Tag: Hinduism

  • ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟರ್ – ಪಾಕ್ ಪ್ರೇಮಿ ಅಮೂಲ್ಯ ಕೈವಾಡದ ಶಂಕೆ

    ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟರ್ – ಪಾಕ್ ಪ್ರೇಮಿ ಅಮೂಲ್ಯ ಕೈವಾಡದ ಶಂಕೆ

    ಬೆಂಗಳೂರು: ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟರ್ ಬಳಕೆಯ ಹಿಂದೆ ಪಾಕ್ ಪ್ರೇಮಿ ಅಮೂಲ್ಯ ಕೈವಾಡದ ಇದೆಯೇ ಎಂಬ ಶಂಕೆ ಎದ್ದಿದೆ.

    ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸಿಎಎ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಕಾಯ್ದೆಯನ್ನು ವಿರೋಧಿಸುವ ವೇಳೆ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟರ್ ಬಳಸಿದ್ದರು.

    ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಪ್ರಕರಣದ ಹಿಂದೆ ಪಾಕ್ ಪರ ಘೋಷಣೆ ಕೂಗಿ ಪೊಲೀಸರು ಅತಿಥಿಯಾಗಿರುವ ಅಮೂಲ್ಯ ಕೈವಾಡ ಶಂಕೆ ವ್ಯಕ್ತವಾಗಿದೆ.

    ಈ ಹಿನ್ನೆಲೆಯಲ್ಲಿ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಪಶ್ಚಿಮ ವಲಯ ಡಿಸಿಪಿ ರಮೇಶ್ ಬಾನೂತ್ ಜಂಟಿಯಾಗಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅಮೂಲ್ಯಳನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.

    ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿರುವ ಹಲಸೂರು ಗೇಟ್ ಪೊಲೀಸರ ತನಿಖೆಯಲ್ಲೂ ಅಮೂಲ್ಯ ಕೈವಾಡ ಶಂಕೆ ವ್ಯಕ್ತವಾಗಿತ್ತು. ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಅಮೂಲ್ಯಳನ್ನು ಎಲ್ಲ ರೀತಿಯಲ್ಲೂ ತನಿಖೆ ಮಾಡಲಾಗುತ್ತಿದೆ.

    ಪ್ರಕರಣ ಸಂಬಂಧ ಸೂಕ್ತ ಮಾಹಿತಿಗಳನ್ನು ಕಲೆ ಹಾಕಿ ತೀವ್ರ ವಿಚಾರಣೆ ನಡೆಸಲಾಗಿದೆ. ನಾಳೆಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು ಅಮೂಲ್ಯಳನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ.

  • ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ

    ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ

    – ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ
    – ಈಗ ನಿಮ್ಮ ಸರ್ಕಾರವಿಲ್ಲ, ಇಲ್ಲಿ ನೀವು ಮಂತ್ರಿಗಳಲ್ಲ
    – ಧರ್ಮದ ವಿರುದ್ಧ ಮೋಸ ಮಾಡಬೇಡಿ

    ರಾಮನಗರ: ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ. ತಿರುಪತಿಯಲ್ಲಿ 1 ಸಾವಿರ ಕ್ರಿಶ್ಚಿಯನ್ನರಿಗೆ ಮನೆ ಕಟ್ಟಿ ಕೊಟ್ಟ. 400 ಜನರಿಗೆ ತಿರುಪತಿಯಲ್ಲಿ ಕೆಲಸ ಕೊಟ್ಟ ಹಿಂದುಯೇತರರಿಗೆ ತಿರುಪತಿ ಪ್ರವೇಶ ಇಲ್ಲ. ಒಬ್ಬ ಮತಾಂತರಿ ಏನು ಮಾಡಿದ ಎನ್ನುವುದಕ್ಕೆ ರಾಜಶೇಖರ ರೆಡ್ಡಿ ಉದಾಹರಣೆ. ರಾಜಶೇಖರ ರೆಡ್ಡಿ ಕೊನೆಗೆ ಏನಾದ ಗೊತ್ತಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿ ಶಿವಕುಮಾರ್ ಅವರೇ ನೀವು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತೀರಿ ಎಂಬುದು ನೆನಪಿರಲಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

    ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದರ್ ತೆರೆಸಾ ಕ್ರೈಸ್ತ ಮಿಷನರಿಗಳಿಂದ ದುಡ್ಡು ತೆಗೆದುಕೊಂಡು ಲೆಕ್ಕ ಕೊಟ್ಟಿಲ್ಲ. ಸೇವೆ ಹೆಸರಲ್ಲಿ ಶಿಲುಬೆ ಹಾಕುತ್ತಿದ್ದರು ಇದನ್ನ ಇಂಗ್ಲೆಡಿನ ಕ್ರಿಶ್ಚಿಯನ್ ಒಬ್ಬ ಪ್ರಶ್ನಿಸಿದ. ಇವತ್ತು ನಿಮ್ಮ ಸರ್ಕಾರವಿಲ್ಲ. ಇಲ್ಲಿ ನೀವು ಮಂತ್ರಿಗಳಲ್ಲ, ಕಂತ್ರಿಗಳು ನೀವು. ಏನೇ ಮಾಡಿದರೂ ನೆಲವೇ ಗತಿ. ನಾನು ರಾಜಕಾರಣಿಯಂತೆ ಮಾತನಾಡುವುದಿಲ್ಲ. ಕೆಟ್ಟ ರಾಜಕಾರಣಕ್ಕೆ ಮುಂದಾಗಬೇಡಿ ಎಂದರು. ಇದನ್ನೂ ಓದಿ: ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    ಇದು ಕೃಷ್ಣನ ನಾಡು:
    ಅಲ್ಪಸಂಖ್ಯಾತರ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡ್ತಿದ್ದೀರಾ? ಇದು ಹಿಂದೂ ಧರ್ಮದ ಭೂಮಿ, ಅಲ್ಲಿ ಹಿಂದೂಗಳ ಪ್ರತಿಮೆಯಾಗಬೇಕು ಏಸುವಿನದ್ದಲ್ಲ. ಏಸುವಿನ ಹೆಸರಿನಲ್ಲಿ ಮೋಸ ಮಾಡ್ತೀರಲ್ಲ. ಅಲ್ಲಿರುವ 223 ಕುಟುಂಬದವರಿಗೆ ಜಾಗ ಕೊಡ್ತೀರಾ? ಭೂಮಿ ಆಸೆ ತೋರಿಸಿ ಮತಾಂತರ ಮಾಡ್ತೀರಲ್ಲ ಯಾಕೆ? ಇಡೀ ಗ್ರಾಮವನ್ನು ಕ್ರಿಶ್ಚಿಯನ್ ಗ್ರಾಮ ಮಾಡಲು ಹೋಗ್ತಿದ್ದೀರಾ. ಈ ದೇಶದಲ್ಲಿ ಕ್ರಿಸ್ತನ ನಾಡಿದ್ಯಾ? ಕ್ರಿಸ್ತನ ನಾಡಲ್ಲ ಕೃಷ್ಣನ ನಾಡಿದೆ. ದೇಶದ ಹಲವೆಡೆ ಮತಾಂತರ ನಡೆದು ಕ್ರಿಶ್ಚಿಯನ್ ಗೆ ಬದಲಾಗಿದ್ದಾರೆ. ಈ ಭೂ ಭಾಗವನ್ನು ಮತ್ತೆ ಇಂಗ್ಲೆಂಡ್‍ಗೆ ತೆಗೆದುಕೊಂಡು ಹೋಗುವ ಪ್ರಯತ್ನ ಅವರದ್ದು ಎಂದು ಪ್ರಭಾಕರ ಭಟ್ ದೂರಿದರು.

    ಹಲವಾರು ವರ್ಷಗಳಿಂದ ಹೊರದೇಶದಲ್ಲಿ ನಮ್ಮವರ ಮೇಲೆ ಲಕ್ಷಾಂತರ ಅತ್ಯಾಚಾರ, ಕೊಲೆ ನಡೆದಿವೆ. ಇಷ್ಟು ದಿನ ಪೌರತ್ವ ಕಾಯ್ದೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಇದೀಗ ಸರ್ಕಾರ ಪೌರತ್ವಕ್ಕೆ ಮುಂದಾಗಿದೆ. ನಾನು ಈ ದೇಶದ ಮಗ ಎನ್ನಲು ಪೌರತ್ವ ಕಾಯ್ದೆ ಬೇಕು. ಮಂಗಳೂರಿನಲ್ಲಿ ಪೊಲೀಸರ ಮೇಲೆ ಎಸೆದ ಕಲ್ಲು ಡಿಕೆಶಿ ಕಲ್ಲು ಇರಬಹುದು. ದೇಶದಲ್ಲಿ ಆ ಕಡೆ ಮುಸ್ಲಿಮರು, ಈ ಕಡೆ ಕ್ರೈಸ್ತರು, ಮತ್ತೊಂದು ಕಡೆ ಕಮ್ಯುನಿಸ್ಟರ್ ದೇಶ ನಮ್ಮದು ಎನ್ನುತ್ತಿದ್ದಾರೆ ಈ ಮಧ್ಯೆ ಹಿಂದೂಗಳು ಒದ್ದಾಡುವಂತಾಗಿದೆ. ತಾಕತ್ ಇದ್ದರೆ ಬನ್ನಿ, ಇವತ್ತು ಡಿಕೆಶಿ ವಿರುದ್ಧ ನಾನು ನಿಂತಿಲ್ಲ. ಅಧಿಕಾರ ಅನುಭವಿಸಿದ್ದಾಯ್ತು ಅದಕ್ಕೂ ಇತಿಮಿತಿಗಳು ಇರಲ್ವಾ? ಎಲ್ಲವನ್ನೂ ಡಿಕೆ ಸಹೋದರರು ಅರಿಯಬೇಕು. ಎಂತಹ ಕೆಟ್ಟವರನ್ನ ಆಯ್ಕೆ ಮಾಡಿದ್ದೀರಿ. ಒಳ್ಳೆಯ ಕೆಲಸಕ್ಕೆ ಮುಂದೆ ಬರುವಂತಹವರು ಇರಬೇಕು.

    ಭಾರತದಲ್ಲಿ ಬೇಡ:
    ಅವರದ್ದು ಭೋಗದ ಭೂಮಿ, ನಮ್ಮದು ತ್ಯಾಗದ ಭೂಮಿ. ಯೋಗ ದಿನಾಚರಣೆ ಬುದ್ಧಿ ಜೀವಿಗಳಿಗೆ ಆಗುವುದಿಲ್ಲ. ಜಗತ್ತು ಈಗ ಭಾರತದ ಕಡೆಗೆ ನೋಡುತ್ತಿದೆ ಡಿಕೆಶಿಯವರೆ, ಹಿಂದೂ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ. ನಾವು ಕೋಮುವಾದಿಗಳಾ? ನೀವು ಕೋಮುವಾದಿಗಳಾ? ನಮಗೆ ಏಸು ಕ್ರಿಸ್ತನ ಪ್ರತಿಮೆ ಬೇಡ, ದೇಶದ ಪರ ಹೋರಾಡಿದವರ ಪ್ರತಿಮೆ ಬೇಕು. ಹಿಂದೂ ಸಮಾಜಕ್ಕಿರುವ ಒಂದೇ ದೇಶ ಭಾರತ ಇಲ್ಲಿ ಏಸು ಪ್ರತಿಮೆ ಇರುವುದು ಬೇಡ ಎಂದು ಆಗ್ರಹಿಸಿದರು.

