Tag: Hirisave Avery Rework

  • ಕಾಲ್ನಡಿಗೆಯಲ್ಲಿ ಹಿರೀಸಾವೆ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ಶಾಸಕ ಬಾಲಣ್ಣ

    ಕಾಲ್ನಡಿಗೆಯಲ್ಲಿ ಹಿರೀಸಾವೆ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ಶಾಸಕ ಬಾಲಣ್ಣ

    ಹಾಸನ: ಚನ್ನರಾಯಪಟ್ಟಣದ ಶ್ರವಣಬೆಳಗೂಳ ಕ್ಷೇತ್ರದ ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ ಅವರು ಹಿರೀಸಾವೆ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ಕಾಲ್ನಡಿಗೆಯಲ್ಲಿ ವೀಕ್ಷಣೆ ಮಾಡಿದ್ದಾರೆ.

    ಹಿರಿಸಾವೆ ಸುತ್ತಮುತ್ತ ಇರುವ ಗ್ರಾಮಗಳ ಕೆರೆಗೆ ನೀರು ಹರಿಸಲು ಹಿರೀಸಾವೆ ಏತಾನೀರಾವರಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆ ಕಾಮಗಾರಿ ಹಂತದಲ್ಲಿದ್ದು, ಶೇ.75 ಕೆಲಸ ಮುಗಿದಿದೆ. ಈ ಯೋಜನೆಯನ್ನು ಶಾಸಕ ಬಾಲಣ್ಣ ಅವರೇ ಮುಂದೆ ನಿಂತು ಮಾಡಿಸುತ್ತಿದ್ದು, ಇಂದು ಅದರ ಪರಿಶೀಲನೆ ಹೋಗಿದ್ದಾರೆ.

    ಇಂದು ಬೆಳಗ್ಗೆ ಯಾವುದೇ ಅಧಿಕಾರಿಗಳನ್ನು ಕರೆದುಕೊಳ್ಳದೇ ಒಬ್ಬರೇ ಹೋಗಿ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಾಲಣ್ಣ ಹಿರೀಸಾವೆ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ವೀಕ್ಷಿಸಲು ಕಾಲ್ನಡಿಗೆಯಲ್ಲಿ ತೆರಳಿದ್ದೆ. ಬಸುವಹಳ್ಳಿ, ಹುಳಿಗೆರೆ, ಚನ್ನೇನಹಳ್ಳಿ, ಬೊಮ್ಮನಹಳ್ಳಿ ಗ್ರಾಮದ ಹತ್ತಿರ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ್ದೇನೆ. ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಈ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ.

    ತೋಟಿ, ಆಲಗೊಂಡನಹಳ್ಳಿ, ಹಿರೀಸಾವೆ ಏತನೀರಾವರಿ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು, ಈ ಯೋಜನೆಯಿಂದ ಬಿದರೆ, ಚಿಕ್ಕರಸನಹಳ್ಳಿ, ಕೆಂಬಾಳು, ಎಂ.ಶಿವರ, ತಗಡೂರು, ಹೊಂಗೇಹಳ್ಳಿ, ಮರಗೂರು, ಕಾಮನಹಳ್ಳಿ, ಕಾಳಮಾರನಹಳ್ಳಿ, ಮಾದಗುಡ್ಡನಹಳ್ಳಿ, ಬಳಗಟ್ಟೆ, ದರಸಿಹಳ್ಳಿ, ಕಲ್ಲೆಸೋಮನಹಳ್ಳಿ, ಹಲಸಿನಹಳ್ಳಿ, ನಾಕನಕೆರೆ, ದಿಡಿಗ ಕೆರೆಗಳು ತುಂಬಲಿವೆ. ಇದರಿಂದ ಬಾಗೂರು, ಹಿರಿಸಾವೆ ಹೋಬಳಿಯ ಕುಡಿಯುವ ನೀರಿನ ಅಂತರ್ಜಲ ಸಮಸ್ಯೆ ನಿವಾರಣೆಯಾಗುತ್ತದೆ.