Tag: Himachala Pradesh

  • ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!

    ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!

    ಶಿಮ್ಲಾ: ಕೆಲವೊಮ್ಮೆ ತುಂಬಾ ಚೀಪಾಗಿ ಸಿಗ್ತಿದ್ದ ಟೊಮೆಟೊಗೆ ಈಗ ಡಿಮ್ಯಾಂಡ್‌ ಹೆಚ್ಚಾಗಿದೆ. ಟೊಮೆಟೊ (Tomato) ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಮನೆಯಲ್ಲಿ ಸಾಂಬಾರಿಗೆ ಹುಳಿ ಟೇಸ್ಟ್‌ ಕೊಡೋಕೆ ಕಷ್ಟ ಆಗ್ತಿದೆ ಅಂತ ಮಹಿಳೆಯರು ಚಿಂತಿಸುತ್ತಿದ್ದಾರೆ. ಕೆಜಿಗೆ 1 ರೂ. ಬೆಲೆ ಕಾರಣಕ್ಕೆ ಟೊಮೆಟೊವನ್ನು ರಸ್ತೆಗೆ ಸುರಿದು ರೈತರು ಕಣ್ಣೀರು ಹಾಕಿದ್ದ ಸಂದರ್ಭವೂ ಇತ್ತು. ಕೆಜಿಗಟ್ಟಲೇ ಟೊಮೆಟೊ ಮನೆಗೆ ತರುತ್ತಿದ್ದ ಗ್ರಾಹಕರು ಈಗ ಮೂರೋ ನಾಲ್ಕೋ ತಂದು ಜೋಪಾನ ಮಾಡಿ ಅಡುಗೆಗೆ ಬಳಸುವಂತ ಪರಿಸ್ಥಿತಿ ಬಂದಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಹಿಮಾಚಲ ಪ್ರದೇಶದ ಮಾರುಕಟ್ಟೆಯಲ್ಲಿ ಸೇಬಿಗಿಂತ ಟೊಮೆಟೊ ಬೆಲೆಯೇ ಜಾಸ್ತಿಯಾಗಿದೆ.

    ಸಾಮಾನ್ಯವಾಗಿ ಟೊಮೆಟೊಗಿಂತ ಸೇಬು ಹಣ್ಣು ಹೆಚ್ಚಿನ ಬೆಲೆ ಮಾರಾಟವಾಗುತ್ತದೆ. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಮಾರುಕಟ್ಟೆಯಲ್ಲಿ ಸೇಬಿಗಿಂತ (Apple) ಟೊಮೆಟೊ ದುಬಾರಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಟೊಮೆಟೊ ಕೆಜಿಗೆ 90 ರಿಂದ 95 ರೂ.ಗೆ ಮಾರಾಟವಾಗುತ್ತಿದ್ದು, ಸೇಬು ಕೆಜಿಗೆ 70 ರಿಂದ 80 ರೂ.ಗೆ ಮಾರಾಟವಾಗುತ್ತಿದೆ. ಇದನ್ನೂ ಓದಿ: 30 ವರ್ಷ ಗಡಿಯಲ್ಲಿ ಸೇವೆ ಸಲ್ಲಿಸಿ ತವರಿಗೆ ವಾಪಸ್ಸಾದ ವೀರಯೋಧನಿಗೆ ಅದ್ಧೂರಿ ಸ್ವಾಗತ

    ಹಿಮಾಚಲ ಪ್ರದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುವ ಹಣ್ಣು ಸೇಬು. ಆದರೆ ಈ ಬಾರಿ ಹಿಮಾಚಲದ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಟೊಮೆಟೊ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ. ಸತತ ಮಳೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ಉತ್ಪಾದನೆ ಗಣನೀಯವಾಗಿ ಕುಸಿದಿರುವುದರಿಂದ ಟೊಮೆಟೊ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಹಂಗಾಮಿನ ಆರಂಭದಲ್ಲಿ ಒಂದು ಕ್ರೇಟ್‌ಗೆ 800 ರಿಂದ 900 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ 1,800 ರಿಂದ 2,300 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಒಂದು ಕ್ರೇಟ್‌ಗೆ 500 ರಿಂದ 1,700 ವರೆಗೆ ಟೊಮೆಟೊ ಮಾರಾಟವಾಗಿತ್ತು.

    ದೇಶದ ಪ್ರಮುಖ ಮಂಡಿಗಳಾದ ಬೆಂಗಳೂರು, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಟೊಮೆಟೊ ಕೊರತೆ ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಮಾಚಲದ ಬೆಟ್ಟದ ಟೊಮೆಟೊ ಈ ದೊಡ್ಡ ಮಂಡಿಗಳ ಬೇಡಿಕೆಯನ್ನು ಪೂರೈಸುತ್ತಿದೆ. ಇಲ್ಲಿ ಪೂರೈಕೆ ಹೆಚ್ಚಿರುವುದರಿಂದ ರೈತರಿಗೆ ಉತ್ತಮ ಬೆಲೆಯೂ ಸಿಗುತ್ತಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: Maharashtra Accident: ಮತ್ತೊಂದು ಭೀಕರ ಅಪಘಾತದಲ್ಲಿ 10 ಮಂದಿ ಸಾವು

    ಮಳೆಯಿಂದಾಗಿ ಬೆಂಗಳೂರಿನ ಟೊಮೆಟೊಗಳು ದೇಶದ ದೊಡ್ಡ ದೊಡ್ಡ ಮಂಡಿಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಹಿಮಾಚಲದಿಂದ ಆ ದೊಡ್ಡ ಮಂಡಿಗಳಿಗೆ ಟೊಮೆಟೊ ಪೂರೈಕೆಯಾಗುತ್ತಿದೆ. ಮುಂದಿನ 2 ವಾರಗಳಲ್ಲಿ ರೈತರಿಗೆ ಪ್ರತಿ ಕ್ರೇಟ್‌ಗೆ 1,800 ರಿಂದ 2,300 ರೂ. ವರೆಗೆ ಬೆಲೆ ಸಿಗಲಿದೆ ಎನ್ನುತ್ತಿದ್ದಾರೆ ಮಂಡಿಗಳ ಏಜೆಂಟರು.

    ಈಗ ಸೇಬಿನ ಋತು ಆರಂಭವಾಗಿದೆ. ಹೀಗಾಗಿ ಹಣ್ಣಿನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇಬು ಬರುತ್ತಿದೆ. ಇದರಿಂದ ಸೇಬಿನ ಬೆಲೆ ಇಳಿಮುಖವಾಗಿದೆ ಎಂದು ಸಹ ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರೋಲಿ ಗ್ಯಾಂಗ್‍ರೇಪ್- ಮೂವರ ಬಂಧನ

    ಹರೋಲಿ ಗ್ಯಾಂಗ್‍ರೇಪ್- ಮೂವರ ಬಂಧನ

    ಶಿಮ್ಲಾ: ಹರೋಲಿ ಗ್ಯಾಂಗ್‍ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹಿಮಾಚಲಪ್ರದೇಶದ ಉನಾ ಜಿಲ್ಲೆಯ ಹರೋಲಿ ಗ್ರಾಮದ 22 ವರ್ಷದ ಯುವತಿ ಮೇಲೆ ಮೂವರು ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. ಶುಕ್ರವಾರ ಹರೋಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆ ಹೇಳಿಕೆಯನ್ನಾಧರಿಸಿ ಮೂವರನ್ನ ಬಂಧಿಸಿದ್ದಾರೆ.

    ಶನಿವಾರ ತಡರಾತ್ರಿ ಮೂವರ ಬಂಧನವಾಗಿದ್ದು, ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಗ್ರಾಮದ ನಿವಾಸಿಗಳಾಗಿದ್ದಾರೆ. ಪ್ರಕರಣ ಸಂಬಂಧ ಗ್ರಾಮಸ್ಥರು ಮತ್ತು ಕುಟುಂಬದವರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    – ಬಿಜೆಪಿ ಆಡಳಿತವಿರೋ ರಾಜ್ಯದಲ್ಲೇ ಘಟನೆ

    ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದ ಮಕ್ಕಳಿಗೆ ಶಾಲೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಆನ್‍ಲೈನ್ ತರಗತಿಗಳನ್ನು ಆರಂಭಿಸಿದ್ದಾರೆ. ಈ ಆನ್‍ಲೈನ್ ಕ್ಲಾಸಿಗೆ ಮೊಬೈಲ್ ಬಹುಮುಖ್ಯವಾಗಿದೆ. ಹೀಗಾಗಿ ಬಡ ತಂದೆಯೊಬ್ಬ ತನ್ನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಈ ಮೂಲಕ ತನ್ನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ.

    ಹೌದು. ಈ ಘಟನೆ ನಡೆದಿರುವುದು ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ. ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಿದ್ದಾರೆ. ಆದರೆ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ.

    ಹಸುವನ್ನು ಪುಣ್ಯಕೋಟಿ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ತಾಯಿಯಂತೆ ಹಸುವನ್ನು ಪೂಜಿಸಲಾಗುತ್ತಿದೆ. ಈ ಮಧ್ಯೆ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸುವನ್ನೇ ಮಾರಿರುವುದು ನಿಜಕ್ಕೂ ಬೇಸರದ ಸಂಗತಿ. ಪರಿಶಿಷ್ಠ ಜಾತಿಗೆ ಸೇರಿರುವ ಕುಲ್ದೀಪ್, ಕಾಂಗ್ರಾ ಜಿಲ್ಲೆಯ ತಹಸಿಲ್ ನ ಗುಮ್ಮರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಮಗಳು ಅನು ಹಾಗೂ ಮಗ ವಾನ್ಶ್ ಸರ್ಕಾರಿ ಶಾಲೆಯಲ್ಲಿ 4 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದಾರೆ.

    ಕೊರೊನಾ ಎಂಬ ಮಹಾಮಾರಿ ವೈರಸ್ ಭೀತಿಯಿಂದ ರಾಜ್ಯದಲ್ಲಿ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಗಳನ್ನು ಆರಂಭಿಸಲಾಯಿತು. ಆದರೆ ಕುಲ್ದೀಪ್ ಮಕ್ಕಳಿಗೆ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಹಾಗೂ ನೆಟ್ ಕನೆಕ್ಷನ್ ಇರಲಿಲ್ಲ. ಇದರಿಂದ ಬೇಸರಗೊಂಡು ತನ್ನ ಮಕ್ಕಳ ಓದು ಅರ್ಧಕ್ಕೆ ನಿಲ್ಲಬಾರದೆಂದು ಮೊಬೈಲ್ ಖರೀದಿ ಮಾಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ.

    ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾದರು. ಕುಮಾರ್ ಹಾಲು ಮಾರಾಟ ಮಾಡುತ್ತಿದ್ದರೆ, ಪತ್ನಿ ಕೂಲಿ ಕೆಸ ಮಾಡುತ್ತಿದ್ದರು. ಈ ಮೂಲಕ ಇಬ್ಬರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದರು.

    ಹಸು ಮಾರುವ ಮೊದಲು ಕುಮಾರ್ ಕುಟುಂಬ, ಬ್ಯಾಂಕ್ ಬಾಗಿಲು ತಟ್ಟಿದೆ. ಅಲ್ಲದೆ ಖಾಸಗಿ ಸಾಲಗಾರರ ಮೊರೆಯೂ ಹೋಗಿದ್ದಾರೆ. ಆದರೆ ಎಲ್ಲಿಯೂ ಕುಮಾರ್ ಗೆ ಸಾಲ ದೊರಕಿರಲಿಲ್ಲ. ಇತ್ತ ಅದಾಗಲೇ ಆನ್‍ಕ್ಲಾಸ್ ಆರಂಭಿಸಿರುವ ಶಿಕ್ಷಕರು, ನಿಮ್ಮ ಮಕ್ಕಳ ಓದು ಮುಂದುವರಿಯಬೇಕಾದರೆ ಅವರಿಗೆ ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸಿ ಎಂದು ಒತ್ತಡ ಹಾಕಲು ಆರಂಭಿಸಿದ್ದಾರೆ. ಪರಿಣಾಮ ಬೇರೆ ದಾರಿ ಇಲ್ಲದೆ ಹಸುವನ್ನು ಮಾರಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಸದ್ಯ ಅವರಲ್ಲಿ ಉಳಿದ ಇನ್ನೊಂದು ಹಸುವೇ ಜೀವನಾಧಾರವಾಗಿದೆ. ಇಷ್ಟು ಮಾತ್ರವಲ್ಲದೆ ಇದೀಗ ಕುಟುಂಬ ಮತ್ತೊಂದು ಕಷ್ಟವನ್ನು ಅನುಭವಿಸುತ್ತಿದೆ. ಅದೇನೆಂದರೆ, ಒಂದೇ ಫೋನಿನಲ್ಲಿ ಇಬ್ಬರು ಮಕ್ಕಳು ಏಕಕಾಲದಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ತರಗತಿಗೆ ಹಾಜರಾಗಲು ಇಬ್ಬರು ಮಕ್ಕಳು ಬೆಳಗೆದ್ದು ಜಗಳವಾಡುತ್ತಿರುವುದನ್ನು ನೋಡಲು ಕುಮಾರ್ ಕೈಯಲ್ಲಿ ಆಗುತ್ತಿಲ್ಲ.

    ಬಡವರಿಗೆ ನೀಡುವ ಸೌಲಭ್ಯಗಳನ್ನು ಪಡೆಯುವಲ್ಲಿ ಕುಮಾರ್ ವಂಚಿತರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುವ ಅರ್ಹತೆ ಕುಮಾರ್ ಕುಟುಂಬಕ್ಕಿದೆ. ಕುಮಾರ್ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಧವಾಲಾಗೆ ತಿಳಿಸಿದಾಗ, ಸರ್ಕಾರದಿಂದ ಕುಮಾರ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನಿಡಿದ್ದಾರೆ.

  • ಕೊರೊನಾಗೆ 10ನೇ ಬಲಿ- 69 ವರ್ಷದ ವೃದ್ಧ ಸಾವು

    ಕೊರೊನಾಗೆ 10ನೇ ಬಲಿ- 69 ವರ್ಷದ ವೃದ್ಧ ಸಾವು

    ನವದೆಹಲಿ: ಕೊರೊನಾ ವೈರಸ್ ಮಾಹಾಮಾರಿ ಇಂದು ಭಾರತದಲ್ಲಿ ಮೂರನೇ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

    ಹಿಮಾಚಲ ಪ್ರದೇಶದ 69 ವರ್ಷದ ವೃದ್ಧ ಸಾವನ್ನಪ್ಪಿದ ವ್ಯಕ್ತಿ. ಮಾರ್ಚ್ 15ರಂದು ಯುಎಸ್ ನಿಂದ ಹಿಂದಿರುಗಿದ್ದ ವೃದ್ಧನನ್ನು ಟಂಡಾ ಆಸ್ಪತ್ರಯಲ್ಲಿ ಚಿಕಿತ್ಸೆ ನೀಡಲಾಗುತ್ತಿತು. ಇಂದು ಮಧ್ಯಾಹ್ನ ಪಶ್ಚಿಮ ಬಂಗಾಳದಲ್ಲಿ ಇಟಲಿ ಪ್ರವಾಸದಿಂದ ಬಂದಿದ್ದ ವ್ಯಕ್ತಿ ಮತ್ತು ಮಹಾರಾಷ್ಟ್ರದಲ್ಲಿ ಓರ್ವ ಸಾವನ್ನಪ್ಪಿದ್ದರು. ನೆರೆಯ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಇನ್ನು ಕರ್ನಾಟಕದಲ್ಲಿ ಏಳು ಸೋಂಕಿತರು ಪತ್ತೆಯಾಗಿದ್ದು, ಆತಂಕಕ್ಕೊಳಗಾದ ಜನರು ಬೆಂಗಳೂರು ತೊರೆಯುತ್ತಿದ್ದಾರೆ.

    ಜಗತ್ತಿನಾದ್ಯಂತ ಲಂಗುಲಗಾಮಿಲ್ಲದೇ ರೌದ್ರತಾಂಡವವಾಡ್ತಿರುವ ಕೊರೋನಾ ಹೆಮ್ಮಾರಿಗೆ ಇಲ್ಲಿವರೆಗೆ 15,306 ಮಂದಿ ಬಲಿಯಾಗಿದ್ದಾರೆ. 3.50 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಅಮೆರಿಕಾದಲ್ಲಿ ಕೊರೋನಾಗೆ ನಿನ್ನೆ ಒಂದೇ ದಿನ 100 ಮಂದಿ ಮೃತಪಟ್ಟಿದ್ದು, ಒಟ್ಟಾರೆ 458 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 34 ಸಾವಿರ ದಾಟಿದೆ.

    ಚೀನಾ ಇಟಲಿ ಬಳಿಕ ಹೆಚ್ಚಿನ ಸಂಖ್ಯೆ ವೈರಸ್ ಬಾಧಿತರು ಇರೋದು ಅಮೆರಿಕಾದಲ್ಲಿ ಎಂದು ವರದಿಯಾಗಿದೆ. ಇಟಲಿಯಲ್ಲಿ ಎರಡು ದಿನಕ್ಕೆ ಹೋಲಿಸಿದ್ರೆ ನಿನ್ನೆ ಮೃತರ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 5500ಕ್ಕೆ ಏರಿಕೆಯಾಗಿದೆ. ಸ್ಪೇನ್‍ನಲ್ಲಿ 2182, ಇರಾನ್‍ನಲ್ಲಿ 1812, ಫ್ರಾನ್ಸ್ 674, ಬ್ರಿಟನ್ 281, ನೆದರ್ ಲೆಂಡ್‍ನಲ್ಲಿ 179, ಜರ್ಮನಿಯಲ್ಲಿ 111 ಮಂದಿ ಸಾವನ್ನಪ್ಪಿದ್ದಾರೆ. ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್‍ರಲ್ಲಿ ಸೋಂಕು ಲಕ್ಷಣ ಕಂಡು ಬಂದಿದ್ದು, ಕ್ವಾರಂಟೇನ್‍ನಲ್ಲಿ ಇರಿಸಲಾಗಿದೆ. ನ್ಯೂಯಾರ್ಕ್ ನಗರದ ಜೈಲುಗಳಲ್ಲಿ 38 ಮಂದಿಗೆ ಕೊರೋನಾ ಸೋಂಕು ಕಂಡು ಬಂದಿದೆ

  • ಪ್ರಪಾತಕ್ಕೆ ಜಾರಿ, ಪಲ್ಟಿ ಹೊಡೆದ ಕಾರು- 11 ಸಾವು

    ಪ್ರಪಾತಕ್ಕೆ ಜಾರಿ, ಪಲ್ಟಿ ಹೊಡೆದ ಕಾರು- 11 ಸಾವು

    ಶಿಮ್ಲಾ: ಪ್ರಪಾತಕ್ಕೆ ಕಾರು ಉರುಳಿ ಬಿದ್ದ ಪರಿಣಾಮ 11 ಜನರು ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ರಾಣಿ ನಲ್ಲಾ ಪ್ರದೇಶದಲ್ಲಿ ನಡೆದಿದೆ.

    ಎತ್ತರ ರಸ್ತೆಯಿಂದ ಬಿದ್ದ ಕಾರು ಪಲ್ಟಿಹೊಡೆಯುತ್ತ ಕಲ್ಲಿನ ಬಂಡೆಯ ಮೇಲೆ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಮೃತ ದೇಹ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಇದಕ್ಕೂ ಮುನ್ನ ಮುಂಬೈನ ಪೋಳಾದ್ಪುರ್ ನಲ್ಲಿ ನಡೆದ ಘಟನೆಯೊಂದರಲ್ಲಿ ವಿಶ್ವವಿದ್ಯಾಲಯದ 33 ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಈ ದುರ್ಘಟನೆಯಲ್ಲಿ ಅದೃಷ್ಟವಶಾತ್ ಪ್ರಕಾಶ್ ಸಾವಂತ್ ಎಂಬವರು ಮಾತ್ರ ಬದುಕುಳಿದಿದ್ದರು.

    34 ಮಂದಿ ಪ್ರವಾಸ ಕೈಗೊಂಡಿದ್ದೇವು. ಈ ವೇಳೆ ಪೋಳಾದ್ಪುರ್ ಸಮೀಪದಲ್ಲಿ ಬಸ್ಸು ರಾಡಿಯಲ್ಲಿ ಜಾರಿ ಪ್ರಪಾತಕ್ಕೆ ಬಿದ್ದಿತ್ತು. ಇದರಿಂದಾಗಿ ಮರಗಳನ್ನು ತಾಕಿ, ಪಲ್ಟಿ ಹೊಡೆಯುತ್ತಿತ್ತು. ನಾನು ಹಾರಿ ಪ್ರಾಣ ಉಳಿಸಿಕೊಂಡೆ ಎಂದು ಪ್ರಕಾಶ್, ಮಾಧ್ಯಮಗಳ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗುಜರಾತ್‍ನಲ್ಲಿ ಸಿಕ್ಸರ್ ಭಾರಿಸಿದ ಬಿಜೆಪಿ: ಫಲಿತಾಂಶ ಸಂಪೂರ್ಣ ಮಾಹಿತಿ ಇಲ್ಲಿದೆ

    ಗುಜರಾತ್‍ನಲ್ಲಿ ಸಿಕ್ಸರ್ ಭಾರಿಸಿದ ಬಿಜೆಪಿ: ಫಲಿತಾಂಶ ಸಂಪೂರ್ಣ ಮಾಹಿತಿ ಇಲ್ಲಿದೆ

    ನವದೆಹಲಿ: ಇಡೀ ದೇಶದ ಕುತೂಹಲ ಕೆರಳಿಸಿದ್ದ ಗುಜರಾತ್ ಫಲಿತಾಂಶ ಹೊರಹೊಮ್ಮಿದೆ. ಗುಜರಾತ್‍ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಿದೆ. ಆದ್ರೆ, ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿಯ ಗೆಲುವು ಭರ್ಜರಿಯಾಗಿಲ್ಲ.

    182 ಕ್ಷೇತ್ರಗಳಲ್ಲಿ 99 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರ ರಚನೆಗೆ ಯಾವುದೇ ಸಮಸ್ಯೆ ಇಲ್ಲ. ಹಾಗಂದ ಮಾತ್ರಕ್ಕೆ ಬಿಜೆಪಿ ಖುಷಿ ಪಡುವಂತ್ತಿಲ್ಲ. ಯಾಕಂದ್ರೆ, ಕಾಂಗ್ರೆಸ್ ಭಾರೀ ಪೈಪೋಟಿಯನ್ನೇ ನೀಡಿದೆ. ಕಳೆದ ಮೂರು ದಶಕಗಳಲ್ಲಿಯೇ ಈ ಬಾರಿಯ ಫಲಿತಾಂಶ ಕಾಂಗ್ರೆಸ್‍ಗೆ ಅದ್ವಿತೀಯ ಸಾಧನೆಯೇ ಸರಿ.

    ಒಟ್ಟು ಕ್ಷೇತ್ರ – 182
    ಸರಳ ಬಹುಮತ – 92
    ಪಕ್ಷ         2017 2012 ವ್ಯತ್ಯಾಸ
    ಬಿಜೆಪಿ        99   115    – 16
    ಕಾಂಗ್ರೆಸ್    80   61    + 19
    ಇತರೆ        03     06   – 03

    ಗುಜರಾತ್‍ನ ವಲಯವಾರು ಫಲಿತಾಂಶ ಹೇಗಿದೆ?
    * ಉತ್ತರ ಗುಜರಾತ್ – 53 ಸ್ಥಾನ ಬಿಜೆಪಿ- 30, ಕಾಂಗ್ರೆಸ್- 23
    * ಸೌರಾಷ್ಟ್ರ-ಕಚ್ – 54 ಸ್ಥಾನ ಬಿಜೆಪಿ- 23, ಕಾಂಗ್ರೆಸ್ – 30, ಇತರೆ – 01
    * ದಕ್ಷಿಣ ಗುಜರಾತ್ – 35 ಸ್ಥಾನ ಬಿಜೆಪಿ- 24, ಕಾಂಗ್ರೆಸ್- 11
    * ಮಧ್ಯ ಗುಜರಾತ್ – 40 ಸ್ಥಾನ ಬಿಜೆಪಿ- 22, ಕಾಂಗ್ರೆಸ್- 16, ಇತರೆ – 02

    ಗುಜರಾತ್ ನಗರ:
    ನಗರವಾರು ಫಲಿತಾಂಶ – 55 ಸ್ಥಾನ ಬಿಜೆಪಿ- 46 , ಕಾಂಗ್ರೆಸ್ – 09
    ಅಹಮದಾಬಾದ್: ಬಿಜೆಪಿ – 16, ಕಾಂಗ್ರೆಸ್ – 05
    ರಾಜ್‍ಕೋಟ್ : ಬಿಜೆಪಿ – 06, ಕಾಂಗ್ರೆಸ್ – 02
    ಸೂರತ್ : ಬಿಜೆಪಿ – 15, ಕಾಂಗ್ರೆಸ್ – 01
    ವಡೋದರ : ಬಿಜೆಪಿ – 09, ಕಾಂಗ್ರೆಸ್ – 01

    ಗುಜರಾತ್ ಗ್ರಾಮೀಣ
    ಗ್ರಾಮೀಣ ಭಾಗ ಒಟ್ಟು 127 ಸ್ಥಾನ ಬಿಜೆಪಿ 56, ಕಾಂಗ್ರೆಸ್ – 71

    ಜಯಗಳಿಸಿದ ನಾಯಕರು:
    ವಿಜಯರೂಪಾನಿ, ಬಿಜೆಪಿ – ರಾಜ್‍ಕೋಟ್ ಪಶ್ಚಿಮ
    ನಿತಿನ್ ಪಟೇಲ್, ಬಿಜೆಪಿ – ಮಹೆಸಾನ
    ಜಿಗ್ನೇಶ್ ಮೇವಾನಿ, ಪಕ್ಷೇತರ – ವಡಗಾಂವ್ (ಕಾಂಗ್ರೆಸ್ ಬೆಂಬಲಿತ)
    ಅಲ್ಪೇಶ್ ಠಾಕೂರ್, ಕಾಂಗ್ರೆಸ್ – ರಾಧನ್‍ಪುರ

    ಸೋತ ನಾಯಕರು:
    ಅರ್ಜುನ್ ಮೊಧ್ವಾಡಿಯಾ, ಕಾಂಗ್ರೆಸ್ – ಪೋರ್‍ಬಂದರ್
    ಶಕ್ತಿಸಿಂಘ್ ಗೋಯಲ್, ಕಾಂಗ್ರೆಸ್ – ಮಾಂಡ್ವಿ
    ಸಿದ್ದಾರ್ಥ್ ಪಟೇಲ್, ಕಾಂಗ್ರೆಸ್ – ದಾಬೋಯ್
    ಇಂದ್ರನೀಲ್ ರಾಜಗುರು, ಕಾಂಗ್ರೆಸ್ – ರಾಜ್‍ಕೋಟ್ ಪಶ್ಚಿಮ

    ಯಾವ ವರ್ಷ ಬಿಜೆಪಿ ಎಷ್ಟು ಸ್ಥಾನ ಗೆದ್ದಿದೆ?
    1995 – 121
    2002 – 127
    2007 – 117
    2012 – 115

    ಕೈಗೆ ಮುಖಭಂಗ:
    ಹಿಮಾಚಲ ಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ. ಜನಾಕ್ರೋಶಕ್ಕೆ ಕಾಂಗ್ರೆಸ್ ಬಲಿಯಾಗಿದ್ದು, ಬಿಜೆಪಿ ಅಧಿಕಾರಕ್ಕೇರಿದೆ. ಈ ಮೂಲಕ, ಬಿಜೆಪಿ ಮತ್ತು ಎನ್‍ಡಿಎ ಮಿತ್ರಕೂಟ ಇರೋ ರಾಜ್ಯಗಳ ಸಾಲಿಗೆ 19ನೇ ರಾಜ್ಯವಾಗಿ ಹಿಮಾಚಲ ಪ್ರದೇಶ ಸೇರಿದೆ. ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್‍ಕುಮಾರ್ ಧುಮಾಲ್ ಸೋಲನ್ನ ಕಂಡಿದ್ರೆ, ಕಾಂಗ್ರೆಸ್‍ನ ವೀರಭದ್ರ ಸಿಂಗ್ ಜಯ ಸಾಧಿಸಿದ್ದಾರೆ. ಇನ್ನು

    ಒಟ್ಟು ಕ್ಷೇತ್ರ – 68
    ಸರಳ ಬಹುಮತ – 35
    ಪಕ್ಷ 2017 2012 ವ್ಯತ್ಯಾಸ
    ಬಿಜೆಪಿ 44 26 + 17
    ಕಾಂಗ್ರೆಸ್ 21 36 – 15
    ಇತರೆ 03 06 – 2

  • 2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

    2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

    ನವದೆಹಲಿ: ಗುಜರಾತ್ ಉಳಿಸಿಕೊಂಡು ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ನಿಂದ ತನ್ನ ತೆಕ್ಕೆಗೆ ಹಾಕುವ ಮೂಲಕ ಮೋದಿ ತನ್ನ ಸಮಾಜ್ರ್ಯವನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ.

    2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ, 13 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಆದರೆ ಮೂರೇ ವರ್ಷದಲ್ಲಿ ಬಿಜೆಪಿ 12 ರಾಜ್ಯದಲ್ಲಿ ಗೆಲ್ಲುವ ಮೂಲಕ ಒಟ್ಟು 19 ರಾಜ್ಯದಲ್ಲಿ ಈಗ ಆಡಳಿತ ವಿಸ್ತರಣೆ ಮಾಡಿಕೊಂಡಿದೆ. ಕಾಂಗ್ರೆಸ್ 9 ರಾಜ್ಯಗಳನ್ನು ಕಳೆದುಕೊಂಡು ಈಗ ಕೇವಲ  ಕರ್ನಾಟಕ, ಮಿಜೋರಾಂ, ಪಂಜಾಬ್, ಮೇಘಾಲಯದಲ್ಲಿ  ಅಧಿಕಾರಲ್ಲಿದೆ.

    ಕರ್ನಾಟಕ, ಮಿಜೋರಾಂ, ಮೇಘಾಲಯದಲ್ಲಿ  ಮೋದಿ ಅಧಿಕಾರಕ್ಕೆ ಏರುವ ಮೊದಲೇ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ಪಂಜಾಬ್ ನಲ್ಲಿ 2012ರಲ್ಲಿ  ಶೀರೋಮಣಿ ಅಖಾಲಿದಳ ಗೆದ್ದಿತ್ತು. ಆದರೆ ಈ ವರ್ಷ ಎನ್‍ಡಿಎ ಮೈತ್ರಿಕೂಟಕ್ಕೆ ಸೋಲಾಗಿದ್ದರಿಂದ ಕಾಂಗ್ರೆಸ್ ತೆಕ್ಕೆಗೆ ಪಂಜಾಬ್ ಸಿಕ್ಕಿದೆ.  ಹೀಗಾಗಿ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಗುಜರಾತ್ ನಲ್ಲೂ ಸೋಲಾಗಲಿದೆ ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಆಗಿದೆ.

    ಈ ವರ್ಷ ಉತ್ತರಪ್ರದೇಶದಲ್ಲಿ ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಒಟ್ಟು 403 ಸ್ಥಾನಗಳಲ್ಲಿ 312 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿತ್ತು. ಇದರ ಜೊತೆ ಮಣಿಪುರ ಮತ್ತು ಗೋವಾದಲ್ಲೂ ಸರ್ಕಾರ ರಚನೆ ಮಾಡಿತ್ತು.

    ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಜಯಗಳಿಸಿದ ಬಳಿಕ ಬಿಜೆಪಿ, ಬಿಜೆಪಿ ಮೈತ್ರಿಕೂಟ ಇಲ್ಲದೇ ಇರುವುದು ಕೇವಲ 10 ರಾಜ್ಯಗಳು ಮಾತ್ರ. ಕರ್ನಾಟಕ(ಕಾಂಗ್ರೆಸ್), ತಮಿಳುನಾಡು(ಎಐಎಡಿಎಂಕೆ), ಕೇರಳ(ಸಿಪಿಐಎಂ), ಪಶ್ಚಿಮ ಬಂಗಾಳ(ತೃಣಮೂಲ ಕಾಂಗ್ರೆಸ್), ಒಡಿಶಾ(ಬಿಜು ಜನತಾ ದಳ) ಮೇಘಾಲಯ(ಕಾಂಗ್ರೆಸ್), ತೆಲಂಗಾಣ(ತೆಲಂಗಾಣ ರಾಷ್ಟ್ರೀಯ ಸಮಿತಿ), ಮಿಜೋರಾಂ( ಕಾಂಗ್ರೆಸ್) ದೆಹಲಿ(ಆಮ್ ಆದ್ಮಿ ಪಾರ್ಟಿ), ತ್ರಿಪುರಾ(ಸಿಪಿಐ-ಎಂ)

    ಆಂಧ್ರಪ್ರದೇಶವನ್ನು ಆಳುತ್ತಿರುವ ಟಿಡಿಪಿ ಮತ್ತು ನಾಗಾಲ್ಯಾಂಡ್ ನಲ್ಲಿರುವ ಎನ್‍ಪಿಎಫ್ ಎನ್‍ಡಿಎ ಸದಸ್ಯ ಪಕ್ಷವಾಗಿದೆ. ಬಿಹಾರ ಮತ್ತು ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿಕೂಟ ಆಡಳಿತದಲ್ಲಿದೆ. 2018ರಲ್ಲಿ ಕರ್ನಾಟಕ, ಮಿಜೋರಾಂ, ತ್ರಿಪುರ, ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

     ಅರುಣಾಚಲ ಪ್ರದೇಶ್, ಅಸ್ಸಾಂ, ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‍ಗಡ, ಗೋವಾ, ಗುಜರಾತ್, ಜಾರ್ಖಂಡ್, ಜಮ್ಮುಮತ್ತು ಕಾಶ್ಮೀರ, ಹರ್ಯಾಣ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ.

     

  • ಇವಿಎಂನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಿಲ್ಲ: ಪ್ರಿಯಾಂಕ್ ಖರ್ಗೆ

    ಇವಿಎಂನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಿಲ್ಲ: ಪ್ರಿಯಾಂಕ್ ಖರ್ಗೆ

    ಯಾದಗಿರಿ: ಇವಿಎಂನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಏನಾದರೂ ಲೋಪದೋಷಗಳಿದ್ದರೆ ಬಗೆಹರಿಸಲು ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದೆವು ಎಂದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯದ ಸ್ಥಿತಿ ನೋಡಿದರೆ ನಾವು ಈಗಲೇ ಫಲಿತಾಂಶ ಹೇಳಲು ಸಾಧ್ಯವಿಲ್ಲ. ಚುನಾವಣೋತ್ತರ ಸರ್ವೆಯಲ್ಲಿ ಕಾಂಗ್ರೆಸ್ ಹಿನ್ನೆಡೆಯಾಗಲಿದೆ ಎನ್ನುವ ಫಲಿತಾಂಶ ಬಂದಿದ್ದರೆ, ಈಗ ನಾವು ಮುನ್ನಡೆಯಲ್ಲಿದ್ದೇವೆ. ಈಗಲೇ ನಾನು ಫಲಿತಾಂಶದ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದರು.

    ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ಇವಿಎಂ ಇಷ್ಟ ಪಟ್ಟರೆ ಇರಲಿ. ಗುಜರಾತ್ ಹಾಗೂ ಹಿಮಾಚಲದಲ್ಲಿ ಕಾಂಗ್ರೆಸ್ ಗೆದ್ದರೆ ನೇರವಾಗಿ ನಮ್ಮ ರಾಜ್ಯದಲ್ಲಿ ಪರಿಣಾಮ ಬೀರುತ್ತದೆ ಎನ್ನುವುದಕ್ಕಿಂತ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಲಿದೆ. 22 ವರ್ಷಗಳ ನಂತರ ಗುಜರಾತ್‍ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಪ್ರಮುಖ ವಿಚಾರವೇ ಎಂದು ಅವರು ಪ್ರತಿಕ್ರಿಯಿಸಿದರು.

    ಗುಜರಾತ್ ಚುನಾವಣೆಯಲ್ಲಿ ಬಳಕೆಯಾದ ವಿದ್ಯುನ್ಮಾನ ಮತಯಂತ್ರಗಳನ್ನು ಮತ ಎಣಿಕೆಯ ವೇಳೆ ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಚುನಾವಣೆ ಮತ ಎಣಿಕೆ ವೇಳೆ ವಿವಿಪ್ಯಾಟ್ ಗಳಲ್ಲಿ ಬಿದ್ದಿರುವ ವೋಟ್ ಮತ್ತು ಇವಿಎಂನಲ್ಲಿ ಬಿದ್ದಿರುವ ವೋಟ್ ಗಳನ್ನು ತಾಳೆ ಮಾಡಬೇಕು. ಕನಿಷ್ಟ 25% ಇವಿಎಂ ಗಳನ್ನಾದರೂ ಬಳಸಿ ಕ್ರಾಸ್ ಚೆಕ್ ಮಾಡಲು ಚುನಾವಣಾ ಆಯೋಗಕ್ಕೆ ಆದೇಶಿಸಬೇಕು ಎಂದು ಗುಜರಾತ್ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು.

    ವಿಚಾರಣೆ ವೇಳೆ ಈ ಅರ್ಜಿ ಪರಿಶೀಲಿಸಲು ಯೋಗ್ಯವಲ್ಲ. ಇದರ ಬದಲಾಗಿ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಒಂದು ರಿಟ್ ಅರ್ಜಿ ಸಲ್ಲಿಸಿ ಎಂದು ಸೂಚಿಸಿ ಈ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ. ಈ ಸಂದರ್ಭದಲ್ಲಿ ತನ್ನ ಪರಮಾಧಿಕಾರವನ್ನು ಬಳಸಿ ಚುನಾವಣಾ ಆಯೋಗದ ಕಾರ್ಯದಲ್ಲಿ ನಾನು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

    ಗುಜರಾತ್ ಕಾಂಗ್ರೆಸ್, ಇವಿಎಂ ಹ್ಯಾಕ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಇವಿಎಂಗಳಿಗೆ ಬ್ಲೂ ಟೂತ್ ಸಾಧನಗಳನ್ನು ಅಳವಡಿಸಲಾಗಿದೆ. ಹೀಗಾಗಿ ಮತ ಎಣಿಕೆಯ ವೇಳೆ ಇವಿಎಂಗಳನ್ನು ಮರು ಪರಿಶೀಲಸಬೇಕು ಎಂದು ಮನವಿ ಮಾಡಿತ್ತು

    ಇದನ್ನೂ ಓದಿ: ರಾಜ್ಯದಲ್ಲೂ ಶುರುವಾಯ್ತು ಇವಿಎಂ ಗದ್ದಲ

  • ಹಿಮಾಚಲದಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಹಿಮಾಚಲದಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಶಿಮ್ಲಾ: ಆರಂಭಿಕ ಮತ ಎಣಿಕೆಯ ವೇಳೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಸರಳ ಬಹುಮತ ಸಿಕ್ಕಿದೆ.

    ಒಟ್ಟು 68 ಕ್ಷೇತ್ರಗಳಿದ್ದು, ಬಹುಮತಕ್ಕೆ 35 ಸ್ಥಾನಗಳ ಅಗತ್ಯ. ಬೆಳಗ್ಗೆ 9.30ರ ವೇಳೆಗೆ ಬಿಜೆಪಿ 39 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಮುನ್ನಡೆ ಸಾಧಿಸಿದ ಮಾತ್ರಕ್ಕೆ ಇದೇ ಅಂತಿಮ ಫಲಿತಾಂಶವಲ್ಲ. ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿತ್ತು.

    2012ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಜಯಗಳಿಸಿದರೆ ಬಿಜೆಪಿ 26 ಸ್ಥಾನ, ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಕ್ಷಣ, ಕ್ಷಣಕ್ಕೂ ಬದಲಾಗುತ್ತಿದೆ ಗುಜರಾತ್ ಫಲಿತಾಂಶ: ಮುನ್ನಡೆಯಲ್ಲಿ ಕಾಂಗ್ರೆಸ್

    ಕ್ಷಣ, ಕ್ಷಣಕ್ಕೂ ಬದಲಾಗುತ್ತಿದೆ ಗುಜರಾತ್ ಫಲಿತಾಂಶ: ಮುನ್ನಡೆಯಲ್ಲಿ ಕಾಂಗ್ರೆಸ್

    ಗಾಂಧಿನಗರ: ಭಾರೀ ಕುತೂಹಲ ಮೂಡಿಸುತ್ತಿರುವ ಗುಜರಾತ್ ಚುನಾವಣೆಯ ಫಲಿತಾಂಶಗಳು ನಿಮಿಷ ನಿಮಿಷಗಳಲ್ಲಿ ಬದಲಾಗುತ್ತಿದೆ.

    ಆರಂಭದ ಮತ ಎಣಿಕೆಯ ವೇಳೆ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ.

    ಒಂದು ಹಂತದಲ್ಲಿ 95 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದಾಗ ಬಿಜೆಪಿಗೆ ಸರಳ ಬಹುಮತ ಸಿಕ್ಕಿದೆ ಎಂದು ವಿಶ್ಲೇಷಣೆ ಆರಂಭವಾಗಿತ್ತು. ಆದರೆ ಬೆಳಗ್ಗೆ 9.15ರ ವೇಳಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ನೇರಾ ಸ್ಪರ್ಧೆ ಇರುವುದು ಗೊತ್ತಾಯಿತು. ಬಿಜೆಪಿ 77 ಕ್ಷೇತ್ರಗಳಲ್ಲಿ  ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 82, ಇತರೇ ಮೂರು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

    2012ರ ಚುನಾವಣೆಯಲ್ಲಿ 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.