Tag: high court

  • ಗಮನಿಸಿ, ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು ಶಿಕ್ಷೆ! – ಬಿಬಿಎಂಪಿ ಪ್ರಕಟಣೆಯಲ್ಲಿ ಏನಿದೆ?

    ಗಮನಿಸಿ, ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು ಶಿಕ್ಷೆ! – ಬಿಬಿಎಂಪಿ ಪ್ರಕಟಣೆಯಲ್ಲಿ ಏನಿದೆ?

    ಬೆಂಗಳೂರು: ಇನ್ನು ಮುಂದೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಕಿದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನಗರದಲ್ಲಿ ಯಾರಾದರೂ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಿದರೆ ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲು ಮಾಡಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

    ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಿದ್ದು, ಅವುಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಮೌಖಿಕ ಖಡಕ್ ಆದೇಶಕ್ಕೆ ಬಿಬಿಎಂಪಿ ತತ್ತರಿಸಿ ಕೊನೆಗೂ ಎಚ್ಚೆತ್ತುಕೊಂಡಿದೆ.

    ಕೆಲವು ಸಾರ್ವಜನಿಕ ಸಭೆ, ಸಮಾರಂಭಗಳ ವೇಳೆ ಬಾವುಟ, ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳಿಗೂ ಆಯುಕ್ತರು, ಅನಧಿಕೃತವಾಗಿ ಬ್ಯಾನರ್ ಹಾಗೂ ಫ್ಲೆಕ್ಸ್ ಬಳಕೆ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ನಡೆದುಕೊಂಡರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಶಿಕ್ಷೆ ಏನು?
    ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ಮತ್ತು ಕರ್ನಾಟಕ ಓಪನ್ ಪ್ಲೇಸಸ್ (ಪ್ರಿವೆನ್ಶೆನ್ ಆಫ್ ಡಿಸ್‍ಫಿಗರ್ ಮೆಂಟ್) ಕಾಯ್ದೆ 1981ರ ಅಡಿಯಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಹೀಗಾಗಿ ತಪ್ಪಿತಸ್ಥರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಕೆಲವು ಪ್ರಕರಣದಲ್ಲಿ ಜೈಲು ಶಿಕ್ಷಯ ಜೊತೆಗೆ ದಂಡ ವಿಧಿಸಲಾಗುತ್ತದೆ. ಜಾಹಿರಾತುದಾರರು, ಪ್ರಕಟಣೆಗಾರರು, ಮುದ್ರಣಗಾರರು, ಭಾವಚಿತ್ರವಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

    ಬುಧವಾರ ಹೈಕೋರ್ಟ್ ನಲ್ಲಿ ಏನಾಯ್ತು?
    ಬುಧವಾರ ಬೆಳಗ್ಗೆ ಕಲಾಪಕ್ಕೂ ಮುನ್ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಬಿಬಿಎಂಪಿ ವಕೀಲರ ಮೂಲಕ ಆಯುಕ್ತರಿಗೆ ಮೌಖಿಕವಾಗಿ ಆದೇಶ ಹೊರಡಿಸಿದ್ದರು. ವಕೀಲರು ಫೋನ್ ನರೆ ಮೂಲಕ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು.

    ಹೈಕೋರ್ಟ್ ಆದೇಶದಿಂದ ಮಂಜುನಾಥ್ ಪ್ರಸಾದ್ ಎಲ್ಲ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ, ಬ್ಯಾನರ್ ಹಾಗೂ ಫ್ಲೆಕ್ಸ್ ತುರ್ತು ತೆರವುಗೊಳಿಸಿ, ಅವುಗಳ ಫೋಟೋವನ್ನು ವ್ಯಾಟ್ಸಪ್ ಮೂಲಕ ತಮ್ಮ ಮೊಬೈಲಿಗೆ ಕಳುಹಿಸುವಂತೆ ಆದೇಶಿಸಿದ್ದರು. ಅಷ್ಟೇ ಅಲ್ಲದೆ ಮಧ್ಯಾಹ್ನ ಖುದ್ದು ಕೋರ್ಟ್‍ಗೆ ಹಾಜರಾಗಿದ್ದರು. ನಂತರದ ವಿಚಾರಣೆಯಲ್ಲಿ ತೆರವು ಕಾರ್ಯದ ವರದಿಯನ್ನು ಬಿಬಿಎಂಪಿ ಪರ ವಕೀಲ ಕೋರ್ಟ್ ಗೆ ಒಪ್ಪಿಸಿದರು.

    ಬಿಬಿಎಂಪಿ ಎಲ್ಲ ಸಿಬ್ಬಂದಿ ಬುಧವಾರ ಒಂದು ದಿನದ ಎಲ್ಲಾ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ಕೇವಲ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಕಾರ್ಯದಲ್ಲಿ ತೊಡಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ 5 ಸಾವಿರಕ್ಕೂ ಹೆಚ್ಚು ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಮಾಡಿದ್ದರು. ಕೆಲವು ಪ್ರದೇಶಗಳಲ್ಲಿ ತಡರಾತ್ರಿಯವರೆಗೂ ತೆರವು ಕಾರ್ಯ ನಡೆದಿತ್ತು.

    ತಡರಾತ್ರಿವರೆಗೆ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನ ಶುಭಾಶಯದ ಕೋರಿ ಹಾಕಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‍ಗಳನ್ನು ಬಿಡಲಾಗಿತ್ತು.

    ಎಲ್ಲ ವಿಭಾಗದ ಜಂಟಿ ಆಯುಕ್ತರು, ಮುಖ್ಯ ಎಂಜನಿಯರ್‍ಗಳು ಸೇರಿದಂತೆ ಸೂಪರಿಂಟೆಂಡಿಂಗ್, ಕಾರ್ಯಪಾಲಕ ಹಾಗೂ ಸಹಾಯಕ ಕಾರ್ಯಪಾಲಕ ಎಂಜನಿಯರ್‍ಗಳು, ಸಹಾಯಕ ಸಿಬ್ಬಂದಿ, ಗ್ಯಾಂಗ್‍ಮನ್‍ಗಳು ಮತ್ತು ಪೌರಕಾರ್ಮಿಕರು ತೆರವು ಕಾರ್ಯದಲ್ಲಿ ತೊಡಗಿದ್ದರು. ಈ ಕಾರ್ಯಾಚರಣೆಯಲ್ಲಿ ಒಟ್ಟು 2 ಸಾವಿರ ಸಿಬ್ಬಂದಿ ಹಾಗೂ 500 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

    ಮುಂದಿನ ನಡೆ:
    ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ನಾಶಮಾಡಬಾರದು ಎಂದು ಕೋರ್ಟ್ ಸೂಚಿಸಿದ್ದು, ತೆರವು ಗೊಳಿಸಿರುವ ಫೋಟೋಗಳನ್ನು ಗುರುವಾರ ನೀಡಬೇಕು ಆದೇಶ ನೀಡಿತ್ತು. ಆಗಸ್ಟ್ 8ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಕಾರ್ಯಾಚರಣೆಯ ಸಂಪೂರ್ಣ ವರದಿ ನೀಡಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

  • ರೋಹಿಣಿ ಸಿಂಧೂರಿ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗ

    ರೋಹಿಣಿ ಸಿಂಧೂರಿ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗ

    ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಕೇಂದ್ರೀಯ ಆಡಳಿತ ನ್ಯಾಯಮಂಡಳಿ(ಸಿಎಟಿ) ಏ.17ರಂದು ನೀಡಿದ್ದ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸೋಮವಾರ ನ್ಯಾ.ಎಚ್.ಜಿ.ರಮೇಶ್ ಹಾಗೂ ನ್ಯಾ.ಪಿ.ಎಂ.ನವಾಜ್ ನೇತೃತ್ವದ ವಿಭಾಗೀಯಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ಹಾಸನ ಡಿಸಿಯಾಗಿ ಮುಂದುವರಿಸಲು ಸರ್ಕಾರದ ಪರ ಎಎಜಿ ಪೊನ್ನಣ್ಣ ಒಲವು ವ್ಯಕ್ತಪಡಿಸಿದರು.

    ಸರ್ಕಾರ ತನ್ನ ಅಭಿಪ್ರಾಯ ತಿಳಿಸಿದ ಕೂಡಲೇ ಹೈಕೋರ್ಟ್ ಹಾಲಿ ಜಿಲ್ಲಾಧಿಕಾರಿಯಾಗಿರುವ ರಣದೀಪ್ ಅವರನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲು ಆದೇಶ ನೀಡಿತು. ಈ ಆದೇಶವನ್ನು ಪ್ರಕಟಿಸುವ ಮೂಲಕ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಇತ್ಯರ್ಥ ಪಡಿಸಿತು. ಹೈಕೋರ್ಟ್‍ನಿಂದ ಆದೇಶ ಪ್ರಕಟವಾದ ಕೂಡಲೇ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಹಾಸನಕ್ಕೆ ಅಧಿಕೃತವಾಗಿ ವರ್ಗಾವಣೆಗೊಳಿಸಿತು.

    ಏನಿದು ಪ್ರಕರಣ?
    ನಿಯಮಗಳ ವಿರುದ್ಧವಾಗಿ ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ದರು. ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶವನ್ನು ಮಾ.6 ರಂದು ಹಿಂದಕ್ಕೆ ಪಡೆದಿದ್ದ ರಾಜ್ಯ ಸರ್ಕಾರ ಮಾ.7 ರಂದು ವರ್ಗಾವಣೆ ಮಾಡಿತ್ತು. ಒಟ್ಟು 12 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರೋಹಿಣಿ ಸಿಂಧೂರಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದರು. ಸಿಎಟಿ ಸರ್ಕಾರದ ಪರ ಆದೇಶ ನೀಡಿದ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

    ಯಾರು ರೋಹಿಣಿ ಸಿಂಧೂರಿ?:
    ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ-ಆಸ್ತಿ ಅಪ್ಲಿಕೇಷನ್ ತಂದಿದ್ದರು. ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.

    ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯ ವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.

    2015ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದರು. ಕಳೆದ 2017ರ ಜುಲೈ 14ರಿಂದ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ಅಲ್ಪಾವಧಿಯಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದರು. ತಮ್ಮ ಕೆಲಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿಯನ್ನು ಪಡೆದಿದ್ದರು. ಶ್ರವಣಬೆಳಗೋಳ ಮಹಾಮಸ್ತಕಾಭಿಷೇಕ ಸೇರಿದಂತೆ ಹಾಸನದ ಹಲವು ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕ್ರಿಯಾಶೀಲರಾಗಿದ್ದರು.

    https://www.youtube.com/watch?v=RIlr3y8t7ow

    https://www.youtube.com/watch?v=c6PoH0rh1XE

    https://www.youtube.com/watch?v=I0pUTEiRfSo

  • ಸಾಕು ನಾಯಿ ನಿಯಮಾವಳಿ ಹಿಂಪಡೆದ ಬಿಬಿಎಂಪಿ

    ಸಾಕು ನಾಯಿ ನಿಯಮಾವಳಿ ಹಿಂಪಡೆದ ಬಿಬಿಎಂಪಿ

    ಬೆಂಗಳೂರು: ಸಾರ್ವಜನಿಕರಿಂದ ತೀವ್ರ ಆಕ್ಷೇಪಣೆ ಒಳಗಾಗಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಲೈಸೆನ್ಸ್ ನಿಯಮಾವಳಿಯಿಂದ ಬಿಬಿಎಂಪಿ ಹಿಂದೆ ಸರಿದಿದೆ.

    ಸದ್ಯ ಸಾರ್ವಜನಿಕರಿಂದ ಆಕ್ಷೇಪಣೆ ಪರಿಗಣಿಸಿ ಹೊಸ ನಿಯಮಾವಳಿ ರಚಿಸಲು ತೀರ್ಮಾನಿಸಿರುವ ಬಿಬಿಎಂಪಿ. ಈ ಮೊದಲು ರೂಪಿಸಿದ್ದ ಪ್ರತಿ ಫ್ಲಾಟ್‍ಗೆ 1 ನಾಯಿ, ಮನೆಗೆ 3 ನಾಯಿ ಸಾಕಲು ಅವಕಾಶ ನೀಡುವ ಬಗ್ಗೆ ನಿಯಮಗಳನ್ನು ಹಿಂಪಡೆದಿದೆ.

    ಬಿಬಿಎಂಪಿ ನಿಯಮವಾಳಿ ವಿರುದ್ಧ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಎ.ಎಸ್.ಪೊನ್ನಣ್ಣ ಅವರು ನಿಯಮಾವಳಿ ಹಿಂಪಡೆಯುವ ಕುರಿತು ಗುರುವಾರ ತಿಳಿಸಿದರು. ಎಎಜಿ ಎ.ಎಸ್. ಪೊನ್ನಣ್ಣ ಅವರ ಹೇಳಿಕೆಯನ್ನು ಪುರಸ್ಕರಿಸಿದ ನ್ಯಾಯಾಪೀಠ ಪ್ರಾಣಿದಯಾ ಸಂಘಟನೆಗಳು ಪಿಐಎಲ್ ಇತ್ಯರ್ಥಗೊಳಿತು.

    ನಿಯಮದಲ್ಲಿ ಏನಿತ್ತು?
    ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ನಾಯಿ ಸಾಕಲು ವಾರ್ಷಿಕ 110 ಪರವಾನಗಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಅಲ್ಲದೆ, ತಪ್ಪದೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು. ಈ ನಿಯಮ ಉಲ್ಲಂಘಿಸಿದರೆ 1 ಸಾವಿರ ದಂಡ ಕಟ್ಟಬೇಕು. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಮುದ್ದಿನ ನಾಯಿಯನ್ನು ಮಾಲೀಕರು ಕಳೆದುಕೊಳ್ಳುವ ಸಾಧ್ಯತೆಯಿದೆ.

    ಫ್ಲ್ಯಾಟ್‍ಗಳಲ್ಲಿರುವವರು ಒಂದು ನಾಯಿ, ಮನೆಗಳಲ್ಲಿರುವವರು ಗರಿಷ್ಠ ಮೂರು ನಾಯಿ ಸಾಕಲು ಅವಕಾಶ ನೀಡಿತ್ತು. ಹೆಚ್ಚು ನಾಯಿ ಸಾಕಿದರೆ, ಬಿಬಿಎಂಪಿ ನೋಟಿಸ್ ನೀಡುವ ಹಾಗೂ ನಿಗದಿತ ಅವಧಿಯೊಳಗೆ ನೋಟಿಸ್‍ಗೆ ಉತ್ತರಿಸಬೇಕು. ನಿಯಮ ಉಲ್ಲಂಘಿಸುವವರ ನಾಯಿಯನ್ನು ವಶಕ್ಕೆ ಪಡೆದು ಬಿಬಿಎಂಪಿಯ ಶ್ವಾನ ಸಂತಾನ ನಿಯಂತ್ರಣ ಕೇಂದ್ರದಲ್ಲಿಟ್ಟು, ಮುಂದೆ ಹರಾಜು ಹಾಕಲಾಗುತ್ತದೆ ಅಥವಾ ಸಾಕುವವರಿಗೆ ಉಚಿತವಾಗಿ ಕೊಡಲಾಗುತ್ತದೆ ಎಂದು ಹೇಳಿತ್ತು.

    ನಾಯಿಗಳ ಕುತ್ತಿಗೆಗೆ ಪಟ್ಟಿ ಕಟ್ಟಿ ಕಾಲರ್ ಐಡಿ ಹಾಕಬೇಕು. ಈ ಪಟ್ಟಿಯಲ್ಲಿ ನಾಯಿಯ ಆರೋಗ್ಯ, ಲಸಿಕೆ ಕೊಡಿಸಿದ್ದು, ಮಾಲೀಕರ ವಿವರ, ಪರವಾನಗಿ ಸಂಖ್ಯೆ ಮೊದಲಾದ ಮಾಹಿತಿ ಇರಬೇಕು. ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿ ಮೂಲ ಸ್ಥಳದಲ್ಲೇ ವಾಪಸ್ ಬಿಡಲಾಗುತ್ತದೆ. ಒಂದು ವೇಳೆ ನಾಯಿಗಳಿಂದ ತೊಂದರೆ ಆಗಿದ್ದಲ್ಲಿ ಬಿಬಿಎಂಪಿಗೆ ದೂರು ನೀಡಬಹುದು. ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ತಿಳಿಸಿತ್ತು.

  • ಕಾವೇರಿಗಾಗಿ ಕಾವೇರಿದ್ದ ಕಾಲಾನಿಗೀಗ ಖಾಕಿ ಕಣ್ಗಾವಲು- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

    ಕಾವೇರಿಗಾಗಿ ಕಾವೇರಿದ್ದ ಕಾಲಾನಿಗೀಗ ಖಾಕಿ ಕಣ್ಗಾವಲು- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

    ಬೆಂಗಳೂರು: ರಾಜ್ಯದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಕಾಲಾ’ ಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಚಿತ್ರ ಪ್ರದಶನಕ್ಕೆ ಪೊಲೀಸ್ ಭದ್ರತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚಿಸಿದೆ.

    ಕರ್ನಾಟಕದಲ್ಲಿ ‘ಕಾಲಾ’ ಸಿನಿಮಾ ಬಿಡುಗಡೆ ವಿಚಾರವಾಗಿ ರಜನಿ ಅಳಿಯ ಧನುಷ್ ಹೈಕೋರ್ಟ್ ನಲ್ಲಿ ಜೂ.4 ರಂದು ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕ ಸದಸ್ಯ ಪೀಠ ಸಿನಿಮಾದ ಬಿಡುಗಡೆ ಮಧ್ಯಂತರ ಆದೇಶ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸ್ ಭದ್ರತೆಯೊಂದಿಗೆ ಚಿತ್ರ ಬಿಡುಗಡೆ ಅವಕಾಶ ನೀಡಿದ್ದು, ಚಲನಚಿತ್ರ ಎಲ್ಲೆಲ್ಲಿ ಬಿಡುಗಡೆಯಾಗುತ್ತೆ ಎನ್ನುವ ವರದಿಯನ್ನು ಚಿತ್ರತಂಡ ಕೂಡಲೇ ಸರ್ಕಾರಕ್ಕೆ ನೀಡಬೇಕು ಎಂದು ಸೂಚನೆ ನೀಡಿದೆ.

    ವಾದ-ಪ್ರತಿವಾದ ಹೇಗಿತ್ತು?
    ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಬೆದರಿಕೆಯಿದ್ದು, ಚಿತ್ರ ಬಿಡುಗಡೆಗೆ ಸರಿಯಾದ ಭದ್ರತೆಯನ್ನು ನೀಡಬೇಕು ಎಂದು ಚಿತ್ರ ತಂಡದ ಪರ ವಕೀಲರು ಮನವಿ ಮಾಡಿಕೊಂಡರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಕೊಲೆ ಬೆದರಿಕೆ ಇದೆ ಅಂತಾ ಹೇಳುತ್ತಿರುವಿರಿ, ಎಲ್ಲಿ ಬೆದರಿಕೆ ಇದೆ? ಯಾವುದಾದರೂ ಪ್ರದೇಶ ಬಗ್ಗೆ ತಿಳಿಸಿ. ಗಾಂಧಿನಗರದಲ್ಲಿ ಬೆದರಿಕೆ ಇದೆ ಎನ್ನುತ್ತಿರಾ ಅಥವಾ ನಿಮ್ಮ ಭಯ ಊಹೆ ಮೇಲೆ ನಿಂತಿದೆಯೇ? ಚಿತ್ರ ಬಿಡುಗಡೆಗೆ ಭಯ ಇದ್ದರೆ ಪೊಲೀಸ್ ರಕ್ಷಣೆ ಪಡೆದುಕೊಳ್ಳಬಹುದು. ನೀವು ಯಾರೊಬ್ಬರ ಮೇಲೂ ನೇರವಾಗಿ ಆರೋಪ ಮಾಡುತ್ತಿಲ್ಲ. ಆದರೆ ಬೆದರಿಕೆ ಇದೆ ಅಂತ ಆರೋಪ ವ್ಯಕ್ತ ಪಡಿಸುತ್ತಿರುವಿರಿ. ನಿಮಗೆ ಭಯ ಇರುವುದು ಸ್ಪಷ್ಟವಾಗಿದ್ದರೆ ಅದು ಯಾರಿಂದ ಇರುವುದೆಂದು ತಿಳಿಸಿ ಎಂದು ಪ್ರಶ್ನಿಸಿದರು.

    ಈ ಪ್ರಶ್ನೆಗಳಿಗೆ ಉತ್ತರಿಸಿದ ವಕೀಲರು, ಸಾಕಷ್ಟು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ಬಿಡುಗಡೆಯ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದರು. ಅವರ ಭಯವನ್ನು ಅರಿತ ನ್ಯಾಯಾಧೀರು, ಚಿತ್ರ ಬಿಡುಗಡೆಯಾದರೆ ಸರ್ಕಾರ ಭದ್ರತೆಯನ್ನು ನೀಡಲು ಯಾವುದೇ ತೊಂದರೆಗಳಿಲ್ಲವಲ್ಲ ಎಂದು ಎಎಜಿ ಶಿವಣ್ಣ ಅವರನ್ನು ಪ್ರಶ್ನಿಸಿದರು.

    ಚಿತ್ರ ಬಿಡುಗಡೆಗೆ ತೊಂದರೆಯಿಲ್ಲ. ಆದರೆ ಚಿತ್ರತಂಡವು ಎಲ್ಲಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎನ್ನುವ ಬಗ್ಗೆ ನಮಗೆ ಇದುವರೆಗೂ ಮಾಹಿತಿ ನೀಡಿಲ್ಲವೆಂದು ಉತ್ತರಿಸಿದರು. ಹಾಗಾದರೆ ಚಿತ್ರತಂಡ ಸೂಕ್ತ ಮಾಹಿತಿ ಒದಗಿಸಿದರೆ ಬಿಡುಗಡೆಗೆ ನಿಮ್ಮ ಕಡೆಯಿಂದ ತೊಂದರೆ ಇಲ್ಲವಲ್ಲಾ ಎಂದು ಈ ವೇಳೆ ಜಡ್ಜ್ ಮರುಪ್ರಶ್ನೆ ಹಾಕಿದರು. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಎಎಜಿ ಉತ್ತರಿಸಿದರು.

    ಚಿತ್ರ ಬಿಡುಗಡೆಗೆ ನಾವು ಯಾವುದೇ ನಿರ್ಬಂಧ ಹೇರಲು ಬರುವುದಿಲ್ಲ. ಅದರೆ ಈ ಕುರಿತು ಕನ್ನಡ ಪರ ಸಂಘಟನೆಗಳು ಹೇಳಿಕೆ ನೀಡಿವೆ. ಸಂಘಟನೆಗಳು ಫಿಲಂ ಚೇಂಬರ್ ಅಧೀನದಲ್ಲಿವೆ, ಹೀಗಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ಫಿಲಂ ಚೇಂಬರ್ ಪರ ವಕೀಲರು ತಮ್ಮ ವಾದವನ್ನು ಮುಂದಿಟ್ಟರು.

    ಚೇಂಬರ್ ಪರ ವಕೀಲರ ವಾದಕ್ಕೆ, ಪ್ರತಿಭಟನೆ ಮಾಡುವುದು ಅವರ ಹಕ್ಕು. ಪ್ರತಿಭಟನೆ ಮಾಡಬೇಡಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರತಿಭಟನಾಕಾರರು ತಮ್ಮ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ ಎಂದು ಜಡ್ಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಈ ವೇಳೆ ಕರ್ನಾಟಕದಲ್ಲಿ ಹಿಂದಿ ಮತ್ತು ತೆಲುಗು ಚಿತ್ರಗಳಿಗೆ ಈ ತೊಂದರೆ ಆಗುವುದಿಲ್ಲ. ಆದರೆ ತಮಿಳು ಚಿತ್ರಕ್ಕೆ ಮಾತ್ರ ಇಂತಹ ಸಮಸ್ಯೆ ಎದುರಾಗುತ್ತದೆ ಎಂದು ಕಾಲಾ ಪರ ವಕೀಲರು ವಾದಿಸಿದರು. ಜನಾಭಿಪ್ರಾಯ, ಜನರ ಇಚ್ಛೆಯನ್ನು ಬದಲಿಸುವಂತೆ ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಏನು ಬೇಕು ಅದನ್ನು ಸ್ವೀಕರಿಸ್ತಾರೆ ಅಷ್ಟೇ ಎಂದು ಜಡ್ಜ್ ಉತ್ತರಿಸಿದರು.

    ದಯಮಾಡಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ, ನಿರ್ಮಾಪಕರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಕಾಳಾ ಪರ ವಕೀಲರು ನ್ಯಾಯಾಧೀಶರಿಯಲ್ಲಿ ಮನವಿ ಮಾಡಿಕೊಂಡರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಕರ್ನಾಟಕದಲ್ಲಿ ಜನರ ಶಾಂತಿಗೆ ಭಂಗ ಆಗದಂತೆ ಪೊಲೀಸ್ ಕಣ್ಗಾವಲಿನಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಿ. ಯಾವುದೇ ತೊಂದರೆ ಆಗಬಾರದು. ಅಲ್ಲದೇ ಸರ್ಕಾರ ಯಾವ ಮಾಹಿತಿ ಕೇಳುತ್ತದೋ ಅದನ್ನು ನೀಡಿ ಎಂದು ಚಿತ್ರತಂಡಕ್ಕೆ ಆದೇಶ ನೀಡಿದರು.

    ಹೈಕೋರ್ಟ್‍ನಲ್ಲಿ ಚಿತ್ರ ಬಿಡುಗಡೆ ಏನಾಗುತ್ತದೆ ಎಂದು ಕಾತುರದಲ್ಲಿ ಕಾಯುತ್ತಿದ್ದ ರಜನಿಕಾಂತ್ ಅಭಿಮಾನಿಗಳು ಆದೇಶದ ಬರುತ್ತಿದ್ದಂತೆ ಪಟಾಕಿ ಹೊಡೆದು ಸಂಭ್ರಮಿಸಿದರು.

  • ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಭೋಪಾಲ್: ಪತ್ನಿಗೆ ತನ್ನ ಗಂಡನಿಗೆ ಸಂಬಳ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

    ಪತಿಯಿಂದ ದೂರವಾಗಿರುವ ಪತ್ನಿ ಗಂಡನ ಸಂಬಳದ ಮಾಹಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈಗ ಹೈಕೋರ್ಟ್ ದ್ವಿಸದಸ್ಯ ಪೀಠ ಈ ಆದೇಶವನ್ನು ರದ್ದುಗೊಳಿಸಿ ಪತ್ನಿ ಪರವಾಗಿ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    ಬಿಎಸ್‍ಎನ್‍ಎಲ್ ಉದ್ಯೋಗಿ ಪವನ್ ಜೈನ್ ನಿಂದ ಬೇರೆಯಾದ ಸುನಿತಾ ಜೈನ್ ಕುಟುಂಬ ನಿರ್ವಹಣೆಗೆ 7 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ಪಡೆಯುತ್ತಿದ್ದರು. ಪತಿಯ ಸಂಬಳ ತಿಂಗಳಿಗೆ 2 ಲಕ್ಷ ರೂ. ಇರುವ ಕಾರಣ ತನಗೆ ಇನ್ನು ಹೆಚ್ಚು ನಿರ್ವಹಣಾ ಭತ್ಯೆ ಸಿಗಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಪತಿಯ ಸಂಬಳದ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು.

    ಈ ಅರ್ಜಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಗೆ ಮಾಹಿತಿ ಕೋರಿ ಅರ್ಜಿ ಕೇಳಿದ್ದರು. ಮಾಹಿತಿ ಕೊಡಲು ಬಿಎಸ್‍ಎನ್‍ಎಲ್ ಸಂಸ್ಥೆ ನಿರಾಕರಿಸಿತು. ನಂತರ ಪತ್ನಿ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದರು. ಸುನಿತಾ ಜೈನ್ ಅರ್ಜಿಯನ್ನು ಪುರಸ್ಕರಿಸಿದ ಕೇಂದ್ರ ಮಾಹಿತಿ ಆಯೋಗ ಸಂಬಳದ ಮಾಹಿತಿಯನ್ನು ನೀಡುವಂತೆ ಬಿಎಸ್‍ಎನ್‍ಎಲ್ ಗೆ ಆದೇಶವನ್ನು ನೀಡಿತ್ತು. ಆಯೋಗದ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಆಯೋಗದ ಆದೇಶವನ್ನು ರದ್ದು ಮಾಡಿತ್ತು.

    ಏಕಸದಸ್ಯ ಪೀಠದ ಆದೇಶವನ್ನು ಪತ್ನಿ ದ್ವಿಸದ್ಯ ಪೀಠದಲ್ಲಿ ಪ್ರಶ್ನಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ಕೆ ಸೇಥ್ ಹಾಗೂ ನಂದಿತಾ ದುಬೆ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠ ಪತಿ ಸಂಬಳದ ಮಾಹಿತಿಯನ್ನು ಪತ್ನಿಗೆ ತಿಳಿಯುವ ಹಕ್ಕಿದೆ ಎಂದು ಹೇಳಿ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದರು.

  • ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಚೆನ್ನೈ: ಪಠ್ಯ ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳಾಗಲಿ, ತುಂಬಿದ ಕಂಟೈನರ್ ಗಳಾಗಲಿ ಅಲ್ಲ ಎಂದು ಹೇಳುವ ಮೂಲಕ ಮದ್ರಾಸ್ ಹೈ ಕೋರ್ಟ್ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದೆ.

    ಮಕ್ಕಳ ಕೈ ಚೀಲದ ಹೊರೆಯನ್ನು ಕಡಿಮೆ ಮಾಡುವಂತೆ ಹಾಗೂ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡದಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ತನ್ನ ಮಧ್ಯಂತರ ತೀರ್ಪಿನಲ್ಲಿ ಸೂಚಿಸಿದೆ.

    ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳ ಆದೇಶಗಳನ್ನು ಉಲ್ಲೇಖ ಮಾಡುತ್ತಾ ನ್ಯಾಯಮೂರ್ತಿ ಕಿರುಬಾಕರನ್ ಕೈ ಚೀಲದ ತೂಕ ಮಕ್ಕಳ ತೂಕದ 10% ಮೀರಿರಬಾರದು. ಈ ಸಂಬಂಧ “ಮಕ್ಕಳ ಶಾಲಾ ಬ್ಯಾಗ್ ನೀತಿ” ಗೆ ಸಂಬಂಧಿಸಿದಂತೆ ಮಾನದಂಡಗಳನ್ನು ರೂಪಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

    ವಕೀಲ ಎಂ ಪುರುಷೋತ್ತಮನ್ ಅವರು ಎನ್‍ಸಿಇಆರ್ ಟಿ ಸಿದ್ಧಪಡಿಸಿದ ಪಠ್ಯ ಮತ್ತು ಎನ್‍ಸಿಇಆರ್ ಟಿ ಮುದ್ರಿಸಿದ ಪುಸ್ತಕಗಳನ್ನು ಮಾತ್ರ ಖರೀದಿಸುವಂತೆ ಸಿಬಿಎಸ್‍ಇ ಶಾಲೆಗಳಿಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ.

    ಎನ್‍ಸಿಇಆರ್ ಟಿ ಪಠ್ಯ ಕ್ರಮ ಮತ್ತು ಬುಕ್ ಗಳನ್ನು ಕಡ್ಡಾಯ ಗೊಳಿಸುವಂತೆ ಕೇಂದ್ರಿಯ ಶಿಕ್ಷಣ ಮಂಡಳಿ (ಸಿಬಿಎಸ್‍ಇ) ಹಾಗೂ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಕೋರ್ಟ್ ಸೂಚಿಸಿದೆ.

    1 ಮತ್ತು 2 ನೇ ತರಗತಿಗೆ ಭಾಷೆ ಮತ್ತು ಗಣಿತ ವಿಷಯಗಳು ಮಾತ್ರ ಇರಬೇಕು. ತರಗತಿ 3 ರಿಂದ 5 ನೇ ತರಗತಿ ವರೆಗೆ ಪರಿಸರ ಅಧ್ಯಯನ ಮತ್ತು ಗಣಿತ ವಿಷಯಗಳನ್ನು ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ ಬೋಧಿಸಬೇಕು. ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡುವ ಹಾಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

    ವೈದ್ಯರು ಹೇಳುವಂತೆ 5 ರಿಂದ 6 ವರ್ಷದ ಮಕ್ಕಳಿಗೆ ಕನಿಷ್ಠ 11 ಗಂಟೆ ನಿದ್ದೆ ಬೇಕು. ಬೆಳಗ್ಗೆ ಶಾಲೆಗೆ ಮುಂಚೆ ಹೋಗಿದ್ದರೆ ಬೇಗ ಮಲಗಬೇಕು. ಹೋಮ್ ವರ್ಕ್ ಮಕ್ಕಳ ನಿದ್ದೆಯ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದು ತನ್ನ ಆದೇಶದಲ್ಲಿ ವೈದ್ಯಕೀಯ ತಜ್ಞರ ಹೇಳಿಕೆಗಳನ್ನು ಜಡ್ಜ್ ಉಲ್ಲೇಖಿಸಿದರು.

    1 ನೇ ತರಗತಿ ಪಠ್ಯ ಕ್ರಮದಲ್ಲಿ ವ್ಯಾಕರಣ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳು ಇರುವುದು ಆಶ್ಚರ್ಯ ಮತ್ತು ಅತಂಕ ತರಿಸುವಂತದ್ದು. 5 ವರ್ಷದ ಮಗು ಹೇಗೆ ಈ ವಿಷಯಗಳನ್ನು ಗ್ರಹಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಸಿಬಿಎಸ್‍ಇ ಶಾಲೆಗಳು ಅಪ್ರಸ್ತುತ ವಿಷಯಗಳನ್ನು ಬೋಧಿಸಿ ಮಕ್ಕಳನ್ನು ಒತ್ತಡದಲ್ಲಿ ಸಿಲುಕಿಸುತ್ತಿದೆ ಎಂದು ಅಭಿಪ್ರಾಯಪಟ್ಟು ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದರು.

     

  • ಜೂನ್ 4 ರಂದು ಮೆಟ್ರೋ ಸೇವೆ ಇರಲ್ಲ!

    ಜೂನ್ 4 ರಂದು ಮೆಟ್ರೋ ಸೇವೆ ಇರಲ್ಲ!

    ಬೆಂಗಳೂರು: ಹೈಕೋರ್ಟ್ ಆದೇಶದ ಬಳಿಕವೂ ಸಮಸ್ಯೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಬಗೆಹರಿಸದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ನೌಕರರು ಜೂನ್ 4ರಂದು ಮುಷ್ಕರ ನಡೆಸಲಿದ್ದಾರೆ.

    ವೇತನ ಪರಿಷ್ಕರಣೆ, ಬಡ್ತಿ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯ ತಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಮ್ಮ ಮೆಟ್ರೋ ನೌಕರರ ಸಂಘಟನೆ ಪ್ರತಿಭಟನೆಗೆ ಮುಂದಾಗಿದೆ.

    ಮಾರ್ಚ್ 22ರಂದು ಪ್ರತಿಭಟನೆ ನಡೆಸಲು ನೌಕರರು ನಿಶ್ಚಯಿಸಿದ್ದರು. ಆದರೆ, ಹೈಕೋರ್ಟ್ ಬಿಎಂಆರ್ ಸಿಎಲ್ ಹಾಗೂ ಅದರ ನೌಕರರಿಗೆ ಸಮಾಧಾನದಿಂದ ವರ್ತಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿತ್ತು.

    ಹೈಕೋರ್ಟ್ ಆದೇಶದ ಮೇರೆಗೆ ಮೆಟ್ರೊ ನೌಕರರು ತಮ್ಮ ಮುಷ್ಕರವನ್ನು 1 ತಿಂಗಳವರೆಗೆ ಮುಂದೂಡಿದ್ದರು. ಈಗ ಮಾತುಕತೆ ಫಲಪ್ರದವಾಗದ ಕಾರಣ ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.

  • ಲಾಲು ಪ್ರಸಾದ್ ಯಾದವ್‍ಗೆ 6 ವಾರ ತಾತ್ಕಾಲಿಕ ಜಾಮೀನು ಮಂಜೂರು

    ಲಾಲು ಪ್ರಸಾದ್ ಯಾದವ್‍ಗೆ 6 ವಾರ ತಾತ್ಕಾಲಿಕ ಜಾಮೀನು ಮಂಜೂರು

    ಪಟ್ನಾ: ರಾಂಚಿಯ ಹೈಕೋರ್ಟ್ ಮೇವು ಹಗರಣದ ಅಪರಾಧಿ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಆರೋಗ್ಯ ಚಿಕಿತ್ಸೆಗಾಗಿ ಆರು ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

    ಲಾಲು ಪ್ರಸಾದ್ ಪುತ್ರನ ತೇಜ್ ಪ್ರತಾಪ್ ಯಾದವ್ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಶುಕ್ರವಾರ ಪಟ್ನಾಗೆ ಆಗಮಿಸಿದ್ದರು. ಈ ವೇಳೆಯೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶನಿವಾರ ತೇಜ್ ಪ್ರತಾಪ್ ವಿವಾಹ ಸಮಾರಂಭ ನಡೆಯಲಿದೆ.

    ಇದಕ್ಕೂ ಮುನ್ನವೇ ಲಾಲು ಪ್ರಸಾದ್ ಯಾದವ್ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮೂರು ದಿನಗಳ ಪೆರೋಲ್ ಪಡೆದಿದ್ದರು. ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯಾ ವಿವಾದ ನಿಶ್ಚಿತಾರ್ಥ ಸಮಾರಂಭವೂ ಏಪ್ರಿಲ್ 18 ರಂದು ಪಟ್ನಾದ ಮಯೂರ ಹೋಟೆಲ್ ನಲ್ಲಿ ನೆರವೇರಿತ್ತು. ಮೇ 12 ರಂದು ವಿವಾಹ ಸಮಾರಂಭ ನಡೆಯಲಿದೆ.

    ಪ್ರತಾಪ್ ನಿಶ್ಚಿತಾರ್ಥ ಸಮಾರಂಭದ ವೇಳೆ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಈ ವೇಳೆ ಪ್ರತಾಪ್ ತಮ್ಮ ನೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು `ಮೀಸ್ ಯೂ ಪಾ’ ಎಂದು ಬರೆದುಕೊಂಡಿದ್ದರು.

    ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಅನಾರೋಗ್ಯ ಸಮಸ್ಯೆಯಿಂದ ಜಾರ್ಖಂಡ್ ನ ಆರ್ ಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಇದನ್ನು ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ

  • ನರೋಡಾ ಗಾಮ್ ಹತ್ಯಾಕಾಂಡ: ಗುಜರಾತ್ ಮಾಜಿ ಸಚಿವೆ ಕೊಡ್ನಾನಿ ಖುಲಾಸೆ

    ನರೋಡಾ ಗಾಮ್ ಹತ್ಯಾಕಾಂಡ: ಗುಜರಾತ್ ಮಾಜಿ ಸಚಿವೆ ಕೊಡ್ನಾನಿ ಖುಲಾಸೆ

    ಅಹಮದಾಬಾದ್: ಗುಜರಾತ್ ಹೈ ಕೋರ್ಟ್ 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಿಂದ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿದೆ. ಬಜರಂಗ ದಳದ ಮುಖಂಡ ಬಾಬು ಬಜರಂಗಿ ಗೆ ನೀಡಿದ ಶಿಕ್ಷೆಯ ತೀರ್ಪನ್ನು ಕೋರ್ಟ್ ಎತ್ತಿ ಹಿಡಿದಿದೆ.

    ಪ್ರಕರಣದ ವಿಚಾರಣೆಯ ವೇಳೆ ಸಾಕ್ಷ್ಯಗಳೆಂದು ಪರಿಗಣಿಸಲಾಗಿದ್ದ 11 ಮಂದಿಗಳ ಪೈಕಿ ಯಾರೊಬ್ಬರು ಮಾಯಾ ಕೊಡ್ನಾನಿ ಈ ಗಲಾಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸದ ಹಿನ್ನೆಯಲ್ಲಿ ಕೋರ್ಟ್ ಕೊಡ್ನನಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

    ವಿಚಾರಣೆಯ ವೇಳೆ ಕೊಡ್ನಾನಿ ಅವರು ಪೊಲೀಸರ ಜೊತೆ ಮಾತನಾಡುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಸಾಕ್ಷ್ಯ ನುಡಿದಿದ್ದರು. ಈ ಹಿನ್ನೆಲೆಯ ಹತ್ಯಾಕಾಂಡಕ್ಕೆ ಯಾವುದೇ ಕ್ರಿಮಿನಲ್ ಪಿತೂರಿ ಎಸಗಿಲ್ಲ ಎಂದು ಅಭಿಪ್ರಾಯಪಟ್ಟು ಕೋರ್ಟ್ ಕೊಡ್ನಾನಿ ಅವರನ್ನು ದೋಷಮುಕ್ತಗೊಳಿಸಿದೆ.

    ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ಕೋರ್ಟ್ 2012ರಲ್ಲಿ ಮಾಯಾ ಕೊಡ್ನಾನಿ, ಬಾಬು ಬಜರಂಗಿ ಸೇರಿದಂತೆ 32 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿ 29 ಮಂದಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮಾಯಾ ಕೊಡ್ನಾನಿ ಗುಜರಾತ್ ಹೈ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಎಸ್‍ಐಟಿ ಕೋರ್ಟ್ ಗೆ ಹಾಜರಾಗಿ ಮಾಯಾ ಕೊಡ್ನಾನಿ ಪರ ಸಾಕ್ಷ್ಯ ಹೇಳಿದ ಅಮಿತ್ ಶಾ

    ಏನಿದು ಪ್ರಕರಣ?
    ಗುಜರಾತ್ ನರೋಡಾ ಗಾಮ್ ನಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ, ಪ್ರಚೋದಿಸಿ ಹತ್ಯಾಕಾಂಡ ನಡೆಸಿದ ಆರೋಪ ಮಾಯಾ ಕೊಡ್ನಾನಿ ಮೇಲಿತ್ತು. 2002ರ ಫೆಬ್ರವರಿ 28ರಂದು ಈ ಹತ್ಯಾಕಾಂಡ ನಡೆದಿದ್ದು 97 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಆರೋಪಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮಾಯಾ ಅವರು ಗುಜರಾತ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಹತ್ಯಾಕಾಂಡ ನಡೆದ ವೇಳೆ ನಾನು ಆ ಸ್ಥಳದಲ್ಲಿ ಇರಲಿಲ್ಲ. ವಿಧಾನಸಭೆಯ ಅಧಿವೇಶನ ನಡೆದ ಬಳಿಕ ಸೋಲಾ ಆಸ್ಪತ್ರಗೆ ತೆರಳಿದ್ದೆ ಎಂದು ಮಾಯಾ ಕೊಡ್ನಾನಿ ನ್ಯಾಯಾಲಯಕ್ಕೆ ತಿಳಿಸಿದ್ದರು.

  • ಮಾರ್ಚ್ 22ರಂದು ಮೆಟ್ರೊ ಮುಷ್ಕರ ಇರಲ್ಲ

    ಮಾರ್ಚ್ 22ರಂದು ಮೆಟ್ರೊ ಮುಷ್ಕರ ಇರಲ್ಲ

    ಬೆಂಗಳೂರು: ಮಾರ್ಚ್ 22 ರಂದು ನಡೆಯಲು ಉದ್ದೇಶಿಸಿದ್ದ ನಮ್ಮ ಮೆಟ್ರೊ ನೌಕರರ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.

    ಎಸ್ಮಾ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹಾಕಿದ್ದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಇಂದು ಎರಡು ಕಡೆಯವರೆಗೆ ಕುಳಿತು ಸಂಧಾನ ನಡೆಸುವಂತೆ ಸೂಚನೆ ನೀಡಿದೆ. ಎರಡು ಕಡೆಯವರು ಸಮಾಧಾನದಿಂದ ವರ್ತಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿತು.

    ಹೈಕೋರ್ಟ್ ಆದೇಶದ ಮೇರೆಗೆ ಮೆಟ್ರೊ ನೌಕರರು ತಮ್ಮ ಮುಷ್ಕರವನ್ನು 1 ತಿಂಗಳವರೆಗೆ ಮುಂದೂಡಿದ್ದಾರೆ. ಮಾತುಕತೆ ಫಲಪ್ರದವಾಗದೇ ಇದ್ದಲ್ಲಿ ಮತ್ತೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಬಡ್ತಿ, ವೇತನ ಪರಿಷ್ಕರಣೆ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯ ತಡೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೆಟ್ರೊ ನೌಕರರು ಮಾ. 22 ರಂದು ಮುಷ್ಕರ ನಡೆಸಲು ಮುಂದಾಗಿದ್ದರು. ಮೆಟ್ರೊ ಸಾರ್ವಜನಿಕ ಸೇವೆಯಾಗಿದ್ದು, ಇದಕ್ಕೆ ಅಡಚಣೆ ಮಾಡುವುದು ಕಾನೂನು ಬಾಹಿರ. ಒಂದು ವೇಳೆ ಮುಷ್ಕರಕ್ಕೆ ಇಳಿದರೆ ಎಸ್ಮಾ ಜಾರಿಗೊಳಿಸಲಾಗುತ್ತದೆ ಎಂದು ಬಿಎಂಆರ್‍ಸಿಎಲ್ ಎಚ್ಚರಿಕೆ ನೀಡಿತ್ತು.