Tag: high court

  • ಟಿಪ್ಪು ಜಯಂತಿ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಟಿಪ್ಪು ಜಯಂತಿ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಬೆಂಗಳೂರು: ನವೆಂಬರ್ 10 ರಂದು ರಾಜ್ಯ ಸರ್ಕಾರದ ವತಿಯಿಂದ ಆಯೋಜನೆಗೊಂಡಿರುವ ಟಿಪ್ಪು ಜಯಂತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

    ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸುವಂತೆ ಕೋರಿ ಕೊಡಗಿನ ಕೆ.ಪಿ. ಮಂಜುನಾಥ್ ಎಂಬವರು ಹೈ ಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‍ನ ಹಂಗಾಮಿ ಸಿಜೆ ವಿಭಾಗೀಯ ಪೀಠವು ತಡೆ ನೀಡಲು ನಿರಾಕರಿಸಿದೆ.

    ವಿಚಾರಣೆ ವೇಳೆ ಟಿಪ್ಪು ಜಯಂತಿ ಆಚರಣೆ ತಡೆಯಲು ಕಾನೂನಿನಲ್ಲಿ ಅವಕಾಶವಿದೆಯಾ? ಅಥವಾ ಈ ಹಿಂದೆ ಆಚರಣೆ ರದ್ದು ಪಡಿಸಿರುವ ಕುರಿತು ಸುಪ್ರೀಂ ಕೋರ್ಟ್ ಅಥವಾ ಯಾವುದಾದರೂ ಹೈಕೋರ್ಟ್ ಆದೇಶವಿದೆಯೇ ಎಂದು ಅರ್ಜಿದರರನ್ನು ಪ್ರಶ್ನಿಸಿದೆ.

    ಟಿಪ್ಪು ಜಯಂತಿ ಆಚರಣೆಗೆ ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ. ಇದೊಂದು ದೊಡ್ಡ ವಿಚಾರವಾಗಿದ್ದು, ಸಮಗ್ರವಾಗಿ ವಿಚಾರಣೆ ನಡೆಯ ಬೇಕಿದೆ ಎಂದು ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ.

    ವರ್ಷ ಟಿಪ್ಪು ಜಯಂತಿ ವೇಳೆ ಕೊಡಗಿನ ಅಹಿತಕರ ಘಟನೆ ನಡೆದಿದೆ. ಹೀಗಾಗಿ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಪಿಐಎಲ್‍ನಲ್ಲಿ ಮನವಿ ಮಾಡಿದ್ದರು.

     

  • ಸೈನ್ಸ್ ನಲ್ಲಿ 2 ಬಾರಿ ಫೇಲ್ ಎಂದು ಫಲಿತಾಂಶ- ಕೋರ್ಟ್ ನಲ್ಲಿ 10ನೇ ಕ್ಲಾಸ್ ವಿದ್ಯಾರ್ಥಿನಿ ಗೆದ್ದಿದ್ದು ಹೇಗೆ?

    ಸೈನ್ಸ್ ನಲ್ಲಿ 2 ಬಾರಿ ಫೇಲ್ ಎಂದು ಫಲಿತಾಂಶ- ಕೋರ್ಟ್ ನಲ್ಲಿ 10ನೇ ಕ್ಲಾಸ್ ವಿದ್ಯಾರ್ಥಿನಿ ಗೆದ್ದಿದ್ದು ಹೇಗೆ?

    ಪಾಟ್ನಾ: ಪರೀಕ್ಷೆಯಲ್ಲಿ ಕಾಪಿ ಹೊಡೆಯೋ ವಿಷಯವಾಗಿ, ನಕಲಿ ಟಾಪರ್‍ಗಳ ವಿಷಯವಾಗಿ ಬಿಹಾರ ಶಿಕ್ಷಣ ಮಂಡಳಿ ಈ ಹಿಂದೆ ಸುದ್ದಿಯಾಗ್ತಿತ್ತು. ಇದೀಗ ವಿದ್ಯಾರ್ಥಿನಿಯೊಬ್ಬಳು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾಳೆಂದು ತಪ್ಪು ಫಲಿತಾಂಶ ನೀಡಿ ಮತ್ತೊಮ್ಮೆ ಸುದ್ದಿಯಾಗಿದೆ.

    ವಿದ್ಯಾರ್ಥಿನಿಗೆ 5 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡುವಂತೆ ಇಲ್ಲಿನ ಹೈ ಕೋರ್ಟ್ ಬಿಹಾರ ಶಾಲಾ ಶಿಕ್ಷಣ ಮಂಡಳಿಗೆ ಆದೇಶಿಸಿದೆ.

    ಆಗಿದ್ದೇನು?: ಬಿಹಾರದ ಸಾಹರ್ಸಾ ಜಿಲ್ಲೆಯ ಪ್ರಿಯಾಂಕಾ ಸಿಂಗ್ ಶಿಕ್ಷಣ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ. ಇದೇ ವರ್ಷದ ಆರಂಭದಲ್ಲಿ ಪ್ರಕಟವಾದ 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಪ್ರಿಯಾಂಕಾ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾಳೆಂದು ಫಲಿತಾಂಶ ಬಂದಿತ್ತು. ವಿಜ್ಞಾನದಲ್ಲಿ 29 ಅಂಕ, ಸಂಸ್ಕೃತದಲ್ಲಿ 4 ಅಂಕ ಬಂದಿತ್ತು. ಇಲ್ಲಿನ ಸರ್ಕಾರ ನಡೆಸುತ್ತಿರೋ ಡಿಡಿ ಹೈಸ್ಕೂಲ್ ವಿದ್ಯಾರ್ಥಿನಿಯಾದ ಪ್ರಿಯಾಂಕಾಗೆ ಫಲಿತಾಂಶದಲ್ಲಿ ಏನೋ ಎಡವಟ್ಟಾಗಿದೆ ಎನಿಸಿದ್ದು, ಕೂಡಲೇ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು.

    ಮರುಮೌಲ್ಯಮಾಪನದ ಫಲಿತಾಂಶ ಬಂದಾಗ ಪ್ರಿಯಾಂಕಾಗೆ ಮತ್ತಷ್ಟು ಶಾಕ್ ಆಗಿತ್ತು. ಸಂಸ್ಕೃತದಲ್ಲಿ ಸಿಕ್ಕಿದ್ದ 4 ಅಂಕ 9 ಅಂಕಕ್ಕೆ ಏರಿಕೆಯಾಗಿದ್ದರೆ, ವಿಜ್ಞಾನದಲ್ಲಿ ಬಂದಿದ್ದ 29 ಅಂಕ 7 ಅಂಕಗಳಿಗೆ ಇಳಿದಿತ್ತು. ಹೀಗಾಗಿ ಆಕೆ ಪಾಟ್ನಾ ಹೈಕೋರ್ಟ್ ಮೊರೆ ಹೋಗಿದ್ದಳು.

    ಸಾಂದರ್ಭಿಕ ಚಿತ್ರ

    ಆದ್ರೆ ಕೋರ್ಟ್ ವಿದ್ಯಾರ್ಥಿನಿಗೆ ಮೊದಲು 40 ಸಾವಿರ ರೂ. ಡೆಪಾಸಿಟ್ ಮಾಡಲು ಹೇಳಿತ್ತು. ಒಂದು ವೇಳೆ ಇದು ಗಂಭೀರ ಪ್ರಕರಣವಲ್ಲದಿದ್ದರೆ ಡೆಪಾಸಿಟ್ ಮಾಡಿದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

    ವಿದ್ಯಾರ್ಥಿನಿ ಹಣ ಡೆಪಾಸಿಟ್ ಮಾಡಿದ ನಂತರ ಆಕೆಯ ಉತ್ತರಪತ್ರಿಕೆಗಳನ್ನ ಒದಗಿಸುವಂತೆ ಕೋರ್ಟ್ ಶಾಲಾ ಮಂಡಳಿಗೆ ಆದೇಶಿಸಿತ್ತು. ಆದ್ರೆ ಅಧಿಕಾರಿಗಳು ಬೇರೆ ಯಾರದ್ದೋ ಉತ್ತರಪತ್ರಿಕೆಗಳನ್ನ ಪ್ರಿಯಾಂಕಾಳದ್ದು ಎಂದು ನೀಡಿದ್ದು, ಕೋರ್ಟ್ ನಲ್ಲಿ ಸಿಕ್ಕಿಬಿದ್ದಿದ್ದರು. ವಿದ್ಯಾರ್ಥಿನಿಯ ಬರವಣಿಗೆಗೂ ಉತ್ತರಪತ್ರಿಕೆಯಲ್ಲಿನ ಬರವಣಿಗೆಗೂ ವ್ಯತ್ಯಾಸವಿದ್ದ ಕಾರಣ ಆಕೆಯ ನಿಜವಾದ ಉತ್ತರಪತ್ರಿಕೆ ನೀಡುವಂತೆ ಕೋರ್ಟ್ ಹೇಳಿತ್ತು.

    ಕೊನೆಗೆ ವಿದ್ಯಾರ್ಥಿನಿಗೆ ವಿಜ್ಞಾನದಲ್ಲಿ 80 ಅಂಕ ಹಾಗೂ ಸಂಸ್ಕೃತದಲ್ಲಿ 61 ಅಂಕಗಳನ್ನ ನೀಡಲಾಗಿದೆ. ಅಲ್ಲದೆ ಆಕೆಗೆ 5 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲು ಕೋರ್ಟ್ ಹೇಳಿದ್ದು, ಇಡೀ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಆದೇಶಿಸಿದೆ.

    ಪ್ರಿಯಾಂಕಾ ಪ್ರಕರಣದಲ್ಲಿ ಉತ್ತರಪತ್ರಿಕೆಗಳ ಬಾರ್‍ ಕೋಡ್ ದೋಷದಿಂದ ಆಕೆಯ ಅಂಕಗಳು ಬದಲಾವಣೆಯಾಗಿದೆ ಎಂದು ಶಾಲಾ ಮಂಡಳಿಯ ಅಧಿಕಾರಿಗಳು ವಿವರಿಸಿದ್ದಾರೆ.

    2015ರಲ್ಲಿ ಬಿಹಾರದ ಬೋರ್ಡ್ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಪರೀಕ್ಷಾ ಕೇಂದ್ರದ ಗೋಡೆಗಳನ್ನೇರಿ ಕಾಪಿ ಚೀಟಿಗಳನ್ನ ವಿದ್ಯಾರ್ಥಿಗಳಿಗೆ ನೀಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

  • ಸೈನೆಡ್ ಮೋಹನ್‍ಗೆ ಗಲ್ಲುಶಿಕ್ಷೆ ಇಲ್ಲ: ಸಾಯೋವರೆಗೂ ಜೈಲು ಶಿಕ್ಷೆ

    ಸೈನೆಡ್ ಮೋಹನ್‍ಗೆ ಗಲ್ಲುಶಿಕ್ಷೆ ಇಲ್ಲ: ಸಾಯೋವರೆಗೂ ಜೈಲು ಶಿಕ್ಷೆ

    ಬೆಂಗಳೂರು: ಸೈನೆಡ್ ಮೋಹನ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಕೆಳ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸಿದೆ.

    ನಾಲ್ಕು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಮೋಹನ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಮಳೀಮಠ್, ನ್ಯಾ ಜಾನ್ ಮೈಕೆಲ್ ಕುನ್ನಾ ಅವರಿದ್ದ ವಿಭಾಗೀಯ ಪೀಠ, ಸೈನೆಡ್ ಮೋಹನ್ ಕುಮಾರ್ ಸಮಾಜಕ್ಕೆ ಮಾರಕ. ಹೀಗಾಗಿ ಈತ ಸಾಯುವವರೆಗೂ ಜೈಲಿನಲ್ಲಿರಬೇಕು ಎಂದು ಆದೇಶ ನೀಡಿದರು.

    20 ಯುವತಿಯರನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಸೈನೆಡ್ ನೀಡಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಮೋಹನ್ ಕುಮಾರ್‍ಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2013ರ ಡಿಸೆಂಬರ್ 21ರಂದು ಗಲ್ಲುಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿದ್ದ ಮೋಹನ್ ಕುಮಾರ್‍ಗೆ ಹೈಕೋರ್ಟ್ ರಿಲೀಫ್ ನೀಡಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ.

    ತಾನೇ ವಾದಿಸಿದ್ದ:
    ವಿಚಾರಣೆ ವೇಳೆ ನನ್ನ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಇಲ್ಲ. ನಾನು ಅತ್ಯಾಚಾರ ನಡೆಸಿದ್ದಕ್ಕೆ ಪುರಾವೆಯೇ ಇಲ್ಲ. ನಾನು ಸೈನೆಡ್ ತಿನ್ನಿಸಿ ಸಾಯಿಸಿದ್ದೇನೆ ಎಂದು ವಕೀಲರು ವಾದಿಸಿದ್ದಾರೆ. ಆದರೆ ಪ್ರಯೋಗಾಲಯದಲ್ಲಿ ನಾನು ನಾನು ಸೈನೆಡ್ ನೀಡಿ ಕೊಲೆ ಮಾಡಿದ್ದೇನೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಸೈನೆಡ್ ಸೇವಿಸಿದ್ದರೆ ಹೃದಯ ಬಡಿತ ನಿಂತುಹೋಗಿ ನರಗಳು ಹೆಪ್ಪುಗಟ್ಟಿ ಸಾವನ್ನಪ್ಪುತ್ತಾರೆ. ಆದರೆ ವರದಿಯಲ್ಲಿ ಈ ಯಾವುದೇ ವಿವರಗಳು ಇಲ್ಲ ಎಂದು ವಾದಿಸಿದ್ದ.

    ಸುಮಾರು 25ಕ್ಕೂ ಹೆಚ್ಚು ಖಾಲಿ ಪೇಪರ್ ಗಳಿಗೆ ನನ್ನ ಸಹಿ ಮಾಡಿಸಿಕೊಂಡು ಪೊಲೀಸರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ ಕೋರ್ಟ್ ನೀಡಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದ.

    2004ರಿಂದ 2009ರ ಅವಧಿಯಲ್ಲಿ 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಸೈನೆಡ್ ಮೋಹನ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಾದಿಸಿದ್ದರು. ಬಂಟ್ವಾಳ ಮೂಲದ ಶಿಕ್ಷಕನಾದ ಮೋಹನ್ 2002ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ.

  • ಗೋಧ್ರಾ ಹತ್ಯಾಕಾಂಡ: 11 ದೋಷಿಗಳ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಾಡು

    ಗೋಧ್ರಾ ಹತ್ಯಾಕಾಂಡ: 11 ದೋಷಿಗಳ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಾಡು

    ಅಹಮದಾಬಾದ್: ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ 11 ದೋಷಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಡಿಸಿ ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

    2011ರ ಫೆಬ್ರವರಿಯಲ್ಲಿ ವಿಶೇಷ ನ್ಯಾಯಾಲಯ(ಎಸ್‍ಐಟಿ) 11 ದೋಷಿಗಳಿಗೆ ಗಲ್ಲು ಶಿಕ್ಷೆ ಮತ್ತು 31 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಮಾರ್ಪಾಡುಗೊಳಿಸಿದ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ಸೋಮವಾರ ತನ್ನ ತೀರ್ಪು ಪ್ರಕಟಿಸಿದೆ.

    ಎಸ್‍ಐಟಿ ಪ್ರಕರಣದಿಂದ 63 ಜನರನ್ನು ಕೈಬಿಟ್ಟದ್ದನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಮೇಲನವಿಯನ್ನು ನ್ಯಾ. ಎಎಸ್ ದಾವೆ ಮತ್ತು ಜಿಆರ್ ಉದಹರಿ ನೇತೃತ್ವದ ದ್ವಿಸದಸ್ಯ ಪೀಠ ವಜಾಗೊಳಿಸಿದೆ.

    ಇದೇ ವೇಳೆ 2002 ಗಲಭೆ ನಿಯಂತ್ರಿಸಲು ರಾಜ್ಯ ಸರ್ಕಾರ ಮತ್ತು ರೈಲ್ವೇ ಸಚಿವಾಲಯ ವಿಫಲವಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ ಮೃತಪಟ್ಟ ಸದಸ್ಯರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಧನವನ್ನು ವಿತರಿಸುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ರೈಲ್ವೇಗೆ ಸೂಚಿಸಿದೆ.

    ಏನಿದು ಪ್ರಕರಣ?
    2002ರ ಫೆಬ್ರವರಿ 22 ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತ್ ಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ಕೋರ್ಟ್ 11 ದೋಷಿಗಳಿಗೆ ಗಲ್ಲು ಶಿಕ್ಷೆ, 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಕರಣದಿಂದ 63 ಮಂದಿಯನ್ನು ಖುಲಾಸೆಗೊಳಿಸಿತ್ತು. ಈ ಹತ್ಯಾಕಾಂಡದ ನಂತರ ಗುಜರಾತ್‍ನ ಅನೇಕ ಕಡೆಗಳಲ್ಲಿ ಕೋಮು ಗಲಾಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು.

    ಗುಜರಾತ್ ಸರ್ಕಾರ ಈ ಪ್ರಕರಣದ ತನಿಖೆಗಾಗಿ ರಚಿಸಿದ್ದ ನಾನಾವತಿ ಆಯೋಗವು, ಸಬರಮತಿ ಎಕ್ಸ್‍ಪ್ರೆಸ್ ರೈಲಿನ ಎಸ್-6 ಬೋಗಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಲ್ಲ. ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯನ್ನು ಸಲ್ಲಿಸಿತ್ತು.

  • ಜಂತಕಲ್ ಕೇಸ್: ಎಚ್‍ಡಿಕೆಗೆ ಬಿಗ್ ರಿಲೀಫ್

    ಜಂತಕಲ್ ಕೇಸ್: ಎಚ್‍ಡಿಕೆಗೆ ಬಿಗ್ ರಿಲೀಫ್

    ಬೆಂಗಳೂರು: ಜಂತಕಲ್ ಎಂಟರ್‍ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ವಿಶೇಷ ತನಿಖಾ ತಂಡ(ಎಸ್‍ಐಟಿ) ಬಂಧನ ಭೀತಿಗೆ ಒಳಗಾಗಿದ್ದ ಎಚ್‍ಡಿಕೆಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಒಬ್ಬರ ಭದ್ರತಾ ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್ ಒದಗಿಸಬೇಕು. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು. ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಕೆಯಾಗುವವರೆಗೂ ಎಸ್‍ಐಟಿ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಎಚ್‍ಡಿಕೆಗೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

    ಈ ಹಿಂದೆ ವಿಶೇಷ ಲೋಕಾಯುಕ್ತ ನ್ಯಾಯಾಲಯ ಕುಮಾರಸ್ವಾಮಿ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್‍ಡಿಕೆ ಹೈಕೋರ್ಟ್ ಮೊರೆ ಹೋಗಿದ್ದರು.

    ಏನಿದು ಜಂತಕಲ್ ಮೈನಿಂಗ್ ಕೇಸ್?: ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.

    ಇದನ್ನೂ ಓದಿ: ಏನಿದು ಜಂತಕಲ್ ಮೈನಿಂಗ್ ಕೇಸ್? ಎಚ್‍ಡಿಕೆ ಮೇಲಿನ ಆರೋಪ ಏನು?

  • ಸೂಪರ್ ಸ್ಟಾರ್ ಉಪೇಂದ್ರಗೆ ಹೈಕೋರ್ಟ್‍ನಿಂದ ಬಿಗ್ ರಿಲೀಫ್

    ಸೂಪರ್ ಸ್ಟಾರ್ ಉಪೇಂದ್ರಗೆ ಹೈಕೋರ್ಟ್‍ನಿಂದ ಬಿಗ್ ರಿಲೀಫ್

    ಬೆಂಗಳೂರು: ಸ್ಯಾಂಡಲ್‍ವುಡ್ ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ಜಮೀನು ವಿವಾದದಲ್ಲಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

    ಉಪೇಂದ್ರ ಅವರು ಬೆಂಗಳೂರು ದಕ್ಷಿಣ ತಾಲೂಕು ಬ್ಯಾಲಾಳು ಗ್ರಾಮದಲ್ಲಿ ಖರೀದಿ ಮಾಡಿದ್ದ 17 ಎಕರೆ 10 ಗುಂಟೆ ಜಮೀನು ಕಾನೂನುಬದ್ಧ ಅಂತ ನ್ಯಾಯಾಲಯ ಹೇಳಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಹಿನ್ನೆಡೆಯಾಗಿದ್ದು ಸರ್ಕಾರದ ಮೇಲ್ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ.

    2005 ರಲ್ಲಿ ಉಪೇಂದ್ರ ಅವರು ಖರೀದಿ ಮಾಡಿದ್ದ ಜಮೀನು ಕಾನೂನುಬದ್ಧವಾಗಿಲ್ಲ ಅಂತ ರಾಜ್ಯ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿತ್ತು. ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಉಪೇಂದ್ರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಸಿದ್ದರು.

    ಇದನ್ನೂ ಓದಿ: ಸೈನಿಕರನ್ನು ಬೆಂಬಲಿಸಿ ಬೀದಿಗೆ ಇಳಿದು ನಾವು ಯಾಕೆ ಚೀನಾಗೆ ಎಚ್ಚರಿಕೆ ನೀಡಬಾರದು: ಉಪ್ಪಿ ಪ್ರಶ್ನೆ

  • ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ನವದೆಹಲಿ: ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

    ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಈ ಹಿಂದೆ ಈ ಅಧಿಸೂಚನೆಗೆ 4 ವಾರಗಳ ತಡೆ ನೀಡಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾ. ಖೇಹರ್ ಅವರಿದ್ದ ಪೀಠ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದುದಿದು ದೇಶಾದ್ಯಂತ ಅನ್ವಯಿಸಲಿದೆ ಎಂದು ಹೇಳಿದೆ.

    ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಮೇ 26ರಂದು ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಹೈದರಾಬಾದ್ ಮೂಲದ ಫಾಹಿಮ್ ಖುರೇಷಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದ್ದು, ಈ ನಿರ್ಧಾರದಿಂದ ಮಾಂಸ ವ್ಯಾಪಾರೋದ್ಯಮಿಗಳಿಗೆ ಸಮಸ್ಯೆ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದು, ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

  • ರೈತರ ಸಾಲಮನ್ನಾ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

    ರೈತರ ಸಾಲಮನ್ನಾ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

    ನವದೆಹಲಿ: ತಮಿಳುನಾಡಿನ ಎಲ್ಲಾ ರೈತರ ಸಾಲಮನ್ನಾ ಮಾಡಿ ಎಂದು ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

    ಸರ್ಕಾರದ ಆರ್ಥಿಕ ನೀತಿ-ನಿರ್ಣಯದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ ಎಂದು ವ್ಯಾಖ್ಯಾನಿಸಿ ನ್ಯಾ. ಮದನ್ ಲೋಕೂರ್ ಅವರು ಮದ್ರಾಸ್ ಹೈಕೋರ್ಟ್ ಪೀಠದ ಆದೇಶಕ್ಕೆ ತಡೆ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.

    ರೈತರ ಪ್ರತಿಭಟನೆಗೆ ತೀವ್ರ ಒತ್ತಡಕ್ಕೊಳಗಾಗಿದ್ದ ತಮಿಳುನಾಡಿನ ಪಳನಿಸ್ವಾಮಿ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಐದು ಎಕರೆ ಭೂಮಿ ಹೊಂದಿರುವ ಸಣ್ಣ ಮತ್ತು ಅತೀಸಣ್ಣ ರೈತರು ಸಹಕಾರಿ ಬ್ಯಾಂಕ್‍ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲು ಮುಂದಾಗಿತ್ತು. ಆದರೆ, ಕೇವಲ ಐದು ಎಕರೆ ಯಾಕೆ ಎಲ್ಲಾ ರೈತರ ಸಾಲಮನ್ನಾ ಮಾಡಿ ಎಂದು ದೆಹಲಿಯಲ್ಲಿ ತಿಂಗಳ ಕಾಲ ತಮಿಳುನಾಡಿನ ರೈತರು ವಿಭಿನ್ನ-ವಿಚಿತ್ರವಾದ ಹೋರಾಟ ಮಾಡಿದ್ದರು.

    ರೈತರ ಹೋರಾಟಕ್ಕೆ ವಿಪಕ್ಷಗಳು, ಸಿನಿ ನಟರು ಬೆಂಬಲ ನೀಡಿದ್ದರು. ಅಲ್ಲದೆ, ಎಲ್ಲಾ ರೈತರ ಸಾಲಮನ್ನಾ ಮಾಡುವಂತೆ ಮದ್ರಾಸ್ ಹೈಕೋರ್ಟ್ ಗೆ `ದಕ್ಷಿಣ ಭಾರತದ ನದಿಜೋಡಣೆ ಮತ್ತು ಕೃಷಿಕ ಸಂಘ’ದ ಪಿ. ಅಯ್ಯಕಣ್ಣು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‍ನ ಮದುರೈ ಪೀಠದ ನ್ಯಾ. ಎಸ್.ನಾಗಮುತ್ತು ಪೀಠ ಎಲ್ಲಾ ರೈತರ ಸಾಲಮನ್ನಾ ಮಾಡುವಂತೆ ಆದೇಶ ಹೊರಡಿಸಿತ್ತು.

    ಈ ಆದೇಶದಂತೆ 3 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದ್ರೆ ಎರಡು ಸಾವಿರ ಕೋಟಿ ಹೊರೆಯಾಗಲಿದೆ ಎಂದು ತಮಿಳುನಾಡು ಸರ್ಕಾರ, ಮದ್ರಾಸ್ ಹೈಕೊರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ನಲ್ಲಿ ಮೇಲ್ಮನವಿ ಸಲ್ಲಿತ್ತು.

    ಕರ್ನಾಟಕದ ಮೇಲೆ  ಪರಿಣಾಮವೇನು..?
    50 ಸಾವಿರ ರೂ. ಸಾಲ ಮನ್ನಾ ಮಾಡಿರುವ ಕರ್ನಾಟಕದ ಮೇಲೆ ಯಾವುದೇ ಪರಿಣಾಮವಿಲ್ಲ. ಒಂದು ದೃಷ್ಟಿಯಲ್ಲಿ ಸಿದ್ದರಾಮಯ್ಯ ಪಾಲಿಗೆ ಇದು ನಿರಾಳ. ಆದರೆ ಭವಿಷ್ಯದಲ್ಲಿ ಸುಪ್ರೀಂ ಆದೇಶ ಉಲ್ಲೇಖಿಸಿ ಸಂಪೂರ್ಣ ಸಾಲಮನ್ನಾ ಅಸಾಧ್ಯ ಎಂದು ರಾಜಕೀಯ ಪಕ್ಷಗಳು ಹೇಳಬಹುದು. ಸಾಲಮನ್ನಾ ವಿಚಾರ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ರಾಜ್ಯ ಬಿಜೆಪಿಗೆ ಹಿನ್ನಡೆಯಾದರೂ ಕೇಂದ್ರ ಮಟ್ಟದಲ್ಲಿ ಸ್ವಲ್ಪಮಟ್ಟಿಗೆ ನಿರಾಳವಾಗಿದೆ.

     

  • ಸರ್ಕಾರಿ ರಜಾ ದಿನ ಮತ್ತು ವೀಕೆಂಡ್ ನಲ್ಲಿ ಸಿನಿಮಾ ನೋಡುವ ಮಂದಿಗೆ ಕಹಿ ಸುದ್ದಿ

    ಸರ್ಕಾರಿ ರಜಾ ದಿನ ಮತ್ತು ವೀಕೆಂಡ್ ನಲ್ಲಿ ಸಿನಿಮಾ ನೋಡುವ ಮಂದಿಗೆ ಕಹಿ ಸುದ್ದಿ

    ಬೆಂಗಳೂರು: ಸರ್ಕಾರಿ ರಜಾ ದಿನ ಮತ್ತು ವೀಕೆಂಡ್ ನಲ್ಲಿ ಸಿನಿಮಾ ನೋಡುವ ಮಂದಿಗೆ ಕಹಿ ಸುದ್ದಿ. ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ನೀವು ರಾಜ್ಯ ಸರ್ಕಾರ ನಿಗದಿ ಪಡಿಸಿದ ಗರಿಷ್ಠ 200 ರೂ.ಗಳ ಬದಲಾಗಿ ಮಲ್ಟಿಪ್ಲೆಕ್ಸ್ ಗಳು ವಿಧಿಸಿದ ದರದಲ್ಲಿ ಸಿನಿಮಾ ನೋಡಬೇಕು.

    ಹೌದು. ರಾಜ್ಯ ಸರ್ಕಾರ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ಗಳ(ತರಿಗೆ ಹೊರತಾಗಿ) ಪ್ರವೇಶದರ ನಿಗದಿ ಪಡಿಸಿ ಹೊರಡಿಸಿದ್ದ ಆದೇಶ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಿಗೆ ಅನ್ವಯವಾಗದಂತೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ.

    ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ಗಳ ಪ್ರವೇಶದರ ನಿಗದಿ ಪಡಿಸಿ ಹೊರಡಿಸಿದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಫ್‍ಐಸಿಸಿಐ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಐನಾಕ್ಸ್ ಲೀಷರ್ ಲಿಮಿಟೆಡ್‍ನ ನಿರ್ದೇಶಕ ದೀಪಕ್ ಅಶೆರ್ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಇಂದು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ರಜಾಕಾಲದ ನ್ಯಾಯಪೀಠದಲ್ಲಿ ಗುರುವಾರ ನಡೆಯಿತು.

    ಮಲ್ಟಿಪ್ಲೆಕ್ಸ್ ಗಳ  ವಾದ ಏನು?
    ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದಿಸಿ, ಮಲ್ಟಿಪ್ಲೆಕ್ಸ್‍ಗಳಲ್ಲಿ ಕೋಟ್ಯಂತರ ರೂ. ಗಳನ್ನು ಖರ್ಚು ಮಾಡಿ ಮಾಡಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಏಕರೂಪದ ದರವನ್ನು ನಿಗದಿ ಪಡಿಸುವುದರಿಂದ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಭಾರೀ ನಷ್ವವಾಗುತ್ತದೆ. ಅಷ್ಟೇ ಅಲ್ಲದೇ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ-1964ರ ಸೆಕ್ಷನ್ 12ರ ಅನುಸಾರ ಗರಿಷ್ಠ ಮಿತಿಯನ್ನು ನಿಗದಿ ಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಎಲ್ಲ ಕಾರಣದಿಂದ ಸರ್ಕಾರದ ಆದೇಶ ರದ್ದುಪಡಿಸಬೇಕೆಂದು ಮನವಿ ಮಾಡಿದರು.

    ಸರ್ಕಾರದ ವಾದ ಏನಿತ್ತು?
    ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಸರ್ಕಾರದ ಪರ ವಾದಿಸಿ, ಗರಿಷ್ಠ ದರವನ್ನು ನಿಗದಿ ಪಡಿಸುವ ಮುನ್ನ ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಜೊತೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಅವರು 200 ರೂ. ಗರಿಷ್ಠ ದರ ನಿಗದಿಪಡಿಸಲು ಒಪ್ಪಿಗೆ ಸೂಚಿಸಿದ್ದರು. ಈ ರೀತಿಯ ಆದೇಶ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಜಾರಿಯಾಗಿದೆ. ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ದರ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದು, ಸಾರ್ವಜನಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಏಕರೂಪದ ಪ್ರವೇಶ ದರ ನಿಗದಿ ಪಡಿಸಿದ್ದೇವೆ ಎಂದು ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಟ್ಟರು.

    ಮಲ್ಟಿಪ್ಲೆಕ್ಸ್ ಗಳ ಆಕ್ಷೇಪ ಏನು?
    ಸರ್ಕಾರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಏಕರೂಪದ ದರ ನಿಗದಿ ಪಡಿಸಲು ಕರೆಯಲಾದ ಸಭೆಯಲ್ಲಿ ಒಪ್ಪಿಗೆ ನೀಡುವಾಗ ವಾರಾಂತ್ಯ ಹಾಗೂ ಸರ್ಕಾರಿ ರಜೆಗಳಂದು ವಿನಾಯಿತಿ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಆದೇಶ ಪ್ರಕಟವಾಗುವಾಗ ನಮ್ಮ ಮನವಿಯನ್ನು ಪುರಸ್ಕರಿಸದೇ ರಾಜ್ಯದ ಎಲ್ಲ ಭಾಗಗಳಲ್ಲೂ ಗರಿಷ್ಠ 200 ರೂ. ಗಳ ಪ್ರವೇಶದರ ನಿಗದಿ ಪಡಿಸಿದೆ. ಈ ಹಿಂದೆ ವಾರದ ದಿನಗಳಲ್ಲಿ ಟಿಕೆಟ್ ದರ ಕಡಿಮೆ ಇತ್ತು. ಆದರೆ ಈಗ ಈ ಆದೇಶದಿಂದ ಎಲ್ಲ ದಿನಗಳಲ್ಲಿ ಒಂದೇ ದರ ನಿಗದಿ ಪಡಿಸಿದ ಕಾರಣ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಹೊರಯಾಗುತ್ತಿದೆ ಎಂದು ವಾದಿಸಿದರು.

    ವಾದ ಪ್ರತಿವಾದ ಅಲಿಸಿದ ಪೀಠ, ಅರ್ಜಿಯ ಸಂಬಂಧ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ಅಷ್ಟೇ ಅಲ್ಲದೇ ಈ ಅರ್ಜಿಯ ಇತ್ಯರ್ಥವಾಗುವರೆಗೆ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ತಿಳಿಸಿ ಮಧ್ಯಂತರ ಆದೇಶ ನೀಡಿತು.

    ಸರ್ಕಾರದ ಆದೇಶದಲ್ಲಿ ಏನಿದೆ?
    ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ ತೆರಿಗೆ ಹೊರತು ಪಡಿಸಿ 200 ರೂ. ಫಿಕ್ಸ್ ಆಗಿದ್ದು,  ಮೇ 2ರಂದು ಅಧಿಕೃತ ಆದೇಶ ಜಾರಿಯಾಗಿತ್ತು. ಎಲ್ಲ ಭಾಷೆಯ ಚಿತ್ರಗಳಿಗೆ ಇದು ಅನ್ವಯವಾಗುವಂತೆ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿತ್ತು. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಿತ್ರವನ್ನು ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉಲ್ಲೇಖಿಸಲಾಗಿದೆ. ಐ-ಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಜೊತೆಗೆ ಗೋಲ್ಡ್ ಕ್ಲಾಸ್ ಗೂ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಪ್ರತಿ ಚಿತ್ರಮಂದಿರದಲ್ಲೂ ಗೋಲ್ಡ್ ಕ್ಲಾಸ್ ಶೇ.10 ರಷ್ಟು ಸೀಟುಗಳನ್ನು ಮೀರಬಾರದು ಎನ್ನುವ ಅಂಶ ಆದೇಶದಲ್ಲಿದೆ.

    ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ

  • ನೆರೆಮನೆಯಾತ ಮಾಡಿದ್ದಕ್ಕೆ, ನನಗೂ ಗೃಹಪ್ರವೇಶದಂದು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆಗೆ ಅನುಮತಿ ನೀಡಿ

    – ವರ್ತೂರು ವ್ಯಕ್ತಿಯಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ

    ಬೆಂಗಳೂರು: ಕೊಲೆ, ಮಾನನಷ್ಟ, ಜಮೀನು ವಿವಾದ ಇತ್ಯಾದಿ ವಿಚಾರಗಳಿಗೆ ಸಂಬಂಧ ಪಟ್ಟ ಕೇಸ್‍ಗಳು ನ್ಯಾಯಾಲಯಕ್ಕೆ ಬರುವುದು ಸಾಮಾನ್ಯ. ಆದರೆ ಮನೆಯ ಗೃಹ ಪ್ರವೇಶದಂದು ಹೆಲಿಕಾಪ್ಟರ್‍ನಿಂದ ಪುಷ್ಪಾರ್ಚನೆ ನಡೆಸಲು ನಾನು ಮುಂದಾಗಿದ್ದು, ಅನುಮತಿ ನೀಡಬೇಕು ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಮುನಿರಾಜು ಎಂಬವರು ವರ್ತೂರಿನಲ್ಲಿ ಮನೆ ಕಟ್ಟಿಸಿದ್ದು, ಮನೆಯ ಗೃಹಪ್ರವೇಶ ಸಮಾರಂಭ ಫೆ.9ರಂದು ನಡೆಯಲಿದೆ. ಈ ಗೃಹಪ್ರವೇಶ ಸಮಾರಂಭಕ್ಕೆ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಪೊಲೀಸರಲ್ಲಿ ಅನುಮತಿ ಕೇಳಿದ್ದಾರೆ. ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಪೊಲೀಸರು ಅನುಮತಿ ನೀಡದ್ದಕ್ಕೆ ಅವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

    ಇಂದು ಅರ್ಜಿ ವಿಚಾರಣೆ ವೇಳೆ ಮುನೀರಾಜು ಪರ ವಕೀಲರು, ಪಕ್ಕದ ಮನೆಯ ನಿವಾಸಿಯೊಬ್ಬರು ಗೃಹಪ್ರವೇಶ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಿದ್ದಾರೆ. ಹೀಗಾಗಿ ಮುನಿರಾಜು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪುಷ್ಪಾರ್ಚನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ಆದ್ರೆ ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು ಅರ್ಜಿದಾರನನ್ನು, ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ನಡೆಸಲು ಹೈಕೋರ್ಟಿಗೆ ಬರಬೇಕೇ? ಪಕ್ಕದ ಮನೆಯವನು ಮಾಡುತ್ತಾನೆ ಎಂದು ನೀವು ಆತನನ್ನು ಅನುಸರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅಷ್ಟೇ ಅಲ್ಲದೇ ಈ ರೀತಿ ಹಣ ಪೋಲು ಮಾಡುವ ಬದಲು ಬಡವರಿಗೆ ನೆರವಾಗಬಹುದಲ್ಲವೇ? ಮುಂಬೈ ಶ್ರೀಮಂತರೊಬ್ಬರು ಮಗಳ ಅದ್ಧೂರಿ ಮದುವೆ ಬದಲು ಮನೆಯನ್ನು ಹಂಚಿದ್ದಾರೆ. ಬಡವರಿಗಾಗಿ ನಾರಾರು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ನೀವು ಯಾಕೆ ಆ ರೀತಿ ಮಾಡಬಾರದು. ಒಣ ಆಡಂಬರ ಯಾಕೆ ಬೇಕು ಎಂದು ಪ್ರಶ್ನಿಸಿದರು.

    ನ್ಯಾಯಾಧೀಶರು ಉದಾಹರಣೆಯೊಂದಿಗೆ ಸಲಹೆ ನೀಡಿದರೂ ಅರ್ಜಿದಾರರಾದ ಮುನಿರಾಜು ತಮ್ಮ ಪಟ್ಟನ್ನು ಬಿಡಲೇ ಇಲ್ಲ. ಹೀಗಾಗಿ ನ್ಯಾಯಾಧೀಶರು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಅನುಮತಿ ನೀಡಲು ಕಾನೂನು ಬದ್ಧ ಹಕ್ಕು ಇದೆಯೇ? ಇದರ ಬಗ್ಗೆ ನಿಲುವು ಏನು ಎಂದು ಸರ್ಕಾರಿ ವಕೀಲರಿಗೆ ಪ್ರಶ್ನಿಸಿ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದರು.