Tag: Heir

  • ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆದರಾ ಮೂಜಗು ಶ್ರೀಗಳು?

    ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆದರಾ ಮೂಜಗು ಶ್ರೀಗಳು?

    – ಮಲ್ಲಿಕಾರ್ಜುನ ಶ್ರೀಗಳ ಪಕ್ಕಕ್ಕೆ ಕುಳಿತ ಮೂಜಗು ಶ್ರೀಗಳು
    – ಕಾರ್ಯಕ್ರಮಕ್ಕೆ ದಿಂಗಾಲೇಶ್ವರ ಶ್ರೀ ಗೈರು

    ಹುಬ್ಬಳ್ಳಿ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಮೂರುಸಾವಿರ ಮಠದ ವಿವಾದಕ್ಕೆ ಸದ್ದಿಲ್ಲದೇ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ತೆರೆ ಎಳೆದಿದ್ದು, ಸಾರ್ವಜನಿಕ ವಲಯದಲ್ಲಿ ಕುತೂಹಲ ಮನೆ ಮಾಡಿದೆ.

    ಕೆಲವು ದಿನಗಳ ಹಿಂದೆ ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಹಾಗೂ ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯೆ ಉತ್ತರಾಧಿಕಾರಿ ವಿಚಾರವಾಗಿ ಜಟಾಪಟಿ ನಡೆದಿತ್ತು. ಮೊನ್ನೆಯಷ್ಟೇ ಇಬ್ಬರೂ ಸ್ವಾಮೀಜಿಗಳು ಮೂರುಸಾವಿರ ಮಠದಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಆಗ ಏನೂ ಹೇಳದೆ ಮೌನಕ್ಕೆ ಶರಣಾಗಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಇದೀಗ ಉತ್ತರಾಧಿಕಾರ ವಿವಾದಕ್ಕೆ ಸದ್ದಿಲ್ಲದೆ ತೆರೆ ಎಳೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

    ಈಗ ಏಕಾ ಏಕಿ ಜಗದ್ಗುರುಗಳ ನಡೆ ಬದಲಾಗಿದ್ದು, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿಯತ್ತ ಚಿತ್ತ ನೆಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿಯಾಗಿದ್ದು ಹಲಗೆ ಹಬ್ಬದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಮೂಜಗು ಜಗದ್ಗುರುಗಳು ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಪಕ್ಕದಲ್ಲೇ ಕುಳಿತಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೀಗೆ ಅಕ್ಕ ಪಕ್ಕ ಕುಳಿತುಕೊಳ್ಳುವ ಮೂಲಕ ಸೂಕ್ಷ್ಮ ಸಂದೇಶ ಸಾರಿದ್ದಾರೆ.

    ವೇದಿಕೆಯ ಮೇಲಿದ್ದ ಹಲವು ಮಠಾಧೀಶರು, ಮೂಜಗು ಶ್ರೀಗಳು ಆಮಂತ್ರಣದ ಮೇಲೆಯೇ ಬಂದಿದ್ದರು. ಅದೇ ರೀತಿ ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗೂ ಆಮಂತ್ರಣ ನೀಡಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಶ್ರೀಗಳು ಮಾತ್ರ ಕಾಣಲೇ ಇಲ್ಲ. ಈ ಬೆಳವಣಿಗೆ ಭಕ್ತರಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ.

  • ಸತ್ಯದರ್ಶನ ಸಭೆ ನಡೆಸಲು ಬಿಡಲ್ಲ: ಮೋಹನ್ ಲಿಂಬಿಕಾಯಿ

    ಸತ್ಯದರ್ಶನ ಸಭೆ ನಡೆಸಲು ಬಿಡಲ್ಲ: ಮೋಹನ್ ಲಿಂಬಿಕಾಯಿ

    ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಫೆ. 23ರಂದು ಸತ್ಯದರ್ಶನ ಸಭೆ ನಡೆಸಲು ವಿರೋಧ ವ್ಯಕ್ತವಾಗುತ್ತಿದ್ದು, ಮೂರುಸಾವಿರ ಮಠದ ಉನ್ನತಾಧಿಕಾರ ಸಮಿತಿ ಸದಸ್ಯರೂ ಆಗಿರುವ ಮೋಹನ್ ಲಿಂಬಿಕಾಯಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಈ ಕುರಿತು ಪ್ರತಿಕ್ರಿಯಸಿದ ಅವರು, ಮೂರು ಸಾವಿರ ಮಠದ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಯಾರೋ ಬಂದು ಸಭೆ ನಡೆಸುತ್ತೇವೆ ಅಂದರೆ ಅವಕಾಶ ಕೊಡುವುದಿಲ್ಲ. ಫೆ.23ರಂದು ಸತ್ಯದರ್ಶನ ಸಭೆ ನಡೆಸಲು ಬಿಡುವುದಿಲ್ಲ ಎಂದು ಮೋಹನ್ ಲಿಂಬಿಕಾಯಿ ಹೇಳಿದ್ದಾರೆ.

    ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ತಮ್ಮನ್ನೇ ನೇಮಕ ಮಾಡಬೇಕೆಂಬುದರ ಕುರಿತು ಬಾಲೇಹೊಸುರಿನ ದಿಂಗಾಲೇಶ್ವರ ಸ್ವಾಮೀಜಿ ಇದೇ ಭಾನುವಾರ ಮಠದ ಆವರಣದಲ್ಲಿ ಸತ್ಯ ದರ್ಶನ ಸಭೆ ಕರೆದಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಸಭೆ ನಡೆಸಲು ಅವಕಾಶ ನೀಡುವುದಿಲ್ಲವೆಂದು ಹಲವರು ಪಟ್ಟು ಹಿಡಿದಿದ್ದಾರೆ. ಇದೀಗ ಮೋಹನ್ ಲಿಂಬಿಕಾಯಿಯವರು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಹಾಲಿ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿ ಮಠವನ್ನು ನಡೆಸಲು ಸಮರ್ಥರಿದ್ದಾರೆ. ಯಾರೋ 52 ಜನ ಸಹಿ ಹಾಕಿದ ತಕ್ಷಣ ಉತ್ತರಾಧಿಕಾರಿ ನೇಮಕ ಆಗುವುದಿಲ್ಲ. ಸರ್ವಾಧಿಕಾರಿಯಂತೆ ಉತ್ತರಾಧಿಕಾರಿ ನೇಮಕ ನಡೆಯುವುದಿಲ್ಲ ಎಂದು ಮೋಹನ್ ಲಿಂಬಿಕಾಯಿ ಸ್ಪಷ್ಟಪಡಿಸಿದ್ದಾರೆ.