Tag: hindi diwas

  • ಜನರು ಮಾತೃಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು: ಅಮಿತ್ ಶಾ

    ಜನರು ಮಾತೃಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು: ಅಮಿತ್ ಶಾ

    ನವದೆಹಲಿ: ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳು ಹಿಂದಿಗೆ ಪೂರಕವಾಗಿವೆ. ಹಿಂದಿ ಭಾಷೆ ಭಾರತದ ಯಾವುದೇ ಭಾಷೆ ಜತೆ ಸ್ಪರ್ಧೆ ಮಾಡ್ತಿಲ್ಲ. ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಸ್ನೇಹಿತ ಇದ್ದಂತೆ. ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಹೇಳಿದ್ದಾರೆ.

    ನವದೆಹಲಿ ವಿಜ್ಞಾನ ಭವನದಲ್ಲಿಂದು ಹಿಂದಿ ದಿವಸ್‍ ಸಮಾರಂಭ 2021ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ಪ್ರಧಾನಿಗಳು ಅಂತರಾಷ್ಟೀಯ ಮಟ್ಟದಲ್ಲಿ ಹಿಂದಿಯಲ್ಲಿ ಮಾತನಾಡಿದರೆ ಮುಜುಗರ ಪಡುವಂತಹ ದಿನಗಳು ಈಗಿಲ್ಲ. ಹಿಂದಿಯಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಎಷ್ಟು ದಿನ ಅಧಿಕಾರದಲ್ಲಿರ್ತೀವಿ ಅನ್ನೋದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ: ಗಡ್ಕರಿ

    ಜನರು ತಮ್ಮ ಮಾತೃಭಾಷೆಯೊಂದಿಗೆ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಹಂತ ಹಂತವಾಗಿ ಬಳಸುವ ಪ್ರತಿಜ್ಞೆ ಮಾಡಬೇಕು. ಮಾತೃ ಭಾಷೆ ಹಾಗೂ ಅಧಿಕೃತ ಭಾಷೆಗಳ ಸಮನ್ವಯದಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದರು.

    ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದ್ದು, ಸಾಂಸ್ಕತಿಕ ಪ್ರಜ್ಞೆ ಹಾಗೂ ರಾಷ್ಟ್ರೀಯ ಏಕತೆಯ ಮೂಲ ಆಧಾರವಾಗಿರುವ ಹಿಂದಿಯು ಪ್ರಾಚೀನ ನಾಗರೀಕತೆ ಹಾಗೂ ಆಧುನಿಕ ಪ್ರಗತಿಯ ನಡುವೆ ಸೇತುವೆಯಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಹಿಂದಿ ಹಾಗೂ ಎಲ್ಲ ಭಾರತೀಯ ಭಾಷೆಗಳ ಸಮಾನಂತರ ಅಭಿವೃದ್ದಿಗೆ ನಿರಂತರ ಬದ್ದವಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಹಲವು ವಿಧೇಯಕಗಳ ಮಂಡನೆ

    ಭಾರತ ಹಲವು ಭಾಷೆಗಳ ದೇಶವಾಗಿದೆ. ಪ್ರತಿಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಪ್ರಪಂಚದಲ್ಲಿ ಭಾರತದ ಗುರುತಾಗಬೇಕಿರುವ ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಅಲ್ಲದೆ ಒಂದು ಭಾಷೆ ಒಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾಗುವುದಾದರೆ ಅದು ಹಿಂದಿಗೆ ಮಾತ್ರ ಸಾಧ್ಯ ಎಂದೂ ನುಡಿದರು.

  • ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಬೆಂಗಳೂರು: ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರತಿ ವರ್ಷ ಆಚರಿಸಲ್ಪಡುತ್ತಿರುವ ಹಿಂದಿ ದಿವಸ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್‌ ಬರೆದು ದರ್ಶನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.

    ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ.

    ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತ್ತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

    ಬಹುಭಾಷಾ ಹಿರಿಯ ನಟ ಪ್ರಕಾಶ್‌ ರೈ ಅವರು, ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ ನನ್ನ ಮಾತೃಭಾಷೆ ಕನ್ನಡ ಹಿಂದಿ ಹೇರಿಕೆ ಬೇಡ ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ವಿರೋಧವಿದೆ: ಹೆಚ್‍ಡಿಕೆ

    ಕನ್ನಡದ ನಟ ಧನಂಜಯ್‌ ಅವರು, ನನ್ನ ದೇಶ ಭಾರತ. ನನ್ನ ಬೇರು ಕನ್ನಡ. ಎಲ್ಲ ಭಾಷೆಯನ್ನು ಗೌರವಿಸುತ್ತೇನೆ. ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಹೇರಿಕೆ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.