    ಧರ್ಮವಲ್ಲ ಮತಗಳು:
    ಎಲ್ಲರನ್ನು ಒಪ್ಪಿಕೊಳ್ಳುವ, ಎಲ್ಲರನ್ನು ಅಪ್ಪಿಕೊಳ್ಳುವ ಶ್ರೇಷ್ಠವಾದ ಧರ್ಮವೆಂದರೆ ಅದು ಹಿಂದೂ ಧರ್ಮ. ಅನೇಕರು ಹೇಳುತ್ತಾರೆ ಮುಸಲ್ಮಾನ್ ಧರ್ಮ, ಕ್ರೈಸ್ತ ಧರ್ಮ ಎಂದು. ಆದರೆ ಅದು ಧರ್ಮವಲ್ಲ ಮತಗಳು. ಅದು ಯಾವುದೋ ಒಂದು ಪುಸ್ತಕ, ಯಾವುದೋ ಒಂದು ಪ್ರವಾಸಿಗ, ಪದ್ಧತಿ ತಂದ ಮತಗಳು ಅವು. ಅಂತಹ ಬೇರೆ ಬೇರೆ ಮತಗಳು ನಮ್ಮಲಿವೆ. ಅವು ಧರ್ಮವಲ್ಲ ಮತಗಳು ಎಂದು ಹೇಳಿದರು.

    ಹಿಂದೂ ಧರ್ಮ ಏನು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಧರ್ಮ ಎಂದರೆ ಆರಾಧನೆ ಮಾಡುವುದು ಅಲ್ಲ. ಜೀವನದ ಪದ್ಧತಿಯೇ ಧರ್ಮ. ಹಿಂದೂ ಧರ್ಮ ಎಂದರೆ ಜೀವನದ ಪದ್ಧತಿ. ಆದ್ದರಿಂದ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಹಿಂದೂ ಸಾಮಾಜದ ಮೇಲಿದೆ. ಅದಕ್ಕಾಗಿ ಇಂತಹ ಏಸುವಿನ ಪ್ರತಿಮೆ ಬೇಡ ನಮಗೆ. ಅಲ್ಲಿ ಬಸವೇಶ್ವರ, ಬಾಲಗಂಗಾಧರನಾಥ ಮಹಾತ್ಮ ಗಾಂಧೀಜಿ ಅವರದ್ದೋ, ಪೇಜಾವರ ಶ್ರೀಗಳದ್ದೋ ಪ್ರತಿಮೆ ಬೇಕು. ಈ ದೇಶಕ್ಕಾಗಿ, ಧರ್ಮಕ್ಕಾಗಿ ಬದುಕಿದಂತಹ ಮಹಾನ್ ವ್ಯಕ್ತಿಗಳ ಪ್ರತಿಮೆ ಬೇಕು. ಹಿಂದೂಗಳಿಗೆ ಒಂದೇ ಒಂದು ಭೂಮಿ, ಅದು ಭಾರತ ಎಂದರು.

    ಹಿಂದೂಗಳಿಗೆ ಜಾಗ ಎಲ್ಲಿ?
    ಕನಕಪುರದಲ್ಲಿರುವ ಮುಸ್ಲಿಂ ವ್ಯಕ್ತಿ ಕನಕಪುರ ಬೇಡವೆಂದು ಮಂಗಳೂರಿಗೆ ಹಾರಿದರೆ, ಅಲ್ಲಿಂದ ಬೇರೆ ಕಡೆಗೆ ಹೋದರೆ 70 ಮುಸ್ಲಿಂ ರಾಷ್ಟ್ರಗಳು ಆತನಿಗೆ ನೆಲೆ ನೀಡುತ್ತದೆ. ಹಾಗೆಯೇ ಕ್ರೈಸ್ತ ವ್ಯಕ್ತಿ ದೇಶ ಬೇಡವೆಂದು ಹೋದರೆ ಆತನಿಗಾಗಿ ಸುಮಾರು 70 ಕ್ರೈಸ್ತ ರಾಷ್ಟ್ರಗಳು ಇವೆ. ಆದರೆ ಓರ್ವ ಹಿಂದೂ ಭಾರತದಿಂದ ಹೊರಹೋದರೆ ಆತನಿಗಾಗಿ ಬೇರೆ ದೇಶವಿಲ್ಲ. ಆತ ಹೋಗಿ ಸಮುದ್ರಕ್ಕೆ ಹಾರಬೇಕಾಗುತ್ತೆ. ಹಿಂದೂ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಲು ಇರುವುದು ಒಂದೇ ಒಂದು ದೇಶ. ಇಲ್ಲಿ ನೀವು ಏಸು ಪ್ರತಿಮೆಯನ್ನ ಇಡಬೇಡಿ ಎಂದು ಕಿಡಿಕಾರಿದರು.

