Tag: high court

  • ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಕಂಬಳವನ್ನು ನಿಲ್ಲಿಸಿ: ಪೇಟಾದಿಂದ ಪಿಐಎಲ್‌ ಸಲ್ಲಿಕೆ

    ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಕಂಬಳವನ್ನು ನಿಲ್ಲಿಸಿ: ಪೇಟಾದಿಂದ ಪಿಐಎಲ್‌ ಸಲ್ಲಿಕೆ

    ಬೆಂಗಳೂರು: ಅಕ್ಟೋಬರ್‌ 25 ರಂದು ಬೆಂಗಳೂರಿನಲ್ಲಿ (Bengaluru) ಆಯೋಜನೆಗೊಂಡಿರುವ ಕಂಬಳವನ್ನು (Kambala) ನಿಲ್ಲಿಸುವಂತೆ ಕೋರಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಸಂಸ್ಥೆ ಹೈಕೋರ್ಟ್‌ನಲ್ಲಿ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

    ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರ ಪೀಠದ ಮುಂದೆ ಸೋಮವಾರ ಅರ್ಜಿಯನ್ನು ತುರ್ತು ವಿಚಾರಣೆ ಮಾಡಬೇಕೆಂದು ಮನವಿ ಮಾಡಿದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಈ ಕ್ರೀಡೆಯನ್ನು ಈ ತಿಂಗಳು ನಗರದಲ್ಲಿ ಆಯೋಜಿಸಲಾಗಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಇರುವ ಕೋಣಗಳನ್ನು ಬೆಂಗಳೂರಿಗೆ ಕರೆತರಲಾಗುತ್ತದೆ. ಇದರಿಂದ ಕೋಣಗಳಿಗೆ ಹಿಂಸೆ ಆಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ

    ಈ ವರ್ಷದ ಜುಲೈನಲ್ಲಿ ಪಿಐಎಲ್ (PIL) ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಅದನ್ನು ಪಟ್ಟಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ತುರ್ತು ವಿಚಾರಣೆ ಕೋರಿ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್‌ ಮಂಗಳವಾರ (ಅ.21 ರಂದು) ವಿಚಾರಣೆ ನಡೆಸುವುದಾಗಿ ಹೇಳಿತು.

    ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಬಂಡಿ ಓಟಕ್ಕೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ಮೇ ತಿಂಗಳಲ್ಲಿ ಎತ್ತಿಹಿಡಿದಿತ್ತು. ಈ ತೀರ್ಪಿನ ವಿರುದ್ಧ ಪೇಟಾ ಮರು ಪರಿಶೀಲನಾ ಅರ್ಜಿಯನ್ನು ಪೇಟಾ ಸಲ್ಲಿಸಿದೆ.

  • ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ

    ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ

    ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಟೀಕಿಸುವ ಭರದಲ್ಲಿ ಮಹಿಳೆಯರ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕ್ರಮ‌ ಕೋರಿ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್‌ (High Court) ವಜಾಗೊಳಿಸಿದೆ.

    ಮುಖ್ಯ ನ್ಯಾ. ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಪೀಠ ಆಲ್ ಇಂಡಿಯಾ ದಲಿತ್ ಆ್ಯಕ್ಷನ್ ಕಮಿಟಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ 25 ಸಾವಿರ ರೂ. ದಂಡ ವಿಧಿಸಿದೆ.

    ರಾಹುಲ್‌ ಭಾಷಣದ ಅರ್ಹತೆಯ ಬಗ್ಗೆ ನಾವು ಹೇಳುತ್ತಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಅಡಿಯಲ್ಲಿ ಇದು ವಿಷಯವಾಗಿರಬಾರದು ಎಂದು ಕೋರ್ಟ್‌ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿಗಳಿಕೆ ಕೇಸ್‌ – ಲೋಕಾ ತನಿಖೆ ಪ್ರಶ್ನಿಸಿ ಸಿಬಿಐನಿಂದ ಸುಪ್ರೀಂಗೆ ಅರ್ಜಿ ಸಲ್ಲಿಕೆ

    ಲೋಕಸಭೆ ಚುನಾವಣೆ ದರ್ಭದಲ್ಲಿ ಹಾಸನದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈವ್‌ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ವೇಳೆ ತಮ್ಮ ಪ್ರಚಾರ ಭಾಷಣದಲ್ಲಿ ರಾಹುಲ್‌ ಗಾಂಧಿ ಪ್ರಜ್ವಲ್‌ ರೇವಣ್ಣ ಅವರನ್ನು ಮಾಸ್‌ ರೇಪಿಸ್ಟ್‌ ಕರೆದು 400 ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು.

    ಈ ಸುಳ್ಳು ಆರೋಪದಿಂದ ಹಾಸನದ ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ. ರಾಹುಲ್‌ ಗಾಂಧಿಯ ಸಂವಿಧಾನಬಾಹಿರ ಹೇಳಿಕೆ ವಿರುದ್ದ ಕ್ರಮ ಕೋರಿ ದಲಿತ್‌ ಆಕ್ಷನ್‌ ಸಮಿತಿ ಪಿಐಎಲ್‌  ಸಲ್ಲಿಸಿತ್ತು.

     

  • ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿ: ಎಜಿಗೆ ಟಿ ಜೆ ಅಬ್ರಹಾಂ ದೂರು

    ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿ: ಎಜಿಗೆ ಟಿ ಜೆ ಅಬ್ರಹಾಂ ದೂರು

    ಬೆಂಗಳೂರು: ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ (Political Judgement) ಎಂದಿದ್ದ ಅಲ್ಪಸಂಖ್ಯಾತ ಕಲ್ಯಾಣ ಖಾತೆಯ ಸಚಿವ ಜಮೀರ್‌ ಅಹ್ಮದ್‌ (Zameer Ahmed) ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ (TJ Abraham) ದೂರು ನೀಡಿದ್ದಾರೆ.

    ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದು ಕರೆದಿದ್ದಾರೆ. ಹೀಗಾಗಿ ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ (Contempt of Court) ಪ್ರಕರಣ ದಾಖಲಿಸುವಂತೆ ಅಡ್ವೋಕೆಟ್‌ ಜನರಲ್‌ ಶಶಿಕಿರಣ್ ಶೆಟ್ಟಿಗೆ ಟಿ ಜೆ ಅಬ್ರಹಾಂ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ನನ್ನ ಬಳಿ ಇರುವ ದಾಖಲೆ ಬಿಟ್ಟರೆ 5-6 ಸಚಿವರು ರಾಜೀನಾಮೆ ನೀಡಬೇಕಾಗುತ್ತೆ: ಹೆಚ್‌ಡಿಕೆ ಬಾಂಬ್‌

     

    ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿತ್ತು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್‌ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿತ್ತು.

    ಈ ಆದೇಶಕ್ಕೆ ಸಂಬಂಧಿಸಿದಂತೆ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್‌, ನಾನು ಬಿಡಿಸಿ ಹೇಳುವಂತಿಲ್ಲ. ನಿನ್ನೆ ಬಂದಿರುವುದು ಎಲ್ಲೋ ಒಂದು ಕಡೆ ಪೊಲಿಟಿಕಲ್‌ ಜಡ್ಜ್‌ಮೆಂಟ್‌. ಇದು ನನ್ನ ವೈಯಕ್ತಿಕ ಅಭಿಪ್ರಾಯ. ತನಿಖೆ ನಡೆದರೆ ಸತ್ಯಾಂಶ ಆಚೆ ಬರುತ್ತೆ ತಾನೆ? ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದಿದ್ದರು.

      

  • ಬಾಯಿ ತಪ್ಪಿನಿಂದ ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದಿದ್ದೆ: ಕ್ಷಮೆ ಕೇಳಿದ ಜಮೀರ್

    ಬಾಯಿ ತಪ್ಪಿನಿಂದ ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದಿದ್ದೆ: ಕ್ಷಮೆ ಕೇಳಿದ ಜಮೀರ್

    ಬೆಂಗಳೂರು: ಬಾಯಿ ತಪ್ಪಿನಿಂದ ನಾನು ಒಂದು ಪದ ಬಳಸಿದ್ದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಖಾತೆಯ ಸಚಿವ ಜಮೀರ್‌ ಅಹ್ಮದ್‌ (Zameer Ahmed)) ಹೇಳಿದ್ದಾರೆ.

    ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ (Political Judgement) ಎಂದಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಇಂದು ತುರ್ತು ಸುದ್ದಿಗೋಷ್ಠಿ ಕರೆದು ಜಮೀರ್‌ ಕ್ಷಮೆ ಕೇಳಿದ್ದಾರೆ.  ಇದನ್ನೂ ಓದಿ: ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಬ್ರೇಕ್‌

     

    ನಿನ್ನೆ  ಹೇಳಿಕೆ ನೀಡುವಾಗ ಒಂದು ಪದ ಬಳಸಿದೆ. ರಾಜಕೀಯ ಮಾಡುತ್ತಾರೆ ಅಂತ ಹೇಳುವ ಬದಲು ಪೊಲಿಟಿಕಲ್ ಜಡ್ಜ್ ಮೆಂಟ್ ಅಂತ ಹೇಳಿದ್ದೆ. ನಾನು ರಾಜಕೀಯ ಲಾಭ ಪಡೆಯುತ್ತಿದ್ದಾರೆ  ಅಂತ ಹೇಳೋಕೆ ಹೋಗಿದ್ದೆ. ನ್ಯಾಯಾಲಯದ ಬಗ್ಗೆ ನನಗೆ ಗೌರವ ಇದೆ. ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.‌

    ಇಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಜಮೀರ್‌ ಹೇಳಿಕೆಯ ಬಗ್ಗೆ ಜೋರು ಚರ್ಚೆ ನಡೆದಿದೆ. ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಜಮೀರ್‌ ಕ್ಷಮೆ ಕೇಳುವ ಮೂಲಕ ವಿಚಾರವನ್ನು ತಣ್ಣಗೆ ಮಾಡಲು ಮುಂದಾಗಿದ್ದಾರೆ.

    ಜಮೀರ್‌ ಹೇಳಿದ್ದೇನು?
    ಬುಧವಾರ ಮಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್‌, ನಾನು ಬಿಡಿಸಿ ಹೇಳುವಂತಿಲ್ಲ. ನಿನ್ನೆ ಬಂದಿರುವುದು ಎಲ್ಲೋ ಒಂದು ಕಡೆ ಪೊಲಿಟಿಕಲ್‌ ಜಡ್ಜ್‌ಮೆಂಟ್‌ . ಇದು ನನ್ನ ವೈಯಕ್ತಿಕ ಅಭಿಪ್ರಾಯ. ತನಿಖೆ ನಡೆದರೆ ಸತ್ಯಾಂಶ ಆಚೆ ಬರುತ್ತೆ ತಾನೆ? ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ತಿಳಿಸಿದ್ದರು.

     

  • ಮೇಲ್ನೋಟಕ್ಕೆ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ – ಪ್ರಹ್ಲಾದ್ ಜೋಶಿ

    ಮೇಲ್ನೋಟಕ್ಕೆ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ – ಪ್ರಹ್ಲಾದ್ ಜೋಶಿ

    ನವದೆಹಲಿ: ಮುಡಾ ಪ್ರಕರಣ (MUDA Scam) ದೇಶದ್ಯಾಂತ ಚರ್ಚೆಯಾಗುತ್ತಿದೆ. ಕಾಂಗ್ರೆಸ್ (Congress) ಡಿಎನ್‌ಎಯಲ್ಲಿ ಭ್ರಷ್ಟಾಚಾರ ಇದೆ ಎಂದು ಹಿಂದೆಯೇ ಹೇಳಿದ್ದೆ. ಅದಕ್ಕೆ ಪೂರಕವಾದ ಆದೇಶವನ್ನು ಹೈಕೋರ್ಟ್ (High Court) ನೀಡಿದೆ. ಮೇಲ್ನೋಟಕ್ಕೆ ಮುಖ್ಯಮಂತ್ರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.

    ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದಲ್ಲಿ ಸಿಎಂ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೈಕೋರ್ಟ್ ಹೇಳಿದೆ. ಸಾಮಾನ್ಯ ವ್ಯಕ್ತಿಗೆ ಈ ಪ್ರಮಾಣದಲ್ಲಿ ಪರಿಣಾಮ ನೀಡಲು ಸಾಧ್ಯವಿಲ್ಲ. ಹೈಕೋರ್ಟ್ ಆದೇಶದ ಹಿನ್ನಲೆ ಮುಖ್ಯಮಂತ್ರಿ ಸ್ಥಾನಕ್ಕೆ ತಡ ಮಾಡದೇ ಸಿದ್ದರಾಮಯ್ಯ (CM Siddaramaiah) ಅವರು ರಾಜೀನಾಮೆ ನೀಡಬೇಕು ಎಂದರು.ಇದನ್ನೂ ಓದಿ: ಮುಡಾ ಕೇಸ್‌: ಕಾನೂನಾತ್ಮಕವಾಗಿ ಮುಂದೇನು? ಕಾಂಗ್ರೆಸ್‌ ಹೈಕಮಾಂಡ್‌ ಮುಂದಿರುವ ಆಯ್ಕೆಗಳೇನು?

    ದಲಿತರ ಕೋಟಿ ಬೆಲೆ ಬಾಳುವ ಭೂಮಿಯನ್ನು ಲಕ್ಷಗಳಲ್ಲಿ ಖರೀದಿಸಿ, ಸಿಎಂ ಹೆಂಡ್ತಿಗೆ ಗಿಫ್ಟ್ ನೀಡುವುದು ಹಾಸ್ಯಾಸ್ಪದ, ಇಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ರಾಜ್ಯಪಾಲರು, ದಲಿತ ನಾಯಕರಿಗೆ ಚಪ್ಪಲಿಯಿಂದ ಹೊಡೆಸುವ ಯತ್ನ ಮಾಡಿದೆ. ಈಗಲಾದರೂ ಸಿಎಂ ಬಹಿರಂಗ ಕ್ಷಮೆ ಕೇಳುವ ಮೂಲಕ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.

    ರಾಹುಲ್ ಗಾಂಧಿ (Rahul Gandhi) ಡೋಂಗಿ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ನಿಜವಾದ ನೈತಿಕತೆ ಇದ್ದರೆ ಅವರು ಸಿದ್ದರಾಮಯನವರ ರಾಜೀನಾಮೆ ಕೇಳಬೇಕು. ಲೋಕಾಯುಕ್ತದಲ್ಲಿ ನಿವೃತ್ತ ನ್ಯಾಯಾಧೀಶರು ಇರುತ್ತಾರೆ. ಬಾಕಿ ಅಧಿಕಾರಿಗಳು ರಾಜ್ಯ ಸರ್ಕಾರದವರೇ ಇರುತ್ತಾರೆ. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದರೆ ಸಿಬಿಐಗೆ ನೀಡಬೇಕು. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ನೀಡಲಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪುಲ್ವಾಮಾ ದಾಳಿಯ ಪ್ರಮುಖ ಆರೋಪಿ ಹೃದಯಾಘಾತದಿಂದ ಸಾವು

  • ಮುಡಾ ಕೇಸ್‌: ಕಾನೂನಾತ್ಮಕವಾಗಿ ಮುಂದೇನು? ಕಾಂಗ್ರೆಸ್‌ ಹೈಕಮಾಂಡ್‌ ಮುಂದಿರುವ ಆಯ್ಕೆಗಳೇನು?

    ಮುಡಾ ಕೇಸ್‌: ಕಾನೂನಾತ್ಮಕವಾಗಿ ಮುಂದೇನು? ಕಾಂಗ್ರೆಸ್‌ ಹೈಕಮಾಂಡ್‌ ಮುಂದಿರುವ ಆಯ್ಕೆಗಳೇನು?

    ಬೆಂಗಳೂರು:  ಮುಡಾ ಹಗರಣದಲ್ಲಿ (MUDA Scam) ಹೈಕೋರ್ಟ್ (High Court) ತೀರ್ಪು ತಮ್ಮ ವಿರುದ್ದವಾಗಿ ಬಂದ ಕಾರಣ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಕಾನೂನು ಹೋರಾಟದ ಜೊತೆ ಜೊತೆಗೆ ರಾಜಕೀಯವಾಗಿಯೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಇಂದು ಸಿಎಂ ನಿವಾಸಕ್ಕೆ ಅವರ ಬೆಂಬಲಿಗ ಸಚಿವರು, ಶಾಸಕರು ಧಾವಿಸಿ ಚರ್ಚೆ ನಡೆಸಿದರು. ಹೈಕಮಾಂಡ್ ಕೂಡ ಕರೆ ಮಾಡಿ ಮಾಹಿತಿ ಪಡೆದುಕೊಂಡಿದೆ. ಸದ್ಯದ ಬೆಳವಣಿಗೆಯಿಂದ ಹೀಗಾಗಿ ಮುಂದೆ ಕಾನೂನಾತ್ಮಕವಾಗಿ, ರಾಜಕೀಯವಾಗಿ ಮುಂದೆ ಏನೆಲ್ಲಾ ಆಗಬಹುದು? ಯಾರ ನಡೆ ಏನಾಗಿರಬಹುದು ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಸಿಎಂಗೆ ಮುಡಾ ಸಂಕಷ್ಟ – ತನಿಖೆ ಹೇಗೆ? ಪ್ರಾಸಿಕ್ಯೂಷನ್ ಯಾಕಿಲ್ಲ?

    ಕಾನೂನಾತ್ಮಕವಾಗಿ ಮುಂದೇನು?
    ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್​ಗೆ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್​ ಮೆಟ್ಟಿಲೇರಿದ್ದರು. ಹೀಗಾಗಿ ಹೈಕೋರ್ಟ್​ ಜನಪ್ರತಿನಿಧಿಗಳ ಕೋರ್ಟ್​ ವಿಚಾರಣೆಗೆ ತಡೆ ನೀಡಿತ್ತು.

    ಈಗ ಹೈಕೋರ್ಟ್​ ತೀರ್ಪು ಪ್ರಕಟವಾಗಿದ್ದು ಬುಧವಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಲಿದೆ. ಒಂದು ವೇಳೆ ಕೋರ್ಟ್‌ ತನಿಖೆಗೆ ಆದೇಶ ನೀಡಿದರೆ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಸಿಎಂ ಕುಟುಂಬದವರೇ ಫಲಾನುಭವಿ ಆಗಿರೋದ್ರಿಂದ ತನಿಖೆ ಅಗತ್ಯವಿದೆ: ಹೈಕೋರ್ಟ್‌ ಆದೇಶದಲ್ಲಿ ಏನಿದೆ?

    ಸಿಎಂ ಮುಂದಿರುವ ಆಯ್ಕೆಗಳೇನು?
    ರಾಜೀನಾಮೆ ನೀಡದೇ ತನಿಖೆ ಎದುರಿಸುವುದು ಮತ್ತು ಕಾನೂನು ಹೋರಾಟಕ್ಕೆ ಮುಂದಾಗುವುದು. ಕಾಂಗ್ರೆಸ್ ಹೈಕಮಾಂಡ್ (Congress High Command) ನಿರ್ಧಾರದವರೆಗೂ ಕಾಯುವುದು.

    ಹೈಕಮಾಂಡ್ ಮುಂದಿರುವ ಆಯ್ಕೆಗಳೇನು?
    ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರೆಯುವುದು. ಸರಣಿ ಚುನಾವಣೆ ಇರುವ ಸದ್ಯಕ್ಕೆ ಆತುರದ ನಿರ್ಧಾರ ಕೈಗೊಳ್ಳುವುದು ಅನುಮಾನ. ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಹಿಂಜರಿಯಬಹುದು. ಡಿಸೆಂಬರ್ ಬಳಿಕ ಸಿಎಂ ವಿಚಾರದಲ್ಲಿ ಹೈಕಮಾಂಡ್‌ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.

  • ಸಿಎಂಗೆ ಮುಡಾ ಸಂಕಷ್ಟ – ತನಿಖೆ ಹೇಗೆ? ಪ್ರಾಸಿಕ್ಯೂಷನ್ ಯಾಕಿಲ್ಲ?

    ಸಿಎಂಗೆ ಮುಡಾ ಸಂಕಷ್ಟ – ತನಿಖೆ ಹೇಗೆ? ಪ್ರಾಸಿಕ್ಯೂಷನ್ ಯಾಕಿಲ್ಲ?

    ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ (High Court) ತೀರ್ಪು ಪ್ರಕಟವಾದ ಬೆನ್ನಲ್ಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 218 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್‌ 17ಎ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

    BNSS ಸೆಕ್ಷನ್‌ 218, ಭ್ರಷ್ಟಾಚಾರ ತಡೆ ಕಾಯ್ದೆ (PC Act) ಸೆಕ್ಷನ್ 17 ಎ, 19 ರ ಅಡಿ ಪ್ರಾಸಿಕ್ಯೂಷನ್‌ಗೆ ದೂರುದಾರರು ಅನುಮತಿ ಕೇಳಿದ್ದರು. ಪಿಸಿ ಕಾಯ್ದೆಯ 19 ಅಡಿ ಕೇಳಿದ್ದ ಮನವಿಯನ್ನು ರಾಜ್ಯಪಾಲರೇ ತಿರಸ್ಕರಿಸಿದ್ದರು. ಈಗ ಕೋರ್ಟ್‌ ಬಿಎನ್‌ಎಸ್‌ಎಸ್‌ ಸೆಕ್ಷನ್‌ 218ರ ಅಡಿ ನೀಡಿರುವ ಅನುಮತಿಯನ್ನು ತಿರಸ್ಕರಿಸಿದೆ. ನ್ಯಾಯಾಲಯ ಈಗ ಪಿಸಿ ಕಾಯ್ದೆಯ ಸೆಕ್ಷನ್‌ 17 ಎ ಮಾತ್ರ ಸೀಮಿತಗೊಳಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ರಾಜೀನಾಮೆ ಯಾಕೆ ಕೊಡಬೇಕು? ತನಿಖೆಗೆ ಮಾತ್ರ ಮಾತ್ರ ಅನುಮತಿ, ಪ್ರಾಸಿಕ್ಯೂಷನ್‌ಗೆ ಅಲ್ಲ: ಸಿದ್ದರಾಮಯ್ಯ

    17 (ಎ) ಅಡಿ ಹೇಗೆ ತನಿಖೆ?
    ಮುಡಾ ಕೇಸಲ್ಲಿ ಈಗ ಪ್ರಾಥಮಿಕ ತನಿಖೆ ನಡೆಸಬಹುದು. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಕಲೆ ಹಾಕಬಹುದು. ಅಂದರೆ ಈ ಪ್ರಕರಣದಲ್ಲಿ ಯರ‍್ಯಾರ ಪಾತ್ರವೇನು? ಸಿಎಂ ಪಾತ್ರ, ಪ್ರಭಾವದ ಬಗ್ಗೆ ತನಿಖೆ ನಡೆಸಬಹುದು. ತನಿಖೆಯ ನಂತರ 19 (ಎ) ಅಡಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ರಾಜ್ಯಪಾಲರ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇದನ್ನೂ ಓದಿ: ಸಿಎಂ ಕುಟುಂಬದವರೇ ಫಲಾನುಭವಿ ಆಗಿರೋದ್ರಿಂದ ತನಿಖೆ ಅಗತ್ಯವಿದೆ: ಹೈಕೋರ್ಟ್‌ ಆದೇಶದಲ್ಲಿ ಏನಿದೆ?

    ಏನಿದು ಪ್ರಾಸಿಕ್ಯೂಷನ್?
    ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್‌ 19 (ಎ) ಅಡಿ ರಾಜ್ಯಪಾಲರು ಅನುಮತಿ ಕೊಟ್ಟಿದ್ದರೆ ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಬಹುದಿತ್ತು. ಆದರೆ ಸೆಕ್ಷನ್ 19 (ಎ) ರಾಜ್ಯಪಾಲರು ಅನುಮತಿ ನೀಡದ ಕಾರಣ ಸಿಎಂ ಸ್ವಲ್ಪ ನಿರಾಳವಾಗಿದ್ದಾರೆ.

     

    ಬಿಎನ್‌ಎಸ್‌ಎಸ್ 218 ಯಾಕಿಲ್ಲ?
    ಸಿಎಂ ಪ್ರಕರಣಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 218 ಅನ್ವಯವಾಗುವುದಿಲ್ಲ. ಜಡ್ಜ್, ಸರ್ಕಾರಿ ಅಧಿಕಾರಿಗಳ ಪ್ರಾಸಿಕ್ಯೂಷನ್‌ಗೆ ಮಾತ್ರ ಈ ಸೆಕ್ಷನ್‌ ಅನ್ವಯವಾಗುತ್ತದೆ. ವಿಚಾರಣೆ ವೇಳೆ ಈ ವಿಚಾರವನ್ನು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಕೋರ್ಟ್ ಗಮನಕ್ಕೆ ತಂದಿದ್ದರು.

  • ರಾಜೀನಾಮೆ ಯಾಕೆ ಕೊಡಬೇಕು? ತನಿಖೆಗೆ ಮಾತ್ರ ಅನುಮತಿ, ಪ್ರಾಸಿಕ್ಯೂಷನ್‌ಗೆ ಅಲ್ಲ: ಸಿದ್ದರಾಮಯ್ಯ

    ರಾಜೀನಾಮೆ ಯಾಕೆ ಕೊಡಬೇಕು? ತನಿಖೆಗೆ ಮಾತ್ರ ಅನುಮತಿ, ಪ್ರಾಸಿಕ್ಯೂಷನ್‌ಗೆ ಅಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಹೈಕೋರ್ಟ್‌ (High Court) ತನಿಖೆ ಮಾತ್ರ ಅನುಮತಿ ನೀಡಿದೆ ಹೊರತು ಪ್ರಾಸಿಕ್ಯೂಷನ್‌ಗೆ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಹೈಕೋರ್ಟ್‌ ತೀರ್ಪಿನ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎನ್‌ಎಸ್‌ ಸೆಕ್ಷನ್‌ 218, ಭ್ರಷ್ಟಾಚಾರ ತಡೆ ಕಾಯ್ದೆ (PC Act) ಸೆಕ್ಷನ್ 17 ಎ, 19 ರ ಅಡಿ ಪ್ರಾಸಿಕ್ಯೂಷನ್‌ಗೆ ದೂರುದಾರರು ಅನುಮತಿ ಕೇಳಿದ್ದರು. ಪಿಸಿ ಕಾಯ್ದೆಯ 19 ಅಡಿ ಕೇಳಿದ್ದ ಮನವಿಯನ್ನು ರಾಜ್ಯಪಾಲರೇ ತಿರಸ್ಕರಿಸಿದ್ದರು. ಈಗ ಕೋರ್ಟ್‌ ಬಿಎನ್‌ಎಸ್‌ ಸೆಕ್ಷನ್‌ 218ರ ಅಡಿ ನೀಡಿರುವ ಅನುಮತಿಯನ್ನು ತಿರಸ್ಕರಿಸಿದೆ. ನ್ಯಾಯಾಲಯ ಈಗ ಪಿಸಿ ಕಾಯ್ದೆಯ ಸೆಕ್ಷನ್‌ 17 ಎ ಮಾತ್ರ ಸೀಮಿತಗೊಳಿಸಿ ಆದೇಶ ಪ್ರಕಟಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಕುಟುಂಬದವರೇ ಫಲಾನುಭವಿ ಆಗಿರೋದ್ರಿಂದ ತನಿಖೆ ಅಗತ್ಯವಿದೆ: ಹೈಕೋರ್ಟ್‌ ಆದೇಶದಲ್ಲಿ ಏನಿದೆ?

    ಪಿಸಿ ಕಾಯ್ದೆಯ ಸೆಕ್ಷನ್‌ 17 ಎ ಅಡಿ ಸೀಮಿತಗೊಳಿಸಿ ಆದೇಶ ಪ್ರಕಟಿಸಿದ್ದರಿಂದ ತನಿಖೆ ಮಾತ್ರ ಅನುಮತಿ ಸಿಕ್ಕಿದೆ. ಇದು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿ ಅಲ್ಲ. ಇದರ ಮೇಲೆ ಯಾವ ರೀತಿ ಹೋರಾಟ ನಡೆಸಬೇಕು ಎಂಬುದನ್ನು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

    ಹೈಕೋರ್ಟ್ ಆದೇಶ ತೃಪ್ತಿ ಎಂಬ ಪ್ರಶ್ನೆಗೆ ಉತ್ತರಿಸಿ, ಇದೊಂದು ಕಾನೂನಾತ್ಮಕ ಹೋರಾಟ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ನನ್ನ ಪ್ರಕಾರ ನಾನು ತಪ್ಪು ಮಾಡಿಲ್ಲ. 17 ಎ ಅಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಬಿ ಎನ್.ಎಸ್.ಎಸ್ ಕಾಯ್ದೆಯಡಿ 218 ಆದೇಶ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ಬೆಳಕಿಗೆ ಬಂದಿದ್ದು ಹೇಗೆ?

    ಬಿಜೆಪಿಯವರು ಮುಖ್ಯಮಂತ್ರಿಗಳು ರಾಜಿನಾಮೆ ಕೊಡಲು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರನ್ನು ನಾವು ಎದುರಿಸುತ್ತೇವೆ. ರಾಜಿನಾಮೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು. ರಾಜಿನಾಮೆ ಕೇಳುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಹೇಳಿಕೆಗೆ ಪ್ರತಿಕ್ರಿಯಿಸಿ ಅವರ ಮೇಲೆ ಎಫ್.ಐ.ಆರ್ ಆಗಿದ್ದು ಅವರು ಜಾಮೀನಿನ ಮೇಲೆ ಇದ್ದಾರೆ. ಅವರು ರಾಜಿನಾಮೆ ಕೊಟ್ಟಿದ್ದಾರೆಯೇ? ಇದು ಅವರಿಗೆ ಅನ್ವಯವಾಗುವುದಿಲ್ಲವೇ? ತನಿಖೆ ಹಂತದಲ್ಲಿಯೇ ರಾಜಿನಾಮೆ ಕೊಡುವ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

    ನ್ಯಾಯಾಲಯದ ತೀರ್ಪನ್ನು ನಾನು ಪೂರ್ತಿ ಓದಿಲ್ಲ. ಮಾಧ್ಯಮಗಳಲ್ಲಿ ಬಿತ್ತರಿಸಿರುವುದನ್ನು ಮಾತ್ರ ಓದಿದ್ದೇನೆ ಎಂದರು. ಓದಿದ ನಂತರ ಪುನಃ ಪ್ರತಿಕ್ರಿಯೆ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

     

    ಕಾಂಗ್ರೆಸ್ ಸರ್ಕಾರದ ಬಡವರ ಪರ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಾ ಬಂದಿದ್ದಾರೆ. ಶೂಭಾಗ್ಯ, ಪಶುಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳು ಹಾಗೂ ಈಗಿನ ಗ್ಯಾರಂಟಿ ಯೋಜನೆಗಳನ್ನು ಸಹ ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು. ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವುದು ಅವರ ದುರಾಲೋಚನೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಸಂಪೂರ್ಣ ಪರಿಶೀಲಿಸಿ , ಮುಂದಿನ ಪ್ರತಿಕ್ರಿಯೆಯನ್ನು ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಇಡೀ ದೇಶದಲ್ಲಿ ಪಿತೂರಿ ಮಾಡಿದಂತೆ ಕರ್ನಾಟಕದಲ್ಲಿಯೂ ನನ್ನ ಹಾಗೂ ಸರ್ಕಾರದ ವಿರುದ್ಧ ಪಿತೂರಿ ಮಾಡಲಾಗಿದೆ ಎಂದರು.

    ಬಿಜೆಪಿ ಜೆಡಿಎಸ್ ನ ಪಿತೂರಿಗೆ ನಾನು ಎಂದೂ ಹೆದರುವುದಿಲ್ಲ. ಬಿಜೆಪಿ ಜೆಡಿಎಸ್ ಸಂಚು , ರಾಜಭವನ ದುರುಪಯೋಗ ಹಾಗೂ ದುರ್ಬಳಕೆಗೆ ನಾನು ಹೆದರುವುದಿಲ್ಲ. ರಾಜ್ಯದ ಜನ , ಪಕ್ಷದ ಹೈಕಮಾಂಡ್, ಶಾಸಕರು, ಸಚಿವರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹಕಾರ ನೀಡಲಿದೆ. ನರೆಂದ್ರ ಮೋದಿಯವರ ಬಿಜೆಪಿ ಸರ್ಕಾರ ,ಕೇವಲ ನನ್ನ ಮೇಲಷ್ಟೇ ಅಲ್ಲ, ಇಡೀ ದೇಶದ ವಿರೋಧಪಕ್ಷಗಳ ವಿರುದ್ಧ ಮೇಲೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಮಾಡುತ್ತಿದ್ದಾರೆ ಎಂದರು.

    ಬಿಜೆಪಿ ಹಾಗೂ ಜೆಡಿಎಸ್ ನವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭೆ ಚುನಾವಣೆಯಲ್ಲಿಯೂ ಸೋತಿದ್ದಾರೆ. ಅವರು ಹಣಬಲದಿಂದ,ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದೊಂದಿಗೆ ಎಂದಿಗೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಬಂದಿದ್ದರಿಂದ ಆಪರೇಷನ್ ಕಮಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದುಡ್ಡನ್ನು ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ಮಡಿದರು. ನಮ್ಮ ಯಾವ ಶಾಸಕರೂ ದುಡ್ಡಿನ ಹಿಂದೆ ಹೋಗದ ಕಾರಣ,ಅವರ ಪ್ರಯತ್ನ ವಿಫಲವಾಯಿತು ಎಂದರು.

  • ಸಿಎಂ ಕುಟುಂಬದವರೇ ಫಲಾನುಭವಿ ಆಗಿರೋದ್ರಿಂದ ತನಿಖೆ ಅಗತ್ಯವಿದೆ: ಹೈಕೋರ್ಟ್‌ ಆದೇಶದಲ್ಲಿ ಏನಿದೆ?

    ಸಿಎಂ ಕುಟುಂಬದವರೇ ಫಲಾನುಭವಿ ಆಗಿರೋದ್ರಿಂದ ತನಿಖೆ ಅಗತ್ಯವಿದೆ: ಹೈಕೋರ್ಟ್‌ ಆದೇಶದಲ್ಲಿ ಏನಿದೆ?

    ಬೆಂಗಳೂರು: ಮುಖ್ಯಮಂತ್ರಿ ಕುಟುಂಬದವರೇ ಫಲಾನುಭವಿ ಆಗಿರುವುದರಿಂದ ಮುಡಾ ಪ್ರಕರಣದ (MUDA Case) ತನಿಖೆ ಅಗತ್ಯವಿದೆ ಎಂದು ಹೈಕೋರ್ಟ್‌ (High Court) ನ್ಯಾ. ನಾಗಪ್ರಸನ್ನ ಅವರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

    ಆದೇಶದಲ್ಲಿ ಏನಿದೆ?
    ರಾಜ್ಯಪಾಲರ ಆದೇಶ ವಿವೇಚನಾ ಶೂನ್ಯವಾಗಿಲ್ಲ. ಎಲ್ಲವೂ ಕಾನೂನಿನ ಅನ್ವಯವಾಗಿದ್ದು ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯೋ ಅಗತ್ಯವಿಲ್ಲ.

    ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಖಾಸಗಿ ವ್ಯಕ್ತಿಯೂ ಸಹ ಪ್ರಾಸಿಕ್ಯೂಷನ್ ಮಂಜೂರಾತಿಗೆ ಅನುಮತಿ ಪಡೆಯಬಹುದು.

    ಸಂಪುಟದ ಸಲಹೆಯನ್ನೂ ರಾಜ್ಯಪಾಲರು ತಿರಸ್ಕರಿಸಬಹುದು. ಖಾಸಗಿ ದೂರುದಾರರು ರಾಜ್ಯಪಾಲರಿಂದ ಅನುಮತಿ ಪಡೆಯಬಹುದು. ಪೊಲೀಸ್ ಅಧಿಕಾರಿಯೇ ಅನುಮತಿ ಕೋರಬೇಕೆಂಬ ಅಗತ್ಯತೆ ಇಲ್ಲ. ಇದನ್ನೂ ಓದಿ: ಸಿದ್ದರಾಮಯ್ಯಗೆ ಗಣೇಶನ ಶಾಪ ತಟ್ಟಿದೆ: ಆರ್.ಅಶೋಕ್

    ರಾಜ್ಯಪಾಲರ ಆದೇಶದಲ್ಲಿ ಯಾವುದೇ ಲೋಪ ಕಾಣುತ್ತಿಲ್ಲ. ಕಡತಗಳಲ್ಲಿ ನಿರ್ಧಾರದ ಹಿಂದಿನ ಕಾರಣ ದಾಖಲಿಸಿದ್ರೆ ಸಾಕು. ರಾಜ್ಯಪಾಲರು ಈ ಪ್ರಕರಣದಲ್ಲಿ ಅಗಾಧವಾದ ವಿವೇಚನೆಯನ್ನು ಬಳಸಿದ್ದಾರೆ.

    ತನಿಖೆಗೆ ಅನುಮತಿ ನೀಡುವ ಮುನ್ನ ವಿಚಾರಣೆ ಆಲಿಸಬೇಕು ಎಂಬುದು ಕಡ್ಡಾಯವಲ್ಲ. ಫಲಾನುಭವಿಗಳು ಅರ್ಜಿದಾರರ ಕುಟುಂಬದವರೇ ಆಗಿದ್ದಾರೆ. ಸಿಎಂ ಕುಟುಂಬದವರೇ ಫಲಾನುಭವಿ (ಪತ್ನಿ) ಆಗಿರುವುದರಿಂದ ತನಿಖೆ ಅಗತ್ಯವಿದೆ. ಇದನ್ನೂ ಓದಿ: MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ಬೆಳಕಿಗೆ ಬಂದಿದ್ದು ಹೇಗೆ?

    ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಿನ್ನಡೆಯಾಗಿದ್ದು ತನಿಖೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್‌ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿದೆ.

    ಮುಡಾದಲ್ಲಿ ಪ್ರಭಾವ ಬಳಸಿ ಭಾರೀ ಹಗರಣ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ಮಡಿಕೇರಿಯ ಟಿಜೆ ಅಬ್ರಹಾಂ ಹಾಗೂ ಪ್ರದೀಪ್‌ ಅವರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಈ ಮೂರೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಆಗಸ್ಟ್‌ 17 ರಂದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಇದನ್ನೂ ಓದಿ: MUDA Scam| ರಾಜಭವನದ ದುರ್ಬಳಕೆಯಾಗಿದೆ, ನಾನು ಯಾವುದೇ ತನಿಖೆಗೆ ಹಿಂಜರಿಯಲ್ಲ – ಸಿಎಂ ಮೊದಲ ಪ್ರತಿಕ್ರಿಯೆ

    ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ಖಾಸಗಿ ದೂರುದಾರರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಬಹುದು. ರಾಜ್ಯಪಾಲರು ದೂರಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ದಾಖಲೆಗಳನ್ನು ಅಧ್ಯಯನ ಮಾಡಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ ರಾಜ್ಯಪಾಲರ ಆದೇಶ ಸಮರ್ಪಕವಾಗಿದೆ ಎಂದು ಗೆಹ್ಲೋಟ್‌  ನಿರ್ಧಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆ ವೇಳೆ ಸಮರ್ಥಿಸಿಕೊಂಡಿದ್ದರು.

     

  • ಸಿದ್ದರಾಮಯ್ಯನವರು ಇದಕ್ಕಿಂತ ಜಾಸ್ತಿ ಭಂಡತನ ಮಾಡದಿರಲಿ, ರಾಜೀನಾಮೆ ಕೊಡುವುದೊಂದೇ ದಾರಿ: ಸಿ.ಟಿ.ರವಿ

    ಸಿದ್ದರಾಮಯ್ಯನವರು ಇದಕ್ಕಿಂತ ಜಾಸ್ತಿ ಭಂಡತನ ಮಾಡದಿರಲಿ, ರಾಜೀನಾಮೆ ಕೊಡುವುದೊಂದೇ ದಾರಿ: ಸಿ.ಟಿ.ರವಿ

    ಬೆಂಗಳೂರು: ಹೈಕೋರ್ಟ್ (High Court) ತೀರ್ಪಿನ ಹಿನ್ನೆಲೆ ಮುಖ್ಯಮಂತ್ರಿಯವರಿಗೆ (Siddaramaiah) ರಾಜೀನಾಮೆ ಕೊಡುವುದೊಂದೇ ದಾರಿ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಹೇಳಿದ್ದಾರೆ.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಬಿಜೆಪಿ (BJP) ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ. ‘ಸತ್ಯಮೇವ ಜಯತೇ’ ಎಂದು ನುಡಿದರು. ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದೇ ಸಂವಿಧಾನಬಾಹಿರ, ಅಪರಾಧ ಎಂದು ಆರೋಪಿಸಿದ ಕಾಂಗ್ರೆಸ್ಸಿಗರು, ಸಾರ್ವಜನಿಕವಾಗಿ ಕ್ಷಮೆ ಯಾಚನೆ ಮಾಡಬೇಕು. ಒಂದು ಸಾಂವಿಧಾನಿಕ ಹುದ್ದೆಯನ್ನು ಅಗೌರವಿಸಿದ ಕಾರಣಕ್ಕೋಸ್ಕರ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು – ಈಶ್ವರ್ ಖಂಡ್ರೆ ಕಿಡಿ

    ಮುಖ್ಯಮಂತ್ರಿಗಳಿಗೆ ಬೇರೆ ದಾರಿ ಉಳಿದಿಲ್ಲ. ಅವರು ಕಾನೂನು ಪಂಡಿತರು. ಸಿಂಪಲ್ ಚೀಫ್ ಮಿನಿಸ್ಟರ್, ಕಾಸ್ಟ್ಲಿ ಲಾಯರನ್ನು ಕರೆಸಿ ವಾದ ಮಂಡಿಸಿದ್ದರು. ಸಿಎಂ ನೋಡೋಕೆ ಸಿಂಪಲ್. ಆದರೆ ಬಂದ ಲಾಯರ್‌ಗಳೆಲ್ಲರೂ ಕಾಸ್ಟ್ಲಿ. ಅವರೆಲ್ಲರೂ ವಾದ ಮಾಡಿದ್ದರೂ ಸತ್ಯವನ್ನು ಮುಚ್ಚಿಡಲು ಸಾಧ್ಯವಾಗಿಲ್ಲ. ಇನ್ನೆಲ್ಲಿಗೆ ಹೋದರೂ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಸುಳ್ಳು ಗೆಲ್ಲುವುದಿಲ್ಲ. ಸುಳ್ಳು ಹಿಡಿದುಕೊಂಡು ಹೋದರೆ ನಗೆಪಾಟಲಿಗೆ ಈಡಾಗುತ್ತೀರಿ ಎಂದು ಎಚ್ಚರಿಸಿದರು. ಇದನ್ನೂ ಓದಿ: ಆಪ್ತರ ಮಾತು ಕೇಳಿ ಸಿಎಂ ಕೆಟ್ಟರು, ಸತ್ಯಕ್ಕೆ ಜಯ ಸಿಕ್ಕಿದೆ : ಶಾಸಕ ಶ್ರೀವತ್ಸ

    ನೀವೂ ಸತ್ಯಕ್ಕೆ ಜೈ ಎನ್ನಿ. ರಾಜೀನಾಮೆ ಕೊಡುವುದೊಂದೇ ನಿಮಗಿರುವ ದಾರಿ. ಸಿದ್ದರಾಮಯ್ಯನವರೇ ಇದಕ್ಕಿಂತ ಜಾಸ್ತಿ ಭಂಡತನ ಮಾಡದಿರಿ. ಈಗ ಮಾಡಿದ್ದೇ ಜಾಸ್ತಿ ಭಂಡತನ. ಇನ್ನೂ ಭಂಡತನ. ರಾಜೀನಾಮೆ ಕೊಟ್ಟು ಕರ್ನಾಟಕದ ಘನತೆಯನ್ನು ಎತ್ತಿ ಹಿಡಿಯಿರಿ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಗಣೇಶನ ಶಾಪ ತಟ್ಟಿದೆ: ಆರ್.ಅಶೋಕ್

    ನೀವು ಎಸಿಬಿ ಮೂಲಕ ಸಾಕಷ್ಟು ಕೇಸುಗಳನ್ನು ಮುಚ್ಚಿ ಹಾಕಿದ್ದೀರಿ. ಭ್ರಷ್ಟಾಚಾರ ಪ್ರಕರಣ ಬಂದ ಕಾರಣ ಲೋಕಾಯುಕ್ತವನ್ನೂ ದುರ್ಬಲಗೊಳಿಸಿದ್ದೀರಿ. ಬಳಿಕ ಎಸಿಬಿ ಮೂಲಕ ಕ್ಲೀನ್‌ಚಿಟ್ ಕೊಡುವ ಕೆಲಸ ಮಾಡಿದ್ದೀರಿ. ಎಲ್ಲಾ ಕಾಲದಲ್ಲೂ ಇದು ನಡೆಯದೆಂಬ ಸತ್ಯ ನಿಮಗೆ ಅರಿವಾಗಿದೆ. ಸಿದ್ದರಾಮಯ್ಯನವರೇ ನೀವು ನ್ಯಾಯಾಲಯದ ತೀರ್ಪನ್ನು ಗೌರವಿಸಿ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: MUDA Scam| ರಾಜಭವನದ ದುರ್ಬಳಕೆಯಾಗಿದೆ, ನಾನು ಯಾವುದೇ ತನಿಖೆಗೆ ಹಿಂಜರಿಯಲ್ಲ – ಸಿಎಂ ಮೊದಲ ಪ್ರತಿಕ್ರಿಯೆ