Tag: Himant Biswa Sarma

  • ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ನವದೆಹಲಿ: ಅಸ್ಸಾಂ ಸಿಎಂ ಯಾರು ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಹಿಮಂತ್ ಬಿಸ್ವಾ ಶರ್ಮಾ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾಯಿತ ಎಲ್ಲ ಕಮಲ ಶಾಸಕರ ಸಹಮತದ ಮೇರೆಗೆ ಹಿಮಂತ್ ಬಿಸ್ವಾ ಶರ್ಮಾ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ. ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲರನ್ನ ಭೇಟಿಯಾಗಲಿರುವ ಹಿಮಂತ್ ಬಿಸ್ವಾ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸೋಮವಾರವೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

    ಚುನಾವಣೆ ಮತದಾನ ಆರಂಭಕ್ಕೂ ಮುನ್ನವೇ ಹಿಮಂತ್ ಬಿಸ್ವಾ ಶರ್ಮಾ ಮುಂದಿನ ಸಿಎಂ ಅನ್ನೋ ಸುದ್ದಿಗಳು ಪ್ರಕಟವಾಗಿದ್ದವು. ಆದ್ರೆ ಹಾಲಿ ಸಿಎಂ ಆಗಿದ್ದ ಸರ್ಬಾನಂದ್ ಸೋನೋವಾಲಾ ವಿರುದ್ಧ ಹೇಳಿಕೆ ನೀಡಲು ಬಿಜೆಪಿ ನಾಯಕರು ಹಿಂದೇಟು ಹಾಕಿದ್ದರು. ಇದೀಗ ಪಕ್ಷದ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಿಮಂತ್ ಬಿಸ್ವಾ ಪರವಾಗಿ ಮತ ಚಲಾಯಿಸಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸ್ಪರ್ಧೆ ಹಿನ್ನೆಲೆ ಬಹುಮತ ಪಡೆದಿದ್ರೂ ಬಿಜೆಪಿಗೆ ಸರ್ಕಾರ ರಚನೆಗೆ ಒಂದು ವಾರ ಸಮಯ ಪಡೆದುಕೊಂಡಿತ್ತು.

    ಶನಿವಾರ ಇಬ್ಬರು ನಾಯಕರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ವಿಶೇಷ ಸಭೆ ನಡೆಸಿತ್ತು. ಇನ್ನು ಸಿಎಂ ಸ್ಥಾನದಿಂದ ವಂಚಿತರಾಗಿರುವ ಸೋನೋವಾಲರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗುತ್ತಿದೆ. ಸರ್ಬಾನಂದ್ ಸೋನೋವಾಲ 2014 ರಿಂದ 2019ರವರೆಗೆ ಮೋದಿ ಅವರ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದರು.

    126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 60ರಲ್ಲಿ ಕಮಲ ಧ್ವಜ ಹಾರಿಸುವ ಮೂಲಕ ಅಸ್ಸಾಂ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿತ್ತು. ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಎಜಿಪಿ 9, ಯುಪಿಪಿಎಲ್ 6ರಲ್ಲಿ ಜಯ ಸಾಧಿಸಿವೆ.