Tag: high court

  • ಬಡತನದಿಂದ ಶಿಕ್ಷಣ ನಿಲ್ಲಿಸಬಾರದು – ಆನ್‍ಲೈನ್ ಪಾಠ ಸಿಗದ್ದಕ್ಕೆ ಹೈಕೋರ್ಟ್ ಕಳವಳ

    ಬಡತನದಿಂದ ಶಿಕ್ಷಣ ನಿಲ್ಲಿಸಬಾರದು – ಆನ್‍ಲೈನ್ ಪಾಠ ಸಿಗದ್ದಕ್ಕೆ ಹೈಕೋರ್ಟ್ ಕಳವಳ

    ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆನ್‍ಲೈನ್ ಪಾಠ ಲಭ್ಯವಾಗದ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

    ಕೋವಿಡ್ ಕಾರಣದಿಂದ ಈಗ ಎಲ್ಲಾ ಕಡೆಯೂ ಆನ್‍ಲೈನ್ ಕ್ಲಾಸ್ ನಡೆಯುತ್ತಿದೆ. ಆದರೆ ಬಡತನ ಮತ್ತು ಆರ್ಥಿಕ ಹಿಂದುಳಿಕೆ ಮಕ್ಕಳ ಶಿಕ್ಷಣ ನಿಲ್ಲಿಸಲು ಕಾರಣ ಆಗಬಾರದು ಅಂತಾ ಹೈಕೋರ್ಟ್ ವಿಭಾಗೀಯ ಪೀಠದ ಅಭಿಪ್ರಾಯ ಪಟ್ಟಿದೆ.

    ಬಡಮಕ್ಕಳಿಗೆ ಉಚಿತವಾಗಿ ನೆಟ್, ಟ್ಯಾಬ್ ಮತ್ತು ಲ್ಯಾಪ್ ಟಾಪ್ ನೀಡುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ನ್ಯಾ.ಬಿ ವಿ ನಾಗರತ್ನ ಮತ್ತು ನ್ಯಾ. ಹಂಚಾಟೆ ಸಂಜೀವ್‍ಕುಮಾರ್ ಪೀಠದಲ್ಲಿ ನಡೆಯಿತು.

    ಶಿಕ್ಷಣ ಮುಂದುವರಿಕೆ ನಿಲ್ಲಿಸಲು ಬಡತನ ಕಾರಣವಾಗಬಾರದು. ಶಾಲೆಗಳನ್ನು ಪುನಾರಂಭಿಸುವ ನಿರ್ಧಾರವನ್ನು ಮಾತ್ರ ಲೆಕ್ಕಿಸದೆ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ತುರ್ತು ಅವಶ್ಯಕತೆಯಿದೆ ಎಂದು ಹೇಳಿತು. ಇದನ್ನೂ ಓದಿ : ನೆಟ್‍ವರ್ಕ್ ಗಾಗಿ ಅಟ್ಟಣಿಗೆ ಕ್ಲಾಸ್ ರೂಂ ನಿರ್ಮಿಸಿದ ಪಬ್ಲಿಕ್ ಹೀರೋ ಶಿಕ್ಷಕ ಸತೀಶ್

    ಟೆಕ್ನಿಕಲ್ ಸಮಸ್ಯೆ ಮತ್ತು ಸೌಲಭ್ಯ ಪಡೆಯಲಾಗದವರ ಬಗ್ಗೆ ಗಮನಿಸಬೇಕು. ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ ಹೊಂದಿರುವ ಕಾರ್ಯತಂತ್ರದ ಬಗ್ಗೆ ದಾಖಲೆ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತು. ಜುಲೈ 29ಕ್ಕೆ ಈ ಅರ್ಜಿಯ ವಿಚಾಣೆಯನ್ನು ಮುಂದೂಡಿಕೆ ಮಾಡಲಾಗಿದೆ.

  • ಎತ್ತಿನ ಮುಂದೆ ಚಕ್ಕಡಿ ಹೂಡಿದಂತೆ – ಜಿಂದಾಲ್ ಕೇಸ್, ಸರ್ಕಾರಕ್ಕೆ ಚಾಟಿ

    ಎತ್ತಿನ ಮುಂದೆ ಚಕ್ಕಡಿ ಹೂಡಿದಂತೆ – ಜಿಂದಾಲ್ ಕೇಸ್, ಸರ್ಕಾರಕ್ಕೆ ಚಾಟಿ

    ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರ ಆದೇಶ ನೀಡಿದ್ಯಾ ಎಂದು ಪ್ರಶ್ನಿಸಿ ಇದು ಎತ್ತಿನ ಮುಂದೆ ಚಕ್ಕಡಿ (ಎತ್ತಿನ ಗಾಡಿ) ಹೂಡಿದ ಹಾಗೆ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.

    ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ವರ್ಗಾವಣೆ/ಮಾರಾಟ ವಿಚಾರವಾಗಿ ವಾಸ್ತವಾಂಶವನ್ನು ಬಹಿರಂಗಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

    ಸಾಮಾಜಿಕ ಕಾರ್ಯಕರ್ತ ಕೆಎ ಪೌಲ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್ ಓಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ, ಸಂಪುಟ ಸಭೆ ಒಪ್ಪಿಗೆ ಪಡೆಯದೇ ಮೇ 6 ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ? ಈ ಸಂಬಂಧ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರದ ವಕೀಲರಿಗೆ ನಿರ್ದೇಶನ ನೀಡಿದೆ.

