Tag: Hindhu

  • ಹಿಂದೂಗಳ ಸಂಖ್ಯೆ ಹೆಚ್ಚಾಗದಿದ್ರೆ ಭಾರತ, ಪಾಕ್ ಆಗುತ್ತೆ: ಕಲ್ಲಡ್ಕ ಪ್ರಭಾಕರ ಭಟ್

    ಹಿಂದೂಗಳ ಸಂಖ್ಯೆ ಹೆಚ್ಚಾಗದಿದ್ರೆ ಭಾರತ, ಪಾಕ್ ಆಗುತ್ತೆ: ಕಲ್ಲಡ್ಕ ಪ್ರಭಾಕರ ಭಟ್

    ದಾವಣಗೆರೆ: ಹಿಂದೂಗಳ (Hindhu) ಸಂಖ್ಯೆ ಹೆಚ್ಚಾಗದೇ ಇದ್ದರೆ ಭಾರತ, ಪಾಕಿಸ್ತಾನ ಆಗಲಿದೆ ಎಂದು ಆರ್‌ಎಸ್‌ಎಸ್‌ (RSS) ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದ್ದಾರೆ.

    ದಾವಣಗೆರೆಯಲ್ಲಿ (Davanagere) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಹಿಂದೂ ಸಂಸ್ಕೃತಿ ಸರ್ವನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಂಕಲ್ಪವನ್ನು ಸಂಘ ಪರಿವಾರ ಮಾಡುತ್ತಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಕೆಲಸವು ಅದೇ ಆಗಿದೆ ಎಂದಿದ್ದಾರೆ. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಇಬ್ಬರು ಯುವಕರ ಬಂಧನ

    ದೇಶ ಉಳಿಯಬೇಕು, ಹಿಂದೂ ಸಂಸ್ಕೃತಿ ಉಳಿಯಬೇಕು ಎಂಬುದು ನಮ್ಮ ಆಶಯ. ಅದ್ದರಿಂದ ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕಿದೆ. ದೇಶದಲ್ಲಿ ಮೆಕಾಲೆ ಶಿಕ್ಷಣ ಪ್ರಭಾವ ಹೆಚ್ಚಾಗಿದೆ. ಎಲ್ಲರೂ ತಮ್ಮ ಭಾಷೆಗಳನ್ನು ಬಿಟ್ಟು ಇಂಗ್ಲಿಷ್ ಕಲಿಯಲು ಶುರು ಮಾಡಿದ್ದಾರೆ. ಆದರೆ ನಮ್ಮ ಸಂಸ್ಕೃತಿ ಉಳಿಯಬೇಕಾಗಿದೆ ಎಂದು ಹೇಳಿದ್ದಾರೆ.

    ಸ್ವದೇಶಿ ವಸ್ತುಗಳನ್ನ ಬಳಸಿ ಎಂದು ಸಂಘ ಹೇಳುತ್ತಿದೆ. ನಾವು ಬೆಳಗ್ಗೆ ಎದ್ದು ಉಪಯೋಗಿಸುವ ಪೇಸ್ಟ್‌ನಿಂದ ಹಿಡಿದು ಎಲ್ಲವನ್ನೂ ಸ್ವದೇಶಿ ವಸ್ತು ಬಳಕೆ ಮಾಡಬೇಕು. ಈಗ ಸಂಘ ಪರಿವಾರ ಪಂಚ ಪರಿವರ್ತನೆ ಜಾರಿಗೆ ತರಲಿದೆ. ಸ್ವದೇಶಿ ಬ್ರಹ್ಮೋಸ್ ಪ್ರಯೋಗ ಮಾಡಿ ಅಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನವನ್ನು ಪುಡಿ ಪುಡಿ ಮಾಡಿದ್ದೇವೆ ಎಂದಿದ್ದಾರೆ.

    ನಕ್ಸಲ್‍ಗಳು ಈಗ ಕಾಡಿನಲ್ಲಿ ಇಲ್ಲ ನಾಡಿನಲ್ಲಿ ಇದ್ದಾರೆ. ನಾಡಿನಲ್ಲಿದ್ದು ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿದ್ದಾರೆ. ನಾಡ ನಕ್ಸಲರ ಸಂಖ್ಯೆ ಈಗ ಹೆಚ್ಚಾಗುತ್ತಿದೆ ಎಂದು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ಕೊಟ್ಟು ಸರಿಯಿಲ್ಲ ಅಂತ ಹೇಳಲಿ: ಬೊಮ್ಮಾಯಿ

  • ಮುಸ್ಲಿಮರು ಗಲಾಟೆ ಮಾಡುವವರಲ್ಲ, ಹಿಂದೂಗಳಲ್ಲೂ ಕೆಲವು ತಲೆಹರಟೆಗಳಿವೆ – ಈಶ್ವರಪ್ಪ

    ಮುಸ್ಲಿಮರು ಗಲಾಟೆ ಮಾಡುವವರಲ್ಲ, ಹಿಂದೂಗಳಲ್ಲೂ ಕೆಲವು ತಲೆಹರಟೆಗಳಿವೆ – ಈಶ್ವರಪ್ಪ

    ಶಿವಮೊಗ್ಗ: ಜಿಲ್ಲೆಯ ಮುಸ್ಲಿಂ ಸಮುದಾಯದ (Muslims Community) ಜನ ಗಲಾಟೆ ಮಾಡುವವರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಆದ್ರೆ ಹಿಂದೂಗಳಲ್ಲೇ ಕೆಲವು ತಲಹರಟೆಗಳಿವೆ’ ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ (KS Eshwarappa) ಅವರು ಹೇಳಿರುವ ವೀಡಿಯೋವೊಂದು ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಹಿಂದೂಗಳಲ್ಲಿಯೂ (Hindu) ಕೆಲವು ತಲೆಹರಟೆಗಳಿವೆ, ಮುಸ್ಲಿಮರಲ್ಲೂ ಕೆಲವು ತಲೆಹರಟೆಗಳಿವೆ. ನಾನು ಇಲ್ಲ ಅನ್ನೋದಿಲ್ಲ. ಅವರೊಂದು ನಾಲ್ಕು ಜನ, ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತೆ ಎಂದು ವೀಡಿಯೋನಲ್ಲಿ ಹೇಳಿದ್ದಾರೆ.

    ಶಿವಮೊಗ್ಗ (Shivamogga) ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್‌ಬುಕ್‌ನಲ್ಲಿ, ಈ ವಿಡಿಯೋ ಮೊದಲು ಪ್ರಕಟವಾಗಿದೆ. ನಂತರ ಈ ಬಗ್ಗೆ ಪರವಿರೋಧ ಚರ್ಚೆಗಳು ಶುರುವಾಗಿದೆ. ಮೂರು ದಿನಗಳ ಹಿಂದಿನ ವಿಡಿಯೋ ಸೋರಿಕೆಯಾಗಿದ್ದು, ಅಲ್ಪಸಂಖ್ಯಾತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾಜಿ ಸಚಿವರು ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಮ್ಮ ಕ್ಷೇತ್ರದ ಜನರ ಪ್ರತಿ ಮನೆಯಲ್ಲೂ ದೇವರ ಫೋಟೋ ಜೊತೆ ಸಿದ್ದರಾಮಯ್ಯ ಫೋಟೋ ಇದೆ: ಜಮೀರ್

    ಈಶ್ವರಪ್ಪ ಹೇಳಿದ್ದೇನು?
    ಶಿವಮೊಗ್ಗದ ಮುಸ್ಲಿಮರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂ-ಮುಸ್ಲಿಂ ಎರಡೂ ಸಮಯದಾಯದಲ್ಲೂ ಕೆಲವು ತಲೆಹರಟೆಗಳಿದ್ದಾರೆ. ಅವರು ಸೇರಿಕೊಂಡು ತಲೆಹರಟೆ ಕೆಲಸಮಾಡಿದಾಗ ಗಲಾಟೆ ಶುರುವಾಗುತ್ತೆ. ಇಲ್ಲಾಂದ್ರೆ ತಣ್ಣಗೆ ಇರುತ್ತದೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ? ಇದನ್ನೂ ಓದಿ: 25 ವರ್ಷ ಬಿಜೆಪಿಯನ್ನು ಸಹಿಸಿದ್ದು ಸಾಕು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ: ಹೆಚ್.ಎಸ್.ಚಂದ್ರಮೌಳಿ

    ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನು ಯಾವ ವಿಚಾರಕ್ಕೆ ಗಲಾಟೆ ಮಾಡುತ್ತೇನೆ ಅಂದ್ರೆ, ಈ ಹಿಂದೆ ಶಿವಪ್ಪನಾಯಕ ಸರ್ಕಲ್‌ನಲ್ಲಿ ಎಸ್‌ಡಿಪಿಐನವರು ಒಂದು ಸಮ್ಮೇಳನ ಮಾಡಿದ್ದರು. ಆ ಸಮ್ಮೇಳನದಲ್ಲಿ ಯಾವನೋ ಒಬ್ಬ`ಹಿಂದೂಸ್ತಾನ್ ಮುರ್ದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದ. ಯಾರಾದರೂ ಇದನ್ನ ಕೇಳಿಕೊಂಡು ಸುಮ್ಮನಿರುತ್ತಾರಾ? ನೀವು ಸುಮ್ಮನಿರುತ್ತೀರಾ? ನೀವು ಸುಮ್ಮನಿದ್ದರೂ ನಾನು ಸುಮ್ಮನಿರಲ್ಲ, ಬಾಯಿ ಬಿಟ್ಟು ಹೇಳ್ತೀನಿ ಎಂದು ಹೇಳಿದ್ದಾರೆ.

    ಸದ್ಯ ಈ ವೀಡಿಯೋಗಳು ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು, ಪರ – ವಿರೋಧ ಚರ್ಚೆಗಳೂ ನಡೆಯುತ್ತಿವೆ.

  • ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡಿದ ಗಣೇಶ ಭಕ್ತರು

    ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡಿದ ಗಣೇಶ ಭಕ್ತರು

    ಹಾವೇರಿ: ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದ್ದು, ಹಿಂದೂ-ಮುಸ್ಲಿಮರ ಸೌಹಾರ್ದ ಮನೋಭಾವಕ್ಕೆ ಸಾಕ್ಷಿಯಾಗಿದೆ.

    ಗಜಾನನ ಯುವಕ ಮಂಡಳಿಯ ಸದಸ್ಯರು ಇಲ್ಲಿನ ಉಮಾಶಂಕರ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರು. ಗಣೇಶ ವಿಸರ್ಜನೆಯ ಮೆರವಣಿಗೆ ಎಂಜಿ ರಸ್ತೆಗೆ ಬಂದಾಗ ಅದೇ ಮಾರ್ಗದಲ್ಲಿ ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರವನ್ನು ಕಬರಸ್ತಾನ ಕಡೆಗೆ ಹೊತ್ತೊಯ್ಯುತ್ತಿದ್ದರು. ಇದನ್ನೂ ಓದಿ: ಮುರುಘಾ ಶ್ರೀಗಳ ಕೇಸ್ – 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ

    ಯುವಕ ಮಂಡಳಿಯವರು ಮುಸ್ಲಿಂ ವ್ಯಕ್ತಿಯ ಶವಯಾತ್ರೆ ದಾಟಿ ಹೋಗೋವರೆಗೂ ತಾವಾಗಿಯೇ ಡಿಜೆ ಬಂದ್ ಮಾಡಿದರು. ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಹೋದ ನಂತರ ಮತ್ತೆ ಗಣೇಶ ವಿಸರ್ಜನೆ ಮೆರವಣಿಗೆ ಪ್ರಾರಂಭಿಸಿದರು. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು

    ಒಟ್ಟಿನಲ್ಲಿ ಈ ಘಟನೆ ಹಿಂದೂ-ಮುಸ್ಲಿಮರ ಆತ್ಮೀಯತೆಗೆ ಸಾಕ್ಷಿಯಾಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಮ್-ರಹೀಮ್ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ರಾಯಚೂರು ಯುವಕರು

    ರಾಮ್-ರಹೀಮ್ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ರಾಯಚೂರು ಯುವಕರು

    ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಯುವಕರು ರಾಮ್ ರಹೀಮ್ ಗಣೇಶನನ್ನ ಪ್ರತಿಷ್ಠಾಪಿಸಿ, ಗಣೇಶ ಉತ್ಸವದಲ್ಲಿ ಭಾವೈಕ್ಯತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

    ಪಟ್ಟಣ ರಾಮ್ ರಹೀಮ್ ಯುವಕ ಮಂಡಳಿಯ ಹಿಂದೂ, ಮುಸ್ಲಿಂ ಯುವಕರು ಕಳೆದ ಮೂರು ವರ್ಷಗಳಿಂದ ಭಾವೈಕತೆಯ ಗಣೇಶನನ್ನು ಗಣಪತಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಈ ಸಮಿತಿಯಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲ ಎರಡು ವರ್ಷ ಗಣಪನನ್ನು ಪಟ್ಟಣದ ಓಣಿಗಳಲ್ಲಿ ಕೂರಿಸುತ್ತಿದ್ದ ಯುವಕರು, ಈ ಬಾರಿ ಗಣೇಶ್ ಚೌಕ್ ಉದ್ಯಾನವನದಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಿದ್ದಾರೆ.

    ಇಲ್ಲಿ ಯಾವುದೇ ಧರ್ಮ ಬೇಧಕ್ಕೆ ಆಸ್ಪದ ಕೊಡದೆ, ಹಿಂದೂ-ಮುಸ್ಲಿಂ ಎಲ್ಲರೂ ಒಂದೇ ಎಂದು ಸಾರಲು ರಾಮ್ ರಹೀಮ್ ಗಣೇಶನನ್ನ ಯುವಕರು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಲಿಂಗಸುಗೂರಿನಲ್ಲಿ ನಡೆದ ಗಲಾಟೆ ಆತಂಕ ಸೃಷ್ಟಿ ಮಾಡಿತ್ತು. ಆದರೆ ಅದನ್ನೆಲ್ಲ ಬದಿಗೊತ್ತಿ ನಾವೆಲ್ಲರೂ ಒಂದೇ ಎಂದು ಸಾರಲು ರಾಮ್ ರಹೀಮ್ ಹೆಸರಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

    ಈ ಅಪರೂಪದ ಗಣಪನನ್ನು ನೋಡಿ ಭಕ್ತರು ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಧರ್ಮ, ಜಾತಿ ಎಂದು ಹೊಡೆದಾಡುವವರ ಮಧ್ಯೆ ಎಲ್ಲರೂ ಒಂದೇ ಎಂದು ಹಿಂದೂ- ಮುಸ್ಲಿಂ ಯುವಕರು ಗಣೇಶ ಹಬ್ಬವನ್ನು ಆಚರಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಧರ್ಮ ಭೇದವಿಲ್ಲದೆ ಒಂದೇ ಕೊಠಡಿಯಲ್ಲಿ ಮಕ್ಕಳು ಮಾಡ್ತಾರೆ ಪೂಜೆ, ನಮಾಜ್

    ಧರ್ಮ ಭೇದವಿಲ್ಲದೆ ಒಂದೇ ಕೊಠಡಿಯಲ್ಲಿ ಮಕ್ಕಳು ಮಾಡ್ತಾರೆ ಪೂಜೆ, ನಮಾಜ್

    ಲಕ್ನೋ: ಜಾತಿ, ಧರ್ಮ ಎಂದು ಕಿತ್ತಾಡುವ ಜನರೇ ಹೆಚ್ಚಿರುವಾಗ, ಎಲ್ಲರೂ ಒಂದೇ ಎಂದು ಧರ್ಮ ಭೇದ ಮರೆತು ಒಂದೇ ಕೊಠಡಿಯಲ್ಲಿ ಹಿಂದೂ- ಮುಸ್ಲಿಂ ಮಕ್ಕಳು ಪೂಜೆ ಹಾಗೂ ನಮಾಜ್ ಮಾಡುವ ವಿಶೇಷ ಮದರಸವೊಂದು ಈಗ ಎಲ್ಲರ ಗಮನ ಸೆಳೆದಿದೆ.

    ಹೌದು, ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಉತ್ತಮ ಉದಾಹರಣೆಯಾಗಿ ಉತ್ತರ ಪ್ರದೇಶದ ಅಲಿಗಢದ ಮದರಸಾ ಹೆಮ್ಮೆಯಿಂದ ತಲೆಯೆತ್ತಿ ನಿಂತಿದೆ. ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ ಅಲನೂರ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ “ಚಾಚಾ ನೆಹರು ಮದರಸಾ” ಎಂಬ ಹೆಸರಿನಲ್ಲಿ ಈ ಮದರಸಾ ನಡೆಸಲಾಗುತ್ತಿದೆ.

    ಇಲ್ಲಿ ಹಿಂದೂ ಮತ್ತು ಮುಸ್ಲಿಂ ಮಕ್ಕಳು ಒಂದೇ ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಮತ್ತು ನಮಾಜ್ ಮಾಡುವುದೇ ವಿಶೇಷವಾಗಿದೆ. ಚಾಚಾ ನೆಹರು ಮದರಸಾದಲ್ಲಿ ಹಿಂದೂ-ಮುಸ್ಲಿಂ ಧರ್ಮದ 4 ಸಾವಿರ ವಿದ್ಯಾರ್ಥಿಗಳು ಓದುತ್ತಾರೆ. ಹೀಗಾಗಿ ಎರಡೂ ಧರ್ಮದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಮದರಸಾದಲ್ಲಿ ದೇವಸ್ಥಾನ ಮತ್ತು ಮಸೀದಿ ನಿರ್ಮಾಣಕ್ಕೆ ಸಲ್ಮಾ ಅನ್ಸಾರಿ ಮುಂದಾಗಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಲ್ಮಾ ಅನ್ಸಾರಿ ಅವರು, ನಮ್ಮ ಮದರಸಾದಲ್ಲಿ ಹಿಂದೂ-ಮುಸ್ಲಿಂ ಎರಡೂ ಧರ್ಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ದೇವರಿಗೆ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೋ ಅಥವಾ ಮಸೀದಿಗೋ ಹೋದಾಗ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ನಾವು ಹೊಣೆಯಾಗುತ್ತೆವೆ. ಆದ್ದರಿಂದ ಮಕ್ಕಳ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮದರಸಾದ ಒಳಗೆಯೇ ಮಸೀದಿ ಹಾಗೂ ದೇಗುಲ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದರು.

    ಸದ್ಯ ಈ ಮದರಸಾದಲ್ಲಿ ಒಂದೇ ಕೊಠಡಿಯಲ್ಲಿ, ಹಿಂದೂ ಮಕ್ಕಳಿಗಾಗಿ ಸರಸ್ವತಿಯ ಪ್ರತಿಮೆಯೊಂದಿಗೆ ಹನುಮಾನ್ ಮತ್ತು ಶಿವನ ಚಿತ್ರವನ್ನು ಇರಿಸಿ ಪೂಜೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಾಗೆಯೇ ಅಲ್ಲೇ ಮುಸ್ಲಿಂ ಮಕ್ಕಳು ಕುರಾನ್ ಓದುತ್ತಾರೆ. ಇಲ್ಲಿನ ಮಕ್ಕಳು ಧರ್ಮ ಭೇದವನ್ನು ಅರಿತಿಲ್ಲ. ಎಲ್ಲರು ಒಂದೇ ಎಂದು ಪ್ರೀತಿಯಿಂದ ಇದ್ದಾರೆ.

    ಮದರಸಾ ಅವರಣದಲ್ಲಿ ದೇವಾಲಯ ಮತ್ತು ಮಸೀದಿ ನಿರ್ಮಾಣ ಕಾರ್ಯ ಮುಗಿಯುವವರೆಗೆ ಮಕ್ಕಳು ಈ ಕೊಠಡಿಯಲ್ಲೇ ಪೂಜೆ ಸಲ್ಲಿಸುತ್ತಾರೆ ಮತ್ತು ನಮಾಜ್ ಮಾಡಲಿದ್ದಾರೆ.

  • ಸಸಿ ನೆಟ್ಟು ರಂಜಾನ್ ಆಚರಿಸಿದ ರಾಯಚೂರಿನ ಜನತೆ

    ಸಸಿ ನೆಟ್ಟು ರಂಜಾನ್ ಆಚರಿಸಿದ ರಾಯಚೂರಿನ ಜನತೆ

    ರಾಯಚೂರು: ಇಂದು ಮುಸ್ಲಿಂ ಬಾಂಧವರು ಖುಷಿಯಿಂದ ಆಚರಿಸುವ ರಂಜಾನ್ ಹಬ್ಬದ ಜೊತೆಗೆ ವಿಶ್ವ ಪರಿಸರ ದಿನವೂ ಹೌದು. ಹೀಗಾಗಿ ಈ ವಿಶೇಷ ದಿನದಂದು ರಾಯಚೂರಿನ ಜನತೆ ಸಸಿಗಳನ್ನು ನೆಟ್ಟು ರಂಜಾನ್ ಹಬ್ಬವನ್ನು ಸಂಭ್ರಮಿಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

    ದೇವದುರ್ಗದ ಜಾಲಹಳ್ಳಿಯಲ್ಲಿ ಸಸಿ ನೆಡುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನ ಆಚರಿಸಲಾಯಿತು. ಇಲ್ಲಿನ ಜಮೀಯಾ ಮಸೀದಿಯ ಮೌಲಾನ ಮುತ್ತಾಜ್ ರಾಹೀ ಅವರ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಯಾವ ರೀತಿ ಸಾಕಿ, ಸಾಲಹುತ್ತಾರೋ ಅದೇ ರೀತಿ ಮನೆಯ ಮುಂದೆ ಒಂದು ಗಿಡ ಬೆಳೆಸಬೇಕೆಂದು ನಿರ್ಧರಿಸಿದ್ದು, ಇಂದು ಸಾಂಕೇತಿಕವಾಗಿ ಸಸಿಗಳನ್ನ ನೆಟ್ಟು ಗಿಡ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಕೇವಲ ಮುಸ್ಲಿಂ ಬಾಂಧವರಷ್ಟೇ ಅಲ್ಲದೆ ಹಿಂದೂಗಳು ಕೂಡ ಅವರ ಜೊತೆ ಕೈಜೋಡಿಸಿ ಪರಿಸರದ ಮೇಲಿರುವ ಕಾಳಜಿ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಹಿಂದೂ-ಮುಸ್ಲಿಂ ಜೊತೆಗೂಡಿ ಪರಿಸರ ಕಾಳಜಿ ಮೆರೆದಿರುವುದು ವಿಶೇಷವಾಗಿತ್ತು.

    ಪವಿತ್ರ ರಂಜಾನ್ ಆಚರಣೆ ಹಿನ್ನೆಲೆ ಮುಸ್ಲಿಂ ಬಾಂಧವರು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಮೈದಾನ ಸುತ್ತ ಪೋಲಿಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಾರ್ಥನೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್, ಎಸ್‍ಪಿ ಡಿ.ಕಿಶೋರ್ ಬಾಬು ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದು, ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಲಾಗುತ್ತಿದೆ.

  • ರಾಮನ ಊರಲ್ಲಿ ಧರ್ಮ ಭೇದವಿಲ್ಲ- ಸೀತಾರಾಮ ಮಂದಿರದಲ್ಲಿ ಮುಸಲ್ಮಾನರಿಗೆ ಇಫ್ತಾರ್ ವ್ಯವಸ್ಥೆ!

    ರಾಮನ ಊರಲ್ಲಿ ಧರ್ಮ ಭೇದವಿಲ್ಲ- ಸೀತಾರಾಮ ಮಂದಿರದಲ್ಲಿ ಮುಸಲ್ಮಾನರಿಗೆ ಇಫ್ತಾರ್ ವ್ಯವಸ್ಥೆ!

    ಅಯೋಧ್ಯೆ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಅಯೋಧ್ಯೆ ವಿವಾದ ದಶಕಗಳಿಂದ ಬಗೆಹರಿಯದೆ ಉಳಿದಿದೆ. ಆದರೆ ಶ್ರೀರಾಮ ಹುಟ್ಟಿದ ನೆಲ ಅಯೋಧ್ಯೆಯಲ್ಲಿ ಹಿಂದೂ-ಮುಸಲ್ಮಾನ್ ಎಂಬ ಭೇದವಿಲ್ಲ. ಇಲ್ಲಿನ ಶ್ರೀ ಸೀತಾರಾಮ ಮಂದಿರದಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಇಫ್ತಾರ್ ವ್ಯವಸ್ಥೆ ಮಾಡಿ ಏಕತೆ ಮೆರೆದಿದ್ದಾರೆ.

    ಶ್ರೀ ಸೀತಾರಾಮ ದೇವಸ್ಥಾನದ ಟ್ರಸ್ಟ್ ವತಿಯಿಂದ ಮುಸ್ಲಿಂ ಬಾಂಧವರಿಗೆ ರೋಜಾ ಇಫ್ತಾರ್ ಔತಣಕೂಟವನ್ನು ಸೋಮವಾರದಂದು ಆಯೋಜಿಸಲಾಗಿತ್ತು. ಈ ರೋಜಾ ಇಫ್ತಾರ್ ನಲ್ಲಿ ಮುಸಲ್ಮಾನರು ಮಾತ್ರವಲ್ಲದೇ ನಗರದ ಕೆಲವು ಸಾಧು-ಸಂತರು ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ:ಮದರಸಾ ತೆರೆಯಲು ಮುಂದಾದ ಆರ್‌ಎಸ್‌ಎಸ್

    ದೇವಸ್ಥಾನದ ಟ್ರಸ್ಟ್ ವತಿಯಿಂದ ಮೂರನೇ ಬಾರಿಗೆ ರೋಜಾ ಇಫ್ತಾರ್ ಏರ್ಪಡಿಸಲಾಗಿತ್ತು. ಇದು ಮುಂದೆಯೂ ಹೀಗೆ ಮುಂದುವರೆಯಲಿದೆ ಎಂದು ದೇವಾಲಯದ ಟ್ರಸ್ಟಿಗಳು ಹೇಳಿದ್ದಾರೆ. ನಾವು ಧರ್ಮ ಭೇದವನ್ನು ಮರೆತು ಶಾಂತಿ ಮತ್ತು ಹಿಂದೂ-ಮುಸ್ಲಿಂ ಸ್ನೇಹ ಸಂಬಂಧವನ್ನು ಕಾಯ್ದುಕೊಳ್ಳಲು ಈ ಇಫ್ತಾರ್ ವ್ಯವಸ್ಥೆ ಮಾಡಿದ್ದೇವೆ. ಧರ್ಮ ಭೇದ ತೊರೆದು ಪ್ರತಿ ಹಬ್ಬ ಆಚರಣೆಯನ್ನೂ ಒಗ್ಗೂಡಿ ಆಚರಿಸಿ ಸಂಭ್ರಮಿಸಬೇಕು ಎಂದು ಹೇಳಿದರು. ಇದನ್ನೂ ಓದಿ:ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ಆಹಾರ ನೀಡಿದ ಗಗನಸಖಿ!

    ರೋಜಾ ಇಫ್ತಾರ್ ಗೆ ಬಂದಿದ್ದ ಮುಜಾಲ್ ಫಿಜಾ ಅವರು ಮಾತನಾಡಿ, ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಅಲ್ಪಸಂಖ್ಯಾತರಾಗಿದ್ದರೂ ನಾವು ಎಂದಿಗೂ ಹೆದರಿಲ್ಲ. ನಾನು ನನ್ನ ಹಿಂದೂ ಸ್ನೇಹಿತರೊಡನೆ ಸೇರಿ ನವರಾತ್ರಿಯನ್ನು ಆಚರಿಸುತ್ತೇನೆ. ನಮ್ಮಲ್ಲಿ ಭೇದಬಾವವಿಲ್ಲ ಎಂದು ತಿಳಿಸಿದರು.

    ಧರ್ಮದ ಆಧಾರದ ಮೇಲೆ ಎಂದಿಗೂ ಮನುಷ್ಯರನ್ನು ನೋಡಬಾರದು. ಮನುಷ್ಯತ್ವ, ಪ್ರೀತಿ ಎಲ್ಲದಕ್ಕೂ ಮಿಗಿಲಾದದ್ದು ಎನ್ನುವುದನ್ನು ಈ ಮೂಲಕ ಅಯೋಧ್ಯೆಯಲ್ಲಿ ಹಿಂದೂ-ಮುಸಲ್ಮಾನ್ ಬಾಂಧವರು ಸಾರಿದ್ದಾರೆ.

  • ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಚೆನ್ನೈ: ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಮೇ 19ರಂದು ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆ ನಡೆಯಲಿದ್ದು, ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಉಪಚುನಾವಣೆ ರ‍್ಯಾಲಿಯಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದ್ದಾರೆ. ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆಗೆ ತಮ್ಮ ಎಂಎನ್‍ಎಂ ಪಕ್ಷದ ಅಭ್ಯರ್ಥಿಯ ಪ್ರಚಾರದ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ವಿವಾದವನ್ನು ಸೃಷ್ಟಿಸಿದ್ದಾರೆ.

    ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಬಾಬ್ರಿ ಮಸೀದ್ ಬಗ್ಗೆ ಮೊದಲು ಧ್ವನಿ ಎತ್ತಿದ್ದು ನಾನು. ಅಲ್ಲದೆ ಒಳ್ಳೆಯ ಹೃದಯವಿರುವ ಮುಸಲ್ಮಾನರು ಎಂದಿಗೂ ಭಯೋತ್ಪಾದನೆಗೆ ಬೆಂಬಲ ನೀಡಲ್ಲ. ಈ ಬಗ್ಗೆ ಅವರು ಅವರ ಶ್ರೇಷ್ಠ ಗ್ರಂಥವನ್ನು ಮುಟ್ಟಿ ಹೇಳುತ್ತಾರೆ. ತ್ರಿವರ್ಣ ಧ್ವಜವೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಆದರೆ ತ್ರಿವರ್ಣದಲ್ಲಿ ಕೇವಲ ಒಂದು ಬಣ್ಣ ಉಳಿದ ಬಣ್ಣಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುವಂತೆ ಆಗಬಾರದು. ಒಂದು ವೇಳೆ ಈ ರೀತಿಯಾದಲ್ಲಿ ನಾವು ಅದನ್ನು ತಡೆಯಬೇಕು. ದೇಶವನ್ನು ಒಡೆಯಲು ಪ್ರಯತ್ನಿಸುವ ಗುಂಪನ್ನು ಅಥವಾ ವ್ಯಕ್ತಿಯನ್ನು ಅಧಿಕಾರದಿಂದ ಇಳಿಸಬೇಕು ಎಂದರು.

    ಕಮಲ್‍ಹಾಸನ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದಾಗ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ, ಅಲ್ಲಿ ಜನಮತಗಣನೆ ನಡೆಯಲಿ ಎಂದು ಆಗ್ರಹಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಬಳಿಕ ಎಲ್ಲ ರಾಜಕಾರಣಿಗಳಂತೆ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು.

  • ಮೃದು ಹಿಂದುತ್ವದ ಪ್ರಶ್ನೆಗೆ ನಮ್ಮದು ಉತ್ತಮ ಹಿಂದುತ್ವ ಎಂದ ಖಾದರ್

    ಮೃದು ಹಿಂದುತ್ವದ ಪ್ರಶ್ನೆಗೆ ನಮ್ಮದು ಉತ್ತಮ ಹಿಂದುತ್ವ ಎಂದ ಖಾದರ್

    ಮಂಗಳೂರು: ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಮೃದು ಹಿಂದುತ್ವದತ್ತ ಮರಳುತ್ತಿದೆಯೇ ಅನ್ನುವ ಸಂಶಯ ಮೂಡಿದೆ. ದ.ಕ. ಉಸ್ತುವಾರಿ ಸಚಿವ ಯು.ಟಿ ಖಾದರ್ ಬಳಿ, ಈ ಪ್ರಶ್ನೆ ಮುಂದಿಟ್ಟಾಗ ಕಾಂಗ್ರೆಸಿನದ್ದು ಉತ್ತಮ ಹಿಂದುತ್ವ ಅನ್ನುವ ಉತ್ತರ ನೀಡಿದ್ದಾರೆ.

    ಕಾಂಗ್ರೆಸ್, ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು ಹೇಳಿಕೊಟ್ಟ ಹಿಂದುತ್ವವನ್ನು ಪಾಲಿಸುತ್ತದೆ. ಆದರೆ ಬಿಜೆಪಿಯದ್ದು ಬೇರೆಯದ್ದೇ ಹಿಂದುತ್ವ ಎಂದಿದ್ದಾರೆ. ಇದೇ ವೇಳೆ, ದ.ಕ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪ್ರಚಾರ ಸಂದರ್ಭದಲ್ಲಿ ಹನುಮಾನ್ ಚಾಲೀಸಾ, ಖುರಾನ್ ಪಠಣ ಮಾಡಿದ್ದನ್ನು ಸಚಿವ ಖಾದರ್ ಸಮರ್ಥಿಸಿಕೊಂಡಿದ್ದಾರೆ.

    ಹನುಮಾನ್ ಚಾಲೀಸಾ ಪಠಿಸಿದರೆ ಒಂದು ವೋಟು ಹೆಚ್ವು ಕೊಡಬೇಕು. ಖುರಾನ್ ಪಠಣ ಮಾಡಿದರೆ ಮತ್ತೂ ಹೆಚ್ಚು ವೋಟು ಲಭಿಸಲಿದೆ ಎಂದು ಖಾದರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಚುನಾವಣೆಗಾಗಿ ಮೃದು ಹಿಂದುತ್ವದತ್ತ ಮರಳುತ್ತಿರುವುದರ ಸಂಕೇತ ಇದು ಎನ್ನಲಾಗುತ್ತಿದೆ.

  • ಪುಲ್ವಾಮಾದಲ್ಲಿ ಮುಸ್ಲಿಂರಿಂದ ಶಿವನ ದೇಗುಲ ಜೀರ್ಣೋದ್ಧಾರ!

    ಪುಲ್ವಾಮಾದಲ್ಲಿ ಮುಸ್ಲಿಂರಿಂದ ಶಿವನ ದೇಗುಲ ಜೀರ್ಣೋದ್ಧಾರ!

    ಪುಲ್ವಾಮಾ: ಭಾರತೀಯ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದ ಪುಲ್ವಾಮಾ ಸಮೀಪದ ಬರೇಲಿಯಲ್ಲಿ, ಸುಮಾರು 80 ವರ್ಷ ಹಳೆಯ ಶಿವ ದೇಗುಲವೊಂದನ್ನು ನವೀಕರಿಸಲು ಮುಸ್ಲಿಂರು ಹಿಂದೂಗಳ ಜೊತೆ ಕೈ ಜೋಡಿಸಿದ್ದಾರೆ.

    ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರ ಹುತಾತ್ಮರಾಗಿದ್ದರು. ಆಗಿನಿಂದ ಪುಲ್ವಾಮಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥತಿ ನಿರ್ಮಾಣವಾಗಿದೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಆದ್ರೆ ಈ ನಡುವೆಯೂ ಮುಸ್ಲಿಂ ಬಾಂಧವರು ಹಿಂದೂಗಳ ಜೊತೆಗೂಡಿ ಪುರಾತನ ಶಿವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಏಕತೆಯನ್ನು ಮೆರೆದಿದ್ದಾರೆ.

    ಪುಲ್ವಾಮಾದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಬರೇಲಿಯಲ್ಲಿ 80 ವರ್ಷಗಳ ಹಳೆಯ ಹಿಂದೂ ದೇವಸ್ಥಾನವಿದೆ. ಇಲ್ಲಿರುವ ಕಾಶ್ಮೀರಿ ಪಂಡಿತ್ ಕುಟುಂಬಸ್ಥರ ಜೊತೆ ಸೇರಿ ಮುಸ್ಲಿಂ ಕುಟುಂಬವೊಂದು ದೇಗುಲದ ಮರು ನವೀಕರಣ ಕಾರ್ಯಕ್ಕೆ ಕೈಜೋಡಿಸಿದೆ. ಪುಲ್ವಾಮಾ ದಾಳಿ ಬಳಿಕ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆದರಿಂದ ಈ ದೇಗುಲದ ನವೀಕರಣ ಕೆಲಸವನ್ನು ನಿಲ್ಲಿಸಲಾಗಿತ್ತು. ಆದ್ರೆ ಮಹಾಶಿವರಾತ್ರಿ ಮುಗಿದ ಮೇಲೆ ಮತ್ತೆ ದೇವಸ್ಥಾನದ ಕೆಲಸವನ್ನು ಆರಂಭಿಸಲಾಗಿದೆ.

    30 ವರ್ಷಗಳ ಹಿಂದೆ ಬರೇಲಿ ಪ್ರದೇಶದಲ್ಲಿ ಉಗ್ರರ ಹಾವಳಿ ಹೆಚ್ಚಾದ ಕಾರಣಕ್ಕೆ ಅನೇಕ ಹಿಂದೂ ಕುಟುಂಬಗಳು ಇಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದವು. ಆದರೆ ಕೆಲ ಹಿಂದೂ ಕಾಶ್ಮೀರಿ ಪಂಡಿತರು ಇಲ್ಲಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿರುವ ಶಿವ ದೇವಾಲಯ ಪಾಳುಬಿದ್ದು ಹಾಳಾಗಿ ಹೋಗಿತ್ತು. ಆದರಿಂದ ಹಿಂದೂಗಳು ಈ ದೇವಾಲಯವನ್ನು ನವೀಕರಿಸಲು ನಿರ್ಧರಿಸಿದ್ದರು. ಆದ್ರೆ ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಅವರು ಮುಸ್ಲಿಂ ಭಾಂದವರ ಸಹಾಯ ಕೇಳಿದ್ದಾರೆ. ದೇಗುಲದ ಪಕ್ಕದಲ್ಲೇ ಮಸೀದಿ ಇರುವ ಕಾರಣಕ್ಕೆ ಮುಸ್ಲಿಂ ಭಾಂದವರು ಕೂಡ ದೇವಾಲಯದ ನವೀಕರಣ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದಾರೆ.

    ಈ ಕುರಿತು ಸ್ಥಳೀಯ ಮುಸಿಂ ಭಾಂದವರು ಮಾತನಾಡಿ, ಇಲ್ಲಿ ನಾವೆಲ್ಲರು ಸಹೋದರರಂತೆ ವಾಸಿಸುತ್ತಿದ್ದೇವೆ. ನಮ್ಮ ಮಧ್ಯೆ ಧರ್ಮದ ಬೇಧವಿಲ್ಲ. ನಾವು ನಮ್ಮ ದೇಗುಲಗಳನ್ನು ಹೇಗೆ ಗೌರವಿಸುತ್ತೇವೆ ಹಾಗೆಯೇ ಹಿಂದೂ ದೇಗುಲಗಳನ್ನು ಗೌರವದಿಂದ ಕಾಣುತ್ತೇವೆ. ಆದರಿಂದ ನಮ್ಮ ಹಿಂದೂ ಭಾಂದವರ ಜೊತೆಗೂಡಿ ಶಿವ ದೇವಾಲಯದ ನವೀಕರಣ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದೇವೆ. ಈ ಹಿಂದೆ ಯಾವ ರೀತಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವೋ ಅದೇ ರೀತಿ ಮುಂದಿನ ದಿನಗಳಲ್ಲೂ ನಡೆಯಬೇಕು ಎಂಬ ಉದ್ದೇಶದಿಂದ ಈ ಶಿವನ ದೇವಾಲಯ ಮರು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv