Tag: Hindu–Islam

  • ಲಕ್ಷ್ಮಿ ಪೂಜೆ ನೆರವೇರಿಸಿ ಮಸೀದಿ ಉದ್ಘಾಟನೆ- ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ಲಕ್ಷ್ಮಿ ಪೂಜೆ ನೆರವೇರಿಸಿ ಮಸೀದಿ ಉದ್ಘಾಟನೆ- ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ವಿಜಯಪುರ: ಲಕ್ಷ್ಮಿ ಪೂಜೆ ನೆರವೇರಿಸಿ ನೂತನ ಮಸೀದಿ ಉದ್ಘಾಟನೆ ಮಾಡಿದ ಪ್ರಸಂಗವೊಂದು ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

    ಯಕ್ಕುಂಡಿ ಗ್ರಾಮದಲ್ಲಿ ಈ ಹಿಂದೆ ಅತ್ಯಂತ ಚಿಕ್ಕ ಮಸೀದಿ ಇತ್ತು. ಹೀಗಾಗಿ ಮುಸ್ಲಿಂ ಭಾಂದವರಿಗೆ ಪಾರ್ಥನೆ ಸಲ್ಲಿಸಲು ಸಮಸ್ಯೆ ಎದುರಾಗಿತ್ತು. ಹೀಗಾಗಿ 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮಸೀದಿ ನಿರ್ಮಿಸಲಾಗಿದ್ದು, ಇಂದು ಅದ್ಧೂರಿಯಾಗಿ ಉದ್ಘಾಟನೆ ಮಾಡಲಾಯಿತು. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಗ್ರಾಮಸ್ಥರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅನ್ಯೂನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಹೂ, ಬಾಳೆ ದಿಂಡು, ತೆಂಗಿನ ಗರಿ, ಮಾವಿನ ತೋರಣ ಕಟ್ಟಿ ನೂತನ ಮಸೀದಿಯನ್ನು ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೆ ಮಸೀದಿಯಲ್ಲಿ ನೂರಾರು ದೀಪ ಬೆಳಗಿಸಿ, ಲಕ್ಷ್ಮಿ ದೇವಿಯ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮದ ಮುಸ್ಲಿಂ ಬಾಂಧವರು, ಹಿಂದೂ-ಮುಸ್ಲಿಮರು ಒಟ್ಟಾಗಿ ಗ್ರಾಮದ ಜಾತ್ರೆ, ಮೊಹರಂ ಮಾಡುತ್ತೇವೆ. ಗ್ರಾಮದ ಅನೇಕ ರೈತರು ಮಸೀದಿ ನಿರ್ಮಾಣಕ್ಕೆ ಸಿಮೆಂಟ್ ಕೊಡಿಸಿದ್ದಾರೆ, ಕೆಲವರು ಹಣ ನೀಡಿದ್ದಾರೆ. ಗ್ರಾಮದಲ್ಲಿ ಮುಸ್ಲಿಂ-ಹಿಂದೂ ಬಾಂಧವರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಹಬ್ಬಗಳಿಗೆ ಅವರು, ಅವರ ಹಬ್ಬಗಳಿಗೆ ನಾವು ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ಈ ನಿಟ್ಟಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಮಸೀದಿ ನಿರ್ಮಾಣವಾಗಿದೆ ಎಂದು ತಿಳಿಸಿದರು.