Tag: HK Kumaraswamy

  • ಎಸ್‍ಐ ಆತ್ಮಹತ್ಯೆ – ಬಿಜೆಪಿ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕೆಂದ ಕುಮಾರಸ್ವಾಮಿ

    ಎಸ್‍ಐ ಆತ್ಮಹತ್ಯೆ – ಬಿಜೆಪಿ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕೆಂದ ಕುಮಾರಸ್ವಾಮಿ

    ಹಾಸನ: ಚನ್ನರಾಯಪಟ್ಟಣದ ಸಬ್ ಇನ್ಸ್‌ಪೆಕ್ಟರ್‌ ಕಿರಣ್ ಕುಮಾರ್ ಆತ್ಮಹತ್ಯೆಯನ್ನು ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಿ ಸತ್ಯಾಂಶ ಹೊರಬೇಕು. ಹಾಗೂ ಬಿಜೆಪಿ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯವರು ಆಕ್ರೋಶ ಹೊರಹಾಕಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಅವರು, ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯ ಓರ್ವ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆ ಘಟನೆ, ಇಡೀ ಜಿಲ್ಲೆಯಲ್ಲಿ ಅಧಿಕಾರಿಗಳು ಎಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ರಾಜಕೀಯ ಒತ್ತಡ, ವೈಯಕ್ತಿಕ ಒತ್ತಡ ಇಲ್ಲವೆ ಮೇಲಾಧಿಕಾರಿಗಳ ಒತ್ತಡಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜ ಎಂದು ಹೇಳಿದರು.

    ಇದು ಜಿಲ್ಲೆಯ ಕೆಳ ಮಟ್ಟದಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಈ ರೀತಿಯ ಒತ್ತಡಗಳು ನಡೆಯುತ್ತಿದೆ. ಈ ಸಬ್ ಇನ್ಸ್‌ಪೆಕ್ಟರ್ ಘಟನೆಯನ್ನು ಸರ್ಕಾರವು ಹಗುರವಾಗಿ ಪರಿಗಣಿಸದೇ ಈ ಘಟನೆಯನ್ನು ಉನ್ನತ ಮಟ್ಟದ ಸಂಸ್ಥೆಯಿಂದ ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸಿ ಸತ್ಯಾಂಶ ಹೊರಬರಬೇಕು. ಇದನ್ನು ಗೃಹ ಇಲಾಖೆಯು ಕಠಿಣವಾಗಿ ಮತ್ತು ತೀವ್ರವಾಗಿ ಪರಿಗಣಿಸಿ ತನಿಖೆ ಮಾಡುವಂತೆ ಒತ್ತಾಯಿಸಿದರು. ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಸದಾಗಿ ನೇಮಕವಾದ ನಂತರ ಈ ಘಟನೆ ನಡೆದಿದೆ ಎಂದರು. ಇದನ್ನು ಓದಿ: ಚನ್ನರಾಯಪಟ್ಟಣ ಪಿಎಸ್‍ಐ ಆತ್ಮಹತ್ಯೆ- ಉನ್ನತ ಮಟ್ಟದ ತನಿಖೆಗೆ ಎಚ್‍ಡಿಕೆ ಆಗ್ರಹ

    ಜೆ.ಸಿ. ಮಾಧುಸ್ವಾಮಿಯವರು ಇಲ್ಲಿ ಜಿಲ್ಲಾ ಮಂತ್ರಿಯಾಗಿ 10 ತಿಂಗಳು ಇದ್ದರು. ಜನಪ್ರತಿನಿಧಿಗಳಿಗೆ ಮತ್ತು ಎಲ್ಲರಿಗೂ ಸ್ಪಂದಿಸುತ್ತಿದ್ದರು. ಇತ್ತೀಚೆಗೆ ಕಳೆದ ಎರಡು ತಿಂಗಳಿನಿಂದ ಹಾಸನ ಜಿಲ್ಲೆಯಲ್ಲಿ ಏನಾಗಿದೆ? ಬಿಜೆಪಿ ಪಕ್ಷದ ಹಿಂಬಾಲಕರು ಸಕಲೇಶಪುರ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ ಬಿಜೆಪಿ ಅಭ್ಯರ್ಥಿ ಮತ್ತು ಅವರ ಸಹಚರರು ಕ್ಷೇತ್ರಕ್ಕೆ ಬಂದು ಕೆಳ ಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲಿನ ಮಟ್ಟದ ಅಧಿಕಾರಿಗಳವರೆಗೂ ಎಲ್ಲಾ ರೀತಿಯ ಒತ್ತಡವನ್ನು ಹಾಕಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಗುತ್ತಿಗೆ ಕೊಡಬೇಕು. ನಾವು ಹೇಳಿದ ಕೆಲಸವನ್ನೇ ಮಾಡಬೇಕು. ನಮಗೆ ಹೇಳದೇ ಕೆಲಸ ನಿರ್ವಹಿಸುವಂತಿಲ್ಲ ಎಂದೆಲ್ಲ ಕಿರುಕುಳ ನೀಡಿದ್ದಾರೆ ಎಂದು ದೂರಿದರು.

    ಈ ಎಲ್ಲ ಬಗ್ಗೆ ಅಧಿಕಾರಿಗಳು ನಮ್ಮ ಬಳಿ ಬಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ. ಹೀಗೆ ಮುಂದುವರಿದರೆ ಜಿಲ್ಲೆಯಲ್ಲಿ ಆಡಳಿತ ನಡೆಯುವುದು ಹೇಗೆ? ಕಾನೂನು ವ್ಯವಸ್ಥೆ ಏನಾಗುವುದು ಎಂದು ಕಿಡಿಕಾರಿದರು.

  • ಜೆಡಿಎಸ್ ರಾಜ್ಯಾಧ್ಯಕ್ಷರ ಪತ್ನಿ, ಮಗಳಿಗೂ ಕೊರೊನಾ ಸೋಂಕು

    ಜೆಡಿಎಸ್ ರಾಜ್ಯಾಧ್ಯಕ್ಷರ ಪತ್ನಿ, ಮಗಳಿಗೂ ಕೊರೊನಾ ಸೋಂಕು

    ಹಾಸನ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಕೆ ಕುಮಾರಸ್ವಾಮಿಯವರ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲ ಕುಮಾರಸ್ವಾಮಿ ಅವರಿಗೂ ಕೂಡ ಕೊರೊನಾ ವೈರಸ್ ಹಬ್ಬಿದೆ.

    ಕಳೆದ ವಾರ ಆಲೂರಿನಲ್ಲಿ ಶಾಸಕರು ಹಾಗೂ ಅವರ ಆಪ್ತ ಸಹಾಯಕ ಮತ್ತು ಗನ್ ಮ್ಯಾನ್ ಸೇರಿದಂತೆ ಒಟ್ಟು 11 ಜನರ ಗಂಟಲು ದ್ರವವನ್ನು ಪಡೆದುಕೊಂಡು ಟೆಸ್ಟಿಂಗ್‍ಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಬೆಳಗೋಡು ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯೆ ಚಂಚಲ ಕುಮಾರಸ್ವಾಮಿ, ಅವರ ಮಗಳು ಹಾಗೂ ಕಾರಿನ ಡ್ರೈವರ್ ಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

    ಸದ್ಯ ಜಿಲ್ಲಾ ಪಂಚಾಯತಿ ಸದಸ್ಯರು ಆಗಿರುವ ಚಂಚಲ ಅವರು ತಮ್ಮ ಮಗಳ ಮನೆಯಲ್ಲಿ ಹೋಂ ಐಸೋಲೇಷನ್ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಚಾಲಕ ಹಾಸನ ಜಿಲ್ಲಾ ಕೋವಿಡ್ ಕೇಂದ್ರದಲ್ಲಿದ್ದಾರೆ. ಸದಸ್ಯೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಶಾಸಕರು ಸೇರಿದಂತೆ ಅವರ ಎಲ್ಲ ಸಿಬ್ಬಂದಿ ವರ್ಗದವರು ಪ್ರತ್ಯೇಕವಾಗಿ ಮನೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚಂಚಲ ಕುಮಾರಸ್ವಾಮಿ ಅವರು, ನನ್ನ ಮಗಳು ಕೂಡ ವೈದ್ಯೆಯಾಗಿದ್ದಾಳೆ. ಕೊರೊನಾ ಇದೆ ಎಂಬುದನ್ನು ಬಿಟ್ಟರೆ ನಮಗೆ ಯಾವುದೇ ಬೇರೆ ಆರೋಗ್ಯ ಸಮಸ್ಯೆಯಿಲ್ಲ. ನಾವು ಎಲ್ಲ ರೀತಿಯಲ್ಲೂ ಆರೋಗ್ಯವಾಗಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇವೆ. ಕೊರೊನಾಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಎಲ್ಲರೂ ಧೈರ್ಯವಾಗಿದ್ದರೆ ಕೊರೊನಾವನ್ನು ಸುಲಭವಾಗಿ ಹೆದರಿಸಬಹುದು ಎಂದು ತಿಳಿಸಿದ್ದಾರೆ.

  • ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ- ಜೆಡಿಎಸ್ ರಾಜ್ಯಾಧ್ಯಕ್ಷ

    ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ- ಜೆಡಿಎಸ್ ರಾಜ್ಯಾಧ್ಯಕ್ಷ

    ಮಡಿಕೇರಿ: ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ, ಸರ್ಕಾರವನ್ನು ಬೀಳಿಸಿದರೆ ಸಂತ್ರಸ್ತರಿಗೆ ತೊಂದರೆಯಾಗಲಿದೆ. ಹೀಗಾಗಿ ಸರ್ಕಾರ ಬೀಳಿಸಲು ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಸರ್ಕಾರವನ್ನು ಬೀಳಿಸಿದರೆ ಸಂತ್ರಸ್ತರಿಗೆ ತಂದರೆಯಾಗಲಿದೆ. ಹೀಗಾಗಿ ಸರ್ಕಾರ ಬೀಳಿಸಲು ಹೋಗುವುದಿಲ್ಲ ಎಂದು ಕುಮಾರಸ್ವಾಮಿಯವರು ಹೇಳಿದ್ದಾರಷ್ಟೇ. ಆದರೆ ಬಿಜೆಪಿ ಸರ್ಕಾರಕ್ಕೆ ಸಪೋರ್ಟ್ ಮಾಡುವುದಿಲ್ಲ ಎಂದರು.

    ಎಂಎಲ್ಸಿಗಳು ಪಕ್ಷ ಬಿಡುವುದಿಲ್ಲ ಅಸಮಾಧಾನದಿಂದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ ಅಷ್ಟೇ. ಅವರು ಪಕ್ಷ ತೊರೆಯುತ್ತೇವೆ ಎಂದು ಹೇಳಿಲ್ಲ, ಏನೇ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕು. ಬೀದಿಯಲ್ಲಿ ಮಾತನಾಡಬಾರದು. ಉಪಚುನಾವಣೆ ನಂತರ ರಾಜಕೀಯ ವ್ಯವಸ್ಥೆ ಬದಲಾವಣೆಯಾಗಲಿದೆ ಎಂದರು.

    ಪಠ್ಯದಿಂದ ತೆಗೆದ ಕೂಡಲೇ ಇತಿಹಾಸ ಬದಲಾಗುವುದಿಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂತಾದವರು ಟಿಪ್ಪು ಜಯಂತಿ ಆಚರಿಸಿದ್ದಾರೆ. ಸರ್ಕಾರ ಬದಲಾದ ಕೂಡಲೇ ನಿಲುವು ಬದಲಾಗಿದ್ದೇಕೆ, ಅವರ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಟಿಪ್ಪು ಜಯಂತಿ ಆಚರಿಸಬೇಕು. ಪಠ್ಯ ಪುಸ್ತಕದಿಂದಲೂ ಇತಿಹಾಸ ತೆಗೆಯಬಾರದು ಎಂದರು.

    ರಾಜ್ಯದಲ್ಲಿ ಹಲವು ಜಿಲ್ಲೆಯಲ್ಲಿ ಪ್ರವಾಹವಾಗಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯವನ್ನು ಸಂಪೂರ್ಣ ಕಡೆಗಣಿಸಿದೆ. ಕೊಡಗು ಜಿಲ್ಲೆ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದೆ. ಆದರೆ ರಾಜ್ಯದಿಂದ ಕೊಡಗಿಗೆ ಹೊಸದಾಗಿ ಯಾವುದೇ ಅನುದಾನ ಬರಲಿಲ್ಲ. ಹೀಗಾಗಿ ಕೊಡಗಿನಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಲ್ನಡಿಗೆ ಜಾಥಾ ಆರಂಭಿಸಿದ್ದೇವೆ ಎಂದರು.