Tag: hk Patil

  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪರ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬ್ಯಾಟ್ ಬೀಸಿದ್ದಾರೆ.

    ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಹೈಕಮಾಂಡ್ ನಿರ್ಧಾರ ಗೊತ್ತಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರು, ಅಧ್ಯಕ್ಷ ಸ್ಥಾನವನ್ನು ಎಚ್.ಕೆ.ಪಾಟೀಲ್ ಅವರಿಗೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಂತೆ ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎಚ್.ಕೆ.ಪಾಟೀಲ್ ಅವರು ಸೂಕ್ತ ವ್ಯಕ್ತಿ, ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಉತ್ತಮ ಎಂದು ಹೈಕಮಾಂಡ್ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಲಾಬಿ ನಡೆಸಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿರುವ ಅವರು, ಮುನಿಸಿಕೊಂಡಿರುವ ಲಿಂಗಾಯತರು ಕಾಂಗ್ರೆಸ್ ಪರವೇ ನಿಲ್ಲುತ್ತಾರೆ. ಬೇರೆ ಎಲ್ಲಿಯೂ ಹೋಗಲ್ಲ. ಎಲ್ಲ ಅರ್ಹತೆ ಹೊಂದಿರುವ ಎಚ್.ಕೆ.ಪಾಟೀಲ್ ಅವರು ಅಧ್ಯಕ್ಷರಾದರೆ ಪಕ್ಷಕ್ಕೆ ಒಳಿತಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ.

    ಮುಂದಿನ ರಾಜಕೀಯ ಪರಿಸ್ಥಿತಿಯ ಮೇಲೆ ನಿಯಂತ್ರಣ ಹೇರಲು ಮಲ್ಲಿಕಾರ್ಜುನ ಖರ್ಗೆ ಅವರು ಎಚ್.ಕೆ.ಪಾಟೀಲ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಆತ್ಮೀಯ ಸಂಬಂಧವಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶವಿದ್ದರೆ ಎಚ್.ಕೆ.ಪಾಟೀಲರ ಮೂಲಕ ಪಡೆಯಬಹುದು ಎನ್ನುವ ಸೂತ್ರವನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ಧ ಪಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ಜನ ನನ್ನನ್ನು ನೋಡ್ತಾರೆ: ಹೆಚ್.ಕೆ.ಪಾಟೀಲ್

    ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ಜನ ನನ್ನನ್ನು ನೋಡ್ತಾರೆ: ಹೆಚ್.ಕೆ.ಪಾಟೀಲ್

    ಗದಗ: ಸಚಿವ ಸ್ಥಾನ ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುವುದಲ್ಲ. ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ಜನ ನನ್ನನ್ನು ನೋಡುತ್ತಾರೆ ಅಂತ ಕಾಂಗ್ರೆಸ್ ಮಖಂಡ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

    ರಾಜೀನಾಮೆ, ಪ್ರತಿಭಟನೆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಸೂಕ್ತವಲ್ಲ. ಪಕ್ಷ ಹಾಗೂ ಪ್ರಜಾಪ್ರಭುತ್ವದ ಹಿತ ದೃಷ್ಠಿಯಿಂದ ಸಚಿವ ಸ್ಥಾನಕ್ಕೆ ಪ್ರತಿಭಟನೆ ಒಳ್ಳೆಯದಲ್ಲ. ನನ್ನ ಮೇಲಿನ ಅಭಿಮಾನದಿಂದ ರಾಜೀನಾಮೆ ಮೂಲಕ ಪ್ರತಿಭಟನೆ ವ್ಯಕ್ತವಾಗಿದೆ. ಹೀಗಾಗಿ ರಾಜೀನಾಮೆಯನ್ನು ಹಿಂಪಡೆದುಕೊಳ್ಳಿ ಅಂತಾ ಬೆಂಬಲಿಗರಿಗೆ ಕೈ ಮುಗಿದು ಹೆಚ್.ಕೆ.ಪಾಟೀಲ್ ಮನವಿ ಮಾಡಿಕೊಂಡರು.

