Tag: High Drama

  • ಒಬ್ಬನಿಗಾಗಿ ಮೂವರು ಯುವತಿಯರ ಕಿತ್ತಾಟ-ಪೊಲೀಸ್ ಸ್ಟೇಷನ್‍ನಲ್ಲಿ ನಡೀತು ಹೈಡ್ರಾಮಾ!

    ಒಬ್ಬನಿಗಾಗಿ ಮೂವರು ಯುವತಿಯರ ಕಿತ್ತಾಟ-ಪೊಲೀಸ್ ಸ್ಟೇಷನ್‍ನಲ್ಲಿ ನಡೀತು ಹೈಡ್ರಾಮಾ!

    ಲಕ್ನೋ: ಯುವಕನೊಬ್ಬನನ್ನು ಮದುವೆಯಾಗಲೆಂದು ಮೂವರು ಯುವತಿಯರು ಪೊಲೀಸ್ ಠಾಣೆಯಲ್ಲೇ ಕಿತ್ತಾಡಿದ ಘಟನೆ ಉತ್ತರಪ್ರದೇಶದ ಗೌತಮ್‍ಬುದ್ ನಗರದಲ್ಲಿ ನಡೆದಿದೆ.

    ಯುವಕನ ಜೊತೆ ಮದುವೆಯಾಗುವುದಾಗಿ ಮೂವರು ಯುವತಿಯರು ನೊಯ್ಡಾದ ಠಾಣೆ ಸೆಕ್ಟರ್-24ರಲ್ಲಿ ಈ ಡ್ರಾಮಾ ನಡೆಸಿದ್ದಾರೆ. ಅಲ್ಲದೇ ಅದರಲ್ಲಿ ಯುವತಿಯೊಬ್ಬಳು ತನ್ನ ಕೈಯನ್ನು ಕಟ್ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇತ್ತ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ ಯುವಕ ಮುಲ್‍ರೂಪದ ಬುಲಂದ್‍ನಗರದಲ್ಲಿರುವ ಹಳ್ಳಿಯೊಂದರ ನಿವಾಸಿಯಾಗಿದ್ದು, ಸೆಕ್ಟರ್-2ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಬುಲಂದ್‍ನಗರಕ್ಕೆ ಬರುವ ಮೊದಲು ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವಕ ಕೆಲಸಕ್ಕಾಗಿ ಬುಲಂದ್‍ನಗರಕ್ಕೆ ಬಂದ ಬಳಿಕ ಅಲ್ಲಿ ದೆಹಲಿಯ ತ್ರಿಲೋಕಪುರಿಯ ನಿವಾಸಿಯಾದ ತನ್ನ ಸಹೊದ್ಯೋಗಿಯನ್ನು ಪ್ರೀತಿಸಲು ಶುರು ಮಾಡಿದ್ದನು. ನಂತರ ಇಬ್ಬರು 7 ವರ್ಷ ಜೊತೆಯಲ್ಲಿ ಸುತ್ತಾಡಿ ಲಿವ್-ಇನ್ ರಿಲೇಶನ್‍ನಲ್ಲಿದ್ದರು ಎಂದು ತಿಳಿಸಿದ್ದಾರೆ.

    2017ರಲ್ಲಿ ಯುವಕನ ಮತ್ತೊಬ್ಬಳು ಪ್ರೇಯಸಿ ತನ್ನ ಸ್ನೇಹಿತೆಯನ್ನು ಆತನಿಗೆ ಪರಿಚಯ ಮಾಡಿಸುತ್ತಾಳೆ. ನಂತರ ಯುವಕ ಆ ಯುವತಿಯನ್ನು ಕೂಡ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾನೆ. ಯುವಕನ ಈ ಕಳ್ಳಾಟವನ್ನು ಗಮನಿಸಿದ ಆತನ ಸ್ನೇಹಿತ ಮೂರು ದಿನಗಳ ಹಿಂದೆ ಯುವತಿಯರಿಗೆ ತನ್ನ ಸ್ನೇಹಿತನ ನಿಜಬಣ್ಣ ಬಯಲು ಮಾಡಿದ್ದಾನೆ.

    ಈ ಹಿನ್ನೆಲೆಯಲ್ಲಿ ಮೂವರು ಯುವತಿಯರು ಸೆಕ್ಟರ್-24 ಪೊಲೀಸ್ ಠಾಣೆಗೆ ಹೋಗಿ ಯುವಕನ ವಿರುದ್ಧ ಕಿರುಕುಳದ ದೂರನ್ನು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಬುಧವಾರ ಯುವಕನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮೂವರು ಯುವತಿಯರು ಕೂಡ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

    ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ: ಠಾಣೆಯಲ್ಲಿ ಯುವತಿಯರು ಯುವಕನನ್ನು ತಾವು ಮದುವೆಯಾಗುವುದಾಗಿ ವಾದ-ವಿವಾದಕ್ಕೆ ಇಳಿದಿದ್ದರು. ಯುವಕ ಒಬ್ಬಳನ್ನು ಮದುವೆಯಾಗುವುದಕ್ಕೆ ನಿರಾಕರಿಸಿದ್ದನು. ಇದರಿಂದ ಬೇಸತ್ತ ಯುವತಿ ತನ್ನ ಕೈಯನ್ನು ಕಟ್ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎಂಬುವುದಾಗಿ ವರದಿಯಾಗಿದೆ.

    ಇದಾದ ಬಳಿಕ ಪೊಲೀಸರು ಕೈ ಕಟ್ ಮಾಡಿಕೊಂಡ ಯುವತಿಯನ್ನು ವಶಕ್ಕೆ ಪಡೆದು, ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ. ಇನ್ನು ಯುವಕನ ವಿರುದ್ಧ ಶಾಂತಿ ಉಲ್ಲಂಘನೆ ಮಾಡಿದ್ದಾನೆಂದು ಆತನನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಯುವತಿಯರು ಯುವಕನ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.