Tag: hindi

  • ಥಿಯೇಟರ್ ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ!

    ಥಿಯೇಟರ್ ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ!

    ಹೈದರಾಬಾದ್: ಥಿಯೇಟರ್ ನಲ್ಲಿ ಸಿನಿಮಾಗೂ ಮುಂಚೆ ಪ್ರಸಾರ ಮಾಡಲಾದ ರಾಷ್ಟ್ರಗೀತೆಯ ಸಂದರ್ಭದಲ್ಲಿ ಎದ್ದು ನಿಲ್ಲದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ರಾಜೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.

    ಜಮ್ಮು-ಕಾಶ್ಮೀರದ ಬಾರಮುಲ್ಲಾ ನಿವಾಸಿಗಳಾದ ಜಮೀಲ್ ಗುಲ್, ಓಮರ್ ಫೈಜ್ ಲುನೀ ಮತ್ತು ಮುದಾಸಿರ್ ಶಬ್ಬೀರ್ ಬಂಧಿತ ವಿದ್ಯಾರ್ಥಿಗಳಾಗಿದ್ದು, ಇವರು ಸದ್ಯ ಚೆವೆಲ್ಲಾದಲ್ಲಿರೋ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

    ಈ ಮೂವರು ಯುವಕರು ಸಿನಿಪಾಲಿಸ್ ಮಂತ್ರ ಮಾಲ್ ನಲ್ಲಿ ಮಧ್ಯಾಹ್ನ 3.50ಕ್ಕೆ ಆರಂಭವಾಗುವ ಹಿಂದಿ ಸಿನಿಮಾ `ಬರೇಲಿ ಕಿ ಬರ್ಫಿ’ ನೋಡಲು ಬಂದಿದ್ದರು ಅಂತ ಶಮ್ಶಾಬಾದ್ ವಲಯದ ಉಪ ಆಯುಕ್ತ ಪಿವಿ ಪದ್ಮಜಾ ಹೇಳಿದ್ದಾರೆ.

    ಅಂದು ಸಂಜೆ ಥಿಯೇಟರ್ ಮ್ಯಾನೇಜ್‍ಮೆಂಟ್‍ನವರು ಈ ಬಗ್ಗೆ ದೂರು ನೀಡಿದ್ದರು. ಬಳಿಕ ಮೂವರು ವಿದ್ಯಾರ್ಥಿಗಳ ವಿರುದ್ಧ ರಾಷ್ಟ್ರ ಗೌರವಕ್ಕೆ ಅವಮಾನ ನಿಯಂತ್ರಣ ಕಾಯ್ದೆಯ ಸೆಕ್ಷನ್ 2ರ ಅಡಿ ರಾಜೇಂದ್ರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಥಿಯೇಟರ್ ನಲ್ಲಿ ಯಾವುದೇ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಬೇಕೆಂಬುದು ಸುಪ್ರೀಂ ಕೋರ್ಟ್ ಆದೇಶವಾಗಿದೆ.

  • ಕನ್ನಡದಲ್ಲಿ ಯಾಕೆ ಮಾತನಾಡಬೇಕು: ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯಭಾಷಿಕರು ನೋಡ್ಲೇಬೇಕಾದ ವಿಡಿಯೋ

    ಕನ್ನಡದಲ್ಲಿ ಯಾಕೆ ಮಾತನಾಡಬೇಕು: ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯಭಾಷಿಕರು ನೋಡ್ಲೇಬೇಕಾದ ವಿಡಿಯೋ

    ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಯಾಕೆ ವಿರೋಧಿಸಬೇಕು? ದೇಶದ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಭಾಷೆಗಳು ಹೇಗೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಕನ್ನಡಿಗರೊಬ್ಬರು ಹಿಂದಿಯಲ್ಲಿ ವಿವರಿಸುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಉದ್ಯಮಿ ಪ್ರಶಾಂತ್ ಸಂಬರ್ಗಿ ಅವರು ಈ ವಿಡಿಯೋದಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿರುವ ಹೊರ ರಾಜ್ಯದವರಿಗೆ ಕನ್ನಡ ಕಲಿಯುವಂತೆ ಮನವಿ ಮಾಡಿದ್ದಾರೆ.

    ವಿಡಿಯೋದಲ್ಲಿ ಹೇಳಿದ್ದೇನು?
    ನಾನು ಯಾವುದೇ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ. ಯಾವುದೇ ರಾಜಕೀಯ ಉದ್ದೇಶವೂ ನನಗೆ ಇಲ್ಲ. ಮೆಟ್ರೋವನ್ನು ನಾವು ಪ್ರೀತಿಯಿಂದ ‘ನಮ್ಮ ಮೆಟ್ರೋ’ ಎಂದು ಕರೆದಿದ್ದೇವೆ. ಆದರೆ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿದ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕಳೆದ 70 ವರ್ಷಗಳಿಂದ ಕೇಂದ್ರ ಸರ್ಕಾರಗಳು ಹಿಂದಿ ಅಭಿವೃದ್ಧಿಗೆ 1700 ಕೋಟಿ ರೂ. ಅನುದಾನ ಕೊಟ್ಟಿದೆ.

    ಪ್ರಾದೇಶಿಕ ಭಾಷೆಗಳು ನಮ್ಮ ನಾಡಿನ ಸೊಬಗು. ಭಾರತದ ವಿವಿಧತೆಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದೆ. ಆದರೆ ಹಿಂದಿ ದಬ್ಬಾಳಿಕೆಯಿಂದ ವೈವಿಧ್ಯತೆಯಲ್ಲಿ ಏಕತೆಯ ಬದಲು ಮೂರ್ಖತೆಯಲ್ಲಿ ಏಕತೆ ಕಾಣುತ್ತಿದ್ದೇವೆ. ಬಿಹಾರದ ಮೈಥಿಲಿ, ಗುಜರಾತಿನ ಸಿಂಧಿ, ಅಸ್ಸಾಮಿನ ಬೋಡೋ ಭಾಷೆಯನ್ನು ಈಗಾಗಲೇ ಕೊಲ್ಲಲಾಗಿದೆ.

    ಕನ್ನಡ ಹೇಗೆ ಸಾಯುತ್ತದೆ ಎಂದು ನೀವು ಕೇಳಬಹುದು. 18ನೇ ಶತಮಾನದಲ್ಲಿ ಚಾರ್ಲ್ಸ್ ಡಾರ್ವಿನ್ ವಿಕಾಸವಾದ ನಿಮಗೆ ತಿಳಿದಿರಬಹುದು. ಮನುಷ್ಯನಿಗೂ ಮಂಗನಂತೆ ಬಾಲ ಇತ್ತು. ಆದರೆ ನಾವು ಅದನ್ನು ಬಳಸಲಿಲ್ಲ. ಹೀಗಾಗಿ ಬಾಲ ಮಾಯವಾಗಿದೆ ಎನ್ನುವ ವಿಕಾಸವಾದ ಪ್ರಾದೇಶಿಕ ಭಾಷೆಗಳಿಗೂ ಅನ್ವಯವಾಗುತ್ತದೆ. ಹಿಂದಿ ಹೇರಿಕೆ ಜಾಸ್ತಿಯಾಗಿ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾದರೆ ಈ ಭಾಷೆಗಳು ಕಣ್ಮರೆಯಾಗಬಹುದು. ಹೀಗಾಗಿ ಕನ್ನಡ ಕಣ್ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

    ಬೇರೆ ರಾಜ್ಯಗಳಿಂದ ಬೆಂಗಳೂರಿಗೆಂದು ಉದ್ಯೋಗಕ್ಕೆ ಬಂದವರಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಒಂದು ಕನ್ನಡ ಕಲಿಯಲು ಒಂದು ಹೆಜ್ಜೆ ಇಟ್ಟರೆ ಕನ್ನಡಿಗರು ನಿಮಗೆ ಕನ್ನಡ ಕಲಿಸಲು ಎರಡು ಹೆಜ್ಜೆ ಮುಂದಕ್ಕೆ ಇಡುತ್ತಾರೆ. ನಾವೆಲ್ಲರೂ ಪ್ರಾದೇಶಿಕ ಭಾಷೆಯನ್ನು ಉಳಿಸಲು ಪ್ರಮಾಣ ಮಾಡೋಣ. ಈ ಮೂಲಕ ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸೋಣ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಅಚ್ಚ ಕನ್ನಡಿಗರಾಗಿರುವ ಇವರು ‘ನಿಜವಾದ ಕನ್ನಡಿಗ ಯಾರು’ ಎನ್ನುವ ಶೀರ್ಷಿಕೆಯ ಅಡಿ ವಿಡಿಯೋಗಳನ್ನು ತರುತ್ತಿದ್ದಾರೆ. ಡಬ್ಬಿಂಗ್ ಪರವಾಗಿರುವ ಇವರು ಕನ್ನಡ ಸಾಹಿತ್ಯ ಓದುವವರು, ಕನ್ನಡದಲ್ಲಿ ವ್ಯವಹರಿಸುವವರು ನಿಜವಾದ ಕನ್ನಡಿಗರು ಎಂದು ಹೇಳಿದ್ದಾರೆ. ಬಾಹುಬಲಿ ಸತ್ಯರಾಜ್ ಗಲಾಟೆ ಸಂದರ್ಭದಲ್ಲಿ ಇವರು ವಿಡಿಯೋ ಮೂಲಕ ಕನ್ನಡಿಗರು ಯಾರು ಎಂದು ವಿವರಿಸಿದ್ದರು.
    ಈ ವಿಡಿಯೋಗೆ ಕನ್ನಡ ಸಂಘಟನೆಗಳಿಂದ ಆಕ್ಷೇಪ ಕೇಳಿ ಬಂದಿತ್ತು.

    ವಿಡಿಯೋ ವೀಕ್ಷಿಸಲು ಲಿಂಕ್: https://www.facebook.com/VS.Prashanth.Sambargi

     

  • ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸಲ್ಲ- ಮೋದಿ ಸರ್ಕಾರಕ್ಕೆ ಸಿಎಂ ಪತ್ರ

    ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸಲ್ಲ- ಮೋದಿ ಸರ್ಕಾರಕ್ಕೆ ಸಿಎಂ ಪತ್ರ

    ಬೆಂಗಳೂರು: ಕನ್ನಡ ಧ್ವಜದ ವಿಚಾರದ ಮುಂದಿಟ್ಟು ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದ್ದ ಸಿಎಂ, ಇದೀಗ ಮತ್ತೊಮ್ಮೆ ಕನ್ನಡ ಪರ ನಿಲುವು ತಳೆದಿದ್ದಾರೆ. ಮೆಟ್ರೋದಲ್ಲಿ ಹಿಂದಿ ಬಳಕೆಗೆ ವಿರೋಧ ವ್ಯಕ್ತಪಡಿಸಿರುವ ಸಿಎಂ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಬಿಜೆಪಿಯನ್ನ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

    ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ತೆರವಿಗೆ ನಿರ್ಧರಿಸಿರುವ ಸಿಎಂ, ಬಿಎಂಆರ್‍ಸಿಎಲ್ ಗೆ ಹಿಂದಿ ತೆರವಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಪತ್ರ ಬರೆದು, ಮೆಟ್ರೋದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವ ಹೆಚ್ಚಿದೆ. ಕೇಂದ್ರದ ನೆರವಿದ್ದರೂ ಮೆಟ್ರೋದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಪಾಲು ಹೆಚ್ಚಿದೆ. ಹೀಗಾಗಿ ಇಲ್ಲಿ ತ್ರಿಭಾಷಾ ಸೂತ್ರ ಅನ್ವಯ ಸರಿಯಲ್ಲ ಎಂದು ಬರೆದಿದ್ದಾರೆ.

    ರಾಜ್ಯದಲ್ಲಿ ಹಿಂದಿ ಬಳಕೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಜನರ ಭಾವನೆಗಳಿಗೆ ಸರ್ಕಾರ ಸ್ಪಂದಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಹಿಂದಿ ಬಳಕೆ ನಿಲ್ಲಿಸುವಂತೆ ಬಿಎಂಆರ್‍ಸಿಎಲ್ ಗೆ ಸೂಚನೆ ನೀಡಿದ್ದೇವೆ ಅಂತಾ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್‍ಗೆ ಸಿಎಂ ಪತ್ರ ಬರೆದಿದ್ದಾರೆ.

     

  • ಬ್ಯಾಂಕಿನಲ್ಲಿ ಕನ್ನಡ ಯಾಕಿಲ್ಲ: ಕನ್ನಡಿಗರಿಂದ #NammaBankuKannadaBeku ಅಭಿಯಾನ

    ಬ್ಯಾಂಕಿನಲ್ಲಿ ಕನ್ನಡ ಯಾಕಿಲ್ಲ: ಕನ್ನಡಿಗರಿಂದ #NammaBankuKannadaBeku ಅಭಿಯಾನ

    ಬೆಂಗಳೂರು: ಭಾರತೀಯ ಭಾಷೆಗಳಲ್ಲಿ ಸೇವೆ ದೊರಕಿಸಬೇಕೆಂಬ ಕಾನೂನು ಇದ್ದರೂ ಬ್ಯಾಂಕುಗಳಲ್ಲಿ ಎಲ್ಲಾ ಸೇವೆಗಳೂ ಭಾರತೀಯ ಭಾಷೆಗಳಲ್ಲಿ ದೊರೆಯುತ್ತಿಲ್ಲದ ವಿಷಯವಾಗಿ ಜಾಗೃತಿ ಮೂಡಿಸಲು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

    ಕನ್ನಡ ಗ್ರಾಹಕರ ಕೂಟವು #NammaBankuKannadaBeku ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದು ಮಂಗಳವಾರ ಸಂಜೆಯಿಂದ ಟ್ರೆಂಡಿಂಗ್ ಟಾಪಿಕ್ ಆಗಿದೆ.

    ಚೆಕ್, ಎಟಿಎಂ ಸೇರಿದಂತೆ ಹಲವು ಸೇವೆಗಳಲ್ಲಿ ಕನ್ನಡ ಯಾಕಿಲ್ಲ ಎಂದು ಬ್ಯಾಂಕ್ ಗಳನ್ನು ಪ್ರಶ್ನಿಸಿ ಟ್ವೀಟ್ ಮಾಡುತ್ತಿದ್ದಾರೆ. ನಾವು ಸುಮ್ಮನೆ ಇದ್ದ ಕಾರಣ ಬ್ಯಾಂಕಿನಲ್ಲಿ ಕನ್ನಡ ಮಾಯವಾಗಿದೆ. ಇನ್ನು ಮುಂದೆ ಈ ರೀತಿ ಆಗಬಾರದು. ಮೆಟ್ರೋದಲ್ಲಿ ಹಿಂದಿ ಹೇರಿಕೆ ಅಭಿಯಾನಕ್ಕೆ ಕೈ ಜೋಡಿಸಿದಂತೆ ಎಲ್ಲರೂ ಈ ಅಭಿಯಾನಕ್ಕೆ ಕೈ ಜೋಡಿಸಬೇಕೆಂದು ಕನ್ನಡಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಸ್‍ಬಿಎಂ, ಕಾರ್ಪೋರೇಷನ್ ಬ್ಯಾಂಕ್ ಗಳು ಕರ್ನಾಟಕದಲ್ಲೇ ಹುಟ್ಟಿದರೂ ಈಗ ಹಿಂದಿ ಪ್ರಚಾರ ಮಾಡುವ ಸಭಾಗಳಾಗಿ ಪರಿವರ್ತನೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/Bond_Jay_Bond/status/884766681205137409

    https://twitter.com/Abhinandan248/status/884580538165547008

    https://twitter.com/rsponnathpur/status/884768356284350465

    https://twitter.com/Ashith02/status/884751507463192577

    https://twitter.com/vivek_shankar15/status/884754502858842112

    https://twitter.com/vivek_shankar15/status/884752522685980672

  • ನಮ್ಮ ಮೆಟ್ರೋದಲ್ಲಿ ಹಿಂದಿ ಬೇಕು: ಡಿವಿಎಸ್ ಬ್ಯಾಟಿಂಗ್

    ನಮ್ಮ ಮೆಟ್ರೋದಲ್ಲಿ ಹಿಂದಿ ಬೇಕು: ಡಿವಿಎಸ್ ಬ್ಯಾಟಿಂಗ್

    ಬೆಂಗಳೂರು: ಮಾತೃ ಭಾಷೆ ಕನ್ನಡ ಮೊದಲು ಇರಬೇಕು, ಆ ಬಳಿಕ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆ ಹಿಂದಿ ಇರಬೇಕು ನಂತ್ರ ವಿಶ್ವದಲ್ಲಿ ಹೆಚ್ಚು ಮಾತನಾಡುವ ಭಾಷೆ ಇಂಗ್ಲೀಷ್ ಇರಬೇಕು ಎಂದು ಹೇಳುವ ಮೂಲಕ ಮೆಟ್ರೋನಲ್ಲಿ ಹಿಂದಿ ಭಾಷೆ ಹೇರಿಕೆಯನ್ನ ಕೇಂದ್ರ ಸಚಿವ ಸದಾನಂದ ಗೌಡ ಸಮರ್ಥಿಸಿಕೊಂಡಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಕರ್ನಾಟಕಕ್ಕೆ ಮಾತ್ರ ಸೀಮಿತ ಅಲ್ಲ. ವಿಶ್ವದಲ್ಲಿಯೇ ಬೆಂಗಳೂರು ಪ್ರಸಿದ್ಧಿ ಹಾಗಾಗಿ ತ್ರಿಭಾಷಾ ಸೂತ್ರ ಇರಲೇಬೇಕು ಎಂದು ಡಿವಿಎಸ್ ಹೇಳಿದ್ದಾರೆ.

    ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಮೆಟ್ರೋದಲ್ಲಿ ತ್ರಿಭಾಷ ಸೂತ್ರ ಅಳವಡಿಕೆ ಸಾಧ್ಯವಿಲ್ಲ ಎಂಬುವುದರ ಬಗ್ಗೆ 2016ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ರು. ಈ ವಿಚಾರವಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವಂತೆ ಆಗ್ರಹಿಸಿದ್ರು.

    ಆದೇ 2017ರಲ್ಲಿ ಕರೋಲಾ ಊಲ್ಟಾ ಹೊಡೆದಿದ್ದಾರೆ. ಈಗ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಅನುದಾನವಿರೋದ್ರಿಂದ ನಾವು ಹಿಂದೆ ಹಾಕಬೇಕು ಅಂತಾ ತಿಳಿಸಿದ್ದಾರೆ. ಈ ವಿಚಾರ ಕನ್ನಡ ಪರ ಸಂಘಟನೆಗಳ ಆಕ್ರೊಶಕ್ಕೆ ಕಾರಣವಾಗಿದ್ದು, ಕರವೇ ಅಧ್ಯಕ್ಷ ನಾರಾಯಣ ಗೌಡ ಇದಕ್ಕೆ ಕರೋಲಾ ಅವರ ಹಿಂದಿ ಪ್ರೇಮವೇ ಕಾರಣ ಹಾಗಾಗಿ ಕರೋಲ ಅವರನ್ನು ರಾಜ್ಯದಿಂದ ಹೊರ ಹಾಕುವಂತೆ ಕಿಡಿಕಾರಿದ್ದಾರೆ.

    ಒಟ್ಟಾರೆ, ಮೆಟ್ರೋನಲ್ಲಿ ಹಿಂದಿ ಸದ್ಯ ಭಾಷಾ ವಿವಾದಕ್ಕೆ ಕಾರಣವಾಗಿದೆ. ಹಿಂದಿ ಪ್ರಿಯರ ಓಲೈಕೆಗಾಗಿ ಕನ್ನಡಕ್ಕೆ ಅವಮಾನ ಮಾಡ್ಬೇಡಿ ಅನ್ನೋದು ಕನ್ನಡ ಸಂಘಟನೆಗಳ ಆಗ್ರಹವಾಗಿದೆ.

  • ಮೆಟ್ರೋ ನಿಲ್ದಾಣದಲ್ಲಿ  ಹಿಂದಿ ನಾಮಫಲಕಗಳಿಗೆ ಟೇಪ್!

    ಮೆಟ್ರೋ ನಿಲ್ದಾಣದಲ್ಲಿ ಹಿಂದಿ ನಾಮಫಲಕಗಳಿಗೆ ಟೇಪ್!

    ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ನಾಮಫಲಕಕ್ಕೆ ಟೇಪ್ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಕಳೆದ ಕೆಲ ದಿನಗಳಿಂದ ನಮ್ಮ ಮೆಟ್ರೋ ನಿಲ್ದಾಣದ ಫಲಕಗಳಲ್ಲಿ ಹಿಂದಿ ಬೇಡ ಅನ್ನೊ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಚಿಕ್ಕಪೇಟೆ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಹಿಂದಿ ನಾಮಫಲಕಕ್ಕೆ ಟೇಪ್ ಹಾಕಲಾಗಿದೆ.

    ಇದನ್ನೂ ಓದಿ: #NammaMetroHindiBeda ಬೆಂಗಳೂರಿನಲ್ಲಿ ನಂ.1 ಟ್ರೆಂಡಿಂಗ್ ಟಾಪಿಕ್

    ಆದ್ರೆ ಈ ಬಗ್ಗೆ ಬಿಎಮ್‍ಆರ್‍ಸಿಎಲ್ ಅಧಿಕಾರಿಗಳು ಮಾತ್ರ ನಾವು ಹಿಂದಿ ನಾಮಫಲಕಕ್ಕೆ ಟೇಪ್ ಹಾಕಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ರಾತ್ರಿ ಓಡಾಡುತ್ತಿದ್ದು. ಅವರೇ ಈ ರೀತಿ ಮಾಡಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

  • ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

    ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

     

    ನವದೆಹಲಿ: ಪ್ರಧಾನಿ ಮೋದಿಯ ಐತಿಹಾಸಿಕ ಇಸ್ರೇಲ್ ಭೇಟಿಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಜೆಗಳು ಮೋದಿಗೆ ಹಿಂದಿಯಲ್ಲಿ ನಮಸ್ತೆ ಮೋದಿಜೀ ಎಂದು ಸ್ವಾಗತ ಕೋರಿದ್ದಾರೆ. ಇದರ ವಿಡಿಯೋವನ್ನ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ.

    ಜುಲೈ 4ರಿಂದ ಆರಂಭವಾಗಿ 3 ದಿನಗಳ ಭೇಟಿಗೆ ಮೋದಿ ಇಸ್ರೇಲ್‍ಗೆ ತೆರಳಲಿದ್ದಾರೆ. ಈ ಮೂಲಕ ಮೋದಿ ಇಸ್ರೇಲ್‍ಗೆ ಭೇಟಿ ನೀಡುತ್ತಿರೋ ಮೊದಲ ಭಾರತೀಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಬುಧವಾರ ಸಂಜೆ ವಿದೇಶಾಂಗ ಸಚಿವಾಲಯ ಮೋದಿ ಭೇಟಿಯನ್ನು ಅಧಿಕೃತವಾಗಿ ಘೊಷಿಸಿದೆ. ಜೆರುಸಲೆಂನಲ್ಲಿನ ಇಸ್ರೇಲ್ ಪ್ರಜೆಗಳು ಮೋದಿ ಅವರಿಗೆ ಸ್ವಾಗತ ಕೋರಿರುವ ವಿಡಿಯೋವನ್ನ ಬುಧವಾರ ರಾತ್ರಿ ಇಸ್ರೇಲ್ ರಾಯಭಾರ ಕಚೇರಿ ಹಂಚಿಕೊಂಡಿದೆ.

    ಮಹಿಳೆಯೊಬ್ಬರು ತಮ್ಮ ಎರಡೂ ಕೈಗಳನ್ನ ಜೋಡಿಸಿ, ನಮಸ್ತೇ ಮೋದಿಜೀ, ಇಸ್ರೇಲ್ ಮೆ ಆಪ್ ಕಾ ಸ್ವಾಗತ್ ಹೈ (ಇಸ್ರೇಲ್‍ಗೆ ನಿಮಗೆ ಸ್ವಾಗತ) ಎಂದು ಹೇಳಿದ್ದಾರೆ.

    ಮತ್ತೊಬ್ಬರು “ಭಾರತ್ ಔರ್ ಇಸ್ರೇಲ್ ಕೆ ಸಂಬಂಧೋ ಮೆ ವೃದ್ಧಿ ಹೋ ಔರ್ ಮಜ್‍ಬೂತ್ ಬನೆ (ಭಾರತ ಹಾಗು ಇಸ್ರೇಲ್ ನಡುವಿನ ಬಾಂಧವ್ಯ ವೃದ್ಧಿಸಲಿ ಹಾಗೂ ಗಟ್ಟಿಯಾಗಲಿ ಎಂದು ಆಶಿಸುತ್ತೇನೆ) ಎಂದಿದ್ದಾರೆ.

    ಇದಲ್ಲದೆ ರಾಯಭಾರ ಕಚೇರಿಯ ನವದೆಹಲಿ ಸಿಬ್ಬಂದಿ ಕೂಡ ಒಟ್ಟಾಗಿ ಹಿಂದಿಯಲ್ಲಿ ಆಪ್ ಕೀ ಯಾತ್ರಾ ಶುಭ್ ಹೋ (ನಿಮ್ಮ ಪ್ರಯಾಣ ಸುಖಕರವಾಗಿರಲಿ) ಎಂದು ಕೋರಿದ್ದಾರೆ. ಭಾರತದ ಇಸ್ರೇಲ್ ರಾಯಭಾರಿ ಡೇನಿಯಲ್ ಕಾರ್ಮನ್ ಕೂಡ ವಿಡಿಯೋದ ಕೊನೆಯಲ್ಲಿ ಹಿಂದಿ ಹಾಗೂ ಹಿಬ್ರೀವ್ ಭಾಷೆಯಲ್ಲಿ ಸ್ವಾಗತ ಕೋರಿದ್ದಾರೆ.

    ಈ ವಿಡಿಯೋವನ್ನ ಈಗಾಗಲೇ 5,700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು 3,600ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಮೋದಿ ಕೂಡ ಗುರುವಾರ ಬೆಳಿಗ್ಗೆ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಬಹುತ್ ಬಹುತ್ ಧನ್ಯವಾದ್ ಎಂದಿದ್ದಾರೆ.

    ಇಸ್ರೇಲ್ ಪ್ರಜೆಗಳ ಈ ಕಾರ್ಯವನ್ನು ಭಾರತೀಯರು ಕೂಡ ಶ್ಲಾಘಿಸಿದ್ದಾರೆ.

    https://twitter.com/Dayweekaa/status/880265480291971072?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fnamaste-modi-ji-ahead-of-visit-israelis-welcome-pm-narendra-modi-in-hindi-1718456

  • ಹಿಂದಿ ಹೇರಿಕೆ ಅಭಿಯಾನಕ್ಕೆ ಜಯ: ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಣ

    ಹಿಂದಿ ಹೇರಿಕೆ ಅಭಿಯಾನಕ್ಕೆ ಜಯ: ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಣ

     

    ನವದೆಹಲಿ: ರೈಲ್ವೆ ಟಿಕೆಟ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಯಲ್ಲೂ ಮುದ್ರಿಸಲು ಭಾರತೀಯ ರೈಲ್ವೆ ಇಲಾಖೆಯ ಪ್ರಯಾಣಿಕರ ಸೌಲಭ್ಯ ಸಮಿತಿ ಸಮ್ಮತಿಸಿದೆ. 2018ರ ಜನವರಿ 1ರಿಂದ ಈ ಸೌಲಭ್ಯ ಸಿಗಲಿದೆ.

    ಟಿಕೆಟ್ ವಿತರಿಸಲಾಗುವ ಪ್ರದೇಶಕ್ಕೆ ತಕ್ಕಂತೆ ಆಯಾ ರಾಜ್ಯದ ಭಾಷೆಯಲ್ಲಿ ಟಿಕೆಟ್ ಮುದ್ರಣವಿರಲಿದೆ. ಅಂದ್ರೆ ನೀವು ಕನ್ಯಾಕುಮಾರಿಯಿಂದ ಶುರುವಾಗಿ 5 ರಾಜ್ಯಗಳನ್ನ ಸಂಚರಿಸೋ ರೈಲಿಗೆ ಕರ್ನಾಟಕದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದ್ರೆ ನಿಮ್ಮ ಟಿಕೆಟ್ ಕನ್ನಡದಲ್ಲೇ ಇರಲಿದೆ.

    ಬುಧವಾರದಂದು ನಡೆದ ಸಭೆಯಲ್ಲಿ ಸಮಿತಿಯ ಸದಸ್ಯರಾದ ಆಶೀರ್ವತಂ ಆಚಾರಿ ಅವರು ಈ ವಿಚಾರವನ್ನ ಪ್ರಸ್ತಾಪಿಸಿದ ನಂತರ ಸಮಿತಿ ಇದಕ್ಕೆ ಸಮ್ಮತಿ ಸೂಚಿಸಿದೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಆಚಾರಿ, ತಮಿಳುನಾಡಿನಲ್ಲಿ ಸಾಕಷ್ಟು ಜನ ರೈಲ್ವೆ ಟಿಕೆಟ್‍ನಿಂದ ತೊಂದರೆ ಅನುಭವಿಸುತ್ತಿದ್ದರು. ಕೆಲವರಿಗೆ ಅವರು ಸರಿಯಾದ ಟಿಕೆಟ್ ಹೊಂದಿದ್ದಾರಾ ಇಲ್ಲವಾ ಎಂಬುದೇ ಗೊತ್ತಿರುತ್ತಿರಲಿಲ್ಲ. ಟಿಕೆಟ್ ಮೇಲೆ ಮುದ್ರಣವಾಗಿರೋದನ್ನ ಓದಲು ಬಾರದೆ ಹಲವು ಬಾರಿ ತಮ್ಮದಲ್ಲದ ತಪ್ಪಿಗೆ ಜನ ದಂಡ ಕಟ್ಟಿದೂ ಇದೆ ಎಂದು ಹೇಳಿದ್ದಾರೆ.

    ಮೊದಲಿಗೆ ಅಧಿಕಾರಿಗಳು ಮೂರನೇ ಭಾಷೆಯನ್ನ ಸೇರಿಸಲು ತಯಾರಿರಲಿಲ್ಲ. ಯಾಕಂದ್ರೆ ದೀರ್ಘ ಕಾಲದಿಂದ ದ್ವಿಭಾಷಾ ನೀತಿಯ ಜೊತೆಗೆ ಕೆಲಸ ಮಾಡಿದ್ರು. ಮತ್ತೊಂದು ಕಾರಣವೆಂದರೆ ಅವರು ಇನ್ನೂ ಆರ್ಕಿಯಾಕ್ ಕೊಬೊಲ್ ಸಾಫ್ಟ್ ವೇರ್ ಬಳಸುತ್ತಿದ್ದು, ಇದನ್ನು ಕೂಡಲೇ ಬದಲಾಯಿಸೋದು ಕಷ್ಟವಾಗಿತ್ತು.

    ಅದ್ರೆ ಡಿಜಿಟಲ್ ಯುಗದಲ್ಲಿ ಇದನ್ನ ಪರಿಗಣಿಸಲು ಸಾಧ್ಯವಿಲ್ಲ. ದೇಶದಲ್ಲಿ ರೈಲ್ವೆ ಇಲಾಖೆ ಅತ್ಯಂತ ದೊಡ್ಡ ಸೇವಾ ಪೂರೈಕೆದಾರ ಆಗಿದೆ. ಈಗಿನ ದಿನಗಳಲ್ಲಿ ಸೆಲ್‍ಫೋನ್ ಸಂಸ್ಥೆಗಳೂ ಕೂಡ ಶುಲ್ಕ ರಹಿತ ನಂಬರ್‍ಗೆ ಕರೆ ಮಾಡಿದಾಗ 3 ಭಾಷೆಗಳಲ್ಲಿ ಸೇವೆ ನೀಡುತ್ತಿವೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಮೂರನೆಯ, ಸ್ಥಳೀಯ ಭಾಷೆಯನ್ನು ತರುವುದು ನಮ್ಮ ಕರ್ತವ್ಯವಲ್ಲವೇ ಎಂದು ಆಚಾರಿ ಹೇಳಿದ್ದಾರೆ.

    ಈ ವರ್ಷಾಂತ್ಯದ ವೇಳೆಗೆ ಸಾಫ್ಟ್ ವೇರ್ ಅಪ್‍ಡೇಟ್ ಮಾಡಲಾಗುತ್ತದೆ. ಇದು ಎಲ್ಲಾ ವರ್ಗದ ಪ್ರಯಾಣಕ್ಕೆ ಹಾಗೂ ಕೌಂಟರ್‍ಗಳಲ್ಲಿ ವಿತರಿಸಲಾಗುವ ಪ್ಯಾಸೆಂಜರ್ ರೈಲುಗಳ ಟಿಕೆಟ್‍ಗಳಿಗೆ ಅನ್ವಯವಾಗಲಿದೆ. ಆದ್ರೆ ಆನ್‍ಲೈನ್‍ನಲ್ಲಿ ಬುಕಿಂಗ್ ಮಾಡಿದಾಗ ಅನ್ವಯವಾಗುವುದಿಲ್ಲ. (ಜಗತ್ತಿನ ಯಾವುದೇ ಭಾಗದಲ್ಲಿದ್ರೂ ಆನ್‍ಲೈನ್ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಈ ವೇಳೆ ಸ್ಥಳೀಯ ಭಾಷೆಯನ್ನು ಅಳವಡಿಸುವುದು ಕಷ್ಟವಾಗಲಿದೆ)

    ಈ ಮೂಲಕ ಹಿಂದಿ ಹೇರಿಕೆ ವಿರುದ್ಧ ನಡೆಸಲಾಗಿದ್ದ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ. ರೈಲ್ವೆ ಟಿಕೆಟ್‍ಗಳಲ್ಲಿ ಕನ್ನಡ ಇರಲಿದೆ ಎಂಬುದನ್ನು ಕೇಳಲು ತಾತ್ಕಾಲಿಕವಾಗಿ ಖುಷಿಯ ವಿಚಾರ. ಆದ್ರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಟಿಕೆಟ್ ಲಭ್ಯವಿದೆ. ಆದ್ರೆ ದೇಶದೆಲ್ಲೆಡೆ ಹಿಂದಿ ಟಿಕೆಟ್ ಲಭ್ಯತೆ ಹಾಗೇ ಇದೆ. ಆದ್ರೂ ಈ ಕ್ರಮವನ್ನ ಸ್ವಾಗತಿಸುತ್ತೇವೆ ಎಂದು ಕಳೆದ ವಾರ ಬೆಂಗಳೂರಿನಲ್ಲಿ #ಹಿಂದಿಬೇಡ ಅಭಿಯಾನ ಮಾಡಿದ್ದ ವಲ್ಲೀಶ್ ಕುಮಾರ್ ಪ್ರತಿಕೆಯೊಂದಕ್ಕೆ ಹೇಳಿದ್ದಾರೆ.

  • ಮಾಲ್‍ನಲ್ಲಿ ಹಿಂದಿ ದರ್ಬಾರ್- ಪ್ರಶ್ನಿಸಿದ ಯುವತಿಗೆ ಆವಾಜ್, ದೌರ್ಜನ್ಯ

    ಮಾಲ್‍ನಲ್ಲಿ ಹಿಂದಿ ದರ್ಬಾರ್- ಪ್ರಶ್ನಿಸಿದ ಯುವತಿಗೆ ಆವಾಜ್, ದೌರ್ಜನ್ಯ

    ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲ್‍ವೊಂದರಲ್ಲಿ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಟೆಕ್ಕಿ ಯವತಿಗೆ ಮಾಲ್ ಸಿಬ್ಬಂದಿ ಅವಾಜ್ ಹಾಕಿರೋ ಘಟನೆ ನಡೆದಿದೆ.

    ಬೆಳ್ಳಂದೂರು ಸೆಂಟ್ರಲ್ ಮಾಲ್‍ನಲ್ಲಿ ಶಾಪಿಂಗ್‍ಗೆ ಹೋದ ಟೆಕ್ಕಿ ಲಕ್ಷ್ಮಿ ಅವರಿಗೆ ಹಿಂದಿಯಲ್ಲಿಯೇ ಮಾತಾನಾಡಿ. ನಾನ್ಯಾಕೆ ಕನ್ನಡ ಕಲಿಯಲಿ ಅಂತಾ ಅಲ್ಲಿನ ಸಿಬ್ಬಂದಿ ಕಿರಿಕ್ ಮಾಡಿದ್ದಾನೆ. ಕೌಂಟರ್ ಹುಡ್ಗನ ವಿರುದ್ಧ ಮಾಲ್‍ನ ಹೆಲ್ಪ್ ಡೆಸ್ಕ್ ನಲ್ಲಿ ದೂರು ನೀಡಲು ಹೋದಗ ಮಾಲ್ ಸಿಬ್ಬಂದಿ ಯುವತಿಯುನ್ನ ದಬಾಯಿಸಿದ್ದಾರೆ.

    ಈ ದೃಶ್ಯವನ್ನು ಸೆರೆಹಿಡಿಯಲು ಮೊಬೈಲ್ ಬಳಸಿದಾಗ ಅನುಮತಿ ಇಲ್ಲದೆ ರೆಕಾರ್ಡ್ ಯಾಕೆ ಮಾಡ್ತಿದ್ದೀರಾ? ಎಂದು ಹೇಳಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಅವನಿಗೆ ಕನ್ನಡ ಬರಲ್ಲ, ಇಂಗ್ಲೀಷ್ ಕೂಡ ಬರಲ್ಲ. ನಾವು ಹೇಗೆ ಮಾತಾಡೋದು ಎಂದು ಯುವತಿ ಪ್ರಶ್ನಿಸಿದ್ದಕ್ಕೆ ನಾವು ಮಾತಾಡ್ತಿದ್ದೀವಲ್ಲ ಎಂದು ಉತ್ತರಿಸಿ ಸುಮ್ಮನಾಗಿದ್ದಾರೆ.

    ಮೊಬೈಲ್ ರೆಕಾರ್ಡ್ ಮಾಡಿದ್ರೆ ಅಷ್ಟೇ. ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ ಅಂತಾ ಅವಾಜ್ ಹಾಕಿದ್ರು ಎಂದು ಟೆಕ್ಕಿ ಲಕ್ಷ್ಮೀ ಆರೋಪಿಸಿದ್ದಾರೆ.

    https://www.youtube.com/watch?v=NF0Ky-Z1Uow&feature=youtu.be

     

  • #NammaMetroHindiBeda ಬೆಂಗಳೂರಿನಲ್ಲಿ ನಂ.1 ಟ್ರೆಂಡಿಂಗ್ ಟಾಪಿಕ್

    #NammaMetroHindiBeda ಬೆಂಗಳೂರಿನಲ್ಲಿ ನಂ.1 ಟ್ರೆಂಡಿಂಗ್ ಟಾಪಿಕ್

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಅನಾವಶ್ಯಕವಾಗಿ ಬಳಸಲಾಗುತ್ತಿರುವ ಹಿಂದಿ ಭಾಷೆಯನ್ನು ವಿರೋಧಿಸಿ ಐಟಿ ಕನ್ನಡಿಗರು ಟ್ವಿಟ್ಟರ್ ಅಭಿಯಾನವನ್ನು ಆಯೋಜಿಸಿದ್ದು ಬೆಂಗಳೂರಿನಲ್ಲಿ ನಂಬರ್ 1 ಟ್ರೆಂಡಿಂಗ್ ಟಾಪಿಕ್ ಆಗಿದೆ.

    ಬನವಾಸಿ ಬಳಗವು ಈ ಟ್ವಿಟರ್ ಅಭಿಯಾನವನ್ನು ಆಯೋಜಿಸಿದ್ದು, #NammaMetroHindiBeda ಹಾಗೂ #nammametrokannadasaaku ಹ್ಯಾಷ್ ಟ್ಯಾಗ್ ಬಳಸಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕನ್ನಡ ನಮ್ಮ ನೆಲದ ಭಾಷೆ, ನೆಲದ ಭಾಷೆಯಲ್ಲಿ ಕನ್ನಡ ಯಾಕಿಲ್ಲ? ಚುನಾಯಿತ ಪ್ರತಿನಿಧಿಗಳೇ ನಿಮ್ಮ ದೆಹಲಿಯ ಗುಲಾಮಗಿರಿಯನ್ನು ಬಿಟ್ಟು ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗೆ ಗಮನ ನೀಡಿ ಎಂದು ಜನರು ರಾಷ್ಟ್ರೀಯ ಪಕ್ಷಗಳ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ.

    ನಮ್ಮ ಮೆಟ್ರೋ ನಮ್ಮದಾಗೇ ಉಳಿಯಬೇಕು ಎಂದರೆ ಅಲ್ಲಿ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಹಿಂದಿ ಹೇರಿಕೆಯ ಪ್ರಮಾಣ ತಗ್ಗಿದೆ, ಆದರೆ ನಿಂತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ, ಮೆಟ್ರೋ ಅಧಿಕಾರಿಗಳ ಗಮನ ಸೆಳೆದು, ಬೆಂಗಳೂರಿನ ಮೆಟ್ರೋದಲ್ಲಿ ಕನ್ನಡ ಸಾರ್ವಭೌಮತ್ವ ಎತ್ತಿ ಹಿಡಿಯಲು ಈ ಅಭಿಯಾನವನ್ನು ಆಯೋಜಿಸಲಾಗಿದೆ.

    https://twitter.com/vivek_shankar15/status/877157891693727744

    https://twitter.com/hariprasadholla/status/877042262928105473

    https://twitter.com/YadhunandanAT/status/777918747063353344