    ಸಚಿವ ಸ್ಥಾನ ಸಿಗದಿದ್ರು ಸೇವಾ ಅವಕಾಶ ಸಿಕ್ಕ ಸಮಾಧಾನ ನನ್ನದು. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ವರಿಷ್ಠರೆ ಉತ್ತರಿಸಬೇಕು. ಇನ್ನು ಬಾಕಿ ಉಳಿದ 6 ಸ್ಥಾನದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ನಾನಿಲ್ಲ. ನಾನೂ ಸಚಿವ ಸ್ಥಾನದ ನಿರೀಕ್ಷೆಯಲ್ಲೂ ಇಲ್ಲ ಅಂತಾ ಸ್ಪಷ್ಟಪಡಿಸಿದ್ರು.

  • ಮಂತ್ರಿ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡ ಎಚ್.ಕೆ.ಪಾಟೀಲ್: ಮನವೊಲಿಕೆಗೆ ಡಿಕೆಶಿ, ರೋಷನ್ ಬೇಗ್ ಸಾಹಸ

    ಮಂತ್ರಿ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡ ಎಚ್.ಕೆ.ಪಾಟೀಲ್: ಮನವೊಲಿಕೆಗೆ ಡಿಕೆಶಿ, ರೋಷನ್ ಬೇಗ್ ಸಾಹಸ

    ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪುತ್ತಿದ್ದಂತೆಯೇ ಕಾಂಗ್ರೆಸ್ಸಿನ ಕೆಲವು ಮಾಜಿ ಸಚಿವರು ಅಸಮಾಧಾನ ಹೊರ ಹಾಕಿದ್ದು, ಹೈಕಮಾಂಡ್ ಜೊತೆಗೆ ಮುನಿಸಿಕೊಂಡಿದ್ದಾರೆ.

    ಶಾಸಕ ಎಂ.ಬಿ ಪಾಟೀಲ್ ಬೆನ್ನಲ್ಲೇ ಮಾಜಿ ಸಚಿವ ಎಚ್.ಕೆ ಪಾಟೀಲ್ ಕೂಡ ಮುನಿಸಿಕೊಂಡಿದ್ದು, ಕೈ ಮುಖಂಡರ ಮನವೊಲಿಕೆಗೂ ಜಗ್ಗುತ್ತಿಲ್ಲ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಎಚ್.ಕೆ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಮನವೊಲಿಕೆ ಯತ್ನ ಮಾಡಿದ್ದರು. ಚರ್ಚೆ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮದೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದು. ಡಿಕೆಶಿ ನಂತರ ಶಿವಾಜಿನಗರ ಶಾಸಕ ರೋಷನ್ ಬೇಗ್, ಹಿರಿಯ ಮುಖಂಡ ಜಾಫರ್ ಶರೀಷ್ ಆಗಮಿಸಿ ಮನವೊಲಿಕೆಗೆ ಮುಂದಾಗಿದ್ದರು.

    ಇದೆಲ್ಲ ಬೆಳವಣಿಗೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಡಿ.ಕೆ ಶಿವಕುಮಾರ್ ಹಾಗೂ ರೋಷನ್ ಬೇಗ್ ಜೊತೆಗೆ ಪಕ್ಷದ ವಿಚಾರ ಚರ್ಚೆ ಮಾಡಿದ್ದೇನೆ. ನನ್ನ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಅತಿ ಸೂಕ್ಷ್ಮವಾದ ವಿಚಾರ. ನನ್ನ ನಿಲುವನ್ನು ಮಂಗಳವಾರ ತಿಳಿಸುತ್ತೇನೆ ಎಂದರು.

    ದೆಹಲಿಯಿಂದ ಕೆಲವು ಮುಖಂಡರು ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಒಂದು ಮೊಬೈಲ್ ಕರೆ ಕೂಡಾ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ಮಹದಾಯಿ ಬಗ್ಗೆ ಮೋದಿ ಸುಳ್ಳು ಹೇಳಿದ್ದಾರೆ: ಎಚ್‍ಕೆ ಪಾಟೀಲ್

    ಮಹದಾಯಿ ಬಗ್ಗೆ ಮೋದಿ ಸುಳ್ಳು ಹೇಳಿದ್ದಾರೆ: ಎಚ್‍ಕೆ ಪಾಟೀಲ್

    ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ಞಾವಂತಿಕೆ ನೆಲದಲ್ಲಿ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ. ಅವರ ಹೇಳಿಕೆ ವಾಸ್ತವಾಂಶಕ್ಕೆ ಸಂಬಂಧವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‍ಕೆ ಪಾಟೀಲ್ ಹೇಳಿದ್ದಾರೆ.

    ಸಣ್ಣಮಟ್ಟದ ರಾಜಕೀಯ ಭಾಷಣದ ಮೂಲಕ ಸುಳ್ಳುಗಳ ಸರಮಾಲೆ ಮಾಡಿ ಪ್ರಜ್ಞಾವಂತ ಜನರಿಗೆ ಅವಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಧಾನಿ ಘನತೆ ಕಡಿಮೆ ಮಾಡಬೇಕೆನ್ನುವ ದುರುದ್ದೇಶ ಅಥವಾ ಅಜ್ಞಾನದಿಂದಲೋ ಮೋದಿ ಅವರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ 2005-06ರಲ್ಲೆ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಎಲ್ಲರಿಗೂ ಗೊತ್ತಿದೆ. 2007ರಲ್ಲಿ ಗೋವಾದಲ್ಲಿ ಮಹದಾಯಿ ವಿಚಾರದಲ್ಲಿ ಸೋನಿಯಾಗಾಂಧಿ ಹೇಳಿಕೆ ನೀಡಿದಾಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲೆ ಇದ್ದರು. ಕರ್ನಾಟಕದ ರಾಜಕೀಯ ಘಟನೆ ಬಗ್ಗೆ ಮಾತನಾಡುವಾಗ ಇಲ್ಲಿನ ರಾಜಕೀಯದ ಬಗ್ಗೆ ಅರಿವು ಹೊಂದಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುದೈವವೋ, ದುರ್ದೈವವೋ ಪ್ರಧಾನಿ ಪಟ್ಟದಲ್ಲಿದ್ದೀರಿ. ನಿಮಗಿರೋ ಶಿಷ್ಠಾಚಾರದ ಹಿನ್ನೆಲೆಯಲ್ಲಿ ಸುಳ್ಳನ್ನು ಜನರಿಗೆ ಬಿತ್ತರಿಸಬೇಡಿ. 2007ರಲ್ಲಿ ಸೋನಿಯಾಗಾಂಧಿ ಹೇಳಿಕೆಯನ್ನು ವಿವಾದಾತ್ಮಕವಾಗಿ ಪ್ರಕಟಿಸಿದ್ದು ಮಾಧ್ಯಮಗಳು. ಹೇಳಿಕೆ ಬಂದ ತಕ್ಷಣವೇ ಸೋನಿಯಾಗಾಂಧಿ ಪ್ರತಿಕ್ರಿಯಿಸಿದ್ದಾರೆ. ವಿವಾದಾತ್ಮ ಹೇಳಿಕೆ ಪ್ರಧಾನಿ ಗಮನಕ್ಕೆ ಬಂದಿದೆ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ ಹೇಳಿಕೆ ಪ್ರಧಾನಿ ಗಮನಕ್ಕೆ ಬರಲಿಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು.

    ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಮೊರೆ ಹೋದವರು ಬಿಎಸ್ ಯಡಿಯೂರಪ್ಪ. ಈ ಬಗ್ಗೆ ವಾಸ್ತವಿಕ ಸತ್ಯ ಕೂಡ ಪ್ರಧಾನಿಗೆ ಗೊತ್ತಿರಲಿಲ್ವಾ?. ಬಿಜೆಪಿಯವರು ಮಾಡಿದ ತಪ್ಪಿಗೆ ನಮ್ಮನ್ನು ಹೊಣೆಗಾರರನ್ನಾಗಿಸುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಕೂಡ ಹುಬ್ಬಳ್ಳಿಯಲ್ಲಿ ಪರಿಕ್ಕರ್ ಪತ್ರ ಓದಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು. ಅದೇ ಮಾದರಿಯಲ್ಲಿ ಪ್ರಧಾನಿ ಕೂಡ ಮತ್ತೊಂದು ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಕಳಸಾ ಬಂಡೂರಿ ಯೋಜನೆ ಹುಟ್ಟು ಹಾಕಿದೆ. ನೀವು ಹೇಳಿದ್ದು ಕೇಳಿಕೊಂಡು ಸುಮ್ಮನಿರಲು ರಾಜ್ಯದ ಜನತೆ ಮೂರ್ಖರಲ್ಲ. ಈ ಪವಿತ್ರ ಭೂಮಿಯ ಮೇಲೆ ನೀವು ಕನ್ನಡಿಗರ ಕ್ಷಮೆ ಕೋರಬೇಕು. ಕ್ಷಮೆ ಕೋರದಿದ್ದರೆ ಕನ್ನಡಿಗರ ಶಾಪ ನಿಮಗೆ ತಟ್ಟುತ್ತೆ ಎಂದು ಕಿಡಿಕಾರಿದರು.

  • ಜನರನ್ನು ಭಾವಾನಾತ್ಮಕವಾಗಿ ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡಿದ್ರು: ಎಚ್.ಕೆ.ಪಾಟೀಲ್

    ಜನರನ್ನು ಭಾವಾನಾತ್ಮಕವಾಗಿ ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡಿದ್ರು: ಎಚ್.ಕೆ.ಪಾಟೀಲ್

    ಗದಗ: ಜನರನ್ನು ಭಾವಾನಾತ್ಮಕವಾಗಿ ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಆರೋಪಿಸಿದ್ದಾರೆ.

    ಗುಜರಾತ್ ಮತ್ತು ಹಿಮಾಚಲಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಪಾಟೀಲ್, ಜನರನ್ನು ಭಾವಾನಾತ್ಮಕವಾಗಿ ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡಿದ್ದಾರೆ. ಗುಜರಾತ್ ನಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಶೇ.30 ರಷ್ಟು ಮತಗಳಿಕೆ ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

    ಪ್ರಚಾರದ ಭರಾಟೆಯಲ್ಲಿ ಮೋದಿ ಸಣ್ಣತನಕ್ಕೆ ಇಳಿದು ಪ್ರಧಾನಿ ಸ್ಥಾನಕ್ಕೆ ಅಗೌರವ ತಂದಿದ್ದರು. ಗುಜರಾತ್ ನಲ್ಲಿ ಕಾಂಗ್ರೆಸ್ ಬೆಳವಣಿಗೆಗೆ, ಅಸ್ತಿತ್ವಕ್ಕೆ ಕಾಂಗ್ರೆಸ್ ಪಕ್ಷದ ನೂತನ ಸಾರಥಿ ರಾಹುಲ್ ಗಾಂಧಿ ಕಾರಣರಾಗಿದ್ದಾರೆ. ಗುಜರಾತ್ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿ ಮುಖಂಡರಿಗೆ ನಿರಾಶೆಯಾಗಿದೆ ಎಂದರು.

    ಗುಜರಾತ್ ನಲ್ಲಿಯೇ ಕಾಂಗ್ರೆಸ್ ದೊಡ್ಡ ಶಕ್ತಿಯಾಗಿದೆ. ಚುನಾವಣೆ ಫಲಿತಾಂಶದಿಂದ ರಾಜ್ಯದಲ್ಲಿ ಕಾಂಗ್ರೆಸ್‍ಗೆ ವಿಶೇಷ ಬಲ ಬರಲಿದೆ. ಹಿಮಾಚಲ ಪ್ರದೇಶದಲ್ಲಿ ಸೋತಿದ್ದೇವೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೀವಿ ಎಂದು ಎಚ್.ಕೆ.ಪಾಟೀಲ್ ಹೇಳಿದರು.

  • ಉಪ ತಹಶೀಲ್ದಾರ್‍ಗೆ ಸುಳ್ಳು ಹೇಳಿದರೆ `ಚೊನ್ನ’ ಬಿಚ್ಚುವೆ ಅಂದ್ರು ಸಚಿವ ಎಚ್‍ಕೆ ಪಾಟೀಲ್

    ಉಪ ತಹಶೀಲ್ದಾರ್‍ಗೆ ಸುಳ್ಳು ಹೇಳಿದರೆ `ಚೊನ್ನ’ ಬಿಚ್ಚುವೆ ಅಂದ್ರು ಸಚಿವ ಎಚ್‍ಕೆ ಪಾಟೀಲ್

    ಗದಗ: ಉಪ ತಹಶೀಲ್ದಾರ್ ದುರಾಡಳಿತ ವರ್ತನೆ ಕಂಡು ಸಚಿವ ಎಚ್‍ಕೆ ಪಾಟೀಲ್ ಅಧಿಕಾರಿ ಮೇಲೆ ಕೆಂಡಾಮಂಡಲರಾಗಿರುವ ಘಟನೆ ಬೆಟಗೇರಿನಲ್ಲಿ ನಡೆದಿದೆ.

    ಸಾಮಾಜಿಕ ಭದ್ರತಾ ಯೋಜನೆ ಅರ್ಹರಿಗೆ ಲಾಭ ಒದಗಿಸುವಲ್ಲಿ ಉಪ ತಹಶೀಲ್ದಾರ್ ಐಜೆ ಪಾಪಣ್ಣವರ್ ವಿಫಲರಾಗಿದ್ದು, ಸಾರ್ವಜನಿಕರು ಯೋಜನೆ ಬಗ್ಗೆ ಕೇಳಲು ಬಂದಾಗ, ತಹಶಿಲ್ದಾರಗೆ ಅರ್ಜಿಕೊಡಿ ನಾನೇನು ಮಾಡಲಿ ಎಂದ ಉಪ ತಹಶೀಲ್ದಾರ್ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದು, ಇದನ್ನ ಕೇಳಿದ ಎಚ್‍ಕೆ ಪಾಟೀಲ್‍ರು ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸುಳ್ಳು ಹೇಳಿದರೆ ಚೊನ್ನಾ ಬಿಚ್ಚುವೆ, ಬಡವರಿಗೆ ಸಹಾಯ ಮಾಡಬೇಕು ಅಂತಾ ಅನಿಸಲ್ವಾ ನಿನಗೆ ಎಂದು ಉಪ ತಹಶೀಲ್ದಾರ್‍ಗೆ ತರಾಟೆ ತೆಗೆದುಕೊಂಡಿದ್ದಾರೆ. ಬೆಟಗೇರಿ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಪರಿಹಾರ ನೀಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಕೆಲಸದಲ್ಲಿ ನಿರ್ಲಕ್ಷ್ಯ, ಸಾರ್ವಜನಿಕರಿಗೆ ಸ್ಪಂದಿಸದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರಿಯಾಗಿ ಕೆಲಸಮಾಡಬೇಕು. ತಹಶೀಲ್ದಾರ್ ಇರಲಿ, ಎಸಿ ಇರಲಿ ಸಹಾಯ ಅಂತ ಬಂದವರಿಗೆ ಸ್ಪಂದಿಸಬೇಕು. ಉಪ ತಹಶೀಲ್ದಾರ್ ಮೇಲೆ ನಿಗಾ ವಹಿಸುವಂತೆ ಎಸಿ ಮಂಜುನಾಥಗೆ ಸೂಚನೆ ನೀಡಿದ್ದೇನೆ ಎಂದು ಎಚ್‍ಕೆ ಪಾಟೀಲ್ ಹೇಳಿದ್ದಾರೆ.

  • ರಾಜ್ಯದ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ತಾಲೂಕು ನರಗುಂದ: ವೆಂಕಯ್ಯ ನಾಯ್ಡು ಘೋಷಣೆ

    ರಾಜ್ಯದ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ತಾಲೂಕು ನರಗುಂದ: ವೆಂಕಯ್ಯ ನಾಯ್ಡು ಘೋಷಣೆ

    ಗದಗ: ರೈತ ಬಂಡಾಯಕ್ಕೆ ಹೆಸರಾದ ನರಗುಂದಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯೋ ಮೂಲಕ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎನ್ನುವ ಹೆಗ್ಗಳಿಕೆ ನರಗುಂದಕ್ಕೆ ಲಭಿಸಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಶೌಚಾಲಯ ನಿರ್ಮಾಣದ ಕ್ರಾಂತಿ ಕಹಳೆಯನ್ನು ಮೊಳಗಿಸಿದರು.

    ಕೊಣ್ಣೂರ ಗ್ರಾಮದಲ್ಲಿ ತಿಪ್ಪೆ ಸಂಸ್ಕರಣ ಘಟಕ ಹಾಗೂ ಜನತಾ ಕಾಲೋನಿಯಲ್ಲಿರೋ ಶುದ್ಧ ಕುಡಿಯೋ ನೀರಿನ ಘಟಕ ಉದ್ಘಾಟಿಸಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡೋ ಮೂಲಕ ಎಲ್ಲರ ಗಮನ ಸೆಳೆದರು.

    ನರಗುಂದ ತಾಲೂಕಿನ ಶೌಚಾಲಯ ನಿರ್ಮಾಣದ ಜನಾಂದೋಲನ, ರಾಜ್ಯಕ್ಕೆ ಮಾದರಿಯಾಗಿದೆ. ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿರುವ ಜನರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಗೃತಿ ಮೂಡಿಸುವ ಮೂಲಕ ಇಡೀ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

    ರಾಜ್ಯ ಸರ್ಕಾರದ ಶೌಚಾಲಯಕ್ಕಾಗಿ ಸಮರ ಹಾಗೂ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಮೂಲಕ ಇಡೀ ತಾಲೂಕಿನಲ್ಲಿ ಇದೀಗ ಶೇ.75 ರಷ್ಟು ವೈಯಕ್ತಿಕ ಶೌಚಾಲಯ ನಿರ್ಮಾಣದ ಕ್ರಾಂತಿಕಾರಕ ಕೆಲಸ ಮಾಡಲಾಗಿದೆ. ಹೀಗಾಗಿ ಇಂದು ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರ ಮಾನ ಕಾಪಾಡುವಲ್ಲಿ ಈ ಯೋಜನೆ ಪೂರಕವಾಗಿದೆ ಎಂದರು.

    ಈ ಮಹತ್ವಪೂರ್ಣ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಸನ್ಮಾನಿಸಿದರು. ಇಡೀ ದೇಶ ಬಯಲು ಬಹಿರ್ದೆಸೆ ಮುಕ್ತವಾಗಬೇಕು. ಬಯಲು ಬಹಿರ್ದೆಸೆ ಮುಕ್ತ ತಾಲೂಕು ಘೋಷಣೆಯಂತ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳಿ, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ವೆಂಕಯ್ಯ ನಾಯ್ಡು ಹಾಸ್ಯ ಚಟಾಕೆ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಶೇಷವಾಗಿತ್ತು.

    ಈ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್‍ಕೆ ಪಾಟೀಲ್ ಮಾತನಾಡಿ, ಶೌಚಾಲಯ ನಿರ್ಮಾಣದಲ್ಲಿ ನಮ್ಮ ಪ್ರಗತಿ ಗಣನೀಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಆರಂಭದಲ್ಲಿ ಶೌಚಾಲಯ ನಿರ್ಮಾಣ ಶೇ.34 ರಷ್ಟಿತ್ತು. ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ರಾಜ್ಯದಲ್ಲಿ ಶೇ.75 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ 2018 ಮಾರ್ಚ್ ಒಳಗಾಗಿ ಕರ್ನಾಟಕ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಸಂಕಲ್ಪ ಹೊಂದಿದೆ. ರಾಜ್ಯ ಸರ್ಕಾರದ ತಿಪ್ಪೆ ಸಂಸ್ಕರಣಾ ಯೋಜನೆ ರಾಷ್ಟ್ರಮಟ್ಟದಲ್ಲಾದರೆ ಸ್ವಚ್ಛ ಭಾರತದ ಕನಸಿಗೆ ಹೆಚ್ಚು ಬಲಬರಲು ಸಾಧ್ಯ. ಶೌಚಾಲಯದ ಜೊತೆಗೆ ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲು ಉಪರಾಷ್ಟ್ರಪತಿಗೆ ಒತ್ತಾಯಿಸಿದರು.

    ಕೊಣ್ಣೂರು ಗ್ರಾಮದ ಅಭಿವೃದ್ಧಿಗಾಗಿ ಯುಜಿಡಿ ಕಾಮಗಾರಿಗೆ ಸರ್ಕಾರ 5 ಕೋಟಿ ರೂ. ಮಂಜೂರು ಮಾಡುವ ಭರವಸೆ ನೀಡಿದರು. ರಾಜ್ಯಪಾಲ ವಜುಬಾಯಿ ವಾಲಾ ಕೂಡಾ ಸರ್ಕಾರದ ಸಾಧನೆ ಕುರಿತು ಕೊಂಡಾಡಿದರು.

    ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಸಚಿವ ರಮೇಶ್ ಜಿಗಜಣಗಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ನರಗುಂದ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಮಾಡಲು ವಿಶೇಷ ಆಸಕ್ತಿಯೊಂದಿಗೆ ಶುಚಿ ಗ್ರಾಮದ ಕನಸು ಸಕಾರಗೊಳಿಸಲು ಶ್ರಮಿಸಿದ ನರಗುಂದ ಶಾಸಕ ಬಿಆರ್ ಯಾವಗಲ್ ಅವರನ್ನು ಎಲ್ಲರೂ ಮುಕ್ತ ಕಂಠದಿಂದ ಪ್ರಶಂಸಿಸಿದರು.

     

  • ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ: ಬಿಎಸ್‍ವೈಗೆ ಎಚ್.ಕೆ ಪಾಟೀಲ್ ಟಾಂಗ್

    ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ: ಬಿಎಸ್‍ವೈಗೆ ಎಚ್.ಕೆ ಪಾಟೀಲ್ ಟಾಂಗ್

    ಗದಗ: ಉತ್ತರ ಕರ್ನಾಟಕದಲ್ಲಿ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ಟಾಂಗ್ ನೀಡಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಬಿಎಸ್‍ವೈ ಸ್ಪರ್ಧಿಸಲಿದ್ದಾರೆಂಬ ಹಿನ್ನಲೆಯಲ್ಲಿ ಇಂದು ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ನಾಯಕರನ್ನ ಅವಮಾನಿಸುವ ಕೆಲಸ ಬಿಜೆಪಿ ಮಾಡ್ತಿದೆ. ಈ ಹಿಂದೆ ಸ್ಪರ್ಧಿಸಿದ್ದ ಘಟಾನುಘಟಿಗಳು ಉತ್ತರ ಕರ್ನಾಟಕದಲ್ಲಿ ಸೋತು ಸುಣ್ಣವಾಗಿದ್ದಾರೆ. ಇದೇ ಇತಿಹಾಸ ಮುಂದೇಯೂ ಮರುಕಳಿಸಲಿದೆ ಅಂದ್ರು.

    ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ. ಉತ್ತರ ಕರ್ನಾಟಕ ರಾಜಕೀಯದಲ್ಲಿ ಲಘುವಾಗಿ ಪರಿಣಮಿಸಬಾರದು. ಲಘುವಾಗಿ ಕಂಡವರಿಗೆ ಉತ್ತರ ಕರ್ನಾಟಕ ಉತ್ತರ ನೀಡುತ್ತೆ. ಇಲ್ಲಿ ಹಣ ಇದ್ದ ರಾಜಕಾರಣಿಗಳು ಕಡಿಮೆ. ಆದ್ರೆ ಜನಪ್ರೀಯತೆ ಪಡೆದ ಜನಪ್ರತಿನಿಧಿಗಳು ಹೆಚ್ಚು ಅಂತ ಹೇಳಿದ್ರು.

  • ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ: ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗಾಗಿ ಆಗ್ರಹಿಸಿ ಗದಗನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನವಾದ ಇಂದು ಮುಂದುವರೆದಿದೆ. ಇಂದು ನಡೆಯುವ ಹೋರಾಟವನ್ನ ಬಸವ ಯೋಗ ಸಮೀತಿಯ ಯೋಗ ಶಿಬಿರ ಮೂಲಕ ಆರಂಭವಾಗಿದೆ. ಇಂದು ಬೆಳಗಿನಜಾವ ಅಸ್ವಸ್ಥಗೊಂಡ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಜನಸಂಗ್ರಾಮದ ಮುಖಂಡರಾದ ಪ್ರಭುಗೌಡ ಮತ್ತು ಪ್ರತಿಮಾ ನಾಯಕ್ ಎಂಬವರ ಶುಗರ್ ಲೆವಲ್ ಕಡಿಮೆ ಆಗಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಮಾ ನಾಯಕ್ ಮಾತ್ರ ಕೇವಲ ನೀರು ಕುಡಿಯುವ ಮೂಲಕ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಪ್ರತಿಭಟನ ನಿರರತ ಸ್ಥಳದಲ್ಲಿ ಅಂಬುಲೆನ್ಸ್, ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಠಿಕಾಣಿ ಹೂಡಿದ್ದಾರೆ.

    ವೈದ್ಯರು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹೀರೆಮಠರನ್ನು ಚೆಕಪ್ ಮಾಡಲು ಹೋದಾಗ ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿ ಚೆಕಪ್ ಬೇಡ ಎಂದು ಹೇಳಿದ್ದಾರೆ. ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಇಂದು ಅನೇಕ ಸ್ವಾಮಿಜುಗಳು, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪನವರು, ಪರಿಸರ ಪ್ರೇಮಿಗಳು ಹಾಗೂ ಗದಗ ಜಿಲ್ಲಾ ವಕೀಲರ ಸಂಘದಿಂದ ಇಂದು ತಮ್ಮ ಕಾರ್ಯಕಲಾಪಗಳನ್ನ ಬಹಿಷ್ಕರಿಸಿ ಹೋರಾಟಕ್ಕೆ ಸಾಥ್ ನೀಡ್ತಿದ್ದಾರೆ.

    ಕಪ್ಪತ್ತಗುಡ್ಡ ಉಳಿಯುವಿಕೆಗೆ ಬೃಹತ್ ಪ್ರಮಾಣದಲ್ಲಿ ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ರೂ ಇತ್ತ ಮುಖ್ಯಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸ.