Tag: highlights

  • ವೈದ್ಯಕೀಯ ಕಾಲೇಜುಗಳಲ್ಲಿ 6,500 ಬೆಡ್‍ಗಳ ವ್ಯವಸ್ಥೆ- ಸಿಎಂ ಇಂದಿನ ಸಭೆಯ ಮುಖ್ಯಾಂಶಗಳು

    ವೈದ್ಯಕೀಯ ಕಾಲೇಜುಗಳಲ್ಲಿ 6,500 ಬೆಡ್‍ಗಳ ವ್ಯವಸ್ಥೆ- ಸಿಎಂ ಇಂದಿನ ಸಭೆಯ ಮುಖ್ಯಾಂಶಗಳು

    ಬೆಂಗಳೂರು: ಕೊರೊನಾ ವಿಚಾರವಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಭೆ ನಡೆಸಿದರು.

    ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಜಾಸ್ತಿಯಾಗುತ್ತದೆ. ಒಟ್ಟು ಬೆಂಗಳೂರು ನಗರದಲ್ಲೇ ಸುಮಾರು 4,052 ಕೊರೊನಾ ಪ್ರಕರಣಗಳಿವೆ. ಇದರಲ್ಲಿ ಒಟ್ಟು 3,427 ಸಕ್ರಿಯ ಪ್ರಕರಣಗಳು ಇವೆ. ಮುಂದಿನ ದಿನದಲ್ಲಿ ಸೋಂಕು ಜಾಸ್ತಿಯಾಗುವ ಸಾಧ್ಯತೆ ಇದ್ದು, ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ರೋಗಿಗಳಿಗೆ ಬೆಡ್ ನಿರ್ಮಿಸುವ ಸಲುವಾಗಿ ಇಂದು ಸಿಎಂ ಸಭೆ ನಡೆಸಿ ಚರ್ಚಿಸಿದರು.

    ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಭೆಯ ಮುಖ್ಯಾಂಶಗಳು:
    1. ಬೆಂಗಳೂರಿನಲ್ಲಿ ಎರಡು ಸರ್ಕಾರಿ ಸಂಸ್ಥೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ನಗರದ 11 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 2200 ಹಾಸಿಗೆಗಳನ್ನು ಮೀಸಲಿಡಲಾಗುತ್ತದೆ.
    2. ಆದರೆ ಪ್ರಸ್ತುತ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ, 4500 ಹಾಸಿಗೆಗಳನ್ನು ಖಾಸಗಿ ಕಾಲೇಜುಗಳಿಂದ ಸರ್ಕಾರ ನಿರೀಕ್ಷಿಸುತ್ತಿದೆ.
    3. ಕಳೆದ ನಾಲ್ಕು ತಿಂಗಳಿಂದ ಹತ್ತು ವೈದ್ಯಕೀಯ ಕಾಲೇಜುಗಳು ಹೊರತು ಪಡಿಸಿ, ಇತರ ಎಲ್ಲ ಕಾಲೇಜುಗಳು ಪ್ರಯೋಗಾಲಯ ವ್ಯವಸ್ಥೆ ಮಾಡಿವೆ.


    4. ಸರ್ಕಾರಿ ಕಾಲೇಜುಗಳಲ್ಲಿ 2000 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4500 ಸೇರಿದಂತೆ ಸುಮಾರು 6500 ಹಾಸಿಗೆಗಳು ಬೆಂಗಳೂರಿನ ವೈದ್ಯಕೀಯ ಕಾಲೇಜುಗಳಲ್ಲಿಯೇ ಲಭ್ಯವಾಗುತ್ತಿವೆ. ಇದಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ಸಹಕರಿಸುವಂತೆ ಮನವಿ ಮಾಡಿದರು.
    5. ವೈದ್ಯಕೀಯ ಕಾಲೇಜುಗಳು ಸರ್ಕಾರದೊಂದಿಗೆ ಕೈಜೋಡಿಸಿ, ಕೋವಿಡ್ ಚಿಕಿತ್ಸೆಗೆ ಸಹಕರಿಸುವ ಭರವಸೆಯನ್ನು ನೀಡಿವೆ. ಇದಕ್ಕೆ ಸಿದ್ಧತೆಗಳು ಮಾಡಿಕೊಳ್ಳಬೇಕಾಗಿರುವುದರಿಂದ ಹಂತ ಹಂತವಾಗಿ ವ್ಯವಸ್ಥೆ ಮಾಡುವುದಾಗಿ ತಿಳಿಸಿವೆ.
    6. ಕೋವಿಡ್ ಚಿಕಿತ್ಸೆ ನೀಡುವ ಖಾಸಗಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಕೂಡ ವಿಮಾ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.


    7. ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ಕುರಿತಂತೆ ಕೇಂದ್ರೀಕೃತ ವ್ಯವಸ್ಥೆಯನ್ನು ಈಗಾಗಲೇ ಬಿಬಿಎಂಪಿಯಲ್ಲಿ ಮಾಡಲಾಗಿದ್ದು, ಎರಡು ಮೂರು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಕೋವಿಡ್ ಚಿಕಿತ್ಸೆ ನೀಡುವ ಎಲ್ಲ ಆಸ್ಪತ್ರೆಗಳನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.8. ಖಾಸಗಿಯವರೊಂದಿಗೆ ಸಮನ್ವಯಕ್ಕೆ ಸಮಿತಿ ರಚನೆ ಮಾಡಲಾಗುವುದು.
    9. ಇದಲ್ಲದೆ ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡಲು ಸಹ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
    10 ಇದಲ್ಲದೆ ಕೋವಿಡ್ ಕೇರ್ ಸೆಂಟರ್ ಗಳಿಗೆ ಅಗತ್ಯ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು.

  • ಹೋಟೆಲ್, ಹಜ್ ಭವನದಲ್ಲಿ ಚಿಕಿತ್ಸೆ – ಸಿಎಂ ಸಭೆಯ ಮುಖ್ಯಾಂಶಗಳು

    ಹೋಟೆಲ್, ಹಜ್ ಭವನದಲ್ಲಿ ಚಿಕಿತ್ಸೆ – ಸಿಎಂ ಸಭೆಯ ಮುಖ್ಯಾಂಶಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಇಂದು ಬೆಂಗಳೂರು ನಗರದಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲನೆ ಕುರಿತು ಸಭೆ ಮಾಡಲಾಯ್ತು.

    ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚುತ್ತಿದೆ. ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ಸಮುದಾಯದ ಮಟ್ಟದಲ್ಲಿ ಸ್ಫೋಟಗೊಂಡಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಹೊಸ ಹೊಸ ಏರಿಯಾಗಳಿಗೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಇಂದು ನಡೆದ ಸಭೆಯಲ್ಲಿ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

    ಸಭೆಯ ನಿರ್ಧಾರಗಳು:
    1. ರೋಗಿಗಳು ಕಾಯುವ ಪರಿಸ್ಥಿತಿ ಬರಬಾರದು. ಪರೀಕ್ಷಾ ವರದಿ ಬಂದು ಸೋಂಕು ದೃಢಪಟ್ಟ ನಂತರ ತ್ವರಿತವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಇದಕ್ಕಾಗಿ ಈಗ 100 ಅಂಬ್ಯುಲೆನ್ಸ್ ಗಳು ಲಭ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಅಂಬ್ಯುಲೆನ್ಸ್ ಗಳನ್ನು ಈ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಯಿತು.
    2. ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸಚಿವರಿಗೆ ಸೂಚಿಸಲಾಗಿದೆ.
    3. ಹೆಚ್ಚುತ್ತಿರುವ ಪ್ರಕರಣಗಳಿಗೆ ತಕ್ಕಂತೆ ಹಾಸಿಗೆಗಳ ಲಭ್ಯತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ, ರೋಗ ಲಕ್ಷಣ ಕಡಿಮೆ ಇರುವವರಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಗೂ ರೋಗ ಲಕ್ಷಣ ಇಲ್ಲದವರಿಗೆ ಖಾಸಗಿ ಹೋಟೆಲ್ ಗಳು ಹಾಗೂ ಹಜ್ ಭವನದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ.

    4. ಹಾಸಿಗೆಗಳ ಲಭ್ಯತೆ ಕುರಿತು, ಪ್ರತಿ ರೋಗಿಯ ದಾಖಲಿಸುವ ಕುರಿತು ಕ್ಷಣ ಕ್ಷಣದ ಮಾಹಿತಿ ಒದಗಿಸುವ ಕುರಿತು ಡಿಜಿಟಲ್ ಪ್ಲಾಟ್ ಫಾರ್ಮ್ ನಿರ್ಮಿಸಿಲು ನಿರ್ಧರಿಸಲಾಯಿತು.
    5 ರಾಜ್ಯದಲ್ಲಿ ಶೇ. 61ರಷ್ಟು ಜನ ಗುಣಮುಖರಾಗಿದ್ದಾರೆ. 3700 ಸಕ್ರಿಯ ಪ್ರಕರಣಗಳು ಇವೆ.
    6 ಇಲಾಖೆಗಳು ಈ ನಿಟ್ಟಿನಲ್ಲಿ ಸಮನ್ವಯದಿಂದ ಕ್ರಮ ವಹಿಸುವಂತೆ ಸೂಚಿಸಲಾಯಿತು.
    7. ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸಚಿವರು, ಶಾಸಕರ ಸಭೆ ನಡೆಸಲಾಗುವುದು ಎಂದು ತೀರ್ಮಾನ ಮಾಡಲಾಯಿತು.

  • ಮಾಸ್ಕ್ ಧರಿಸದವರಿಗೆ 200 ರೂ. ದಂಡ – ಸಿಎಂ ಸಭೆಯ ಮುಖ್ಯಾಂಶಗಳು

    ಮಾಸ್ಕ್ ಧರಿಸದವರಿಗೆ 200 ರೂ. ದಂಡ – ಸಿಎಂ ಸಭೆಯ ಮುಖ್ಯಾಂಶಗಳು

    – ಬೆಂಗ್ಳೂರು ನಗರದಲ್ಲಿ ಕೊರೊನಾ ಹೆಚ್ಚಳ

    ಬೆಂಗಳೂರು: ಲಾಕ್‍ಡೌನ್ ಸಡಿಲಿಕೆಯ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ತನ್ನ ಆರ್ಭಟವನ್ನು ಹೆಚ್ಚಿಸಿದೆ. ದಿನೇ ದಿನೇ ಕೊರೊನಾದಿಂದ ಜನರು ಸಾವನ್ನಪ್ಪುತ್ತಿದ್ದಾರೆ.

    ಬೆಂಗಳೂರು ನಗರದಲ್ಲಿ ಲಾಕ್‍ಡೌನ್ ನಂತರ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು. ಮುಂದೆ ಕೊರೊನಾ ತಡೆಗೆ ಏನೂ ಮಾಡಬೇಕು ಎಂದು ಈ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

    ಸಭೆಯ ಮುಖ್ಯಾಂಶಗಳು
    1. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ.
    2. ಬೆಂಗಳೂರಿನಲ್ಲಿ ಒಟ್ಟು 697 ಪ್ರಕರಣಗಳು ವರದಿಯಾಗಿವೆ. 330 ಸಕ್ರಿಯ ಪ್ರಕರಣಗಳಿದ್ದು, 6 ಜನ ಐಸಿಯುನಲ್ಲಿದ್ದಾರೆ.
    3. ಈ ಹಿನ್ನೆಲೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
    4. ಗುರುವಾರ ಮಾಸ್ಕ್ ಡೇ ಆಚರಿಸಲಾಗುವುದು. ವಿಧಾನಸೌಧದಿಂದ ಬೆಳಿಗ್ಗೆ 8.30 ಗಂಟೆಗೆ ಮಾಸ್ಕ್ ಧರಿಸಿ 1 ಕಿ.ಮೀ. ವಾಕ್ ಮಾಡಲಾಗುವುದು.
    5. ರಾಜ್ಯಾದ್ಯಂತ, ಪಂಚಾಯತ್ ಮಟ್ಟದಲ್ಲಿಯೂ ಇದನ್ನು ಆಚರಿಸಲಾಗುವುದು.

    6. ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಕ್ವಾರಂಟೈನ್, ಚೆನ್ನೈ, ದೆಹಲಿಯಿಂದ ಬರುವವರಿಗೆ ಮೂರು ದಿನ ಕ್ವಾರಂಟೈನ್ ಮಾಡಲು ನಿರ್ಧಾರ
    7. ಮಾಸ್ಕ್ ಧರಿಸದ ವ್ಯಕ್ತಿಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹಾಗೂ 200 ರೂ. ದಂಡ ವಿಧಿಸಲಾಗುವುದು.
    8. 8000 ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪತ್ತೆ ಹಚ್ಚುವುದು. ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು, ಹೋಂ ಕ್ವಾರಂಟೈನ್ ಪಾಲನೆಯನ್ನು ಖಾತರಿ ಪಡಿಸುವ ಬಗ್ಗೆ ಕ್ರಮ ವಹಿಸಲಾಗುವುದು.

    9. ರಾಜ್ಯದಲ್ಲಿ ಒಟ್ಟು 2956 ಸಕ್ರಿಯ ಪ್ರಕರಣಗಳು ಇದ್ದು, 93 ಶೇಕಡಾ ಜನರಿಗೆ ರೋಗ ಲಕ್ಷಣ ಇಲ್ಲ. 200 ಜನರಿಗೆ ಮಾತ್ರ ರೋಗ ಲಕ್ಷಣ ಇದೆ.
    10. ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
    11. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 7100 ಪರೀಕ್ಷೆ ನಡೆಸಲಾಗಿದೆ. ಐಸಿಎಂಆರ್ ಮಾರ್ಗಸೂಚಿಗಳಿಗಿಂತ ಹೆಚ್ಚು ಪರೀಕ್ಷೆ ನಡೆಸಲಾಗಿದೆ.
    12. ಚಿಕಿತ್ಸೆಯ ವಿಧಿ ವಿಧಾನ ಹಾಗೂ ಚಿಕಿತ್ಸೆ ದರ ನಿಗದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಕುರಿತು ಶೀಘ್ರವೇ ಮಾರ್ಗಸೂಚಿ ಹೊರಡಿಸಲಾಗುವುದು.
    13. ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆ ಆತಂಕ ಪಡಬೇಕಾಗಿಲ್ಲ. ಆದರೆ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಸ್ವಚ್ಛತೆಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದೆ ತೆಗೆದುಕೊಳ್ಳಬೇಕು.

  • ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ಭಾಗ್ಯ: ಸಚಿವ ಸಂಪುಟದಲ್ಲಿ ನಿರ್ಧಾರ

    ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ಭಾಗ್ಯ: ಸಚಿವ ಸಂಪುಟದಲ್ಲಿ ನಿರ್ಧಾರ

    – ಪೊಲೀಸ್ ಸೇವೆಯಲ್ಲಿ ಮಹಿಳೆಯರ ಪ್ರಮಾಣ ಶೇ 25 ರಷ್ಟು ಏರಿಕೆ ತೀರ್ಮಾನ

    ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ಭಾಗ್ಯ ಸಿಕ್ಕಿದ್ದು, ಈ ಮೂಲಕ 5 ಲಕ್ಷ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

    ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಿತು. ಈ ವೇಳೆ ಸೈಕಲ್ ವಿತರಣೆ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

    ಸಂಪುಟ ಸಭೆ ಬಳಿಕ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೃಷ್ಣ ಭೈರೇಗೌಡ ಅವರು, 189 ಕೋಟಿ ರೂ. ವೆಚ್ಚದಲ್ಲಿ 2019-20ನೇ ಸಾಲಿನ 5 ಲಕ್ಷ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ ಪೊಲೀಸ್ ಸೇವೆಯಲ್ಲಿ ಮಹಿಳೆಯರ ಪ್ರಮಾಣವನ್ನು ಶೇ 25 ರಷ್ಟು ಏರಿಸಲು ನಿರ್ಧಾರ ಮಾಡಲಾಗಿದೆ. ಅದರಲ್ಲಿ ಶೇ 25 ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಶೇ 25 ರಷ್ಟು ನೇಮಕಾತಿ ಮಾಡಲಾಗುವುದು. ನೇರ ನೇಮಕಾತಿ ಅಡಿ ಎಲ್ಲಾ ಹುದ್ದೆ ನೇಮಕಾತಿಗೆ ಸರ್ಕಾರ ತೀರ್ಮಾನಿಸಿದೆ. ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗ ನೀಡಲು ಕಾಯ್ದೆ ಮಾಡಲಾಗಿದೆ ಎಂದರು.

    2018ರ ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ ತಿದ್ದುಪಡಿ ವಿಧೇಯಕ ಜಾರಿಗೆ ಅನುಮೋದನೆ ಸಿಕ್ಕಿದೆ. ಸರ್ಕಾರದಿಂದ ಸಹಾಯ, ರಿಯಾಯಿತಿ ಪಡೆಯುವ ಖಾಸಗಿ ಕಾರ್ಖಾನೆಯಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

     

    ಬಳ್ಳಾರಿಯ ವಿಜಯನಗರ ಮೆಡಿಕಲ್ ಸಂಸ್ಥೆಯಲ್ಲಿ ಹಾಸ್ಟೆಲ್ ಮತ್ತು ಸಲಕರಣೆಗೆ 65 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ. ವಿಕಲಚೇತನ ಹಕ್ಕುಗಳ ಕರಡು ಅಧಿನಿಯಮ 2019ರ ಅಡಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೇ 5 ವಸತಿ ವ್ಯವಸ್ಥೆ, ಶೇ 5 ರಷ್ಟು ಸರ್ಕಾರಿ ಸವಲತ್ತು. ಶೇ 4ರಷ್ಟು ಸರ್ಕಾರಿ ನೇಮಕಾತಿ ಅವಕಾಶ ನೀಡುವ ನಿಯಮಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಚಾಮರಾಜನಗರದಲ್ಲಿ ಸರ್ಕಾರಿ ಕಾನೂನು ವಿದ್ಯಾಲಯ ಸ್ಥಾಪನೆಗೆ ಅನುಮತಿ ದೊರಕಿದೆ ಎಂದು ಮಾಹಿತಿ ನೀಡಿದರು.

    ಉನ್ನತ ವ್ಯಾಸಂಗ, ಸಂಶೋಧಕ ವಿದ್ಯಾರ್ಥಿಗಳು ಸರ್ಕಾರದ ಹಲವು ಇಲಾಖೆಗಳಲ್ಲಿ ಇಂಟರ್ನ್‍ಶಿಪ್ ಮಾಡಬಹುದು. ಈ ನಿಟ್ಟಿನಲ್ಲಿ 27 ವಿಷಯಗಳನ್ನು ನಿಗದಿ ಮಾಡಲಾಗಿದೆ. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅನುಮೋದನೆ. ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 25 ಕೋಟಿ ರೂ.ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಬಳ್ಳಾರಿ ಅಕ್ರಮ ಗಣಿಗಾರಿಕೆ ಅಕ್ರಮ ಕುರಿತು ಎಸ್‍ಐಟಿ ನಡೆದುತ್ತಿದ್ದ ತನಿಖೆಯ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ಹೆಚ್ಚುವರಿಯಾಗಿ ವಿಸ್ತರಣೆ ಮಾಡಲಾಗಿದೆ ಎಂದ ಅವರು, ಆಪರೇಷನ್ ಕಮಲ ಆಡಿಯೋ ಸಿಡಿ ಪ್ರಕರಣ ಎಸ್‍ಐಟಿ ತನಿಖೆ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ. ಸಿಎಂ ಕುಮಾರಸ್ವಾಮಿ ಅವರು ಎಸ್‍ಐಟಿ ತಂಡ ರಚನೆಯ ಪೂರ್ಣಾಧಿಕಾರ ಹೊಂದಿದ್ದಾರೆ. ಇದರಿಂದಾಗಿ ಅದನ್ನು ಸಚಿವ ಸಂಪುಟದ ಗಮನಕ್ಕೆ ತರಲೇಬೇಕು ಎಂಬ ಕಡ್ಡಾಯ ನಿಯಮವೇನಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv