Tag: Hirebenkal

  • ಅಣು ವಿದ್ಯುತ್‌ಸ್ಥಾವರ ಸ್ಥಾಪನೆಗೆ ವಿರೋಧ – ರೈತರ ನೇತೃತ್ವದಲ್ಲಿ ಉಗ್ರ ಹೋರಾಟದ ಎಚ್ಚರಿಕೆ!

    ಅಣು ವಿದ್ಯುತ್‌ಸ್ಥಾವರ ಸ್ಥಾಪನೆಗೆ ವಿರೋಧ – ರೈತರ ನೇತೃತ್ವದಲ್ಲಿ ಉಗ್ರ ಹೋರಾಟದ ಎಚ್ಚರಿಕೆ!

    – ಹಿರೇಬೆಣಕಲ್ ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆಯಾಗುತ್ತೆ; ಎಚ್.ಆರ್.ಶ್ರೀನಾಥ

    ಕೊಪ್ಪಳ: ಜಿಲ್ಲೆಯಲ್ಲಿ ಅಣು ವಿದ್ಯುತ್‌ಸ್ಥಾವರ ಸ್ಥಾಪನೆ ಮಾಡಲು ಆಯ್ಕೆ ಮಾಡಿದ್ದ ಜಾಗಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ.

    ಹೌದು, ಕೊಪ್ಪಳದ (Koppal) ಗಂಗಾವತಿ (Gangavathi) ತಾಲೂಕಿನ ಹಿರೇಬೆಣಕಲ್‌ನ (Hirebenkal) ಮೋರೆರ ಬೆಟ್ಟದಲ್ಲಿ ಐತಿಹಾಸಿಕ ಸ್ಮಾರಕಗಳಿದ್ದು, ಅದರ ಸಮೀಪ ಅಣು ವಿದ್ಯುತ್ ಸ್ಥಾವರ (Nuclear Plant) ಘಟಕ ಸ್ಥಾಪನೆ ಸರಿಯಲ್ಲ ಎಂದು ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಸ್ಥಾಪನೆ ಮಾಡಿದರೆ ರೈತರ ನೇತೃತ್ವದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ ಹೇಳಿದರು.ಇದನ್ನೂ ಓದಿ: ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ಮದುವೆಯಾದ ವರ 

    ಗಂಗಾವತಿ ನಗರದ ಗ್ರಾಮಸ್ಥರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವದ 7 ಅದ್ಭುತಗಳಲ್ಲಿ ಹಿರೇಬೆಣಕಲ್ ಮೋರೆರ ಬೆಟ್ಟದ ಸ್ಮಾರಕಗಳು ಕೂಡ ಒಂದಾಗಿವೆ. ಹಿರೇಬೆಣಕಲ್ ಸಮೀಪದಲ್ಲಿಯೇ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗ, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಪ್ರದೇಶಗಳು ಇವೆ. ಇಂತಹ ಸ್ಥಳದಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆ ಮಾಡುವುದರಿಂದ ಇತಿಹಾಸ ಇರುವ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ.

    ಈಗಾಗಲೇ ಮೋರೆರ ಸ್ಮಾರಕಗಳು ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಗೆ ಶಿಫಾರಸು ಮಾಡಲಾಗಿದೆ. ಅಣುಸ್ಥಾವರ ವಿದ್ಯುತ್ ಘಟಕದಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತದೆ. ಅಣುಸ್ಥಾವರ ಸ್ಥಾಪನೆಯ ಜಾಗದಿಂದ ಸುಮಾರು 7 ಗ್ರಾಮಗಳು ಒಳಪಡುತ್ತವೆ. ಇದರಿಂದ ಜನರಿಗೆ, ರೈತರಿಗೆ, ವೃದ್ಧರಿಗೆ ಯುವ ಪೀಳಿಗೆಗೆ, ಮಕ್ಕಳಿಗೆ ತೊಂದರೆಯಾಗುತ್ತದೆ. ಘಟಕದಿಂದ ಹೊರಸೂಸುವ ತರಂಗಗಳಿAದ ಕ್ಯಾನ್ಸರ್, ಕಿಡ್ನಿ ವೈಫಲ್ಯಗಳ ಸಾಧ್ಯತೆಗಳು ಸಾಕಷ್ಟು ಇವೆ. ಹಿರೇಬೆಣಕಲ್ ಗ್ರಾಮದ ಸಮೀಪದಲ್ಲಿ ಘಟಕ ಸ್ಥಾಪನೆಗೆ ಸರ್ವೇ ನಡೆಸಿರುವುದನ್ನು ಕೂಡಲೇ ಕೈಬಿಡಬೇಕು. ಜಿಲ್ಲಾಡಳಿತ ರಾತ್ರೋರಾತ್ರಿ ಸರ್ವೇಯನ್ನು ನಡೆಸಿ, ಗೌಪ್ಯವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಖಂಡನೀಯ. ಕೂಡಲೇ ಜಿಲ್ಲಾಧಿಕಾರಿಗಳು ಘಟಕಕ್ಕೆ ಭೂಮಿ ಗುರುತಿಸಿರುವುದನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಚ್ಚರಿಕೆ ನೀಡಿದರು.ಇದನ್ನೂ ಓದಿ: Mandya | ಠಾಣೆಯಲ್ಲೇ ಪೊಲೀಸ್ ಪೇದೆ ಮೇಲೆ ವ್ಯಕ್ತಿಯಿಂದ ಹಲ್ಲೆ

  • ಯುನೆಸ್ಕೋ ವಿಶ್ವ ಪರಂಪರೆ ಸೇರ್ಪಡೆಯ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬೆಣಕಲ್

    ಯುನೆಸ್ಕೋ ವಿಶ್ವ ಪರಂಪರೆ ಸೇರ್ಪಡೆಯ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬೆಣಕಲ್

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಶಿಲಾಯುಗದ ಸ್ಥಳ ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾಗಿದೆ.

    ಕೇಂದ್ರ ಪುರಾತತ್ವ ಇಲಾಖೆಯು ವಿಶ್ವಪಾರಂಪರಿಕ ಪಟ್ಟಿಗೆ ದೇಶದ 9 ಸ್ಥಳಗಳ ಪ್ರಸ್ತಾವನೆ ಸಲ್ಲಿಸಿತ್ತು. ಯುನೆಸ್ಕೋ 9 ಸ್ಥಳಗಳ ಪೈಕಿ 6 ಸ್ಥಳಗಳನ್ನು ತಾತ್ಕಾಲಿಕ ಪಟ್ಟಿಗೆ ಆಯ್ಕೆ ಮಾಡಿದ್ದು, ಅದರಲ್ಲಿ ಕೊಪ್ಪಳದ ಹಿರೇಬೆಣಕಲ್ ಗ್ರಾಮದ ಶಿಲಾಯುಗದ ಸ್ಥಳ ಸೇರಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಟ್ವೀಟ್ ಮಾಡಿದ್ದಾರೆ.

    ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಕೊಪ್ಪಳ-ಗಂಗಾವತಿಯ ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ಇದೆ. ಹಿರೇಬೆಣಕಲ್ ಗ್ರಾಮ ದಕ್ಷಿಣ ಭಾರತದ ಬೃಹತ್ ಶಿಲಾಯುಗ ಕಾಲದ ಮಹತ್ವದ ನೆಲೆಯಾಗಿದೆ. ಕಬ್ಬಿಣ ಯುಗದ ಜನರ ಸುಮಾರು 500ಕ್ಕೂ ಅಧಿಕ ಶಿಲಾ ಸಮಾಧಿಗಳಿವೆ. ದೇಶದಲ್ಲಿ ಒಂದೇ ಕಡೆ ಇಷ್ಟೊಂದು ಶಿಲಾ ಸಮಾಧಿಗಳು ಮತ್ತೊಂದು ನೆಲೆಯಲ್ಲಿ ಕಂಡು ಬಂದಿಲ್ಲ.

    ಹಿರೇಬೆಣಕಲ್ಲಿನಲ್ಲಿ ಮೃತರಾದವರ ಅಂತ್ಯಕ್ರಿಯೆಗೆ ಬೆಟ್ಟಗಳಲ್ಲಿ ದೊರೆಯುವ ಕಲ್ಲು ಬಂಡೆಗಳನ್ನು ಉಪಯೋಗಿಸಿ ಸಮಾಧಿ ನಿರ್ಮಾಣ ಮಾಡುತ್ತಿದ್ದರು. ಸಮಾಧಿಯಲ್ಲಿ ಮೃತರು ಬಳಸುತ್ತಿದ್ದ ವಸ್ತುಗಳನ್ನು ಇಡಲಾಗುತ್ತಿತ್ತು. ಸುಮಾರು 400 ಶಿಲಾ ಸಮಾಧಿಗಳು ಇನ್ನೂ ಇವೆ. 8 ರೀತಿಯ ಶಿಲಾ ಸಮಾಧಿ ಕಂಡುಬರುತ್ತಿವೆ. ಶಿಲಾ ಸಮಾಧಿಗಳ ಸುತ್ತಲೂ 30 ಗವಿಕಲ್ಲಾಶ್ರಯಗಳಲ್ಲಿ ಆ ಕಾಲದ ವರ್ಣಚಿತ್ರಗಳಿವೆ. ಆದ್ದರಿಂದ ಈ ನೆಲೆ ಭಾರತದ ಆದಿಮಾನವನ ಜೀವನ ಸಂಸ್ಕೃತಿ ತಿಳಿಯಲು ಅತ್ಯಂತ ಮಹತ್ವದ ನೆಲೆಯಾಗಿದೆ. ಸಂರಕ್ಷಣೆಯ ಅಗತ್ಯವಿದ್ದು, ವಿಶ್ವಪರಂಪರೆಯ ತಾಣವಾದರೆ ಮಾತ್ರ ಸಂರಕ್ಷಣೆ ಸಾಧ್ಯವಾಗಲಿದೆ. ಶಿಲಾಯುಗ ಸಂಸ್ಕೃತಿಯ ಅಧ್ಯಯನಕ್ಕೆ ಪ್ರಯೋಗ ಶಾಲೆಯಾಗಿದೆ.

    ಮಧ್ಯ ಪ್ರದೇಶದ ಭೀಮ್‍ಬೇಟ್‍ಕಾ ಬೆಟ್ಟ ಪ್ರದೇಶದಲ್ಲಿ 250 ಗವಿಚಿತ್ರಗಳಿದ್ದು, ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿದೆ. ಆದರೆ ಕೊಪ್ಪಳದ ಗಂಗಾವತಿಯ 7 ಬೆಟ್ಟಗಳ ಸಾಲಿನಲ್ಲಿ 300ಕ್ಕೂ ಅಧಿಕ ಗವಿಚಿತ್ರಗಳು ಸೇರಿವೆ. ಆದ್ದರಿಂದ ವಿಶ್ವಪಾರಂಪರಿಕ ತಾಣ ಪಟ್ಟಿಗೆ ಸೇರಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದ್ದಾರೆ.

    ಹಿರೇಬೆಣಕಲ್ ಗ್ರಾಮದ ಬಳಿ ವ್ಯಾಪಿಸಿರುವ ಬೆಟ್ಟಗಳಲ್ಲಿ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿ ಕಾಲದ ನೂರಾರು ಶಿಲಾಕೋಣೆಗಳು, ಸಮಾಧಿಗಳು, ಬೃಹತ್ ಆಕಾರದ ಶಿಲಾಗೊಂಬೆ, ಗವಿಗಳಲ್ಲಿ ವರ್ಣಚಿತ್ರಗಳು, ಬಂಡೆಯಲ್ಲಿ ಕೊರೆದ ಚಿತ್ರಗಳಿವೆ. ಹಿರೇಬೆಣಕಲ್ಲಿನ ಗವಿವರ್ಣ ಚಿತ್ರಗಳನ್ನು ಮೊದಲಿಗೆ ಆಂಗ್ಲ ಭೂ ಗರ್ಭ ಶಾಸ್ತ್ರಜ್ಞ ಲಿಯೋನಾರ್ಡ್‍ಮನ್ ಅವರು 1925 ರಲ್ಲಿ ಬೆಳಕಿಗೆ ತಂದರು. 1985ರಲ್ಲಿ ಪುರಾತತ್ವಜ್ಞ ಡಾ.ಅ.ಸುಂದರ್ ಅವರು ಶಿಲಾಸಮಾಧಿಗಳ ಅಧ್ಯಯನದ ಜೊತೆಗೆ 9 ಗವಿಗಳನ್ನು ಶೋಧಿಸಿದರು. ಇಲ್ಲಿನ ಚಿತ್ರಗಳು ಕ್ರಿ.ಪೂ.1000-500ರಲ್ಲಿ ಕೆತ್ತಿರಬಹುದೆಂಬ ಅಂದಾಜಿದೆ.

    ಹಿರೇಬೆಣಕಲ್ಲಿನ ಗವಿಚಿತ್ರಗಳಲ್ಲಿ ಪ್ರಾಣಿಗಳಾದ ಜಿಂಕೆ, ಹಸು, ಗೂಳಿ, ನಾಯಿ, ಹುಲಿ, ಕುದುರೆ, ಮೀನು, ನವಿಲು ಸೇರಿದಂತೆ ಇತರೆ ಚಿತ್ರಗಳಿವೆ. ಅಲ್ಲದೆ ಮನುಷ್ಯರ ನರ್ತನದ ಚಿತ್ರಗಳಿದ್ದು, ಪಶುಪಾಲನೆ, ಬೇಟೆಗಾರಿಕೆಯ ಗವಿಚಿತ್ರಗಳಿವೆ. ಅದ್ಭುತವಾದ ಚಿತ್ರ ಕಲೆ ಹೊಂದಿರುವ ಹಿರೇಬೆಣಕಲ್ಲಿನ ಶಿಲಾಯುಗದ ಸ್ಥಳ ವಿಶ್ವ ಪಾರಂಪರಿಕ ತಾಣವಾಗಿಸಲು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.