Tag: hill collapse

  • ಗುಡ್ಡ ಕುಸಿದು ನಾಲ್ಕು ಮನೆಗಳು ನೆಲಸಮ – ಮಣ್ಣಿನಡಿ ಸಿಲುಕಿದ ಬಾಲಕರು

    ಗುಡ್ಡ ಕುಸಿದು ನಾಲ್ಕು ಮನೆಗಳು ನೆಲಸಮ – ಮಣ್ಣಿನಡಿ ಸಿಲುಕಿದ ಬಾಲಕರು

    ಮಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಮಂಗಳೂರು ಹೊರವಲಯದ ಗುರುಪುರ ಬಳಿ ಗುಡ್ಡ ಕುಸಿತವಾಗಿದೆ.

    ಗುಡ್ಡದ ಪಕ್ಕದಲ್ಲಿರೋ ನಾಲ್ಕು ಮನೆಗಳು ಮಣ್ಣಿನಡಿ ಸಿಲುಕಿರೋ ಮಾಹಿತಿ ಲಭ್ಯವಾಗಿದೆ. ಮಣ್ಣಿನಡಿಯಲ್ಲಿ 16 ವರ್ಷದ ಮತ್ತು 6 ವರ್ಷದ ಬಾಲಕರಿಬ್ಬರು ಸಿಲುಕಿದ್ದು, ಇಬ್ಬರನ್ನು ಹೊರ ತೆಗೆಯುವ ಕೆಲಸ ನಡೆಯುತ್ತಿದೆ. ಸ್ಥಳಕ್ಕೆ 25 ಜನರ ಎನ್‍ಡಿಆರ್‍ಎಫ್ ತಂಡ ಆಗಮಿಸಿದ್ದು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

    ಗುಡ್ಡದ ಕೆಳ ಭಾಗಗಳಲ್ಲಿ ಕೆಲವು ಮನೆಗಳು ಅಪಾಯದ ಅಂಚಿನಲ್ಲಿವೆ. ಸ್ಥಳಕ್ಕೆ ಅಧಿಕಾರಿಗಳು ಅಪಾಯದ ಅಂಚಿನಲ್ಲಿ ಸಿಲುಕಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರೋದರಿಂದ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು.

  • ಧರೆಗೆ ಉರುಳಿದ ಬೃಹದಾಕಾರದ ಬಂಡೆಗಳು- ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ

    ಧರೆಗೆ ಉರುಳಿದ ಬೃಹದಾಕಾರದ ಬಂಡೆಗಳು- ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ

    ಗದಗ: ಗುಡ್ಡ ಕುಸಿದು ಬೃಹತ್ ಗಾತ್ರದ ಕಲ್ಲುಬಂಡೆಗಳು ಉರುಳಿಬಂದು ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿರುವ ಘಟನೆ ಗಜೇಂದ್ರಗಡ ತಾಲೂಕಿನ ಬೊಮ್ಮಸಾಗರದಲ್ಲಿ ನಡೆದಿದೆ.

    ಬೊಮ್ಮಸಾಗರಕ್ಕೆ ಹೊಂದಿಕೊಂಡು ಬೃಹತ್ ಗುಡ್ಡವಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿಯಲು ಆರಂಭಿಸಿದ್ದು, ಗುರುವಾರ ಭಾರೀ ಅನಾಹುತ ಸೃಷ್ಟಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಗುಡ್ಡ ಕುಸಿತದಿಂದಾಗಿ ಬೃಹದಾಕಾರದ ಬಂಡೆಗಳು ಗ್ರಾಮದ ಕಡೆಗೆ ಉರುಳಿ ಬರುತ್ತಿವೆ. ಪರಿಣಾಮ ಬೊಮ್ಮಸಾಗರ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿದೆ. ಅದೃಷ್ಟವಶಾತ್ ಈ ವೇಳೆ ಉಗ್ರಾಣದಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಆದರೆ ಗ್ರಾಮವು ಗುಡ್ಡದ ಅಡಿಯಲ್ಲೇ ಇರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

    ಗ್ರಾಮಕ್ಕೆ ಗಜೇಂದ್ರಗಡದ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ- ಹಾಲೇರಿಯಲ್ಲಿ ಭೂ ಕುಸಿತ

    ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ- ಹಾಲೇರಿಯಲ್ಲಿ ಭೂ ಕುಸಿತ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯಾಗುತ್ತಿದ್ದು ಗುಡ್ಡ ಕುಸಿತ ಉಂಟಾಗಿ ಮಡಿಕೇರಿ – ಸೋಮವಾರಪೇಟೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಹಾಲೇರಿಯಲ್ಲಿ ಭೂಕುಸಿತ ಸಂಭವಿಸಿದೆ

    ಸ್ಥಳಕ್ಕೆ ಕೊಡಗು ಜಿಲ್ಲಾಡಳಿತದ ಅಧಿಕಾರಿಗಳು ದೌಡಾಯಿಸಿದ್ದು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು ಇದೀಗ ಮತ್ತೊಮ್ಮೆ ಗುಡ್ಡ ಕುಸಿದಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಮಡಿಕೇರಿ- ಸೋಮವಾರಪೇಟೆ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗವನ್ನು ಬಳಕೆ ಮಾಡುತ್ತಿದ್ದಾರೆ. ಮಡಿಕೇರಿಯಿಂದ ಸಿಂಕೋನ ಮಾರ್ಗವಾಗಿ ಸೋಮವಾರಪೇಟೆ ತೆರಳಬಹುದಾಗಿದೆ. ಇದನ್ನೂ ಓದಿ:ಗುಡ್ಡ ಕುಸಿತ: ಮಡಿಕೇರಿ-ಸೋಮವಾರಪೇಟೆ ನಡುವಿನ ರಾಜ್ಯ ಹೆದ್ದಾರಿ ಬಂದ್

    ಅಷ್ಟೇ ಅಲ್ಲದೇ ಬೆಳಿಗ್ಗೆಯಿಂದಲೂ ಮಡಿಕೇರಿ ಸುತ್ತಮುತ್ತಲೂ ಎಡೆಬಿಡದೆ ಮಳೆಯಾಗುತ್ತಿದ್ದು, ಜನರು ಕಂಗಲಾಗಿದ್ದಾರೆ. ಮಳೆಗೆ ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ:ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಮೇಲೆಯೇ ಜನರ ‘ಸಾವಿನ ನಡಿಗೆ’

    ಮುಂಜಾಗೃತ ಕ್ರಮವಾಗಿ ಬೆಟ್ಟದ ತಪ್ಪಲಲ್ಲಿರುವ ಅಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಲಾಗಿದೆ. ಮಳೆ ಮುಂದುವರಿಯುವ ಕುರಿತಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರಿಂದ ಕೊಡಗು ಜಿಲ್ಲಾಡಳಿತ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

  • 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆ ಹೊತ್ತು ಬಂದ ಸೇನಾಪಡೆ

    4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆ ಹೊತ್ತು ಬಂದ ಸೇನಾಪಡೆ

    ಚಿಕ್ಕಮಗಳೂರು: ಗುಡ್ಡ ಕುಸಿತದಿಂದ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ರಕ್ಷಣೆ ಮಾಡಿ, ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆ ಹೊತ್ತು ಸಾಗಿ ರಕ್ಷಿಸಿದೆ.

    ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತಗೊಂಡಿತ್ತು. ಹೀಗಾಗಿ ಮನೆಯಿಂದ ಸುರಕ್ಷಿತ ಪ್ರದೇಶಗಳಿಗೆ ಹೋಗಲು ಆಗದೇ ಕಂಗಾಲಾಗಿದ್ದರು. ಕಳೆದ 6 ದಿನಗಳಿಂದ 10ಕ್ಕೂ ಮಂದಿ ಗ್ರಾಮಸ್ಥರು ಸಂಕಷ್ಟದಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬೆಳಿಗ್ಗೆ 7.30ರಿಂದ ಯೋಧರು ಕಾರ್ಯಾಚರಣೆ ನಡೆಸಲು ಆರಂಭಿಸಿದರು. ಕಷ್ಟಪಟ್ಟು 10ಕ್ಕೂ ಹೆಚ್ಚು ಜನರನ್ನ ಸೇನಾಪಡೆ ರಕ್ಷಣೆ ಮಾಡಿದ್ದು, ಅವರೊಂದಿಗೆ ಸ್ಥಳೀಯ ಯುವಕರು ಕೂಡ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.

    ಸಂತ್ರಸ್ತರಲ್ಲಿ 4 ಮಂದಿಗೆ ಅನಾರೋಗ್ಯ ಸಮಸ್ಯೆ ಎದುರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿಸಲು ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಸೇನಾಪಡೆಯ ಯೋಧರೇ ಸುಮಾರು 5 ಕಿ.ಮೀ ದೂರದವರೆಗೂ ರೋಗಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ತಮ್ಮ ಜೀವದ ಹಂಗು ತೊರೆದು ಸಂತ್ರಸ್ತರ ಜೀವ ಉಳಿಸಿದ ಸೇನಾಪಡೆಗೆ ನಾವೆಂದು ಚಿರಋಣಿ ಎಂದು ಗ್ರಾಮಸ್ಥರು ಯೋಧರಿಗೆ ನಮಿಸಿದ್ದಾರೆ.

  • ಗುಡ್ಡ ಕುಸಿತಕ್ಕೆ 20 ಎಕ್ರೆ ಅಡಿಕೆ ತೋಟ ನೆಲಸಮ

    ಗುಡ್ಡ ಕುಸಿತಕ್ಕೆ 20 ಎಕ್ರೆ ಅಡಿಕೆ ತೋಟ ನೆಲಸಮ

    ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿದ ಮಳೆ ಹಲವು ಅವಾಂತರವನ್ನು ಸೃಷ್ಟಿಸಿದೆ. ಆದರೆ ಸದ್ಯ ಈ ಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಕೆಯಾಗಿದೆ. ಆದರೆ ಹಲವೆಡೆ ಗುಡ್ಡ ಕುಸಿತ ಮುಂದುವರಿದಿದೆ.

    ಮಳೆ ಪ್ರಮಾಣ ಕಡಿಮೆಯಾದರೂ ಅದರಿಂದ ಸೃಷ್ಟಿಯಾಗಿರುವ ಅವಾಂತರ ಮಾತ್ರ ಸರಿಹೋಗಿಲ್ಲ. ಮಳೆರಾಯ ಕೊಂಚ ಬಿಡುವು ಕೊಟ್ಟಿರಬಹುದು. ಆದರೆ ಹಲವೆಡೆ ಗುಡ್ಡ ಕುಸಿತ ಮುಂದುವರಿದಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯಲ್ಲಿ ಬರುವ ಹೆಗಲೆತ್ತಿಯಲ್ಲಿ ಗುಡ್ಡ ಕುಸಿತವಾಗಿ ಸಾಕಷ್ಟು ಹಾನಿ ಉಂಟಾಗಿದೆ.

    ಹೆಗಲೆತ್ತಿ ಗ್ರಾಮದಲ್ಲಿ ಸುರಿದ ಮಳೆಗೆ ಭಾರೀ ರಭಸದೊಂದಿಗೆ ಗುಡ್ಡದ ಒಂದು ಭಾಗ ಕುಸಿದು ಬಿದ್ದಿದೆ. ಅಲ್ಲದೆ ಮಳೆ ನೀರಿನ ಸೆಳೆತಕ್ಕೆ ಮಣ್ಣು ಕೊಚ್ಚಿಹೋಗಿದ್ದು, ಅದರ ಜೊತೆ ನೂರಾರು ಭಾರೀ ಗಾತ್ರದ ಮರಗಳು ಕೂಡ ತೇಲಿ ಬಂದಿವೆ. ಪರಿಣಾಮ ಗ್ರಾಮದ ಅಡಿಕೆ ತೋಟಗಳಿಗೆ ಅಪಾರ ಪ್ರಮಾಣದಲ್ಲಿ ಮಣ್ಣು, ಮರಗಳು ಕೊಚ್ಚಿ ಬಂದು ಸುಮಾರು 20 ಎಕ್ರೆಯಷ್ಟು ಅಡಿಕೆ ತೋಟವನ್ನು ನಾಶ ಮಾಡಿದೆ.

  • ಕಾಫಿನಾಡಲ್ಲಿ ಮನೆ, ತೋಟದ ಮೇಲೆ ಕುಸಿದ ಬೃಹತ್ ಗುಡ್ಡ

    ಕಾಫಿನಾಡಲ್ಲಿ ಮನೆ, ತೋಟದ ಮೇಲೆ ಕುಸಿದ ಬೃಹತ್ ಗುಡ್ಡ

    – ಮಣ್ಣಿನಡಿ ಸಿಲುಕ್ತು ನಾಲ್ಕು ಎಕ್ರೆ ಕಾಫಿ ತೋಟ
    – ಮೃತದೇಹಗಳನ್ನ ಕೊಂಡೊಯ್ಯಲು ಮಾರ್ಗವಿಲ್ಲ

    ಚಿಕ್ಕಮಗಳೂರು: ವರುಣನ ಆರ್ಭಟಕ್ಕೆ ಕಾಫಿನಾಡು ನಲುಗಿ ಹೋಗಿದೆ. ಭಾರೀ ಮಳೆಗೆ ಚಿಕ್ಕಮಗಳೂರಿನ ಸಿರಿವಾಸೆ ಸಮೀಪದ ಹಡ್ಲುಗದ್ದೆ ಗ್ರಾಮದಲ್ಲಿ ಮನೆ, ತೋಟದ ಮೇಲೆ ಬೃಹತ್ ಗುಡ್ಡ ಕುಸಿದು ಬಿದ್ದು ಅವಾಂತರ ಸೃಷ್ಟಿಯಾಗಿದೆ.

    ಮಳೆಗೆ ಗುಡ್ಡ ಕುಸಿದ ಪರಿಣಾಮ ಗುಡ್ಡದ ಸಮೀಪವಿದ್ದ ಹಡ್ಲುಗದ್ದೆ ಗ್ರಾಮದ ನಿವಾಸಿ ನಿತೀಶ್ ಹಾಗೂ ನಂದೀಶ್ ಅವರ ಮನೆ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಡ್ಡ ಕುಸಿತ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಇಡೀ ಗ್ರಾಮವನ್ನೇ ಗ್ರಾಮಸ್ಥರು ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಕೇವಲ ಮನೆ ಮಾತ್ರವಲ್ಲ ನಾಲ್ಕು ಎಕರೆ ಕಾಫಿ ತೋಟ ನೆಲಸಮವಾಗಿದೆ. ಸದ್ಯ ಸಿರಿವಾಸೆ ಸಮೀಪದ ಹಡ್ಲುಗದ್ದೆಯಲ್ಲಿ ಗ್ರಾಮಸ್ಥರು ಆಶ್ರಯ ಪಡೆದಿದ್ದು, ಎಡಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳ ಮೇಲೆ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಇತ್ತ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಕಲ್ಮಕ್ಕಿ ಹಾಗೂ ಕುಕ್ಕೋಡು ಗ್ರಾಮದಲ್ಲಿ ಕೂಡ ಗುಡ್ಡ ಕುಸಿತಗೊಂಡಿದೆ. ಪದೇ- ಪದೇ ಗುಡ್ಡ ಕುಸಿಯುತ್ತಿರುವ ಕಾರಣಕ್ಕೆ ಅದರ ಕೆಳ ಭಾಗ ವಾಸಿಸುವ ಜನರಲ್ಲಿ ಆತಂಕ ಹೆಚ್ಚಾಗಿದೆ. ಕಳಸ ಸುತ್ತಲಿನ ಜನ ಮುಂದೇನಾಗುತ್ತೋ ಎಂಬ ಭೀತಿ ಅಲ್ಲಿನ ಜನರಲ್ಲಿ ಕಾಡುತ್ತಿದೆ.

    ಮೂಡಿಗೆರೆಯ ಬಾಳೂರು ಹೊರಟ್ಟಿಗೆ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣಕ್ಕೆ ಮೃತದೇಹಗಳನ್ನ ಕೊಂಡೊಯ್ಯಲು ಕೂಡ ಮಾರ್ಗವಿಲ್ಲದಂತಾಗಿದೆ. ರಸ್ತೆ ಇಲ್ಲದೇ ಶನಿವಾರದಿಂದಲೂ ಆಸ್ಪತ್ರೆಯ ಅಂಬುಲೆನ್ಸ್‍ನಲ್ಲಿಯೇ ಮೃತ ದೇಹಗಳನ್ನು ಇರಿಸಲಾಗಿದೆ. ಶನಿವಾರ ಹೊರಟ್ಟಿಯಲ್ಲಿ ಗುಡ್ಡ ಕುಸಿದು ತಾಯಿ, ಮಗ ಸಾವನ್ನಪ್ಪಿದ್ದರು. ಅವರ ಶವವನ್ನು ಕೊಂಡೊಯ್ಯಲು ಸಂಬಂಧಿಕರು ಗೋಳಾಡುತ್ತಿದ್ದಾರೆ.

  • ಕೊಡಗಿನಲ್ಲಿ ಮಳೆ – ಮದೆನಾಡು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿತ

    ಕೊಡಗಿನಲ್ಲಿ ಮಳೆ – ಮದೆನಾಡು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿತ

    ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮತ್ತೆ ಗುಡ್ಡ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ರಸ್ತೆಗೆ ಮಣ್ಣು ಬಿದ್ದು ವಾಹನ ಸಂಚಾರಕ್ಕೆ ಸ್ವಲ್ಪ ಕಷ್ಟವಾಗುತ್ತಿದೆ.

    ಮದೆನಾಡು ಬಳಿ ರಾತ್ರಿ 12 ಗಂಟೆಗೆ ಮೇಲೆ ಗುಡ್ಡ ಕುಸಿದಿದೆ. ಕಳೆದ ಬಾರಿ ಮದೆನಾಡು ಗ್ರಾಮದಲ್ಲಿ ಕುಸಿದಿದ್ದ ಗುಡ್ಡವೇ ಮತ್ತೆ ಕುಸಿದಿದೆ. ಆದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

    ಗುಡ್ಡ ಕುಸಿದ ತೀವ್ರತೆಗೆ ವಿದ್ಯುತ್ ಕಂಬ ಬಾಗಿದೆ. ಅಲ್ಲದೆ ರಸ್ತೆಯ ಅರ್ಧ ಭಾಗ ಮಣ್ಣಿನಿಂದ ಆವೃತ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

    ಒಂದು ಭಾಗದಲ್ಲಿ ಮಾತ್ರ ಗುಡ್ಡ ಕುಸಿದಿದ್ದು ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗಿಲ್ಲ. ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

    ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡುರುವ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಇಂದಿನಿಂದ ಜುಲೈ 24ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 204.4 ಮಿಮೀ ಮಳೆ ಬೀಳುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದು, ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದ ಇರಬೇಕು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಸೂಚನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದೆ. ಹಾಗೆಯೇ ಭಗಮಂಡಲ ವ್ಯಾಪ್ತಿಯಲ್ಲಿ ಕೊಂಚ ಮಳೆ ಕಡಿಮೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿವ ಹರಿವು ಇಳಿಮುಖಗೊಂಡಿದೆ.

  • ಕರಾವಳಿಯಲ್ಲಿ ವರುಣನ ಆರ್ಭಟ – ಲಾರಿ ಮೇಲೆ ಗುಡ್ಡ ಕುಸಿತ

    ಕರಾವಳಿಯಲ್ಲಿ ವರುಣನ ಆರ್ಭಟ – ಲಾರಿ ಮೇಲೆ ಗುಡ್ಡ ಕುಸಿತ

    -ಅಸ್ಸಾಂನಲ್ಲಿ ಪ್ರವಾಹ ಭೀತಿ
    -ಉತ್ತರ ಭಾರತದಲ್ಲೂ ಮಳೆಯಬ್ಬರ

    ಕಾರವಾರ: ಕರಾವಳಿ ಭಾಗದಲ್ಲಿ ಮುಂಗಾರು ಆರ್ಭಟಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬಳಿ ನಿಲ್ಲಿಸಿದ್ದ ಲಾರಿ ಮೇಲೆ ಗುಡ್ಡ ಕುಸಿದು ಬಿದ್ದಿದೆ.

    ಮಣ್ಣಿನಲ್ಲಿ ಲಾರಿ ಸಿಲುಕಿಕೊಂಡಿದ್ದು, ಚಾಲಕನಿಗೆ ಗಾಯಗಳಾಗಿದೆ. ಉಡುಪಿಯಲ್ಲಿ 72 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಸುಮಾರು 11 ಮನೆಗಳಿಗೆ ಹಾನಿಯಾಗಿದ್ದು, 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದೆ. ಜೊತೆಗೆ ಸೀತಾ, ಮಡಿಸಾಲು ನದಿಗಳು ತುಂಬಿ ಹರಿಯುತ್ತಿದೆ.

    ತುಂಬಿ ಹರಿಯುತ್ತಿರುವ ವೇದಗಂಗಾ, ದೂಧಗಂಗಾ ಹಾಗೂ ಪಂಚಗಂಗಾ ನದಿಗಳ ರಭಸದಿಂದ ಚಿಕ್ಕೋಡಿ ತಾಲೂಕಿನ 12 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ 6 ಸೇತುವೆಗಳು ಜಲಾವೃತವಾಗಿದೆ. ಮಹಾರಾಷ್ಟ್ರದ ಶಿರೋಳ ತಾಲೂಕಿನ ಸುಪ್ರಸಿದ್ಧ ನರಸಿಂಹವಾಡಿ ದತ್ತ ಮಂದಿರ ಜಲಾವೃತವಾಗಿದೆ. ಕೃಷ್ಣಾ ನದಿ ನೀರಿನ ಒಳಹರಿವು ಕೂಡ ಹೆಚ್ಚಳವಾಗಿದೆ.

    ಉತ್ತರ ಭಾರತದಲ್ಲೂ ಮಳೆಯಬ್ಬರ ಜೋರಾಗಿದ್ದು, ಅಸ್ಸಾಂನಲ್ಲಿ ಪ್ರವಾಹ ಭೀತಿ ಎದುರಾಗಿದೆ. 17 ಜಿಲ್ಲೆಗಳಲ್ಲಿ ಸುಮಾರು ನಾಲ್ಕೂವರೆ ಲಕ್ಷ ಜನಜೀವನ ಅಸ್ತವ್ಯಸ್ತವಾಗಿದೆ. ಬ್ರಹ್ಮಪುತ್ರ ನದಿ ಸೇರಿದಂತೆ ಇತರೆ 5 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 17 ಸಾವಿರ ಹೆಕ್ಟೇರ್ ಪ್ರದೇಶ ಜಲಾವೃತವಾಗಿದ್ದು, 749 ಗ್ರಾಮಗಳು ತತ್ತರಿಸಿವೆ. ಈವರೆಗೂ ಸುಮಾರು 2000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದ್ದು, 53 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

    ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಮುಂದಿನ ದಿನವೂ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನಲ್ಲಿ ಭೂಕುಸಿತ ಆಗಿದೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಗೆ ಸಂಪರ್ಕಿಸುವ ಎನ್10ರಲ್ಲಿ ಭೂಕುಸಿತವಾಗಿ ಸಂಪರ್ಕ ಕಡಿತಗೊಂಡಿದೆ. ಮಹಾರಾಷ್ಟ್ರದ ನಾಸಿಕ್‍ನಲ್ಲಿ ತ್ರಿಯಂಕೇಶ್ವರ ದೇಗುಲ ಸಂಪರ್ಕಿಸುವ ರಸ್ತೆಗಳು ಜಲಾವೃತವಾಗಿದೆ.

  • ಮಂಗಳೂರು ಹಾಸನ ರೈಲ್ವೇ ಟ್ರ್ಯಾಕ್ ಮೇಲೆ ಗುಡ್ಡ ಕುಸಿತ – ಪ್ರಯಾಣಿಕರ ಪರದಾಟ

    ಮಂಗಳೂರು ಹಾಸನ ರೈಲ್ವೇ ಟ್ರ್ಯಾಕ್ ಮೇಲೆ ಗುಡ್ಡ ಕುಸಿತ – ಪ್ರಯಾಣಿಕರ ಪರದಾಟ

    ಹಾಸನ: ಭಾರೀ ಮಳೆಗೆ ಮಂಗಳೂರು- ಹಾಸನ ರೈಲು ಮಾರ್ಗದ ಮೇಲೆ ಮತ್ತೆ ಗುಡ್ಡ ಕುಸಿತ ಪರಿಣಾಮ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ.

    ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದ ರೈಲು ಮಾರ್ಗ ಮದ್ಯ ಸಕಲೇಶಪುರದಲ್ಲಿ ನಿಂತಿದ್ದು, ಇನ್ನು ಮಂಗಳೂರಿನಿಂದ ಹೊರಟ್ಟಿದ್ದ ರೈಲು ಸುಬ್ರಹ್ಮಣ್ಯದಲ್ಲಿ ನಿಂತಿದೆ. ಮಾರ್ಗ ಮಧ್ಯೆ ಸಂಚಾರ ಸ್ಥಗಿತವಾದ ಕಾರಣ ಹಲವರು ತೊಂದರೆ ಅನುಭವಿಸಿದ್ದಾರೆ. ತುರ್ತು ಕಾರ್ಯದ ಮೇಲೆ ತೆರಳಬೇಕಿದ್ದ ಹಲವು ಪ್ರಯಾಣಿಕರು ಬಸ್ ಹಾಗೂ ಇತರೇ ವಾಹನಗಳಲ್ಲಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

    ಸದ್ಯ ಗುಡ್ಡ ಕುಸಿತದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿರುವ ರೈಲ್ವೇ ಅಧಿಕಾರಿಗಳು ಮಣ್ಣು ತೆರವು ಕಾರ್ಯ ಮುಂದುವರಿಸಿದ್ದಾರೆ. ಮೂಲಗಳ ಪ್ರಕಾರ ಕಾರ್ಯಾಚರಣೆ ರಾತ್ರಿ ವೇಳೆಗೆ ಪೂರ್ಣಗೊಳ್ಳುವ ಅವಕಾಶವಿದೆ. ಕಳೆದ ಜೂನ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಮೂರು ಬಾರಿ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿತ್ತು.

  • ಬೈಂದೂರಿನಲ್ಲಿ ರಸ್ತೆ ಮೇಲೆ ಮತ್ತೆ ಗುಡ್ಡ ಕುಸಿತ- 2 ಕಿ.ಮೀ ವರೆಗೂ ನಿಂತ ವಾಹನಗಳು

    ಬೈಂದೂರಿನಲ್ಲಿ ರಸ್ತೆ ಮೇಲೆ ಮತ್ತೆ ಗುಡ್ಡ ಕುಸಿತ- 2 ಕಿ.ಮೀ ವರೆಗೂ ನಿಂತ ವಾಹನಗಳು

    ಉಡುಪಿ: ಜೆಲ್ಲೆಯ ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮತ್ತೆ ಗುಡ್ಡ ಕುಸಿತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು. ಉಡುಪಿಯ ಬೈಂದೂರಿನ ಒತ್ತಿನೆಣೆ ಎಂಬಲ್ಲಿ ಜೇಡಿ ಮಣ್ಣು ಗುಡ್ಡ ರಸ್ತೆ ಮೇಲೆ ಕುಸಿದಿದೆ.

    ಖಾಸಗಿ ಹಾಗು ಸರ್ಕಾರಿ ವಾಹನಗಳಿಗೆ ಪರ್ಯಾಯ ರಸ್ತೆಯನ್ನು ಮಾಡಿಕೊಡಲಾಗಿದೆ. ಸುಮಾರು 2 ಕಿ.ಮೀ. ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತವಾಗಿದೆ.

    ಉಡುಪಿ- ಕುಂದಾಪುರ- ಕಾರವಾರ ರಾಷ್ಟ್ರೀಯ ಹೆದ್ದಾರಿ ಅಗಲ ಕಾಮಗಾರಿ ನಡೆಯುತ್ತಿದೆ. ಈ ಮಳೆಗಾಲಕ್ಕೂ ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣವಾಗಬೇಕಿತ್ತು. ಆದ್ರೆ ಸೇತುವೆಗಳ ಕಾಮಗಾರಿ ವಿಳಂಬವಾಗಿರುವುದರಿಂದ ರಸ್ತೆ ಕಾಮಗಾರಿಯೂ ವಿಳಂಬವಾಗಿದೆ.

    ಜಿಲ್ಲಾಡಳಿತ ಮತ್ತು ಕಾಮಗಾರಿ ವಹಿಸಿಕೊಂಡ ಐ.ಆರ್.ಬಿ ಕಂಪನಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದಿರುವುದೇ ಈ ಘಟನೆ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒತ್ತಿನೆಣೆ ಗುಡ್ಡ ಕುಸಿಯುವ ಸಾಧ್ಯತೆ ಕುರಿತು ಬೈಂದೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಜಿಲ್ಲಾಡಳಿತಕ್ಕೆ ಐ.ಆರ್.ಬಿ ಕಂಪೆನಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿತ್ತು.

    ಸದ್ಯ ತೆರವು ಕಾರ್ಯಾಚರಣೆ ಮಾಡಿ ಒಂದು ಭಾಗದ ರಸ್ತೆ ಕ್ಲಿಯರ್ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಗುಡ್ಡ ಕುಸಿತದ ಪರಿಣಾಮ ಸುಮಾರು 2 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಆಗಿತ್ತು. ವಾರದ ಹಿಂದೆಯೇ ಎರಡು ಬಾರಿ ಗುಡ್ಡ ಕುಸಿತವಾಗಿತ್ತು.

    ಇದನ್ನೂ ಓದಿ: ಬೈಂದೂರಿನಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು 5 ಗಂಟೆ ಟ್ರಾಫಿಕ್ ಜಾಮ್!