    ಜನರು ಹೆಲಿಕಾಪ್ಟರ್ ಮೇಲೆ ಹಾರಬಹುದು, ವಿಮಾನದಲ್ಲಿ ಆಕಾಶದಲ್ಲಿ ಸಂಚರಿಸಬಹುದು. ಆದರೆ ಕೊನೆಗೆ ಎಲ್ಲರಿಗೂ ನೆಲವೇ ಗತಿ ತಾನೇ. ಎಲ್ಲರೂ ಭೂಮಿ ಮೇಲೆ ಇಳಿಯಲೇ ಬೇಕು. ಅದಕ್ಕಾಗಿ ಈ ಕೆಟ್ಟದಾದ ರಾಜಕೀಯ ಮಾಡಬೇಡಿ. ಈ ರೀತಿ ರಾಜಕಾರಣಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ವಿರುದ್ಧ ನಿಂತು ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿ ಡಿಕೆಶಿ ಸಹೋದರರು ಯಾರಿದ್ದೀರಿ ದಯವಿಟ್ಟು ಹಿಂದಕ್ಕೆ ಬನ್ನಿ. ಮುನೇಶ್ವರ ಬೆಟ್ಟವನ್ನು ಮುನೇಶ್ವರ ಬೆಟ್ಟವನ್ನಾಗಿಯೇ ಇರಲು ಬಿಡಿ ಎಂದು ಕೇಳಿಕೊಂಡರು.

    ಏಸುಕ್ರಿಸ್ತ ದೇವರಲ್ಲ, ಅವನು ಸತ್ತ ಬಳಿಕ ಜನಾಂಗ ಸೃಷ್ಟಿ ಮಾಡಿಕೊಂಡರು. ಅವರ ಬಗ್ಗೆ ಗೌರವವಿದೆ, ಅವರ ಹೆಸರಿನಲ್ಲಿ ಮತಾಂತರ, ಮೋಸ ಮಾಡಬೇಡಿ. ದಯವಿಟ್ಟು ಅದನ್ನ ಬಿಟ್ಟು ಬಿಡಿ ನೀವು ಏಸುವನ್ನ ಆರಾಧನೆ ಮಾಡಿ. ನಾವು ಕೃಷ್ಣನ ಆರಾಧಿಸುತ್ತೇವೆ. ವೋಟಿನ, ಸೀಟಿನ, ನೋಟಿನ ರಾಜಕಾರಣ ಮಾಡಬೇಡಿ. ಧರ್ಮದ ವಿರುದ್ಧ ಮೋಸ ಮಾಡಬೇಡಿ. ಸಾಮರಸ್ಯದ ಜೀವನ ಕೆಡಿಸಲು ಅನ್ಯಾಯ ಮಾಡಬೇಡಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಮನವಿ ಮಾಡಿಕೊಂಡರು.

  • ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    – ಸೋನಿಯಾ ಓಲೈಕೆಗಾಗಿ ಏಸು ಪ್ರತಿಮೆ
    – ಡಿಕೆಶಿ ಮಗಳು ಲಿಲ್ಲಿ, ಮಗ ಡೇವಿಡ್ ಆಗಬಹುದು

    ರಾಮನಗರ: ನಾವು ಶಾಂತಿ ಕದಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ನಾವು ಶಾಂತಿ ಕದಡಿಲ್ಲ. ನೀವು ಶಾಂತಿಯ ಹೆಸರಲ್ಲಿ ನಮ್ಮ ತಾಳ್ಮೆ ಕೆದಕುತಿದ್ದೀರಿ. ಬಾಲಗಂಗಾಧರ ನಾಥ ಸ್ವಾಮಿ ಪ್ರತಿಮೆ ಮಾಡಬಹುದಿತ್ತು. ಮಹಾತ್ಮ ಗಾಂಧೀಜಿಯವರ ಮೂರ್ತಿ ನಿರ್ಮಿಸಿದರೂ ನಮಗೆ ಅಡ್ಡಿಯಿಲ್ಲ. ಆದರೆ ಸೋನಿಯಾ ಗಾಂಧಿ ಓಲೈಕೆಗಾಗಿ ಮೂರ್ತಿ ಮಾಡಿದ್ದಕ್ಕೆ ನಮ್ಮ ವಿರೋಧವಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಗ್ದರಿಗೆ ಮೋಸ ಮಾಡಿ ಕೆಲಸ ಮಾಡುತ್ತಿದ್ದೀರಾ? ಮೋಸ ವಂಚನೆ ಮೂಲಕ ಪ್ರತಿಮೆ ನಿರ್ಮಿಸುತ್ತಿದ್ದೀರಾ? ಮೋಸ ವಂಚನೆಯಿಂದ ಮತಾಂತರ ಮಾಡುತ್ತಿದ್ದೀರಾ? ಈ ಮತಾಂತರಕ್ಕೆ ಡಿಕೆ ಸಹೋದರರು ಸಾಥ್ ನೀಡುತ್ತಿದ್ದಾರೆ. ನಿಮ್ಮ ಅಪ್ಪ- ಅಮ್ಮ ನಿಮಗೆ ಜನ್ಮ ನೀಡಿದ್ದಾರೆ. ನಿಮಗೆ ಶಿವ, ಸುರೇಶ ಎಂದು ಹೆಸರಿಟ್ಟಿದ್ದಾರೆ. ಸುರೇಶನ್ನು ದಿನೇಶ ಅಂತಾ ಕರೆಯಲು ಆಗುತ್ತಾ? ಒಂದು ಕಡೆಯ ಓಟು, ನೋಟು ಮುಖ್ಯವಾಯಿತೇ? ವೋಟಿಗೋಸ್ಕರ ಸೀಟಿಗೋಸ್ಕರ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

