Tag: high court

  • ಡಿಕೆಶಿ ಅರ್ಜಿ ವಜಾ – ಇಡಿ ವಿಚಾರಣೆಗೆ ಗ್ರೀನ್ ಸಿಗ್ನಲ್

    ಡಿಕೆಶಿ ಅರ್ಜಿ ವಜಾ – ಇಡಿ ವಿಚಾರಣೆಗೆ ಗ್ರೀನ್ ಸಿಗ್ನಲ್

    ಬೆಂಗಳೂರು: ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಗೆ ಹಾಜರಾಗಬೇಕೆಂದು ಹೈಕೋರ್ಟ್ ಆದೇಶಿಸಿದೆ.

    ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾ. ಅರವಿಂದ್ ಕುಮಾರ್ ಇಂದು ಆದೇಶ ಪ್ರಕಟಿಸಿದರು.

    ಈ ಪ್ರಕರಣ ವಿಚಾರಣೆಗೆ ಯೋಗ್ಯವಾಗಿದೆ. ಚಿದಂಬರಂ ಅವರಂತೆ ಡಿಕೆ ಶಿವಕುಮಾರ್ ಸಹ ವಿಚಾರಣೆ ಎದುರಿಸಬೇಕು ಎಂದು ನ್ಯಾ.ಅರವಿಂದ್ ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಏನಿದು ಪ್ರಕರಣ?
    2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

    ಮುಂದೇನಾಗಬಹುದು?
    ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಬಹುದು. ಸೂಕ್ತ ರೀತಿಯಲ್ಲಿ ಮಾಹಿತಿ ನೀಡಲಿಲ್ಲ ಎಂಬ ಕಾರಣ ನೀಡಿ ಬಂಧಿಸಬಹುದು. ನೋಟಿಸ್ ನೀಡದೆಯೇ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿಯಲ್ಲಿ ಬಂಧಿಸುವ ಅವಕಾಶ ಬಳಸಿಕೊಳ್ಳಬಹುದು. ಬೇನಾಮಿ ಅಥವಾ ಅಕ್ರಮ ಆಸ್ತಿ ಹೊಂದಿದ್ದರೆ ಫೆಮಾದಡಿ ಜಪ್ತಿ ಮಾಡಿಕೊಳ್ಳಬಹುದು. ಆರೋಪ ಸಾಬೀತಾದ್ರೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಆಗಬಹುದು. ಡಿಕೆ ಶಿವಕುಮಾರ್ ಅವರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ.

  • ಬಾಲಕನ ಕೋರ್ಟ್ ಹೋರಾಟದಿಂದಾಗಿ ಮಕ್ಕಳಿಗೆ ಸಿಗುವಂತಾಯ್ತು ಎರಡು ಜೊತೆ ಸಮವಸ್ತ್ರ

    ಬಾಲಕನ ಕೋರ್ಟ್ ಹೋರಾಟದಿಂದಾಗಿ ಮಕ್ಕಳಿಗೆ ಸಿಗುವಂತಾಯ್ತು ಎರಡು ಜೊತೆ ಸಮವಸ್ತ್ರ

    ಕೊಪ್ಪಳ: ಒಬ್ಬ ವ್ಯಕ್ತಿ ಆಸಕ್ತಿ ತೋರಿದರೆ ಏನು ಬೇಕಾದರೂ ಬದಲಾವಣೆ ತರಬಹುದು ಎಂಬುದಕ್ಕೆ ಈ ಎಂಟು ವರ್ಷದ ವಿದ್ಯಾರ್ಥಿಯೇ ಉದಾಹರಣೆಯಾಗಿದ್ದು, ಈತನ ಕೋರ್ಟ್ ಹೋರಾಟದಿಂದಾಗಿ ರಾಜ್ಯದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಇದೀಗ ಎರಡು ಜೊತೆ ಸಮವಸ್ತ್ರ ಸಿಗುವಂತಾಗಿದೆ.

    ಎರಡು ಜೊತೆ ಸಮವಸ್ತ್ರ ನೀಡುವುದಾಗಿ ಹೇಳಿದ್ದ ಸರ್ಕಾರ 2019-20ರ ಶೈಕ್ಷಣಿಕ ವರ್ಷದಲ್ಲಿ ಒಂದೇ ಜೊತೆ ನೀಡಿತ್ತು. ಸರ್ಕಾರದ ಕ್ರಮ ಖಂಡಿಸಿ, ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ದೇವಪ್ಪ ಬಸಪ್ಪ ಹರಿಜನ ಅವರ ಪುತ್ರ ಎಂಟು ವರ್ಷದ ಮಂಜುನಾಥ್ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದು, ಅಂತಿಮವಾಗಿ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀ ಮಾರಿ ಹಾಕಿ, ಎರಡು ಜೊತೆ ಸಮವಸ್ತ್ರಗಳನ್ನು ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

    ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ.ಪಿ.ಎಂ.ನವಾಜ್ ಅವರಿದ್ದ ವಿಭಾಗೀಯಪೀಠ ವಿಚಾರಣೆಗೆ ನಡೆಸಿದ್ದು, ಸರ್ಕಾರವನ್ನು ತರಾಟೆ ತಗೆದುಕೊಂಡಿದೆ. ಕಾನೂನು ಉಲ್ಲಂಘನೆ ಅಷ್ಟೇ ಅಲ್ಲ ಇದು ಶುಚಿತ್ವ ಪ್ರಶ್ನೆಯೂ ಆಗಿದೆ. ಈ ವಿಚಾರದಲ್ಲಿ ಸರ್ಕಾರಗಳು ನೆಪ ಹೇಳಬಾರದು ಇಂತಹ ಸಾಮಾನ್ಯ ವಿಚಾರಗಳಿಗೆ ಜನ ಹೈಕೋರ್ಟ್‍ಗೆ ಬರಬೇಕೇ ಎಂದು ನ್ಯಾಯ ಪೀಠ ಸರ್ಕಾರದ ಕ್ರಮದ ವಿರುದ್ಧ ಕಿಡಿ ಕಾರಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರೆಡೂ ಸಮಾನ ಹೊಣೆಗಾರಿಕೆ ಹೊತ್ತು ವಿದ್ಯಾರ್ಥಿಗಳಿಗೆ ಸಮಸವಸ್ತ್ರ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ವಿಧ್ಯಾರ್ಥಿ ಪರವಾಗಿ ವಕೀಲ ಅಂಜಿತ್ ಶೆಟ್ಟಿ ಉಚಿತವಾಗಿ ವಾದ ಮಾಡಿದ್ದರು.

    ವಿದ್ಯಾರ್ಥಿಯ ವಾದ ಏನಿತ್ತು?
    ಸರ್ಕಾರವೇ ಎರಡು ಜೊತೆ ಬಟ್ಟೆಗಳನ್ನು ನೀಡುವದಾಗಿ ಈ ಹಿಂದೆ ಆದೇಶಿಸಿದೆ. ಆದರೆ, ಇದೀಗ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರವನ್ನು ಹಾಗೂ ಇನ್ನೊಂದು ಜೊತೆ ಕೇವಲ ಬಟ್ಟೆಯನ್ನು ನೀಡುತ್ತಿದೆ. ಅಲ್ಲದೆ, ಬಹುತೇಕ ಕಡೆ ಸಮವಸ್ತ್ರವನ್ನೇ ನೀಡಿಲ್ಲ. ಆದರೆ ಸರ್ಕಾರದ ಆದೇಶದ ಪ್ರಕಾರ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರಗಳನ್ನು ನೀಡಬೇಕು ಎಂಬುದು ವಿದ್ಯಾರ್ಥಿಯ ವಾದವಾಗಿತ್ತು.

    2019-20ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳು ಸೇರಿದಂತೆ RTE ಅಡಿ ಪ್ರವೇಶ ಪಡೆದಿರುವ ಮಕ್ಕಳಿಗೆ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರ ಮಾತ್ರ ವಿತರಿಸಲಾಗಿದೆ. ಎರಡನೇ ಜೊತೆಯನ್ನು ಕೇವಲ ಬಟ್ಟೆಯನ್ನು ಮಾತ್ರ ನೀಡಿದೆ, ಇನ್ನೂ ಕೆಲವೆಡೆ ಬಟ್ಟೆಯನ್ನು ಸಹ ನೀಡಿಲ್ಲ. ಇದರಿಂದ ಬಡ ಮಕ್ಕಳು ಹಾಗೂ ಅವರ ಪೋಷಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅನೇಕ ಶಾಲೆಗಳಲ್ಲಿ ಇನ್ನೂ ಸಹ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರವನ್ನೂ ವಿತರಿಸಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ವಿದ್ಯಾರ್ಥಿಯ ವಾದವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಏನಿದು ಪ್ರಕರಣ:
    ಸರ್ಕಾರ 2015-16ನೇ ಶೈಕ್ಷಣಿಕ ಸಾಲಿನಿಂದ ಎರಡು ಜೊತೆ ಸಮವಸ್ತ್ರ ನೀಡುವಂತೆ ಆದೇಶ ಹೊರಡಿಸಿತ್ತು. 2015-16ನೇ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ ನೀಡಲಾಗಿತ್ತು. ಆದೇಶ ಹೊರಡಿಸಿದ ವರ್ಷ ಮಾತ್ರ ಸರ್ಕಾರ ಎರಡು ಜೊತೆ ಸಮವಸ್ತ್ರ ನೀಡಿತ್ತು. ನಂತರದ ವರ್ಷಗಳಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಒಂದೇ ಜೊತೆ ಸಮವಸ್ತ್ರವನ್ನು ನೀಡಲಾಗಿತ್ತು. ಅಲ್ಲದೆ, 2018-19 ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡುವಲ್ಲಿ ಸರ್ಕಾರ ತಕರಾರು ಎತ್ತಿತ್ತು. ಕಳೆದ ವರ್ಷವೂ ಸಹ ಒಂದರಿಂದ ಎಂಟನೆ ತರಗತಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದೇ ಜೊತೆ ಸಮವಸ್ತ್ರ ನೀಡಿತ್ತು. ಹೀಗಾಗಿ ಸರ್ಕಾರದ ಕ್ರಮ ಪ್ರಶ್ನಿಸಿ ವಿದ್ಯಾರ್ಥಿ ಹೈ ಕೋರ್ಟ್ ಮೆಟ್ಟಿಲೇರಿದ್ದ.

  • ರಕ್ಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

    ರಕ್ಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

    ಚಂಡೀಗಡ: ಹರ್ಯಾಣದ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಶಾಲೆಗೆ ಹೋಗುವಾಗ ಪ್ರತಿದಿನ ಎದುರಿಸಬೇಕಾದ ಕಿರುಕುಳದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    7 ರಿಂದ 12 ನೇ ತರಗತಿಯವರೆಗಿನ ಮಾನೇಸರ್‍ ನ ಸರ್ಕಾರಿ ಶಾಲೆಯ ಐದು ವಿದ್ಯಾರ್ಥಿನಿಯರು, ತಮ್ಮ ಶಾಲೆಗೆ ಭದ್ರತಾ ಸಿಬ್ಬಂದಿ ನೇಮಕವಾಗಿಲ್ಲ. ನಮ್ಮ ಶಾಲೆಗೆ ಕಾಪೌಂಡ್ ಇಲ್ಲ. ಅದ್ದರಿಂದ ನಮ್ಮ ಶಾಲೆಗೆ ಹೊರಗಿನಿಂದ ಯುವಕರು ಬಂದು ಕಿರುಕುಳ ನೀಡುತ್ತಾರೆ. ನಮಗೆ ರಕ್ಷಣೆ ಕೊಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.

    ವರದಿಯ ಪ್ರಕಾರ ಈ ಶಾಲೆಯಲ್ಲಿ ಸುಮಾರು 600 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ತಡೆಗೋಡೆ ಇಲ್ಲವಾದರಿಂದ ಅವರಣದೊಳಗೆ ಯಾರು ಬೇಕಾದರು ಬರಬಹುದು. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲ ಯುವಕರು ಕುಡಿದು ಶಾಲೆಯ ಅವರಣಕ್ಕೆ ಬಂದು ಹುಡುಗಿಯರನ್ನು ಚುಡಾಯಿಸುವುದು, ಕೆಟ್ಟ ಪದಗಳಲ್ಲಿ ನಿಂದಿಸುವುದು ಮಾಡುತ್ತಾರೆ ಎನ್ನಲಾಗಿದೆ.

    ಈ ಶಾಲಾ ಕಾಪೌಂಡ್ ಒಳಗೆ ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಂಚಾಯತ್ ಕಟ್ಟಡ, ಅಂಗನವಾಡಿ ಮತ್ತು ಉದ್ಯಾನವನವಿದೆ. ಹಾಗಾಗಿ ಇಲ್ಲಿಗೆ ಯಾವಾಗಲು ಜನರು ಬರುತ್ತಿರುತ್ತಾರೆ. ಇದರಲ್ಲಿ ಕೆಲ ಯುವಕರು ಶಾಲಾ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಬೇಸತ್ತ ಬಾಲಕಿಯರು ಈಗ ಕೋರ್ಟ್‍ಗೆ ಹೋಗಿದ್ದಾರೆ.

    “ನಮ್ಮ ಶಾಲಾ ಆವರಣವನ್ನು ಶೈಕ್ಷಣಿಕೇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಸರಿಯಾದ ತಡೆ ಗೋಡೆಯ ಕೊರತೆಯಿಂದಾಗಿ, ಸಮಾಜವಿರೋಧಿ ಅಂಶಗಳು ಶಾಲಾ ಆವರಣಕ್ಕೆ ಸುಲಭವಾಗಿ ಪ್ರವೇಶಿಸುತ್ತೀವೆ. ಈ ರೀತಿಯ ತೊಂದರೆಯಿಂದ ಶಾಲಾ ಆಡಳಿತ ಮಂಡಳಿ ಆಟದ ವ್ಯವಸ್ಥೆಯನ್ನು ಶಾಲೆಯ ಒಳಗೆ ಮಾಡಿದೆ” ಎಂದು ವಿದ್ಯಾರ್ಥಿನಿಯರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಈ ವಾರದ ಆರಂಭದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು.

    ಇದು ನಮ್ಮ ಶಿಕ್ಷಣದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಈ ವಿಚಾರವಾಗಿ ಪದೇ ಪದೇ ಮನವಿಯನ್ನು ಮಾಡಿದ್ದರು ನಿರ್ಲಕ್ಷಿಸಿದ್ದಾರೆ ಎಂದು ಬಾಲಕಿಯರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಆಗಸ್ಟ್ 2 ರೊಳಗೆ ಪ್ರತಿಕ್ರಿಯೆ ನೀಡುವಂತೆ ಹರ್ಯಾಣ ಸರ್ಕಾರಕ್ಕೆ ಸೂಚಿಸಿದೆ.

  • ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದ್ಯಾ – ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ

    ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದ್ಯಾ – ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ

    – ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಕುಸಿದಿದ್ಯಾ?
    – ಜಾಮೀನು ಮಂಜೂರು ಆಗಿದ್ರೂ ಮತ್ತೊಂದು ಎಫ್‍ಐಆರ್ ಹಾಕಿದ್ದು ಯಾಕೆ
    – ಕೂಡಲೇ ಟ್ರೋಲ್ ಮಗ ಅಡ್ಮಿನ್ ಬಿಡುಗಡೆ ಮಾಡಿ

    ಬೆಂಗಳೂರು:“ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದೆಯೇ? ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಕುಸಿದಿದೆಯಾ?” – ಈ ರೀತಿಯಾಗಿ ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

    ಜೆಡಿಎಸ್ ನಾಯಕರ ವಿರುದ್ಧ ಫೇಸ್‍ಬುಕ್ ಕಮೆಂಟ್ ಮಾಡಿದ್ದ ‘ಟ್ರೋಲ್ ಮಗ’ ಪುಟದ ಅಡ್ಮಿನ್ ಜಯಕಾಂತ್ ಅವರಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ ಐದು ದಿನಗಳ ಕಾಲ ಅವರನ್ನು ಪೊಲೀಸ್ ವಶದಲ್ಲಿಟ್ಟುಕೊಂಡಿದ್ದಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.

    ಜಾಮೀನು ಮಂಜೂರು ಆಗಿದ್ದರೂ ವಶದಲ್ಲಿಟ್ಟುಕೊಂಡಿದ್ದು ಸರಿಯಲ್ಲ. ಇದೊಂದು ಗಂಭೀರ ವಿಚಾರವಾಗಿದ್ದು, ಪೊಲೀಸರ ಕ್ರಮ ಖಂಡನಾರ್ಹ ಎಂದು ನ್ಯಾ.ಪಿ.ಎಸ್. ದಿನೇಶ್‍ಕುಮಾರ್ ಅವರಿದ್ದ ಏಕಸದಸ್ಯಪೀಠ ಅಭಿಪ್ರಾಯಪಟ್ಟು ಕೂಡಲೇ ಜಯಕಾಂತ್ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿತು.

    ಅರ್ಜಿದಾರರ ಪರ ವಾದಿಸಿದ ವಕೀಲ ಅರುಣ್ ಶ್ಯಾಮ್, ನನ್ನ ಕಕ್ಷಿದಾರರು ನ್ಯಾಯಾಲಯದ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಅದೇ ಆರೋಪದ ಇನ್ನೊಂದು ದೂರಿನ ಮೇಲೆ ಅವರನ್ನು ಮತ್ತೆ ಐದು ದಿನಗಳಿಂದ ಪೊಲೀಸರು ತಮ್ಮ ಕಸ್ಟಡಿಯಲ್ಲಿರಿಸಿಕೊಂಡಿದ್ದಾರೆ. ಈ ರೀತಿ ಕಸ್ಟಡಿಯಲ್ಲಿ ಇರಿಸಿರುವುದು ಅಕ್ರಮ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಈ ವೇಳೆ ನ್ಯಾ. ದಿನೇಶ್‍ಕುಮಾರ್, ಪದೇ ಪದೇ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸುತ್ತಿವೆ. ಜನ ಸಾಮಾನ್ಯರು ರಸ್ತೆ ಮೇಲೆ ಕೂಡ ಓಡಾಡಲು ಸಾಧ್ಯವಾಗದಂತಹ ವಾತಾವರಣ ಇದೆಯಲ್ಲ. ಈ ಪ್ರಕರಣದಲ್ಲಿ ಆರೋಪಿಯನ್ನು ತರಾತುರಿಯಲ್ಲಿ ಬಂಧನ ನಡೆಸುವ ಅಗತ್ಯ ಏನಿತ್ತು? ನ್ಯಾಯಾಲಯ ಜಾಮೀನು ನೀಡಿದ್ದರೂ ಇನ್ನೊಂದು ಎಫ್‍ಐಆರ್ ದಾಖಲಿಸಿ ಬಂಧಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಸಿವಿಲ್ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪ ದಿನೇ ದಿನೇ ಜಾಸ್ತಿ ಆಗುತ್ತಿದೆ. ಕಳೆದ ವಾರ ಡಿಸಿಪಿಯನ್ನು ನ್ಯಾಯಾಲಯಕ್ಕೆ ಕರೆಸಿ ಸೂಚನೆ ನೀಡಿದ್ದರೂ ನಿಮ್ಮ ಪ್ರವೃತ್ತಿ ಮತ್ತೆ ಮುಂದುವರಿದಿದೆ. ಆಸ್ತಿ ವ್ಯಾಜ್ಯ ಸೇರಿದಂತೆ ಎಲ್ಲ ಪ್ರಕರಣದಲ್ಲಿ ಮೂಗು ತೂರಿಸುತ್ತಿದ್ದೀರಿ ಎಂದು ಅಭಿಪ್ರಾಯಪಟ್ಟು ಪೊಲೀಸರಿಗೆ ನ್ಯಾಯಾಧೀಶರು ಚಾಟಿ ಬೀಸಿದರು.

    ಏನಿದು ಪ್ರಕರಣ?
    ಮೇ 26ರಂದು ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್‍ಕುಮಾರ್ ‘ಟ್ರೋಲ್ ಮಗ’ ಪುಟದಲ್ಲಿ ಜೆಡಿಎಸ್ ನಾಯಕರ ಬಗ್ಗೆ ಅವಹೇಳನಕಾರಿ ಹಾಗೂ ಜಾತಿನಿಂದನೆ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಪುಟದ ಅಡ್ಮಿನ್ ಜಯಕಾಂತ್ ಜೂ.17ರಂದು ನಿರೀಕ್ಷಣಾ ಜಾಮೀನು ಪಡೆದಿದ್ದರು. ಜಾಮೀನು ದಾಖಲೆಗಳನ್ನು ಜಯಕಾಂತ್ ಸಲ್ಲಿಸಲು ಹೋದಾಗ ಜೆಡಿಎಸ್ ಐಟಿ ವಿಭಾಗದ ರವಿರಾಜ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜೂನ್ 23 ರಂದು ಮತ್ತೊಂದು ಎಫ್‍ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಜಯಕಾಂತ್ ಪರ ವಕೀಲರು ಹೈ ಕೋರ್ಟ್ ಮೆಟ್ಟಿಲೇರಿದ್ದರು.

  • ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬೆಂಗಳೂರು: ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಫೋನಿನಿಂದ ಕಿರಿಕಿರಿ ಆಗುತ್ತಿರುವ ವಿಚಾರವಾಗಿ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

    ವಕೀಲ ರಮೇಶ್ ನಾಯ್ಕ್ ಎಲ್ ಅವರು ಪಿಐಎಲ್ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

    ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಾದ ರೈಲು, ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಸ್ಮಾರ್ಟ್‍ಫೋನ್ ಗಳಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕೆಲ ಪ್ರಯಾಣಿಕರು ಸ್ಮಾರ್ಟ್ ಫೋನ್ ಗಳಲ್ಲಿ ಓಪನ್ ಸ್ಪೀಕರ್ ಇಟ್ಟು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ. ಹಾಡು ಕೇಳುವುದು, ವಿಡಿಯೋಗಳನ್ನು ಪ್ಲೇ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನಿಯಮ ರೂಪಿಸುವಂತೆ ಸರ್ಕಾರ ಮತ್ತು ರೈಲ್ವೇ ಇಲಾಖೆಗೆ ಆದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಕರಿಗೆ ಆಸನ ಹಾಗೂ ಧೂಮಪಾನ ನಿಷೇಧಿಸಲಾಗಿದೆ ಎನ್ನುವ ಸೂಚನಾ ಫಲಕದಂತೆ ಈ ಸಮಸ್ಯೆ ನಿವಾರಿಸಲು ಬಸ್ ಹಾಗೂ ರೈಲಿನಲ್ಲಿ ಫಲಕವನ್ನು ಹಾಕಲು ಆದೇಶಿಸಬೇಕೆಂದು ರಮೇಶ್ ನಾಯ್ಕ್ ಮನವಿ ಮಾಡಿದ್ದಾರೆ.

    ಅರ್ಜಿದಾರರ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ಭಾರತೀಯ ರೈಲ್ವೇ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

  • ಜೀವನ ನಿರ್ವಹಣೆಯಷ್ಟು ವೇತನ ಇದೆ – ಪತಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದ ಕೋರ್ಟ್

    ಜೀವನ ನಿರ್ವಹಣೆಯಷ್ಟು ವೇತನ ಇದೆ – ಪತಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದ ಕೋರ್ಟ್

    ಕೋಲ್ಕತ್ತಾ: ಜೀವನ ನಿರ್ವಹಣೆಗೆ ಸಾಕಾಗುವಷ್ಟು ವೇತನ ಹೊಂದಿದ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಅಗತ್ಯವಿಲ್ಲ ಎಂದು ಕೋಲ್ಕತಾ ಹೈ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.

    ವಿಚ್ಛೇದನ ಕೋರಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪತಿಯಿಂದ ಜೀವನ ನಿರ್ವಹಣೆಗೆ ಜೀವನಾಂಶವನ್ನು ಕೋರಿ ಪತಿಯ ಸಂಪಾದನೆ ಮಾಹಿತಿ ನೀಡಿದ್ದರು. ಅಲ್ಲದೇ ಇದೇ ವೇಳೆ ತಮ್ಮ ವೇತನ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.

    ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ನ್ಯಾ. ಬಿಸ್ವಾಜಿತ್ ಬಸು ಅವರು, ಮಹಿಳೆಯ ವೇತನ 74 ಸಾವಿರಕ್ಕಿಂತ ಕಡಿಮೆ ಇಲ್ಲ. ಇದು ಅವರ ಜೀವನ ನಿರ್ವಹಣೆಗೆ ಸಾಕಾಗುತ್ತದೆ. ಅವರ ಜೀವನ ನಿರ್ವಹಣೆಗೆ ಕೇಳಿರುವ 50 ಸಾವಿರ ರೂ. ಗಳನ್ನು ಗಳಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಮಹಿಳೆಗೆ ಜೀವನಾಂಶ ಪಡೆಯಲು ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಕೆಳ ನ್ಯಾಯಾಲಯದಲ್ಲಿ ಮಧ್ಯಂತರ ಜೀವನಾಂಶ ಪಡೆಯಲು ಮಹಿಳೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅರ್ಜಿಯನ್ನ ತಿರಸ್ಕರಿಸಿತ್ತು. ಇದಕ್ಕೂ ಮುನ್ನ 2016 ಮಾರ್ಚ್ ರಂದು ನಲ್ಲಿ ಟ್ರಯಲ್ ಕೋರ್ಟ್ ಮಹಿಳೆಗೆ  ದಾವೆ ವೆಚ್ಚವಾಗಿ 30 ಸಾವಿರ ರೂ. ಗಳನ್ನು ನೀಡುವಂತೆ ಪತಿಗೆ ಆದೇಶ ನೀಡಿತ್ತು.

    ಹೈ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಪತಿ ವಾರ್ಷಿಕ 83 ಲಕ್ಷ ಆದಾಯವನ್ನು ಪಡೆಯುತ್ತಿದ್ದು, ಪತಿಯ ಆದಾಯಕ್ಕನುಗುಣವಾಗಿ ಜೀವನಾಂಶ ನೀಡಬೇಕು. ನನ್ನ ಆದಾಯವು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹೀಗಾಗಿ ಪ್ರತ್ಯೇಕವಾದ ಪತಿಯಿಂದ ಪ್ರತಿ ತಿಂಗಳು 50 ಸಾವಿರ ಜೀವನಾಂಶ ಕೊಡಿಸಬೇಕು. ಇದರಲ್ಲಿ ಮನೆ ನಿರ್ವಹಣೆಗೆ 10 ಸಾವಿರ ರೂ., ಪಾಕೆಟ್ ಮನಿ 4 ಸಾವಿರ ರೂ., 22 ಸಾವಿರ ರೂ. ಸರಕು, ಬಟ್ಟೆ ದಿನ ನಿತ್ಯದ ಖರ್ಚಿಗೆ ಮತ್ತು 14 ಸಾವಿರ ರೂ. ಕಾನೂನು ಹೋರಾಟದ ವೆಚ್ಚವನ್ನು ನೀಡಬೇಕೆಂದು ಕೋರಿದ್ದರು.

    ಇದೇ ವೇಳೆ ಕೋರ್ಟಿಗೆ ಮಹಿಳೆ ತನ್ನ ವೇತನದ ಲೆಕ್ಕಪತ್ರಗಳನ್ನು ಸಲ್ಲಿಕೆ ಮಾಡಿದ್ರು. ಡಿ.2018, ಜ.2019 ಮತ್ತು ಮಾ.2019 ರಲ್ಲಿ ಮಹಿಳೆಯ ವೇತನ 74,624 ರಷ್ಟಿತ್ತು. ಕಳೆದ ತಿಂಗಳು 81,219 ವೇತನ ಪಡೆಯುತ್ತಿದ್ದಾರೆ ಎಂದು ದೃಢಪಟ್ಟಿತ್ತು. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಮಹಿಳೆಯ ಅವಶ್ಯಕತೆಗಳಿಗೆ 50 ಸಾವಿರ ಸಾಕಾಗುತ್ತದೆ ಎಂದು ತಿಳಿಸಿದೆ.

  • ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ ದತ್ತಾ

    ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ ದತ್ತಾ

    ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣವನ್ನು ಪೊಲೀಸರು ಬಿ-ಸಮರಿ ದಾಖಲಿಸಿದ್ದರು. ಈ ಕೇಸ್ ಕ್ಲೋಸ್ ಮಾಡಿದ್ದಕ್ಕೆ ನಟಿ ತನುಶ್ರೀ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ತನುಶ್ರೀ ದತ್ತಾ ಅವರ ವಕೀಲ ನಿತಿನ್ ಸತ್ಪುತೆ, ಸಮರಿ ರಿಪೋರ್ಟ್ ಬಗ್ಗೆ ನಮಗೆ ಓಸ್ವಿವರ್ ಪೊಲೀಸ್ ಠಾಣೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪೊಲೀಸರು ಬಿ ಅಥವಾ ಸಿ ಸಮರಿ ದಾಖಲಿಸಿಕೊಂಡರೆ ಅದು ಅಂತಿಮವಾಗುವುದಿಲ್ಲ. ಇದನ್ನು ನಾವು ನ್ಯಾಯಲಯದಲ್ಲಿ ನಿರಾಕರಿಸಬಹುದು. ಕೋರ್ಟ್‍ನಲ್ಲಿ ವಿಚಾರಣೆ ನಡೆದ ಮೇಲೆ ನ್ಯಾಯಾಲಯ ನಿರ್ಧಾರ ಮಾಡಿದರೆ, ಪೊಲೀಸರು ಮತ್ತೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

    ನಾನಾ ಪಾಟೇಕರ್ ಅವರನ್ನು ರಕ್ಷಿಸಲು ಪೊಲೀಸರು ಅಜಾಗರೂಕತೆ ತೋರಿದ್ದಾರೆ. ಅನೇಕ ಸಾಕ್ಷಿಗಳು ಇದ್ದರೂ ಸಹ ಅವರು ತಮ್ಮ ಹೇಳಿಕೆಯಲ್ಲಿ ಅದನ್ನು ದಾಖಲಿಸಲಿಲ್ಲ. ಶೈನಿ ಶೆಟ್ಟಿ ಹೇಳಿಯನ್ನು ಭಾಗಶಃ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸರಿಯಾಗಿ ವಿಚಾರಣೆ ನಡೆಸಲಿಲ್ಲ. ಹಾಗಾಗಿ ನಾವು ಸಮರಿ ರಿಪೋರ್ಟ್ ತಿರಸ್ಕರಿಸುತ್ತಿದ್ದೇವೆ. ನಾವು ಬಾಂಬೈ ಹೈ ಕೋರ್ಟ್‍ನಲ್ಲಿ ರಿಟ್ ಪೆಟಿಶನ್ ದಾಖಲಿಸುತ್ತೇವೆ. ಅಲ್ಲದೆ ಈ ಪ್ರಕರಣವನ್ನು ಸಿಐಡಿ ಅಥವಾ ಬೇರೆ ಕ್ರೈಂ ಬ್ರ್ಯಾಂಚ್‍ಗೆ ವರ್ಗಾಯಿಸಲು ಹೇಳಿದ್ದೇವೆ ಎಂದು ವಕೀಲ ನಿತಿನ್ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ ವರ್ಷ ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಈ ಸಂಬಂಧ ನಾನಾ ಪಾಟೇಕರ್ ವಿರುದ್ಧ ಯಾವುದೇ ಆಧಾರ ಸಿಗದ ಹಿನ್ನೆಲೆ ಪ್ರಕರಣವನ್ನು ಕೈಬಿಟ್ಟಿದ್ದರು. ಈ ಮೂಲಕ ಭಾರತದಲ್ಲಿನ ಮೊದಲ ಮೀಟೂ ಪ್ರಕರಣ ಸೋಲು ಕಂಡಿತ್ತು.

    ಕಳೆದ ವರ್ಷ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ವಿರುದ್ಧ ತಮ್ಮ ಚಿತ್ರ `ಹಾರ್ನ್ ಓಕೆ ಪ್ಲೀಸ್’ನ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಆರೋಪಿಸಿದ್ದರು. ಡ್ಯಾನ್ಸ್ ಮಾಡುವ ವೇಳೆ ನನಗೆ ಮುಜುಗರವಾಗುವಂತ ಸ್ಟೆಪ್ಸ್‍ಗಳನ್ನು ಹಾಕಲು ಒತ್ತಾಯಿಸುತ್ತಿದ್ದರು ಎಂದು ಮೀಟೂ ಅಭಿಯಾನದ ಅಡಿಯಲ್ಲಿ ಆರೋಪಿಸಿ, ದೂರು ನೀಡಿದ್ದರು. ಅಲ್ಲದೆ ಈ ರೀತಿ ಕಿರುಕುಳ ಕೊಟ್ಟಿದ್ದಕ್ಕೆ ನಾನಾ ಪಾಟೇಕರ್ ಅವರ ಮಾತುಗಳನ್ನು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ಕೂಡ ಕೇಳಿರಲಿಲ್ಲ. ಬಳಿಕ ತನುಶ್ರೀ ಅವರು ಚಿತ್ರದಿಂದ ಹೊರನಡೆದಿದ್ದರು. ಬಳಿಕ ರಾಖಿ ಸಾವಂತ್ ಆ ಹಾಡಿಗೆ ನಾನಾ ಪಾಟೇಕರ್ ಜೊತೆ ಹೆಜ್ಜೆ ಹಾಕಿದ್ದರು.

  • ಹೈ ಕೋರ್ಟ್ ಮೆಟ್ಟಿಲೇರಿದ ಐಎಂಎ ಬಹುಕೋಟಿ ವಂಚನೆ ಪ್ರಕರಣ

    ಹೈ ಕೋರ್ಟ್ ಮೆಟ್ಟಿಲೇರಿದ ಐಎಂಎ ಬಹುಕೋಟಿ ವಂಚನೆ ಪ್ರಕರಣ

    ಬೆಂಗಳೂರು: ಐಎಂಎ ಬಹುಕೋಟಿ ಹಗರಣದ ಕುರಿತು ಇಂದು ಎಸ್‍ಐಟಿ ಪೊಲೀಸರು ತನಿಖೆ ಆರಂಭಿಸಿದ್ದು, ಇತ್ತ ಹಗರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ತಾಹೀರ್ ಎಂಬವರು ಹೈ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಮೊಹಮ್ಮದ್ ತಹೀರ್ ಅವರು ಮನ್ಸೂರ್ ಹಾಗೂ ಸರ್ಕಾರ, ಉತ್ತರ ವಿಭಾಗದ ಎಸಿ ಅವರನ್ನು ಪಾರ್ಟಿ ಮಾಡಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಸರ್ಕಾರ ಮನ್ಸೂರ್ ಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಸೀಜ್ ಮಾಡುತ್ತಿದೆ. ಈ ವೇಳೆ ಸಾಕಷ್ಟು ಚಿನ್ನಾಭರಣ ಮತ್ತು ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗುತ್ತದೆ. ಈ ಸಂದರ್ಭದವನ್ನು ಕೆಲ ಸ್ವಾರ್ಥಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದ್ದು, ಸೀಜ್ ಮಾಡುವ ವಸ್ತುಗಳನ್ನು ಸಾಗಿಸುವ ಮಾರ್ಗದಲ್ಲೇ ನಾಪತ್ತೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

    ಮನ್ಸೂರ್ ಅವರ ಆಸ್ತಿಗಳನ್ನು ಜಪ್ತಿ ಮಾಡುವ ವೇಳೆ ಎಲ್ಲಾ ವಸ್ತುಗಳನ್ನು ಕ್ಯಾಮೆರಾ ಕಣ್ಗಾವಲಿನಲ್ಲಿ ಸೀಜ್ ಮಾಡಬೇಕು. ಅಲ್ಲದೇ ಸೀಜ್ ಮಾಡುವ ಪ್ರತಿಯೊಂದು ವಸ್ತುವಿನ ಬಗ್ಗೆ ಕೆಪಿಐಡಿಎಫ್‍ಇ 2004 ರಂತೆ ವಿವರ ದಾಖಲಿಸಬೇಕು ಎಂದು ಉತ್ತರ ವಿಭಾಗದ ಎಸಿ ಹಾಗೂ ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ತಾಹೀರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

    ಇತ್ತ ಇಂದು ಪ್ರಕರಣ ವಿಚಾರಣೆ ಕೈಗೆತ್ತಿಕೊಂಡಿರುವ ಎಸ್‍ಐಟಿ ತಂಡ ಶಾಂತಿನಗರದಲ್ಲಿ ಇರುವ ಐಎಂಎ ಕಚೇರಿಗೆ ಅಧಿಕೃತವಾಗಿ ಬೀಗ ಮುದ್ರೆ ಹಾಕಿದೆ. ಇತ್ತ ಮನ್ಸೂರ್ ಕಾರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಮನ್ಸೂರ್ ವಿದೇಶಕ್ಕೆ ತೆರಳಿರುವ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಿದ್ದಾರೆ.

  • ಬೆಂಗ್ಳೂರು ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ

    ಬೆಂಗ್ಳೂರು ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ

    ಬೆಂಗಳೂರು: ಜನವಸತಿ ಪ್ರದೇಶಗಳಲ್ಲಿ ಪಬ್‍ಗಳ ಅನುಮತಿ ವಿಚಾರವಾಗಿ ಹೈಕೋರ್ಟ್ ಬೆಂಗಳೂರು ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿದೆ.

    ಪಬ್‍ಗಳಿಂದ ತೀವ್ರ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಹಾಗೂ ತೊಂದರೆ ಅನುಭವಿಸುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಅನೇಕ ಬಾರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ರೀತಿಯ ಪ್ರಯೋಜನವಿಲ್ಲವಾಗಿರಲಿಲ್ಲ ಎಂದು ಆರೋಪಿಸಿ ಪೊಲೀಸ್ ಇಲಾಖೆ, ಬಿಬಿಎಂಪಿ, ಬಿಡಿಎ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ವಿರುದ್ಧ ಇಂದಿರಾನಗರದ ಹಲವು ಸಂಘಟನೆಗಳಿಂದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಸಲ್ಲಿಕೆಯಾಗಿತ್ತು.

    ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ಪೀಠವು, ಸಾರ್ವಜನಿಕ ಮನವಿ ಸಂಬಂಧ ಯಾವ ಕ್ರಮ ಕೈಗೊಂಡಿದ್ದೀರಿ?, ಜನನಿಬಿಡ ಪ್ರದೇಶದಲ್ಲಿ ಯಾವ ಮಾನದಂಡದಲ್ಲಿ ಅನುಮತಿ ನೀಡಿದ್ದೀರಿ? ಸಾರ್ವಜನಿಕರ ದೂರಿನ ಬಳಿಕ ತೆಗೆದುಕೊಂಡ ಕ್ರಮ ಏನು ಎಂದು ಪೊಲೀಸ್ ಆಯುಕ್ತರಿಗೆ ಚಾಟಿ ಬೀಸಿದೆ. ಈ ಸಂಬಂಧ ವರದಿಯನ್ನು ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.

    ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶದಲ್ಲಿ ಬ್ಯಾನರ್ ಹೆಚ್ಚಾಗಿತ್ತು. ರಸ್ತೆ ಗುಂಡಿಗಳಿಂದ ಸವಾರರು ಪರದಾಡುವಂತಾಗಿತ್ತು. ಈ ವಿಚಾರವಾಗಿ ಹೈಕೋರ್ಟ್ ಬಿಬಿಎಂಪಿ ವಿರುದ್ಧ ಚಾಟಿ ಬೀಸಿತ್ತು.

  • ತೇಜಸ್ವಿಗೆ ಹಿನ್ನಡೆ – ಸುದ್ದಿ ಪ್ರಕಟಿಸುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ

    ತೇಜಸ್ವಿಗೆ ಹಿನ್ನಡೆ – ಸುದ್ದಿ ಪ್ರಕಟಿಸುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ

    ಬೆಂಗಳೂರು: ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ಕೆಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಇಂದು ತೆರವುಗೊಳಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.

    ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ತೇಜಸ್ವಿ ಸೂರ್ಯ ಅವರಿಗೆ ಹಿನ್ನಡೆಯಾಗಿದ್ದು, ಸುದ್ದಿ ಪ್ರಕಟ ಮಾಡುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

    ತೇಜಸ್ವಿ ಅವರ ಬಗ್ಗೆ ಸರಿ ಎನಿಸಿದ ಸುದ್ದಿಯನ್ನ ಪ್ರಸಾರ ಮಾಡಲು ಮಾಧ್ಯಮಗಳ ವಿವೇಚನೆಗೆ ಬಿಡಲಾಗಿದೆ. ಆದರೆ ಮಾಧ್ಯಮಗಳ ವರದಿಗಳು ಅವರಿಗೆ ಅವಹೇಳನಕಾರಿ ಎಂದು ಅನಿಸಿದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸೂಚಿಸಿದೆ.

    ನಮ್ಮ ಸಂವಿಧಾನದಲ್ಲಿ 19 (1)ಎ ವಿಧಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಪ್ರತಿಯೊಬ್ಬ ಮತದಾರನಿಗೂ ತನ್ನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವವರ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಮಾನಹಾನಿ ಹೇಳಿಕೆ ಅಥವಾ ದೃಶ್ಯ ಬಿತ್ತರಗೊಳ್ಳುತ್ತದೆ ಅಂಶವನ್ನು ಪ್ರಕ್ರಿಯೆ ನಡೆದ ಮೇಲೆ ನಿರ್ಧರಿಸಲು ಸಾಧ್ಯ. ಹೀಗಾಗಿ ಯಾವುದೇ ವ್ಯಕ್ತಿ ತನಗೆ ಮಾನಹಾನಿ ಆಗಿದ್ದರೆ ಸೂಕ್ತ ವೇದಿಕೆಗಳಲ್ಲಿ ಪ್ರಶ್ನೆ ಮಾಡಬಹುದು. ಈ ಕಾರಣಗಳಿಂದ ಪತ್ರಿಕೆ, ಟಿವಿ, ಫೇಸ್‍ಬುಕ್, ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಅವರ ವಿರುದ್ಧ ಸುದ್ದಿ ಪ್ರಕಟಿಸುವುದಕ್ಕೆ ನಗರದ ಸಿವಿಲ್ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

    ಏನಿದು ಪ್ರಕರಣ: ಲೋಕಸಭಾ ಸ್ಪರ್ಧಿ ಆಗಿರುವ ತೇಜಸ್ವಿ ಸೂರ್ಯ ಅವರ ಬಗ್ಗೆ ಮಹಿಳೆಯೊಬ್ಬರು ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿ, ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ತೇಜಸ್ವಿಯವರು ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕರಿಸಿದ ನಗರದ ಸಿವಿಲ್ ನ್ಯಾಯಾಲಯ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಿತ್ತು.