Tag: high court

  • ದೆಹಲಿಯಲ್ಲಿ ಹಿಂಸಾಚಾರ ಮೃತರ ಸಂಖ್ಯೆ 18ಕ್ಕೆ ಏರಿಕೆ – ತಡರಾತ್ರಿ ವಿಚಾರಣೆ ನಡೆಸಿದ ಹೈಕೋರ್ಟ್ ರಕ್ಷಣೆ ನೀಡಲು ಆದೇಶ

    ದೆಹಲಿಯಲ್ಲಿ ಹಿಂಸಾಚಾರ ಮೃತರ ಸಂಖ್ಯೆ 18ಕ್ಕೆ ಏರಿಕೆ – ತಡರಾತ್ರಿ ವಿಚಾರಣೆ ನಡೆಸಿದ ಹೈಕೋರ್ಟ್ ರಕ್ಷಣೆ ನೀಡಲು ಆದೇಶ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಇಂದು ನಾಲ್ವರು ಬಲಿಯಾಗಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಸಂತ್ರಸ್ತರಿಗೆ ನೆರವು ನೀಡುತ್ತಿರುವ ಗುರು ತೇಜ್ ಬಹದ್ದೂರ್ ಆಸ್ಪತ್ರೆ ಮೂಲಗಳಿಂದ ಮಾಹಿತಿ ನೀಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

    ಈಶಾನ್ಯ ದೆಹಲಿಯ ಹತ್ತು ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಜಫರಾಬಾದ್, ಗೋಕುಲ್‍ಪುರಿ, ಮೌಜ್‍ಪುರ್ ಸೀಲಂಪುರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೆಹಲಿ ಪೊಲೀಸ್ ಕಂಡಲ್ಲಿ ಗುಂಡು ಹಾರಿಸುವ ಆದೇಶ ನೀಡಿದೆ.

    ಪರಿಸ್ಥಿತಿ ನಿಯಂತ್ರಣಕ್ಕೆ ಬಂದ್ದಂತೆ ಕಂಡು ಬಂದರೂ ಈಶಾನ್ಯ ದೆಹಲಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಚ್ಚೇರಿಕೆ ಕ್ರಮವಾಗಿ ಹೆಚ್ಚುವರಿ ದೆಹಲಿ ಪೊಲೀಸ್ ಮತ್ತು ಶಸ್ತ್ರ ಸಜ್ಜಿತ ಮೀಸಲು ಪಡೆಗಳನ್ನು ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು ಸಿಬಿಎಸ್‍ಸಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

    ದೆಹಲಿ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮಂಗಳವಾರ ಮಧ್ಯರಾತ್ರಿ ಹೈಕೋರ್ಟ್ ವಿಚಾರಣೆ ನಡೆಸಿ, ಜನರಿಗೆ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಗಲಭೆಯಲ್ಲಿ ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಿ ಜನರಿಗೆ ರಕ್ಷಣೆ ನೀಡುವಂತೆ ಆದೇಶಿಸಿದೆ.

  • ಮಂಗಳೂರು ಗಲಭೆ- 22 ಆರೋಪಿಗಳಿಗೆ ಜಾಮೀನು

    ಮಂಗಳೂರು ಗಲಭೆ- 22 ಆರೋಪಿಗಳಿಗೆ ಜಾಮೀನು

    -ಪೊಲೀಸರ ಮೇಲೆ ಎಫ್‍ಐಆರ್ ದಾಖಲಿಗೆ ಸೂಚನೆ

    ಬೆಂಗಳೂರು: ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಕಾರಣವಾಗಿದ್ದ ಎನ್ನಲಾದ 22 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರ ಕ್ರಮ ಸರಿಯಲ್ಲ ಅಂತ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮವನ್ನು ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರೋದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲದೆ ಇರೋ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಎಲ್ಲಾ 22 ಆರೋಪಿಗಳಿಗೆ ಜಾಮೀನನ್ನು ಮಂಜೂರು ಮಾಡಿದೆ..

    ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ ಎಂದು ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟು ಜಾಮೀನನ್ನು ಮಂಜೂರು ಮಾಡಿದೆ.

    ಪೊಲೀಸರ ವಿರುದ್ಧ ಎಫ್‍ಐಆರ್: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ದೊಡ್ಡ ಶಾಕ್ ನೀಡಿದೆ. ಮಂಗಳೂರು ಗಲಭೆ ನೆಪದಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಈ ಹಿಂಸೆ ಅನುಭವಿಸಿದವರು ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲು ಮಾಡುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಎಫ್‍ಐಆರ್ ದಾಖಲು ಮಾಡಲು ಆದೇಶಿಸಿದೆ.

    ನೊಂದವರು ಪೊಲೀಸರ ವಿರುದ್ಧ ದೂರನ್ನು ನೀಡಿದ್ದಾರೆ. 10 ದೂರುಗಳನ್ನು ನೀಡಿ ಪದೇ ಪದೇ ಆ ದೂರಿನ ಬಗ್ಗೆ ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ಮತ್ತು ಮಂಗಳೂರು ಆಯುಕ್ತರ ಭೇಟಿಗೆ ತೆರಳಿದಾಗ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತಾ ಇಲ್ಲ. ಈ ದೂರಿಗೆ ಕ್ರಮವನ್ನು ಪೊಲೀಸರು ಜರಗಿಸುತ್ತಿಲ್ಲ ಅಂತ ವಾದ ಮಾಡಿದ್ದರು. ಇದನ್ನ ಪರಿಶೀಲಿಸಿದ ನ್ಯಾಯಾಲಯ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಗೆ ಸೂಚಿಸಿದೆ.

  • ಆನಂದ್‍ಸಿಂಗ್ ವಿರುದ್ಧ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆ

    ಆನಂದ್‍ಸಿಂಗ್ ವಿರುದ್ಧ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆ

    ಬೆಂಗಳೂರು: ನೂತನ ಅರಣ್ಯ ಸಚಿವರ ವಿರುದ್ಧ ದೊಡ್ಡ ಕೂಗು ಕೇಳಿತ್ತು. ಅರಣ್ಯ ನಾಶ ಮಾಡಿ ಜೈಲಿಗೆ ಹೋದವರಿಗೆ ಅರಣ್ಯ ಖಾತೆ ಕೊಟ್ಟಿದ್ದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಕುರಿತು ಸಾಕಷ್ಟು ಆಕ್ರೋಶ ಸಹ ವ್ಯಕ್ತವಾಗಿತ್ತು. ಇದೀಗ ಹೈಕೋರ್ಟಿನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆ ಮಾಡಲಾಗಿದೆ.

    ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಪ್ರಸ್ತುತ 16 ಪ್ರಕರಣಗಳು ಇದ್ದು ಲೋಕಾಯುಕ್ತ ಇಲಾಖೆ ದಾಖಲು ಮಾಡಿರುವ ಪ್ರಕರಣಗಳಿಗೆ ಹೈಕೋರ್ಟಿನಿಂದ ತಡೆಯಾಜ್ಞೆ ಮಾತ್ರ ಸಿಕ್ಕಿದೆ. ಆದರೆ ಇಡೀ ಪ್ರಕರಣವನ್ನು ಖುಲಾಸೆ ಮಾಡಿಲ್ಲ. ಅಲ್ಲದೆ ಸಿಬಿಐ ದಾಖಲು ಮಾಡಿದ ಪ್ರಕರಣದಲ್ಲಿ ಆನಂದ್ ಸಿಂಗ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಹೀಗಿರುವಾಗ ಸರ್ಕಾರ ಆನಂದ್‍ಸಿಂಗ್‍ಗೆ ಅರಣ್ಯ ಖಾತೆ ನೀಡಿರುವುದು ಸರಿಯಲ್ಲ ಎಂದು ವಕೀಲ ವಿಜಯ್‍ಕುಮಾರ್ ಪಿಐಎಲ್ ಸಲ್ಲಿಸಿದ್ದಾರೆ.

    ಮೈನಿಂಗ್ ಮಾಡುತ್ತಿರುವುದನ್ನು ಸ್ವತಃ ಆನಂದ್ ಸಿಂಗ್ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಸಾಕ್ಷ್ಯಾಧಾರ ಇದ್ದರೂ, ಸರ್ಕಾರ ಆನಂದ್ ಸಿಂಗ್‍ಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

    ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಸೇರಿದಂತೆ ಹಲವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿ, ಮರ ಕಡಿದು ಮೈನಿಂಗ್ ಮಾಡುತ್ತಿರುವವರಿಗೆ ಅರಣ್ಯ ಖಾತೆ ನೀಡಲಾಗಿದೆ ಎಂದು ಕಿಡಿಕಾರಿದ್ದರು. ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈ ಕಮಾಂಡ್, ಈ ಕುರಿತು ವರದಿ ಸಲ್ಲಿಸುವಂತೆ ಸಹ ಕೇಳಿತ್ತು. ಈ ಎಲ್ಲದರ ಮಧ್ಯೆ ಇದೀಗ ಪಿಐಎಲ್ ಸಲ್ಲಿಕೆಯಾಗಿದೆ.

  • ಸುದೀಪ್ ವಿರುದ್ಧದ ಕೇಸ್ ವಜಾ

    ಸುದೀಪ್ ವಿರುದ್ಧದ ಕೇಸ್ ವಜಾ

    ಚಿಕ್ಕಮಗಳೂರು: ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ ಮೇಲಿನ ವಿವಾದ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.

    ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ಎಂಬವರು ನಟ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಿಂದೆ ವಾರಸ್ದಾರ ಧಾರಾವಾಹಿ ತಂಡ ನಮ್ಮ ಮನೆಯಲ್ಲಿ ಶೂಟಿಂಗ್ ನಡೆಸುವ ವೇಳೆಯಲ್ಲಿ ನನಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದರು.

    ಈ ಸಂಬಂಧ ಚಿಕ್ಕಮಗಳೂರು 2ನೇ ಹೆಚ್ಚುವರಿ ನ್ಯಾಯಾಲಯ ಸುದೀಪ್‍ಗೆ ವಾರೆಂಟ್ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ನಟ ಸುದೀಪ್ ಪರ ವಕೀಲ ಗೋಪಿನಾಥ್ ಹೈ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಸುದೀಪ್ ಅವರಿಗೆ ಖುಲಾಸೆ ನೀಡಿ ಪ್ರಕರಣವನ್ನು ವಜಾ ಮಾಡಿ ಆದೇಶ ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಸುದೀಪ್ ಪರ ವಕೀಲ ಗೋಪಿನಾಥ್, ಸುದೀಪ್ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಲಾಗಿತ್ತು. ಅಲ್ಲದೇ ದೀಪಕ್ ಮಯೂರ್ ಪಟೇಲ್, ಬೇರೆ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಆ ನಷ್ಟವನ್ನು ನಮ್ಮಿಂದ ಭರಿಸಲು ಪ್ರಯತ್ನಿಸಿದರು. ಆದರೆ ಅದು ಸಫಲವಾಗಿಲ್ಲ, ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ಗೋಪಿನಾಥ್, ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.

    ಘಟನೆ ವಿವರ:
    ಖಾಸಗಿ ವಾಹಿನಿಯಲ್ಲಿ ನಟ ಸುದೀಪ್ ನಿರ್ಮಾಣದ `ವಾರಸ್ದಾರ’ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಗಾಗಿ ಸುದೀಪ್ ಅವರು ಚಿಕ್ಕಮಗಳೂರಿನ ಕಾಫಿ ಎಸ್ಟೇಟನ್ನು ಬಾಡಿಗೆ ಪಡೆದುಕೊಂಡಿದ್ದರು. ಈ ಎಸ್ಟೇಟ್‍ನ ಮಾಲೀಕರೇ ದೀಪಕ್ ಪಟೇಲ್, ಇವರ ಮನೆ ಮತ್ತು ಜಮೀನನ್ನು ಧಾರಾವಾಹಿಗಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಬಾಡಿಗೆ ನೀಡದೇ ಸುದೀಪ್ ವಂಚನೆ ಮಾಡಿದ್ದಾರೆ ಎಂದು ಮಾಲೀಕ ಆರೋಪಿಸಿದ್ದರು.

    ಅಷ್ಟೇ ಅಲ್ಲದೇ ಧಾರಾವಾಹಿಗಾಗಿ ಸುದೀಪ್ ಬಗೆ ಬಗೆಯ ಗಿಡ ಕಡಿದು ಗೆಸ್ಟ್ ಹೌಸ್ ನಿರ್ಮಾಣ ಮಾಡಿದ್ದರು. ಆದರೆ ವಾರಸ್ದಾರ ತಂಡ ಅರ್ಧದಲ್ಲೇ ಶೂಟಿಂಗ್ ಪ್ಯಾಕಪ್ ಮಾಡಿ ಹೋಗಿದ್ದಾರೆ. ಧಾರಾವಾಹಿ ಶುರು ಮಾಡಿದಾಗ ಮೊದಲು 50 ಸಾವಿರ ಕೊಟ್ಟಿದ್ದರು. ನಂತರ 1 ಲಕ್ಷ 80 ರೂ. ಸಾವಿರ ಕೊಟ್ಟಿದ್ದಾರೆ. ಆದರೆ ಈಗ ಧಾರಾವಾಹಿ ನಿಂತು 7 ತಿಂಗಳಾಗಿದೆ. ಈಗ ಇದರಿಂದ ಚಿತ್ರ ತಂಡ ಸುಮಾರು 90 ಲಕ್ಷ ರೂ. ಮೌಲ್ಯದ ನಷ್ಟ ಮಾಡಿದೆ ಎಂದು ಆರೋಪಿಸಿದ್ದ ದೀಪಕ್ ಫಿಲ್ಮ್ ಚೇಂಬರಿಗೆ ದೂರು ಸಹ ನೀಡಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಅಂದು ಮಾತನಾಡಿದ ಮಾಲೀಕ ದೀಪಕ್, ಗೆಸ್ಟ್ ಹೌಸ್ ನಿರ್ಮಾಣಕ್ಕಾಗಿ ನನ್ನ ಕಾಫಿ ತೋಟವನ್ನು ನಾಶ ಮಾಡಿದ್ದಾರೆ. ನಾನು ಸಾಲ ಮಾಡಿ ಎಲ್ಲವನ್ನು ರೆಡಿ ಮಾಡಿಸಿದ್ದೇನೆ. ಈಗ ನಮಗೆ ಬರೋಬ್ಬರಿ 1 ಕೋಟಿ ರೂ. ಮೇಲೆ ಅಧಿಕವಾಗಿ ನಷ್ಟವಾಗಿದೆ. ನಾನು ಸುದೀಪ್ ಅಭಿಮಾನಿ ಅವರ ಮನವಿ ಮಾಡಿಕೊಂಡಿದ್ದಕ್ಕೆ ಜಾಗ ಬಿಟ್ಟುಕೊಟ್ಟಿದೆ. ಆದರೆ ಸರಿಯಾಗಿ ಟಿ.ಆರ್.ಪಿ ಬಂದಿಲ್ಲ ಎಂದು ಬಾಡಿಗೆಯನ್ನು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

  • ಕಾನೂನು ಕಸರತ್ತಿಗೆ ಒಂದೇ ವಾರ ಟೈಮ್ – ನಿರ್ಭಯಾ ಅತ್ಯಾಚಾರಿಗಳಿಗೆ ಹೈಕೋರ್ಟ್ ಡೆಡ್‍ಲೈನ್

    ಕಾನೂನು ಕಸರತ್ತಿಗೆ ಒಂದೇ ವಾರ ಟೈಮ್ – ನಿರ್ಭಯಾ ಅತ್ಯಾಚಾರಿಗಳಿಗೆ ಹೈಕೋರ್ಟ್ ಡೆಡ್‍ಲೈನ್

    ನವದೆಹಲಿ: ಗಲ್ಲು ಶಿಕ್ಷೆಯಿಂದ ಪಾರಾಗಲು ದಿನಕ್ಕೊಂದು ನೆಪವೊಡ್ಡಿ ಕಾನೂನು ಕಸರತ್ತು ಮಾಡುತ್ತಿರುವ ನಿರ್ಭಯಾ ಅತ್ಯಾಚಾರಿಗಳಿಗೆ ದೆಹಲಿ ಹೈಕೋರ್ಟ್ 1 ವಾರ ಕಾಲಾವಕಾಶ ನೀಡಿದೆ. ಆ ಬಳಿಕ ಅತ್ಯಾಚಾರಿಗಳನ್ನು ಗಲ್ಲಿಗೇರಿಸೋದು ಖಚಿತವೆಂದು ಹೈಕೋರ್ಟ್ ತಿಳಿಸಿದೆ.

    ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ಅನಿರ್ಧಿಷ್ಟಾವಧಿ ತಡೆ ನೀಡಿ ಕೆಳ ಹಂತದ ನ್ಯಾಯಾಲಯ ಕೆಲವು ದಿನಗಳ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಒಂದು ವಾರದ ಒಳಗೆ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸುವಂತೆ ಸೂಚಿಸಿದೆ. ಆ ಬಳಿಕ ಅಪರಾಧಿಗಳು ಏನೇ ಕಸರತ್ತು ಮಾಡಿದರು ಪ್ರಯೋಜನಕ್ಕಿಲ್ಲ, ಗಲ್ಲು ಶಿಕ್ಷೆಯ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ವಿಚಾರಣಾ ನ್ಯಾಯಾಲಯ ಹೇಳಿದೆ.

    ವಿಚಾರಣೆ ವೇಳೆ ನ್ಯಾ. ಸುರೇಶ್ ಕೇತ್, ಒಬ್ಬ ಅಪರಾಧಿಯ ಕ್ಷಮಾದಾನ ಅರ್ಜಿ ಬಾಕಿ ಉಳಿದಿದ್ದರೆ, ಇತರೆ ಅಪರಾಧಿಗಳನ್ನು ನೇಣಿಗೇರಿಸಬಹುದು ಎಂದು ದೆಹಲಿ ಜೈಲು ನಿಯಮಗಳು ಹೇಳುವುದಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಅಪರಾಧಿಗಳ ಹಣೆ ಬರಹ ಒಂದೇ ತೀರ್ಪಿನಿಂದ ನಿರ್ಧಾರವಾಗಿದೆ. ಎಲ್ಲಾ ಅಪರಾಧಿಗಳ ಗಲ್ಲು ಒಟ್ಟಾಗಿ ಜಾರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ತೀರ್ಪಿನ ನಂತರ ನಿರ್ಭಯಾ ತಾಯಿ ಆಶಾ ದೇವಿ ಪ್ರತಿಕ್ರಿಯಿಸಿ, ಪ್ರಕ್ರಿಯೆಗೆ ಹೈಕೋರ್ಟ್ ಗಡುವು ನೀಡಿರುವುದಕ್ಕೆ ಖುಷಿಯಾಗಿದೆ. ಅಪರಾಧಿಗಳು ಗಲ್ಲು ಶಿಕ್ಷೆಯ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದರು. ಇದೀಗ ಇದನ್ನು ಒಂದು ವಾರದ ಒಳಗೆ ಮುಗಿಸಬೇಕಾಗಿದೆ. ಇದು ಸಂತಸದ ವಿಚಾರ ಎಂದರು.

    ಈ ಹಿಂದೆ ಫೆ. 1ರಂದು ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೆ ಏರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ ರಾಷ್ಟ್ರಪತಿಗಳ ತೀರ್ಮಾನ ಪ್ರಕಟವಾಗದ ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು.

    ಇನ್ನೊಂದೆಡೆ ಮತ್ತೋರ್ವ ದೋಷಿ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹೀಗಾಗಿ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರಿಂ ಕೋರ್ಟ್‍ಗೆ ಮತ್ತೊಮ್ಮೆ ಮನವಿ ಮಾಡಿದ್ದನು. ಈ ಹಿಂದೆಯೇ ತ್ರಿಸದಸ್ಯ ಪೀಠ ಪವನ್ ಅರ್ಜಿಯನ್ನು ತಿರಸ್ಕೃತ ಮಾಡಿತ್ತು. ಹೀಗಾಗಿ ಸುಪ್ರೀಂಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದನು.

    ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಕಳೆದ ಬುಧವಾರ ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿತ್ತು. ಮುಖೇಶ್ ನಂತೆಯೇ ಉಳಿದ ಅಪರಾಧಿಗಳು ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಏರುವುದಕ್ಕೆ ವಿಳಂಬ ಮಾಡುವ ತಂತ್ರ ಮಾಡುತ್ತಿದ್ದಾರೆ. ಆದರೆ ಅಪರಾಧಿಗಳು ಏನೇ ಮಾಡಿದರೂ ಗಲ್ಲು ಶಿಕ್ಷೆಯನ್ನು ಮಾತ್ರ ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

  • ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಫೆಬ್ರವರಿ 5ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.

    ನಿತ್ಯಾನಂದ ಆಧ್ಯಾತ್ಮದ ಹೆಸರಿನಲ್ಲಿ ಚಾತುರ್ಮಾಸ ಅಂತ ಊರು ಬಿಟ್ಟಿದ್ದಾನೆ. ಹೀಗೆ ಊರು ಬಿಟ್ಟವನಿಗೆ ಪೊಲೀಸರು ರಕ್ಷಣೆಯನ್ನು ನೀಡುವ ಹಾಗಿಲ್ಲ. ಹೀಗಿರುವಾಗ ಕಾನೂನಿನ ರಕ್ಷಣೆಯನ್ನು ಕೊಡಬಾರದು, ಕೂಡಲೇ ನಿತ್ಯಾನಂದನ ಜಾಮೀನು ವಜಾಗೊಳಿಸುವಂತೆ ಲೆನಿನ್ ಪರ ವಕೀಲರು ಇಂದು ಹೈ ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನಿತ್ಯಾನಂದ ಇಲ್ಲದೇ ಇರುವ ಕಾರಣ ಆತನ ಪ್ರಕರಣಕ್ಕೇನು ತೊಂದರೆ ಆಗಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಅದರ ಪಾಡಿಗೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಪ್ರಕರಣದ ದೋಷಾರೋಪ ಪಟ್ಟಿಯೂ ತಯಾರಾಗಿದ್ದು, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ನಿತ್ಯಾನಂದನ ಅವಶ್ಯಕತೆಯಿಲ್ಲ. ಪದೇ ಪದೇ ಕೋರ್ಟಿನಲ್ಲಿ ಆತ ಇರೋದು ಬೇಕಾಗಿಲ್ಲ ಎಂದು ನಿತ್ಯಾನಂದ ಪರ ವಕೀಲರು ವಾದ ಮಂಡಿಸಿದರು.

    ಆದರೆ ನಿತ್ಯಾನಂದನ ಪಾಸ್‍ಪೋರ್ಟ್ ಕಾಲಾವಧಿ ಮುಕ್ತಾಯ ಆಗಿದ್ದರೂ ಕೂಡ ಆತ ದೇಶ ಬಿಟ್ಟು ಹೋಗಿದ್ದಾನೆ. ಪೊಲೀಸರು ಆ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಹೇಳುತ್ತಿಲ್ಲ. ಪಾಸ್‍ಪೋಟ್ ಇಲ್ಲದೇ ದೇಶ ಬಿಟ್ಟು ಹೋಗಿರೋದು ದೇಶದ್ರೋಹ. ಅತ್ಯಾಚಾರಿ ಓರ್ವ ದೇಶ ಬಿಟ್ಟಿರೋದೇ ಅಪರಾಧ. ಹೀಗಾಗಿ ನಿತ್ಯಾನಂದನ ಜಾಮೀನು ರದ್ದು ಮಾಡುವಂತೆ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಫೆಬ್ರವರಿ 5ಕ್ಕೆ ಈ ಸಂಬಂಧ ಆದೇಶ ಕಾಯ್ದಿರಿಸಿದೆ.

  • ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಹೈಕೋರ್ಟ್ ಸಮನ್ಸ್ ನೀಡಿದೆ.

    ನಿತ್ಯಾನಂದ ಸ್ವಾಮಿ ಜಾಮೀನು ರದ್ದತಿ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಸಮನ್ಸ್ ಜಾರಿ ಮಾಡಿದೆ.

    ಅರ್ಜಿ ವಿಚಾರಣೆ ವೇಳೆ ನಿತ್ಯಾನಂದನಿಗೆ ಎಷ್ಟು ಬಾರಿ ಸಮನ್ಸ್ ನೀಡಲಾಗಿದೆ. ಎಷ್ಟು ಬಾರಿ ವಿಚಾರಣೆಗೆ ಹಾಜರಾಗಿದ್ದಾನೆ ಎಂಬ ಪ್ರಶ್ನೆ ಹಾಕಿತ್ತು. ಇದಕ್ಕೆ ಉತ್ತರಿಸಿದ ಲೆನಿನ್ ಪರ ವಕೀಲರು, ನಿತ್ಯಾನಂದನಿಗೆ 45 ಬಾರಿ ಸಮನ್ಸ್ ನೀಡಲಾಗಿದೆ 45 ಬಾರಿ ವಿಚಾರಣೆಗೆ ನಿತ್ಯಾನಂದ ಗೈರು ಹಾಜರಾಗಿದ್ದಾರೆ. ನಿತ್ಯಾನಂದ ಭಾರತದಿಂದ ಪರಾರಿಯಾಗಿ ಒಂದೂವರೆ ವರ್ಷ ಕಳೆದಿದೆ ಎಂದು ಮಾಹಿತಿ ನೀಡಿದರು.

    ನಿತ್ಯಾನಂದನಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್, ರಾಜ್ಯ ಸರ್ಕಾರ, ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ನಿತ್ಯಾನಂದನ ಪ್ರಕರಣ ಬಗ್ಗೆ ಉತ್ತರ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಿತ್ಯಾನಂದ ಕಳೆದ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ದೂರುದಾರ ಲೆನಿನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.

  • ಸಾಗರಮಾಲಾ ಬಂದರು ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಕೋರ್ಟ್ ತಡೆ

    ಸಾಗರಮಾಲಾ ಬಂದರು ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಕೋರ್ಟ್ ತಡೆ

    – ಪ್ರತಿಭಟನೆ ಹಿಂಪಡೆದ ಕಡಲ ಮಕ್ಕಳು

    ಕಾರವಾರ: ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಗೆ ಅಡಿ ಆರಂಭಿಸಲಾಗಿದ್ದ 2ನೇ ಹಂತದ ಬಂದರು ವಿಸ್ತರಣೆ ಕಾಮಗಾರಿಗೆ ತಡೆ ನೀಡಿ ಹೈಕೋರ್ಟ್ ಆದೇಶ ನೀಡಿದೆ.

    ಕಳೆದ ನಾಲ್ಕು ದಿನದ ಹಿಂದೆ ಬೈತಕೋಲ್ ಬಂದರು ನಿರಾಶ್ರಿತರ ಯಾಂತ್ರಿಕ ದೋಣಿ ಮೀನುಗಾರರ ಸಹಕಾರಿ ಸಂಘದಿಂದ ಬಂದರು ವಿಸ್ತರಣೆ ಕಾಮಗಾರಿ ಪ್ರಶ್ನಿಸಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇಂದು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್ ಬಂದರು ವಿಸ್ತರಣೆ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಿದ್ದು, ಮುಂದಿನ ಆದೇಶದವರೆಗೂ ಯತಾಸ್ಥಿತಿ ಕಾಪಾಡುವಂತೆ ಸೂಚಿಸಿದೆ.

    ಸಾಗರ ಮಾಲಾ ಯೋಜನೆಯನ್ನು ಅನುಷ್ಟಾನ ವಾದ ನಂತರ ಕಾರವಾರ ಬಂದರು ವಿಸ್ತರಣೆಗಾಗಿ ಮೊದಲ ಹಂತದ 126 ಕೋಟಿ ರೂ.ಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡುಸಿ ನಿರಂತರವಾಗಿ 10 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಉಗ್ರ ರೂಪ ಪಡೆದು 200ಕ್ಕೂ ಹೆಚ್ಚು ಜನರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಸದ್ಯ ಈ ಯೋಜನೆ ಕಾಮಗಾರಿಗೆ ತಾತ್ಕಾಲಿಕ ತಡೆ ಸಿಕ್ಕಿದ್ದು ಕಡಲ ಮಕ್ಕಳು ಹರ್ಷ ವ್ಯಕ್ತಪಡಿಸಿದ್ದಾರೆ.

  • ರಸ್ತೆಗುಂಡಿ ಅಪಘಾತಕ್ಕೆ ಪಾಲಿಕೆಯೇ ಹೊಣೆ: ಸುಪ್ರೀಂಕೋರ್ಟ್

    ರಸ್ತೆಗುಂಡಿ ಅಪಘಾತಕ್ಕೆ ಪಾಲಿಕೆಯೇ ಹೊಣೆ: ಸುಪ್ರೀಂಕೋರ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಗ್ಗು-ಗುಂಡಿಗಳ ಸಂಖ್ಯೆ ಕಡಿಮೆ ಏನಿಲ್ಲ. ಹೆಜ್ಜೆ ಹೆಜ್ಜೆಗೂ ತಗ್ಗು ಗುಂಡಿಗಳ ದರ್ಶನ ಆಗುತ್ತೆ. ತಗ್ಗು ಗುಂಡಿಗಳ ಸಮಸ್ಯೆಯಿಂದ ಅದೆಷ್ಟೋ ವಾಹನ ಸವಾರರು ದ್ವಿಚಕ್ರ ವಾಹನಗಳಿಂದ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿರುವ ಪ್ರಸಂಗಗಳು ಕೂಡ ನಡೆದಿವೆ.

    ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಉಂಟಾಗುತ್ತಿರುವ ಅಪಘಾತಗಳಿಗೆ ಬಿಬಿಎಂಪಿ ಹೊಣೆ ಎಂಬ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

    ರಸ್ತೆ ಗುಂಡಿ ವಿಚಾರವಾಗಿ ರಾಜ್ಯ ಹೈಕೋರ್ಟ್, ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ರಸ್ತೆ ಅಪಘಾತಕ್ಕೆ ಸಂಬಂಧಿಸಿ ಅನೇಕರು ನಮ್ಮಲ್ಲಿ ಪರಿಹಾರ ಕೇಳುತ್ತಾರೆ. ಆದರೆ ಆ ಪ್ರಕರಣ ನಿಭಾಯಿಸುವ ವ್ಯವಸ್ಥೆ, ಸಂಪನ್ಮೂಲ ನಮ್ಮಲ್ಲಿಲ್ಲ ಎಂದು ಅರ್ಜಿಯಲ್ಲಿ ಬಿಬಿಎಂಪಿ ತಿಳಿಸಿತ್ತು.

    ಈ ವಾದವನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್, ರಸ್ತೆ ನಿರ್ವಹಣೆ ನಿರ್ಲಕ್ಷ್ಯದಿಂದ ಉಂಟಾಗುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಜವಬ್ದಾರಿ ಪಾಲಿಕೆಯದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ. ರಸ್ತೆಯಲ್ಲಿ ಗುಂಡಿಗಳು ಇರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹೈಕೋರ್ಟ್ ಆದೇಶದಲ್ಲಿ ನ್ಯೂನತೆ ಏನಿದೆ ಎಂಬುದನ್ನು ನೀವು ತೋರಿಸಿ ಎಂದು ನ್ಯಾ. ರೋಹಿಂಟನ್ ನಾರಿಮನ್ ಮತ್ತು ನ್ಯಾ. ರವೀಂದ್ರ ಭಟ್ ಇದ್ದ ನ್ಯಾಯಪೀಠ ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿ ಅರ್ಜಿಯನ್ನು ರದ್ದುಗೊಳಿಸಿತ್ತು.

    ಅಪಘಾತಕ್ಕೆ ಬಿಬಿಎಂಪಿ ಪರಿಹಾರ ನೀಡಬೇಕು ಎನ್ನುವುದಾದರೆ ಬೊಕ್ಕಸಕ್ಕೆ ಭಾರೀ ನಷ್ಡವಾಗುತ್ತದೆ. ಇದನ್ನು ಭರಿಸುವುದು ಕಷ್ಟಕರ. ಯಾವ ತಪ್ಪು ಮಾಡದಿದ್ದರೂ ಬಿಬಿಎಂಪಿ ಪರಿಹಾರ ನೀಡಬೇಕು ಎಂಬುದು ಸರಿಯಲ್ಲ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಧಿಕಾರ ಮೀರಿ ನಡೆದುಕೊಂಡಿದೆ ಎಂದು ಬಿಬಿಎಂಪಿ ವಾದಿಸಿತ್ತು.

  • ಹೈಕೋರ್ಟ್ ಆವರಣದಲ್ಲಿ ಸಿಎಎ ಬೆಂಬಲಿಸಿ ಸಮರ್ಥನಾ ಸಭೆ

    ಹೈಕೋರ್ಟ್ ಆವರಣದಲ್ಲಿ ಸಿಎಎ ಬೆಂಬಲಿಸಿ ಸಮರ್ಥನಾ ಸಭೆ

    ಬೆಂಗಳೂರು: ಇಂದು ಮಧ್ಯಾಹ್ನ ಬೆಂಗಳೂರು ಉಚ್ಚ ನ್ಯಾಯಾಲಯದ ದ್ವಾರದ ಬಳಿ ಹಿಂದೂ ವಿದಿಜ್ಞ ಪರಿಷತ್ ಮತ್ತು ಅದಿವಕ್ತಾ ಪರಿಷತ್ ಜಂಟಿಯಾಗಿ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಸಮರ್ಥನಾ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

    ಈ ಸಭೆಯಲ್ಲಿ ಹಿಂದೂ ವಿದಿಜ್ಞ ಪರಿಷತ್ ವಕೀಲರಾದ ಜಿ. ಎಮ್ ನಟರಾಜ, ಪ್ರಸನ್ನ ಡಿ.ಪಿ, ರುದ್ರಪ್ಪ, ಆದಿತ್ಯ ಮತ್ತು ಅಧಿವಕ್ತಾ ಪರಿಷತ್‍ನ ವಿವೇಕ ರೆಡ್ಡಿ ಸೇರಿ ನೂರಾರು ವಕೀಲರು ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಘೋಷಣೆಯನ್ನು ಕೂಗಿ ಬೆಂಬಲ ಸೂಚಿಸಿದರು.

    ಈ ಬಗ್ಗೆ ವಿವೇಕ ರೆಡ್ಡಿಯವರು ಮಾತನಾಡಿ, ಇದು ಕೇಂದ್ರ ಸರ್ಕಾರದ ಮಹತ್ವದ ಕಾಯ್ದೆ ಇದಾಗಿದ್ದು, ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ಥಾನದಲ್ಲಿ ಇರುವ ದಲಿತರಿಗೆ, ನೊಂದ ಮಹಿಳೆಯರಿಗೆ ಮಾನವೀಯತೆಯ ಆಧಾರದ ಮೇಲೆ ಪೌರತ್ವ ನೀಡುವ ಕಾಯ್ದೆಯಾಗಿದೆ. ಪ್ರತಿಯೊಬ್ಬರು ಇದನ್ನು ಗೌರವಿಸಬೇಕೇ ವಿನಃ ಇದನ್ನು ವಿರೋಧ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿದರು.