮಾಡಿದರೆ ಅಂತಹ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

    ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಯಡಿಯೂರಪ್ಪನವರು ಕುರ್ಚಿಯಲ್ಲಿ ಕೂತಿದ್ದಾರೆ. ಈ ಕುರಿತು ನಮ್ಮ ಪ್ರಧಾನ ಕಾರ್ಯದರ್ಶಿಗಳೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಿಎಂ ಕುರ್ಚಿ ಬಗೆಗಿನ ಮಾತುಕತೆ ಅಪ್ರಸ್ತುತ ಎಂದರು.

    ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ಜಿಲ್ಲೆಯಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಇನ್ನು ಎರಡು ವಾರಗಳಲ್ಲಿ ಜಿಲ್ಲೆಯಲ್ಲೂ ಕೊರೊನಾ ಸಂಪೂರ್ಣ ಕಂಟ್ರೋಲ್‍ಗೆ ಬರಲಿದೆ ಎಂದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಶಾಸಕ ಸುರೇಶ್, ಬೆಳ್ಳಿ ಪ್ರಕಾಶ್ ಹಾಗೂ ಎಂ.ಕೆ.ಕುಮಾರಸ್ವಾಮಿ ಉಪಸ್ಥಿತರಿದ್ದರು.

    ಎಚ್‍ಎಲ್‍ಎಚ್ ಎಂದರೇನು?

    ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್ (ಎಚ್‍ಎಲ್‍ಎಚ್) ಸಮಸ್ಯೆ ಅತಿ ವಿರಳವಾಗಿ ಕಾಣಿಸಿಕೊಳ್ಳುವ ಬಿಕ್ಕಟ್ಟಾಗಿದೆ. ವಿಪರೀತ ಜ್ವರ, ವಾಂತಿ ಭೇದಿ, ಹೊಟ್ಟೆನೋವು ಇದರ ಲಕ್ಷಣಗಳು. ಬಿಳಿ ರಕ್ತಕಣ, ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಇಳಿಕೆ, ಸಿಆರ್ ಪಿ ಹೆಚ್ಚಳದಿಂದ ಮಕ್ಕಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ.

  • ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ HLH ಸಮಸ್ಯೆ ರಾಯಚೂರಿನಲ್ಲಿ ಪತ್ತೆ

    ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ HLH ಸಮಸ್ಯೆ ರಾಯಚೂರಿನಲ್ಲಿ ಪತ್ತೆ

    ರಾಯಚೂರು: ಕೋವಿಡ್ ಸೋಂಕು ತಗುಲಿದ ಮಕ್ಕಳಲ್ಲಿ ಗುಣಮುಖರಾದ ಮೂರ್ನಾಲ್ಕು ವಾರಗಳ ಬಳಿಕ ಕಾಣಿಸಿಕೊಳ್ಳುವ ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್(ಎಚ್‍ಎಲ್‍ಎಚ್) ಸಮಸ್ಯೆಯ ಮೊದಲ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಎಚ್‍ಎಲ್‍ಎಚ್ ನಿಂದ ಬಳಲುತ್ತಿದ್ದ 5 ವರ್ಷದ ಮಗು ಈಗ ಗುಣಮುಖವಾಗಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣಕ್ಕೆ ವೈದ್ಯರ ಚಿಕಿತ್ಸೆ ಯಶಸ್ವಿಯಾಗಿದೆ. ನಗರದ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಣ್ಣು ಮಗು ಕಳೆದ 9 ದಿನಗಳಿಂದ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ.

    ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್ (ಎಚ್‍ಎಲ್‍ಎಚ್) ಸಮಸ್ಯೆ ಅತಿ ವಿರಳವಾಗಿ ಕಾಣಿಸಿಕೊಳ್ಳುವ ಬಿಕ್ಕಟ್ಟಾಗಿದೆ. ವಿಪರೀತ ಜ್ವರ, ವಾಂತಿ ಭೇದಿ, ಹೊಟ್ಟೆನೋವು ಇದರ ಲಕ್ಷಣಗಳು. ಬಿಳಿ ರಕ್ತಕಣ, ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಇಳಿಕೆ, ಸಿಆರ್ ಪಿ ಹೆಚ್ಚಳದಿಂದ ಮಕ್ಕಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ರಿಮ್ಸ್ ನ ಪಿಐಸಿಯು ನಲ್ಲಿ ಚಿಕಿತ್ಸೆ ಪಡೆದ ಮಗು ಈಗ ಸಂಪೂರ್ಣ ಗುಣಮುಖಳಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

    ಇನ್ನೂ ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆ ಮಲ್ಟಿಪಲ್ ಇಂಫ್ಲಾಮೆಟರಿ ಸಿಂಡ್ರೋಮ್ (ಎಂಐಎಸ್) ಜಿಲ್ಲೆಯ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಎರಡು ಎಂಐಎಸ್ ಪ್ರಕರಣಗಳಲ್ಲೂ ಮಕ್ಕಳು ಗುಣಮುಖರಾಗಿದ್ದಾರೆ. ಸಮಸ್ಯೆಗಳನ್ನ ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮಕ್ಕಳು ಬೇಗ ಗುಣಮುಖರಾಗುತ್ತಾರೆ ಅಂತ ವೈದ್ಯರು ತಿಳಿಸಿದ್ದಾರೆ.