    ಸಂಪುಟದ ಒಪ್ಪಿಗೆ ಇಲ್ಲದೆ ಸರ್ಕಾರಿ ಆದೇಶ ಹೊರಡಿಸಿದ್ದು ಹೇಗೆ?. ಮೇ 6ರ ಸರ್ಕಾರಿ ಆದೇಶದ ಪ್ರತಿ ಹಾಗೂ ಜೂನ್ 15 ರ ಆದೇಶ ಕಾರ್ಯರೂಪ ಮೆಮೋ, ಸಂಪುಟದ ಒಪ್ಪಿಗೆ ಇಲ್ಲದೇ ಜಾರಿ ಮಾಡಿದ ಆದೇಶದ ಕುರಿತು ನಿರ್ದಿಷ್ಟವಾಗಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು. ಸಂಪುಟದ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರಿ ಆಸ್ತಿಯ ಮಾರಾಟ/ವರ್ಗಾವಣೆ ಆದೇಶ ಹೊರಡಿಸಬಹುದೇ? ಎಂಬುದರ ಬಗ್ಗೆ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ ಕೋರ್ಟ್ ಜುಲೈ 16ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಇದನ್ನೂ ಓದಿ: ಜಿಂದಾಲ್‍ಗೆ 3,667 ಎಕರೆ ಪರಭಾರೆ ಆದೇಶ ವಾಪಸ್ – ಕ್ಯಾಬಿನೆಟ್‍ನಲ್ಲಿ ಏನಾಯ್ತು?

    ಸಂಪುಟದ ಹಲವು ಸಚಿವರ ವಿರೋಧದ ಹೊರತಾಗಿ ಪರಭಾರೆ ಮಾಡಲಾಗಿದೆ. ಅತ್ಯಂತ ಕಡಿಮೆ ದರಕ್ಕೆ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆ ಸರ್ಕಾರ ಮಂಡಿಸಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

    ಕಳೆದ ವಿಚಾರಣೆ ವೇಳೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೂನ್.14ರಂದು ಬರೆದಿರುವ ಪತ್ರದ ಜೊತೆಗೆ ಅನುಪಾಲನಾ ಮೆಮೊವನ್ನು ಸಲ್ಲಿಸಿದ್ದರು. ಅದರಲ್ಲಿ ಸರ್ಕಾರ ಏಪ್ರಿಲ್ 26ರ ಸಂಪುಟ ಸಭೆಯಲ್ಲಿ ಜೆಎಸ್‍ಡಬ್ಲ್ಯು ಲಿಮಿಟೆಡ್‍ಗೆ ಕ್ರಮವಾಗಿ 2000.58 ಎಕರೆ ಮತ್ತು 1666.73 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಬಳಿಕ ನಡೆದ ಸಭೆಗಳಲ್ಲಿ ನಿರ್ಧಾರ ಫೈನಲ್ ಆಗಿರಲಿಲ್ಲ ಎಂದು ಉಲ್ಲೇಖ ಮಾಡಲಾಗಿತ್ತು. ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ ಇ ರಾಧಾಕೃಷ್ಣರನ್ನು ಪಿಐಎಲ್‍ನಲ್ಲಿ ಸಹ ಅರ್ಜಿದಾರರನ್ನಾಗಿ ಸೇರಿಸಲು ಒಪ್ಪಿಗೆ ಕೊಟ್ಟಿತ್ತು.

  • ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರ ನೀಡಿ – ಹೈಕೋರ್ಟ್

    ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರ ನೀಡಿ – ಹೈಕೋರ್ಟ್

    ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತೆ ಹೊಸ ಸೂಚನೆಯನ್ನು ಸರ್ಕಾರಕ್ಕೆ ನೀಡಿದೆ. ಸಾವನ್ನಪ್ಪಿದ 24 ಜನರ ಪೈಕಿ 13 ಜನರಿಗೆ 5 ಲಕ್ಷ ಪರಿಹಾರವನ್ನು ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ.

    ಆಕ್ಸಿಜನ್ ಕೊರತೆಯಾದ ರಾತ್ರಿ ಬೆಳಗ್ಗೆ 13 ಸಾವು ಸಂಭವಿಸಿದೆ. 13 ಮೃತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಿ ನಂತರ ಮೃತಪಟ್ಟ 11 ಜನರಿಗೆ 2 ಲಕ್ಷ ಪರಿಹಾರ ನೀಡಲು ಸೂಚನೆ ನೀಡಿದೆ.  ಇದನ್ನೂ ಓದಿ : ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬಕ್ಕೆ ಕಿಚ್ಚನ ನೆರವು

    ಆಯೋಗದ ವರದಿ ನಂತರ ಹೆಚ್ಚುವರಿ ಪರಿಹಾರದ ಬಗ್ಗೆ ನಿರ್ಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದನ್ನೂ ಓದಿ : ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

  • ಬಲವಂತದ ಲಸಿಕೆ ನೀಡುವ ನಿರ್ಧಾರ ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ: ಮೇಘಾಲಯ ಹೈಕೋರ್ಟ್

    ಬಲವಂತದ ಲಸಿಕೆ ನೀಡುವ ನಿರ್ಧಾರ ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ: ಮೇಘಾಲಯ ಹೈಕೋರ್ಟ್

    ಶಿಲ್ಲಾಂಗ್: ಬಲವಂತವಾಗಿ ಲಸಿಕೆ ನೀಡುವುದು ಅಥವಾ ಲಸಿಕೆ ಕಡ್ಡಾಯ ಮಾಡುವುದು ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಮೇಘಾಲಯದ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಮೇಘಾಲಯದ ನಗರಗಳಲ್ಲಿ ವ್ಯಾಪಾರ ವಹಿವಾಟು ಮಾಡುವ ಜನರಿಗೆ ಅಲ್ಲಿನ ಸ್ಥಳೀಯ ಆಡಳಿತ ಪ್ರತ್ಯೇಕ ಆದೇಶ ಹೊರಡಿಸಿ ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಸಣ್ಣ ವ್ಯಾಪಾರಿಗಳು, ಟ್ಯಾಕ್ಸಿ, ಕ್ಯಾಬ್ ಡ್ರೈವರ್ ಗಳು ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ತಮ್ಮ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಆದೇಶ ಹೊರಡಿಸಿತ್ತು.

    ಈ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಈ ರೀತಿ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಿದರೆ ಅದು ಮನುಷ್ಯನ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ವಿದೇಶಕ್ಕೆ ತೆರಳುವ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆ ಪಡೆಯುವ ಅಂತರ ಕಡಿತ

    ದೇಶದಲ್ಲಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಲಸಿಕೆ ಪಡೆಯುವುದು ಅನಿವಾರ್ಯ. ಆದರೆ ಕೆಲವು ಮೂಲಭೂತ ತತ್ವಗಳನ್ನು ಗಮನಿಸಿದಾಗ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲು ಆಗುವುದಿಲ್ಲ ಹಾಗೇನಾದರು ಮಾಡಿದರು ಮನುಷ್ಯನ ಜೀವನದ ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೊಮಡ್ಡರ್ ಮತ್ತು ನ್ಯಾಯಮೂರ್ತಿ ಎಚ್.ಎಸ್.ತಂಗ್ಖೀವ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

    ಆರೋಗ್ಯದ ಹಕ್ಕಿನ ಬಗ್ಗೆ ಗಮನಿಸಿದಾಗ ಲಸಿಕೆ ನೀಡುವುದು ಆರೋಗ್ಯ ರಕ್ಷಣೆಯ ಮೂಲಭೂತ ಹಕ್ಕಾಗಿದೆ. ಆದರೆ ಬಲವಂತವಾಗಿ ಲಸಿಕೆ ನೀಡುವುದು ಅಥವಾ ಕೆಲವು ನಿಯಮಗಳನ್ನು ತಂದು ಕಡ್ಡಾಯಗೊಳಿಸಿ ಲಸಿಕೆ ಪಡೆಯುವಂತೆ ಒತ್ತಡ ಹಾಕುವುದು ಮನುಷ್ಯನ ಮೂಲಭೂತ ಉದ್ದೇಶಕ್ಕೆ ದಕ್ಕೆ ತರುತ್ತದೆ ಮತ್ತು ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದು ವ್ಯಕ್ತಿಯ ಹಕ್ಕು, ಆಯ್ಕೆ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಿದಂತೆ ಆಗುತ್ತದೆ. ಒಬ್ಬ ತಾನು ಲಸಿಕೆ ಹಾಕದೆ ಇರಲು ನಿರ್ಧಾರ ಮಾಡಿದರೆ ಅದು ಆತನ ನಿರ್ಧಾರ. ಆದರೆ ಇದರಿಂದ ಇತರರ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಈ ವೇಳೆ ಪೀಠ ಕಳವಳ ವ್ಯಕ್ತಪಡಿಸಿದೆ.

  • ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಬೇಡಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಬೇಡಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

    ಬೆಂಗಳೂರು: ರೆಗ್ಯೂಲರ್ ಸ್ಟೂಡೆಂಟ್ಸ್ ಗಳನ್ನು ಸಾರ್ವತ್ರಿಕವಾಗಿ ಪಾಸ್ ಮಾಡುತ್ತೇವೆ ಎಂದು ಸರ್ಕಾರ ಆದೇಶ ನೀಡಿದ ಬೆನ್ನಲ್ಲೆ ರಿಪಿಟರ್ಸ್ ವಿದ್ಯಾರ್ಥಿಗಳು ಕೂಡ ನಮ್ಮನ್ನೂ ಪಾಸ್ ಮಾಡಿ ಎಂದು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡದಂತೆ ಹೈಕೋರ್ಟ್ ತಡೆ ಹಿಡಿದಿದೆ.

    ಹೌದು, ಕಳೆದ ವಾರ ರಿಪಿಟರ್ಸ್ ವಿಧ್ಯಾರ್ಥಿಗಳು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚನೆ ನೀಡಿತ್ತು. ಇಂದು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ತಮ್ಮ ನಿಲುವನ್ನು ತಿಳಿಸಿ ಈಗಾಗಲೇ 12 ತಜ್ಞರ ಸಮಿತಿ ರಚಿಸಿರುವುದಾಗಿ ಹೈಕೋರ್ಟಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಜೂನ್ 22ರಿಂದ ಮಂತ್ರಾಲಯದ ರಾಯರ ದರ್ಶನಕ್ಕೆ ಅವಕಾಶ

    76 ಸಾವಿರ ರಿಪೀಟರ್ಸ್‍ಗಳ ಫಲಿತಾಂಶದ ಬಗ್ಗೆ ತೀರ್ಮಾನ ಮಾಡಲಿದೆ. ತಜ್ಞರ ಸಮಿತಿ ಸಲಹೆ ಆಧರಿಸಿ ಸರ್ಕಾರ ತೀರ್ಮಾನಿಸಲಿದೆ. 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಕೃಷ್ಣಪ್ಪ ಹೈಕೋರ್ಟಿಗೆ ಮಾಹಿತಿ ರವಾನೆ ಮಾಡಿದರು.

    ರಿಪೀಟರ್ಸ್, ಸಾಮಾನ್ಯ ವಿದ್ಯಾರ್ಥಿಗಳಿಗೆ ತಾರತಮ್ಯ ಬೇಡ, ಖಾಸಗಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಅನಿವಾರ್ಯ ಎಂದು ನ್ಯಾ.ಬಿ.ವಿ. ನಾಗರತ್ನ ನೇತೃತ್ವದ ಪೀಠ ಅಭಿಪ್ರಾಯ ತಿಳಿಸಿತ್ತು. ಅಲ್ಲದೇ ವಿಚಾರಣೆ ಜುಲೈ 5 ಕ್ಕೆ ಮುಂದೂಡಿ ಸರ್ಕಾರದ ನಿಲುವು ತಿಳಿಸಲು ಸೂಚನೆ ನೀಡಿದೆ. ಇದನ್ನೂ ಓದಿ: ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್

  • ದ್ವಿತೀಯ ಪಿಯು ಫಲಿತಾಂಶಕ್ಕೆ ಹೈಕೋರ್ಟ್ ತಡೆ

    ದ್ವಿತೀಯ ಪಿಯು ಫಲಿತಾಂಶಕ್ಕೆ ಹೈಕೋರ್ಟ್ ತಡೆ

    ಬೆಂಗಳೂರು: ರಾಜ್ಯ ಹೈಕೋರ್ಟ್ ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ

    ಕೊರೊನಾ ರಣಾರ್ಭಟ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯು ವಿದ್ಯಾರ್ಥಿಗಳು ಪಾಸ್ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ರಿಪೀಟರ್ಸ್ ಅಂದ್ರೆ ಈಗಾಗಲೇ ಫೇಲ್ ಆಗಿರೋ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಿಯೇ ಪಾಸ್ ಮಾಡಲು ನಿರ್ಧರಿಸಿದೆ. ಸರ್ಕಾರದ ಈ ದ್ವಂದ್ವ ನಿರ್ಧಾರಕ್ಕೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

    ರಿಪೀಟರ್ಸ್ ಪರವಾಗಿ ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪರೀಕ್ಷೆ ಇಲ್ಲದೇ ಪಾಸ್ ಮಾಡೋದಾದರೆ ಎಲ್ಲರನ್ನು ಪಾಸ್ ಮಾಡಿ. ಕೇವಲ ರೆಗ್ಯೂಲರ್ ವಿದ್ಯಾರ್ಥಿಗಳನ್ನು ಪಾಸ್ ಮಾಡಿ, ರಿಪೀಟರ್ಸ್ ಗೆ ಪರೀಕ್ಷೆ ಮಾಡುವ ನಿರ್ಧಾರ ಸರಿಯಲ್ಲ. ಗುರುವಾರದವರೆಗೆ ಪಿಯು ಫಲಿತಾಂಶ ಪ್ರಕಟಿಸುವಂತಿಲ್ಲ. ಈ ಬಗ್ಗೆ ಗುರುವಾರದೊಳಗೆ ಸ್ಪಷ್ಟನೆ ನೀಡಿ ಎಂದು ಅಡ್ವೋಕೇಟ್ ಜನೆರಲ್‍ಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲಿಯವರೆಗೂ ಫಲಿತಾಂಶ ಪ್ರಕಟಿಸಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

    ಇದೇ ಗುರುವಾರ ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರ ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಿ ಪಾಸ್ ಮಾಡುವ ನಿರ್ಧಾರ ಕೈಗೊಳ್ಳುತ್ತಾ..? ಇಲ್ಲ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ ಎಂಬ ಕುತೂಹಲ ಮನೆ ಮಾಡಿದೆ.

  • ಸಿಡಿ ಕೇಸ್ – ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಯುವತಿ

    ಸಿಡಿ ಕೇಸ್ – ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಯುವತಿ

    ಬೆಂಗಳೂರು: ಇನ್ನೇನೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಿಗಲಿದೆ. ಎಸ್‍ಐಟಿ ಅತ್ಯಾಚಾರ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಗೆ ಮುಂದಾಗಿದೆ ಎಂಬ ಸುದ್ದಿ ಬರುತ್ತಿದ್ದಂತೆ ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿ ಮತ್ತೆ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಎಸ್‍ಐಟಿ ಈಗ ನಡೆಸುತ್ತಿರುವ ತನಿಖೆಯ ಮೇಲೆ ನಂಬಿಕೆ ಇಲ್ಲ. ಈಗ ಇರುವ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ ತನಿಖೆ ನಡೆಸುತ್ತಿದ್ದಾರೆ ಎಂಬ ಅನುಮಾನ ಇದೆ. ಅಲ್ಲದೇ ಆರೋಪಿ ಪ್ರಭಾವಿ ಆಗಿರೋದರಿಂದ ಸರಿಯಾಗಿ ವಿಚಾರಣೆಯೂ ನಡೆಯುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ ಮತ್ತು ಎಸ್‍ಐಟಿ ಮುಖ್ಯಸ್ಥರಿಗೆ ಉತ್ತರಿಸಲು ನೋಟಿಸ್ ನೀಡಿದೆ.

    ಪೋಷಕರ ಭೇಟಿಗೆ ಒಪ್ಪದ ಯುವತಿ:
    ಮೇ 27 ರಂದು ಸಿಡಿಯಲ್ಲಿದ್ದ ಯುವತಿ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ವೀಡಿಯೋ ವಿಚಾರಣೆ ವೇಳೆ, ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ನೀಡಿದ್ದಾಳೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ವಿಳಾಸದಲ್ಲಿ ಪ್ರಸ್ತುತ ವಾಸವಾಗಿರುತ್ತೇನೆ. ನಾನು ಸ್ವಂತ ಇಚ್ಛೆ ಇಂದ ವಾಸವಾಗಿದ್ದು, ನನಗೆ ಇಲ್ಲಿ ಇರುವುದಕ್ಕೆ ಯಾರದೇ ಒತ್ತಡ ಇರುವುದಿಲ್ಲ ಮತ್ತು ನನ್ನ ರಕ್ಷಣೆಗಾಗಿ ಬೆಂಗಳೂರು ನಗರದ ಪೋಲೀಸರು ಭದ್ರತೆಯನ್ನು ಒದಗಿಸುತ್ತಾರೆ ಹಾಗೂ ನಾನು ಸುರಕ್ಷಿತವಾಗಿ ಇರುತ್ತೇನೆ. ನಾನು ಪ್ರಾಪ್ತ ವಯಸ್ಕಳಿದ್ದು ನಾನು ಸದ್ಯ ನಮ್ಮ ತಂದೆ ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ. ಈ ಪ್ರಕರಣಗಳು ಮುಗಿದ ನಂತರ ನಾನು ಅವರನ್ನು ಭೇಟಿ ಆಗುತ್ತೇನೆ ಎಂದು ಹೇಳಿದ್ದರು.

    ಒಪ್ಪಿತ ಲೈಂಗಿಕ ಕ್ರಿಯೆನಾ?: ಪ್ರಕರಣದ ಆರಂಭದಲ್ಲಿ ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಆ ಯುವತಿ ಪ್ರಾಜೆಕ್ಟ್ ವಿಚಾರದಲ್ಲಿ ನನಗೆ ಪರಿಚಯ ಆಗಿದ್ದು ನಿಜ. ಅವಾಗಾವಾಗ ನಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದಳು. ಅವಾಗ ಇಬ್ಬರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದೀವಿ. ಅದು ಕೂಡ ಆಕೆಯ ಸಮ್ಮತಿಯ ಮೇರೆಗೆ ಎಂದು ಎಸ್‍ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಹಾನ್‌ ನಾಯಕ ಸೇರಿದಂತೆ 9 ಮಂದಿ ವಿರುದ್ಧ ಶೀಘ್ರವೇ ಕೇಸ್‌ – ಬಾಲಚಂದ್ರ ಜಾರಕಿಹೊಳಿ

    ನರೇಶ್ ಗೌಡ, ಶ್ರವಣ್‍ಗೆ ಜಾಮೀನು: ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‍ಮೇಲ್ ಕೇಸ್ ದಾಖಲು ಮಾಡಿದ್ರು. ಈ ಪ್ರಕರಣದ ಇಬ್ಬರು ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ಗೆ ಸಿಟಿ ಸಿವಿಲ್ ಕೋರ್ಟ್ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‍ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು. ಆರೋಪಿಗಳು ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ ಎಂದು ವಾದ ಮಾಡಿದ್ದ ಎಸ್‍ಐಟಿಗೆ ಈ ಆದೇಶದಿಂದ ಹಿನ್ನಡೆಯಾಗಿದೆ. ಅಲ್ಲದೇ ಆದೇಶ ನೀಡಿದ ನ್ಯಾಯಾಲಯ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ಏನಿದು ಪ್ರಕರಣ?
    ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.  ಇದನ್ನೂ ಓದಿ: ಮಹಾನಾಯಕ ಗಾಂ…ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡ್ತೇನೆ- ರಮೇಶ್ ಜಾರಕಿಹೊಳಿ ಆಕ್ರೋಶ

    ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಆ ಬಳಿಕದಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಸ್ವತಃ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಇಷ್ಟೆಲ್ಲಾ ಆದ ನಂತರ ಮಾಜಿ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಪಿಪಿಇ ಕಿಟ್ ಧರಿಸಿ ಉಪಚುನಾವಣೆಗೆ ಮತದಾನ ಮಾಡಿದ್ದರು. ಇದನ್ನೂ ಓದಿ:  ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

  • ಹೈಕೋರ್ಟ್ ಆದೇಶದಂತೆ ಮಡಿಕೇರಿ ರಾಜರ ಗದ್ದುಗೆ ಜಾಗದ ಸರ್ವೆ

    ಹೈಕೋರ್ಟ್ ಆದೇಶದಂತೆ ಮಡಿಕೇರಿ ರಾಜರ ಗದ್ದುಗೆ ಜಾಗದ ಸರ್ವೆ

    ಮಡಿಕೇರಿ: ಒತ್ತುವರಿಯಾಗಿರುವ ಮಡಿಕೇರಿ ನಗರದ ರಾಜರ ಗದ್ದುಗೆ ಜಾಗದ ಸರ್ವೆ ನಡೆಸುವಂತೆ ಹೈಕೋರ್ಟ್ ಮಡಿಕೇರಿ ತಹಶೀಲ್ದಾರರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ನಡೆಯಿತು.

    ಸರ್ವೆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಯಿಸೀನ್, ಬಷೀರ್ ಹಾಗೂ ಮನ್ಸೂರ್ ಅವರು ಮೊದಲು ಗದ್ದುಗೆಯ ಗಡಿಯನ್ನು ಸರ್ವೆ ಮೂಲಕ ಗುರುತಿಸುವ ಕೆಲಸ ಮಾಡಬೇಕು. ಹೀಗಾದಾಗ ಮಾತ್ರ ಒತ್ತುವರಿ ವಿಚಾರ ಬೆಳಕಿಗೆ ಬರಲಿದೆ ಎಂದು ತಹಶೀಲ್ದಾರ್ ಮಹೇಶ್ ಅವರಿಗೆ ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಈಗ ಗಡಿ ಗುರುತಿನ ಸರ್ವೆ ನಡೆಸಲಾಗುತ್ತಿದೆ. ಬಳಿಕ ಕಂದಾಯ ಇಲಾಖೆಯ ನಕ್ಷೆಯಲ್ಲಿ ಸರ್ವೇ ಮಾಡಲಾದ ಪ್ರದೇಶವನ್ನು ಹೊಂದಿಸಲಾಗುತ್ತದೆ. ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ:ಪೈಲೆಟ್ ಆಗುವ ಕನಸು ಹೊತ್ತಿದ್ದ ಕೊಡಗಿನ ಯುವಕ ಗುಜರಾತಿನಲ್ಲಿ ಆತ್ಮಹತ್ಯೆಗೆ ಶರಣು

    ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಮಹೇಶ್, ಹೈಕೋರ್ಟ್ ನಿರ್ದೇಶನದಂತೆ 6 ವಾರಗಳ ಒಳಗೆ ಸರ್ವೆ ನಡೆಸಿ ವರದಿ ನೀಡಬೇಕಿತ್ತು. ಆದರೆ ನಗರ ಸಭೆ ಚುನಾವಣಾ ನೀತಿ ಸಂಹಿತೆ, ಕೊರೊನಾ ಮತ್ತಿತ್ತರ ಕಾರಣಗಳಿಂದ ಸರ್ವೇ ಕಾರ್ಯ ನಡೆದಿರಲಿಲ್ಲ. ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಸರ್ವೆ ನಂಬರ್ 30/1ರ 19.88 ಎಕರೆ ಪ್ರದೇಶದ ಗಡಿ ಗುರುತಿಸಿ ವಾಸ್ತವಾಂಶದ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗುತ್ತದೆ. ನ್ಯಾಯಾಲಯದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ:ದುಬಾರೆ ಆನೆ ಶಿಬಿರದಿಂದ ‘ಕುಶ’ ಬಂಧ ಮುಕ್ತ- ಸಚಿವ ಅರವಿಂದ ಲಿಂಬಾವಳಿ

    ಸ್ಥಳದಲ್ಲಿದ್ದ ಕೊಡಗು ಜಿಲ್ಲಾ ವೀರಶೈವ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಸಾಂಬಶಿವ ಮಾತನಾಡಿ, ಹೈಕೋರ್ಟ್ ನಿರ್ದೇಶನದಂತೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ದಾಖಲೆಗಳ ಪ್ರಕಾರ 19.88 ಎಕರೆ ಪ್ರದೇಶ ಗದ್ದುಗೆಗೆ ಸೇರಿದ್ದಾಗಿದೆ. ಆದರೆ ಇದರಲ್ಲಿ ಎಷ್ಟು ಒತ್ತುವರಿಯಾಗಿ ಅಲ್ಲಿ ಎಷ್ಟು ಜನರು ನೆಲೆಸಿದ್ದಾರೆ ಎಂಬುದು ಸರ್ವೆಯಿಂದ ಗೊತ್ತಾಗಲಿದೆ. ಹೈಕೋರ್ಟ್ ಆದೇಶದ ಪ್ರಕಾರ ಒತ್ತುವರಿದಾರರಿಗೆ ಪುನರ್ ವಸತಿ ಕಲ್ಪಿಸಬೇಕು, ಸ್ಮಾರಕಕ್ಕೆ ತೊಂದರೆ ಆಗದ ರೀತಿಯಲ್ಲಿ ಸಂರಕ್ಷಣೆಯೂ ಆಗಬೇಕು. ಇದು ಅರ್ಜಿದಾರರು ಮತ್ತು ವೀರಶೈವ ಮಹಾ ಸಭಾದ ಒತ್ತಾಸೆಯೂ ಅಗಿದೆ ಎಂದರು.

  • ಸೆಂಟ್ರಲ್ ವಿಸ್ತಾಗೆ ಹೈಕೋರ್ಟ್ ಅನುಮತಿ – ಅರ್ಜಿದಾರರಿಗೆ 1 ಲಕ್ಷ ದಂಡ

    ಸೆಂಟ್ರಲ್ ವಿಸ್ತಾಗೆ ಹೈಕೋರ್ಟ್ ಅನುಮತಿ – ಅರ್ಜಿದಾರರಿಗೆ 1 ಲಕ್ಷ ದಂಡ

    ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ನಿರ್ಮಾಣ ಕಾಮಗಾರಿ ಮುಂದುವರಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

    ಕೋವಿಡ್ 19 ಸಾಂಕ್ರಾಮಿಕ ರೋಗ ಇರುವ ಕಾರಣ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೈಬಿಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿತು.

    ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ, ಇದು ಪ್ರಮುಖ ಮತ್ತು ಅಗತ್ಯ ರಾಷ್ಟ್ರೀಯ ಯೋಜನೆಯಾಗಿದೆ. ಇದರಲ್ಲಿ ನಿಜವಾದ ಸಾರ್ವಜನಿಕ ಹಿತಾಸಕ್ತಿಯಿಲ್ಲ. ಇದೊಂದು ಪ್ರಚೋದಿತ ಅರ್ಜಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

    ಈಗಾಗಲೇ ಸುಪ್ರೀಂಕೋರ್ಟ್ ಯೋಜನೆಗೆ ಅನುಮತಿ ನೀಡಿದೆ. ಶಪೂರ್ಜಿ ಪಲ್ಲೊಂಜಿ ಗ್ರೂಪ್‍ಗೆ ನೀಡಲಾದ ಒಪ್ಪಂದದ ಪ್ರಕಾರ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಮತ್ತು ಅದನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಕೋರ್ಟ್ ಹೇಳಿದೆ.

    ಈ ಯೋಜನೆಗೆ ನೀಡಿರುವ ಅನುಮತಿಗಳಲ್ಲಿ ಯಾವುದೇ ದೋಷವಿಲ್ಲ. ಹಾಗಾಗಿ ಸರ್ಕಾರ ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನ ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಈ ವರ್ಷದ ಜನವರಿಯಲ್ಲಿ 2:1 ಬಹುಮತದ ತೀರ್ಪು ಪ್ರಕಟಿಸಿತ್ತು. ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ತುದಿಗೆ ಅದಾನಿ, ರಿಲಯನ್ಸ್ ಎಂಡ್ ಹೆಸರು ಬಂದಿದ್ದು ಹೇಗೆ?

    ಡಿಸೆಂಬರ್ 10ರಂದು ಸೆಂಟ್ರಲ್ ವಿಸ್ತಾ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ  ನೆರವೇರಿಸಿದ್ದರು. ಈಗಿರುವ ಸಂಸತ್ ಭವನವನ್ನು ನಿರ್ಮಿಸಿದ್ದು ಬ್ರಿಟೀಷರು. 1921ರಲ್ಲಿ ಭೂಮಿಪೂಜೆ ನೆರವೇರಿಸಿ, 1927ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿತ್ತು. ಆಗ ಇದಕ್ಕೆ 83 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಇನ್ನು ಹೊಸ ಸಂಸತ್ ಭವನ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ವೇಳಗೆ ಕಾಮಗಾರಿ ಅಂತ್ಯಗೊಳಿಸುವ ಗುರಿಯನ್ನ ಹೊಂದಲಾಗಿದೆ.

     

    ಸೆಂಟ್ರಲ್ ವಿಸ್ತಾ ವಿಶೇಷತೆ?
    64,500 ಚದರ ಮೀಟರ್ ವಿಸ್ತೀರ್ಣದಲ್ಲಿ ತ್ರಿಭುಜಾಕೃತಿಯ ಸಂಸತ್ ಭವನ ಇರಲಿದ್ದು, 50 ಅಡಿ ಎತ್ತರ, ನಾಲ್ಕು ಅಂತಸ್ತು, ಆರು ಪ್ರವೇಶ ದ್ವಾರ ಹೊಂದಿರಲಿದೆ. ಸೆಂಟ್ರಲ್ ವಿಸ್ತಾದಲ್ಲಿ 1224 ಆಸನ ವ್ಯವಸ್ಥೆ ಇರಲಿದೆ. ಇದರಲ್ಲಿ ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಆಸನಗಳಿರಲಿವೆ. ಲೋಕಸಭೆ ಮೇಲ್ಭಾಗ ಗರಿಬಿಚ್ಚಿದ ನವಿಲಿನ ಆಕೃತಿ ಮತ್ತು ರಾಜ್ಯಸಭೆಯ ಮೇಲ್ಭಾಗದಲ್ಲಿ ಅರಳಿದ ಕಮಲ ಆಕೃತಿ ಇರಲಿದೆ.

  • 2ನೇ ಡೋಸ್ ಪಡೆಯಲು 31 ಲಕ್ಷ ಜನ ಕಾಯುತ್ತಿದ್ದಾರೆ, ಲಸಿಕೆ ಎಲ್ಲಿದೆ- ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ತರಾಟೆ

    2ನೇ ಡೋಸ್ ಪಡೆಯಲು 31 ಲಕ್ಷ ಜನ ಕಾಯುತ್ತಿದ್ದಾರೆ, ಲಸಿಕೆ ಎಲ್ಲಿದೆ- ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ತರಾಟೆ

    ಬೆಂಗಳೂರು: ವ್ಯಾಕ್ಸಿನ್ ವಿಚಾರದಲ್ಲಿ ಹೈ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಎರಡನೇ ಡೋಸ್ ಲಸಿಕೆ ಪಡೆಯಲು 31 ಲಕ್ಷ ಜನ ಕಾಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಅವರಿಗೆ ವ್ಯಾಕ್ಸಿನ್ ಒದಗಿಸುತ್ತಿರೋ ಇಲ್ಲವೋ ಹೇಳಿ ಎಂದು ಪ್ರಶ್ನಿಸಿದೆ.

    ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 2ನೇ ಡೋಸ್ ಲಸಿಕೆ ಪಡೆಯಲು 31 ಲಕ್ಷ ಜನ ಕಾಯುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಸರಿಯಾಗಿ ಲಭ್ಯವಾಗುತ್ತಿಲ್ಲ. ಈಗ ಸಮಯಕ್ಕೆ ಸರಿಯಾಗಿ ಲಸಿಕೆ ಸಿಗದಿದ್ದರೆ ಮತ್ತೊಂದು ಡೋಸ್ ಬೇರೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವೇ? ನಿಮ್ಮಿಂದ ಲಸಿಕೆ ಒದಗಿಸಲು ಆಗದಿದ್ದರೆ ಹೇಳಿ ಆದೇಶದಲ್ಲಿ ಹಾಗೇ ದಾಖಲಿಸುತ್ತೇವೆ ಎಂದು ಕೋರ್ಟ್ ಚಾಟಿ ಬೀಸಿದೆ.

    ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ನೀವು ಶೇ.1ರಷ್ಟು ಜನರಿಗೂ ವ್ಯಾಕ್ಸಿನ್ ಒದಗಿಸಿಲ್ಲ. ಇದು ನಿಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ರೀತಿಯೇ? ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ 2 ದಿನಗಳಲ್ಲಿ ವ್ಯಾಕ್ಸಿನೇಷನ್ ಮಾಡುವಂತೆ ಆದೇಶಿಸಬೇಕಾಗುತ್ತದೆ ಎಂದು ಸಿಜೆ ಅಭಯ್ ಎಸ್.ಓಕಾ ಅವರಿದ್ದ ವಿಭಾಗೀಯ ಪೀಠ ಎಚ್ಚರಿಸಿದೆ.

    ನಿಮ್ಮ ಬಳಿ ಯಾವುದೇ ಸರಿಯಾದ ಚಿತ್ರಣಗಳು ಇಲ್ಲ. ಸರ್ಕಾರದ ಬಳಿ 12 ಲಕ್ಷ ಡೋಸ್ ಗಳು ಮಾತ್ರ ಇದೆ ಎಂದು ಸರ್ಕಾರಿ ಪರ ವಕೀಲರು ಹೇಳುತ್ತಾರೆ. 12 ಲಕ್ಷ ಡೋಸ್ ಗಳಲ್ಲಿ 31 ಲಕ್ಷ ಜನರಿಗೆ ವ್ಯಾಕ್ಸಿನ್ ಕೊಡಬಹುದಾ? ಕೇಂದ್ರ ಸರ್ಕಾರದ ಜೊತೆ ಸರಿಯಾಗಿ ಮಾತನಾಡಿದ್ದೀರಾ? ಅವರಿಗೆ ಮಾಹಿತಿ ಇದೆಯೇ? ಈಗಿರೋ ಡೋಸ್ ಗಳಲ್ಲಿ ಫ್ರಂಟ್ ಲೈನ್ ವಾರಿಯರ್ಸ್, ಹೆಲ್ತ್ ವಾರಿಯರ್ಸ್ ಗೆ ವ್ಯಾಕ್ಸಿನ್ ಲೆಕ್ಕದಲ್ಲಿ ಇಲ್ಲ, ಅವರಿಗೂ ಸೆಕೆಂಡ್ ಡೋಸ್ ಕೊಡಬೇಕಲ್ಲಾ ಎಂದು ಕೋರ್ಟ್ ಪ್ರಶ್ನಿಸಿದೆ.

    ಕೇಂದ್ರ ಸರ್ಕಾರದ ಜೊತೆ ಹೇಗೆ ಮಾತುಕತೆ ಮಾಡಿದ್ದೀರಿ, ಸಂಪರ್ಕದ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದೆ. ಈ ವೇಳೆ ಎಲ್ಲ ರಾಜ್ಯಗಳಿಗೂ ಮಾರ್ಗಸೂಚಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ಹಾಗಾದರೆ ಕರ್ನಾಟಕ ಸರ್ಕಾರ ಎಡವಟ್ಟು ಮಾಡಿದೆ, ಶೇ.70 ವ್ಯಾಕ್ಸಿನೇಷನ್ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.

    ಈ ವರೆಗೆ 70:30ರ ಅನುಗುಣದಂತೆ ಲಸಿಕೆ ಡೋಸ್ ಕೊಡಲಾಗುತ್ತಿತ್ತು. ಶೇ.70 ರಷ್ಟು ಸೆಕೆಂಡ್ ಡೋಸ್ ಗೆ ಹಾಗೂ ಶೇ.30 ರಷ್ಟು 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ನಿನ್ನೆ ತೀರ್ಮಾನ ಮಾಡಿದ್ದು, ಕೇವಲ ಎರಡನೇ ಡೋಸ್ ಲಸಿಕೆಯನ್ನು ಮಾತ್ರ ನೀಡಲು ಆದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲು ತಿಳಿಸಿದರು.

    ಸರ್ಕಾರದ ವಿರುದ್ಧ ಆಕ್ರೋಶ
    ವ್ಯಾಕ್ಸಿನ್ ಕೊರತೆ ಇದೆಯೋ, ಇಲ್ಲವೋ ಎಂಬುದನ್ನು ಸರ್ಕಾರ ಹೇಳಬೇಕು. ಜನರ ಮುಂದೆ ಸರ್ಕಾರ, ಸರ್ಕಾರದ ಸಚಿವರು ನಿಜ ಹೇಳಬೇಕು. ವಾಸ್ತವಾಂಶ ಏನಿದೆ ಎನ್ನುವುದನ್ನು ಜನರಿಗೆ ತಿಳಿಸಬೇಕು. ಅದನ್ನು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ. ಎಷ್ಟು ವ್ಯಾಕ್ಸಿನ್ ಇದೆ, ಎಷ್ಟು ಇಲ್ಲ ಅನ್ನುವುದನ್ನು ವೆಬ್ ಸೈಟ್ ಮೂಲಕ ಮಾಹಿತಿ ನೀಡಿ. ಜನರಿಗೆ ಸುಮ್ಮನೆ ಭರವಸೆ ಕೊಡುವುದು ಬೇಡ ಎಂದು ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.

    ಕೇಂದ್ರದಿಂದಲೂ ಮಾಹಿತಿ ಕೇಳಿದ ಕೋರ್ಟ್
    1ನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಗುತ್ತಿಲ್ಲ. 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಇದನ್ನು ಹೇಗೆ ಸರಿಪಡಿಸುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಸಿದೆ. ಇದಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ, ವ್ಯಾಕ್ಸಿನ್ ವಿಳಂಬವಾದರೆ 1ನೇ ಡೋಸ್ ವ್ಯರ್ಥವಾಗಲ್ಲ, ಕೋವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರ ಕಾಲಾವಕಾಶವಿದೆ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ 2 ದಿನದಲ್ಲಿ ಅಭಿಪ್ರಾಯ ತಿಳಿಸಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿತ್ತು. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟನ್ನು 2ನೇ ಡೋಸ್ ಗೆ ಬಳಸುವಂತೆ ತಿಳಿಸಿತ್ತು. ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟ್ ಗೆ ಕೇಂದ್ರದ ಎಎಸ್‍ಜಿ ಐಶ್ವರ್ಯಾ ಭಾಟಿ ತಿಳಿಸಿದ್ದಾರೆ.

    ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಬಯಸುತ್ತೀರಾ ಎಂದು ಮತ್ತೆ ಕೇಂದ್ರ ಸರ್ಕಾರದ ಎಎಸ್‍ಜಿಗೆ ಹೈಕೋರ್ಟ್ ಪ್ರಶ್ನಿಸಿದೆ. ಎಲ್ಲರೂ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಾವು ರಾಜ್ಯ ಸರ್ಕಾರವನ್ನು ದೂರಲು ಬಯಸುವುದಿಲ್ಲ. ನಾಳೆ ವ್ಯಾಕ್ಸಿನೇಷನ್ ಹಂಚಿಕೆ ನಿಗದಿಯಾಗಿದೆ. ಈ ವೇಳೆ ವ್ಯಾಕ್ಸಿನ್ ಕೊರತೆ ಬಗ್ಗೆಯೂ ಗಮನಹರಿಸಲಾಗುವುದು. ಕರ್ನಾಟಕ ವ್ಯಾಕ್ಸಿನೇಷನ್ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ ಹೈಕೋರ್ಟ್ ಕೇಳಿದ ಪ್ರಶ್ನೆಗೆ ಸಮರ್ಥನೆ ನೀಡಿದ್ದಾರೆ.

    ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ವ್ಯಾಕ್ಸಿನೇಷನ್ ಬಗ್ಗೆ ಈ ವರೆಗೆ ಮೂರು ಬಾರಿ ಮಾರ್ಗಸೂಚಿ ನೀಡಿದೆ. ಏಪ್ರಿಲ್ 16ರಂದೇ ಕೇಂದ್ರ ಸರ್ಕಾರ ಪತ್ರ ಬರೆದಿದೆ ಎಂದು ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

    ರಾಜ್ಯ ಸರ್ಕಾರ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೇಕೆ? ಕೇಂದ್ರದ ಸಲಹೆ ಪಾಲಿಸಿದ್ದರೆ 2ನೇ ಡೋಸ್ ಲಸಿಕೆಯ ಸಮಸ್ಯೆ ಉಂಟಾಗುತ್ತಿರಲಿಲ್ಲ. ಶೇ.70ರಷ್ಟನ್ನು 2ನೇ ಡೋಸ್ ಗೆ ಏಕೆ ಮೀಸಲಿಡಲಿಲ್ಲ. ಇದು ರಾಜ್ಯ ಸರ್ಕಾರದ ಗಂಭೀರ ಉಲ್ಲಂಘನೆಯಾಗಿದೆ. ಮೂರು ಪತ್ರಗಳನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಲಾಗಿದೆ ಎಂದು ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

    ಟೆಸ್ಟ್ ರಿಪೋರ್ಟ್ ನೀಡಲು ಸಹ ವಿಳಂಬವಾಗುತ್ತಿದೆ. ನಮ್ಮ ಕೋರ್ಟ್ ಸಿಬ್ಬಂದಿಯೊಬ್ಬರು ಸಾವಿಗೀಡಾಗಿದ್ದಾರೆ. ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಕೊಟ್ಟಿದ್ದರು, ಅವರ ಟೆಸ್ಟ್ ರಿಪೋರ್ಟ್ ಬರೋದು ತಡವಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವುದು ತಡವಾಗಿದೆ. ಸಾವಿಗೀಡಾಗಿರೋದು ಆಘಾತ ಉಂಟು ಮಾಡಿದೆ. 24 ಗಂಟೆಯಲ್ಲಿ ಟೆಸ್ಟ್ ರಿಪೋರ್ಟ್ ಕೊಡಲು ಸೂಚನೆ ನೀಡಲಾಗಿದೆ. ಆದರೂ ರಿಪೋರ್ಟ್ ಸರಿಯಾಗಿ ಬರುತ್ತಿಲ್ಲ ಎಂದು ಕೋರ್ಟ್ ತರಾಟೆ ತೆಗೆದುಕೊಂಡಿದೆ.