    ನಾವು ಮುಗ್ಧ ಜನರು, ಹಿಂದೂಗಳು ಮುಗ್ದರು. 33 ಕೋಟಿ ದೇವರು 1947ರಲ್ಲೇ ಇದ್ದಾರೆ ಎಂದು ಹೇಳುತ್ತಾರೆ. ದೇವರಲ್ಲಿ ಒಬ್ಬ ಅಲ್ಲ, ಒಬ್ಬ ಏಸು ಇದ್ದರೆ ನಮ್ಮ ವಿರೋಧವಿಲ್ಲ. ಆದರೆ ಅವರ ಹೆಸರಿನಲ್ಲಿ ಮತಾಂತರ ನಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. 33 ಕೋಟಿ ದೇವರು ಎಲ್ಲಿ ಬರುತ್ತಾರೆ ಎಂದು ಕೇಳುತ್ತಾರೆ? ನಮಗೆ 33 ಕೋಟಿ ದೇವರ ಪೈಕಿ ಒಬ್ಬರು ನಮ್ಮನ್ನು ಕಾಪಾಡುತ್ತಾರೆ ಎಂದು ಹೇಳಿದರು.

    ಪ್ರಭಾಕರ್ ಭಟ್ ಯಾರು ಅಂತಾ ಡಿಕೆ ಶಿವಕುಮಾರ್ ಹೇಳುತ್ತಾರೆ. ನಾನು ಯಾರು ಎನ್ನುವುದು ಗೊತ್ತಿಲ್ಲ ಅಂದಿದ್ದಕ್ಕೆ ಸಂತೋಷ. ಶ್ರೀರಾಮುಲು ಮಗಳ ಮದುವೆಯಲ್ಲಿ ಡಿಕೆಶಿ ನನ್ನನ್ನು ಕರೆದು ಮಾತನಾಡಿಸಿದರು. ಈಗ ಪ್ರಭಾಕರ ಭಟ್ಟ ನನಗೆ ಗೊತ್ತಿಲ್ಲ ಅಂತಾರೆ. ಮದುವೆಯಲ್ಲಿ ಸಿಕ್ಕ ಪ್ರಭಾಕರ ಭಟ್ಟನೆ ನಾನು ನೆನಪಿರಲಿ. ಇದೀಗ ನಾನು ಅವರ ಊರಿಗೆ ಬಂದಿದ್ದರೂ ನಾನು ಯಾರೂ ಎನ್ನುವುದು ಗೊತ್ತಿಲ್ಲ ಎಂದು ಹೇಳುತ್ತಾರೆ. ಡಿಕೆಶಿಯವರೇ ನಿಮ್ಮ ಮಗಳು ಲಿಲ್ಲಿ ಆಗಬಹುದು. ದುನೇಶ್ ಅಂತ ಮಗನ ಹೆಸರಿದ್ದರೆ ಅವನು ಮುಂದೆ ಡೇವಿಡ್ ಆಗಬಹುದು. ನಿಮಗೆ ಶಿವ ಅಂತ ತಮ್ಮನಿಗೆ ಸುರೇಶ ಅಂತ ಹೆಸರಿಟ್ಟಿದ್ದಾರೆ ಅದನ್ನ ಉಳಿಸಿ. ವೋಟು ಸೀಟು ಎರಡು ಆಗಿದ್ದು ಡಿಕೆಶಿ ಸಹೋದರರಿಗೆ ಈಗ ಬೇಕಾಗಿರುವುದು ನೋಟು ಎಂದು ವ್ಯಂಗ್ಯವಾಡಿದರು.

    ಅಮೆರಿಕ, ಇಂಗ್ಲೆಂಡ್ ಚರ್ಚಿನಲ್ಲಿ ಜನರೇ ಇಲ್ಲದೇ ಚರ್ಚ್ ಖಾಲಿ ಖಾಲಿ ಆಗಿದೆ. ವಿಶ್ವ ಹಿಂದೂ ಪರಿಷತ್ 3 ಖಾಲಿ ಚರ್ಚ್ ಖರೀದಿಸಿದ್ದಾರೆ. ಬಲಿದಾನಕ್ಕೆ ನಾವು ತಯಾರಿದ್ದೇವೆ. ಆದರೆ ಅದಕ್ಕೆ ಮೊದಲು ನಿಮ್ಮ ಬಲಿದಾನ ಗ್ಯಾರಂಟಿ. ಸಿದ್ದರಾಮಯ್ಯ ಜೊತೆ ಸೇರಿ ನಮ್ಮ ಮೂರುವರೆ ಸಾವಿರ ಮಕ್ಕಳ ಅನ್ನದ ಮೇಲೆ ಕಲ್ಲು ಹಾಕಿದ್ದೀರಿ. ಇಲ್ಲಿ ಒಡೆದ ಅಕ್ರಮ ಕಲ್ಲು ತಂದು ಕಲ್ಲಡ್ಕದ ಮಕ್ಕಳ ತಟ್ಟೆಗೆ ಹಾಕಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

