Tag: high court

  • ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ 5 ಲಕ್ಷ ರೂ. ದಂಡ

    ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ 5 ಲಕ್ಷ ರೂ. ದಂಡ

    ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

    ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಖಂಡ್ರೆ ಗೈರಾದ ಹಿನ್ನೆಲೆ ಹೈಕೋರ್ಟ್ ದಂಡ ವಿಧಿಸಿ ಗೈರು ಹಾಜರಿಯನ್ನು ಮನ್ನಿಸಿದೆ. ಜೊತೆಗೆ ದಂಡದ ಹಣ 5 ಲಕ್ಷ ರೂಗಳನ್ನು ಸಿಎಂ ಕೋವಿಡ್-19 ನಿಧಿಗೆ ನೀಡುವಂತೆ ಸೂಚಿಸಿದೆ. ಈಶ್ವರ್ ಖಂಡ್ರೆ ಅವರ ವಿರುದ್ಧ ಡಿ.ಕೆ ಸಿದ್ರಾಮ ಅವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

    ಸಿದ್ರಾಮ ಅವರು, ಈಶ್ವರ್ ಖಂಡ್ರೆ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆಸಿದ್ದಾರೆ. ಅವರು ತನ್ನ ಆಸ್ತಿ ವಿವರ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿ ಶಾಸಕರಾಗಿ ಈಶ್ವರ್ ಖಂಡ್ರೆ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಈ ವಿಚಾರಣೆಗೆ ಹಾಜಾರಗಲು ಹೈಕೋರ್ಟ್ ಈಶ್ವರ್ ಖಂಡ್ರೆಯವರಿಗೆ ನೋಟಿಸ್ ನೀಡಿತ್ತು. ಆದರೆ ನೋಟಿಸ್ ನೀಡಿದ್ದರೂ ಈಶ್ವರ್ ಖಂಡ್ರೆ ವಿಚಾರಣೆಗೆ ಗೈರಾದ ಕಾರಣ ದಂಡ ವಿಧಿಸಿದೆ.

    ಇದಕ್ಕೆ ಪ್ರತಿಕ್ರಿಯೇ ನೀಡಿರುವ ಈಶ್ವರ್ ಖಂಡ್ರೆ, ತಮ್ಮ ಪಿಎಗೆ ಮರೆವಿನ ರೋಗವಿದ್ದುದರಿಂದ ವಿಚಾರಣೆಯ ದಿನಾಂಕ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿ ಕೋರ್ಟಿಗೆ ಮತ್ತೆ ಅರ್ಜಿ ಹಾಕಿದ್ದಾರೆ. ಆದ್ದರಿಂದ ನ್ಯಾ. ಕೃಷ್ಣ ಎಸ್.ದೀಕ್ಷಿತ್‍ರವರಿದ್ದ ಏಕಸದಸ್ಯ ಪೀಠ, 5. ಲಕ್ಷ ದಂಡ ವಿಧಿಸಿ ಗೈರನ್ನು ಮನ್ನಿಸಿದೆ.

  • ಐಎಂಎ ಬಹುಕೋಟಿ ವಂಚನೆ ಪ್ರಕರಣ- ಪ್ರಮುಖ ಆರೋಪಿ ಮನ್ಸೂರ್ ಖಾನ್‍ಗೆ ಜಾಮೀನು

    ಐಎಂಎ ಬಹುಕೋಟಿ ವಂಚನೆ ಪ್ರಕರಣ- ಪ್ರಮುಖ ಆರೋಪಿ ಮನ್ಸೂರ್ ಖಾನ್‍ಗೆ ಜಾಮೀನು

    – ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ

    ಬೆಂಗಳೂರು: ಭಾರೀ ಸಂಚಲನ ಸೃಷ್ಟಿಸಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್ ಖಾನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನೀಡಿದೆ.

    ಮನ್ಸೂರ್ ಖಾನ್ ವಿರುದ್ಧ ಇಡಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

    ಅಧೀನ ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು, ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಪ್ರಕರಣದ ವಿಚಾರಣೆ ಮುಗಿಯುವ ವರೆಗೆ ಆಸ್ತಿ ವಿಲೇವಾರಿ ಮಾಡುವಂತಿಲ್ಲ. 15 ದಿನಗಳಿಗೊಮ್ಮೆ ಇಡಿ ಕಚೇರಿಗೆ ಭೇಟಿ ನೀಡಿ ಸಹಿ ಹಾಕಬೇಕು. ಟ್ರಯಲ್ ಕೋರ್ಟ್ ಅನುಮತಿ ಇಲ್ಲದೆ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂಬುದು ಸೇರಿದಂತೆ ಇತರ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

    ಈ ಮೂಲಕ ಬಂಧನವಾಗಿ 15 ತಿಂಗಳ ನಂತರ ಮನ್ಸೂರ್ ಖಾನ್‍ಗೆ ಜಾಮೀನು ಸಿಕ್ಕಂತಾಗಿದೆ. ಸದ್ಯ ಇಡಿ ದಾಖಲಿಸಿದ್ದ ಪ್ರಕರಣದಲ್ಲಿ ಮಾತ್ರ ಜಾಮೀನು ಸಿಕ್ಕಿದೆ. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಸಿಕ್ಕಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಮನ್ಸೂರ್ ಖಾನ್ ಗೆ ಬಿಡುಗಡೆಯ ಭಾಗ್ಯ ಇಲ್ಲದಂತಾಗಿದೆ.

    ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಜಾರಿ ನಿದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಪ್ರಕರಣದ ಕುರಿತು ಸ್ಫೋಟಕ ಮಾಹಿತಿಯನ್ನು ಮನ್ಸೂರ್ ಬಾಯ್ಬಿಟ್ಟಿದ್ದ. 1000ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಇಡಿ ಅಧಿಕಾರಿಗಳು ಪಡೆದಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಕೆಲ ಪ್ರಭಾವಿಗಳ ಹೆಸರುಗಳನ್ನು ಕೂಡ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ಗ್ರಾಹಕರಿಗೆ ವಂಚಿಸಿದ್ದು ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.’

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ ಕಳೆದ ಏಪ್ರಿಲ್, ಮೇ ತಿಂಗಳಿನಲ್ಲಿ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ನಗರಸಭೆಗಳ ಅಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ – ಹಾಸನದಲ್ಲಿ ಜೆಡಿಎಸ್ ಸಂಭ್ರಮ

    ನಗರಸಭೆಗಳ ಅಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ – ಹಾಸನದಲ್ಲಿ ಜೆಡಿಎಸ್ ಸಂಭ್ರಮ

    ಹಾಸನ: ಮೀಸಲಾತಿ ಸಂಬಂಧ ವಿವಾದಕ್ಕೆ ಒಳಗಾಗಿದ್ದ ಹಾಸನ ಮತ್ತು ಅರಸೀಕೆರೆ ನಗರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯೂ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿ, ಚುನಾವಣೆಗಳನ್ನು 2 ವಾರಗಳ ಕಾಲ ಮುಂದೂಡಿದೆ.

    2 ವಾರಗಳ ಅವಧಿಯೊಳಗೆ ಸ್ಥಾನ ಮೀಸಲಾತಿ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕೆಂದೂ ಕೋರ್ಟ್ ನಿರ್ದೇಶನ ನೀಡಿದೆ. ಕೋರ್ಟ್ ಆದೇಶ ಹೊರಬೀಳುತ್ತಿದಂತೆ ಹಾಸನ ಮತ್ತು ಅರಸೀಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

    ಹಾಸನ ಹಾಗೂ ಅರಸೀಕೆರೆ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರು ಚುನಾವಣೆಗಳು ಕ್ರಮವಾಗಿ ಅ.16ರ ಶುಕ್ರವಾರ ಮತ್ತು ಅ.22 ಗುರುವಾರದಂದು ನಿಗದಿಯಾಗಿತ್ತು. ಆದರೆ ಈ ಪ್ರಕ್ರಿಯೆಗಳು ತಾತ್ಕಾಲಿಕವಾಗಿ 2 ವಾರಗಳ ಕಾಲ ಮುಂದೂಡಲ್ಪಟ್ಟಿವೆ. ಈ ಅವಧಿಯಲ್ಲಿ ಹಾಲಿ ನಿಗದಿತ ಮಿಸಲಾತಿಯ ಪುನರ್ ಪರಿಶೀಲನೆ ನಡೆಯಬೇಕೆಂದೂ ಹೈಕೋರ್ಟ್ ನಿರ್ದೇಶಿಸಿದೆ. ಜೆಡಿಎಸ್‍ಗೆ ಅರಸೀಕರೆ ನಗರಸಭೆಯಲ್ಲಿ ಬಹುಮತವಿದ್ದರೂ ಮತ್ತು ಹಾಸನ ನಗರಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದರೂ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುತ್ತಿತ್ತು. ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ ಮೀಸಲಾತಿಯಲ್ಲಿ ನಿಯಮಾವಳಿಗಳನ್ನು ಹಾಲಿ ಬಿಜೆಪಿ ಸರ್ಕಾರ ಉಲ್ಲಂಘಿಸಿದ್ದು, ಅಕ್ರಮ ಹಾಗೂ ಅನ್ಯಾಯ ಎಸಗಲಾಗಿದೆ ಎಂದು ಆಕ್ಷೇಪಿಸಿ ಉಭಯ ನಗರಸಭೆಗಳ ಜೆಡಿಎಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಾಸನ ಮತ್ತು ಅರಸೀಕೆರೆ ನಗರಸಭೆಗಳ ಅಧ್ಯಕ್ಷರ ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.

    ಜೆಡಿಎಸ್ ವಿಜಯೋತ್ಸವ: ಅರಸೀಕೆರೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿ, 2 ವಾರ ಮುಂದೂಡಿದ ಸುದ್ದಿ ತಿಳಿದ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ನಗರದ ಪಿ.ಪಿ.ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಮಾಡಿದರು. ಜೆಡಿಎಸ್ ಬಹುಮತ ಹೊಂದಿರುವ ನಗರಸಭೆ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿದ್ದು ಅಕ್ರಮ ಹಾಗೂ ಅನ್ಯಾಯ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

  • ಜನರ ವಿರೋಧದ ಮಧ್ಯೆ ಬೆಟ್ಟದ ಮೇಲೆ ಏಸು ಶಿಲುಬೆ ತೆರವು

    ಜನರ ವಿರೋಧದ ಮಧ್ಯೆ ಬೆಟ್ಟದ ಮೇಲೆ ಏಸು ಶಿಲುಬೆ ತೆರವು

    ಚಿಕ್ಕಬಳ್ಳಾಪುರ: ಜಿಲ್ಲೆಯ ಸೂಸೆಪಾಳ್ಯದ ಬೆಟ್ಟದ ಮೇಲೆ ಅಕ್ರಮವಾಗಿ ತಲೆ ಎತ್ತಿದ್ದ ಶಿಲುಬೆಯನ್ನ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ಸ್ಥಳೀಯ ಕ್ರೈಸ್ತ ಸಮುದಾಯದವರ ವಿರೋಧದ ನಡುವೆಯೂ ತೆರವುಗೊಳಿಸುವ ಕಾರ್ಯ ನಡೆಸಿತು.

    ಪೊಲೀಸ್ ಬಂದೋಬಸ್ತ್‌ನೊಂದಿಗೆ ಬೆಟ್ಟದ ಮೇಲೆ ಸರ್ಕಾರಿ ಗೋಮಾಳ ಜಾಗದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಬೃಹತ್ ಗಾತ್ರದ ಶಿಲುಬೆಯನ್ನ ತೆರವು ಮಾಡಲಾಯಿತು. ಕೆಲವರು ಸರ್ಕಾರಿ ಗೋಮಾಳ ಜಾಗದಲ್ಲಿ ಅನಧಿಕೃವಾಗಿ ಶಿಲುಬೆ ನಿರ್ಮಾಣ ವಿರೋಧಿಸಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದಮ್ಮೆ ದಾಖಲಿಸಿದ್ದರು. ಪರಿಣಾಮ ನ್ಯಾಯಾಲಯ ಶಿಲುಬೆ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.

    ಹೈಕೋರ್ಟಿನ ಆದೇಶದ ಮೇರೆಗೆ ಇಂದು ಎ.ಸಿ.ರಘುನಂದನ್ ನೇತೃತ್ವದಲ್ಲಿ ಶಿಲುಬೆಯನ್ನ ತೆರವು ಮಾಡಿ ಜಾಗವನ್ನ ಸರ್ಕಾರದ ವಶಕ್ಕೆ ಪಡೆಯಲಾಯಿತು. ಆದರೆ ಇದಕ್ಕೆ ಅಲ್ಲಿನ ಸ್ಥಳೀಯ ಕ್ರೈಸ್ತ ಸಮುದಾಯದವರು ವಿರೋಧಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಶಿಲುಬೆ ತೆರವು ಕಾರ್ಯಾಚರಣೆಗೆ ಭಾರೀ ವಿರೋಧ ವ್ಯಕ್ತವಾಗುವ ಮುನ್ಸೂಚನೆ ಇದ್ದ ಕಾರಣ ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ನೂರಾರು ಜನ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರು.

    ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕ್ರೈಸ್ತ ಸಮುದಾಯದ ನೂರಾರು ಜನ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ. ಇದರಿಂದ ಕ್ರೈಸ್ತ ಸಮುದಾಯದ ನೂರಾರು ಜನ ಪ್ರತಿಭಟನಾ ಸ್ಥಳ ಹಾಗೂ ಚರ್ಚ್ ಬಳಿ ಏಸುವನ್ನು ಪ್ರಾರ್ಥಿಸಿ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

  • ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

    ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

    ನವದೆಹಲಿ: ಬಾಲಿವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ತನ್ನ ಹೆಸರು ಪ್ರಕಟಣೆಗೆ ತಡೆ ನೀಡಬೇಕೆಂದು ಕೋರಿ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

    ಮಾಧ್ಯಮಗಳು ರಿಯಾ ಚಕ್ರವರ್ತಿ ಹೇಳಿಕೆಯನ್ನು ಆಧಾರಿಸಿ ಡ್ರಗ್ಸ್‌ ಪ್ರಕರಣದಲ್ಲಿ ತನ್ನ ಕಕ್ಷಿದಾರರ  ಹೆಸರನ್ನು ಪ್ರಕಟಿಸುತ್ತಿವೆ. ಈ ರೀತಿ ಸುದ್ದಿ ಪ್ರಸಾರ ಮಾಡುತ್ತಿರುವುದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಲಯ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಕುಲ್‌ ಪರ ವಕೀಲರು ಮನವಿ ಮಾಡಿದ್ದಾರೆ.

    ನ್ಯಾ.ನವೀನ್‌ ಚಾವ್ಲಾ ಅವರಿದ್ದ ಏಕಸದಸ್ಯ ಪೀಠದಲ್ಲಿ ಇಂದು ರಾಕುಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ರಾಕುಲ್‌ ಪರ ವಕೀಲರು, ಡ್ರಗ್ಸ್‌ ಪ್ರಕರಣದಲ್ಲಿ ರಾಕುಲ್‌ಗೆ ಸಂಬಂಧವಿದೆ ಎಂದು ದುರುದ್ದೇಶಪೂರ್ವಕವಾಗಿ ಸುದ್ದಿ ಪ್ರಸಾರವಾಗಿದೆ. ಯಾವುದೋ ಫೋಟೋ, ವಿಡಿಯೋಗಳಿಗೆ ಡ್ರಗ್ಸ್‌ ಪ್ರಕರಣವನ್ನು ಜೋಡಿಸಿ ತೇಜೋವಧೆ ಮಾಡಲಾಗುತ್ತಿದೆ. ಇದು ಸಂವಿಧಾನ ಪರಿಚ್ಛೇದ 21ರ ಅಡಿ ಬರುವ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.

    ವಿಚಾರಣೆ ನಡೆಸಿದ ಕೋರ್ಟ್‌ ಕೇಂದ್ರ ಸರ್ಕಾರ, ಪ್ರಸಾರ ಭಾರತಿ, ಸುದ್ದಿ ಪ್ರಸಾರ ಸಂಘಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ಮುಂದೂಡಿದೆ.

    ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಈಕೆಯ ವಿಚಾರಣೆಯ ಸಂದರ್ಭದಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌, ಸಾರಾ ಆಲಿಖಾನ್‌ ಸಹ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾಳೆ ಎಂಬುದನ್ನು ಎನ್‌ಸಿಬಿ ಮೂಲಗಳನ್ನು ಆಧಾರಿಸಿ ಟೈಮ್ಸ್‌ ನೌ ವರದಿ ಮಾಡಿತ್ತು. ಒಟ್ಟು 25 ಕಲಾವಿದರ ಹೆಸರನ್ನು ರಿಯಾ ಹೇಳಿದ್ದಾಳೆ ಎನ್ನಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎನ್‌ಸಿಬಿ ನಿರ್ದೇಶಕ ಕೆಪಿಎಸ್‌ ಮಲ್ಹೋತ್ರಾ, ಹಲವು ಹೆಸರುಗಳು ಬಂದಿದೆ. ಆದರೆ ತನಿಖೆಯ ಸಂದರ್ಭದಲ್ಲಿ ಹೆಸರುಗಳನ್ನು ಹೇಳುವುದಿಲ್ಲ ಎಂದು ತಿಳಿಸಿದ್ದರು.

  • ಅನಿಶಾ ಪ್ರಕರಣ ಸಿಐಡಿಗೆ ಒಪ್ಪಿಸಿ- ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ ತಾಯಿ

    ಅನಿಶಾ ಪ್ರಕರಣ ಸಿಐಡಿಗೆ ಒಪ್ಪಿಸಿ- ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ ತಾಯಿ

    ಉಡುಪಿ: ಅನಿಶಾ ಪೂಜಾರಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಹೈ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆ ಎಂಬಿಎ ಪದವೀಧರೆ ಅನಿಶಾ ಸಾವು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಎಂದು ಮೃತ ಯುವತಿ ತಾಯಿ ಹೈ ಕೋರ್ಟಿಗೆ ರಿಟ್ ಸಲ್ಲಿಸಿದ್ದಾರೆ.

    ಕಾಜ್ರಳ್ಳಿ ನಿವಾಸಿ ಅನಿಶಾ ಪೂಜಾರಿಯ ಅಸಹಜ ಸಾವಿನ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಆರೋಪಿ ಚೇತನ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅನಿಶಾ ಪೂಜಾರಿಯ ಸಾವಿಗೆ ಸಂಬಂಧಿಸಿದಂತೆ ದೊರಕಿರುವ ಸಾಕ್ಷ್ಯ ಮತ್ತು ದೃಶ್ಯ ಚಿತ್ರದಿಂದ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕುಟುಂಬಸ್ಥರು ಭಾವಿಸಿದ್ದರು.

    ಇದೀಗ ಅನಿಶಾ ಪೂಜಾರಿ ಸಾವಿನ ಕುರಿತು ಬಹಳಷ್ಟು ಸಂಶಯ ಮೂಡಿ ಬಂದಿರುವುದರಿಂದ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ. ಹೀಗಾಗಿ ಹೈ ಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

    ಏನಿದು ಪ್ರಕರಣ?
    ಪ್ರೀತಿಯ ಪಾಶಕ್ಕೆ ತಲೆಯೊಡ್ಡಿ ಎಂಬಿಎ ಪದವೀಧರೆ ಅನಿಶಾ ಪ್ರಾಣ ಕಳೆದುಕೊಂಡಿದ್ದರು. ಸಾವಿಗೂ ಮುನ್ನ ಗೆಳೆಯ ಚೇತನ್ ಮೇಲೆ ಆರೋಪ ಹೊರಿಸಿ ನಾಲ್ಕು ಪುಟ ಡೆತ್ ನೋಟ್ ಬರೆಯಲಾಗಿತ್ತು. ಅನಿಶಾ ಮತ್ತು ಚೇತನ್ ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಮನೆಗಳಲ್ಲಿ ರಾದ್ಧಾಂತ ಆಗಿ ಮದುವೆ ಸಾಧ್ಯವಿಲ್ಲ ಎಂದಾಗ ಅನಿಶಾ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅನಿಶಾ ಸಾವಿನ ತನಿಖೆ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಮಧ್ಯಮ ವರ್ಗದ ಕುಟುಂಬವಾದ್ರೂ ಸಾಲ ಮಾಡಿ ಅನಿಶಾಳಿಗೆ ಎಂಬಿಎ ಓದಿಸಲಾಗಿತ್ತು. ಶಿಕ್ಷಣ, ಬೆಂಗಳೂರು ಖಾಸಗಿ ಕಂಪನಿ ಉದ್ಯೋಗದಲ್ಲಿ ಇದ್ದಾಗ ಈಕೆಯ ಸಾಧನೆಗಳಿಗೆ ಮನೆಯಲ್ಲಿರುವ ಮೆಡಲ್ ಗಳೇ ಸಾಕ್ಷಿ. ವಯೋ ಸಹಜ ಪ್ರೀತಿ ಒಂದೇ ಊರಿನ ಇಬ್ಬರಲ್ಲಿ ಮೊಳಕೆಯೊಡೆದಿತ್ತು. ಇಬ್ಬರೂ ಊರೂರು ಸುತ್ತಿ ಪ್ರೀತಿಕಡಲಲ್ಲಿ ತೇಲಿದ್ದಾರೆ. ಆದ್ರೆ ಅನಿಶಾ ಪೂಜಾರಿ ಪರಿಪರಿಯಾಗಿ ಬೇಡಿದರೂ ಚೇತನ್ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ ಆತ ಕಡೆಗಣಿಸಿದ್ದಾನೆ.

    ಚೇತನ್ ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದಾನೆ ಎಂದು ತಿಳಿದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಳು. ಚೇತನ್ ಗೆ ಸಂಬಂಧಪಟ್ಟ ಹಾಡಿಯಲ್ಲಿ ಅನಿಶಾ ನೇಣಿಗೆ ಶರಣಾಗಿದ್ದಳು. ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ರವಾನಿಸಿದ್ದಳು. ತನ್ನ ಫೇಸ್ಬುಕ್ ನಲ್ಲಿ ಚೇತನ್ ಒಬ್ಬ ಗಲ್ರ್ಸ್ ಹುಚ್ಚ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಳು.

    ಎಂಬಿಎ ಉತ್ತೀರ್ಣಳಾಗಿದ್ದ ಅನಿಶಾ ಪೂಜಾರಿ ಪ್ರೀತಿ ವಿಚಾರದಲ್ಲಿ ಸೋತಿದ್ದಳು. ಪ್ರಾಣ ಅರ್ಪಣೆ ಮಾಡಿದ್ದಳು. ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಚೇತನ್ ಶೆಟ್ಟಿಗೆ ಶಿಕ್ಷೆಯಾಗಬೇಕು ಎಂದು ಆಕೆಯ ಕುಟುಂಬ ಕಣ್ಣೀರಿಡುತ್ತಿದೆ. ಇದೀಗ ತನಿಖೆ ವಿಳಂಬ ಹಿನ್ನೆಲೆ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಕುಟುಂಬಸ್ಥರು ರಿಟ್ ಸಲ್ಲಿಸಿದ್ದಾರೆ.

  • ಗಲಭೆಕೋರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು: ಬೊಮ್ಮಾಯಿ

    ಗಲಭೆಕೋರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು: ಬೊಮ್ಮಾಯಿ

    – ಸಂಘ ಮತ್ತು ಬಿಎಸ್‍ವೈ ಎರಡೂ ಒಂದೇ

    ಬೆಂಗಳೂರು: ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಕ್ಲೈಮ್ ಕಮಿಷನ್ ನೇಮಕಕ್ಕೆ ಹೈಕೋರ್ಟಿಗೆ ಮನವಿ ಮಾಡಿಕೊಳ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಹೈಕೋರ್ಟಿಗೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಕ್ಲೈಮ್ ಕಮಿಷನ್ ನೇಮಕ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಈ ಸಂಬಂಧ ಪ್ರಕ್ರಿಯೆ ಶುರು ಮಾಡಿದ್ದೇವೆ. ಕ್ಲೈಮ್ ಕಮಿಷನ್ ನೇಮಕವಾದರೆ ಅವರಿಗೆ ಎಲ್ಲ ಸಹಕಾರ ನೀಡುತ್ತೇವೆ. ಕಮಿಷನ್ ಮೂಲಕ ಘಟನೆಯಲ್ಲಿ ಉಂಟಾದ ಆಸ್ತಿಗಳ ನಷ್ಟ ಮೌಲ್ಯ ಪರಿಶೀಲಿಸಲಾಗುತ್ತೆ. ಆ ಬಳಿಕ ಆರೋಪಿಗಳಿಂದ ಎಷ್ಟು ದಂಡ ವಸೂಲು ಮಾಡಬೇಕೆಂಬ ಪ್ರಕ್ರಿಯೆ ಆರಂಭವಾಗುತ್ತೆ ಎಂದು ವಿವರಿಸಿದರು.

    ಇದೇ ವೇಳೆ ಎನ್‍ಐಎ ಪ್ರಕಟಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಮಯ್ಯ ಕಾಲೇಜಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ)ಯಿಂದ ಒಬ್ಬ ವೈದ್ಯನ ಬಂಧನ ಆಗಿದೆ. ಈ ಬಗ್ಗೆ ಈಗಾಗಲೇ ಎನ್‍ಐಎ ಪ್ರಕಟಣೆ ಹೊರಡಿಸಿದೆ. ಈಗಾಗಲೇ ಎರಡು ಉಗ್ರ ಗುಂಪುಗಳ ಲಿಂಕ್ ಇರುವುದು ಬಹಿರಂಗ ಪಡಿಸಲಾಗಿದೆ. ದೇಶದ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ. ಎನ್‍ಐಎ ಜೊತೆ ನಮ್ಮ ಐಎಸ್‍ಡಿ ನಿರಂತರ ಸಂಪರ್ಕದಲ್ಲಿದ್ದಾರೆ. ನಾವು ಎನ್‍ಐಎ ಗೆ ಸಹಕಾರ ನೀಡುತ್ತಿದ್ದೇವೆ ಎಂದರು.

    ಇದೇ ವೇಳೆ ಸಿಎಂ ಬಿಎಸ್‍ವೈ ಪದಚ್ಯುತಿಗೆ ಆರ್.ಎಸ್.ಎಸ್ ಹತ್ತಿರದ ನಾಯಕರಿಂದ ಸಂಚು ಎಂಬ ಸಿದ್ದರಾಮಯ್ಯ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲೇ ಒಳಗಿನ ವಾತಾವರಣ ಸೂಕ್ಷ್ಮವಾಗಿದೆ. ಆದ್ದರಿಂದ ಅವರು ಬಿಜೆಪಿ ಬಗ್ಗೆ ಅವರು ಮಾತಾಡೋದು ಬೇಡ. ಬಿಎಸ್‍ವೈ ಅವರು ಸಂಘದ ಹಿನ್ನೆಲೆಯಿಂದ ಬಂದವರು. ಸಂಘ ಮತ್ತು ಬಿಎಸ್‍ವೈ ಎರಡೂ ಒಂದೇ. ನಮ್ಮಲ್ಲಿ ವ್ಯತ್ಯಾಸಗಳು ಯಾವುದೂ ಇಲ್ಲ. ವ್ಯತ್ಯಾಸಗಳಿದ್ದರೆ ಅದು ಕಾಂಗ್ರೆಸ್‍ನಲ್ಲಿ ಮಾತ್ರ ಎಂದು ತಿರುಗೇಟು ನೀಡಿದರು.

  • ಅಧೀರಾನ ‘ಘರ್ಜನೆ’ಗೆ ಹೈಕೋರ್ಟ್‌ ಅನುಮತಿ

    ಅಧೀರಾನ ‘ಘರ್ಜನೆ’ಗೆ ಹೈಕೋರ್ಟ್‌ ಅನುಮತಿ

    ಬೆಂಗಳೂರು: ಬಾಲಿವುಡ್‌ ನಟ ಸಂಜಯ್‌ ದತ್‌ ನಟಿಸುತ್ತಿರುವ ಕೆಜಿಎಫ್‌-2 ಚಿತ್ರದ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

    ಹುಬ್ಬಳ್ಳಿಯ ವಕೀಲ ಜಿ. ಶಿವಶಂಕರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ಈ ವೇಳೆ ಶಿಕ್ಷೆಗೊಳಗಾದವರು ನಟನೆ ಮಾಡಬಾರದು ಎಂದು ಯಾವ ಕಾನೂನಿನಲ್ಲಿ ಹೇಳಿದೆ? ಅರ್ಜಿದಾರರೊಬ್ಬರ ನಿಲುವೇ ಇಡೀ ಕರ್ನಾಟಕದ ಜನತೆಯ ನಿಲುವು ಎಂದು ಹೇಗೆ ಸಾಬೀತುಪಡಿಸುತ್ತೀರಿ ಎಂದು ಅರ್ಜಿದಾರರ ಪರ ವಕೀಲರನ್ನು ಕೋರ್ಟ್‌ ಪ್ರಶ್ನಿಸಿತು.

    ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದ ಕಾರಣ ಈ ಅರ್ಜಿಗೆ ಕಾನೂನಾತ್ಮಕ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.

    ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಜಿಎಫ್‌-2 ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಮತ್ತು ನಟ ಸಂಜಯ್‌ ದತ್‌ ಅವರನ್ನು ಪ್ರತಿವಾದಿ ಮಾಡಲಾಗಿತ್ತು.

    ಅರ್ಜಿಯಲ್ಲಿ ಏನಿತ್ತು?
    ಕೆಜಿಎಫ್‌-2 ಚಿತ್ರದಲ್ಲಿ ಟಾಡಾ ಅಪರಾಧಿಯಾದ ಬಾಲಿವುಡ್‌ ನಟ ಸಂಜಯ್‌ ದತ್‌ ನಟಿಸುತ್ತಿದ್ದಾರೆ. ಸಂಜಯ್‌ ದತ್‌ಗೆ 10 ವರ್ಷ ಜೈಲು ಶಿಕ್ಷೆಯಾಗಿತ್ತು. ಈ ವಿಚಾರ ತಿಳಿದಿದ್ದರೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಂಜಯ್‌ ದತ್‌ ನಟನೆಯ ಕೆಜಿಎಫ್‌-2 ಚಿತ್ರದ ಚಿತ್ರೀಕರಣಕ್ಕೆ ಹಾಗೂ ಬಿಡುಗಡೆಗೆ ಅನುಮತಿ ನೀಡಿದ್ದಾರೆ.

    ಜನರಿಂದ ಹೆಚ್ಚು ಹಣ ಗಳಿಸಬೇಕೆಂಬ ಉದ್ದೇಶದಿಂದ ಸಂಜಯ್‌ ದತ್‌ ಅವರನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಇದು ಜನತೆಯ ಘನತೆಗೆ ಧಕ್ಕೆಯಾಗಿದೆ. ಕೆಜಿಎಫ್‌-2 ಚಿತ್ರೀಕರಿಸಲು ಹೊಂಬಾಳೆ ಫಿಲಿಂಸ್‌ಗೆ ನೀಡಿರುವ ಅನುಮತಿ ರದ್ದುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಈ ಅರ್ಜಿ ಇತ್ಯರ್ಥವಾಗುವರೆಗೂ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

  • ವಿರಾಟ್ ಕೊಹ್ಲಿ ಬಂಧನ ಕೋರಿ ಹೈಕೋರ್ಟಿನಲ್ಲಿ ಅರ್ಜಿ

    ವಿರಾಟ್ ಕೊಹ್ಲಿ ಬಂಧನ ಕೋರಿ ಹೈಕೋರ್ಟಿನಲ್ಲಿ ಅರ್ಜಿ

    ಚೆನ್ನೈ: ಆನ್‍ಲೈನ್ ಜೂಜಾಟವನ್ನು ಉತ್ತೇಜಿಸಿದ್ದಕ್ಕಾಗಿ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಅವರನ್ನು ಬಂಧಿಸುವಂತೆ ಕೋರಿ ಮದ್ರಾಸ್ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

    ಚೆನ್ನೈ ಮೂಲದ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಯುವ ಜನತೆ ಆನ್‍ಲೈನ್ ಜೂಜಾಟದ ಗೀಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಪರಿಣಾಮ ಇವುಗಳ ಮೇಲೆ ನಿಷೇಧ ವಿಧಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಆನ್‍ಲೈನ್ ಜೂಜಾಟ ಕಂಪೆನಿಗಳು ಭಾರೀ ಹಣವನ್ನು ನೀಡಿ ವಿರಾಟ್ ಕೊಹ್ಲಿ, ತಮನ್ನಾ ರಂತಹ ಸ್ಟಾರ್ ಕ್ರೀಡಾಪಟು ಹಾಗೂ ನಟ-ನಟಿಯನ್ನು ಬಳಿಸಿಕೊಂಡು ಯುವ ಜನತೆಯ ಬ್ರೈನ್ ವಾಶ್ ಮಾಡುತ್ತಿದ್ದಾರೆ ವಕೀಲರು ಆರೋಪಿಸಿದ್ದಾರೆ.

    ಆನ್‍ಲೈನ್ ಜೂಜಾಟಕ್ಕೆ ಯುವಕರು ಮಾಡಿದ ಸಾಲದ ಹಣವನ್ನು ಹಿಂದಿರುಗಿಸಲು ಸಾಧ್ಯವಾಗದ ಹಣ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ ಎಂದು ಪ್ರಕರಣವೊಂದರ ಉದಾರಣೆಯೊಂದನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣವನ್ನು ನ್ಯಾಯಾಲಯ ಮಂಗಳವಾರ ವಿಚಾರಣೆಗೆ ಮುಂದೂಡಿದೆ.

  • ಸಿಇಟಿ ಪರೀಕ್ಷೆ ಬೇಕೇ? ಗಂಭೀರವಾಗಿ ಪರಿಗಣಿಸಿ, ನಾಳೆ ನಿರ್ಧಾರ ತಿಳಿಸಿ – ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

    ಸಿಇಟಿ ಪರೀಕ್ಷೆ ಬೇಕೇ? ಗಂಭೀರವಾಗಿ ಪರಿಗಣಿಸಿ, ನಾಳೆ ನಿರ್ಧಾರ ತಿಳಿಸಿ – ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

    – ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸಿ
    – ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಕೆಯಾಗಿದ್ದು ನಾಳೆ ಈ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಯಿದೆ.

    ವಕೀಲರಾದ ಎಸ್.ಪಿ. ಪ್ರದೀಪ್ ಕುಮಾರ್, ಅಬ್ದುಲ್ಲಾ ಖಾನ್‌, ಎನ್‌ಎಸ್‌ಯುಐ ವಿದ್ಯಾರ್ಥಿಗಳು ಪಿಐಎಲ್‌ ಸಲ್ಲಿಸಿದ್ದು ಇಂದು ಅರ್ಜಿಯ ವಿಚಾರಣೆ ಮುಖ್ಯ ನ್ಯಾ. ಅಭಯ್‌ ಓಕಾ ಮತ್ತು ನ್ಯಾ. ಸಂದೇಶ್‌ ಅವರಿಂದ ಪೀಠದಲ್ಲಿ ನಡೆಯಿತು.

    ಕೋವಿಡ್‌ ಸಮಯದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ವಕೀಲ ಅಬ್ದುಲ್ಲಾ ಖಾನ್‌ ಪೀಠದ ಗಮನಕ್ಕೆ ತಂದರು. ಈ ವೇಳೆ ರಾಜ್ಯದಲ್ಲಿ 6 ಸಾವಿರ ಕಂಟೈನ್ಮೆಂಟ್‌ ವಲಯಗಳಿವೆ. ಈ ವಲಯದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಬರೆಯಬೇಕು ಈ ಬಗ್ಗೆ ಮಾಹಿತಿ ನೀಡಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

    ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದೆ ಎಂದು ತಿಳಿಸಿದರು.

    ಅರ್ಜಿದಾರರು ಕೊನೆ ಕ್ಷಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್‌ 19 ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ನಡೆಸಬೇಕೇ? ಬೇಡವೇ ಎಂಬುದರ ಬಗ್ಗೆ ಕೂಡಲೇ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಿ ಹಾಕುವ ಸಾಧ್ಯತೆಯಿದೆ. ಹೀಗಾಗಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬುಧವಾರ ಮಧ್ಯಾಹ್ನ 2:30ರ ಒಳಗಡೆ ತನ್ನ ನಿರ್ಧಾರವನ್ನು ತಿಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ನಾಳೆಗೆ ವಿಚಾರಣೆಯನ್ನು ಮುಂದೂಡಿತು.

    ಅರ್ಜಿಯಲ್ಲಿ ಏನಿದೆ?
    ರಾಜ್ಯದಲ್ಲಿ 2020ನೇ ಸಾಲಿನ ಸಿಇಟಿ ಪರೀಕ್ಷೆ ಜುಲೈ 30, 31 ಹಾಗೂ ಆಗಸ್ಟ್ 1ಕ್ಕೆ ನಿಗದಿ ಪಡಿಸಿ ಮೇ 13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಜುಲೈ 18ರಂದು ಪ್ರಾಧಿಕಾರ ಪರೀಕ್ಷಾ ಕೇಂದ್ರಗಳು ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಸಂಬಂಧವಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದೆ.

    ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ. ಹೀಗಾಗಿ ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಪಿಯು ಅಂಕಗಳ ಆಧಾರದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದೂಡಿ ನಂತರ ಪರೀಕ್ಞಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

    ಜುಲೈ 30 ರಂದು ಜೀವಶಾಸ್ತ್ರ, ಗಣಿತ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆದರೆ ಆಗಸ್ಟ್‌ ಒಂದರಂದು ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯನ್ನು 50 ಅಂಕಗಳಿಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಡೆಸಲಾಗುತ್ತದೆ. ಇತರೆ ವಿಷಯಗಳ ಪರೀಕ್ಷೆಗಳನ್ನು 60 ಅಂಕಗಳಿಗೆ ನಡೆಸಲಾಗುತ್ತದೆ.

    ಮೊದಲನೇ ವರ್ಷದ / ಮೊದಲನೇ ಸೆಮಿಸ್ಟರ್ ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನದ ಕೋರ್ಸ್‌ಗಳು ಮತ್ತು ಬಿ-ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.