Tag: high court

  • ಬಿಜೆಪಿಗೆ ಭಾರೀ ಮುಖಭಂಗ – ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ

    ಬಿಜೆಪಿಗೆ ಭಾರೀ ಮುಖಭಂಗ – ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ

    – ಚೂಡಾಸಮಾ ಗೆಲುವನ್ನು ರದ್ದುಗೊಳಿಸಿದ ಹೈಕೋರ್ಟ್
    – ಮತ ಎಣಿಕೆಯ ವೇಳೆ ಅಕ್ರಮ

    ಅಹಮದಾಬಾದ್: ಗುಜರಾತ್ ನಲ್ಲಿರುವ ಬಿಜೆಪಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಸಚಿವರಾಗಿರುವ ಭೂಪೇಂದ್ರ ಸಿಂಹ ಚೂಡಾಸಮಾ ಅವರ ಚುನಾವಣಾ ಗೆಲುವನ್ನು ಹೈಕೋರ್ಟ್ ರದ್ದುಗೊಳಿಸಿದೆ.

    2017ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಭೂಪೇಂದ್ರ ಸಿಂಹ ಚೂಡಾಸಮಾ ಗೆದ್ದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾ. ಪರೇಶ್ ಉಪಾಧ್ಯಾಯ ನೇತೃತ್ವದ ಪೀಠ ಮತ ಎಣಿಕೆಯ ವೇಳೆ ಅಕ್ರಮ ನಡೆದಿದೆ ಎಂದು ಅಭಿಪ್ರಾಯಪಟ್ಟು ಗೆಲುವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭೂಪೇಂದ್ರ ಸಿಂಹ ಚೂಡಾಸಮಾ ಅವರಿಗೆ ಶಿಕ್ಷಣ, ಕಾನೂನು ಮತ್ತು ನ್ಯಾಯ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಆದರೆ ಈಗ ಚೂಡಾಸಮಾ  ಅವರ ಗೆಲುವನ್ನು ರದ್ದುಗೊಳಿಸುವ ಮೂಲಕ  ವಿಜಯ್ ರೂಪಾನಿ ಸರ್ಕಾರಕ್ಕೆ ಮುಖಭಂಗವಾಗಿದೆ.

    ಏನಿದು ಪ್ರಕರಣ?
    2017ರ ಚುನಾವಣೆಯಲ್ಲಿ ದೋಲ್ಕಾ ವಿಧಾನಸಭಾ ಕ್ಷೇತ್ರದಿಂದ ಕೇವಲ ಭೂಪೇಂದ್ರ ಸಿಂಹ ಚೂಡಾಸಮಾ ಗೆದ್ದಿದ್ದರು. ಕೇವಲ 327 ಮತಗಳಿಂದ ಗೆದ್ದಿದ್ದ ಇವರ ಮೇಲೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಥೋಡ್ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

    ಮತ ಎಣಿಕೆಯ ವೇಳೆ ರಿಟರ್ನಿಂಗ್ ಆಫೀಸರ್ ಅಕ್ರಮವಾಗಿ 429 ಅಂಚೆ ಮತಗಳನ್ನ ಎಣಿಕೆ ನಡೆಸದೇ ತಿರಸ್ಕೃತಗೊಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ನಡೆಸಲಾಗಿದೆ. ಒಟ್ಟು 1,59,946 ಮಂದಿ ಮತ ಹಾಕಿದ್ದರೆ, ಚುನಾವಣಾಧಿಕಾರಿ 1,59,917 ಮತಗಳನ್ನು ಮಾತ್ರ ಪರಿಗಣಿಸಿ ಫಲಿತಾಂಶ ಪ್ರಕಟಿಸಿದ್ದಾರೆ. 29 ಮತಗಳನ್ನು ಎಣಿಕೆಗೆ ಪರಿಗಣಿಸಿಲ್ಲ. ಮತ ಎಣಿಕಾ ಅಧಿಕಾರಿ ಮೇಲೆ ಚೂಡಾಸಮಾ ತಮ್ಮ ಪ್ರಭಾವ ಬಳಸಿ ತನ್ನ ಪರವಾಗಿ ಫಲಿತಾಂಶ ಬರುವಂತೆ ನೋಡಿಕೊಂಡಿದ್ದಾರೆ. ಅಕ್ರಮ ಎಸಗಿ ಗೆದ್ದಿರುವ ಚುಡಾಸಮಾ ಅವರ ಗೆಲುವನ್ನು ರದ್ದುಗೊಳಿಸಬೇಕೆಂದು ಅಶ್ವಿನ್ ರಾಥೋಡ್ ಪರ ವಕೀಲರು ಕೋರ್ಟಿನಲ್ಲಿ ವಾದಿಸಿದ್ದರು.

    ತೀರ್ಪಿಗೆ ಆಧಾರ ಏನು?
    ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಬರುವ ಎಲ್ಲ ಚುನಾವಣೆಗಳ ಮತ ಎಣಿಕೆಯನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ. ಬಿಜೆಪಿ ಶಾಸಕರು ಚುನಾವಣೆತಯಲ್ಲಿ ಅಕ್ರಮ ನಡೆದಿಲ್ಲ ಎಂದು ವಾದಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ ಎಣಿಕೆಯ ಸಿಸಿಟಿವಿ ವಿಡಿಯೋವನ್ನು ನೀಡುವಂತೆ ಸೂಚಿಸಿತ್ತು. ಹಲವು ಬಾರಿ ಸೂಚಿಸಿದ ಬಳಿಕ ಸಿಸಿಟಿವಿ ವಿಡಿಯೋ ಸಲ್ಲಿಕೆಯಾಗಿತ್ತು. ಆದರೂ ಪೂರ್ಣ ಪ್ರಮಾಣದ ದೃಶ್ಯ ಇಲ್ಲದೇ ಕತ್ತರಿ ಹಾಕಿದ್ದ ದೃಶ್ಯಾವಳಿಗಳು ಇದರಲ್ಲಿತ್ತು. ಅಷ್ಟೇ ಅಲ್ಲದೇ ಸಲ್ಲಿಕೆಯಾಗಿದ್ದ ವಿಡಿಯೋದಲ್ಲಿ ಚೂಡಾಸಮಾ ಅವರ ಆಪ್ತ ಸಹಾಯಕ ಮತ ಎಣಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಅಕ್ರಮವಾಗಿ ಓಡಾಟ ನಡೆಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಎಲ್ಲ ಸಾಕ್ಷ್ಯಗಳನ್ನು ಪರಿಗಣಿಸಿದ ಕೋರ್ಟ್ ಚೂಡಾಸಮಾ ಅವರ ಗೆಲುವನ್ನು ಅಕ್ರಮ ಎಂದು ಹೇಳಿ ರದ್ದುಗೊಳಿಸಿದೆ.

    ಮುಂದೆ ಏನು?
    ಹೈಕೋರ್ಟ್ ಗೆಲುವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಚೂಡಾಸಮಾ ಅವರು ಶಾಸಕರಾಗಿ ಮುಂದುವರಿಯಲು ಸಾಧ್ಯವಿಲ್ಲ. ಆದರೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಡೆ ನೀಡುವಂತೆ ಕೇಳಬಹುದು. ಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿದರೆ ಚೂಡಾಸಮಾ ಮಂತ್ರಿಯಾಗಿ ಮುಂದುವರಿಯಬಹುದು.

  • ಸೀಜ್ ಅದ ವಾಹನಗಳಿಗೆ ದಂಡ ವಿಧಿಸಲು ಸೂಚಿಸಿದ ಹೈಕೋರ್ಟ್ – ಯಾವ ವಾಹನಕ್ಕೆ ಎಷ್ಟು ಫೈನ್?

    ಸೀಜ್ ಅದ ವಾಹನಗಳಿಗೆ ದಂಡ ವಿಧಿಸಲು ಸೂಚಿಸಿದ ಹೈಕೋರ್ಟ್ – ಯಾವ ವಾಹನಕ್ಕೆ ಎಷ್ಟು ಫೈನ್?

    ಬೆಂಗಳೂರು: ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.

    ಇಂದು ಬೆಳಗ್ಗೆ ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್ ಸೀಜ್ ಆದ ವಾಹನಗಳಿಗೆ ಫೈನ್ ಹಾಕಿ ನಂತರ ಬಿಡುಗಡೆ ಮಾಡುವಂತೆ ಸೂಚಿಸಿದೆ.

    ಹೈಕೋರ್ಟ್ ನೀಡಿರುವ ಆದೇಶದಲ್ಲಿ ಲಾಕ್‍ಡೌನ್ ವೇಳೆ ಸೀಜ್ ಮಾಡಲಾದ ವಾಹನಗಳಿಗೆ ಫೈನ್ ಹಾಕಿ ರಿಲೀಸ್ ಮಾಡಬೇಕು. ಅದರಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಒಂದು ಸಾವಿರ ದಂಡ ಮತ್ತು ದ್ವಿಚಕ್ರ ಮತ್ತು ಆಟೋ ರಿಕ್ಷಾಗಳಿಗೆ 500 ದಂಡ ವಿಧಿಸಬೇಕು. ಜೊತೆಗೆ ಇನ್ಶೂರೆನ್ಸ್ ಸೇರಿದಂತೆ ವಾಹನದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ವಾಹನಗಳನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.

    ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಭಾಸ್ಕರ್ ರಾವ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದರು.

    ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರು.

    ನಿನ್ನೆ, ಮೊನ್ನೆ ಸೀಜ್ ಮಾಡಿದ ವಾಹನಗಳನ್ನು ನಾಳೆಯೇ ರಿಲೀಸ್ ಮಾಡುವುದಿಲ್ಲ. ಮಾರ್ಚ್ 30ರಂದು ಸೀಜ್ ಆದ ವಾಹಗಳನ್ನ ಮೊದಲು ಬಿಡುಗಡೆ ಮಾಡುತ್ತೇವೆ. ಆ ಬಳಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರಂತೆ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡುತ್ತೇವೆ. ಜೊತೆಗೆ ಕೋರ್ಟ್ ಫೈನ್ ನೋಡಿಕೊಂಡು ಆ ನಿಯಮದ ಪ್ರಕಾರ ಆಯಾಯ ಪೊಲೀಸ್ ಠಾಣೆಗಳಲ್ಲೇ ವಾಹನಗಳನ್ನು ರಿಲೀಸ್ ಮಾಡಲಾಗುವುದು ಎಂದಿದ್ದರು.

    ಇನ್ನುಮುಂದೆ ವಾಹನಗಳನ್ನು ಸೀಜ್ ಮಾಡಲ್ಲ ಎಂದುಕೊಂಡರೆ ಅದು ತಪ್ಪು. ಇವತ್ತು ಕೂಡ ನಾವು ವಾಹನಗಳನ್ನು ವಶಕ್ಕೆ ಪಡೆಯಬಹುದು. ಲಾಕ್‍ಡೌನ್ ಸಂಪೂರ್ಣವಾಗಿ ತೆಗೆಯುವವರೆಗೂ ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಬಾಸ್ಕರ್ ರಾವ್ ಅವರು ಎಚ್ಚರಿಕೆ ಕೂಡ ನೀಡಿದ್ದರು.

  • ಮದ್ಯದ ದೊರೆ ಮಲ್ಯಗೆ ಮತ್ತೊಮ್ಮೆ ಸೋಲು

    ಮದ್ಯದ ದೊರೆ ಮಲ್ಯಗೆ ಮತ್ತೊಮ್ಮೆ ಸೋಲು

    ನವದೆಹಲಿ: ಭಾರತದ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಲಂಡನ್ ಸೇರಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಸೋಲಾಗಿದೆ. ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಇಂದು ತಿರಸ್ಕರಿಸಿದೆ.

    ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ಟೀಫನ್ ಒರ್ವಿನ್ ಮತ್ತು ಎಲಿಜಬೆತ್ ಲೇಯಿಂಗ್ ಅವರಿದ್ದ ದ್ವಿಸದಸ್ಯ ಪೀಠ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದೆ.

    ಪ್ರಕರಣಕ್ಕೆ ಸಂಬಂಧ ಜಿಲ್ಲಾ ಹಿರಿಯ ನ್ಯಾಯಾಧೀಶರು ಕಂಡುಕೊಂಡಿರುವ ಪ್ರಾಥಮಿಕ ಅಂಶವು ಕೆಲವು ವಿಷಯಗಳಲ್ಲಿ ಭಾರತದ ಪ್ರತಿವಾದಿಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮಾಡಿರುವ ಆರೋಪಗಳಿಗಿಂತಲೂ ವಿಸ್ತಾರವಾಗಿವೆ. ಈ ಅಂಶವು ಭಾರತ ಮಾಡಿರುವ ಏಳು ಆರೋಪಗಳಿಗೆ ಹೊಂದಿಕೆಯಾಗುತ್ತಿದ್ದು, ಮಲ್ಯ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲು ಯಾವುದೇ ಪ್ರಮುಖ ಅಂಶಗಳಿಲ್ಲ ಎಂದು ಪೀಠ ಹೇಳಿದೆ.

    ಸುಮಾರು 9,000 ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು 2018ರ ಡಿಸೆಂಬರ್‌ನಲ್ಲಿ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ನ್ಯಾಯಾಲಯ ಆದೇಶ ನೀಡಿತ್ತು. ಮಲ್ಯ ಗಡಿಪಾರಿಗೆ 2019ರ ಫೆಬ್ರವರಿಯಲ್ಲಿ ಬ್ರಿಟನ್ ಸರ್ಕಾರ ಸಮ್ಮತಿ ನೀಡಿತ್ತು. ಬಳಿಕ ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಅರ್ಜಿ ಕೂಡ ವಜಾ ಆಗಿದ್ದು, ಮಲ್ಯ ಮತ್ತಷ್ಟು ಸಂಕಷ್ಟ ಸಿಲುಕಿದ್ದಾರೆ.

  • ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ದಂಡ

    ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ದಂಡ

    ಬೆಂಗಳೂರು: ಲಾಕ್‍ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದ ಮನೋವೈದ್ಯರಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ.

    ಕೊರೊನಾ ವೈರಸ್ ಹಾವಳಿ ತಡೆಗಟ್ಟುವ ಸಂಬಂಧ ದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು ಎಲ್ಲ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ. ಕರ್ನಾಟಕದಲ್ಲೂ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಖ್ಯಾತ ಮನೋವೈದ್ಯ ವಿನೋದ್ ಕುಲಕರ್ಣಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪಿಐಎಲ್ ಸಲ್ಲಿಸಿದ್ದರು.

    ಮುಖ್ಯ ನ್ಯಾ. ಎ.ಎಸ್.ಒಕಾ, ನ್ಯಾ.ಬಿ.ವಿ.ನಾಗರತ್ನರವ ದ್ವಿಸದಸ್ಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿ 10 ಸಾವಿರ ರೂ. ದಂಡವನ್ನು ವಿಧಿಸಿದೆ. ಈ ದಂಡದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಲಾಗಿದೆ.

    ಈ ಸಂದರ್ಭದಲ್ಲಿ ಆಹಾರ, ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಆದ್ಯತೆ ನೀಡಬೇಕು. ಆದರೆ ವೈದ್ಯರಾಗಿ ಮದ್ಯದ ಬಗ್ಗೆ ಕಾಳಜಿ ತೋರಿಸಿದ್ದು ಸರಿಯಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

    ಮದ್ಯ ನಿಷೇಧದಿಂದಾಗಿ ಮದ್ಯಪಾನ ಮಾಡುವವರು ಖಿನ್ನತೆಗೆ ಜಾರುತ್ತಿದ್ದಾರೆ. ಇದರಿಂದ ಆತ್ಮಹತ್ಯೆ ಹೆಚ್ಚಾಗುತ್ತದೆ. ಖಿನ್ನತೆಗೆ ಜಾರುವುದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

  • ಮಾಜಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ – ಮುನಿರಾಜು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾ

    ಮಾಜಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ – ಮುನಿರಾಜು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾ

    ಬೆಂಗಳೂರು: ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪರಾಜಿತ ಅಭ್ಯರ್ಥಿ ಮುನಿರಾಜು ತನ್ನನ್ನು ಶಾಸಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಹೀಗಾಗಿ ಚುನಾವಣೆ ನಡೆಸಲು ಆದೇಶಿಸಲು ಬರುವುದಿಲ್ಲ. ಆದರೆ ಆರ್.ಆರ್. ಕ್ಷೇತ್ರದ ಜನಪ್ರತಿನಿಧಿ ಇಲ್ಲದೆ ಇರುವುದು ಸೂಕ್ತವಲ್ಲ ಎಂದು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.

    ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ, ಕಲಬುರಗಿ ಪೀಠದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪು ಪ್ರಕಟಿಸಿದೆ.

    2018ರ ವಿಧಾನಸಭೆ ಚನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ಅವರು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ತಕಾರರು ಅರ್ಜಿಯನ್ನು ಸಲ್ಲಿಸಿದ್ದರು. ಈ ಮುಖ್ಯ ಅರ್ಜಿಯ ವಿಚಾರಣೆ ಬಾಕಿಯಿದ್ದು, ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ.

    ಏನಿದು ಕೇಸ್?
    ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮುನಿರತ್ನ ಗೆಲುವು ಕಂಡಿದ್ದರು. ಈ ಚುನಾವಣೆಗೂ ಮುನ್ನ 2018ರ ಮೇ 9 ರಂದು ಜಾಲಹಳ್ಳಿಯ ಫ್ಲಾಟ್ ನಲ್ಲಿ 10 ಸಾವಿರ ಮತದಾರರ ಗುರುತಿನ ಚೀಟಿ ಅಕ್ರಮವಾಗಿ ಸಂಗ್ರಹಿಸಲಾಗಿತ್ತು.

    ಮುನಿರತ್ನ ಅವರು ಚುನಾವಣಾ ಪ್ರಚಾರಕ್ಕೆ ನಿಗದಿಪಡಿಸಿದ್ದ 25 ಲಕ್ಷ ರೂ.ಗಳಿಗಿಂತ ಹೆಚ್ಚುವರಿ 3.38 ಲಕ್ಷ ಹಣ ವೆಚ್ಚ ಮಾಡಿದ್ದಾರೆ. ಸೀರೆ, ಕುಕ್ಕರ್ ಗಳನ್ನು ಹಂಚಿ ಚುನಾವಣಾ ನೀತಿ ಸಂಹಿತಿಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಮುನಿರತ್ನ ಆಯ್ಕೆಯನ್ನು ಅಸಿಂಧುಗೊಳಿಸಿ ಎರಡನೇ ಸ್ಥಾನ ಪಡೆದ ನನ್ನನ್ನು ವಿಜೇತರನ್ನಾಗಿ ಪ್ರಕಟಿಸಬೇಕೆಂದು ಅರ್ಜಿಯಲ್ಲಿ ಕೇಳಿಕೊಂಡಿದ್ದರು.

    ಮುನಿರತ್ನ ಅವರು ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣ ಚುನಾವಣಾ ಆಯೋಗ ರಾಜರಾಜೇಶ್ವರಿನಗರದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಮಾಡಿರಲಿಲ್ಲ.

  • ಹೋಟೆಲ್‍ನಲ್ಲಿರುವ ಶಾಸಕರ ಭೇಟಿಯಾಗಲು ಕಾಂಗ್ರೆಸ್ ನಾಯಕರ ಹೈಡ್ರಾಮ

    ಹೋಟೆಲ್‍ನಲ್ಲಿರುವ ಶಾಸಕರ ಭೇಟಿಯಾಗಲು ಕಾಂಗ್ರೆಸ್ ನಾಯಕರ ಹೈಡ್ರಾಮ

    – ಡಿಜಿ ಭೇಟಿಯಾದರೂ ಪ್ರಯೋಜನವಾಗಲಿಲ್ಲ
    – ವೈಯಕ್ತಿಕ ನಿರ್ಧಾರ ಎಂದು ಅರ್ಜಿ ವಜಾ ಮಾಡಿದ ಹೈ ಕೋರ್ಟ್

    ಬೆಂಗಳೂರು: ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಮಧ್ಯ ಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಇಂದು ಬೆಂಗಳೂರಿನ ಯಲಹಂಕದ ಖಾಸಗಿ ರೆಸಾರ್ಟ್ ಬಳಿ ಪ್ರತಿಭಟನೆ ನಡೆಸಿದರು.

    ಯಲಹಂಕದ ಖಾಸಗಿ ಹೋಟೆಲ್ ಬಳಿ ದಿಗ್ವಿಜಯ್ ಸಿಂಗ್ ಧಾವಿಸುತ್ತಿದ್ದಂತೆ ಶಾಸಕರ ಭೇಟಿಗೆ ಅವಕಾಶ ಕೇಳಿದರು. ಆದರೆ ಪೊಲೀಸರು ಶಾಸಕರ ಭೇಟಿಗೆ ಅವಕಾಶ ನೀಡಲಿಲ್ಲ. ಇದರಿಂದ ಬೇಸತ್ತ ದಿಗ್ವಿಜಯ್ ಸಿಂಗ್ ರೆಸಾರ್ಟ್ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಅಮೃತಹಳ್ಳಿ ಪೊಲೀಸರು ದಿಗ್ವಿಜಯ್ ಸಿಂಗ್ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು.

    ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೊಲೀಸರ ಕ್ರಮವನ್ನು ಖಂಡಿಸಿದರು. ನಂತರ ದಿಗ್ವಿಜಯ್ ಸಿಂಗ್ ಅವರನ್ನು ಬೆಂಗಳೂರು ನಗರ ಪೊಲೀಸರ ಕಚೇರಿಗೆ ಕರೆದುಕೊಂಡು ಹೋಗಿ ರೆಸಾರ್ಟ್‍ನಲ್ಲಿರುವ ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲೂ ಕೂಡ ಭೇಟಿಗೆ ಅವಕಾಶ ನೀಡಲು ನಿರಾಕರಿಸಲಾಯಿತು.

    ನಂತರ ಡಿಜಿ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಸಹ ಭೇಟಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಅದು ಅವರ ಖಾಸಗಿ ನಿರ್ಧಾರ ಎಂದು ಅರ್ಜಿ ವಜಾಗೊಳಿಸಿತು. ಬಿಜೆಪಿ ಸರ್ಕಾರ ಮತ್ತು ನಗರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಾಯಕರು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು.

  • ಮಂಗಳೂರು ಗಲಭೆ – ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ

    ಮಂಗಳೂರು ಗಲಭೆ – ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ

    ನವದೆಹಲಿ: ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಕಾರಣವಾಗಿದ್ದವರಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

    ಇದರೊಂದಿಗೆ 21 ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಗೊಂಡಿದೆ. ಈ ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಇದೆ ಎಂದು ರಾಜ್ಯದ ಪರ ವಾದ ಮಂಡಿಸುವ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಹೀಗೆ ವಾದ ಮಂಡಿಸುತ್ತಿದ್ದಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾ.ಗವಾಯಿ, ನ್ಯಾ.ಸೂರ್ಯಕಾಂತ್ ಅವರು ಹೈ ಕೋರ್ಟ್ ಆದೇಶಕ್ಕೆ ತಡೆ ನೀಡಿ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದರು.

    ಮಹಮ್ಮದ್ ಅಶಿಕ್, ಮಹಮ್ಮದ್ ಸುಹಾಲ್, ನಾಸಿರುದ್ದೀನ್, ಮಹಮ್ಮದ್ ಶಾಕೀರ್, ಕಲಂದರ್ ಬಾಷಾ, ಮಹಮ್ಮದ್ ಅಜರ್ ಸೇರಿದಂತೆ 21 ಆರೋಪಿಗಳಿಗೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

    ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸದ್ದಕ್ಕೆ ಇರುವ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಎಲ್ಲ 21 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲ ಎಂದು ಹೈ ಕೋರ್ಟ್ ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟು ಜಾಮೀನು ಮಂಜೂರು ಮಾಡಿತ್ತು.

    ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ದೊಡ್ಡ ಶಾಕ್ ನೀಡಿತ್ತು. ಮಂಗಳೂರು ಗಲಭೆ ನೆಪದಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಈ ಹಿಂಸೆ ಅನುಭವಿಸಿದವರು ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲು ಮಾಡುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಎಫ್‍ಐಆರ್ ದಾಖಲು ಮಾಡಲು ಸಹ ಆದೇಶಿಸಿತ್ತು.

  • ರಂಗನಾಥಸ್ವಾಮಿ ದೇವಾಲಯದ ಪೂಜೆಗೆ ಅರ್ಚಕರ ಕಿತ್ತಾಟ – ದೇಗುಲಕ್ಕೆ ಬಿತ್ತು ಬೀಗ

    ರಂಗನಾಥಸ್ವಾಮಿ ದೇವಾಲಯದ ಪೂಜೆಗೆ ಅರ್ಚಕರ ಕಿತ್ತಾಟ – ದೇಗುಲಕ್ಕೆ ಬಿತ್ತು ಬೀಗ

    ಹಾಸನ: ದೇವಾಲಯದಲ್ಲಿ ಪೂಜೆಗಾಗಿ ಅರ್ಚಕರ ಎರಡು ಗುಂಪಿನ ನಡುವೆ ಕಿತ್ತಾಟವಾಗಿ ದೇವಾಲಯಕ್ಕೆ ಬೀಗ ಹಾಕಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಅರಕಲಗೂಡು ತಾಲೂಕಿನ ಹರದೂರುಪುರ ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯವಿದೆ. ಈ ದೇವಾಲಯ ಪುರಾತನದ ಚೋಳರ ಕಾಲಕ್ಕೆ ಸೇರಿದ್ದಾಗಿದ್ದು, ದೇವಾಲಯದಲ್ಲಿ ಪೂಜೆಗಾಗಿ ಇಬ್ಬರು ಅರ್ಚಕರ ಗುಂಪಿನ ಕಿತ್ತಾಟದಿಂದ ಒಂದು ಗುಂಪು ಹೈಕೋರ್ಟ್ ಮೆಟ್ಟಿಲೇರಿದೆ.

    ಮೂವರು ಅರ್ಚಕರ ಒಂದು ಗುಂಪು ಮತ್ತು 24 ಮಂದಿ ಅರ್ಚಕರ ಮತ್ತೊಂದು ಗುಂಪಿನ ನಡುವೆ ಪೂಜೆಗಾಗಿ ಕಿತ್ತಾಟ ನಡೆದಿದೆ. ರಾಮಸ್ವಾಮಿ, ಧರ್ಮರಾಜ್, ಚಿನ್ನಸ್ವಾಮಿ ಎಂಬ ಅರ್ಚಕರ ಒಂದು ಗುಂಪು ಮತ್ತು ರಂಗನಾಥ್, ಗೋವಿಂದಯ್ಯ ಸೇರಿ 24 ಮಂದಿಯ ಮತ್ತೊಂದು ಗುಂಪಿನ ನಡುವೆ ಗಲಾಟೆ ಶುರುವಾಗಿದೆ. ಡಿಸಿ ಕೋರ್ಟ್ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎರಡೂ ನ್ಯಾಯಾಲಯದಲ್ಲಿ ರಾಮಸ್ವಾಮಿ, ಧರ್ಮರಾಜ್, ಚಿನ್ನಸ್ವಾಮಿ ಪರ ಆದೇಶವಾಗಿದೆ. ಕೋರ್ಟ್ ಆದೇಶವಿದ್ದರೂ ರಂಗನಾಥ್ ಅವರ ಗುಂಪು ಅಧಿಕಾರಿಗಳ ಮುಂದೆಯೇ ದೇವಾಲಯದ ಬೀಗ ನೀಡದೆ ಗಲಾಟೆ ಮಾಡಿದೆ.

    7 ಫೆಬ್ರವರಿ 2019 ರಂದು ಡಿಸಿ ಮತ್ತು ಹಿಂದೂ ಧಾರ್ಮಿಕ ಇಲಾಖೆ ನ್ಯಾಯಾಲಯದಲ್ಲಿ ರಾಮಸ್ವಾಮಿ ಗುಂಪಿನ ಪರ ಆದೇಶವಾಗಿದೆ. ಈ ಆದೇಶ ಪ್ರಶ್ನಿಸಿ ರಂಗನಾಥ್ ಅವರ 24 ಮಂದಿಯ ಅರ್ಚಕರ ಗುಂಪು ಹೈಕೋರ್ಟ್ ಮೆಟ್ಟಿಲೇರಿದೆ. ಈ ದೇವಾಲಯದ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ವಿಶೇಷ ಭಕ್ತಿಯಿದೆ. ಅಷ್ಟೇ ಅಲ್ಲದೇ ಈಗಾಗಲೇ ಸರ್ಕಾರದಿಂದ ದೇವಾಲಯದ ಬಳಿ ಅಭಿವೃದ್ಧಿಗಾಗಿ ಸುಮಾರು 10 ಕೋಟಿ ರೂಪಾಯಿಯ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಆದ್ದರಿಂದ ಆದಷ್ಟು ಬೇಗ ದೇವಾಲಯದ ಪೂಜೆ ವಿವಾದ ಬಗೆಹರಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

  • ದೆಹಲಿ ದಂಗೆಗೆ ಸೋನಿಯಾ, ರಾಹುಲ್ ಪ್ರಚೋದನೆ – ಎಫ್‍ಐಆರ್ ದಾಖಲಿಸಲು ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

    ದೆಹಲಿ ದಂಗೆಗೆ ಸೋನಿಯಾ, ರಾಹುಲ್ ಪ್ರಚೋದನೆ – ಎಫ್‍ಐಆರ್ ದಾಖಲಿಸಲು ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

    ನವದೆಹಲಿ: ದ್ವೇಷದ ಭಾಷಣ ಮಾಡಿ ದೆಹಲಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನೀಷ್ ಸಿಸೋಡಿಯಾ ವಿರುದ್ಧ ಎಫ್‍ಐಆರ್ ದಾಖಲಿಸುವ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಬಳಿ ಪ್ರತಿಕ್ರಿಯೆ ನೀಡಿದೆ.

    ದೆಹಲಿ ಗಲಭೆಗೆ ರಾಜಕೀಯ ನಾಯಕರ ಪ್ರಚೋದನಾಕಾರಿ ಹೇಳಿಕೆಯೇ ಕಾರಣ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ಆಪ್ ಶಾಸಕ ಅಮಾನತುಲ್ಲಾ ಖಾನ್, ಎಐಎಂಐಎಂ ನಾಯಕರಾದ ಅಕ್ಬರುದ್ದೀನ್ ಓವೈಸಿ, ವಾರಿಸ್ ಪಠಾಣ್, ವಕೀಲ ಮೊಹಮ್ಮದ್ ಪ್ರಾಚ ವಿರುದ್ಧ ಎಫ್‍ಐಆರ್ ದಾಖಲಿಸಲು ಆದೇಶ ನೀಡಬೇಕೆಂದು ‘ಲಾಯರ್ಸ್ ವಾಯ್ಸ್’ ಸಂಘಟನೆ ಅರ್ಜಿ ಸಲ್ಲಿಸಿತ್ತು.

    ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ ಹರಿ ಶಂಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಎಫ್‍ಐಆರ್ ದಾಖಲಿಸುವ ಸಂಬಂಧ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.

    ದ್ವೇಷದ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ಮುಂದೂಡಿದೆ.

    ಅಜಿ ವಿಚಾರಣೆಯ ಸಂದರ್ಭದಲ್ಲಿ ಲಾಯರ್ಸ್ ವಾಯ್ಸ್ ಸಂಘಟನೆಯ ಪರ ವಕೀಲರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರೇ ನಾಯಕರ ಹೇಳಿಕೆಗಳನ್ನು ನ್ಯಾಯಾಧೀಶರ ಮುಂದೆ ಓದಿದರು. ಈ ಹೇಳಿಕೆಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದರಿಂದ ದೆಹಲಿ ದಂಗೆ ನಡೆದಿದೆ. ಈ ಕೋಮು ಗಲಬೆ ಏಳಲು ಇವರ ಹೇಳಿಕೆಯೇ ಮುಖ್ಯ ಕಾರಣ ಎಂದು ಕೋರ್ಟ್ ಗಮನಕ್ಕೆ ತಂದರು.

  • ‘ಕಸಬ್‍ಗೆ ನ್ಯಾಯಸಮ್ಮತ ಅವಕಾಶ ನೀಡಿದ ದೇಶ ನಮ್ಮದು’ – ಹುಬ್ಬಳ್ಳಿ ಕೇಸ್ ಬೆಂಗ್ಳೂರಿಗೆ ವರ್ಗಾಯಿಸಿ

    ‘ಕಸಬ್‍ಗೆ ನ್ಯಾಯಸಮ್ಮತ ಅವಕಾಶ ನೀಡಿದ ದೇಶ ನಮ್ಮದು’ – ಹುಬ್ಬಳ್ಳಿ ಕೇಸ್ ಬೆಂಗ್ಳೂರಿಗೆ ವರ್ಗಾಯಿಸಿ

    ಬೆಂಗಳೂರು: ಕಸಬ್‍ಗೆ ನ್ಯಾಯಸಮ್ಮತ ಅವಕಾಶ ನೀಡಿದ ದೇಶ ನಮ್ಮದು, ಹಾಗಾಗಿ ಹುಬ್ಬಳ್ಳಿಯಲ್ಲಿ ವಕಾಲತ್ತು ವಹಿಸಲು ಭದ್ರತೆ ಕೊಡಿ ಇಲ್ಲ ಆ ಕೇಸ್ ಅನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾಯಿಸುತ್ತೇವೆ ಎಂದು ಹೈಕೋರ್ಟ್ ನ್ಯಾಯಾಧೀಶರು ಸರ್ಕಾರಕ್ಕೆ ಸೂಚಿಸಿದ್ದಾರೆ.

    ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿ ಜೈಲು ಪಾಲಾದ ಆರೋಪಿಗಳ ಪರ ವಕಾಲತ್ತು ವಹಿಸೋದಕ್ಕೆ ಹುಬ್ಬಳ್ಳಿ ಧಾರವಾಡ ವಕೀಲರು ನಿರಾಕರಣೆ ಮಾಡಿದ್ದರು. ಅದಕ್ಕಾಗಿ ಬೆಂಗಳೂರಿನಿಂದ ಆರೋಪಿಗಳ ಪರ ವಕಾಲತ್ತು ಹಾಕೋದಕ್ಕೆ ವಕೀಲರು ತೆರಳಿದ್ದಾಗ ಗಲಾಟೆ ನಡೆದು ಬೆಂಗಳೂರು ವಕೀಲರ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಕೀಲರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

    ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಆರೋಪಿಗಳ ಪರ ವಕಾಲತ್ತು ಹಾಕೋದಕ್ಕೆ ಅವಕಾಶ ಮಾಡಿಕೊಡಬೇಕು. ಮುಂಬೈನಲ್ಲಿ ನರಮೇಧ ಮಾಡಿದ ಕಸಬ್‍ಗೆ ನ್ಯಾಯ ಸಮ್ಮತವಾದ ಮಂಡಿಸಲು ಅವಕಾಶ ಮಾಡಿಕೊಟ್ಟ ದೇಶ ನಮ್ಮದು. ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ಆ ಹಿನ್ನೆಲೆಯಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

    ಮೊನ್ನೆ ಆದೇಶ ಮಾಡುವಾಗ ಭದ್ರತೆ ವಹಿಸಬೇಕು ಎಂದು ಹೇಳಿದ್ದೆವು. ಆದರೆ ಅದು ಆಗಿಲ್ಲ. ಹೀಗೆ ಮಾಡಿದರೆ ಪ್ರಕರಣ ಹುಬ್ಬಳ್ಳಿಯಲ್ಲಿ ಮುಂದುವರಿಸಲು ಸಾಧ್ಯವಾಗುವುದಿಲ್ಲ. ನಾವೇ ಈ ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆ ಮಾಡುತ್ತೇವೆ. ಸರ್ಕಾರ ಈ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತೆ ಅನ್ನೋದನ್ನು ನಾಳೆ ನ್ಯಾಯಾಲಯಕ್ಕೆ ತಿಳಿಸಿ ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಿಗಿಗೆ ಮುಖ್ಯನ್ಯಾಯಮೂರ್ತಿಗಳು ಸೂಚಿಸಿದರು.