Tag: Hemavati Canal

  • ಹೇಮಾವತಿ ನಾಲೆಯಲ್ಲಿ ಮಣ್ಣು ಕುಸಿತ – ನೀರು ಬಿಡುವ ಮುನ್ನವೇ ದುರಸ್ಥಿಯಾಗಬೇಕಿದೆ ನಾಲೆ

    ಹೇಮಾವತಿ ನಾಲೆಯಲ್ಲಿ ಮಣ್ಣು ಕುಸಿತ – ನೀರು ಬಿಡುವ ಮುನ್ನವೇ ದುರಸ್ಥಿಯಾಗಬೇಕಿದೆ ನಾಲೆ

    ಹಾಸನ: ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ದ್ಯಾವೇನಹಳ್ಳಿ ಗ್ರಾಮದ ಹೇಮಾವತಿ ನಾಲೆಯ ಪಂಪ್‍ಹೌಸ್ ಸಮೀಪ ಎರಡು ದಿನಗಳ ಹಿಂದೆ ಸುಮಾರು 80 ಅಡಿ ಎತ್ತರದಿಂದ ನಾಲೆಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ.

    ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾತನಾಡಿದ ಅವರು, ‘ಸುರಂಗ ಮಾರ್ಗದ ಪಕ್ಕದಲ್ಲೇ ಭಾರಿ ಪ್ರಮಾಣದಲ್ಲಿ ಮಣ್ಣು ಕಲ್ಲು ಕುಸಿದು ಬಿದ್ದಿದ್ದು, ಈ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ನಾಲೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಇನ್ನೂ ಹೇಮಾವತಿ ಜಲಾಶಯ ಭಾಗದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಡ್ಯಾಂನಿಂದ ನೀರು ಬಿಡುವ ಸಂಭವವಿದೆ. ಆದ್ದರಿಂದ ಅತೀ ಬೇಗ ತೆರವುಗೊಳಿಸುವ ಕೆಲಸವಾಗಬೇಕಾಗಿದೆ. ಈ ದೊಡ್ಡ ನಾಲೆಯಿಂದ ತುಮಕೂರು ಜಿಲ್ಲೆಗೆ ನೀರು ಹರಿಯುವುದರಿಂದ ನಾಲೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲು ತೆರವುಗೊಳಿಸಲು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

  • ಜೀವನಾಡಿ ಹೇಮೆಯ ಒಡಲು ಸೇರುತ್ತಿದೆ ಯುಜಿಡಿ ಕಲುಷಿತ ನೀರು

    ಜೀವನಾಡಿ ಹೇಮೆಯ ಒಡಲು ಸೇರುತ್ತಿದೆ ಯುಜಿಡಿ ಕಲುಷಿತ ನೀರು

    ತುಮಕೂರು: ತುಮಕೂರು-ತಿಪಟೂರು ನಗರದ ಯುಜಿಡಿ ಕಲುಷಿತ ನೀರು ಹೇಮಾವತಿ ನಾಲೆಗೆ ಹರಿಯುತ್ತಿದೆ. ಜಿಲ್ಲೆಯ ಜನರ ಜೀವನಾಡಿ ಹೇಮಾವತಿ ನಾಲೆ ನೀರು ಮಲಿನವಾಗ್ತಿದೆ.

    ಹಾಸನ ಜಿಲ್ಲೆಯ ಗೋರೂರು ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ವಿವಿಧ ಕೆರೆಗಳಿಗೆ ನಾಲೆ ಮೂಲಕ ಹರಿಯುತ್ತಿರುವ ನೀರು ತಿಪಟೂರು ತಾಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮಾಲಿನ್ಯಗೊಳ್ಳುತ್ತಿದೆ.

    ತಿಪಟೂರು ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆ ತುಂಬಿ ಹರಿಯುವ ನೀರು ರಾಜಕಾಲುವೆ ಮೂಲಕ ಗೊರಗೊಂಡನಹಳ್ಳಿ, ಕೊಪ್ಪ, ಹುಲ್ಲುಕಟ್ಟೆ ಮಾರ್ಗವಾಗಿ ಹೇಮಾವತಿ ನಾಲೆ ಹಾದು ಈಚನೂರು ಕೆರೆ ಸೇರುತ್ತದೆ. ಈ ರಾಜ ಕಾಲುವೆಯಲ್ಲಿ ಹಲವು ವರ್ಷಗಳಿಂದ ತಿಪಟೂರು ನಗರದ ಯುಜಿಡಿ ಕೊಳಚೆ ನೀರು ಈಚನೂರು ಕೆರೆಗೆ ಬಂದು ಸೇರುತ್ತಿದೆ. ಇದೇ ಕೆರೆಯಿಂದ ಹಾಸನ ಜಿಲ್ಲೆಯ ಅರಸೀಕೆರೆ, ತಿಪಟೂರು ನಗರಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ತಿಪಟೂರು ನಗರದ ಜನರು ತಾವು ಬಳಸಿದ ಕಲುಷಿತ ನೀರನ್ನ ತಾವೇ ತಮಗರಿವಿಲ್ಲದಂತೆ ಕುಡಿಯುತ್ತಿದ್ದಾರೆ. ಇದೀಗ ಕಲುಷಿತ ನೀರು ನಾಲೆ ಸೇರುತ್ತಿದ್ದು, ತುಮಕೂರು ಜನರು ಇದೇ ನೀರನ್ನ ಕುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.

    ನಗರದ ಯುಜಿಡಿ ಕೊಳಚೆ ನೀರು ಹಾಗೂ ಚರಂಡಿಯ ನೀರು ರಾಜಕಾಲುವೆ ಮೂಲಕ ಹಳ್ಳಗಳ ಮೂಲಕ ಹರಿದು ನೇರವಾಗಿ ಈಚನೂರು ಬಳಿ ಹೇಮಾವತಿ ನಾಲೆ ಸೇರುತ್ತಿದೆ. ನಗರದ ತ್ಯಾಜ್ಯ ಹಾಗೂ ವಿಷಪೂರಿತ ನೀರು ನಾಲೆಗೆ ಸೇರಿ ನಾಲೆ ಪ್ರದೇಶ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಕೃಷಿ ಹಾಗೂ ಕುಡಿಯಲು ಬಳಕೆಯಾಗುತ್ತದೆ. ತುಮಕೂರು ನಗರ ಸೇರಿದಂತೆ ಗ್ರಾಮಾಂತರದ ಜನರೂ ಸಹ ಇದೆ ನೀರನ್ನ ಬಳಸಬೇಕಿದೆ.

    ತಿಪಟೂರು ನಗರಸಭೆಯ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಡಳಿತ ತ್ಯಾಜ್ಯದ ನೀರು ಹೇಮೆ ಒಡಲು ಸೇರದಂತೆ ಕ್ರಮವಹಿಸಬೇಕು ಸಾರ್ವಜನಿಕರಿಗೆ ಶುದ್ದ ಹೇಮಾವತಿ ನೀರು ದೊರೆಯುವಂತೆ ಮಾಡಬೇಕಿದೆ.