Tag: Hemant Nimbalkar

  • ರೂಪಾ, ಹೇಮಂತ್‌ ನಿಂಬಾಳ್ಕರ್‌ ಸೇರಿ 7 ಮಂದಿ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

    ರೂಪಾ, ಹೇಮಂತ್‌ ನಿಂಬಾಳ್ಕರ್‌ ಸೇರಿ 7 ಮಂದಿ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಆರೋಪ, ಪ್ರತ್ಯಾರೋಪ ಮಾಡಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿ ಆದೇಶಿಸಿದೆ.

    ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ರೂಪಾ ಅವರನ್ನು ಕರಕುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಿದೆ. ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರಿಬ್ಬರ ಜೊತೆಗೆ 7 ಐಪಿಎಸ್ ಅಧಿಕಾರಿಗಳನ್ನು ಕೂಡ ಟ್ರಾನ್ಸ್‌ಫರ್‌ ಮಾಡಲಾಗಿದೆ.

    ಯಾರು ಎಲ್ಲಿಗೆ?
    ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ಅವರನ್ನು ಕುಂದುಕೊರತೆ ಮತ್ತು ಮಾನವ ಹಕ್ಕುಗಳ ಎಡಿಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಗ್ರೇವಿಯೆನ್ಸ್ ಅಂಡ್ ಹ್ಯೂಮನ್ ರೈಟ್ಸ್ ಎಡಿಜಿಪಿಯಾಗಿದ್ದಂತ ಮಾಲಿನಿ ಕೃಷ್ಣಮೂರ್ತಿಯವರನ್ನು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿ.ರೂಪಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

    ಎಸಿಬಿಯ ಐಜಿಪಿಯ ಚಂದ್ರಶೇಖರ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿ, ಮೈಸೂರು ವಿಭಾಗದ ಐಜಿಪಿ ವಿಪುಲ್ ಕುಮಾರ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಐಜಿಪಿ ಮತ್ತು ಡೈರೆಕ್ಟರ್ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ.

    ಮಂಗಳೂರಿನ ಡಿಐಜಿ ಹಾಗೂ ಕಮೀಷನರ್ ವಿಕಾಸ್ ಕುಮಾರ್ ವಿಕಾಸ್ ಅವರನ್ನು, ಕರ್ನಾಟಕ ಮೀಸಲು ಪೊಲೀಸ್ ನ ಡಿಐಜಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ವರ್ತಿಕಾ ಕಟಿಯಾರ್ ಅವರನ್ನು ಬೆಂಗಳೂರಿನ ಕ್ರೈಮ್ ರೆಕಾರ್ಡ್ ಬ್ಯೂರೋದ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ, ರಂಜಿತ್ ಕುಮಾರ್ ಬಂದರು ಅವರನ್ನು ಮಂಗಳೂರು ಸೌತ್ ನ ಎಸಿಪಿ ಸ್ಥಾನದಿಂದ ಭಟ್ಕಳ ಉಪ ವಿಭಾಗದ ಎಸಿಪಿಯಾಗಿ ನೇಮಕ ಮಾಡಲಾಗಿದೆ.

  • ಸಹಜ ಸ್ಥಿತಿಯತ್ತ ಹೊನ್ನಾವರ- ಜಿಲ್ಲೆಯಾದ್ಯಂತ 3 ದಿನಗಳ ಕಾಲ ನಿಷೇಧಾಜ್ಞೆ ಜಾರಿ

    ಸಹಜ ಸ್ಥಿತಿಯತ್ತ ಹೊನ್ನಾವರ- ಜಿಲ್ಲೆಯಾದ್ಯಂತ 3 ದಿನಗಳ ಕಾಲ ನಿಷೇಧಾಜ್ಞೆ ಜಾರಿ

    ಕಾರವಾರ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಸಾವಿನಿಂದ ಉದ್ವಿಗ್ನಗೊಂಡಿದ್ದ ಕಾರವಾರದ ಹೊನ್ನಾವರ ಈಗ ಸಹಜ ಸ್ಥಿತಿಯತ್ತ ಮರಳುತ್ತಿದೆ.

    ಸೂಕ್ತ ತನಿಖೆಗೆ ಆಗ್ರಹಿಸಿ ಕಾರವಾರ ಮತ್ತು ಕುಮಟಾದಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ನೀಡಿದ್ದ ಬಂದ್ ಹಿಂಸಾಚಾರದ ರೂಪ ಪಡೆದಿತ್ತು. ಗಲಾಟೆಯಲ್ಲಿ ಓರ್ವ ಪೇದೆ ಗಂಭೀರವಾಗಿ ಗಾಯಗೊಂಡಿದ್ದು, ಹತ್ತಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಹೀಗಾಗಿ ಕಾರವಾರದ ತಾಲೂಕುಗಳಲ್ಲಿ 3 ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.

    ಸಾರ್ವಜನಿಕ ಸಭೆ, ಸಮಾರಂಭ ಮತ್ತು ಮೆರವಣಿಗೆಗಳನ್ನು ನಿಷೇಧಿಸಲಾಗಿದೆ. ಜೊತೆಗೆ ಹೊನ್ನಾವರದಲ್ಲಿ ಸತತ ಐದನೇ ದಿನವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸ್ಟೇಟಸ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಚಂಡ್ಯಾ ಮೂಲದ ಶಿಕ್ಷಕ ತಿಮ್ಮಪ್ಪ ನಾಯ್ಕ ಎಂಬುವರನ್ನು ಬಂಧಿಸಲಾಗಿದೆ.

    ಇಂದು ಶಿರಸಿಯಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿದ್ದು, 2000 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಪರೇಶ್ ಮೇಸ್ತ ಮರಣೋತ್ತರ ಪರೀಕ್ಷೆ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಹೊನ್ನಾವರ ಪೊಲೀಸರು ಉತ್ತರ ಪಡೆದುಕೊಂಡಿದ್ದಾರೆ. ಸಂಪೂರ್ಣ ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ.

    ಕುಮಟಾದ ಮಾಸ್ತಿಕಟ್ಟೆ ರಸ್ತೆ ಬಳಿ ಪಶ್ಚಿಮ ವಲಯ ಐ.ಜಿ.ಪಿ ಹೇಮಂತ್ ನಿಂಬಾಳ್ಕರ್ ಕಾರಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕಾರ್ ಚಾಲಕನಿಗೆ ಬಾಟಲಿಯಿಂದ ಹೊಡೆದು ಕೊಲೆಗೆ ಯತ್ನಿಸಲಾಗಿದೆ. ಎರಡು ಕೋಮಿನವರನ್ನು ಒಡೆದು ಆಳುವವ ಪ್ರಚೋದನೆ ಇದಾಗಿದೆ ಎಂದು ಹೇಳಿದ್ದಾರೆ.

     

  • ಪೊಲೀಸರ ಮೇಲೇ ಪ್ರತಿದೂರು ದಾಖಲಿಸ್ತಿದ್ದ, ಸಂಸದರ ಸಂಬಂಧಿಗೆ ಪಂಗನಾಮ ಹಾಕಿದ್ದ ನಾಗ

    ಪೊಲೀಸರ ಮೇಲೇ ಪ್ರತಿದೂರು ದಾಖಲಿಸ್ತಿದ್ದ, ಸಂಸದರ ಸಂಬಂಧಿಗೆ ಪಂಗನಾಮ ಹಾಕಿದ್ದ ನಾಗ

    ಬೆಂಗಳೂರು: ನಗರದ ಶ್ರೀರಾಂಪುರದ ಮಾಜಿ ರೌಡಿಶೀಟರ್ ಬಾಂಬ್ ನಾಗನ ಮನೆ ಮೇಲೆ ಇಂದು ಪೊಲೀಸರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಆತ ಈ ಹಿಂದೆ ನಡೆಸಿದ್ದ ವಂಜನೆ ಹಾಗೂ ರೌಡಿಸಂನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಬೆಂಗಳೂರಿನ ಹೊರಗೂ ಬಾಂಬ್ ನಾಗನ ರೌಡಿಸಂ: ಬಾಂಬ್ ನಾಗ ಬೆಂಗಳೂರಿನ ಹೊರಗೂ ರೌಡಿಸಂ ಮಾಡಿದ್ದ. ಫಾರ್ಮ್ ಹೌಸ್ ಮಾಲೀಕರನ್ನ ಅಪಹರಿಸಿ ಫಾರ್ಮ್ ಹೌಸ್ ಬರೆಸಿಕೊಂಡ ನಾಗ ರಾಜಣ್ಣ ಎಂಬವರನ್ನು 2015 ಆಗಸ್ಟ್ ತಿಂಗಳಲ್ಲಿ ಕಿಡ್ನಾಪ್ ಮಾಡಿದ್ದ ಬಾಂಬ್ ನಾಗ, ನೆಲಮಂಗಲದ ಕಾಸರಘಟ್ಟದಲ್ಲಿರುವ ಐಷಾರಾಮಿ ಬಂಗಲೆಯ್ನನ ಅವರಿಂದ ಬರೆಸಿಕೊಂಡಿದ್ದ. ಈ ಬಗ್ಗೆ ದಾಬಸ್‍ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಂಗಲೆ ವಿಚಾರದಲ್ಲಿ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬಂಗಲೆಯ ಸುತ್ತ ಹತ್ತು ಅಡಿ ಕಾಂಪೌಂಡ್ ನಿರ್ಮಿಸಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಬೃಹತ್ ಕಾಂಪೌಂಡ್ ಗೋಡೆಗೆ ಬಾಂಬ್ ನಾಗ ವಿದ್ಯುತ್ ತಂತಿ ಕೂಡ ಅಳವಡಿಸಿದ್ದಾನೆ.

    ಸಂಸದರ ಸಂಬಂಧಿಗೆ ಪಂಗನಾಮ: ಬಾಂಬ್ ನಾಗನ ದುಡ್ಡಿನ ದಂಧೆ ಪ್ರಕರಣ ಹೊಸದೇನಲ್ಲ. ಈ ಹಿಂದೆ ಲೋಕಸಭಾ ಸದಸ್ಯರ ಸಂಬಂಧಿಯೊಬ್ಬರಿಗೆ ಒಂದು ಕೋಟಿ ರುಪಾಯಿ ಚಳ್ಳೆಹಣ್ಣು ತಿನ್ನಿಸಿರೋ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್‍ನಲ್ಲಿ ಸಂಸದರೊಬ್ಬರ ಸಂಬಂಧಿಗೆ ಒಂದು ಕೋಟಿ ರುಪಾಯಿ ಹಳೇ ನೋಟನ್ನು ಪಿಂಕ್ ನೋಟ್ ಮಾಡಿಕೊಡುವುದಾಗಿ ಹೇಳಿದ್ದ ನಾಗ ಹಳೇ ನೋಟುಗಳನ್ನು ಪಡೆದುಕೊಂಡು ಉಂಡೇನಾಮ ತೀಡಿದ್ದ. ಈ ಸಂಬಂಧ ಸಿಸಿಬಿಗೆ ದೂರು ಬಂದಿತ್ತು. ಈ ದೂರಿನ ಜೊತೆ ಸರ್ಚ್ ವಾರೆಂಟ್ ಇಟ್ಟುಕೊಂಡು ಹೋದ ಇನ್ಸ್ ಪೆಕ್ಟರ್ ಮಹಾನಂದ ಅವರ ಮೇಲೆ 35 ಮಂದಿ ಮಹಿಳೆಯರಿಂದ ಅಟ್ಯಾಕ್ ಮಾಡಿಸಿ ನಾಗ ಹಗೆ ಸಾಧಿಸಿದ್ದ. ಅನಂತರ ಇನ್ಸ್ ಪೆಕ್ಟರ್ ಸೇರಿದಂತೆ ಎಲ್ಲರ ಮೇಲೂ ಕೇಸ್ ಕೂಡ ಹಾಕಿದ್ದ. ನಾನು ಇಲ್ಲದೇ ಇರುವಾಗ ಹೆಂಡ್ತಿ ಮಕ್ಕಳ ಜೊತೆ ಗಲಾಟೆ ಮಾಡಿದ್ದಾರೆ ಅಂತ ದೂರು ಕೊಟ್ಟಿದ್ದ. ವಿಚಿತ್ರವೆಂದ್ರೆ ಈ ಪ್ರಕರಣದಲ್ಲಿ ಸಿಸಿಬಿ ಹಿರಿಯ ಅಧಿಕಾರಿಗಳು ಮತ್ತು ಶ್ರೀರಾಮಪುರದ ಪೊಲೀಸರಿಂದಲೇ ಸಹಕಾರ ದೊರೆಯಲಿಲ್ಲ ಎನ್ನಲಾಗಿದೆ.