Tag: himla

  • ಸ್ಕಿಡ್ ಆಗಿ ಕಂದಕಕ್ಕೆ ಉರುಳಿದ ಬಸ್ – 6 ಸಾವು, ಹಲವರು ಗಂಭೀರ

    ಸ್ಕಿಡ್ ಆಗಿ ಕಂದಕಕ್ಕೆ ಉರುಳಿದ ಬಸ್ – 6 ಸಾವು, ಹಲವರು ಗಂಭೀರ

    ಶಿಮ್ಲಾ: ಸ್ಕಿಡ್ ಆಗಿ ಬೆಟ್ಟದಿಂದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 6 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ.

    ಖಾಸಗಿ ಬಸ್ಸೊಂದು ಮಾನ್ವಾದಿಂದ ಸೋಲಾನ್ ನಗರಕ್ಕೆ ತೆರಳುತ್ತಿತ್ತು. ಈ ವೇಳೆ ನೈ ನೇಟಿ ಪಂಚಾಯತ್ ಬಳಿ ಬಸ್ ಸ್ಕಿಡ್ ಆಗಿ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಮತ್ತು ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಚರಣೆಯನ್ನು ನಡೆಸಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಸಲೋನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಬಸ್ ಕೆಳಗೆ ಪ್ರಯಾಣಿಕರು ಸಿಲುಕಿದ್ದು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

    ಅಪಘಾತದಲ್ಲಿ ಮೃತಪಟ್ಟವರನ್ನು ರಾಜ್ಗಢ್ ಪ್ರದೇಶದವರು ಎಂದು ತಿಳಿದು ಬಂದಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಈ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ಸಿರ್ಮೌರ್ ನ ಡಿಸಿ ಲಲೀತ್ ಜೈನ್ ತಿಳಿಸಿದ್ದಾರೆ.

    ಕಳೆದ ತಿಂಗಳಷ್ಟೇ ಹಿಮಾಚಲ ಪ್ರದೇಶದಲ್ಲಿ ಸ್ಕೂಲ್ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ 26 ಮಕ್ಕಳು ಸಾವಿಗೀಡಾಗಿದ್ದರು.