Tag: Hemavathi Canal

  • ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್‌ ರಂಗನಾಥ್‌ ತಿರುಗೇಟು

    ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್‌ ರಂಗನಾಥ್‌ ತಿರುಗೇಟು

    – ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದ ಶಾಸಕ
    – ವಿಪಕ್ಷದವರಿಗೆ ನಾವು ಆಹಾರ ಆಗಬಾರದು ಎಂದು ಕಿವಿಮಾತು

    ಬೆಂಗಳೂರು: ಕುಣಿಗಲ್‌ ನೀರಿನ ಸಮಸ್ಯೆ ಪರಿಹರಿಸಲು ಡಿಕೆ ಶಿವಕುಮಾರ್‌ (DK Shivakumar) ಅವರು ಕ್ಯಾಬಿನೆಟ್‌ನಲ್ಲಿ ನಮಗೆ ಸಹಾಯ ಮಾಡೋದಾಗಿ ಹೇಳಿದ್ದಾರೆ. ಇದಕ್ಕೆ ರಾಜೇಂದ್ರ ರಾಜಣ್ಣ ಅವರು ಯಾಕೆ ಮಾತಾಡ್ತಾರೆ. ನಾನು ಫೋನ್‌ ಮಾಡಿ ಬೆದರಿಕೆ ಹಾಕ್ತೀನಿ ಅಂತಾರೆ, ಒಬ್ಬ ಮಂತ್ರಿ ಮಗನಿಗೆ ಬೆದರಿಕೆ ಹಾಕೋಕೆ ಆಗುತ್ತಾ? ನಾನು ಸಾಮಾನ್ಯ ರೈತನ ಮಗ ಅಂತ ಕುಣಿಗಲ್‌ ಶಾಸಕ ರಂಗನಾಥ್‌ (HD Ranganath) ಅವರು ಸಚಿವ ರಾಜಣ್ಣ ಪುತ್ರನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    Rajendra DK Shivakumar

    ಹೇಮಾವತಿ ಕೆನಾಲ್‌ (Hemavathi canal) ವಿಚಾರದಲ್ಲಿ ಕುಣಿಗಲ್ ಶಾಸಕ ರಂಗನಾಥ್ ಬೆದರಿಕೆ ಹಾಕ್ತಿದ್ದಾರೆ ಎಂಬ ರಾಜಣ್ಣ ಪುತ್ರ ರಾಜೇಂದ್ರ (Rajendra Rajanna) ಹೇಳಿಕೆ ವಿಚಾರ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇದನ್ನೂ ಓದಿ: ಹೇಮಾವತಿ ಕೆನಾಲ್ ಕದನ – ಡಿಕೆಶಿ ಸಂಬಂಧಿ ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ: ರಾಜೇಂದ್ರ ರಾಜಣ್ಣ

    ಫೋನ್‌ನಲ್ಲಿ ಮಾತಾಡಿದ್ರೆ ಅದು ಬೆದರಿಕೆ ಹೇಗೆ ಆಗಬೇಕು? ನಮ್ಮ ಸರ್ಕಾರ ಬಂದಿದೆ. ಜನರ ಪರ ನಾವು ಕೆಲಸ ಮಾಡೋಣ. ಶಿರಸಾವಹಿಸಿ ಕೆಲಸ ಮಾಡೋಣ. ಸಹಕಾರ ಸಂಘದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರೇ ಅನೇಕ ವರ್ಷಗಳಿಂದ ಇದ್ದಾರೆ. ನಾನು ಕಾಂಗ್ರೆಸ್ ಬೆಂಬಲಿಗರನ್ನ ತರೋಕೆ ಪ್ರಯತ್ನ ಮಾಡ್ತಿದ್ದೇನೆ. ಹೀಗಾಗಿ ಸಹಕಾರಿ ಸಂಘದಿಂದ ಸಾಲ ಕೊಡಿ ಅಂತ ಸದನದಲ್ಲಿ ಕೇಳಿದ್ದೇನೆ. ರಾಜಣ್ಣ ಜೊತೆ ನನಗೆ ವೈಮನಸ್ಯ ಇಲ್ಲ. ಅವರ ಜೊತೆ ಸಲುಗೆಯಿಂದ ಬಂದಿದ್ದೇನೆ. ಯಾಕೆ ನನ್ನ ಮೇಲೆ ಭಿನ್ನಾಭಿಪ್ರಾಯ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ನಾನು ಯಾವ ಮಂತ್ರಿ ಮಗ ಅಲ್ಲ. ಬೆದರಿಕೆ ಹಾಕೋ ಗುಣ ಇಲ್ಲ. ಡಿಕೆ ಶಿವಕುಮಾರ್ ಅವರು ಶಾಸಕನಾಗಿ ಹೇಗೆ ನಡೆದುಕೊಳ್ಳಬೇಕು ಅಂತ ಹೇಳಿ ಕೊಟ್ಟಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡ್ತಿದ್ದೇನೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್

    ಕುಣಿಗಲ್‌ಗೆ ಕೊರಟಗೆರೆಯಿಂದ ನೀರು ತೆಗೆದುಕೊಂಡು ಹೋಗ್ತಿದ್ದಾರೆ, ಮಧುಗಿರಿಗೆ ಕೊಡ್ತಿಲ್ಲ ಅಂತ ರಾಜೇಂದ್ರ ರಾಜಣ್ಣ ಅರೋಪ ಮಾಡಿದ್ದಾರೆ. ನನ್ನನ್ನ ಜನ ಎರಡು ಬಾರಿ ಗೆಲ್ಲಿಸಿದ್ದಾರೆ ಅವರಿಗೆ ನೀರು ಕೊಡಬೇಕು. ಕುಣಿಗಲ್‌ಗೆ 90% ನೀರು ಹರಿದಿಲ್ಲ. ಕುಣಿಗಲ್‌ಗೆ ಹಾಸನದಿಂದ ನೀರು ಬೇಕು, ನೀರು ತರಲು ನಾನು ಹೋರಾಟ ಮಾಡ್ತೀನಿ ಅಂದಿದ್ದಾರೆ. ಇದನ್ನೂ ಓದಿ: ರಾಜಣ್ಣರನ್ನ `ಹನಿ’ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನಿಸಿದ್ದಾರೆ – ಪುತ್ರ ರಾಜೇಂದ್ರ

    ಅಲ್ಲದೇ ರಾಜಣ್ಣ ಬಗ್ಗೆ ನಾನೇನು ಹೇಳೊಲ್ಲ. ರಾಜಣ್ಣ ಹಿರಿಯರು. ಅವರ ಬಗ್ಗೆ ನಾನು ಹೇಳೊಲ್ಲ. ನನ್ನ ತಾಲೂಕಿನ ರೈತರಿಗೆ ಸಾಲ ಕೊಡಿಸೋದು ತಪ್ಪಾ? ಯಾಕೆ ರಾಜಣ್ಣ ಹೀಗೆ ಹೇಳಿಕೆ ಕೊಡ್ತಾರೆ ಗೊತ್ತಿಲ್ಲ. ಯಾರು ಎಷ್ಟೇ ಪ್ರವೋಕ್ ಮಾಡಿದ್ರು ನಾನು ಪ್ರವೋಕ್ ಆಗೊಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾಕೆ ಗೊಂದಲದ ಹೇಳಿಕೆ ಕೊಡ್ತೀರಾ? ಸಿಎಂ, ಡಿಸಿಎಂ ಅವರು ಉತ್ತಮ ಕೆಲಸ ಮಾಡ್ತಾರೆ ಅಂತ ಜನರು ನಿರೀಕ್ಷೆ ಇಟ್ಟಿದ್ದಾರೆ. ಜನರಿಗೆ ನಮ್ಮ ಸರ್ಕಾರದ ಬಗ್ಗೆ ನಿರೀಕ್ಷೆ ಇದೆ, ಅದನ್ನ ಮಾಡಬೇಕು. ಬೀದಿಯಲ್ಲಿ ಮಾತಾಡೋದಕ್ಕಿಂತ ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಮದುಗಿರಿಯವರಿಗೆ ನೀರು ತರೋಕೆ ನಾವು ಪ್ರಯತ್ನ ಮಾಡ್ತೀನಿ. ನಾನೇ ನಿಂತು ಮಧುಗಿರಿ ರೈತರಿಗೆ ನೀರು ಕೊಡ್ತೀನಿ. ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದಾರೆ.

    ಮುಂದುವರಿದು.. ವಿರೋಧ ಪಕ್ಷದವರಿಗೆ ನಾವು ಆಹಾರ ಆಗಬಾರದು. ನಮ್ಮಲ್ಲಿ ಶಿಸ್ತು ಬರಬೇಕು. ಇಲ್ಲದೇ ಹೋದ್ರೆ ಜನ ಆಡಿಕೊಳ್ತಾರೆ. ಜನರ ಪರ ನಾವು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

  • ಹೇಮಾವತಿ ನಾಲೆ ಅಭಿವೃದ್ಧಿ ಹೆಸರಲ್ಲಿ ನೂರಾರು ಕೋಟಿ ಅಕ್ರಮ ಆರೋಪ

    ಹೇಮಾವತಿ ನಾಲೆ ಅಭಿವೃದ್ಧಿ ಹೆಸರಲ್ಲಿ ನೂರಾರು ಕೋಟಿ ಅಕ್ರಮ ಆರೋಪ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಜೀವನಾಡಿ ಅಂದಾಕ್ಷಣ ಥಟ್ಟನೆ ನೆನಪಾಗೋದು ಕೆಆರ್‌ಎಸ್‌ ಡ್ಯಾಂ. ಆದ್ರೆ ಜಿಲ್ಲೆಯ ಏಳು ತಾಲ್ಲೂಕುಗಳ ಪೈಕಿ ಐದು ತಾಲ್ಲೂಕುಗಳು ಮಾತ್ರ ಕೆಆರ್‌ಎಸ್‌ (KRS Dam) ಅಚ್ಚುಕಟ್ಟು ವ್ಯಾಪ್ತಿಗೆ ಬಂದ್ರೆ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿಗೆ ಹಾಸನ ಹೇಮಾವತಿ ಜಲಾಶಯವೇ ಆಸರೆ. ಹೀಗಿರುವಾಗ ಈ ಎರಡು ತಾಲ್ಲೂಕುಗಳಿಗೆ ನೀರು ಪೂರೈಸುವ ಹೇಮಾವತಿ ಎಡದಂಡೆ ನಾಲೆ (Hemavathi Canal) ಆಧುನೀಕರಣದ ಹೆಸರಲ್ಲಿ ನೂರಾರು ಕೋಟಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

    ಹೇಮಾವತಿ ಎಡದಂತೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಳಪೆ ಕಾಮಗಾರಿ ಮಾಡಿರೋದಲ್ಲದೇ ನಾಲೆಗೆ ಹೊಸ ಗೇಟ್ ಅಳವಡಿಸದೇ ಬಿಲ್ ಪಾವತಿ ಮಾಡಿದ್ದಾರೆ ಎಂಬ ಅರೋಪ ಕೇಳಿಬಂದಿದೆ. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್: ಬೆಳಗಾವಿಯ ಏಕೈಕ ಯೋಗ & ಪ್ರಕೃತಿ ಚಿಕಿತ್ಸಾಲಯ ಬಂದ್

    ಅಂದಹಾಗೆ ಈ ನಾಲೆಯನ್ನ ಆಧುನೀಕರಗೊಳಿಸಿ ಅಭಿವೃದ್ಧಿಪಡಿಸಬೇಕು ಎಂಬುದು ಬಹಳ ವರ್ಷಗಳ ರೈತರ ಬೇಡಿಕೆಯಾಗಿತ್ತು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ 140 ಕಿಮೀ ನಾಲೆ ಅಭಿವೃದ್ಧಿಗೆ ಮುಂದಾಗಿತ್ತು. ಅದಕ್ಕಾಗಿ 883 ಕೋಟಿ ರೂ. ಯೋಜನೆಯನ್ನ ಸಿದ್ಧಪಡಿಸಿ, ಖಾಸಗಿ ಏಜೆನ್ಸಿಯೊಂದಕ್ಕೆ ಕಾಮಗಾರಿಯ ಗುತ್ತಿಗೆ ನೀಡಿತ್ತು. 2021ರಲ್ಲಿ ಆಧುನೀಕರಣ ಕಾಮಗಾರಿ ಮುಗಿದಿದೆ ಎಂದು ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಮುಗಿದ ಮೂರೇ ವರ್ಷಕ್ಕೆ ಕಾಂಕ್ರೀಟ್ ಕಿತ್ತು ಬರ್ತಿದ್ದು, ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

    ಅಲ್ಲದೇ ಕೆ.ಆರ್ ಪೇಟೆ ತಾಲ್ಲೂಕಿನ ಪಿ.ಬಿ ಮಂಚನಹಳ್ಳಿ ಗ್ರಾಮದ ಬಳಿ ಎಸ್ಕೇಪ್ ಗೇಟ್ ಬದಲಾವಣೆ ಮಾಡದಿದ್ರೂ ಗುತ್ತಿಗೆ ಪಡೆದ ಸಂಸ್ಥೆಗೆ ಹಣ ಮಂಜೂರಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಭ್ರಷ್ಟ ಅಧಿಕಾರಿಗಳನ್ನ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

    ಇನ್ನು ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೂ ರೈತರು ದೂರು ನೀಡಿದ್ದು, ತನಿಖೆ ನಡೆಸುವಂತೆ ನೀರಾವರಿ ಇಲಾಖೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Ranji Trophy | 74 ವರ್ಷಗಳ ಬಳಿಕ ಮೈಲುಗಲ್ಲು – ಹೆಲ್ಮೆಟ್‌ನಿಂದ ರಣಜಿ ಫೈನಲ್‌ ತಲುಪಿದ ಕೇರಳ!

    ಹತ್ತಾರು ವರ್ಷಗಳ ಬೇಡಿಕೆ ಈಡೇರಿತು ಅನ್ನೊ ಸಂಭ್ರಮದಲ್ಲಿದ್ದ ರೈತರಿಗೆ ಕಳಪೆ ಕಾಮಗಾರಿ ಶಾಕ್ ತಂದೊಡ್ಡಿದೆ. ನೂರಾರು ಕೋಟಿ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಮುಂಬೈ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಯೋಜನೆಗಳಲ್ಲಿ ‘ವಸತಿ ಜಿಹಾದ್’: ಶಿವಸೇನಾ ನಾಯಕ ಆರೋಪ

  • ತಂದೆ ಮಾಡಿದ ಸಾಲಕ್ಕೆ ಮಗಳು, ಮೊಮ್ಮಕ್ಕಳು ಬಲಿ

    ತಂದೆ ಮಾಡಿದ ಸಾಲಕ್ಕೆ ಮಗಳು, ಮೊಮ್ಮಕ್ಕಳು ಬಲಿ

    ಹಾಸನ: ತಂದೆ ಮಾಡಿದ್ದ ಸಾಲಕ್ಕೆ ಹಾಸನದ ಹೇಮಾವತಿ ನಾಲೆಗೆ ಹಾರಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕು ದಿಂಡಗೂರು ಗ್ರಾಮದಲ್ಲಿ ನಡೆದಿದೆ.

    ರಾಧಾ(31), ಕಾಂತಾರಾಜು(6), ಭರತ್(4) ಆತ್ಮಹತ್ಯೆ ಮಾಡಿಕೊಂಡವರು. ರಾಧಾ ತಂದೆ ದಾಸೇಗೌಡ ಅದೇ ಗ್ರಾಮದ ಪುಟ್ಟಸ್ವಾಮಿ ಅವರಿಂದ 1 ಲಕ್ಷ ರೂ. ಸಾಲ ಪಡೆದಿದ್ದನು. ಸಾಲ ಹಣಕ್ಕೆ ಜಮೀನು ಮಾರುವುದಾಗಿ ದಾಸೇಗೌಡ ಹೇಳಿದ್ದರು. ಆದರೆ ಸಾಲು ಪಡೆದಿದ್ದ ದಾಸೇಗೌಡ ಕಳೆದ 3 ತಿಂಗಳ ಹಿಂದೆ ಸಾವನ್ನಪ್ಪಿದ್ದ. ಸಾಲ ನೀಡಿದ್ದ ಪುಟ್ಟಸ್ವಾಮಿ ರಾಧಾ ಹಾಗೂ ಸಹೋದರರಿಗೆ ಕೋರ್ಟ್ ನೋಟಿಸ್ ನೀಡಿದ್ದರು. ಸಾಲಕ್ಕೆ ಜಮೀನು ಕೊಡಿ ಇಲ್ಲವಾದಲ್ಲಿ ಕಾನೂನು ಕ್ರಮ ಜರಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

    ನೋಟಿಸ್ ಗೆ ಹೆದರಿ ಕಳೆದ ರಾತ್ರಿ ರಾಧಾ ತನ್ನ ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಧಾ ಶವ ಪತ್ತೆಯಾಗಿದ್ದು, ಮಕ್ಕಳ ಶವಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧ ಕಾರ್ಯಚರಣೆ ನಡೆಯುತ್ತಿದೆ. ರಾಧಾ ದಡ್ಡಿ ಹಳ್ಳಿಯ ಸಂತೋಷ್‍ನೊಂದಿಗೆ ವಿವಾಹವಾಗಿದ್ದಳು.

    ಈ ಘಟನೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್ ಸಮೇತ ಮೂವರು ಹೇಮಾವತಿ ಕಾಲುವೆಗೆ ಬಿದ್ರು – ಪತ್ನಿ ಸಾವು

    ಬೈಕ್ ಸಮೇತ ಮೂವರು ಹೇಮಾವತಿ ಕಾಲುವೆಗೆ ಬಿದ್ರು – ಪತ್ನಿ ಸಾವು

    – ನಾನೇ ಕೊಲೆ ಮಾಡಿದ್ದು ಅಂದ ಪತಿ

    ಹಾಸನ: ಸಂಬಂಧಿಕರ ಮನೆಗೆ ಹೋಗಿ ಬೈಕಿನಲ್ಲಿ ಬರುತ್ತಿದ್ದಾಗ ಪತಿ, ಪತ್ನಿ ಹಾಗೂ ಮಗು ಜಿಲ್ಲೆಯ ಹೇಮಾವತಿ ಕಾಲುವೆಗೆ ಬೈಕಿನೊಂದಿಗೆ ಬಿದ್ದಿದ್ದಾರೆ. ಘಟೆನೆಯಲ್ಲಿ ಪತಿ ಮತ್ತು ಮಗು ಸುರಕ್ಷಿತವಾಗಿದ್ದು, ಪತ್ನಿ ಮೃತಪಟ್ಟಿದ್ದಾರೆ. ಇದೀಗ ಈಕೆಯ ಪೋಷಕರು ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ.

    ಸುಮಾ ಮೃತ ದುರ್ದೈವಿ. 10 ವರ್ಷಗಳ ಹಿಂದೆ ತುಮಕೂರು ಮೂಲದ ಶಿವಣ್ಣನಿಗೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ನಿಂಬಿಹಳ್ಳಿ ಗ್ರಾಮದ ಸುಮಾಳಿಗೆ ಮದುವೆಯಾಗಿತ್ತು. ಮದುವೆ ನಂತರ ಅನ್ಯೋನ್ಯವಾಗಿಯೇ ಇದ್ದರು. ಪತಿ ಶಿವಣ್ಣ ಮೊದಲೊಂದು ಮದುವೆ ಆಗಿ ಪತ್ನಿಯನ್ನು ತೊರೆದಿದ್ದನು. ಇತ್ತ ಸುಮಾಳಿಗೂ ಸಹ ಮದುವೆಯಾಗಿದ್ದು, ಪತಿ ಮೃತಪಟ್ಟಿದ್ದರು. ಹೀಗಾಗಿ ಶಿವಣ್ಣನಿಗೆ ಸುಮಾಳನ್ನು ಮದುವೆ ಮಾಡಿಕೊಡಲಾಗಿತ್ತು.

    ಬೆಂಗಳೂರಿನಲ್ಲಿ ಪತ್ನಿ ಜೊತೆ ವಾಸವಿದ್ದ ಶಿವಣ್ಣ ನಿಂಬೀಹಳ್ಳಿಗೆ ಬಂದಿದ್ದರು. ಶುಕ್ರವಾರ ಸಂಬಂಧಿಕರ ಮನೆಗೆ ಊಟಕ್ಕೆ ಹೊರಟಿದ್ದವರು ಚನ್ನರಾಯಪಟ್ಟಣ ವಡ್ಡರಹಳ್ಳಿ ಗ್ರಾಮದ ಬಳಿ ಹೇಮಾವತಿ ಕಾಲುವೆಗೆ ಬೈಕಿನೊಂದಿಗೆ ಬಿದ್ದಿದ್ದಾರೆ. ಆದರೆ ಮಗು ಮತ್ತು ಶಿವಣ್ಣನಿಗೆ ಸೀರೆ ಎಸೆದು ಕಾಪಾಡಿದ್ದಾರೆ. ಸುಮಾ ಮಾತ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಶಿವಣ್ಣ ಪತ್ನಿಯನ್ನು ಸ್ವತಃ ನಾನೇ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಕೊಲೆಗೆ ಕಾರಣವೇನು ಎಂದರೆ ಗೊಂದಲ ಹೇಳಿಕೆ ನೀಡುತ್ತಿದ್ದಾನೆ. ಪತಿ ಶಿವಣ್ಣನಿಗೆ ಅನೈತಿಕ ಸಂಬಂಧ ಇತ್ತು ಅದು ಸುಮಾಳಿಗೆ ಗೊತ್ತಾಗಿದೆ. ಅದಕ್ಕೆ ನಮ್ಮ ಮಗಳನ್ನು ಕೊಂದು ಹಾಕಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಇತ್ತ ಸುಮಾಳಿಗೂ ಅನೈತಿಕ ಸಂಬಂಧ ಇದೆ. ಅದು ನನಗೆ ಗೊತ್ತಾಗಿದೆ. ಆದ್ದರಿಂದ ನಾನೇ ಅವಳನ್ನು ಕೊಂದೆ ಎಂದು ಪತಿ ಹೇಳಿದ್ದಾನೆ. ಆದರೆ ಯಾರಿಗೆ ಅನೈತಿಕ ಸಂಬಂಧ ಇತ್ತು ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಜೊತೆಗೆ ಇಬ್ಬರಿಗೂ ಎರಡನೇ ಮದುವೆ ಇದಾಗಿದ್ದು, ಇಬ್ಬರೂ ಅನೈತಿಕ ಸಂಬಂಧಕ್ಕೆ ಜಗಳವಾಡುತ್ತಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.

    ಬೈಕಿನಲ್ಲಿ ಹೋಗುತ್ತಿದ್ದ ಪತಿ, ಪತ್ನಿ ಮತ್ತು ಮಗು ನೀರಿಗೆ ಬಿದ್ದವರಲ್ಲಿ ಇಬ್ಬರನ್ನು ಸೀರೆ ಹಾಕಿ ಜೀವ ಉಳಿಸಿದವರು ಯಾರು. ಇಬ್ಬರನ್ನು ಉಳಿಸಿದವರು ಸುಮಾಳನ್ನು ಯಾಕೆ ಉಳಿಸಿಲ್ಲ ಎನ್ನುವುದೂ ಕೂಡ ಪ್ರಶ್ನೆಗೆ ಕಾರಣವಾಗಿದೆ.

    ಈ ಪ್ರಕರಣ ಕುರಿತು ಚನ್ನರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv