ಬೆಂಗಳೂರು: ರಾಜ್ಯಸಭೆ ಮಾಜಿ ಸದಸ್ಯ, ನಿವೃತ್ತ ನ್ಯಾಯಮೂರ್ತಿ ಮಂಡಗದ್ದೆ ರಾಮಾಜೋಯಿಸ್(89) ನಿಧನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಅರಗದಲ್ಲಿ ಜನಿಸಿದ್ದರಾಮಾಜೋಯಿಸ್ ಇಂದು ಬೆಳಿಗ್ಗೆ 7.30 ರ ವೇಳೆಗೆ ಅವರು ವಿಧಿವಶರಾಗಿದ್ದಾರೆ. ಜಾರ್ಖಂಡ್ ಮತ್ತು ಬಿಹಾರ ರಾಜ್ಯಪಾಲರೂ ಆಗಿದ್ದ ರಾಮಾ ಜೋಯಿಸ್ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್‍ಗೆ ಹೈ ಕೋರ್ಟ್ ಏಕ ಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ.
ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಹಲವು ದಿನಗಳ ಜೈಲು ವಾಸದ ಬಳಿಕ ಸಂಪತ್ ರಾಜ್‍ಗೆ ಜಾಮೀನು ಭಾಗ್ಯ ಸಿಕ್ಕಿದೆ.
ನವೆಂಬರ್ 16ರಂದು ರಾತ್ರಿ 9 ಗಂಟೆಗೆ ಸಂಪತ್ ರಾಜ್ ಬಂಧನ ಮಾಡಲಾಗಿತ್ತು. ಒಂದು ತಿಂಗಳಿನಿಂದ ಎಸ್ಕೇಪ್ ಆಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್ ಗುಣಮುಖವಾದ ಬಳಿಕ ಎಸ್ಪೇಕ್ ಆಗಿ ನಾಗರಹೊಳೆಯ ಫಾರ್ಮ್ ನಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ರಿಯಾಜುದ್ದೀನ್ ತನ್ನ ಕಾರಿನಲ್ಲಿಯೇ ಸಂಪತ್ ರಾಜ್ ನನ್ನು ಕರೆದುಕೊಂಡು ತನ್ನ ಆಪ್ತರ ಬಳಿ ಬಿಟ್ಟಿದ್ದನು. ರಿಯಾಜುದ್ದೀನ್ ಶಿಷ್ಯರ ಚಲನವಲನ ಮೇಲೆಯೂ ಸಿಸಿಬಿ ತಂಡ ಕಣ್ಣಿಟ್ಟಿತ್ತು. ರಿಯಾಜುದ್ದೀನ್ ಶಿಷ್ಯರು ಸಂಪತ್ ರಾಜ್ ಜೊತೆ ನೇರ ಸಂಪರ್ಕ ಹೊಂದಿದ್ದರು ಎನ್ನಲಾಗಿತ್ತು.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ವೇಳೆ ಸಂಪತ್ ರಾಜ್ ಕೂಗಳತೆ ದೂರದಲ್ಲಿಯೇ ಇದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಸಿಸಿಬಿ ವಿಚಾರಣೆ ಎದುರಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರಿಂದ ಬಂಧನ ವಿಳಂಬವಾಗಿತ್ತು.
ಬೆಂಗಳೂರು: ಅಂಬುಲೆನ್ಸ್ ನಿಯಂತ್ರಣಾ ಕೇಂದ್ರ ಸ್ಥಾಪಿಸುವ ಸಂಬಂಧ 1800 ಕೋಟಿ ರೂ. ಟೆಂಡರ್ ರದ್ದುಗೊಳಿಸಿದ್ದಕ್ಕೆ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಅಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ನಿಯಂತ್ರಣ ಕೇಂದ್ರ ಸ್ಥಾಪಿಸಲು 1800 ಕೋಟಿ ರೂ. ಟೆಂಡರ್ ಕರೆಯಲು ಸರ್ಕಾರ ಮುಂದಾಗಿತ್ತು. ಆದರೆ ಆರೋಗ್ಯ ಸಚಿವರ ಸೂಚನೆಯಂತೆ ಟೆಂಡರ್ ರದ್ದುಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿ ಸಿಜೆ ಎ.ಎಸ್.ಒಕಾ ನೇತೃತ್ವದ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ.
ಹೈಕೋರ್ಟ್ ಟೆಂಡರ್ ಪ್ರಕ್ರಿಯೆಯ ನಿಗಾ ವಹಿಸಿದೆ. ಕೋರ್ಟ್‌ಗೆ ಭರವಸೆ ನೀಡಿದ ಬಳಿಕವೂ ಟೆಂಡರ್ ರದ್ದುಪಡಿಸಿದ್ದು ಯಾಕೆ? ಸರ್ಕಾರದ ಕ್ರಮವೇ ನ್ಯಾಯಾಂಗ ನಿಂದನೆಯಾಗಿದೆ. ಸಚಿವರಿಗೆ ಕೋರ್ಟ್ ವಿಚಾರಣೆಯ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದೆ.
ಸರ್ಕಾರದ ಪ್ರಮಾಣಪತ್ರದಲ್ಲೂ ರದ್ದಿಗೆ ಸಕಾರಣ ನೀಡಿಲ್ಲ. ಕೋರ್ಟ್‌ಗೂ ಮಾಹಿತಿ ನೀಡದೇ ಟೆಂಡರ್ ರದ್ದುಪಡಿಸಿದ್ದೇಕೆ? ಸರ್ಕಾರ ಇದಕ್ಕೆ ಸೂಕ್ತ ವಿವರಣೆ ನೀಡಬೇಕು. ಇಲ್ಲವಾದರೆ ಆರೋಗ್ಯ ಸಚಿವರನ್ನೇ ಪ್ರತಿವಾದಿಯಾಗಿಸುವುದಾಗಿ ಎಚ್ಚರಿಕೆ ನೀಡಿದೆ.
ಟೆಂಡರ್ ರದ್ದುಪಡಿಸಲು ತಜ್ಞರ ಲಿಖಿತ ಅಭಿಪ್ರಾಯವನ್ನೂ ಪಡೆದಿಲ್ಲ. ಇದು ಟೆಂಡರ್ ಪ್ರಕ್ರಿಯೆಯನ್ನು ವಿಳಂಬಿಸುವ ಯತ್ನವೆನಿಸುತ್ತಿದೆ. ಆರೋಗ್ಯ ಸಚಿವರೇ ಸ್ವತಃ ವೃತ್ತಿಪರ ವೈದ್ಯರಾಗಿದ್ದಾರೆ. ಹೀಗಿರುವಾಗ ಟೆಂಡರ್ ರದ್ದುಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿದೆ.
ಅಕ್ರಮಗಳು ನಡೆದಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಸರ್ಕಾರ ಟೆಂಡರ್ ಪ್ರಕ್ರಿಯೆ ರದ್ದು ಮಾಡಲಾಗಿದೆ ಎಂದು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ಈ ಸಮಜಾಯಿಷಿಯನ್ನು ಒಪ್ಪದ ಕೋರ್ಟ್ ಚಾಟಿ ಬೀಸಿ ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಲ್ಲಿ ಅಂಬುಲೆನ್ಸ್‌ಗಳು ಸಿಲುಕಿಕೊಳ್ಳುತ್ತಿವೆ. ಆಸ್ಪತ್ರೆ ತಲುಪುವುದು ವಿಳಂಬವಾಗಿ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮರ್ಪಕ ಅಂಬುಲೆನ್ಸ್ ಸೇವೆಗಾಗಿ ನಿಯಂತ್ರಣಾ ಕೇಂದ್ರ ಸ್ಥಾಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಭಾರತ ಪುನರುತ್ಥಾನ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ಇಂದು ಡಿನೋಟಿಫಿಕೇಷನ್ ಭೂತ ಬೆನ್ನು ಬಿದ್ದಿದೆ. ಅದು ಕೂಡ ಒಂದೇ ದಿನ ಎರಡೆರಡು ಪ್ರಕರಣಗಳ ತನಿಖೆ ಮುಂದುವರೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.
ಬೆಂಗಳೂರಿನ ಗಂಗೇನಹಳ್ಳಿ ಬಳಿಯ ಮಠದಹಳ್ಳಿಯ 1 ಎಕರೆ 11 ಗುಂಟೆ ಜಮೀನನ್ನು ನಿಯಮ ಮೀರಿ 2007 ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಜಯಕುಮಾರ್ ಹಿರೇಮಠ ಲೋಕಾಯಕ್ತಕ್ಕೆ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದು ಮಾಡುವಂತೆ ಬಿಎಸ್ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಏಕಸದಸ್ಯ ಪೀಠ ಅರ್ಜಿಯನ್ನು ವಜಾ ಮಾಡಿದ್ದು ಅಲ್ಲದೇ ಯಡಿಯೂರಪ್ಪ ಅವರಿಗೆ 25 ಸಾವಿರ ದಂಡ ಪಾವತಿಸುವಂತೆ ಆದೇಶ ನೀಡಿದೆ.
ಮಠದಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಎರಡನೆಯ ಆರೋಪಿಯಾಗಿದ್ದಾರೆ. ಜೊತೆಗೆ ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ.
ನ್ನೊಂದು ಪ್ರಕರಣವಾದ ದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲೂ ಕೂಡ ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿದೆ. ಸಾಮಾಜಿಕ ಹೋರಾಟಗಾರ ಅಲಂಪಾಷಾ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಪರಿಶೀಲಿಸಿ ತನಿಖೆಯನ್ನು ಮುಂದುವರೆಸಲು ಆದೇಶವನ್ನು ನೀಡಿದೆ.
2016 ರಲ್ಲಿ ಈ ಪ್ರಕರಣವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ರದ್ದು ಪಡಿಸಿತ್ತು. ಕೆಳಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆಲಂ ಪಾಷಾ. ದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಮೊದಲ ಆರೋಪಿಯಾಗಿದ್ದರೆ ಯಡಿಯೂರಪ್ಪ ಅವರು ಎರಡನೆಯ ಆರೋಪಿಯಾಗಿದ್ದಾರೆ. 26 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಚಂಡೀಗಢ: ಹುಡುಗನಿಗೆ ಮದುವೇ ವಯಸ್ಸು ಆಗದಿದ್ದರೂ ವಯಸ್ಕ ದಂಪತಿ ಒಟ್ಟಿಗೆ ಜೀವಿಸಬಹುದು ಎಂದು ಪಂಜಾಬ್ ಹರ್ಯಾಣ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ವಯಸ್ಕ ದಂಪತಿ ಕಾನೂನಿನ ವ್ಯಾಪ್ತಿಯ ಒಳಗಡೆ ತಮ್ಮ ಜೀವನವನ್ನು ನಡೆಸುವ ಎಲ್ಲ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾ. ಅಲ್ಕಾ ಸರೀನ್ ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂಬುದನ್ನು ಸಮಾಜ ನಿರ್ಧರಿಸಲು ಸಾಧ್ಯವಿಲ್ಲ. ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೆ ಜೀವನದ ಹಕ್ಕನ್ನು ನೀಡಿದೆ. ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವು ಜೀವನದ ಹಕ್ಕಿನ ಒಂದು ಪ್ರಮುಖ ಭಾಗ. ಈ ಪ್ರಕರಣದಲ್ಲಿ ಹುಡುಗನ ವಿವಾಹದ ವಯಸ್ಸು ಮೀರದೇ ಇದ್ದರೂ ಮಗಳು ಆತನ ಜೊತೆ ಒಟ್ಟಿಗೆ ಜೀವಿಸಬಾರದು ಎಂದು ಪೋಷಕರು ಆಕೆಯ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಪೀಠ ಹೇಳಿದೆ.
ಕೋರ್ಟ್ ಫತೇಘರ್ ಪೊಲೀಸರಿಗೆ ಈ ದಂಪತಿಗೆ ಕಾನೂನಿನ ಪ್ರಕಾರ ರಕ್ಷಣೆ ನೀಡಬೇಕೆಂದು ಸೂಚಿಸಿದೆ.
ಏನಿದು ಪ್ರಕರಣ?
19 ವರ್ಷದ ಯುವತಿ ಮತ್ತು 20 ವರ್ಷದ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ತಿಳಿದು ಯುವತಿಯ ಪೋಷಕರು ಪ್ರೇಮಿಗಳಿಗೆ ಥಳಿಸಿದ್ದಾರೆ. ಹುಡುಗನ ಜೊತೆ ಜೀವಿಸಬಾರದು ಎಂದು ಯುವತಿಗೆ ಪೋಷಕರು ಒತ್ತಡ ಹಾಕಿದ್ದಾರೆ.
ಘಟನೆಯ ಬಳಿಕ ಪ್ರೇಮಿಗಳು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದರು. ಆದರೆ ಇಲ್ಲಿ ರಕ್ಷಣೆ ಸಿಗಲಿಲ್ಲ. ಹೀಗಾಗಿ ಯವತಿ ಪೊಲೀಸರು ನನ್ನ ಪೋಷಕರ ಪರ ಕೆಲಸ ಮಾಡಿ ತನಗೆ ಯಾವುದೇ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಯಾವುದು ಸರಿ? ಯಾವುದು ತಪ್ಪು ಎಂಬ ತೀರ್ಮಾನವನ್ನು ತೆಗೆದುಕೊಳ್ಳಲು ಯುವತಿ ಸ್ವತಂತ್ರವಾಗಿದ್ದಾಳೆ. ಈ ವಿಚಾರದಲ್ಲಿ ಯಾರೂ ಆಕೆಗೆ ಬಲವಂತ ಮಾಡುವಂತಿಲ್ಲ ಎಂದು ಹೇಳಿದೆ. ಈಗ ಯುವತಿ ಮನೆಯನ್ನು ತೊರೆದು ಯುವಕನ ಜೊತೆ ಒಟ್ಟಿಗೆ ಈಗ ಜೀವನ ನಡೆಸುತ್ತಿದ್ದಾಳೆ.
ಮೊದಲು ಹೆಣ್ಣುಮಕ್ಕಳ ಮದುವೆ ವಯಸ್ಸು 15 ಇತ್ತು. ಶಾರದಾ ಕಾಯ್ದೆ 1929 ಅಡಿಯಲ್ಲಿ 1978ರ ನಂತರ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15ರಿಂದ 18ಕ್ಕೆ ಹೆಚ್ಚಿಸಲಾಗಿದ್ದರೆ ಗಂಡು ಮಕ್ಕಳಿಗೆ ಮದುವೆ ವಯಸ್ಸನ್ನು 21ಕ್ಕೆ ನಿಗದಿಗೊಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು.
– 72 ಕೀಲಿಗಳನ್ನು ಕೋರ್ಟ್‍ಗೆ ನೀಡಿದ ಸಿಬಿಐ
– 103 ಕೆ.ಜಿ.ಚಿನ್ನ ನಾಪತ್ತೆ
ಚೆನ್ನೈ: ಕುತೂಹಲಕಾರಿ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದ್ದು, ಸಿಬಿಐ ಕಸ್ಟಡಿಯಲ್ಲಿದ್ದ ಬರೋಬ್ಬರಿ 45 ಕೋಟಿ ರೂ. ಬೆಲೆ ಬಾಳುವ 103 ಕೆ.ಜಿ. ಚಿನ್ನ ಕಾಣೆಯಾಗಿದೆ. ಸಿಬಿಐ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಚಿನ್ನ ಇದಾಗಿದ್ದು, ನಾಪತ್ತೆಯಾಗಿದೆ.
ಕಾಣೆಯಾಗಿರುವ ಚಿನ್ನದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶ ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಸಿಬಿ-ಸಿಐಡಿಗೆ ವಹಿಸಲಾಗಿದೆ. 2012ರಲ್ಲಿ ಚೆನ್ನೈನ ಸುರಾನಾ ಕಾರ್ಪೋರೇಷನ್ ಲಿಮಿಟೆಡ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದಾಗ 400.5 ಕೆ.ಜಿ. ಬೆಳ್ಳಿ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 103 ಕೆ.ಜಿ.ಚಿನ್ನವನ್ನು ಎಗರಿಸಲಾಗಿದೆ.
ದಾಳಿ ಬಳಿಕ ವಶಪಡಿಸಿಕೊಳ್ಳಲಾದ ಚಿನ್ನಾಭರಣವನ್ನು ಸಿಬಿಐ ತನ್ನ ವಶದಲ್ಲಿ ಸುರಾನಾ ಕಾರ್ಪ್‍ನ ಸುರಕ್ಷಿತ ಕೊಠಡಿಗಳಲ್ಲಿ ಇಟ್ಟುಕೊಂಡಿತ್ತು. ಅಲ್ಲದೆ ಸಿಬಿಐ ಪ್ರಕರಣಗಳಿಗಾಗಿ ಇರುವ ಚೆನ್ನೈನ ಪ್ರಧಾನ ವಿಶೇಷ ನ್ಯಾಯಾಲಯಕ್ಕೆ 72 ಕೀಲಿಗಳನ್ನು ನೀಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.
ನ್ಯಾಯಾಲಯಕ್ಕೆ ನೀಡಿದ ವಿವರಣೆಯಲ್ಲಿ ಸಿಬಿಐ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದು, ವಶಪಡಿಸಿಕೊಳ್ಳುವ ಸಮಯದಲ್ಲಿ ಚಿನ್ನವನ್ನು ಒಟ್ಟಿಗೆ ತೂಕ ಮಾಡಲಾಗಿದೆ. ಇದನ್ನು ಲಿಕ್ವಿಡೇಟರ್‍ಗೆ ಹಸ್ತಾಂತರಿಸುವಾಗ ಚಿನ್ನವನ್ನು ಪ್ರತ್ಯೇಕವಾಗಿ ತೂಗಿಸಲಾಗುತ್ತದೆ. ವ್ಯತ್ಯಾಸಕ್ಕೆ ಇದೂ ಸಹ ಕಾರಣವಾಗಿದೆ ಎಂದು ತಿಳಿಸಿದೆ. ಸುರಾನಾ ಹಾಗೂ ಎಸ್‍ಬಿಐ ನಡುವಿನ ಸಾಲ ತೀರಿಸಲು ಲಿಕ್ವಿಡೇಟರ್ ನೇಮಿಸಲಾಗಿದೆ.
ಸಿಬಿಐ ವಾದವನ್ನು ಮದ್ರಾಸ್ ಹೈ ಕೋರ್ಟ್ ತಿರಸ್ಕರಿಸಿದ್ದು, ಎಸ್‍ಪಿ ಅಧಿಕಾರಿಯೊಂದಿಗೆ ಸಿಬಿ-ಸಿಐಡಿ ಅಧಿಕಾರಿಗಳಿಂದ ತನಿಖೆ ನಡೆಸಲು ಸೂಚಿಸಿದೆ. 6 ತಿಂಗಳೊಳಗೆ ತನಿಖೆ ಮುಗಿಸುವಂತೆ ನ್ಯಾಯಾಲಯ ಸಿಬಿ-ಸಿಐಡಿಗೆ ಸೂಚಿಸಿದೆ.
ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ವಹಿಸಿದರೆ ನಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಹೈ ಕೋರ್ಟ್ ಪ್ರತಿಕ್ರಿಯಿಸಿ, ಕಾನೂನು ಅಂತಹ ಅನುಮಾನವನ್ನು ಅನುಮತಿಸುವುದಿಲ್ಲ. ಎಲ್ಲ ಪೊಲೀಸರನ್ನು ನಂಬಬೇಕು. ಸಿಬಿಐಗೆ ವಿಶೇಷ ಕೊಂಬುಗಳಿವೆ, ಸ್ಥಳೀಯ ಪೊಲೀಸರಿಗೆ ಬಾಲ ಮಾತ್ರ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದೆ.
– ಹೈಕೋರ್ಟ್ ಚಾಟಿಯಿಂದ ಎಚ್ಚೆತ್ತ ಬಿಬಿಎಂಪಿ – ಅಪಘಾತವಾದ 1 ತಿಂಗಳ ಒಳಗಡೆ ಅರ್ಜಿ ಸಲ್ಲಿಕೆ ಕಡ್ಡಾಯ
ಬೆಂಗಳೂರು: ಹೆಲ್ಮೆಟ್ ಹಾಕಿಲ್ಲದಿಂದರೆ ದಂಡ. ಮಾಸ್ಕ್ ಹಾಕದಿದ್ದರೆ ಫೈನ್. ಆದರೆ ರಸ್ತೆ ಸರಿ ಮಾಡದ ಬಿಬಿಎಂಪಿಗೆ ಏನು ದಂಡ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕರ್ನಾಟಕ ಹೈಕೋರ್ಟ್ ಚಾಟಿ ಏಟಿಗೆ ಕೊನೆಗೂ ಎಚ್ಚೆತ್ತ ಬಿಬಿಎಂಪಿ ರಸ್ತೆ ಗುಂಡಿಯಿಂದ ಆಗುವ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದೆ. ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದವರಿಗೆ ಪರಿಹಾರ ಪಡೆಯಲು ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ.
ಫುಟ್‌ಪಾತ್ ಗಳ ಎಡವಟ್ಟಿನಿಂದ ಗಾಯ, ರಸ್ತೆಗುಂಡಿಯಿಂದಾಗಿ ಆಗುವ ಅಪಘಾತದಲ್ಲಿ ಗಾಯ/ ಸಾವಿಗೀಡಾದವರಿಗೆ ಪರಿಹಾರ ಸಿಗಲಿದೆ.
ಪರಿಹಾರ ಹೇಗೆ ಸಿಗಲಿದೆ?
ಸಂತ್ರಸ್ತರು ಪೊಲೀಸ್ ದೂರಿನೊಂದಿಗೆ ಬಿಬಿಎಂಪಿ ವಲಯ ಆಯುಕ್ತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಕ್ಷಿಗಳಾಗಿ ಪೊಲೀಸ್ ದೂರು, ಪ್ರತ್ಯಕ್ಷದರ್ಶಿಯ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಗಣಿಸಿ ಪರಿಹಾರ ನೀಡಲಾಗುತ್ತದೆ. ಅಪಘಾತವಾದ ದಿನದಿಂದ 30 ದಿನಗಳ ಒಳಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.
ಎಷ್ಟು ಪರಿಹಾರ?
ಕೆಟ್ಟ ರಸ್ತೆ ಅಥವಾ ಗುಂಡಿಗೆ ಬಿದ್ದು ಅಪಘಾತಗೊಂಡರೆ ಗರಿಷ್ಟ 15 ಸಾವಿರ, ಮೃತಪಟ್ಟರೆ 3 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲಿದೆ. ಸಣ್ಣ ಪ್ರಮಾಣದ ಗಾಯಕ್ಕೆ 5 ಸಾವಿರ ರೂ., ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ 10 ಸಾವಿರ ರೂ. ಸಿಗಲಿದೆ.
ತಿರಸ್ಕರಿಸಬಹುದು:
1 ತಿಂಗಳ ಒಳಗಡೆ ಅರ್ಜಿ ಸಲ್ಲಸದೇ ಇದ್ದರೆ, ಸರಿಯಾದ ದಾಖಲೆಗಳು ಇರದಿದ್ದರೆ ತಿರಸ್ಕರಿಸಬಹುದು. ರಸ್ತೆ ಗುಣಮಟ್ಟದ ಬಗ್ಗೆ ಎಚ್ಚರಿಕೆ ಫಲಕ ಹಾಕಿದ್ದರೂ ಆ ಜಾಗದಲ್ಲಿ ಅಪಘಾತ ಸಂಭವಿಸಿದರೆ ಪರಿಹಾರದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಕೋರ್ಟ್ ಏನು ಹೇಳಿತ್ತು?
ಕೋರಮಂಗಲದ ನಿವಾಸಿ ವಿಜಯನ್ ಮೆನನ್ 2015ರಲ್ಲಿ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಈ ವರ್ಷದ ಫೆಬ್ರವರಿಯಲ್ಲಿ ಸಿಜೆ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯಪೀಠದಲ್ಲಿ ನಡೆದಿತ್ತು.
ಈ ವೇಳೆ ರಸ್ತೆಗುಂಡಿಯಿಂದ ಸಂಭವಿಸುವ ಅಪಘಾತ ಹಾಗೂ ಸಾವು ನೋವಿಗೆ ಪರಿಹಾರ ನೀಡುವ ಕುರಿತಂತೆ ಕೋರ್ಟ್ ಆದೇಶವನ್ನು ಪಾಲಿಸದ್ದಕ್ಕೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಬಿಎಂಪಿಯ ಮಾಜಿ ಆಯಕ್ತ ಬಿ.ಎಚ್.ಅನಿಲ್‌ಕುಮಾರ್‌ಗೆ ಬೆವರಿಳಿಸಿದ ಹೈಕೋರ್ಟ್ ಬೇಷರತ್ ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.
ಬೆಂಗಳೂರು: ನಮ್ಮಿಂದಲೇ ಸರ್ಕಾರ ಬಂದರೂ ನಮ್ಮ ಜೊತೆ ನಿಲ್ಲಲಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಸಮಧಾನ ಹೊರ ಹಾಕಿದ್ದಾರೆ.
ಹೈ ಕೋರ್ಟ್ ತೀರ್ಪಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮಿಂದ ಸರ್ಕಾರ ಬಂದರೂ, ನಮ್ ಜೊತೆ ನಿಲ್ಲಲಿಲ್ಲ. ಕಾನೂನಿನ ವಿಚಾರದಲ್ಲಿ ಯಾರೂ ಸಹಾಯ ಮಾಡಲಿಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ಅಭ್ಯರ್ಥಿಗಳ ಪಟ್ಟಿಯಿಂದ ನನ್ನ ಹೆಸರು ತೆಗೆದರು. ನನ್ನ ಅನುಭವ ಬಳಸಿಕೊಳ್ಳಬಹುದಿತ್ತು. ಆದರೆ ಕಡೆಗಣಿಸಿದರು, ಎಲ್ಲವನ್ನೂ ನಾನು ಎದುರಿಸುತ್ತೇನೆ. ನನಗೂ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದ್ದರೆ ಮಂತ್ರಿ ಆಗುತ್ತಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಸಾರಾ ಮಹೇಶ್ ಕೊಚ್ಚೆ ಗುಂಡಿ, ಕಲ್ಲೆಸೆದು ಹೊಲಸು ಮಾಡಿಕೊಳ್ಳಲ್ಲ- ಎಚ್.ವಿಶ್ವನಾಥ್
ಪರಿಷತ್ ಚುನಾವಣೆ ವೇಳೆ ನನ್ನ ಹೆಸರು ಯಾಕೆ ತೆಗೆದರು ಅಂತ ಗೊತ್ತಿಲ್ಲ. ನನ್ನ ಬಗ್ಗೆ ಎಜಿಗೆ ಅನಾದರ ಯಾಕೆ, ಅಡ್ವೊಕೇಟ್ ಜನರಲ್ ನನ್ನ ಜೊತೆ ಮಾತಾಡಲಿಲ್ಲ. ಸರಿಯಾಗಿ ಕೆಲಸ ಮಾಡಲಿಲ್ಲ. ನಾಮನಿರ್ದೇಶನದ ಬಗ್ಗೆ ಅವರು ಸ್ಪಷ್ಟವಾಗಿ ಹೇಳಲಿಲ್ಲ ಎಂದು ಎಜಿ ಮೇಲೆ ಸಹ ವಿಶ್ವನಾಥ್ ಆರೋಪ ಮಾಡಿದ್ದಾರೆ. ಬಿಜೆಪಿ ಕೋರ್ ಕಮಿಟಿಗೆ ಜೂನ್ ನಲ್ಲಿ ಪರಿಷತ್ ಗೆ ನನ್ನ ಹೆಸರೂ ಸೇರಿಸಿ ನಾಲ್ವರ ಹೆಸರು ಕಳುಹಿಸಲಾಗಿತ್ತು. ಅಲ್ಲಿಂದ ಪಟ್ಟಿ ಬರುವಾಗ ನನ್ನ ಹೆಸರು ಇರಲಿಲ್ಲ. ದೆಹಲಿಯಲ್ಲಿ ನನ್ನ ಹೆಸರು ತೆಗೆಸಿದ್ದು ಯಾಕೆ ಎಂದು ಬಿಜೆಪಿ ನಾಯಕರಲ್ಲಿ ಕೇಳಿದೆ. ನಿಮ್ಮನ್ನು ನಾಮನಿರ್ದೇಶನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್
ಇಂದು ಸಿಎಂ ಜೊತೆ ಮಾತನಾಡುತ್ತೇನೆ. ನನ್ನ ಬಗ್ಗೆ ಕಾಳಜಿ ತೋರಿ ಮಾತನಾಡಿದವರಿಗೆ ಧನ್ಯವಾದಗಳು. ನನಗೆ ತೀರ್ಪಿನ ಪ್ರತಿ ಸಿಕ್ಕ ಮೇಲೆ ವಕೀಲರ ಜೊತೆ ಚರ್ಚೆ ಮಾಡುತ್ತೇನೆ. ಬಳಿಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದರು.
ನಿನ್ನೆ ಹೈಕೋರ್ಟ್ ನಲ್ಲಿ ಸಚಿವ ಸ್ಥಾನದ ಅನರ್ಹತೆ ಬಗ್ಗೆ ತೀರ್ಪು ಬಂದಿದೆ. ನೆಲದ ಕಾನೂನನ್ನು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ತೀರ್ಪನ್ನು ಗೌರವದಿಂದ ಕಾಣ್ತೇನೆ. ಮುಂದೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ. ರಾಜಕಾರಣವನ್ನು ಲಾಭ, ನಷ್ಟ, ಸೋಲು, ವ್ಯವಹಾರವಾಗಿ ತಗೊಂಡಿಲ್ಲ. ರಾಜಕೀಯವನ್ನು ಸಾಂಸ್ಕ್ರತಿಕ ಚಟುವಟಿಕೆಯಾಗಿ ತೆಗೆದುಕೊಂಡಿದ್ದೇನೆ. ಏನೋ ದೊಡ್ಡ ದುರಂತ ಆಗಿದೆ ಎಂದು ಭಾವಿಸಿಲ್ಲ. ವಿಶ್ವನಾಥ್ ಗೆ ಏನೂ ಆಗಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ, ಕುಟುಂಬ ರಾಜಕಾರಣ ಕೊನೆಗೊಳಿಸಲು ಬಿಜೆಪಿಗೆ ಬಂದೆವು. ಕ್ಷಿಪ್ರ ಕ್ರಾಂತಿ ನಡೆದು ಬಿಜೆಪಿ ಸರ್ಕಾರ ಬಂತು. ನಾವು ಮಂತ್ರಿ ಆಗಬೇಕು ಎಂದು ಬಯಸಿ ಸರ್ಕಾರ ಬೀಳಿಸಲಿಲ್ಲ. ಕೆಲವರು ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ ಎಂದರು.
ಬೆಂಗಳೂರು: ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿದ್ದ ಎಚ್.ವಿಶ್ವನಾಥ್ ಅವರಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.
ವಿಧಾನ ಪರಿಷತ್‍ನ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ಕೋರಿ ವಕೀಲ ಎ.ಎಸ್. ಹರೀಶ್ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಧ್ಯಂತರ ಆದೇಶ ಪ್ರಕಟಿಸಿತು.
ಸಂವಿಧಾನದ 164 (1ಬಿ), 361 ಬಿ ಅಡಿ ಹೆಚ್.ವಿಶ್ವನಾಥ್ ಅವರು ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಹೀಗಾಗಿ ಹಾಲಿ ಪರಿಷತ್ ಅವಧಿ ಮುಗಿಯುವವರೆಗೆ ಅನರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ, ಎಸ್.ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. ಈ ಆದೇಶದ ಅನ್ವಯ 2021ರವರೆಗೆ ವಿಶ್ವನಾಥ್ ಮಂತ್ರಿಯಾಗಲು ಸಾಧ್ಯವಿಲ್ಲ
ತನ್ನ ಆದೇಶದಲ್ಲಿ ವಿಶ್ವನಾಥ್ ಅವರಿಗೆ ಮಂತ್ರಿಯಾಗಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ಎಂಟಿಬಿ ನಾಗರಾಜ್, ಆರ್.ಶಂಕರ್ ಮಂತ್ರಿಯಾಗಬಹುದು ಎಂದು ಹೇಳಿದೆ. ಈ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ, ಸಿಎಂಗೆ ಹೈಕೋರ್ಟ್ ಸೂಚನೆ ನೀಡಿದೆ.
ಅನರ್ಹರಾದವರು ಮರು ಆಯ್ಕೆಯಾಗಲು ಮಾತ್ರ ಅವಕಾಶವಿದೆ. ಆದರೆ ಎ.ಹೆಚ್‍ವಿಶ್ವನಾಥ್ ನಾಮನಿರ್ದೇಶಿತ ಶಾಸಕರಾಗಿದ್ದಾರೆ. ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ವಿಧಾನಸಭೆಯಿಂದ ಪರಿಷತ್‍ಗೆ ಆಯ್ಕೆಯಾಗಿದ್ದಾರೆ. ಹಿಂಬಾಗಿಲಿನಿಂದ ಪರಿಷತ್‍ಗೆ ಆಯ್ಕೆ ಆಗುವುದನ್ನು ನಿರ್ಬಂಧಿಸಿ ಎಂದು ಅರ್ಜಿದಾರರು ಮನವಿ ಮಾಡಿದ್ದರು. ಅರ್ಜಿದಾರರ ಪರವಾಗಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ವಾದ ಮಾಡಿದ್ದರು.
ಎಚ್ ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್, ಆರ್ ಶಂಕರ್ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಮೂವರೂ ಜನರಿಂದ ಆಯ್ಕೆಯಾಗದೇ ಚುನಾಯಿತ ಶಾಸಕರಿಂದ ಆಯ್ಕೆಯಾಗಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಹಾಗಾಗಿ, ಅವರನ್ನು ಸಚಿವರನ್ನಾಗಿ ನೇಮಿಸಬಾರದು ಎಂದು ಪ್ರಶಾಂತ್ ಭೂಷಣ್ ವಾದಿಸಿದ್ದರು.
ಯಾಕಿಲ್ಲ ಮಂತ್ರಿ ಸ್ಥಾನ?
ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಲಾಗಿದ್ದರೆ, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಎಂಟಿಬಿ, ಶಂಕರ್ ಆಯ್ಕೆ ಆಗಿದ್ದರು. ವಿಶ್ವನಾಥ್ ಯಾವುದೇ ಚುನಾವಣೆ ನಡೆಯದೇ ಅವಿರೋಧವಾಗಿ ಪರಿಷತ್ ಮೆಟ್ಟಿಲು ಹತ್ತಿದ ಕಾರಣ ಮಂತ್ರಿ ಸ್ಥಾನ ಮಾಡಲು ಬರುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಲಿ ವಿಧಾನಸಭೆ ಮುಗಿಯುವರೆಗೆ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಪ್ರಕಟಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ವಿಧಾನಸಭೆ ಮುಗಿಯುವರೆಗೂ ಅನರ್ಹತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬಹುದು ಎಂದು ಮಹತ್ವದ ಆದೇಶವನ್ನು ಪ್ರಕಟಿಸಿತ್ತು.
ಈ ಕಾರಣಕ್ಕೆ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹುಣಸೂರು ಮತ್ತು ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತ ಹಿನ್ನೆಲೆಯಲ್ಲಿಇಬ್ಬರನ್ನು ಬಿಜೆಪಿ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡಲು ಮುಂದಾಗಿತ್ತು. ಈ ನಡುವೆ ಹೈಕೋರ್ಟ್‌ನಲ್ಲಿ ಅನರ್ಹರಾದವರಿಗೆ ಪರಿಷತ್ ಮೂಲಕ ಮಂತ್ರಿಯಾಗಲು ನಿರ್ಬಂಧಿಸಿ ಕೋರಿ ಪಿಐಎಲ್ ಸಲ್ಲಿಕೆಯಾಗಿತ್ತು. ಈಗ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದ ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಕೈ ತಪ್ಪಿದರೆ ಎಂಟಿಬಿಗೆ ಮಂತ್ರಿಯಾಗುವ ಅವಕಾಶ ಸಿಕ್ಕಿದೆ.
– ಗ್ರಾಮೀಣ ಭಾಗದಲ್ಲಿ ಮಕ್ಕಳು ಹೈನುಗಾರಿಕೆ ಉದ್ಯಮದಲ್ಲಿರುವುದು ಸಾಮಾನ್ಯ – ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ಆದೇಶ
ಬೆಂಗಳೂರು: ಅಪಘಾತಗೊಂಡು ಮೃತಪಟ್ಟ 17 ವರ್ಷದ ಬಾಲಕನು ಹೈನುಗಾರಿಕೆ ಉದ್ಯಮದಲ್ಲಿ ಭಾಗಿ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಮಹತ್ವದ ಆದೇಶ ಪ್ರಕಟಿಸಿದೆ.
ಎಂಎಚ್ ಅಮಿತ್ ಎಂಬಾತನ ಕುಟುಂಬದವರು ರಾಣೇಬೆನ್ನೂರಿನ ಮೋಟಾರು ಅಪಘಾತ ಪರಿಹಾರಗಳ ಟ್ರಿಬ್ಯುನಲ್ ನೀಡಿದ್ದ 6.6 ಲಕ್ಷ ಪರಿಹಾರ ಮೊತ್ತದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಬಾಲ ಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯ್ದೆ 1986 ಸೆಕ್ಷನ್ 3 ಕೆಲವೊಂದು ಉದ್ಯೋಗದಲ್ಲಿ ಬಾಲಕಾರ್ಮಿಕರು ಕೆಲಸ ಮಾಡುವುದನ್ನು ನಿಷೇಧಿಸುತ್ತದೆ. ಆದರೆ ಇದು 17 ವರ್ಷದ ಬಾಲಕ ಹೈನುಗಾರಿಕೆ ಉದ್ಯಮದಲ್ಲಿ ತೊಡಗುವುದನ್ನು ನಿಷೇಧಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಅಥವಾ ಈ ರೀತಿಯ ಕೆಲಸದಲ್ಲಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತೊಡಗುವುದು ಸಾಮಾನ್ಯ ಹೈಕೋರ್ಟ್‌ನ ನ್ಯಾ. ಜಿ. ನರೇಂದರ್ ಮತ್ತು ನ್ಯಾ. ಎಂಐ ಅರುಣ್ ಅವರಿದ್ದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಟ್ರಿಬ್ಯುನಲ್ ಈ ಎಲ್ಲ ವಿಚಾರವನ್ನು ಪರಿಗಣಿಸದೇ ಕೇವಲ ಬಾಲಕ ಎಂದು ಅಭಿಪ್ರಾಯಕ್ಕೆ ಬಂದಿರುವುದು ಸರಿಯಲ್ಲ ಎಂದು ಹೇಳಿದ ಪೀಠ ಪರಿಹಾರದ ಮೊತ್ತವನ್ನು 17 ಲಕ್ಷಕ್ಕೆ ಏರಿಸಿ ಆದೇಶ ಪ್ರಕಟಿಸಿತು.
ಏನಿದು ಪ್ರಕರಣ?
2017ರ ಜುಲೈ 17 ರಂದು ಎನ್‌ಆರ್ ಪುರ ರಸ್ತೆಯಲ್ಲಿ ಬೈಕಿಗೆ ಟ್ರಕ್ ಗುದ್ದಿತ್ತು. ಈ ರಸ್ತೆ ಅಪಘಾತದಲ್ಲಿ ಹಿಂದೆ ಕುಳಿತುಕೊಂಡು ಗಂಭೀರವಾಗಿ ಗಾಯಗೊಂಡಿದ್ದ 17 ವರ್ಷದ ಅಮಿತ್ ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.
ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮದ ಪೋಷಕರಾದ ಎಂಇ ಹೊನ್ನಪ್ಪ ಮತ್ತು ಚೇತನಾ ಅವರು ಮಗ ಅಮಿತ್ ಮೃತಪಟ್ಟ ಹಿನ್ನೆಲೆಯಲ್ಲಿ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋರಿ ಟ್ರಿಬ್ಯುನಲ್ ಮೊರೆ ಹೋಗಿದ್ದರು. ವಿದ್ಯಾರ್ಥಿಯಾಗಿದ್ದ ಅಮಿತ್ ಹೈನುಗಾರಿಕೆಯಲ್ಲಿ ತೊಡಗಿದ್ದ. ಹೀಗಾಗಿ ಆತನು ಕುಟುಂಬದಲ್ಲಿ ದುಡಿಯುವ ಸದಸ್ಯರಲ್ಲಿ ಒಬ್ಬನಾಗಿದ್ದ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಟ್ರಿಬ್ಯುನಲ್ 2018ರ ಸೆ.25 ರಂದು ತೀರ್ಪು ಪ್ರಕಟಿಸಿತ್ತು. ಸಲ್ಲಿಕೆಯಾಗಿರುವ ಸಾಕ್ಷ್ಯಗಳು ಅಮಿತ್ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿದ್ದ ಎಂಬುದನ್ನು ಸಾಬೀತು ಪಡಿಸಲು ವಿಫಲವಾಗಿದೆ. ಹೀಗಾಗಿ ಆತನನ್ನು ಆದಾಯ ಇಲ್ಲದ ವ್ಯಕ್ತಿ ಮತ್ತು ಮಗು ಎಂದು ಪರಿಗಣಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟು 6.6 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಪರಿಹಾರದ ಮೊತ್ತ ಬಹಳ ಕಡಿಮೆ ಆಗಿದೆ ಎಂದು ಹೇಳಿ ಪೋಷಕರು ಟ್ರಿಬ್ಯುನಲ್ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.