ಗದಗ: ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು ಅನ್ನೋ ತತ್ವ, ಚಿಂತನೆಗೆ ಗೆಲುವಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪಾಲಿಕೆಯೇ ಇರಲಿ, ಮತ್ತೊಂದೇ ಇರಲಿ ಕೋಮುವಾದಿ ಶಕ್ತಿಗಳು ಸೋಲಬೇಕಾದರೆ ಜಾತ್ಯಾತೀತ ಶಕ್ತಿಗಳು ಕಾಂಗ್ರೆಸ್ ಜೊತೆ ಹೊಂದಿಕೊಳ್ಳಬೇಕು, ಹೊಂದಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಬರುವ ಮುನ್ನ ದುಡ್ಡಿನ ಆಫರ್ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ್
ಕೋಡಿಮಠದ ಶ್ರೀಗಳ ಹತ್ತಿರ ಭವಿಷ್ಯ ಕೇಳಲು ಸಿದ್ದರಾಮಯ್ಯ ಭೇಟಿ ಎಂಬ ಸಚಿವ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಸ್ವಾಮೀಜಿಗಳನ್ನು ಭೇಟಿ ಮಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆಯೂ ಅವರು ಅನೇಕ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ. ಮಠ-ಮಾನ್ಯಗಳಿಗೆ ಹೋಗುತ್ತಾರೆ. ಗದುಗಿನ ಸ್ವಾಮೀಜಿಗಳ ಜೊತೆಯೂ ಸಿದ್ದರಾಮಯ್ಯ ಉತ್ತಮ ಸಂಬಂಧಗಳನ್ನು ಹೊಂದಿದ್ದಾರೆ ಎಂದರು. ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ
ಕೋಡಿಮಠದ ಶ್ರೀಗಳ ಹತ್ತಿರ ಬರೀ ಭವಿಷ್ಯ ಕೇಳಲು ಹೋಗಬೇಕು ಅಂತೇನಿಲ್ಲ. ಭಕ್ತಿಯಿಂದಲೂ ಹೋಗಬಹುದು. ಶ್ರೀಗಳು ಭವಿಷ್ಯ ಹೇಳುವುದಲ್ಲಿ ಪ್ರಖ್ಯಾತರು. ಸಿದ್ದರಾಮಯ್ಯ ಭವಿಷ್ಯ ಕೇಳಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಾಯಚೂರು: ಸರ್ಕಾರವನ್ನು ಅಸ್ಥಿರಗೊಳಿಸುವ, ಕಾಲೆಳೆಯುವ ಬಿಜೆಪಿ ಶಾಸಕರ ಮನಸ್ಥಿತಿಯಿಂದ ಬೊಮ್ಮಾಯಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ, ಬೊಮ್ಮಾಯಿ ಸರ್ಕಾರಕ್ಕೆ ಮೊದಲ ದಿನವೇ ಗ್ರಹಣ ಹಿಡಿದಿದೆ ಅಂತ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ರಾಯಚೂರಿನಲ್ಲಿ ಕಲಬುರಗಿ ವಿಭಾಗೀಯ ಕಾಂಗ್ರೆಸ್ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಆನಂದ ಸಿಂಗ್ ರಾಜೀನಾಮೆಯ ಧಮ್ಕಿ ಕೊಟ್ಟಿದ್ದಾರೆ. ರಾಜೀನಾಮೆ ಇಂದು ಕೊಡ್ತಾರೆ, ನಾಳೆ ಕೊಡುತ್ತಾರೆ ಎಂದು ವಿಚಾರಗಳು ಡೋಲಮಾನವಾಗಿವೆ. ಮಂತ್ರಿಗಳಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚಿಂತನೆಯಿಲ್ಲಾ. ಎಲ್ಲರ ಚಿಂತೆ, ಚಿಂತನೆ ಬಹಳ ದೊಡ್ಡ ಖಾತೆ, ಹಣ ಇರುವ ಖಾತೆ ಬೇಕಾಗಿತ್ತು ಅನ್ನೋದರ ಕಡೆಯಿದೆ ಎಂದರು. ಇದನ್ನೂ ಓದಿ: ಅಫ್ಘಾನ್‍ನಲ್ಲಿ ಹಸುವಿನ ವೇಷ ತೊಟ್ಟ ತಾಲಿಬಾನ್ ರಾಕ್ಷಸರು – ಷರಿಯತ್ ಕಾನೂನು ಪಾಲಿಸಲು ಕಟ್ಟಪ್ಪಣೆ
ರಾಜ್ಯದ ಅಭಿವೃದ್ಧಿ ಒಂದು ಅಂಶವಲ್ಲ ಅಂತ ಬೊಮ್ಮಾಯಿ ಸರ್ಕಾರ ನಿರ್ಣಯಿಸಿದಂತಿದೆ. ಇಂತಹ ಕೆಟ್ಟ ವಾತಾವರಣರಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಸರ್ಕಾರವಾಗುವುದಿಲ್ಲ. ಅಧಿಕಾರಕ್ಕೆ ಬಂದ ಮೊದಲ ಒಂದೆರಡು ದಿನ ಬೊಮ್ಮಾಯಿ ತೆಗೆದುಕೊಂಡ ನಿರ್ಧಾರಗಳು ನಮಗೂ ಮೆಚ್ಚಿಗೆ ಆಗಿದ್ದವು. ಆದರೆ ಸಚಿವ ಸ್ಥಾನದ ಅಸಮಧಾನಗಳು ಸರ್ಕಾರವನ್ನು ಹೆಚ್ಚು ದಿನ ಉಳಿಯದಂತೆ ಮಾಡುತ್ತವೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಆರೋಪ ಮಾಡಿದ್ದಾರೆ.
ಬೆಂಗಳೂರು: ಕೊರೊನಾ ಮಹಾಮಾರಿ ಎದುರಿಸಲು ರಾಜ್ಯ, ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸುಳ್ಳು ಲೆಕ್ಕ ಮಾಹಿತಿ, ಮುಚ್ಚಿಡುವುದು, ಹೀಗೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ 33.033 ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಅಂತ ಪ್ರಕಟಿಸಿದ್ದಾರೆ. ಮೊದಲ ಅಲೆ 23,000 ಆಗಿದೆ. ಇದು ಸರಿಯಾದ ಅಂಕಿ ಅಂಶಗಳಲ್ಲ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಒಟ್ಟು ನಮ್ಮ ರಾಜ್ಯದಲ್ಲಿ 3,27,985 ಸಾವು ಜರುಗಿವೆ ಎಂದು ರಾಜ್ಯ ಸರ್ಕಾರದ ಮಾಹಿತಿ ಇದೆ. ಜನವರಿಯಿಂದ ಜೂನ್ ವರೆಗೂ ಇದು ಎಲ್ಲೂ ಮ್ಯಾಚ್ ಆಗಲ್ಲ. ಇದೆಲ್ಲಾ ನ್ಯಾಚುರಲ್ ಡೆತ್ ಆಗಿದ್ಯಾ? ಹೀಗೆ ಆಗಲು ಸಾಧ್ಯನಾ? ಕಳೆದ ವರ್ಷದ ಡೆತ್, ಈ ವರ್ಷದ ಡೆತ್ ಆಡಿಟ್ ಸಿಗದ ಹಾಗೆ ಮಾಡಿದ್ದಾರೆ. ಒಟ್ಟು 87,082 ಸಾವಿರ ಸಾವು ಸಂಭವಿಸಿದೆ. ಎರಡೂವರೆ ಲಕ್ಷ ಸಾವನ್ನು ಮುಚ್ಚಿಟ್ಟಿದ್ದಾರೆ. ಇದು ಮನುಷ್ಯತ್ವ ಅಲ್ಲ, ಮಾನವೀಯತೆ ಅಲ್ಲ .ಜನರಿಗೆ ಮೋಸ ಮಾಡುತ್ತಿದ್ದೀರಿ. ಯಾವ ಕಾರಣಕ್ಕೆ ಸಾವನ್ನು ಮುಚ್ಚಿಡುತ್ತಿದ್ದೀರಿ. ಡೆತ್ ಆಡಿಟ್ ಪ್ರಕಟಿಸುವುದನ್ನೇ ಮುಚ್ಚಿಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ರಾಷ್ಟ್ರ, ರಾಜ್ಯದಲ್ಲಿ ನಾವು ಸಂಕಷ್ಟದಲ್ಲಿ ಇದ್ದೇವೆ. ಪ್ರತಿಯೊಬ್ಬ ಜವಾಬ್ದಾರಿ ವ್ಯಕ್ತಿ ಜಾಗರೂಕತೆಯಿಂದ ನಡೆದುಕೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆದ್ರೆ ಈ ಕೊರೊನ ಸಂಧರ್ಭದಲ್ಲಿ ಹಾಗೆ ಮಾಡುತ್ತಿಲ್ಲ. ಕೊರೊನದಿಂದ ಜನ ತತ್ತರಿಸಿ ಹೋಗಿವೆ, ಕುಟುಂಬದವರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಅವರಿಗರ ಹೇಗೆ ಅನುಕೂಲ ವಾಗುವ ಹಾಗೆ ಮಾಡುತ್ತೀರಿ.
ಮನಮೋಹನ್ ಸಿಂಗ್ ಅವರು ನ್ಯಾಷನಲ್ ಡಿಸಾಸ್ಟರ್ ಮ್ಯಾನೆಜ್‍ಮೆಂಟ್ ಆಕ್ಟ್ ತಂದ್ರು. 12-13 ರಲ್ಲಿ ಹೊಸ ಕಾನೂನು ತಂದ್ರು. ಮರಣ ಹೊಂದಿದ್ದವರಿಗೆ ಪರಿಹಾರ ಕೊಡಬೇಕು ಅಂತ ಇತ್ತು. ಮೊದಲ ಅಲೆ ಬಂದಾಗ ನಾವು ಸರ್ಕಾರಕ್ಕೆ ಒತ್ತಾಯ ಮಾಡಿದ್ದೀವಿ. ಕೊರೊನಾ ನ್ಯಾಷನಲ್ ಡಿಸಾಸ್ಟರ್ ಅಂತ ಘೋಷಣೆ ಮಾಡಿ ಅಂತ. ನಾವು ಹೇಳಿದ ನಂತರ ಏಪ್ರಿಲ್ ಗೆ ಘೋಷಣೆ ಮಾಡಿದ್ರು. ಇವರ ಬೇಜವಾಬ್ದಾರಿತನ ತೋರಿಸುತ್ತೆ. ತಕ್ಷಣ ನಮ್ಮ ಅಪೇಕ್ಷೆ 5 ರಿಂದ 6 ಲಕ್ಷ ಪರಿಹಾರ ಘೋಷಿಸಿ. ಆದರೆ ನಿಮ್ಮದು ಇದೆಯಲ್ಲ ಅದು 4 ಲಕ್ಷ ಇದೆ ಅದನ್ನು ಕೊಡಿ. ಎನ್‍ಡಿಆರ್ ಎಫ್ ಅಥವಾ ಎಸ್‍ಡಿಆರ್‍ಎಫ್ ನಿಂದನಾದ್ರು ಕೊಡಿ. ಹೆಚ್ಚುವರಿ ನಾಲ್ಕು ಲಕ್ಷ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಒಟ್ಟು 5 ಲಕ್ಷ ಪರಿಹಾರ ಮೃತರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು: ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ವಿ.ಸೋಮಣ್ಣ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಪ್ರಮುಖ ಲೇಖಕ, ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು ಎಂದು ಸ್ಮರಿಸಿದ್ದಾರೆ.
ಡಾ.ಸಿದ್ದಲಿಂಗಯ್ಯ ಅವರು 1954 ರಲ್ಲಿ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ್ದರು. ಅವರ ಜಿಲ್ಲೆಯಿಂದಲೇ ನಾನು ರಾಜಕೀಯ ಪ್ರವೇಶ ಮಾಡಿದ್ದು ಎಂಬುದನ್ನು ವಿನಮ್ರತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಸಿದ್ದಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಳು ಸಂದಿವೆ.
ಕವಿ ಡಾ.ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡುಬಾರಿ ನಾಮಕರಣಗೊಂಡಿರುವುದರ ಜೊತೆಗೆ 2006-08ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಗೀತೆಯನ್ನು ಎರಡು ಚಲನಚಿತ್ರಗಳಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ‘ಗೆಳತಿ ಓ ಗೆಳತಿ’ ಬಂಡಾಯ ಕವಿಯ ಪ್ರೇಮ ಗೀತೆಗಳು. ಅವರೊಳಗಿದ್ದ ವ್ಯವಸ್ಥೆಯ ಬಗೆಗಿನ ಕಿಚ್ಚಿನ ಜೊತೆಯಲ್ಲೇ ಒಬ್ಬ ಅಪ್ಪಟ ಪ್ರೇಮಿಯು ಇದ್ದ ಎಂಬುದಕ್ಕೆ ಮೇಲಿನ ಗೀತೆಗಳು ಸದಾ ಹಸಿರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಅವರ ಸಾಹಿತ್ಯಾಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಸಹ ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕವಿ ಸಿದ್ದಲಿಂಗಯ್ಯನವರು ತಮ್ಮ `ಹೊಲೆಮಾದಿಗರ ಹಾಡು’ ಕವನ ಸಂಕಲನದ ಮೂಲಕ ದಮನಿತರ, ತುಳಿತಕ್ಕೆ ಒಳಗಾದವರ ನೋವು, ದುಃಖ, ದುಮ್ಮಾನಗಳನ್ನು ಸಮಾಜದ ಮುಂದೆ ಇರಿಸಿದ್ದರು. ತಮ್ಮ ಸಾಹಿತ್ಯದಲ್ಲಿ ಗಾಂಭೀರ್ಯತೆಯ ನಡುವೆಯೂ ಅಸಹಾಯಕರ ನೋವು, ಅವಮಾನಗಳನ್ನು ಮನನೀಯವಾಗಿ ಚಿತ್ರಿಸುತ್ತಿದ್ದರು. ನನ್ನೊಂದಿಗೆ ಆತ್ಮೀಯರಾಗಿದ್ದ ಕವಿ ಸಿದ್ದಲಿಂಗಯ್ಯನವರು ದೂರಾಗಿರುವುದು ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸದನದ ಭೂಷಣಪ್ರಾಯರಾಗಿ ವಿಷಯಗಳನ್ನು ಚರ್ಚಿಸುತ್ತಿದ್ದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಕವಿ ಸಿದ್ದಲಿಂಗಯ್ಯನವರು ಪಾತ್ರರಾಗಿದ್ದನ್ನೂ ಸಚಿವರು ಸ್ಮರಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಹಂಪಿ ಕನ್ನಡ ವಿವಿಯ ನಾಡೋಜ ಪುರಸ್ಕಾರ, ವಿ.ಸೋಮಣ್ಣ ಪ್ರತಿಷ್ಠಾನದ ಪ್ರಥಮ ಜೆ.ಹೆಚ್ ಪಟೇಲ್ ಪ್ರಶಸ್ತಿ, ಪ್ರತಿಷ್ಟಿತ ನೃಪತುಂಗ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಹಿರಿಯ ಕವಿಗಳ ಚೇತನಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕೋರಿದ್ದಾರೆ.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸಹ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ದಲಿತ ಚಳವಳಿಯ ಆದ್ವರ್ಯು ಹಾಗೂ ದಲಿತ ಸಾಹಿತ್ಯದ ಮೇರು ಆಗಿದ್ದ ಕವಿ ಸಿದ್ದಲಿಂಗಯ್ಯ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕಾದ ಬಹುದೊಡ್ಡ ನಷ್ಟ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು, ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಗುಣಗಾನ ಮಾಡಿದ್ದಾರೆ.
ಮೂಲತಃ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಅವರು, ನೆಲದ ಸೊಗಡನ್ನೂ ತಮ್ಮ ಸಾಹಿತ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟವರು. ಅಪ್ರತಿಮ ಭಾಷಣಕಾರರು ಆಗಿದ್ದ ಸಿದ್ದಲಿಂಗಯ್ಯ ಅವರು, ವಿಧಾನ ಪರಿಷತ್ ಸದಸ್ಯರಾಗಿಯೂ ಚಿರಸ್ಮರಣೀಯ ಸೇವೆ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.
ಎಚ್.ಕೆ.ಪಾಟೀಲ್ ಸಹ ಸಂತಾಪ ಸೂಚಿಸಿ, ಕನ್ನಡದ ಲೇಖಕ ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಡಾ.ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆ ಬಗ್ಗೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ ಮತ್ತು ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ನಮ್ಮೊಂದಿಗೆ ಕೆಲಸ ಮಾಡಿದ್ದರು. ತುಂಬಾ ಮೊನಚಾದ ಮಾತು ಹಾಗೂ ಅಷ್ಟೇ ಹಾಸ್ಯಪ್ರಜ್ಞೆ ಅವರಲ್ಲಿತ್ತು. ಸದನದಲ್ಲಿ ಅವರು ಮಾತನಾಡುತ್ತಿದ್ದಾಗ ಹೊಸ ವಿಚಾರಗಳು ಪ್ರಕಟವಾಗುತ್ತಿದ್ದವು ಎಂದಿದ್ದಾರೆ.
ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದವರಾದ ಇವರು, ನಮ್ಮ ಉತ್ತರ ಕರ್ನಾಟಕ ಭಾಷೆಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಸಾಹಿತ್ಯ ಅಕಾದೆಮಿಯಲ್ಲಿ ಕೆಲಸ ಮಾಡಿದ್ದರು. ಕನ್ನಡದ ಸಾಹಿತ್ಯ, ದಲಿತ-ಬಂಡಾಯ ಚಳುವಳಿಗೆ ಹೊಸ ದಿಕ್ಕನ್ನು ತಂದುಕೊಟ್ಟವರು. ಉತ್ತಮ ಭಾಷಣಕಾರರಾಗಿದ್ದ ಸಿದ್ದಲಿಂಗಯ್ಯನವರು, ಅಂಬೇಡ್ಕರ್, ಪೆರಿಯಾರ್ ಮತ್ತು ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಬೆಳೆದವರು.
ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು ಇವರ ದಾಖಲಾರ್ಹ ಕೃತಿಗಳು. ಕನ್ನಡ ಸಾಹಿತ್ಯಕ್ಕೊಂದು ಹೊಸ ತಿರುವನ್ನು ನೀಡಿದ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದ ಡಾ.ಸಿದ್ದಲಿಂಗಯ್ಯ ನಿಧನರಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕನ್ನಡದ ಉತ್ತಮ ಸಂಸದೀಯ ಪಟುವಾಗಿದ್ದ ಇವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ವೈರಸ್ ನಿಂದಾಗಿ ಹೋರಾಟದ ಸಾಹಿತಿಗಳನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ, ಇದೊಂದು ವಿಪರ್ಯಾಸ. ಇತ್ತಿಚೆಗೆ ನನ್ನ ಕೃತಿಗೆ ಮುನ್ನುಡಿ ಬರೆಯಲು ಕೋರಿದ್ದಾಗ ಪ್ರೀತಿಯಿಂದ ಒಪ್ಪಿ ಬರೆದು ಕೊಡುವುದಾಗಿ ಹೇಳಿದ್ದರು. ಒಬ್ಬ ಸ್ನೇಹಜೀವಿ, ಬುದ್ಧಿಜೀವಿ ಹಾಗೂ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ. ಆಗಲಿದ ಸಿದ್ದಲಿಂಗಯ್ಯನವರ ಆತ್ಮಕ್ಕೆ ಶಾಂತಿಯನ್ನು ಹಾಗೂ ಕುಟುಂಬ ವರ್ಗಕ್ಕೆ, ಬಂಧುವರ್ಗಕ್ಕೆ, ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
– ಟ್ರ್ಯಾಕ್ಟರ್ ರ‍್ಯಾಲಿ ಬಗ್ಗೆ ನಾಯಕರ ನಡುವೆ ಮಾತಿನ ಚಕಮಕಿ
ಗದಗ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ನಡುವಿನ ವಾಕ್ ಸಮರ ತಾರಕಕ್ಕೇರಿದೆ.
ಟ್ರ್ಯಾಕ್ಟರ್ ರ‍್ಯಾಲಿಯೊಂದಿಗೆ ಡಿಸಿ ಕಚೇರಿಗೆ ನುಗ್ಗಿರುವ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರೂ ಉತ್ತರಕ್ಕೆ, ಪ್ರತ್ಯುತ್ತರ ನೀಡುವುದು ಜೋರಾಗಿಯೇ ನಡೆಯುತ್ತಿತ್ತು. ಸಿ.ಸಿ.ಪಾಟೀಲ್ ಅವರಿಂದ ಹೆದರಿಸುವ ಪ್ರವೃತ್ತಿ ಆರಂಭವಾಗಿದೆ. ದೆಹಲಿಯಲ್ಲಿ ರೈತರನ್ನು ಪಾಕಿಸ್ತಾನಿ, ಖಲಿಕಿಸ್ತಾನಿ ಅಂದರು. ಅದೇ ಆರೋಪವನ್ನು ಇಲ್ಲಿ ಮಾಡುವ ಪ್ರಯತ್ನವನ್ನು ಸರ್ಕಾರದ ಸಚಿವರು ಮಾಡುತ್ತಿದ್ದಾರೆ ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಟ್ರ್ಯಾಕ್ಟರ್ ರ‍್ಯಾಲಿಯಿಂದ ಗದಗವನ್ನು ದೆಹಲಿ ಆಗಲು ಬಿಡಲ್ಲ: ಸಿ.ಸಿ ಪಾಟೀಲ್
ಮನವಿ ನೀಡಲು ಬಂದ ವೇಳೆ ಡಿಸಿ ಇರಲಿಲ್ಲ. ಆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು, ಪೊಲೀಸರಿಗೆ, ಪ್ರತಿಭಟನಾ ನಿರತ ರೈತರನ್ನು ಹೆದರಿಸುತ್ತಿದ್ದಾರೆ. ನಾವು ರೈತರು ಹೆದರಲ್ಲ. ಗದಗಿನ ಗಂಡು ಭೂಮಿಯಿಂದ ಬಂದವರು ಹೆದರಿ ಓಡಿ ಹೋಗುತ್ತಾರೆ ಎಂದುಕೊಂಡಿದ್ದೀರಾ? ಟ್ರ್ಯಾಕ್ಟರ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದರೆ ತಪ್ಪಾ? ಮರಳು ದಂಧೆಕೋರರು, ಮದ್ಯ ಮಾರಾಟಗಾರರು, ಇನ್ಯಾರೋ ಕಾರ್ ತೆಗೆದುಕೊಂಡು ಡಿಸಿ ಕಚೇರಿ ಒಳಗೆ ಬರುತ್ತಾರೆ. ಅದೇ ರೈತರು ಡಿಸಿ ಕಚೇರಿಗೆ ಬರುವುದು ತಪ್ಪಾ ಎಂದು ತಿರುಗೇಟು ನೀಡಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಸಹ ಹರಿಹಾಯ್ದು, ನನ್ನ ಟೀಕೆಗೆ ಸ್ಪಂದಿಸಿದ್ದಾರೆ ಎಂಬ ಸಮಾಧಾನವಿದೆ. ಆದರೆ ಅರ್ಧ ಟೀಕೆಗೆ ಸ್ಪಂದಿಸುವುದು, ಇನ್ನು ಅರ್ಧ ಟೀಕೆಗೆ ಸ್ಪಂದಿಸದೇ ಇರುವುದು ಸರಿಯಲ್ಲ. ನಿಮ್ಮ ಸರ್ಕಾರ ನುಡಿದಂತೆ ನಡೆಯಲಿಲ್ಲಾ, ಮೋದಿ ಅವರು ವಚನ ಭ್ರಷ್ಠರು ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಇದನ್ನು ನೋಡಿದರೆ ನಿಮ್ಮ ಸರ್ಕಾರ ಮಾತು ತಪ್ಪಿದ ಭ್ರಷ್ಠ ಸರ್ಕಾರ ಎಂದು ಒಪ್ಪಿಕೊಂಡಂತೆ ಎಂದು ಹರಿಹಾಯ್ದರು.
ಗದಗ: ಪ್ರಧಾನಿ ಗಡ್ಡ ಹಾಗೂ ವೇಷಭೂಷಣ ಬಗ್ಗೆ ಕಾಂಗ್ರೆಸ್ ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಟೀಕಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಹಾಗೂ ನೂತನ ಕೃಷಿ ಕಾಯ್ದೆ ವಿರುದ್ಧ ನಗರದಲ್ಲಿ ಇಂದು ಟ್ರ್ಯಾಕ್ಟರ್ ರ್ಯಾಲಿ ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರೇ, ಗಡ್ಡ ಬಿಟ್ರೆ, ನೀವು ರವೀಂದ್ರನಾಥ ಟ್ಯಾಗೋರ್ ಆಗಲ್ಲ. ಸೈನ್ಯದ ಸಮವಸ್ತ್ರ ಹಾಕಿದರೆ ನೀವು ಸುಭಾಷ್ ಚಂದ್ರ ಭೋಸ್ ಆಗುವುದಿಲ್ಲ. ಕೈ ಎತ್ತಿ ತೋರಿಸಿದರೆ ಬಿ.ಆರ್.ಅಂಬೇಡ್ಕರ್ ಆಗುವುದಿಲ್ಲ. ಹೆಗಲ ಮೇಲೆ ಶಾಲು ಹಾಕಿದರೆ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗುವುದಿಲ್ಲ. ನಿಮ್ಮ ನಡೆ, ನುಡಿ ಹಾಗೂ ನೀಡಿದ ಭವರಸೆಗಳನ್ನು ಈಡೇರಿಸಿದಾಗ ಜನ ನಿಮ್ಮನ್ನು ನಂಬುತ್ತಾರೆ. ಎಂದು ಕಿಡಿಕಾರಿದರು.
ನೀವು ವಚನ ಭ್ರಷ್ಟರಾಗಿದ್ದೀರಿ. ಇದೇ ರೀತಿ ಸುಳ್ಳು ಹೇಳುತ್ತ ದೇಶದ ಜನರಿಗೆ ಎಷ್ಟು ದಿನ ಮೋಸ ಮಾಡುತ್ತೀರಿ. ನೀವು ಖುರ್ಚಿ ಖಾಲಿ ಮಾಡುವ ಕಾಲ ಬರುತ್ತದೆ. ಲಾಕ್‍ಡೌನ್ ನಿಂದ ಬೆಲೆ ಏರಿಕೆ ನಿಮ್ಮ ಸರ್ಕಾರಕ್ಕೆ ಮಾತ್ರ ಆಗಿದೆನಾ? ಲಾಕ್‍ಡೌನ್ ನಿಂದ ಜನಸಾಮಾನ್ಯರಿಗೆ ತೊಂದರೆ ಆಗಿಲ್ವಾ? ಜನ ಸಾಮಾನ್ಯರಿಗೊಂದು ನ್ಯಾಯ, ಸರ್ಕಾರದ ಆದಾಯಕ್ಕೊಂದು ನ್ಯಾಯನಾ? ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಜನರನ್ನ ಯಾಕೆ ಸುಲಿಗೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಸುಲಿಗೆ ಮಾಡುವುದನ್ನು ಬಿಡಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್.ಕೆ.ಪಾಟೀಲ್ ಗುಡುಗಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್ ಪಾಟೀಲ್, ಮಾಜಿ ಶಾಸಕರುಗಳಾದ ಬಿ.ಆರ್ ಯಾವಗಲ್, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಧಾರವಾಡ: ಕಾಂಗ್ರೆಸ್ ಬಿಟ್ಟು ಹೋದವರೆಲ್ಲಾ ಮುಂದೆ ಪಶ್ಚಾತಾಪ ಪಡುತ್ತಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಇಂದು ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಹೋದ ಎಚ್. ವಿಶ್ವನಾಥ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಎಚ್. ವಿಶ್ವನಾಥ್ ಕಾಂಗ್ರೆಸ್ ಬಿಟ್ಟು ಹೋಗಿದ್ದೇ ತಪ್ಪು ಹೆಜ್ಜೆ. ಕಾಂಗ್ರೆಸ್‍ನಿಂದ ಯಾರು ಹೊರಗೆ ಹೋಗುತ್ತಾರೋ ಅವರು ಮುಂಬರುವ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.
ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದ ಮಾತು ಕೇಳುವುದಿಲ್ಲ, ಅವರ ಮಾತು ಕೇಳುವುದಿಲ್ಲ, ಇವರ ಮಾತು ಕೇಳುವುದಿಲ್ಲ ಅಂತಾರೆ, ಯಾರ ಮಾತನ್ನು ಕೇಳಬೇಕಾಗಿಲ್ಲ, ಸುಪ್ರಿಂ ಕೋರ್ಟ್ ಮಾತನ್ನಾದರೂ ಕೇಳುತ್ತಿರೋ, ಇಲ್ಲವೋ? ಎಂದು ಗೋವಾ ಸಿಎಂ ವಿರುದ್ಧ ಕಿಡಿಕಾರಿದರು.
ಮಹದಾಯಿ ವಿಚಾರದಲ್ಲಿ ಈಗಾಗಲೇ ತೀರ್ಪು ಬಂದಿದೆ. ಅದು ಈಗ ಮುಗಿದ ಅಧ್ಯಾಯ. ಈಗ ಅನುಷ್ಠಾನದತ್ತ ಗಂಭೀರ ಹೆಜ್ಜೆ ಹಾಕಬೇಕಿದೆ. ಮಹದಾಯಿ ಕೆಲಸ ಪೂರ್ಣಗೊಳಿಸುವತ್ತಾ ಸರ್ಕಾರ ಲಕ್ಷ್ಯ ವಹಿಸಬೇಕು. ಬರೇ ಮಾತುಕತೆ, ಹೇಳಿಕೆಗಳು ಯಾವುದಕ್ಕೆ? ಗೋವಾ ಸಿಎಂ ಈ ರೀತಿ ಹೇಳಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು, ಇದು ಬೇಜವಾಬ್ದಾರಿ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐದಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ಮಾಜಿ ಸಚಿವ ಎಚ್‍ಕೆ ಪಾಟೀಲ್ ಭೇಟಿ ನೀಡಿದರು.
ಧಾರವಾಡದ ಶಿವಗಿರಿಯ ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಧೈರ್ಯ ಹೇಳಿದ ನಂತರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಒತ್ತಡ ಹೇರುವ ಕ್ರಮಗಳು ನಡೆದಿವೆ. ವಿನಯ್ ಕಲಕರ್ಣಿ ಬಂಧನ ಅತ್ಯಂತ ನೋವಿನ ಸಂಗತಿ ಹಾಗೂ ಖಂಡನೀಯ ಎಂದು ಹೇಳಿದರು.
ಹತ್ತು ಹಲವು ಕಡೆ ಬಿಜೆಪಿ ಸರ್ಕಾರ ಸಿಬಿಐ, ಐಟಿ, ಇಡಿಗಳನ್ನು ರಾಜಕೀಯ ದುರುಪಯೋಗ ಮಾಡಿದೆ. ಈ ರೀತಿಯ ರಾಜಕೀಯ ದುರುಪಯೋಗಗಳಲ್ಲಿ ವಿನಯ್ ಕುಲಕರ್ಣಿ ಘಟನೆ ಸಹ ಒಂದು. ರಾಜಕೀಯದಲ್ಲಿ ಈ ರೀತಿಯ ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲವೂ ಪ್ರಜಾಪ್ರಭುತ್ವವನ್ನು ಅಶಕ್ತಗೊಳಿಸುವ ಕೆಲಸ. ಕಾನೂನಿನ ಮುಂದೆ ಎಲ್ಲರೂ ಸಮನಾಗಿಯೇ ಇರುತ್ತಾರೆ. ಆದರೆ ಅನ್ಯಾಯವಾಗಿ ಭಯ ಹುಟ್ಟಿಸುವ ರಾಜಕಾರಣ ಒಳ್ಳೆಯದಲ್ಲ ಎಂದು ಹೇಳಿದರು.
ಕಾರವಾರ: ಬಿಜೆಪಿ ಸುಳ್ಳು ಹೇಳಿಕೊಂಡು ಜನರ ದೃಷ್ಟಿ ತನ್ನತ್ತ ಸೆಳೆಯುತ್ತಿದೆ ಎಂದು ಶಾಸಕ ಹೆಚ್‍ಕೆ ಪಾಟೀಲ್ ಅವರು ಹೇಳಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ಮೋದಿಯವರ ಯಾವ ಆಶ್ವಾಸನೆ ಕೂಡ ನಿಜವಾಗಿಲ್ಲ. ದೇಶ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಉದ್ಯೋಗ ನಷ್ಟ ಮಾಡಿದರು. ಉದ್ಯೋಗ ನಷ್ಟದ ಬಗ್ಗೆ ಮಾತನಾಡಿದರೆ ಕೊರೊನಾ ಅಂತಾ ಕಾರಣ ಕೊಡುತ್ತಾರೆ ಎಂದು ಬಿಜೆಪಿಯನ್ನು ದೂರಿದರು.
ಬಿಜೆಪಿ ಇಡೀ ಆಡಳಿತ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಆಡಳಿತ ನಡೆಸುತ್ತಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಅವರ ಧ್ವನಿ ಹತ್ತಿಕ್ಕುವ ಪ್ರಯತ್ನವಾಗುತ್ತಿದೆ. ಉತ್ತರ ಪ್ರದೇಶದ ಹತ್ರಾಸ್ ವಿಚಾರದಲ್ಲಿ ಇದೇ ಆಗಿದ್ದು. ಬಿಹಾರ ಚುನಾವಣೆಯಲ್ಲಿ ವ್ಯಾಕ್ಸಿನ್ ಕೊಡುವ ವಿಚಾರದಲ್ಲೂ ರಾಜಕೀಯಕ್ಕೆ ಇಳಿದಿದ್ದಾರೆ. ತಮ್ಮ ಪಕ್ಷಕ್ಕೆ ವೋಟ್ ಹಾಕಿದರೆ ಮಾತ್ರ ಲಸಿಕೆ ಉಚಿತ ಅಂತಾರೆ. ಬಿಹಾರ ಚುನಾವಣಾ ಕಣದಲ್ಲಿ ಈ ರೀತಿ ಆಮಿಷ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀಮಣ್ಣ ಮುಂತಾದವರು ಉಪಸ್ಥಿತರಿದ್ದರು.
ಗದಗ: ಕಾಂಗ್ರೆಸ್‍ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್‍ಗೆ ಕೊರೊನಾ ವೈರಸ್ ಸೋಂಕು ದೃಢವಾಗಿದೆ.
ಗದಗ ಮತಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ್ ಸದ್ಯಕ್ಕೆ ಬೆಂಗಳೂರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಾ ಕ್ವಾರಂಟೈನ್ ಆಗಿದ್ದಾರೆ. ಎಚ್.ಕೆ.ಪಾಟೀಲ್ ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದರು. ಹೀಗಾಗಿ ಮಹಾರಾಷ್ಟ್ರದ ಮುಂಬೈ ಪ್ರವಾಸ ನಂಟಿನಿಂದ ಕೊರೊನಾ ಬಂದಿರಬಹುದು ಎಂದು ಶಂಕಿಸಲಾಗಿದೆ.
ಸದ್ಯಕ್ಕೆ ಎಚ್.ಕೆ.ಪಾಟೀಲ್ 10 ದಿನಗಳ ಕಾಲ ಕ್ವಾರಂಟೈನ್ ಆಗಲಿದ್ದಾರೆ. ತಮಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಜೊತೆಗೆ ತಮ್ಮ ಸಂಪರ್ಕದಲ್ಲಿ ಇದ್ದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
“ನಾನು ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ನನಗೆ ಯಾವುದೇ ಕೊರೊನಾ ರೋಗಲಕ್ಷಣಗಳಿಲ್ಲ. ಆದರೂ 10 ದಿನಗಳ ಕಾಲ ಕಾರಂಟೈನ್ ಆಗಿರಲು ನಿರ್ಧರಿಸಿದ್ದೇನೆ. ನಿಮ್ಮ ಪ್ರೀತಿಯಿಂದ ನಾನು ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖನಾಗುತ್ತೇನೆ ಅಂತ ಭರವಸೆ ಇದೆ” ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ ಕಳೆದ ಎರಡು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಮುನ್ನಚ್ಚರಿಕೆಯಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳವಂತೆ ವಿನಂತಿಸಿಕೊಂಡಿದ್ದಾರೆ. ಕೊನೆಯಲ್ಲಿ ಎಲ್ಲರೂ ಸುರಕ್ಷಿತರಾಗಿರಿ ಎಂದು ಹೇಳಿದ್ದಾರೆ.
I have been tested positive for #Covid19. I am asymptomatic but quarantined myself for 10 days. I would be perfectly alright soon with your wishes.I request to all those who had come in contact with me in the last couple of days to get themselves tested as a precaution.Stay safe!