    ರಾಂಚಿ ಯಲ್ಲಿ ಪೋಪ್ ಬರುವ ಕಾರ್ಯಕ್ರಮವಿತ್ತು. ಮತಾಂತರದ ಬಗ್ಗೆ ಸಂಘ ಎಚ್ಚರಿಸಿತು. ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಕಾಂಗ್ರೆಸ್ ಡಿಸಿ. ಅವನು ಪೋಪ್ ಅವರನ್ನ ತಡೆಯಲು ಆಗುವುದಿಲ್ಲ ಎಂದ. ಆಗ ಅಲ್ಲಿದ್ದ ಆದಿವಾಸಿ ಜನಾಂಗದವನೊಬ್ಬ ಬಾಣವನ್ನ ಮೇಲಕ್ಕೆ ಬಿಟ್ಟ ಹಾರುತ್ತಿದ್ದ ಹಕ್ಕಿ ಕೆಳಗೆ ಬಿತ್ತು. ಆಗ ಡಿಸಿ ನನಗೂ ಬಾಣ ಬಿಡುಬಹುದು ಎಂದು ಹೆದರಿದ. ಇಲ್ಲೂ ಹೀಗೆಯೇ ಆಗಬೇಕು ಎಂದು ಹೇಳಿದರು.

  • ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಏಸುಕ್ರಿಸ್ತನ ಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಾಕಷ್ಟು ವಿರೋಧಗಳ ನಡುವೆ ಇದೀಗ ಏಸುಕ್ರಿಸ್ತನ ಬೆಂಬಲಕ್ಕೂ ಕೆಲ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.

    ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ 10 ಏಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯುವುದಾದರೆ, ಈ ಹಿಂದೆ ಮಠ, ಆಶ್ರಮ, ದರ್ಗಾದಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಜಾಗಗಳನ್ನು ಕೂಡ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸಮತಾ ಸೈನಿಕದಳದ ಜಿಲ್ಲಾದ್ಯಕ್ಷ ಕೋಟೆ ಕುಮಾರ್ ಆಗ್ರಹಿಸಿದ್ದಾರೆ.

    ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಟನೆ ವತಿಯಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಮೆ ನಿರ್ಮಾಣದ ವಿಚಾರವಾಗಿ ಏನೆಲ್ಲಾ ಅನುಕೂಲಗಳು ಬೇಕಿದೆ, ಜೊತೆಗೆ ಪ್ರತಿಮೆ ವಿರೋಧಿಸುವವರ ವಿರುದ್ಧ ಹೋರಾಟಕ್ಕೂ ತಾವು ಕೈ ಜೋಡಿಸುವುದಾಗಿ ತಿಳಿಸಿದರು.

    ಕೆಲವರು ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವಾಗಿ ಆಧಾರಗಳೇ ಇಲ್ಲದ ಮತಾಂತರದ ಊಹಾಪೋಹದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾರೋಬೆಲೆಯಲ್ಲದೇ ಪ್ರತಿಮೆಯಾದರೆ ವಿಶ್ವದ ಜನ ಈ ಭಾಗಕ್ಕೆ ಬರುತ್ತಾರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗಲಿದೆ. ಅಲ್ಲದೇ ಈ ಭಾಗದ ರೈತರ ಜಮೀನುಗಳು ಚಿನ್ನದಂತಹ ಬೆಲೆಯನ್ನ ಪಡೆದುಕೊಳ್ಳಲಿವೆ. ಆದರೆ ಧರ್ಮದ ಹೆಸರಿನಲ್ಲಿ ಕಲಹವನ್ನುಂಟು ಮಾಡುವಂತಹ ಕೆಲಸವನ್ನು ಮತಾಂಧರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಲಂಡನ್‍ನಲ್ಲಿ ವಿಶ್ವಮಾನವತೆ ಸಾರಿದ ಬಸವಣ್ಣನ ವಿಗ್ರಹವನ್ನ ಇಲ್ಲಿಂದ ತೆರಳಿ ಅಲ್ಲಿ ವಾಸ ಮಾಡುತ್ತಿರುವ ಹಿಂದೂಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಪ್ರತಿಮೆಗೆ ಮತಾಂಧರಿಂದ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದೇ ಜ.13ಕ್ಕೆ ಕನಕಪುರ ಚಲೋಗೆ ಮುಂದಾಗಿದ್ದಾರೆ, ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

    ಸರ್ವಧರ್ಮದ ರಾಷ್ಟ್ರ ನಮ್ಮದಾಗಿದ್ದು. ಸಂವಿಧಾನದಲ್ಲೇ ಸರ್ವಧರ್ಮದ ಕಲ್ಪನೆಯನ್ನ ಹೇಳಲಾಗಿದೆ. ದೇಶದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಭೌದ್ಧರು ವಾಸಿಸುತ್ತಿದ್ದಾರೆ. ಕೆಲವರು ಸಮಾಜದ ಸ್ವಾಸ್ಥ್ಯ ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರತಿಮೆ ನಿರ್ಮಾಣದ ಜಾಗ ವಾಪಸ್ ಪಡೆಯುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದರು.

     

  • ಬಿಜೆಪಿಯವರಿಗೆ ಹಿಂದೂವಾದಿಗಳು ಬೇಕಾಗಿಲ್ಲ: ಪ್ರಮೋದ್ ಮುತಾಲಿಕ್

    ಬಿಜೆಪಿಯವರಿಗೆ ಹಿಂದೂವಾದಿಗಳು ಬೇಕಾಗಿಲ್ಲ: ಪ್ರಮೋದ್ ಮುತಾಲಿಕ್

    ಹಾಸನ: ಬಿಜೆಪಿಯವರಿಗೆ ಹಿಂದೂವಾದಿಗಳು ಬೇಕಾಗಿಲ್ಲ, ಕೇವಲ ಭ್ರಷ್ಟರು, ನೀಚರು ಹಾಗೂ ಕೊಲೆಗಡುಕರು ಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

    ಸಕಲೇಶಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಸದ್ಯದ ರಾಜಕೀಯ ಕುಲಗೆಟ್ಟು ಹೋಗಿದೆ. ಹಿಂದೂಪರ ಪಕ್ಷವೆಂದು ಗುರುತಿಸಿಕೊಂಡಿರುವ ಬಿಜೆಪಿಗೆ ಹಿಂದೂವಾದಿಗಳು ಬೇಕಾಗಿಲ್ಲ. ಕೇವಲ ಅವರಿಗೆ ಎಸ್.ಎಂ.ಕೃಷ್ಣ ಹಾಗೂ ಯೋಗೇಶ್ವರ್ ಅವರಂತಹ ಭ್ರಷ್ಟರು, ನೀಚರು ಹಾಗೂ ಕೊಲೆಗಡುಕರು ಬೇಕಾಗಿದ್ದಾರೆ. ನಮ್ಮಂಥ ಹಿಂದೂವಾದಿಗಳಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ. ಹೀಗಾಗಿ ನಾನು ಯಾವುದೇ ಪಕ್ಷಕ್ಕೂ ಸಹ ಹೋಗುವುದಿಲ್ಲವೆಂದು ಹೇಳಿದ್ದಾರೆ.

    ಈ ವೇಳೆ ಮಾಧ್ಯಮಗಳು ಬಸವಣ್ಣ ಹಾಗೂ ವಿವೇಕಾನಂದರ ಸಾವಿನ ಬಗ್ಗೆ ಪ್ರೋ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ವಿಚಾರ ಪ್ರಸ್ತಾಪಿಸಿದಾಗ, ಬಸವಣ್ಣ ಮತ್ತು ವಿವೇಕಾನಂದರ ಕೊಲೆಯಾಗಿದೆ ಅನ್ನೋದು ಹಾಸ್ಯಾಸ್ಪದ ಹಾಗೂ ಮೂರ್ಖತನದ ಹೇಳಿಕೆ. ಅವರು ಭಗವಾನ್ ಅಲ್ಲ ಸೈತಾನಾಗಿರಬೇಕು, ಹಾಗಾಗಿ ಅಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇಬ್ಬರು ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ. ಅವರು ಶುದ್ಧ ಅಯೋಗ್ಯರು ಎಂದು ಕಿಡಿಕಾರಿದರು.

    ನಂತರ ಮಾತನಾಡಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಶ್ರೀರಾಮ ಸೇನೆ ಅಥವಾ ಹಿಂದೂ ಸಂಘಟನೆಗಳ ಯಾವುದೇ ಪಾತ್ರ ಇಲ್ಲ. ಆದರೂ ತನಿಖೆಯ ದಿಕ್ಕನ್ನು ತಪ್ಪಿಸಲಾಗುತ್ತಿದೆ. ಸರ್ಕಾರಕ್ಕೆ ನಿಜವಾದ ಹಂತಕರು ಬೇಕಿಲ್ಲ, ಕೇವಲ ಹಿಂದೂ ಸಂಘಟನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಕ್ಸಲರ ಮೇಲೆ ಸಂಶಯ ಹೊಂದಿದ್ದರೂ, ಆ ನಿಟ್ಟಿನಲ್ಲಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಉಡುಪಿ/ಮೈಸೂರು: ಮೋದಿ ಸರ್ಕಾರದ ಅವಧಿ ಮುಗಿಯುವ ಮೊದಲೇ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಿರ್ಣಯವನ್ನು ಧರ್ಮ ಸಂಸದ್ ನಲ್ಲಿ ಕೈಗೊಳ್ಳಲಾಗಿದೆ.

    ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ 2019 ರ ಒಳಗಡೆ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ನಿರ್ಧಾರವನ್ನು ಈ ಧರ್ಮಸಂಸದ್ ನಲ್ಲಿ ಕೈಗೊಳ್ಳಲಾಗಿದೆ ಎಂದು ವಿಎಚ್‍ಪಿ ಮೂಲಗಳು ತಿಳಿಸಿವೆ.

    ರಾಮಮಂದಿರ ನಿರ್ಮಾಣವಾಗಲಿರುವುದರಿಂದಲೇ ಮುಂದಿನ ಧರ್ಮ ಸಂಸದ್ ಆಯೋಧ್ಯೆಯನ್ನು ನಡೆಸಲು ವಿಎಚ್‍ಪಿ ಈಗಾಗಲೇ ನಿಶ್ಚಯಿಸಿದೆ. ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾದ ಹಿನ್ನೆಲೆಯಲ್ಲಿ 2019 ರ ಒಳಗಡೆ ಮಂದಿರ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಈ ಧರ್ಮ ಸಂಸದ್‍ನಲ್ಲಿ ವ್ಯಕ್ತವಾಗಿದೆ.

    ಈಗಾಗಲೇ ಹೋರಾಟಗಳು ಪೂರ್ಣವಾಗಿದ್ದು, ಈಗ ಅಂತಿಮ ಹೋರಾಟದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದ ಬಿಟ್ಟು, ಎಲ್ಲರೂ ಒಟ್ಟಾಗಿ ರಾಮನ ಸೈನಿಕರಾಗಿ ಮುಂದುವರಿಯಬೇಕು ಎಂದು ಚಿನ್ಮಯಾನಂದಜಿ ಮಹಾರಾಜ್ ತಿಳಿಸಿದ್ದರು.

