Tag: high court

  • ಇಂದು ಪ್ರಕಟವಾಗಲಿದೆ ಡಿಕೆಶಿ ಜಾಮೀನು ಅರ್ಜಿಯ ಭವಿಷ್ಯ

    ಇಂದು ಪ್ರಕಟವಾಗಲಿದೆ ಡಿಕೆಶಿ ಜಾಮೀನು ಅರ್ಜಿಯ ಭವಿಷ್ಯ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಧ್ಯಾಹ್ನ 2.30ಕ್ಕೆ ದೆಹಲಿ ಹೈಕೋರ್ಟ್‍ನ ನ್ಯಾ.ಸುರೇಶ್ ಕುಮಾರ್ ಕೈಟ್ ತೀರ್ಪು ಪ್ರಕಟಿಸಲಿದ್ದಾರೆ.

    ಪಿಎಂಎಲ್‍ಎ ಕೇಸ್ ಅಡಿ ಇ.ಡಿಯಿಂದ ತಿಹಾರ್ ಜೈಲಿನಲ್ಲಿ ಡಿಕೆಶಿ, ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿದ್ದು ಕೋರ್ಟ್ ಇಂದಿಗೆ ಆದೇಶ ಕಾಯ್ದಿರಿಸಿದೆ.

    ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್ ಮನುಸಿಂಘ್ವಿ ಅವರು, ಈಗಾಗಲೇ 45 ದಿನಗಳಿಂದ ಡಿಕೆ ಶಿವಕುಮಾರ್ ಅವರು ಬಂಧನದಲ್ಲಿದ್ದಾರೆ. ಬಹುತೇಕ ವಿಚಾರಣೆಯ ಮುಗಿದರು ಅನಾವಶ್ಯಕವಾಗಿ ವಶದಲ್ಲಿಟ್ಟುಕೊಳ್ಳಲಾಗಿದೆ. ಐಟಿ ದಾಖಲಿಸಿದ್ದ ಕೇಸ್ ನಲ್ಲಿ ಇಡಿ ವಿಚಾರಣೆ ನಡೆಸುತ್ತಿದ್ದು ಸ್ವಯಂ ಘೋಷಿತ ಆಸ್ತಿ ಮೇಲೆ ವಿಚಾರ ನಡೆಸುತ್ತಿದೆ ಹೊರತು ಯಾವುದೇ ಹೊಸ ಅಂಶಗಳನ್ನು ಬಯಲು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ, ಪ್ರತಿವಾದ ಮಂಡಿಸಿದ್ದ ಇಡಿ ಪರ ವಕೀಲರು, 300ಕ್ಕೂ ಹೆಚ್ಚು ಆಸ್ತಿಗಳನ್ನು ಡಿಕೆಶಿ ಹೊಂದಿದ್ದು ಇದರ ಮೂಲ ನೀಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಬೇಲ್ ಕೊಡಬಾರದು, ಬೇಲ್ ನೀಡಿದರೆ ಸಾಕ್ಷಿನಾಶ ಆಗುತ್ತೆ ಎಂದು ವಾದ ಮಂಡಿಸಿದ್ದರು.

    ಇತ್ತ ಅ.24ಕ್ಕೆ ತಾಯಿ ಗೌರಮ್ಮ, ಪತ್ನಿ ಉಷಾ ಅವರ ಸಮನ್ಸ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ದೆಹಲಿ ಹೈಕೋರ್ಟಿನಲ್ಲಿ ನಡೆಯಲಿದೆ.

  • ಸೋಮವಾರ ಡಿಕೆಶಿ ಭವಿಷ್ಯ ನಿರ್ಧಾರ – ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ವಿಚಾರಣೆ

    ಸೋಮವಾರ ಡಿಕೆಶಿ ಭವಿಷ್ಯ ನಿರ್ಧಾರ – ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ವಿಚಾರಣೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಶಾಸಕ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ.

    ಸೋಮವಾರ ಬೆಳಗ್ಗೆ ದೆಹಲಿ ಹೈಕೋರ್ಟ್ ನ ನ್ಯಾ.ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಪೀಠ ದಸರಾ ಹಬ್ಬದ ಹಿನ್ನೆಲೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ಸುಧೀರ್ಘ ವಿಚಾರಣೆ ಆಲಿಸಲಿದೆ.

    ಅರ್ಜಿ ವಿಚಾರಣೆ ಹಿನ್ನೆಲೆ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಡಿ.ಕೆ ಶಿವಕುಮಾರ್ ಪರ ವಕೀಲರು ಮೊದಲು ವಾದ ಮಂಡಿಸಲಿದ್ದಾರೆ. ಈಗಾಗಲೇ ಡಿ.ಕೆ ಶಿವಕುಮಾರ್ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು ಜೈಲಿನಲ್ಲೂ ಎರಡು ದಿನ ಇಡಿ ಅಧಿಕಾರಿಗಳು ವಿಚಾರಣೆ ನಡಿಸಿದ್ದಾರೆ. ಈ ಮೂಲಕ ಒಟ್ಟು 21 ದಿನಗಳ ಕಾಲ ವಿಚಾರಣೆ ನಡೆದಿದೆ. ಡಿ.ಕೆ ಶಿವಕುಮಾರ್ ತಮ್ಮ ಅನಾರೋಗ್ಯದ ನಡುವೆಯೂ ಬಹುತೇಕ ತನಿಖೆಗೆ ಸ್ಪಂದಿಸಿದ್ದಾರೆ. ಪ್ರಕರಣ ಇತರೇ ಎಲ್ಲ ಆರೋಪಿಗಳ ವಿಚಾರಣೆಯೂ ಅಂತ್ಯಕ್ಕೆ ಬಂದಿದ್ದು ಇನ್ನು ಡಿ.ಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅವಶ್ಯಕತೆ ಇಲ್ಲ ಎಂದು ಕೋರ್ಟಿಗೆ ಮನವಿ ಮಾಡಲಿದ್ದಾರೆ.

    ಅಂದೇ ಇಡಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆ ಇದ್ದು ಹೆಚ್ಚುವರಿ ತನಿಖಾ ವರದಿಯನ್ನು ಹೈ ಕೋರ್ಟ್ ಮುಂದೆ ಇಡಲಿದ್ದು ಜಾಮೀನು ನೀಡದಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಡಿ.ಕೆ.ಸುರೇಶ್, ಆಪ್ತ ಸುನೀಲ್ ಕುಮಾರ್ ಶರ್ಮಾ ಮತ್ತು ಪುತ್ರಿ ಐಶ್ವರ್ಯ ವಿಚಾರಣೆ ನಡೆಸಲಾಗಿದ್ದು ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿಚಾರಣೆ ಬಾಕಿ ಇದೆ. ಸಾಕಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವ ಬಗ್ಗೆ ಮತ್ತು ಅಕ್ರಮ ಹಣ ವರ್ಗಾವಣೆ ಬಗ್ಗೆ ದಾಖಲೆಗಳನ್ನು ಕೋರ್ಟ್ ಮುಂದೆ ಇಡಿ ಇಡಲಿದ್ದು ಸಾಕ್ಷಿ ನಾಶದ ಭೀತಿ ಹಿನ್ನೆಲೆ ಪ್ರಕರಣ ತನಿಖೆ ಅಂತ್ಯವಾಗುವರೆಗೂ ಜಾಮೀನು ನೀಡಿದಂತೆ ಇಡಿ ಪರ ವಕೀಲರು ಮನವಿ ಮಾಡುವ ಸಾಧ್ಯತೆಗಳಿವೆ.

  • ಐಎಂಎ ಪ್ರಕರಣ: ಓರ್ವ ಆರೋಪಿಗೆ ಜಾಮೀನು, ಮೂವರ ಅರ್ಜಿ ತಿರಸ್ಕರಿಸಿದ ಕೋರ್ಟ್

    ಐಎಂಎ ಪ್ರಕರಣ: ಓರ್ವ ಆರೋಪಿಗೆ ಜಾಮೀನು, ಮೂವರ ಅರ್ಜಿ ತಿರಸ್ಕರಿಸಿದ ಕೋರ್ಟ್

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಓರ್ವ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಮೂವರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ.

    ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು, ಆರೋಪಿಗಳಾದ ನಿಜಾಮುದ್ದೀನ್, ಅಫ್ಸರ್ ಪಾಶಾ, ಮೊಹಮ್ಮದ್ ಹನೀಫ್ ಅಫ್ಸರ್ ಅಜೀಜ್‍ಗೆ ಜಾಮೀನು ನಿರಾಕರಿಸಿದೆ. ಪ್ರಕರಣದ ಮತ್ತೊರ್ವ ಆರೋಪಿ ಸೈಯ್ಯದ್ ಮುಜಾಹಿದ್‍ಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

    ಮತ್ತೊಂದು ಕಡೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಸಂಸ್ಥೆಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ರಾಜ್ಯ ಸರ್ಕಾರ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004 (ಕೆಪಿಐಡಿ) ಅನುಸಾರ ಸಕ್ಷಮ ಪ್ರಾಧಿಕಾರ ನೇಮಕ ಮಾಡಿತ್ತು. ಸರ್ಕಾರದ ಈ ಆದೇಶ ರದ್ದು ಮಾಡುವಂತೆ ಕೋರಿ ಐಎಂಎ ಕಂಪನಿ ಮನ್ಸೂರ್ ಖಾನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

    ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐನಿಂದ ಮೌಲ್ವಿ ಅಫ್ಸರ್ ಹನೀಜ್ ಸೇರಿ ಇಬ್ಬರ ಮೇಲೆ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್ ನಲ್ಲಿ ಎಸ್‍ಐಟಿ ಅಧಿಕಾರಿಗಳು ಮೌಲ್ವಿಯನ್ನು ಬಂಧಿಸಿದ್ದರು.

    ಹನೀಫ್ ಅಫ್ಸರ್ ಅಜೀಜ್ ಶಿವಾಜಿನಗರ ಒಪಿಎಚ್ ರಸ್ತೆಯ ಬೇಪಾರಿಯನ್ ಮಸೀದಿಯ ಧರ್ಮ ಗುರುವಾಗಿದ್ದು, 2017ರಲ್ಲಿ ಹೆಚ್‍ಬಿಆರ್ ಲೇಔಟ್ ನಲ್ಲಿ ಮೂರು ಕೋಟಿ ರೂ. ಮೌಲ್ಯದ ಮನೆ ಉಡುಗೊರೆ ಪಡೆದಿದ್ದ.

    ಮಸೀದಿಗೆ ಬರುವ ಸಾವಿರಾರು ಭಕ್ತರ ಭಾವನೆಗಳ ಜೊತೆ ಆಟವಾಡಿದ್ದ ಹನೀಫ್ ಅಫ್ಸರ್ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ. ನಮಾಜ್‍ಗೆ ಬಂದ ಜನರಿಗೆ ಐಎಂಎನಲ್ಲಿ ಹಣ ಹೂಡುವಂತೆ ಪ್ರಚೋದನೆ ಮಾಡುತ್ತಿದ್ದ. ಈ ಧರ್ಮಗುರು ಮಾತನ್ನು ನಂಬಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿಸಿದ್ದರಿಂದ ಧರ್ಮಗುರುವಿನ ಋಣ ತೀರಿಸಲು ಮೂರು ಕೋಟಿ ರೂ. ಮೌಲ್ಯದ ಮನೆಯನ್ನು ಮನ್ಸೂರ್ ಖಾನ್ ನೀಡಿದ್ದ.

  • ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ

    ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆಯಾಗಿದೆ. ಪ್ರಾದೇಶಿಕ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆಯಿಂದ ಅಧಿಕೃತವಾಗಿ ಸೂಚನೆ ರವಾನೆಯಾಗಿದ್ದು ಚುನಾವಣೆ ಮುಂದೂಡಿಕೆಯಾಗಿದೆ.

    ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ವಿಜಯ್‍ಕುಮಾರ್ ಅವರು ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ಮುಂದೂಡುವಂತೆ ಸೂಚಿಸಿದ್ದಾರೆ.

    ಬಿಬಿಎಂಪಿ ಮೇಯರ್/ ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ. ಹೀಗಾಗಿ ಮೇಯರ್ ಉಪಮೇಯರ್ ಚುನಾವಣೆಯಂದ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಬೇಕೆಂದು ವಿಜಯ್ ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ, ಬಿಬಿಎಂಪಿ ಚುನಾವಣೆ ಮಾಡಲು ಸಿಎಂ ಆದೇಶ ಮಾಡಿದ್ದರು. ಆದರೆ ಸಮಿತಿಗಳ ಚುನಾವಣೆ ಕೂಡ ಮಾಡಬೇಕು ಎಂದು ನ್ಯಾಯಾಲಯದ ಆದೇಶ ಇದೆ. ಮತ್ತೊಂದು ಕಡೆ ಕೆಲವು ಸಮಿತಿ ಚುನಾವಣೆ ಬೇಡ ಎಂದು ಮತ್ತೊಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದರು.

  • ದೆಹಲಿ ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ

    ದೆಹಲಿ ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ

    -ಅಂತ್ಯವಾಗುತ್ತಾ ಕನಕಪುರದ ಬಂಡೆಯ ಸೆರೆಮನೆವಾಸ?

    ನವದೆಹಲಿ: ಇಡಿ ಕೋರ್ಟ್ ನೀಡಿದ್ದ ಆದೇಶದ ಪ್ರಶ್ನಿಸಿ ಶುಕ್ರವಾರ ದೆಹಲಿ ಹೈಕೋರ್ಟ್ ಗೆ ಡಿ.ಕೆ.ಶಿವಕುಮಾರ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಇಡಿ ಕೋರ್ಟ್ ಆದೇಶ ಪ್ರಶ್ನಿಸಿ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ನ್ಯಾ.ಸುರೇಶ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.

    ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ನ್ಯಾಯಂಗ ಬಂಧನದಡಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿದೆ. ಕನಕಪುರ ಬಂಡೆ ತಿಹಾರ್ ಜೈಲಿನಲ್ಲೇ ಸೆರೆಮನೆವಾಸ ಅನುಭವಿಸುತ್ತಿದ್ದಾರೆ. ಇಡಿ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದಕ್ಕೆ ಡಿಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಜಾಮೀನು ಪಡೆಯುವ ಬಗ್ಗೆ ಕಾನೂನು ಹೋರಾಟ ಮುಂದುವರಿಸಿದ್ದಾರೆ.

    ಡಿಕೆಶಿ ಪರ ವಕೀಲರು ಯಾವ ಆಧಾರದ ಮೇಲೆ ಜಾಮೀನು ಕೊಡಲು ಇಡಿ ಕೋರ್ಟ್ ನಿರಾಕರಿಸಿದೆಯೋ ಅದೇ ಆಧಾರಗಳ ಮೇಲೆ ವಾದ ಮಾಡಿ ಜಾಮೀನು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಡಿ ಕೋರ್ಟ್ ಜಾಮೀನು ನಿರಾಕರಿಸಲು ಪ್ರಮುಖವಾಗಿ ಮೂರು ಕಾರಣ ಕೊಟ್ಟಿತು. 317 ಖಾತೆಗಳ ಮೂಲಕ ಹಣ ವರ್ಗಾವಣೆ, ಡಿಕೆಶಿ ಪ್ರಭಾವಿಯಾಗಿರೋದು ಮತ್ತು ಪ್ರಕರಣ ತನಿಖಾ ಹಂತದಲ್ಲಿದೆ ಹಾಗಾಗಿ ಜಾಮೀನು ನೀಡೋಕೆ ಸಾಧ್ಯವಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದೆ. ಇದೇ ಮೂರು ವಿಚಾರಗಳನ್ನು ಇಟ್ಟು ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ತಮಗೆ ಸಂಬಂಧ ಇಲ್ಲದ ವಿಚಾರಗಳ ಬಗ್ಗೆ ಇಡಿ ವ್ಯಾಪ್ತಿ ಮೀರಿ ತನಿಖೆ ಮಾಡುತ್ತಿದೆ ಎಂದು ಡಿಕೆ ಪರ ವಕೀಲರು ವಾದಿಸಲಿದ್ದಾರೆ ಎಂದು ತಿಳಿದು ಬಂದಿದೆ.

    ಇಂದು ನಡೆಯುವ ಜಾಮೀನು ಅರ್ಜಿ ವಿಚಾರಣೆ ವೇಳೆ ಜಾಮೀನು ಸಿಕ್ಕು ಸೆರೆಮನೆ ವಾಸದಿಂದ ಡಿಕೆಶಿಗೆ ಮುಕ್ತಿ ಸಿಗುತ್ತಾ ಅಥವಾ ತಿಹಾರ್ ಜೈಲೆ ಗಟ್ಟಿಯಾಗಿ ಉಳಿದುಕೊಳ್ಳುತ್ತಾರ ಕಾದು ನೋಡಬೇಕಿದೆ.

  • ವಿಷ ಪ್ರಸಾದ ಕೇಸ್- ಹೈಕೋರ್ಟಿನಲ್ಲೂ ಇಮ್ಮಡಿ ಸ್ವಾಮೀಜಿ ಜಾಮೀನು ಅರ್ಜಿ ವಜಾ

    ವಿಷ ಪ್ರಸಾದ ಕೇಸ್- ಹೈಕೋರ್ಟಿನಲ್ಲೂ ಇಮ್ಮಡಿ ಸ್ವಾಮೀಜಿ ಜಾಮೀನು ಅರ್ಜಿ ವಜಾ

    ಚಾಮರಾಜನಗರ: 17 ಮಂದಿ ಸಾವಿಗೀಡಾಗಿ, 112 ಮಂದಿ ಭಕ್ತರು ತೀವ್ರ ಅಸ್ವಸ್ಥಗೊಂಡಿದ್ದ ಸುಳ್ವಾಡಿ ವಿಷಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಇಮ್ಮಡಿ ಮಹದೇವಸ್ವಾಮೀಜಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನಲ್ಲಿ ಸೆಪ್ಟೆಂಬರ್ 20ರಂದು ವಿಚಾರಣೆ ನಡೆದಿತ್ತು. ಆರೋಪಿ ಪರ ವಕೀಲರು ವಾದ ಮಂಡಿಸಿ, ಇಮ್ಮಡಿ ಮಹದೇವಸ್ವಾಮೀಜಿಯನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಜಾಮೀನು ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಇದೊಂದು ಹೇಯ ಹಾಗೂ ಗಂಭೀರ ಪ್ರಕರಣ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ವಾದಮಂಡನೆ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ಏಕಸದಸ್ಯಪೀಠವು ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ಆದೇಶವನ್ನು ಕಾಯ್ದಿರಿಸಿತ್ತು.

    ಏನಿದು ಪ್ರಕರಣ?:
    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ 2018ರ ಡಿಸೆಂಬರ್ 14ರಂದು ವಿಶೇಷ ಪೂಜೆ ನಡೆದಿತ್ತು. ಈ ವೇಳೆ ದೇವಸ್ಥಾನದಲ್ಲಿ ತಯಾರಿಸಿದ್ದ ಪ್ರಸಾದಕ್ಕೆ ವಿಷ ಹಾಕಿದ್ದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದು, 112 ಮಂದಿ ಭಕ್ತರು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯನನ್ನು ಬಂಧಿಸಿದ್ದರು.

    ಈ ದುರಂತವು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹೀಗಾಗಿ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಜಾಮರಾಜನಗರ ಜಿಲ್ಲಾ ವಕೀಲರ ಸಂಘವು ತೀರ್ಮಾನಿಸಿತ್ತು. ಇದರಿಂದಾಗಿ 6 ತಿಂಗಳು ಯಾರೊಬ್ಬರೂ ಆರೋಪಿಗಳ ಪರ ವಾದ ಮಾಡಲು ಮುಂದೆ ಬರಲಿಲ್ಲ. ಇಮ್ಮಡಿ ಮಹದೇವಸ್ವಾಮೀಜಿ ಪರ ಮಡಿಕೇರಿ ಮೂಲದ ವಕೀಲ ಅಪ್ಪಣ್ಣ ವಕಾಲತ್ತು ವಹಿಸಲು ಮುಂದೆ ಬಂದಿದ್ದರು. ಉಳಿದ ಆರೋಪಿಗಳಾದ ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯ ಪರವಾಗಿ ವಕಾಲತ್ತು ಮಾಡಲು ಬೆಂಗಳೂರು ಮೂಲದ ಡಿ.ಪಿ.ಸದಾನಂದ ಅವರು ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಲಿದ್ದರು.

    ಇಮ್ಮಡಿ ಮಹದೇವಸ್ವಾಮೀಜಿ ಜಾಮೀನು ಕೋರಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದ. ಸದ್ಯ ಹೈಕೋರ್ಟ್ ನಲ್ಲಿಯೂ ಇಮ್ಮಡಿ ಸ್ವಾಮೀಜಿಗೆ ಹಿನ್ನಡೆಯಾಗಿದೆ.

  • ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ – ಸುಪ್ರೀಂ ಮುಖ್ಯ ನ್ಯಾಯಮೂರ್ತಿ

    ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ – ಸುಪ್ರೀಂ ಮುಖ್ಯ ನ್ಯಾಯಮೂರ್ತಿ

    ನವದೆಹಲಿ: ಅಗತ್ಯವಿದ್ದಲ್ಲಿ ಜಮ್ಮು ಕಾಶ್ಮೀರಕ್ಕೆ ಖುದ್ದು ಭೇಟಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂದು ಕಾಶ್ಮೀರ ಟೈಮ್ಸ್ ಸಂಪಾದಕಿ ಅನುರಾಧಾ ಭಸಿನ್, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.

    ವಾದ ಮಂಡಿಸುವ ವೇಳೆ ಇದು ಹೈಕೋರ್ಟ್ ಮಟ್ಟದಲ್ಲಿಯೇ ಬಗೆಹರಿಯುವ ವಿಚಾರ ಎಂದು ನ್ಯಾಯಮೂರ್ತಿ ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅನುರಾಧಾ ಭಸಿನ್ ಪರ ವಕೀಲೆ ವೃಂದಾ ಗ್ರೋವರ್ ಬೇಗನ್, ಕಾಶ್ಮೀರದ ಕಣಿವೆಯಲ್ಲಿ ಅಂತರ್ಜಾಲ, ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಸಾರ್ವಜನಿಕರು ಹೈ ಕೋರ್ಟ್‍ಗೆ ಹೋಗುವುದು ಸಹ ಕಷ್ಟಕರವಾಗಿದೆ ಎಂದು ತಿಳಿಸಿದರು.

    ನಂತರ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಪರ ವಕೀಲರು ವಾದ ಮಂಡಿಸಿ, 18 ವರ್ಷದೊಳಗಿನ ಮಕ್ಕಳು ಹಾಗೂ ಯುವಕರನ್ನು ಬಂಧಿಸಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು. ಆಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರತಿಕ್ರಿಯಿಸಿ, ಅರ್ಜಿದಾರರು ಹೈ ಕೋರ್ಟ್ ಮೊರೆಯೇ ಹೋಗಬೇಕು ಎಂದು ತಿಳಿಸಿದರು.

    ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಪರ ವಕೀಲರು ಪ್ರತಿಕ್ರಿಯಿಸಿ, ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಿರುವುದರಿಂದ ಹೈ ಕೋರ್ಟ್ ಮೊರೆ ಹೋಗಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

    ತಕ್ಷಣ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ಜಮ್ಮು ಕಾಶ್ಮೀರದ ಹೈಕೋರ್ಟ್ ಪ್ರವೇಶಿಸಲು ಸಹ ತೊಂದರೆಗಳಿವೆ ಎಂಬ ಮಕ್ಕಳ ಹಕ್ಕುಗಳ ಕಾರ್ಯಕರ್ತರ ಆರೋಪಗಳು ನಿಜವೇ ಎಂದು ಪರಿಶೀಲಿಸಿದರು. ಅಲ್ಲದೆ, ಜಮ್ಮು ಕಾಶ್ಮೀರ ಹೈ ಕೋರ್ಟ್‍ಗೆ ಹೋಗುವುದು ಏಕೆ ಕಷ್ಟ? ಯಾರಾದರೂ ದಾರಿಯಲ್ಲಿ ತಡೆಯುತ್ತಾರೆಯೇ ಎಂದು ಪ್ರಶ್ನಿಸಿದರು. ಮುಂದುವರಿದು, ಈ ಕುರಿತು ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ವಿವರ ಪಡೆಯುತ್ತೇವೆ. ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರದ ಹೈ ಕೋರ್ಟ್‍ಗೆ ಹೋಗುತ್ತೇನೆ. ಆದಷ್ಟು ಬೇಗ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

  • ತಲೆ ಮೇಲೆ ಬ್ಯಾನರ್ ಬಿದ್ದು 23 ವರ್ಷದ ಟೆಕ್ಕಿ ಸಾವು

    ತಲೆ ಮೇಲೆ ಬ್ಯಾನರ್ ಬಿದ್ದು 23 ವರ್ಷದ ಟೆಕ್ಕಿ ಸಾವು

    ಚೆನ್ನೈ: ತಲೆ ಮೇಲೆ ಬ್ಯಾನರ್ ಬಿದ್ದು ಅಪಘಾತದಲ್ಲಿ ಟೆಕ್ಕಿ ಮೃತಪಟ್ಟ ಘಟನೆ ತಮಿಳುನಾಡಿನ ಚೆನ್ನೈನ ಪಾಲಿಕರಣೈಯಲ್ಲಿ ನಡೆದಿದೆ.

    ಶುಭಾಶ್ರೀ(23) ಮೃತಪಟ್ಟ ಯುವತಿ. ಶುಭಾಶ್ರೀ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಎಐಎಡಿಎಂಕೆಯ ಬ್ಯಾನರ್ ಆಕೆಯ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಶುಭಾಶ್ರೀ ಗಾಯಗೊಂಡು ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಹಿಂಬದಿಯಿಂದ ಲಾರಿಯೊಂದು ಯುವತಿಯ ಮೇಲೆ ಹರಿದು ಹೋಗಿದೆ.

    ಈ ಅಪಘಾತದಲ್ಲಿ ಶುಭಾಶ್ರೀ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಶುಭಾಶ್ರೀ ಮೃತಪಟ್ಟಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    2017ರಲ್ಲಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿನಾದ್ಯಂತ ಎಲ್ಲಾ ರೀತಿಯ ಬ್ಯಾನರ್ ಗಳು, ಹೋರ್ಡಿಂಗ್‍ಗಳು ಹಾಗೂ ಜಾಹೀರಾತುಗಳನ್ನು ನಿಷೇಧಿಸುವ ಆದೇಶವನ್ನು ನೀಡಿತ್ತು. ಹೈಕೋರ್ಟ್ ಹಲವು ಬಾರಿ ಎಚ್ಚರಿಕೆ ಹಾಗೂ ಆದೇಶ ನೀಡಿದರು ಸಹ ರಾಜಕೀಯ ಪಕ್ಷಗಳು ಹಾಗೂ ಅವರ ಬೆಂಬಲಿಗರು ಇಂತಹ ಅಕ್ರಮ ಬ್ಯಾನರ್ ಹಾಕುವ ಮೂಲಕ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದಾರೆ.

  • ಲೇಟ್‍ನೈಟ್ ಪಬ್‍ಗಳ ಮೇಲೆ ಖಾಕಿ ನಿಗಾ

    ಲೇಟ್‍ನೈಟ್ ಪಬ್‍ಗಳ ಮೇಲೆ ಖಾಕಿ ನಿಗಾ

    ಬೆಂಗಳೂರು: ಇತ್ತೀಚಿಗಷ್ಟೇ ಪಬ್‍ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಚಾಟಿ ಬೀಸಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಲೇಟ್‍ನೈಟ್ ಪಬ್‍ಗಳನ್ನು ಕ್ಲೋಸ್ ಮಾಡಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

    ಇತ್ತೀಚೆಗೆ ಇಂದಿರಾನಗರದಲ್ಲಿ ಸ್ಥಳೀಯರಿಗೆ ಪಬ್‍ಗಳಿಂದ ಶಬ್ದ ಮಾಲಿನ್ಯ ಆಗುತ್ತಿದೆ ಎಂದು ಸ್ಥಳೀಯರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಅರ್ಜಿ ಕೈಗೆತ್ತಿಕೊಂಡ ಕೋರ್ಟ್ ಸರ್ಕಾರಕ್ಕೆ ಜಾಡಿಸಿತ್ತು. ಇದಾದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಪಬ್‍ಗಳ ಮೇಲೆ ನಿಗಾ ವಹಿಸಿದ್ದರು. ನಿಗದಿತ ಸಮಯಕ್ಕೆ ಪಬ್‍ಗಳು ಕ್ಲೋಸ್ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

    ಹೈಕೋರ್ಟ್ ಚಾಟಿ ಏಟಿನಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಎಲ್ಲ ಏರಿಯಾಗಳನ್ನು ಕಂಟ್ರೋಲ್‍ಗೆ ತೆಗೆದುಕೊಂಡಿದೆ. ಪಬ್‍ಗಳ ಮೇಲೆ ಖಾಕಿ ನಿಗಾವಿಟ್ಟಿದ್ದು ಎಂ.ಜಿ ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಜಯನಗರ, ಕೋರಮಂಗಲ, ಎಚ್‍ಎಸ್‍ಆರ್ ಲೇಔಟ್ ಸೇರಿದಂತೆ ಹಲವೆಡೆ ಪೊಲೀಸರು ಗಸ್ತು ತಿರುಗುತ್ತಿದ್ದು ನಿಗದಿತ ಸಮಯಕ್ಕೆ ಪಬ್‍ಗಳು, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಬಂದ್ ಆಗುವಂತೆ ನೋಡಿಕೊಂಡಿದ್ದಾರೆ. ಲೇಟ್‍ನೈಟ್ ಪಬ್‍ಗಳಿಗೆ ಖಾಕಿ ಕಡಿವಾಣ ಬಿದ್ದಿದ್ದು ಗುಂಪು-ಗಲಾಟೆ ಎಲ್ಲದಕ್ಕೂ ಕಡಿವಾಣ ಬಿದ್ದಿದೆ.

    ಪಬ್ ಆಗಲಿ ಅಥವಾ ಬಾರ್ ಅಂಡ್ ರೆಸ್ಟೋರೆಂಟ್ ಆಗಲಿ ಸಾರ್ವಜನಿಕರು ಸೇರುವ ಕಡೆ ಪೊಲೀಸರು ಗಸ್ತು ಇದ್ದರೆ ಕಾನೂನು ಸುವ್ಯವಸ್ಥೆ ಎಲ್ಲವೂ ಸರಿಯಾಗಿರುತ್ತೆ. ಹಾಗೆ ಪ್ರಭಾವಿಗಳು, ರಾಜಕಾರಣಿಗಳು ನಡೆಸುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗೆ ಒಂದು ನಿಯಮ, ಬೇರೆಯವರಿಗೆ ಒಂದು ನಿಯಮ ಮಾಡದೇ ಎಲ್ಲರಿಗೂ ಒಂದೇ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.

  • ಸಂಸದ ಪ್ರಜ್ವಲ್ ರೇವಣ್ಣಗೆ ಸಮನ್ಸ್

    ಸಂಸದ ಪ್ರಜ್ವಲ್ ರೇವಣ್ಣಗೆ ಸಮನ್ಸ್

    ಹಾಸನ: ಲೋಕಸಭೆ ಚುನಾವಣೆಯಲ್ಲಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಲಾಗಿದೆ ಎಂಬ ಆರೋಪ ಸಂಬಂಧ ಪತ್ರಿಕಾ ಪ್ರಕಟಣೆ ನೀಡಲಾಗಿದೆ.

    ಸೆಪ್ಟಂಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಲಾಗಿದೆ. ದೂರುದಾರ ಮಾಜಿ ಸಚಿವ ಎ.ಮಂಜು ಹಾಗೂ ವಕೀಲ ಜಿ. ದೇವರಾಜೇಗೌಡ ಅವರು ಪ್ರತ್ಯೇಕವಾಗಿ ದಾಖಲಿಸಿರುವ ಪ್ರಕರಣಗಳ ವಿಚಾರಣೆಗೆ ಸೆ.30ರಂದು ಬೆಳಗ್ಗೆ 10.30ಕ್ಕೆ ಖುದ್ದಾಗಿ ಇಲ್ಲವೇ ವಕೀಲರ ಮೂಲಕ ಹಾಜರಾಗುವಂತೆ ಹೈ ಕೋರ್ಟ್ ಸಮನ್ಸ್ ನಲ್ಲಿ ಸೂಚಿಸಲಾಗಿದೆ.

    ಈ ಹಿಂದೆ ತಮಗೆ ಪ್ರಕರಣ ಸಂಬಂಧ ನ್ಯಾಯಾಲಯದ ಸಮನ್ಸ್ ತಲುಪಿಲ್ಲ ಎಂದು ಸಂಸದ ಪ್ರಜ್ವಲ್ ಹೇಳಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ಸಂಸದರಿಗೆ ಪತ್ರಿಕೆಯ ಜಾಹೀರಾತು ಮೂಲಕ ಸಮನ್ಸ್ ಜಾರಿ ಮಾಡಲು ಅನುಮತಿ ನೀಡಿತ್ತು. ಅದರಂತೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ. ಇದರಿಂದ 30ರಂದು ಪ್ರಜ್ವಲ್ ಇಲ್ಲವೇ ಅವರ ಪರವಾಗಿ ವಕೀಲರು ನ್ಯಾಯಾಧೀಶರ ಮುಂದೆ ಹಾಜರಾಗಬೇಕು ಎಂದು ದೂರದಾರ ಹೇಳಿದ್ದಾರೆ.