Tag: high ground police station

  • ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

    ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ, ನಿರ್ಮಾಪಕ ಜೈ ಜಗದೀಶ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಲನಚಿತ್ರ ಕಾರ್ಮಿಕರ, ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷ ಸಾ.ರಾ.ಗೋವಿಂದು ಅವರು ನಿಂದನೆ ಆರೋಪದ ಅಡಿ ಜೈ ಜಗದೀಶ್ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಏನಿದು ಪ್ರಕರಣ?:
    ಹೆಮ್ಮಾರಿ ಕೊರೊನಾದಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಭಾರತದಲ್ಲಿ ಲಾಕ್‍ಡೌನ್‍ನಿಂದಾಗಿ ಸಿನಿಮಾ, ಕಿರುತೆರೆ ಶೂಟಿಂಗ್ ಸೇರಿದಂತೆ ಚಿತ್ರೋದ್ಯಮದ ಚಟುವಟಿಕೆಗಳು ಸ್ತಬ್ದವಾಗಿವೆ. ಹೀಗಾಗಿ ನೂರಾರು ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿತ್ತು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತೃ ಸಂಸ್ಥೆಯಾಗಿದ್ದು ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಮೂರು ವಲಯಗಳು ಇದರಲ್ಲಿ ಒಗ್ಗೂಡಿವೆ. ಸಂಕಷ್ಟದಲ್ಲಿರುವ ಕಲಾವಿದರು, ತಂತ್ರಜ್ಞರಿಗೆ ಆಹಾರದ ಕಿಟ್ ವಿತರಿಸಲು ನಿರ್ಮಾಪಕ ಸಾ.ರಾ. ಗೋವಿಂದು, ವಾಣಿಜ್ಯ ಮಂಡಳಿಯ ಸದಸ್ಯ ಕೆ.ಎಂ. ವೀರೇಶ್ ನೇತೃತ್ವದಲ್ಲಿ ಸರ್ಕಾರದೊಂದಿಗೆ ಮಾತನಾಡಿ ಸಹಾಯಕ್ಕೆ ನಿಂತಿದ್ದರು.

    ಈ ವಿಚಾರವಾಗಿ ನಟ ನಿರ್ಮಾಪಕ ಜೈ ಜಗದೀಶ್ ಕೋಪಗೊಂಡಿದ್ದರು. “ನಿರ್ಮಾಪಕರು ಅನ್ನದಾತರು, ಸಾವಿರಾರು ಜನಕ್ಕೆ ಅನ್ನವನ್ನು ನೀಡಿದ್ದಾರೆ. ನಮಗೆ ಆಹಾರದ ಕಿಟ್ ನೀಡಿ ಅವಮಾನ ಮಾಡಬೇಡಿ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಸಾ.ರಾ.ಗೋವಿಂದು ಹಾಗೂ ಕೆ.ಎಂ.ವೀರೇಶ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಬೈದಿದ್ದಾರೆ. ಅವರು ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

    ಇದರಿಂದಾಗಿ ಅಸಮಾಧಾನಗೊಂಡ ಸಾ.ರಾ.ಗೋವಿಂದು ಅವರು, ಜೈ ಜಗದೀಶ್ ಅವರು ಉದ್ದೇಶ ಪೂರ್ವಕವಾಗಿ ನನ್ನ ಬಗ್ಗೆ ತಮ್ಮ ವಾಟ್ಸಪ್ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ತೀರಾ ಕೆಳಮಟ್ಟದಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನನ್ನ ವಿರುದ್ಧ, ಸ್ನೇಹಿತರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಬಗ್ಗೆ ಆರೋಪ ಮಾಡಿರುವ ಜೈ ಜಗದೀಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಮನವಿ ಮಾಡಿಕೊಂಡಿದ್ದರು.

  • ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಬೆಂಗಳೂರು: ತಡ ರಾತ್ರಿ ಟ್ರಾಫಿಕ್ ಪೊಲೀಸರು ಡ್ರಂಕ್ & ಡ್ರೈವ್ ತಪಾಸಣೆ ಮಾಡುವ ವೇಳೆ ಇಬ್ಬರು ವಿದೇಶಿಯರು ಸೇರಿ ಏಳು ಜನರ ಗುಂಪು ಪಾನ ಮತ್ತರಾಗಿ 1 ಗಂಟೆಗೂ ಹೆಚ್ಚುಕಾಲ ಇನ್ನಿಲ್ಲದೆ ಸಂಚಾರಿ ಪೊಲೀಸರನ್ನ ಕಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಂ.ಜಿ ರಸ್ತೆಯಿಂದ ಪಾರ್ಟಿ ಮುಗಿಸಿ ಕುಡಿದು ತಮಿಳುನಾಡು ರಿಜಿಸ್ಟ್ರೇಷನ್ ನ ಟಾಟಾ ಸುಮೋದಲ್ಲಿ ಬಂದ ಏಳು ಜನರು ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಸಹಕರಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

    ಸತತ ಒಂದು ಗಂಟೆಗಳ ಕಾಲ ನಾಲ್ವರು ಟ್ರಾಫಿಕ್ ಸಿಬ್ಬಂದಿಗಳನ್ನು ಕಾಡಿದ ಅವರು ಅವಾಂತರ ಸೃಷ್ಟಿಸಿದ್ದಾರೆ. ತಪಾಸಣೆ ವೇಳೆ ಚಾಲಕ ಸುಂದರೇಶನ್(35) ಮದ್ಯ ಸೇವಿಸಿರುವುದು ಸಾಬೀತಾಗಿದೆ. ಇನ್ನುಳಿದಂತೆ ಆರು ಜನರು ಕುಡಿದು ರಸ್ತೆಯಲ್ಲೆಲ್ಲಾ ತೂರಾಟ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಲು ನಾನಾ ಕಸರತ್ತು ನಡೆಸಿದರು.

    ಎಂ.ಜಿ.ರಸ್ತೆಯಿಂದ ಪಾರ್ಟಿ ಮಾಡಿ ಬಂದ ಇಬ್ಬರು ಇಟಲಿ ಮಹಿಳೆಯರು, ಮೂವರು ಗಂಡಸರು, ಒಬ್ಬ ತಮಿಳು ಯುವತಿ, ಮತ್ತೊಬ್ಬ ಮಲೆಯಾಳಿ ಯುವತಿ ಸೇರಿ 7 ಜನರ ಗುಂಪು ಪುಂಡಾಟ ನಡೆಸಿದೆ. ಇವರ ತರಲೆ ನಿಲ್ಲಿಸಲಾಗದೇ ಪರದಾಡಿದ ಪೊಲೀಸರು ತಪಾಸಣೆ ನಡೆಸುವಷ್ಟರಲ್ಲಿ ಸುಸ್ತಾಗಿದ್ದರು. ಕೊನೆಗೂ ಚಾಲಕನನ್ನ ತಪಾಸಣೆ ನಡೆಸಿ ಟಾಟಾ ಸುಮೋ ಸೀಜ್ ಮಾಡಿ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.