    4 ತಿಂಗಳಿನಲ್ಲಿ ಪ್ರಕರಣ ಇತ್ಯರ್ಥ: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ವಿರಾಟ್ ಹಿಂದೂಸ್ಥಾನ್ ಸಂಗಮ ಸಂಘಟನೆ ಶನಿವಾರ ಆಯೋಜಿಸಿದ್ದ ರಾಮಮಂದಿರ ಮುಂದಿನ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಜೆಪಿ ಮುಖಂಡ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಮುಂದಿನ 4 ತಿಂಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ಪ್ರಕರಣ ಇತ್ಯರ್ಥವಾಗಲಿದೆ ಎಂದು ಹೇಳಿದ್ದಾರೆ.

    ಮುಂದಿನ ದೀಪಾವಳಿ ವೇಳೆಗೆ ಸುಪ್ರೀಂಕೋರ್ಟ್ ಆದೇಶ ಬರಲಿದೆ. ಬಹುಶಃ ರಾಮಮಂದಿರ ನಿರ್ಮಾಣ ವಿಷಯವನ್ನು ದೀಪಾವಳಿಯಲ್ಲಿ ಆಚರಿಸಬಹುದು. ಜನವರಿ ಫೆಬ್ರವರಿಯಲ್ಲಿ ನ್ಯಾಯಾಲಯದಲ್ಲಿ ನಡೆಯುವ ನನ್ನ ವಾದ ಬರಿ ಉತ್ತರವಾಗುವುದಿಲ್ಲ. ರಾಮಮಂದಿರಕ್ಕಾಗಿ ಅದು ನನ್ನ ಬ್ರಹ್ಮಾಸ್ತ್ರ ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ 21 ಮಸೀದಿಗಳಿವೆ. ಅಲ್ಲಿಗೆ ಯಾರು ಸಹ ನಮಾಜ್ ಮಾಡಲು ಹೋಗುವುದೇ ಇಲ್ಲ. ಆದರೆ ರಾಮಮಂದಿರ ಇದ್ದ ಜಾಗದಲ್ಲಿ ಮಾತ್ರ ನಮಾಜ್‍ಗೆ ಹೋಗುತ್ತಾರೆ. ರಾಮಮಂದಿರ ಇದ್ದ ಜಾಗದಲ್ಲಿ ದೇವಾಲಯ ಇತ್ತು ಅಂತ ಸಾಕ್ಷಿಗಳೇ ಹೇಳಿವೆ. ದಾಖಲೆಗಳೇ ರಾಮಮಂದಿರವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

    ದೇವಾಲಯ ಹಾಗೂ ಮಸೀದಿ ಒಂದೇ ಅಲ್ಲ. ಮಸೀದಿಯಲ್ಲಿ ಮಾತ್ರ ನಮಾಜ್ ಮಾಡಬೇಕೆಂದಿಲ್ಲ. ನಮಾಜ್ ಅನ್ನು ಎಲ್ಲಿ ಬೇಕಾದರೂ ಮಾಡಬಹುದು. ಇಸ್ಲಾಮ್ ನಲ್ಲಿ ನಮಾಜ್‍ಗೆ ಕಡ್ಡಾಯ ಸ್ಥಳ ನಿಗದಿ ಮಾಡಿಲ್ಲ. ರಸ್ತೆ, ಏರ್ ಪೋರ್ಟ್, ಕೋಣೆ ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವರನ್ನ ಎಲ್ಲಿ ಬೇಕಾದರೂ ಪೂಜಿಸಲು ಆಗುವುದಿಲ್ಲ ಎಂದರು.

    ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಹಿಂದೂ ಮುಖಂಡ ಜಗದೀಶ್ ಶೆಟ್ಟಿ. ಮಾಜಿ ರಾಮದಾಸ್, ನಟಿ ಮಾಳವಿಕ ಭಾಗಿಯಾಗಿದ್ದರು.

     

     

     

     

  • ನಟ ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಹರಿದು ಅಜಾದ್ ಹಿಂದ್ ಸೇನಾ ಕಾರ್ಯಕರ್ತರ ಪ್ರತಿಭಟನೆ

    ನಟ ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಹರಿದು ಅಜಾದ್ ಹಿಂದ್ ಸೇನಾ ಕಾರ್ಯಕರ್ತರ ಪ್ರತಿಭಟನೆ

    ಚಾಮರಾಜನಗರ: ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ ಎಂದು ಚಾಮರಾಜನಗರದಲ್ಲಿ ಅಜಾದ್ ಹಿಂದ್ ಸೇನಾ ಕಾರ್ಯಕರ್ತರು ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಪ್ರತಿಭಟನೆ ನಡೆಸಿದ್ದಾರೆ.

    ನಗರದ ಸಿಂಹ ಮೂವಿ ಪ್ಯಾರಡೈಸ್ ನಲ್ಲಿ ಶುಕ್ರವಾರ ತೆರೆ ಕಂಡ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ನಟ ಚೇತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇತನ್ ಶಿವಕುಮಾರಸ್ವಾಮೀಜಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ. ಇದಲ್ಲದೇ ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.

    ಇವರು ಸಮಾಜದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಇವರ ನಟನೆಯ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಅಜಾದ್ ಹಿಂದ್ ಸೇನೆಯ ಕಾರ್ಯಕರ್ತರು ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.