Tag: High School

  • ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಹುಡುಗಿಯರ ಕಿತ್ತಾಟ!

    ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಹುಡುಗಿಯರ ಕಿತ್ತಾಟ!

    ಬೆಂಗಳೂರು: ಪ್ರಿಯಕರನಿಗೆ ಮತ್ತೋರ್ವ ಹುಡುಗಿ ಗುಲಾಬಿ ಕೊಟ್ಟಳೆಂದು ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಶಾಲಾ ಹುಡುಗಿಯರು ಹೊಡೆದಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.

    ಪರಸ್ಪರ ಹೊಡೆದಾಡಿಕೊಂಡ ಹುಡುಗಿಯರು ಸ್ಥಳೀಯ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿನಿಯರಾಗಿದ್ದು, ಸಮಸ್ತ್ರದಲ್ಲಿ ಇದ್ದಾಗಲೇ ಸಾರ್ವಜನಿಕ ಸ್ಥಳದಲ್ಲಿ ಕಿತ್ತಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಆಗಿದ್ದೇನು?:
    ಪ್ರೇಮಿಗಳ ದಿನವಾದ ಫೆಬ್ರವರಿ 14ಕ್ಕೂ ಮುನ್ನ ಅಂದರೆ ಫೆ. 7ರಂದು ಗುಲಾಬಿ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆ ಇಬ್ಬರು ಹುಡುಗಿಯರು ಇಂದು ಒಬ್ಬ ಹುಡುಗನಿಗೆ ಗುಲಾಬಿ ಹೂ ನೀಡಿದ್ದಾರೆ. ಇದರಿಂದಾಗಿ ಈ ಮೊದಲೇ ಆ ಹುಡುಗನನ್ನು ಪ್ರೀತಿಸುವ ಹುಡುಗಿಯು ಕೋಪಗೊಂಡಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ದಾಳಿ ನಡೆದಿದ್ದು, ಬಳಿಕ ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.

    ಇಬ್ಬರ ಜಗಳವನ್ನು ಬಿಡಿಸಲು ಹೋದ ಇತರ ವಿದ್ಯಾರ್ಥಿನಿಯರು ಸಹ ಪರಸ್ಪರ ಹೊಡೆದಾಡಿ ಗ್ಯಾಂಗ್ ವಾರ್ ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ವಿದ್ಯಾರ್ಥಿನಿಯರಿಗೆ ಬುದ್ಧಿವಾದ ಹೇಳಿ ಜಗಳ ಬಿಡಿಸಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಕ್ಕಳಿಗೆ ನೀಡಬೇಕಿದ್ದ ಹಾಲಿನ ಪುಡಿಯನ್ನು ಹೂತಿಟ್ಟ ಶಿಕ್ಷಕರು!

    ಮಕ್ಕಳಿಗೆ ನೀಡಬೇಕಿದ್ದ ಹಾಲಿನ ಪುಡಿಯನ್ನು ಹೂತಿಟ್ಟ ಶಿಕ್ಷಕರು!

    ರಾಯಚೂರು: ಮಕ್ಕಳಿಗೆ ನೀಡಬೇಕಾದ ಹಾಲಿನ ಪುಡಿಯನ್ನು ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಕರು ಹೂತಿಟ್ಟ ಘಟನೆ ಜಿಲ್ಲೆಯ ಲಿಂಗಸುಗೂರಿನ ಯರಡೋಣಾ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸರ್ಕಾರದಿಂದ ಮಕ್ಕಳಿಗೆ ನೀಡುವ ಹಾಲಿನ ಪುಡಿಯನ್ನ ಯರಡೋಣಾ ಗ್ರಾಮದ ಪ್ರೌಢ ಶಾಲೆಯ ಆವರಣದಲ್ಲಿ ಗುಂಡಿ ತೆಗೆದು ಅಲ್ಲಿನ ಶಿಕ್ಷಕರು ಹೂತಿಟ್ಟಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಸರ್ಕಾರದಿಂದ ಶಾಲಾ ಮಕ್ಕಳಿಗೆ ಬರುವ ದಾಸ್ತಾನುಗಳ ಚೀಲದಲ್ಲೆ ಹಾಲಿನ ಪುಡಿಯನ್ನ ತುಂಬಿ ಹೂತಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳಿಗೆ ನೀಡುವ ಇನ್ನಿತರ ದಾಸ್ತಾನುಗಳನ್ನೂ ಕೂಡ ಶಿಕ್ಷಕರು ನೆಲದಲ್ಲಿ ಹೂತಿಟ್ಟಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

    ಯರಡೋಣಾ ಪ್ರೌಢ ಶಾಲೆಯಲ್ಲಿ ಒಟ್ಟು 290 ವಿದ್ಯಾರ್ಥಿಗಳು ಇದ್ದಾರೆ. ಆದರೆ ಇಲ್ಲಿನ ಶಿಕ್ಷಕರು ಮಕ್ಕಳಿಗೆ ನೀಡಬೇಕಾದ ಹಾಲಿನ ಪುಡಿಯನ್ನು ಮಣ್ಣಿಗೆ ಹಾಕಿ ಹಾಳು ಮಾಡಿದ್ದಾರೆ. ಕೆಲವು ದಿನಗಳಿಂದ ಶಾಲಾ ಆವರಣದಲ್ಲಿ ದುರ್ನಾತ ಬರುತ್ತಿತ್ತು. ಆದ್ದರಿಂದ ಗ್ರಾಮಸ್ಥರು ಶಾಲಾ ಶಿಕ್ಷಕರಿಗೆ ತಿಳಿಸಿದದ್ರೂ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೆ ದುರ್ವಾಸನೆ ತಾಳಲಾರದೆ ಗ್ರಾಮಸ್ಥರೇ ಶಾಲಾ ಆವರಣದಲ್ಲಿ ಗುಂಡಿ ಅಗೆದು ನೋಡಿದಾಗ ಹಾಲಿನ ಪುಡಿಯನ್ನು ಹೂತಿಟ್ಟ ಸತ್ಯಾಂಶ ಬಯಲಿಗೆ ಬಂದಿದೆ.

    ಇದನ್ನು ಕಂಡು ಗ್ರಾಮಸ್ಥರ ಕೋಪ ನೆತ್ತಿಗೇರಿದೆ. ಸರ್ಕಾರ ಮಕ್ಕಳಿಗೆ ಕೊಟ್ಟ ಪದಾರ್ಥವನ್ನು ಶಿಕ್ಷಕರು ಮೂರ್ಖರಂತೆ ಹೂತಿಟ್ಟಿದ್ದಾರೆ. ಈ ಮೂಲಕ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಅಂತ ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ. ಹೀಗೆ ತಪ್ಪು ಮಾಡಿರುವ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶಿಕ್ಷಕರು ಯಾಕೆ ಹೀಗೆ ಮಾಡಿದ್ದಾರೆ ಅಂತ ಯಾರಿಗೂ ತಿಳಿದಿಲ್ಲ. ಆದ್ರೆ ಪಾಠ ಕಲಿಸಬೇಕಾದ ಶಿಕ್ಷಕರೇ ಈ ರೀತಿ ಮಾಡಿದರೆ ಮಕ್ಕಳಿಗೆ ಇನ್ನೇನು ಕಲಿಸುತ್ತಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯಾರ್ಥಿನಿಯ ಪ್ರೀತಿಗಾಗಿ 10ನೇ ತರಗತಿ ಓದ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೆಂಕಿ ಹಚ್ಚಿಕೊಂಡ್ರು!

    ವಿದ್ಯಾರ್ಥಿನಿಯ ಪ್ರೀತಿಗಾಗಿ 10ನೇ ತರಗತಿ ಓದ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೆಂಕಿ ಹಚ್ಚಿಕೊಂಡ್ರು!

    ಹೈದರಾಬಾದ್: ವಿದ್ಯಾರ್ಥಿನಿಯ ಪ್ರೀತಿಗಾಗಿ 10ನೇ ತರಗತಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೆಂಕಿ ಹಚ್ಚಿಕೊಂಡಿರುವ ಶಾಕಿಂಗ್ ಘಟನೆ ತೆಲಂಗಾಣದ ಜಗ್ತಿಯಲ್ ಪಟ್ಟಣದಲ್ಲಿ ನಡೆದಿದೆ.

    ಹೈದರಾಬಾದ್‍ನಿಂದ ಸುಮಾರು 190 ಕಿ.ಮೀ. ದೂರದಲ್ಲಿರುವ ಜಗ್ತಿಯಲ್ ಪಟ್ಟಣದಲ್ಲಿ ಭಾನುವಾರ ರಾತ್ರಿ ಮದ್ಯಪಾನ ಮಾಡಿ 16 ವರ್ಷ ವಯಸ್ಸಿನ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಬೆಂಕಿ ಹಚ್ಚಿಕೊಂಡಿದ್ದಾರೆ.

    ಬೆಂಕಿ ಹಚ್ಚಿಕೊಂಡ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ಪಟ್ಟಣದಲ್ಲಿರುವ ಮಿಷನರಿ ಶಾಲೆಯಲ್ಲಿ ಓದುತ್ತಿದ್ದು, ಇಬ್ಬರು ಸಹಪಾಠಿಗಳಾಗಿದ್ದರು. ಇಬ್ಬರು ಶಾಲೆಯ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಹುಡುಗರ ಕುಟುಂಬದವರು ಈ ಘಟನೆಯಲ್ಲಿ ಮತ್ತೊಬ್ಬ ಬಾಲಕ ಭಾಗಿಯಾಗಿದ್ದಾನೆ ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಘಟನೆ ನಡೆದ ಸ್ಥಳದಲ್ಲಿ ಬಿಯರ್ ಬಾಟಲಿಗಳು ಮತ್ತು ಮೊಬೈಲ್ ಫೋನ್ ಪತ್ತೆಯಾಗಿವೆ. ಪೊಲೀಸರು ದೊರೆತ ಮೊಬೈಲ್ ಫೋನ್ ಮೂಲಕ ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

    ಬೆಂಕಿ ಹಚ್ಚಿಕೊಳ್ಳುವ ಮುನ್ನ ಇಬ್ಬರೂ ಬಾಲಕರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡಿದ್ದರು ಎನ್ನುವ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದರ ಬಗ್ಗೆ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್-ಟೆಂಪೋ ಡಿಕ್ಕಿ ಸ್ಥಳದಲ್ಲೇ ಶಿಕ್ಷಕ ಸಾವು

    ಬೈಕ್-ಟೆಂಪೋ ಡಿಕ್ಕಿ ಸ್ಥಳದಲ್ಲೇ ಶಿಕ್ಷಕ ಸಾವು

    – ಪತ್ನಿಗೆ ಉದ್ಯೋಗ ಭದ್ರತೆ ಭರವಸೆ

    ಚಾಮರಾಜನಗರ: ಬೈಕ್ ಹಾಗೂ ಟೆಂಪೋ ಡಿಕ್ಕಿ ಹೊಡೆದು ಪ್ರೌಢಶಾಲಾ ಶಿಕ್ಷಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಸೋಮವಾರಪೇಟೆ ಬಳಿ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

    ಬಿಸಿಲವಾಡಿ ಸರ್ಕಾರಿ ಪ್ರೌಢಶಾಲೆಯ ಭೀಮೇಶ್ ಮೃತಪಟ್ಟ ಶಿಕ್ಷಕ. ಇಂದು ಬೆಳಗ್ಗೆ ಬೈಕ್‍ನಲ್ಲಿ ಶಾಲೆಗೆ ತೆರಳುತ್ತಿದ್ದರು. ಆಗ ಬೈಕಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಭೀಮೇಶ್ ಮೃತಪಟ್ಟಿದ್ದರು. ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿದ್ದರು.

    ಅಪಘಾತಕ್ಕೆ ಕಾರಣವಾದ ಟೆಂಪೋ ಮಾಲೀಕನಿಂದ ಮೃತ ಶಿಕ್ಷಕರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಸಲು ಕ್ರಮ ಕೈಗೊಳ್ಳಲಾಗುತ್ತದೆ. ಅನುಕಂಪ ಆಧಾರದ ಮೇಲೆ ಮೃತ ಶಿಕ್ಷಕರ ಪತ್ನಿಗೆ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಹಾಗೂ ಸೂಕ್ತ ಪರಿಹಾರ ನೀಡುವುದಾಗಿ ಸಚಿವ ಎನ್.ಮಹೇಶ್ ಭರವಸೆ ನೀಡಿದ್ದಾರೆ.

    ಚಾಮರಾಜನಗರದ ವಿವಿಧೆಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಇದರಿಂದಾಗಿ ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೆಕು ಎಂದು ಸೂಚನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸತತ 10 ವರ್ಷ ಹೋರಾಡಿ ಕೊನೆಗೂ ಸರ್ಕಾರಿ ಹುದ್ದೆ ಸಿಕ್ತು!

    ಸತತ 10 ವರ್ಷ ಹೋರಾಡಿ ಕೊನೆಗೂ ಸರ್ಕಾರಿ ಹುದ್ದೆ ಸಿಕ್ತು!

    ಯಾದಗಿರಿ:“ಕಾನೂನ್ ಕೆ ಘರ್ ಮೆ ದೇರ್ ಹೈ, ಲೇಕಿನ್ ಅಂಧೇರ್ ನಹೀಂ?”(ನ್ಯಾಯ ಸಿಗೋದು ತಡವಾಗಬಹುದು, ಅದ್ರೆ, ಸತ್ಯವೇ ಗೆಲ್ಲೋದು, ಕತ್ತಲು ಆವರಿಸೋಲ್ಲ) ಇಂತಹುದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದ್ದು ಯಾದಗಿರಿ ಜಿಲ್ಲೆಯ ಬಡ ಯುವಕನೊಬ್ಬನ ಸತತ ಹೋರಾಟ.

    ನ್ಯಾಯಯುತವಾಗಿ ತನಗೆ ಸಿಗಬೇಕಾಗಿದ್ದ ಸರ್ಕಾರಿ ಶಿಕ್ಷಕ ಹುದ್ದೆಗೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಅವಿರತ ಹೋರಾಟ ನಡೆಸಿ, ಕೊನೆಗೂ ಯಶಸ್ವಿಯಾದ. ಯಾದಗಿರಿಯ ವಡ್ನಳ್ಳಿ ಗ್ರಾಮದ ಶಿವಯೋಗಿ ಬಿನ್ ಚಂದ್ರಾಮ ಛಲಬಿಡದ ತ್ರಿವಿಕ್ರಮ.? ಏನಿದು ಒಂಬತ್ತು ವರ್ಷಗಳ ಹೋರಾಟ.? ಇಲ್ಲಿದೆ ಶಿವಯೋಗಿಯ ಹೋರಾಟದ ಕತೆ.

    ಯಾದಗಿರಿ ನಗರದಿಂದ 14 ಕಿ.ಮೀ. ದೂರದ ವಡ್ನಳ್ಳಿ ಗ್ರಾಮದ ಬಡ ರೈತ ಕುಟುಂಬದ ಶಿವಯೋಗಿಯ ಹೋರಾಟ 2008-09ರಿಂದ ಆರಂಭಗೊಂಡಿದೆ. ಆಗ ಸರ್ಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಶಿವಯೋಗಿ, ನೇಮಕಾತಿಗೆ ಅರ್ಹರಾಗಿದ್ದರೂ, ಇವರ ಬದಲು ಸರ್ಕಾರಕ್ಕೇ ವಂಚಿಸಿ, ಒಂದೇ ವರ್ಷದಲ್ಲಿ ಎರಡೆರಡು ಪದವಿಗಳನ್ನು ಪೂರೈಸಿದ್ದ ಸಂಗನಸಬಸವ ಅನ್ನೋವ್ರಿಗೆ ನೌಕರಿ ಸಿಕ್ಕಿತ್ತು.

    ಶಿಕ್ಷಣ ಇಲಾಖೆಯಲ್ಲಿನ ಮಧ್ಯವರ್ತಿಗಳ ಹಾವಳಿಯಿಂದ ಶಿವಯೋಗಿ ನೌಕರಿಯಿಂದ ವಂಚಿತಗೊಂಡಿದ್ದರು. ವಂಚನೆಯಾದ ಹಿನ್ನೆಲೆಯಲ್ಲಿ ನಿಮ್ಮ ಪಬ್ಲಿಕ್ ಟಿವಿಯಲ್ಲಿ 2012 ಏಪ್ರಿಲ್ 25 ರಂದು ಶಿವಯೋಗಿ ವರದಿಯೂ ಪ್ರಸಾರವಾಗಿತ್ತು. ನಿರಂತರವಾಗಿ ಹೋರಾಡಿದ ಶಿವಯೋಗಿಗೆ ಕೊನೆಗೂ ಈಗ ಜಯ ಸಿಕ್ಕಿದೆ.

    ವಂಚನೆಯನ್ನು ಪ್ರಶ್ನಿಸಿ ಶಿವಯೋಗಿ ಕಾನೂನು ಇಲಾಖೆಯ ಮೊರೆ ಹೋಗಿದ್ದರು. ಆಗ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಅವರ ಎದುರು ಅಳಲು ತೋಡಿಕೊಂಡಿದ್ದರು. ರಾಜಭವನದಲ್ಲೂ ಇವರ ಹೋರಾಟ ಮಾರ್ದನಿಸಿತ್ತು. ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಿದ್ದ ಎದುರಾಳಿ, ಇವರ ಹೋರಾಟವನ್ನು ಹಿಮ್ಮೆಟ್ಟಿಸಿದ್ದರು.

    ಯಾದಗಿರಿ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿಗಳ ಷಡ್ಯಂತ್ರವೂ ಸಹ ಇವರ ಹೋರಾಟಕ್ಕೆ ಅಡ್ಡಿಯಾಗತೊಡಗಿತ್ತು. ಈ ಹೋರಾಟದಿಂದ ಹಿಂದೆ ಸರಿಯುವಂತೆ ಅನೇಕ ಬಾರಿ ಇವರ ಮೇಲೆ ಹಲ್ಲೆ ಯತ್ನ ಹಾಗೂ ಬೆದರಿಕೆ ಒಡ್ಡುವ ಪ್ರಯತ್ನಗಳೂ ನಡೆದವು. ದಶಕದ ಈ ಹೋರಾಟದಲ್ಲಿ ಮನೆ-ಹೊಲ, ಆಸ್ತಿಪಾಸ್ತಿಯೆಲ್ಲವನ್ನೂ ಮಾರಾಟ ಮಾಡಿದ್ದ ಶಿವಯೋಗಿ ಕುಟುಂಬವೂ ಹತಾಶರಾಗಿತ್ತು.

    ಕೊನೆಗೆ, ಎಲ್ಲ ವಿಚಾರಣೆಗಳ ನಂತರ, ಶಿಕ್ಷಣ ಇಲಾಖೆಯ ಶ್ರೀಮತಿ ಶಾಲಿನಿ ರಜನೀಶ್ ಗೋಯೆಲ್ ಅವರು ನೀಡಿದ ಅದೇಶವನ್ನೂ ಸ್ಥಳೀಯ ಅಧಿಕಾರಿಗಳು ಮುಚ್ಚಿಟ್ಟಾಗ, ಪಬ್ಲಿಕ್ ಟವಿಯ ವರದಿಯನ್ನು ಗಮನಿಸಿದ ಯಾದಗಿರಿ ಜಿಲ್ಲಾಧಿಕಾರಿ ಮಂಜುನಾಥ್ ಜೆ, ಎಲ್ಲವನ್ನೂ ಪರಿಶೀಲಿಸಿ, ಇದಕ್ಕೆ ತೊಡರುಗಾಲಾಗುತ್ತಿದ್ದ ಯಾದಗಿರಿ ಡಿಡಿಪಿಐ ಹಾಗೂ ಸಿಬ್ಬಂದಿಗೆ ಪಾಠ ಕಲಿಸಿದ ಜಿಲ್ಲಾಧಿಕಾರಿ, ಕೇವಲ ಒಂದೇ ದಿನದಲ್ಲಿ ಆದೇಶ ಕೈಸೇರುವಂತೆ ಮಾಡಿದರು.

    ಯಾದಗಿರಿಯ ಶಿವಯೋಗಿಯ ಈ ಹೋರಾಟ ಅನೇಕರಿಗೆ ಸ್ಫೂರ್ತಿ. ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅನ್ನೋ ಹಾಗೆ, ಛಲಬಿಡದ ತ್ರಿವಿಕ್ರಮನಂತೆ ಅಲೆದಾಡಿ ಕೊನೆಗೂ ನ್ಯಾಯ ಪಡೆಯುವಲ್ಲಿ ಗೆದ್ದ ಶಿವಯೋಗಿಯ ಹಠ ಇಡೀ ಶಿಕ್ಷಣ ಇಲಾಖೆಯಲ್ಲೇ ಸಂಚಲನ ಮೂಡಿಸಿದೆ. ಕಾನೂನು ರೀತ್ಯ ಹಾಗೂ ನಿಯಮಾನುಸಾರ ನೇಮಕಾತಿಗೆ ಅರ್ಹನಿದ್ದೂ, ಹತ್ತು ವರ್ಷಗಳಿಂದಲೂ ನೌಕರಿಯಿಂದ ವಂಚಿತಗೊಂಡಿದ್ದ ಶಿವಯೋಗಿ ಹೋರಾಟ ನಿಜಕ್ಕೂ ಶ್ಲಾಘನೀಯ.

  • ಪ್ರೌಢಶಾಲೆ ನಿರ್ಮಾಣಕ್ಕೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ವಿದ್ಯಾರ್ಥಿಗಳ ಧರಣಿ

    ಪ್ರೌಢಶಾಲೆ ನಿರ್ಮಾಣಕ್ಕೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ವಿದ್ಯಾರ್ಥಿಗಳ ಧರಣಿ

    ರಾಯಚೂರು: ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ತೆರೆಯಲು ಒತ್ತಾಯಿಸಿ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮುಂದೆ ಹೋರಾಟ ನಡೆಸಿದ್ದಾರೆ.

    ಗ್ರಾಮದಲ್ಲಿ 8ನೇ ತರಗತಿವರೆಗೆ ಮಾತ್ರ ಶಾಲೆ ಇದ್ದು, ಪ್ರೌಢಶಾಲೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಅನಿರ್ವಾಯತೆಯಿದೆ. ಹೀಗಾಗಿ ಶಾಲೆಯಿಲ್ಲದ ಕಾರಣ ಹೆಣ್ಣುಮಕ್ಕಳಿಗೆ ಬೇಗನೇ ಮದುವೆ ಮಾಡುವುದು, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದೆ ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ಎಂಟನೇ ತರಗತಿ ಮುಗಿಸಿರುವ ವಿದ್ಯಾರ್ಥಿಗಳೆಲ್ಲಾ ಒಟ್ಟಾಗಿ ಪ್ರೌಢಶಾಲೆ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಹೊತ್ತಿರುವ ತನ್ವೀರ್ ಸೇಠ್ ಸ್ವತಃ ಶಿಕ್ಷಣ ಸಚಿವರಾಗಿರುವುದರಿಂದ ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕು ಅಂತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.