Tag: high court

  • ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಬಳ್ಳಾರಿ: ಜನ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಬಳ್ಳಾರಿಯಲ್ಲಿ ನಡೆದಿರುವ ಘಟನೆ ಒಂದು ಉದಾಹರಣೆಯಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ಥಾನಕ್ಕಾಗಿ ತಮ್ಮ ಜಾತಿ ಪ್ರಮಾಣ ಪತ್ರವನ್ನೇ ಬದಲಿಸಿ, ಕಳೆದ ನಾಲ್ಕು ವರ್ಷಗಳಿಂದ ಸುಳ್ಳು ಪ್ರಮಾಣ ಪತ್ರ ನೀಡಿ ಅಧ್ಯಕ್ಷೆಯಾಗಿ ಅಧಿಕಾರ ಅನುಭವಿಸಿದ್ದರೂ ಆ ಸ್ಥಾನವನ್ನು ಮಹಿಳೆಯೊಬ್ಬರು ಬಿಟ್ಟು ಕೊಡುತ್ತಿಲ್ಲ. ಜೊತೆಗೆ ಹೈಕೋರ್ಟ್ ಆದೇಶ ಮಾಡಿದ್ದರೂ ಕ್ಯಾರೇ ಎನ್ನುತ್ತಿಲ್ಲ.

    ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಆದರೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾತ್ರ ತಮಗೂ ಹೈಕೋರ್ಟ್ ಆದೇಶಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದು ನ್ಯಾಯಾಲಯದ ಆದೇಶ ಪಾಲಿಸದೆ ದರ್ಪ ತೋರುತ್ತಿದ್ದಾರೆ. ಈ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಪ್ರವರ್ಗ 2ಎ ಗೆ ಮೀಸಲಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಎಂಬುವವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಅಧ್ಯಕ್ಷೆ ಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ನಕಲಿ ಪ್ರಮಾಣ ಪತ್ರ ಎನ್ನುವುದು ಗ್ರಾಮದ ಎಲ್ಲರಿಗೂ ಗೊತ್ತಿದ್ದರೂ ಏನು ಮಾಡದ ಪರಿಸ್ಥಿತಿ ಇತ್ತು. ಆದರೆ ಪ್ರವರ್ಗ 2ಎ ಗೆ ಸೇರಿದ ಮತ್ತೊಬ್ಬ ಗ್ರಾಮ ಪಂಚಾಯ್ತಿ ಸದಸ್ಯೆ ರೇಖಾ ಸೊನ್ನದ ಅವರು ಇದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಧಾರವಾಡ ಹೈಕೋರ್ಟ್ ಬೆಂಚ್ ರೇಖಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಯರಳ್ಳಿ ರತ್ನಮ್ಮಾ ಅವರು ಸಲ್ಲಿಸಿದ್ದ ನಕಲಿ ಜಾತಿ ಪ್ರಮಾಣ ಪತ್ರವನ್ನು ನಕಲಿ, ಕೂಡಲೇ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗೆ ಇಳಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿತ್ತು.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳು ಕಳೆದರೂ ಈ ಆದೇಶವನ್ನು ಯಾರು ಪಾಲಿಸುತ್ತಿಲ್ಲ. ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಕೂಡ ಅಧ್ಯಕ್ಷೆ ಸ್ಥಾನವನ್ನು ಬಿಟ್ಟು ಕೊಡಲು ತಯಾರಿಲ್ಲ. ಇತ್ತ ಹೂವಿನಹಡಗಲಿ ತಾಲೂಕಿನ ಮಾನ್ಯ ತಹಶೀಲ್ದಾರರು ಸಹ ಹೈಕೋರ್ಟ್ ಆದೇಶ ಪಾಲಿಸದೆ ತಮಗೂ ಆದೇಶಕ್ಕೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳೇ ಕಳೆದಿವೆ. ಜೊತೆಗೆ ಇನ್ನು ಎರಡು ತಿಂಗಳಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ನಿಗದಿ ಆಗಲಿದೆ. ಆದರೆ ಎರಡು ತಿಂಗಳಾದರೂ ಅಧ್ಯಕ್ಷೆ ಸ್ಥಾನ ಬಿಟ್ಟು ಕೊಡಲಿ ಎಂಬುದು ರೇಖಾ ಅವರ ವಾದವಾಗಿದ್ದು, ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲ ಎಂಬಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

  • ಪತ್ರಿಕೋದ್ಯಮ ವಿದ್ಯಾರ್ಥಿನಿ ಗ್ಯಾಂಗ್ ರೇಪ್ – ಆರೋಪಿಗಳಿಗೆ ಜಾಮೀನು

    ಪತ್ರಿಕೋದ್ಯಮ ವಿದ್ಯಾರ್ಥಿನಿ ಗ್ಯಾಂಗ್ ರೇಪ್ – ಆರೋಪಿಗಳಿಗೆ ಜಾಮೀನು

    – ಗ್ಯಾಂಗ್ ರೇಪ್ ಮಾಡಿ ವಿಡಿಯೋ ವೈರಲ್ ಮಾಡಿದ್ದ ಕಾಮುಕರು

    ಮಂಗಳೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನೇ ಐವರು ವಿದ್ಯಾರ್ಥಿಗಳು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿ ಜೈಲು ಸೇರಿದ್ದ ಎಲ್ಲಾ ಅತ್ಯಾಚಾರಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.

    ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಪತ್ರಿಕೋದ್ಯಮದ ವಿದ್ಯಾರ್ಥಿನಿಯೋರ್ವಳನ್ನು ಅದೇ ಕಾಲೇಜಿನ ಪ್ರಥಮ ಪಿಯುಸಿಯ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ನಡೆಸಿದ ವಿದ್ಯಾರ್ಥಿಗಳಾದ ಸುನಿಲ್ (19), ಗುರುನಂದನ್ (19), ಕಿಶನ್ (19), ಪ್ರಖ್ಯಾತ (19) ಹಾಗೂ ಪ್ರಜ್ವಲ್(19) ಜಾಮೀನು ಪಡೆದುಕೊಂಡ ಆರೋಪಿಗಳು. ಆರೋಪಿಗಳ ಪೈಕಿ ಪ್ರಜ್ವಲ್‍ಗೆ ಹತ್ತು ದಿನದ ಹಿಂದೆ ಜಾಮೀನು ಮಂಜೂರಾಗಿದ್ದು ಉಳಿದ ನಾಲ್ವರು ಅತ್ಯಾಚಾರಿಗಳಿಗೆ ಇಂದು ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

    ಸಾಲು ಸಾಲು ಅನುಮಾನಗಳು:
    ಕಳೆದ 2019ರ ಎಪ್ರಿಲ್ 3 ರಂದು ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ರು ಎಂದು 2019 ಜುಲೈ 3 ರಂದು ಸಂತ್ರಸ್ತೆ ದೂರು ನೀಡಿದ್ದರು. ಅತ್ಯಾಚಾರದ ವಿಡಿಯೋ ವೈರಲ್ ಆದ ಮೂರು ತಿಂಗಳ ಬಳಿಕ ದೂರು ನೀಡಿದ್ದು, ಈ ಮೂರು ತಿಂಗಳ ಅವಧಿಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ತನ್ನ ಹೆತ್ತವರಲ್ಲಾಗಲಿ, ಸ್ನೇಹಿತರಲ್ಲಾಗಲಿ ಅಥವಾ ಇತರೆ ಯಾವುದೇ ವ್ಯಕ್ತಿಗಳಲ್ಲಿ ಹೇಳಿಕೊಂಡಿಲ್ಲ. ಸಂತ್ರಸ್ತೆ ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿದ್ದು ಮಾತ್ರವಲ್ಲ ಪ್ರಬುದ್ಧೆಯಾಗಿದ್ದರೂ ಐದು ಜನ ಸೇರಿ ಅತ್ಯಾಚಾರ ನಡೆಸಿದ್ರೂ ಪೊಲೀಸರಿಗೆ ದೂರು ನೀಡದೇ ಇರೋದು ಅನುಮಾನಕ್ಕೆ ಕಾರಣವಾಗಿತ್ತು.

    ಜೊತೆಗೆ ಆಕೆ ಪುತ್ತೂರು ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ಅದರಲ್ಲಿ ಸಂತ್ರಸ್ತೆ ತಾನು ಸ್ವತಂತ್ರವಾಗಿ ಬೆತ್ತಲಾಗುವ ದೃಶ್ಯದ ವಿಡಿಯೋ ಇದ್ದು, ಅದನ್ನು ಸಂತ್ರಸ್ತೆ ತನ್ನದೇ ವಿಡಿಯೋ ಎಂದು ತನಿಖೆಯಲ್ಲಿ ಒಪ್ಪಿಕೊಂಡಿರುತ್ತಾಳೆ. ಹೀಗಾಗಿ ಘಟನೆಯ ನೈಜ್ಯತೆಯ ಬಗ್ಗೆ ಅನುಮಾನ ಮೂಡಿಸುತ್ತದೆ. ಜೊತೆಗೆ ಈ ವಿಡಿಯೋದಲ್ಲಿ ಸಂತ್ರಸ್ತೆ ಸ್ವತಃ ಬೆತ್ತಲಾಗಿದ್ದು, ಬಳಿಕ ಒಬ್ಬೊಬ್ಬರೇ ವಿದ್ಯಾರ್ಥಿಗಳು ಅತ್ಯಾಚಾರ ನಡೆಸಿರೋ ದೃಶ್ಯಾವಳಿ ಇರೋದ್ರಿಂದ ಇದೊಂದು ಗ್ಯಾಂಗ್ ರೇಪ್ ಎಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ಆರೋಪಿಗಳ ಹಾಗೂ ಪ್ರಕರಣದ ಸಂಬಂಧವನ್ನು ತಳ್ಳಿ ಹಾಕುವಂತಿಲ್ಲ. ಜೊತೆಗೆ ವಿದ್ಯಾರ್ಥಿಗಳನ್ನು ಜೈಲಿನಲ್ಲೇ ಇರಿಸಿದರೆ ಅವರ ವಿಧ್ಯಾಭ್ಯಾಸ ಹಾಗೂ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಗಳಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

    ಆ ಒಂದು ವಿಡಿಯೋ:
    2019ರ ಜುಲೈ 3 ರಂದು ಮಂಗಳೂರು ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅದೊಂದು ವಿಡಿಯೋ ವೈರಲ್ ಆಗಿತ್ತು. ನಿರ್ಜನ ಪ್ರದೇಶವೊಂದರಲ್ಲಿ ಕಾರಿನೊಳಗೆ ಬೆತ್ತಲಾಗುವ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳು ಅತ್ಯಾಚಾರ ನಡೆಸುತ್ತಿದ್ದು ಎಲ್ಲಾ ದೃಶ್ಯವನ್ನು ಓರ್ವ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ವಿರೋಧ ವ್ಯಕ್ತವಾಗಿತ್ತು.

    ಬಳಿಕ ಪೊಲೀಸರು ಸಂತ್ರಸ್ತೆಯಿಂದ ದೂರು ಪಡೆದು ಆರೋಪಿಗಳನ್ನು ಬಂಧಿಸಿದ್ದರು. ಆಕೆ ನೀಡಿದ ದೂರಿನಂತೆ ತಾನು 2019ರ ಎಪ್ರಿಲ್ 3 ರಂದು ಸಂಜೆ ಕಾಲೇಜಿನಿಂದ ಎಂದಿನಂತೆ ಮನೆಗೆ ಹೋಗುತ್ತಿದ್ದಾಗ ಬೆಳ್ಳಿಪ್ಪಾಡಿ ಎಂಬಲ್ಲಿನಿಂದ ಕಾರಿನಲ್ಲಿ ಬಂದ ತನ್ನ ಕಾಲೇಜಿನ ಸಹಪಾಠಿಗಳು ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ಯದ್ದು,ಬಳಿಕ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು, ಜೊತೆಗೆ ಮೊಬೈಲ್ ನಲ್ಲಿ ಚಿತ್ರೀಕರಣ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

    ಬಳಿಕ ಆರೋಪಿಗಳ ವಿಚಾರಣೆಯ ವೇಳೆ ನಾವು ಐದು ಜನ ಸೇರಿ ಅತ್ಯಾಚಾರ ನಡೆಸಿದ್ದು ನಿಜ, ಬಳಿಕ ಚಿತ್ರೀಕರಿಸಿದ್ದೂ ನಿಜ ಆದ್ರೆ ಉದ್ದೇಶಪೂರ್ವಕವಾಗಿ ವಿಡಿಯೋ ವೈರಲ್ ಮಾಡಿಲ್ಲ, ಆರೋಪಿಗಳಲ್ಲಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಆರೋಪಿ ಕಾಲೇಜಿನ ಚುನಾವಣಾ ವಿಚಾರದಲ್ಲಿ ಸ್ನೇಹಿತರೊಂದಿಗೆ ಮನಸ್ತಾಪವಾಗಿ, ಅವರ ಮಾನ ಮರ್ಯಾದೆ ತೆಗೆಯಬೇಕೆಂದು ತಾನೇ ಚಿತ್ರೀಕರಿಸಿದ ಅತ್ಯಾಚಾರದ ದೃಶ್ಯದಲ್ಲಿ ತನ್ನನ್ನು ಹೊರತು ಪಡಿಸಿ ಇತರ ನಾಲ್ವರು ಅತ್ಯಾಚಾರ ಮಾಡುವ ದೃಶ್ಯವನ್ನು ವೈರಲ್ ಮಾಡಿದ್ದ, ಆದ್ರೆ ಆರೋಪಿಗಳ ಬಂಧನದ ವೇಳೆ ಆತನೂ ಜೈಲು ಸೇರಿದ್ದ. ಇದೀಗ ಪ್ರಕರಣದ ಸುಧೀರ್ಘ ತನಿಖೆ ನಡೆಸಿದ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿದೆ.

    ಷರತ್ತುಗಳೇನು?
    * ಆರೋಪಿಗಳು ಎರಡು ಲಕ್ಷದ ಸ್ವಂತ ಮುಚ್ಚಳಿಕೆ ಹಾಗೂ ಎರಡು ಲಕ್ಷದ ಎರಡು ಜನ ಜಾಮೀನುದಾರರನ್ನು ನೀಡಬೇಕು.
    * ಅಧೀನ ನ್ಯಾಯಾಲಯಕ್ಕೆ ಸರಿಯಾದ ದಿನ ಹಾಜರಾಗಬೇಕು, ಜೊತೆಗೆ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ.

  • ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ

    ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ

    ರಾಯಚೂರು: ಅನರ್ಹ ಶಾಸಕ ಪ್ರತಾಪ್‍ಗೌಡ ಅವರ ಬೇಡಿಕೆಯನ್ನು ಈಡೇರಿಸಲು ಬಿಜೆಪಿ ಯಶಸ್ವಿಯಾಗಿದ್ದು, ಅವರ ವಿರುದ್ಧ ಹೂಡಲಾಗಿದ್ದ ಬೋಗಸ್ ಮತದಾನ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಅವರು ವಾಪಸ್ ಪಡೆದಿದ್ದಾರೆ.

    2018ರ ಚುನಾವಣೆ ವೇಳೆ ತುರ್ವಿಹಾಳ ಅವರು ಮಸ್ಕಿ ಮತಕ್ಷೇತ್ರದಲ್ಲಿ ಬೋಗಸ್ ಮತದಾನ ನಡೆದಿದೆ ಎಂದು ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನರ್ಹರಾಗಿದ್ದ ಪ್ರತಾಪ್‍ಗೌಡ ಅವರ ಮಸ್ಕಿ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ಆದರೆ ಸದ್ಯ ಏಕಾಏಕಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದು, ಪ್ರತಾಪ್‍ಗೌಡ ಅವರ ಹಾದಿ ಸದ್ಯ ಸುಗಮವಾಗಿದೆ.

    ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ತುರ್ವಿಹಾಳ ಅವರು 213 ಮತಗಳ ಅಂತರದಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು. ಈ ಹಿಂದೆ ಪ್ರಕರಣವನ್ನು ವಾಪಸ್ ಪಡೆಯಲು ಹಿಂದೇಟು ಹಾಕಿದ್ದ ತುರ್ವಿಹಾಳ ಅವರು ಸರ್ಕಾರ ನೀಡಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಲ್ಲದೇ ನಾವು ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ ಉಪಚುನಾವಣೆ ಫಲಿತಾಂಶದ ಬಳಿಕ ತಮ್ಮ ಮನಸ್ಸು ಬದಲಿಸಿದ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿರುವುದರಿಂದ ಮಸ್ಕಿ ಉಪಚುನಾವಣೆಗೆ ಹಾದಿ ಸುಗಮವಾಗಿದೆ. ಮಸ್ಕಿ ಪ್ರಕರಣ ಇತ್ಯರ್ಥವಾದ ಕಾರಣದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಚುನಾವಣಾ ಪ್ರಕರಣವೂ ಸುಲಭವಾಗಿ ಇತ್ಯರ್ಥವಾಗುವ ಸಾಧ್ಯತೆಯಿದೆ.

    ಸದ್ಯ ಬಿಜೆಪಿ ಹೈಕಮಾಂಡ್ ಎದುರು ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ತುರ್ವಿಹಾಳ ಅವರು, ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಒಪ್ಪಿಗೆಯಾಗದ ಕಾರಣ ಇದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ.

    ಏನಿದು ಪ್ರಕರಣ: ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿರಲಿಲ್ಲ. ಪ್ರತಾಪ್‍ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದರು. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದ ಕಾರಣ ಪ್ರತಾಪ್‍ಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಕೂಡ ಉಪಚುನಾವಣೆ ನಡೆದಿರಲಿಲ್ಲ.

  • ಅಂಬಾನಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆ ತೆಗೆಯಿರಿ – ಅರ್ಜಿ ವಜಾಗೊಳಿಸಿದ ಕೋರ್ಟ್

    ಅಂಬಾನಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆ ತೆಗೆಯಿರಿ – ಅರ್ಜಿ ವಜಾಗೊಳಿಸಿದ ಕೋರ್ಟ್

    ಮುಂಬೈ: ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆಯನ್ನು ತೆಗೆದುಹಾಕಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

    ಮಹಾರಾಷ್ಟ್ರದ ಮುಂಬೈನ ಅಂಧೇರಿ ಪ್ರದೇಶದ ನಿವಾಸಿ ಹಿಮಾಂಶು ಅಗರ್‌ವಾಲ್ ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಅಗರ್‌ವಾಲ್, ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಭದ್ರತೆ ನೀಡುವುದರಿಂದ ರಾಜ್ಯ ಹಾಗೂ ತೆರಿಗೆ ಪಾವತಿದಾರರಿಗೆ ಹೊರೆಯಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    ಇದೇ ಸಂದರ್ಭದಲ್ಲಿ ಅಂಬಾನಿ ಪರ ವಕೀಲರು ಸ್ಪಷ್ಟಪಡಿಸಿ, ಕುಟುಂಬವೂ ಭದ್ರತೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ. ಹೀಗಾಗಿ ತೆರಿಗೆ ಪಾವತಿಸುವವರ ಮೇಲೆ ಯಾವುದೇ ಹೊರೆಯಾಗುವುದಿಲ್ಲ ಎಂದು ವಾದಿಸಿದರು. ವಾದವನ್ನು ಆಲಿಸಿದ ನ್ಯಾಯಮೂರ್ತಿ ರಂಜಿತ್ ಮೋರ್ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.

    ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಭದ್ರತಾ ಪಡೆ (ಎಸ್‍ಪಿಜಿ)ಯಿಂದ ಭದ್ರತೆ ನೀಡಲಾಗಿದ್ದು, ಉಳಿದಂತೆ ಬೆದರಿಕೆ ಇರುವವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ. ಝಡ್ ಪ್ಲಸ್ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ದಳ(ಎನ್‍ಎಸ್‍ಜಿ) ನೀಡುತ್ತದೆ. ಎಂಪಿ5 ಬಂದೂಕುಗಳು, ಅಧುನಿಕ ಗ್ಯಾಜೆಟ್‍ಗಳು, ಬೆಂಗಾವಲು ವಾಹನಗಳನ್ನು ಹೊಂದಿದೆ ಎಂದು ಅಗರ್‌ವಾಲ್ ಅವರ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

    ಮುಕೇಶ್ ಅಂಬಾನಿಯವರ ಕುಟುಂಬ ರಾಜಕೀಯದಲ್ಲಿ ಭಾಗವಹಿಸದಿರುವುದರಿಂದ ಕುಟುಂಬಕ್ಕೆ ಯಾವುದೇ ಬೆದರಿಕೆ ಇಲ್ಲ. ಹೀಗಾಗಿ ಸೈದ್ಧಾಂತಿಕ ಸಂಘರ್ಷಕ್ಕೆ ಕಾರಣಗಳಿಲ್ಲ. ಅಲ್ಲದೆ ಅಂಬಾನಿಯವರ ಮೇಲೆ ಈವರೆಗೆ ದಾಳಿ ನಡೆಸಿರುವ ಹಾಗೂ ದಾಳಿ ನಡೆಸಲು ಪ್ರಯತ್ನಿಸಿರುವ ಪ್ರಕರಣಗಳಿಲ್ಲ. ದೊಡ್ಡ ಬುಸಿನೆಸ್ ಕಂಪನಿ ಸಿಇಓ ಆಗಿರುವವರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಾರೆ ಎಂದು ಅಗರ್‍ವಾಲ್ ತಿಳಿಸಿದ್ದಾರೆ.

    ಜನಸಾಮಾನ್ಯರಿಗೆ ಹೋಲಿಸಿದರೆ ಪೊಲೀಸರ ಅನುಪಾತ ಕಡಿಮೆ ಇದೆ. ಹೀಗಾಗಿ ಭದ್ರತೆಯನ್ನು ತೆಗೆಯಬೇಕು. ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. 666 ಜನರಿಗೆ ಒಬ್ಬ ಪೊಲೀಸ್ ಹಾಗೂ ಪ್ರತಿ ವಿಐಪಿಗೆ ಮೂವರು ಪೊಲೀಸರಿದ್ದಾರೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಸಲ್ಲಿಸಿದ ಅರ್ಜಿಯಾಗಿದ್ದು, ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಕೋರಿದ್ದರು. ನ್ಯಾಯಾಲಯ ಅರ್ಜಿದಾರರ ವಾದವನ್ನು ಮಾನ್ಯ ಮಾಡದೇ ತಿರಸ್ಕರಿಸಿದೆ.

  • ಪತ್ನಿಯ ಸೆಕ್ಸ್ ವಿಡಿಯೋ ಚಿತ್ರೀಕರಿಸಿ ವಿಚ್ಛೇದನ ಪಡೆದ ಪತಿ

    ಪತ್ನಿಯ ಸೆಕ್ಸ್ ವಿಡಿಯೋ ಚಿತ್ರೀಕರಿಸಿ ವಿಚ್ಛೇದನ ಪಡೆದ ಪತಿ

    ಬೆಂಗಳೂರು: ಪತ್ನಿಯ ಸೆಕ್ಸ್ ವಿಡಿಯೋ ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡಿ ಬಳ್ಳಾರಿ ಮೂಲದ ವ್ಯಕ್ತಿ ವಿಚ್ಛೇದನ ಪಡೆದುಕೊಂಡಿದ್ದಾನೆ. ಹೈಕೋರ್ಟ್ ವಿಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಿ ಪತಿಗೆ ವಿಚ್ಚೇದನ ನೀಡಿದೆ.

    ಬಳ್ಳಾರಿ ಮೂಲದ ವ್ಯಕ್ತಿ ಜುಲೈ 1, 1991ರಂದು ಈ ಮಹಿಳೆಯನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜೂನ್ 4 ರಿಂದ ಜೂನ್ 9, 2008ರಂದು ವ್ಯಕ್ತಿ ಬೆಂಗಳೂರಿಗೆ ಹೊರಡುವಾಗ ತನ್ನ ಬೆಡ್‍ರೂಮಿನಲ್ಲಿ ವಿಡಿಯೋ ರೆಕಾರ್ಡರ್ (ಡಿವಿಆರ್-ಡಿಜಿಟಲ್ ವಿಡಿಯೋ ರೆಕಾರ್ಡರ್) ಪತ್ನಿಗೆ ಗೊತ್ತಾಗದಂತೆ ಇರಿಸಿದ್ದರು. ಈ ವೇಳೆ ಪತಿಯ ಸ್ನೇಹಿತನೊಂದಿಗೆ ಪತ್ನಿ ಲೈಂಗಿಕ ಸಂಪರ್ಕ ಹೊಂದಿದ್ದಳು. ಈ ಎಲ್ಲ ದೃಶ್ಯಗಳು ಪತಿ ಇರಿಸಿದ್ದ ಡಿವಿಆರ್ ನಲ್ಲಿ ರೆಕಾರ್ಡ್ ಆಗಿತ್ತು. ವಿಚ್ಚೇದನ ತೀರ್ಪು ನೀಡಿ ವಿದ್ಯುನ್ಮಾನ ಸಾಕ್ಷ್ಯವು ನೈಜತೆ ಮತ್ತು ಪ್ರಸ್ತುತತೆಯಿಂದ ಕೂಡಿದ್ದರೆ ಅದನ್ನು ನ್ಯಾಯಾಲಯ ಒಪ್ಪುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಪತಿಯ ಆರೋಪ ಏನು?
    ವಿಡಿಯೋವನ್ನು ಸಾಕ್ಷಿಯಾಗಿರಿಸಿಕೊಂಡು ಪತಿ ವಿಚ್ಛೇದನಕ್ಕಾಗಿ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಪತ್ನಿಯ ವಿರುದ್ಧ ಕ್ರೌರ್ಯ ಮತ್ತು ವ್ಯಭಿಚಾರ ಆರೋಪ ಮಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿಯ ನಡವಳಿಕೆ ಸರಿ ಇಲ್ಲ ಮತ್ತು ಆಕೆ ಕೋಪಿಷ್ಠಳಾಗಿದ್ದಾಳೆ. ಆಕೆಗೆ ಬೇರೆಯೊಬ್ಬ ವ್ಯಕ್ತಿಯೊಬ್ಬನ ಜೊತೆ ಸಂಪರ್ಕವಿದೆ. ಒಂದು ದಿನ ಕೆಲಸದಿಂದ ಬೇಗ ಹೋದಾಗ ಬೇರೆಯೊಬ್ಬ ಮನೆಯಲ್ಲಿದ್ದನು. ಈ ಕುರಿತು ಪ್ರಶ್ನಿಸಿದಾಗ ಸಬೂಬು ಹೇಳಿ ವಿಷಯಾಂತರ ಮಾಡಿದಳು. ಅದೇ ವ್ಯಕ್ತಿಯೊಂದಿಗೆ ಪತ್ನಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ನನ್ನ ಗಮನಕ್ಕೆ ಬಂದಿದೆ ಎಂದು ದೂರುದಾರ ಪತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

    ಪತ್ನಿಯ ಆರೋಪ ಏನು?
    ಪತಿಗೆ ಲೈಂಗಿಕ ವಿಡಿಯೋಗಳನ್ನು ನೋಡುವ ಮತ್ತು ಚಿತ್ರೀಕರಿಸುವ ಕೆಟ್ಟ ಹವ್ಯಾಸವಿದೆ. ಸೆಕ್ಸ್ ಸಿನಿಮಾಗಳಂತೆ ಲೈಂಗಿಕ ಸಂಪರ್ಕ ಹೊಂದುವಂತೆ ಕಿರುಕುಳ ನೀಡುತ್ತಾನೆ. ತಾವೇ ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಳು.

    ಹೈಕೋರ್ಟ್ ಮೊರೆ: ಪ್ರಕರಣವನ್ನು ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಕ್ರೌರ್ಯ ಆರೋಪವನ್ನು ಕೈ ಬಿಟ್ಟು, ವ್ಯಭಿಚಾರ ಆರೋಪವನ್ನು ಪರಿಗಣಿಸಿತ್ತು. 2003 ಜುಲೈ 30ರಂದು ಇಬ್ಬರ ಮದುವೆಯನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿತ್ತು. ಪತ್ನಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಳು.

    ದ್ವಿಸದಸ್ಯ ಪೀಠ: ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾ.ಅಲೋಕ್ ಅರಾಧೆ ಮತ್ತು ನ್ಯಾ.ಪಿಜಿಎಂ ಪಾಟೀಲ್ ದ್ವಿಸದಸ್ಯ ಪೀಠ ವಾದ-ಪ್ರತಿವಾದವನ್ನು ಆಲಿಸಿತ್ತು. ದಂಪತಿಯ ಇಬ್ಬರ ಮಕ್ಕಳಲ್ಲಿ ಒಬ್ಬರನ್ನು ಸಾಕ್ಷಿ ನೀಡಿದ್ದರು. 2008ರ ಜೂನ್ 4ರಿಂದ ಜೂನ್ 9ರವರೆಗೆ ತಾವು ತಾಯಿಯೊಂದಿಗೆ ಬಳ್ಳಾರಿಯ ನಿವಾಸದಲ್ಲಿ ಇದ್ದೇವು. ಆ ದಿನಗಳಲ್ಲಿ ತಂದೆ ನಮ್ಮ ಜೊತೆಗಿರಲಿಲ್ಲ ಎಂಬ ಹೇಳಿಕೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು.

    ಆರೋಪಿತ ವ್ಯಕ್ತಿಯ ಮೇಲೆ ವ್ಯಭಿಚಾರದ ಆರೋಪವನ್ನು ಮಾಡಿ ವಿಚ್ಛೇದನ ಪಡೆಯಬಹುದು. ಯಾಕೆಂದರೆ ಕರ್ನಾಟಕ ಹಿಂದೂ ವಿವಾಹ ನಿಯಮ 1956 ವ್ಯಬಿಚಾರವನ್ನು ಒಪ್ಪುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

  • ಯೋಗೇಶ್ ಗೌಡ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ

    ಯೋಗೇಶ್ ಗೌಡ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

    ರಾಜ್ಯ ಸರ್ಕಾರವು ಸೆಪ್ಟೆಂಬರ್ 9ರಂದು ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಆರಂಭಿಸಿದ್ದ ಸಿಬಿಐ ಪ್ರಮುಖ ಆರೋಪಿಗಳಾದ ಬಸವರಾಜ ಶಿವಪ್ಪ ಮುತ್ತಗಿ, ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಾಟಗಿ ಹಾಗೂ ಮಹಾಬಲೇಶ್ವರ ಹೊನಗಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.

    ರಾಜ್ಯ ಸರ್ಕಾರದ ಆದೇಶ ರದ್ದು ಮಾಡುವಂತೆ ಕೋರಿ ಪ್ರಕರಣದ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.

    2017 ಜೂನ್ 15ರಂದು ಯೋಗೇಶ್ ಗೌಡನ ಕೊಲೆಯಾಗಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು. ಹೀಗಾಗಿ ಕೊಲೆಯ ಹಿಂದೆ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.

    ಪ್ರಕರಣದಲ್ಲಿ ವಿನಯ್ ಕುಲಕರ್ಣಿಯವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಪಿಗಳು ಯೋಗಿಶ್ ಗೌಡನ ಸಹೋದರನ ಜೊತೆ ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು. ಇತ್ತ ವಿನಯ್ ಕುಲಕರ್ಣಿಯವರ ಹೆಸರನ್ನು ಕೈ ಬಿಡಲು ಅಧಿಕಾರಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂದು ಯೋಗೇಶ್ ಗೌಡ ತಾಯಿ ಆರೋಪಿಸಿದ್ದರು.

    https://www.youtube.com/watch?v=vpNnQPrC3pg

  • 9 ತಿಂಗಳ ಮಗುವಿನ ರೇಪ್‍ಗೈದು ಕೊಲೆ – ಕೊನೆಯ ಉಸಿರು ಇರೋವರೆಗೂ ಬಿಡುಗಡೆ ಮಾಡುವಂತಿಲ್ಲ

    9 ತಿಂಗಳ ಮಗುವಿನ ರೇಪ್‍ಗೈದು ಕೊಲೆ – ಕೊನೆಯ ಉಸಿರು ಇರೋವರೆಗೂ ಬಿಡುಗಡೆ ಮಾಡುವಂತಿಲ್ಲ

    ಹೈದರಾಬಾದ್: 9 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಅವನ ಕೊನೆಯ ಉಸಿರು ಇರುವರೆಗೆ ಬಿಡುಗಡೆ ಮಾಡದಂತೆ ಸೂಚಿಸಿದೆ.

    ಪೋಲೆಪಾಕಾ ಪ್ರವೀಣ್ ಅಲಿಯಾಸ್ ಪವನ್(25) ಶಿಕ್ಷೆಗೆ ಗುರಿಯಾದ ಅಪರಾಧಿ. ಜೂನ್‍ನಲ್ಲಿ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಗಲ್ ವಿಶೇಷ ಪೊಕ್ಸೊ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್ ಮೆಟ್ಟಿಲೇರಿದ್ದ. ಹೈ ಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ. ಈ ವೇಳೆ ಈತನ ಕೊನೆಯ ಉಸಿರು ಇರುವರೆಗೆ ಬಿಡುಗಡೆ ಮಾಡಕೂಡದು ಎಂದು ಕೋರ್ಟ್ ಆದೇಶಿಸಿದೆ.

    ಅಪರಾಧಿ ಪೋಲೆಪಾಕಾ ಪ್ರವೀಣ್ ಅನಕ್ಷರಸ್ಥ, ಬಡವನಾಗಿದ್ದಾನೆ. ಈ ಹಿಂದೆ ಈ ರೀತಿಯ ಯಾವುದೇ ಘೋರ ಅಪರಾಧವನ್ನು ಮಾಡದ ಪರಿಣಾಮ ಕೋರ್ಟ್ ಶಿಕ್ಷೆಯನ್ನು ಜಿವಾವಧಿಗೆ ಇಳಿಸಿದೆ. ಇದನ್ನೂ ಓದಿ: ಠಾಣೆಯಲ್ಲೇ ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ

    ಮುಖ್ಯ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಹಾಗೂ ನ್ಯಾಯಮೂರ್ತಿ ಎ.ಅಭಿಷೇಕ್ ರೆಡ್ಡಿ ಅವರನ್ನೊಳಗೊಂಡ ಹೈ ಕೋರ್ಟಿನ ವಿಭಾಗೀಯ ಪೀಠವು ಅಪರಾಧಿಯ ನಡತೆ ಸುಧಾರಣೆಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ ಪ್ರವೀಣ್‍ನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂದು ಇದೇ ವೇಳೆ ತಿಳಿಸಿದೆ. ಆಗಸ್ಟ್ 8ರಂದು ವಾರಂಗಲ್ ನ್ಯಾಯಾಲಯವು ಘಟನೆ ನಡೆದು 48 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಮರಣದಂಡನೆ ವಿಧಿಸಿತ್ತು.

    ಏನಿದು ಪ್ರಕರಣ?
    ಜೂನ್ 18ರಂದು ಹನಮಕೊಂಡದ ಕುಮಾರ್‍ಪಲ್ಲಿಯಲ್ಲಿನ ಮನೆಯ ಮೇಲೆ 9 ತಿಂಗಳ ಕಂದಮ್ಮ ಪೋಷಕರೊಂದಿಗೆ ಟೆರಸ್ ಮೇಲೆ ಮಲಗಿದ್ದಾಗ ಪ್ರವೀಣ್ ಅಪಹರಿಸಿದ್ದ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಮಗುವಿನ ಕುಟುಂಬದವರು ಕೆಲವೇ ಗಂಟೆಗಳಲ್ಲಿ ಆತನನ್ನು ಹಿಡಿದ್ದರು. ಆದರೆ ಅಷ್ಟೊತ್ತಿಗಾಗಲೇ ನೀಚ ಮಗುವನ್ನು ಸಾಯಿಸಿಯೇ ಬಿಟ್ಟಿದ್ದ. ನಂತರ ಬಾಲಕಿಯ ಕುಟುಂಬಸ್ಥರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಮೂಲಕ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು.

  • ಆಸ್ಪತ್ರೆಯಲ್ಲಿರುವ ಡಿಕೆಶಿಗೆ ಬಿಗ್ ಶಾಕ್ – ಹೈಕೋರ್ಟಿನಲ್ಲಿ ಅರ್ಜಿ ವಜಾ

    ಆಸ್ಪತ್ರೆಯಲ್ಲಿರುವ ಡಿಕೆಶಿಗೆ ಬಿಗ್ ಶಾಕ್ – ಹೈಕೋರ್ಟಿನಲ್ಲಿ ಅರ್ಜಿ ವಜಾ

    – ನಾಲ್ಕನೆಯ ಪ್ರಕರಣದಲ್ಲಿ ಆರೋಪಿಯಾನ್ನಾಗಿ ಕೈಬಿಡುವಂತೆ ಅರ್ಜಿ
    – ಹೈಕೋರ್ಟ್ ಏಕಸದಸ್ಯ ಪೀಠದಿಂದ ಅರ್ಜಿ ವಜಾ

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ 4ನೇ ಪ್ರಕರಣದಿಂದ ಕೈ ಬಿಡುವಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಹವಾಲಾ ಹಣವನ್ನು ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿ ಐಟಿ ಡಿಕೆ ಶಿವಕುಮಾರ್ ಸೇರಿದಂತೆ ಡಿಕೆಶಿ ಆಪ್ತರಾದ ಸುನೀಲ್ ಶರ್ಮಾ, ಸಚಿನ್ ನಾರಾಯಣ್, ರಾಜೇಂದ್ರ, ಆಂಜನೇಯ ಅವರನ್ನು ಆರೋಪಿಯನ್ನಾಗಿಸಿ ಪ್ರಕರಣ ದಾಖಲು ಮಾಡಿತ್ತು.

    ಈ ಪ್ರಕರಣದಿಂದ ಕೈ ಬಿಡುವಂತೆ ಕೋರಿ ಡಿಕೆಶಿ ಮತ್ತು ಬೆಂಬಲಿಗರು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೆ ಇಂದು ಹೈಕೋರ್ಟಿನ ಏಕಸದಸ್ಯ ಪೀಠ ಡಿಕೆಶಿ ಮತ್ತು ಬೆಂಬಲಿಗರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

    ಏನಿದು ಪ್ರಕರಣ?
    ದೆಹಲಿ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಸಿಕ್ಕ ಹಣದ ಸಂಬಂಧ ಆದಾಯ ತೆರಿಗೆ ಇಲಾಖೆಯ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲಾ ಹಣದ ವಿವರವನ್ನು ಉಲ್ಲೇಖಿಸಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದನ್ನು ಓದಿ: ಡಿಕೆಶಿ ಆರೋಗ್ಯದಲ್ಲಿ ವ್ಯತ್ಯಯ- ಆಸ್ಪತ್ರೆಗೆ ದಾಖಲು

    ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿದ್ದರು. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿತ್ತು. ಈ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಡಿಕೆಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಪ್ರಕರಣ ದಾಖಲಿಸಿ ಬಂಧಿಸಿತ್ತು.

    ಈಗ ಇಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಮೀನು ನೀಡುವ ಸಂದರ್ಭದಲ್ಲಿ ಡಿಕೆ ಪರ ವಕೀಲರು ಈ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹೀಗಾಗಿ ಇಡಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದರು. ಈಗ ಕರ್ನಾಟಕ ಹೈಕೋರ್ಟ್ ಡಿಕೆ ಸಲ್ಲಿಸಿದ್ದ ಅರ್ಜಿಯನ್ನೇ ವಜಾಗೊಳಿಸಿದ್ದು ಮುಂದೆ ಐಟಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ.

  • ಡಿಕೆಶಿ ಪತ್ನಿ, ತಾಯಿಗೆ ಸಮನ್ಸ್ ನೀಡಬೇಡಿ: ದೆಹಲಿ ಹೈಕೋರ್ಟ್

    ಡಿಕೆಶಿ ಪತ್ನಿ, ತಾಯಿಗೆ ಸಮನ್ಸ್ ನೀಡಬೇಡಿ: ದೆಹಲಿ ಹೈಕೋರ್ಟ್

    ನವದೆಹಲಿ: ಮುಂದಿನ ಆದೇಶದವರೆಗೂ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ಸಮನ್ಸ್ ನೀಡದಂತೆ ಇಡಿ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ನಾಳೆ ನಡೆಯಬೇಕಿದ್ದ ವಿಚಾರಣೆಯಿಂದಲೂ ರಿಲೀಫ್ ಕೊಟ್ಟಿದೆ.

    ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ರದ್ದು ಮತ್ತು ಬೆಂಗಳೂರಿನಲ್ಲಿ ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಇಂದು ವಿಚಾರಣೆ ನಡೆಸಿದ ಪೀಠ ಉಷಾ ಮತ್ತು ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ಅವರ ವಾದ ಕೇಳಿತು.

    ಮಹಿಳೆಯರನ್ನು ಠಾಣೆಯಲ್ಲೇ ವಿಚಾರಣೆ ನಡೆಸಬೇಕು ಎಂಬ ಯಾವ ನಿಯಮಗಳಿಲ್ಲ. ಹಿಂದೆ ದೆಹಲಿ ಮದ್ರಾಸ್ ಹೈಕೋರ್ಟ್ ಸೇರಿ ಸುಪ್ರೀಂಕೋರ್ಟ್ ಹಲವು ಆದೇಶಗಳನ್ನು ನೀಡಿದೆ ಇದ್ಯಾವುದನ್ನು ಅರಿಯದೇ ಇಡಿ ಅಧಿಕಾರಿಗಳು ದೆಹಲಿಗೆ ಬರುವಂತೆ ಸಮನ್ಸ್ ನೀಡಿದ್ದಾರೆ. ಆದರೆ ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ಆರೋಗ್ಯ ಸಹಕರಿಸಲ್ಲ ಅಲ್ಲದೇ ಉಷಾ ಅವರು ಗೃಹಿಣಿ ಆಗಿರುವುದರಿಂದ ಅವರ ಮನೆಯಲ್ಲಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

    ನಾವು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಆದರೆ ದೆಹಲಿಯಲ್ಲಿ ವಿಚಾರಣೆ ಬೇಡ ಎನ್ನುತ್ತಿದ್ದೇವೆ ಬೆಂಗಳೂರಿನಲ್ಲಿ ವಿಚಾರಣೆ ಎದುರಿಸಲು ಸಿದ್ದವಾಗಿದ್ದೇವೆ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಯಲಿ ಅಂತಾ ದಯಾನ್ ಕೃಷ್ಣನ್ ವಾದ ಮಂಡಿಸಿದ್ರು. ಇಡಿ ಪರ ಹಿರಿಯ ವಕೀಲರು ಗೈರಾದ ಹಿನ್ನಲೆ ವಾದ ಮಂಡನೆಗೆ ಅವಕಾಶ ಕೊಡಬೇಕು ಅಂತಾ ಜ್ಯೂನಿಯರ್ ವಕೀಲರು ಮನವಿ ಮಾಡಿದರು. ಇದನ್ನು ಕೇಳ್ತಿದ್ದಂತೆ ಮುಂದಿನ ದಿನಾಂಕದಂದು ವಾದ ಮಂಡಿಸದಿದ್ದಲ್ಲಿ ನಿಮ್ಮನ್ನ ಪರಿಗಣಿಸದೇ ತೀರ್ಪು ನೀಡುವುದಾಗಿ ಎಚ್ಚರಿಸಿ ನವೆಂಬರ್ 15 ಕ್ಕೆ ವಿಚಾರಣೆ ಮುಂದೂಡಿದರು.

  • ಟಿಪ್ಪು ಜಯಂತಿ ರದ್ದು ಆದೇಶವನ್ನು ಪುನರ್ ಪರಿಶೀಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

    ಟಿಪ್ಪು ಜಯಂತಿ ರದ್ದು ಆದೇಶವನ್ನು ಪುನರ್ ಪರಿಶೀಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

    – ಕಾನೂನು ಸುವ್ಯವಸ್ಥೆ ಕಾರಣ ಕೊಟ್ಟು ಜಯಂತಿ ರದ್ದು ಸಾಧ್ಯವೇ?
    – ಜನವರಿ 3ಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಟಿಪ್ಪು ಜಯಂತಿ ಸರ್ಕಾರಿ ಆಚರಣೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

    ರಾಜ್ಯ ಸರಕಾರ ಆದೇಶ ರದ್ದುಪಡಿಸಲು ಕೋರಿ ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಾಧೀಶ ಎ. ಎಸ್.ಓಕ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

    ಈ ವೇಳೆ ಈ ಹಿಂದೆ ಪ್ರಕಟಿಸಿದ ಆದೇಶವನ್ನು ಸರ್ಕಾರ ಪುನರ್ ಪರಿಶೀಲಿಸಬಹುದು. ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಕೆಲಸ ಎಂದು ಮುಖ್ಯ ನ್ಯಾಯಾಧೀಶರು ಅಭಿಪ್ರಾಯಪಟ್ಟು ಜನವರಿ 3ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದರು. ಈ ವೇಳೆ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ನಿರ್ಬಂಧವಿಲ್ಲ. ನವೆಂಬರ್ 10 ರಂದು ರಾಜ್ಯ ಸರ್ಕಾರ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

    ಅರ್ಜಿದಾರರ ವಾದ ಏನಿತ್ತು?
    ಜುಲೈ 7 ರಂದು ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಮಂತ್ರಿಮಂಡಲದಲ್ಲಿ ಬೇರೆ ಯಾವುದೇ ಸಚಿವರು ಇರಲಿಲ್ಲ. ಹೀಗಿದ್ದರೂ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಲಾಗಿದೆ. ಯಾವುದೇ ಸಚಿವರ ಅಭಿಪ್ರಾಯ ಪಡೆಯದೇ, ರಾಜ್ಯಪಾಲರ ಅಭಿಪ್ರಾಯ ಪಡೆಯದೇ, ಯಾರೊಬ್ಬರ ಅಭಿಪ್ರಾಯವನ್ನೂ ಪರಿಗಣಿಸದೆ ರದ್ದು ಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟೂ 28 ಜಯಂತಿಗಳನ್ನು ಆಚರಿಸಲಾಗುತ್ತಿದೆ. ಈ ಜಯಂತಿಯನ್ನು ಸರ್ಕಾರವೇ ಅಚರಿಸುತ್ತದೆ. ಟಿಪ್ಪು ಜಯಂತಿ ರದ್ದುಪಡಿಸಿರುವುದು ದುರಂತವಾಗಿದ್ದು, ಸರ್ಕಾರದ ಈ ನಡೆಯಿಂದ ಜಾತಿ ತಾರತಮ್ಯ ನಡೆಸುತ್ತಿರುವುದು ಖಾತ್ರಿಯಾಗಿದೆ. ಇದು ಮುಸಲ್ಮಾನರ ವಿರುದ್ಧದ ತಾರತಮ್ಯ ನೀತಿಯನ್ನು ತೋರಿಸುತ್ತದೆ. ಸರ್ಕಾರ ಯಾವಾಗ ಬೇಕಾದರೂ ತನ್ನ ಕಾಯ್ದೆಗಳನ್ನು ಬದಲಿಸಿಕೊಳ್ಳಬಹುದಾದರೂ ಅದಕ್ಕೆ ಒಂದು ನೀತಿ ನಿಯಮವಿದೆ. ಆದರೆ ಏಕಾಏಕಿ ಟಿಪ್ಪು ಜಯಂತಿಯನ್ನು ರದ್ದು ಮಾಡಿರುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.

    ವಿಚಾರಣೆ ಸಮಯದಲ್ಲಿ ರಾಜ್ಯದಲ್ಲಿ ಇಷ್ಟು ಜಯಂತಿಗಳನ್ನು ಆಚರಿಸಲು ಕಾರಣ ಏನು ಎಂದು ಸಿಜೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಲ್ಲಿ ಪ್ರಶ್ನಿಸಿದರು. ರಾಜ್ಯದಲ್ಲಿ ಸ್ನೇಹತಾ ಮನೋಭಾವ, ಒಗ್ಗೂಡುವಿಕೆ, ಒಬ್ಬರನೊಬ್ಬರು ಅರಿತು ಬಾಳಲು ಆಚರಿಸಲಾಗುತ್ತಿದೆ ಎಂದು ಉತ್ತರ ನೀಡಿದರು. ಈ ಉತ್ತರ ಬಂದ ಕೂಡಲೇ ಹಾಗಾದ್ರೆ ಟಿಪ್ಪು ಜಯಂತಿ ವಿಚಾರದಲ್ಲಿ ಎಂದು ಮರು ಪ್ರಶ್ನೆ ಹಾಕಿದಾಗ ಕೊಡಗಿನ ಒಂದು ಭಾಗದಲ್ಲಿ ತೀವ್ರ ಸಮಸ್ಯೆಯಾಯಿತು. ಗುಂಪು ಘರ್ಷಣೆ ನಡೆಯಿತು, ಓರ್ವನ ಹತ್ಯೆಯಾಯಿತು ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಟಿಪ್ಪು ಜಯಂತಿ ಹಿಂಪಡೆದ ಕಾರಣದಿಂದಾಗಿ ಅರ್ಜಿದಾರರ ಯಾವ ಹಕ್ಕು ಮೊಟುಕುಗೊಂಡಂತಾಗಿದೆ ಅಡ್ವೊಕೇಟ್ ಜನರಲ್ ಪ್ರಶ್ನೆ ಕೇಳಿದರು.

    ರಾಜ್ಯೋತ್ಸವ ವಿಚಾರದಲ್ಲೂ ಗಲಭೆಗಳಾಗಿವೆ. ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಕಾಪಾಡಬೇಕು. ಕಾನೂನು ಸುವ್ಯವಸ್ಥೆ ಕಾರಣಗಳಿಂದ ರದ್ದುಪಡಿಸಲು ಸಾಧ್ಯವೇ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನೆ ಕೇಳಿದರು. ಈ ಪ್ರಕರಣ ಸಾರ್ವಜನಿಕ ಹಿತಾಸಕ್ತಿ ವಿಚಾರವಾಗಿದೆ. ಅಡ್ವೊಕೇಟ್ ಜನರಲ್ ಹೇಳಿದನ್ನು ನಾವು ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕೊನೆಯಲ್ಲಿ ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡಲೇ ಕ್ರಮವಹಿಸಬೇಕು. ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವನ್ನು ಸರ್ಕಾರ ಮಾಡಬೇಕು. ನಿಯಮ ಬದಲಾವಣೆಯನ್ನು ಸರ್ಕಾರ ಕ್ರಮೇಣವಾಗಿ ಮಾಡಬೇಕು. ಸುಪ್ರೀಂ ಕೋರ್ಟ್ ಪ್ರಕರಣವೊಂದರ ತೀರ್ಪು ನೀಡುವಾಗ ಇದನ್ನು ಪರಿಗಣಿಸಲು ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ಆದೇಶವನ್ನು ಸರ್ಕಾರ ಪುನರ್ ಪರಿಶೀಲಿಸಬಹುದು ಅಥವಾ ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಜ.3ಕ್ಕೆ ಮುಂದೂಡಿತು.