Tag: Heinrich Klaasen

  • ಕೊಹ್ಲಿ, ಡುಪ್ಲೆಸಿಸ್‌ ಹೊಡೆತಕ್ಕೆ ರೈಸ್‌ ಆಗದ ಸನ್‌ – ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಜಯ; 4ನೇ ಸ್ಥಾನಕ್ಕೆ ಜಿಗಿದ RCB

    ಕೊಹ್ಲಿ, ಡುಪ್ಲೆಸಿಸ್‌ ಹೊಡೆತಕ್ಕೆ ರೈಸ್‌ ಆಗದ ಸನ್‌ – ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಜಯ; 4ನೇ ಸ್ಥಾನಕ್ಕೆ ಜಿಗಿದ RCB

    ಹೈದರಾಬಾದ್‌: ಕೊಹ್ಲಿ (Virat Kohli) ಭರ್ಜರಿ ಶತಕ ಹಾಗೂ ಫಾಫ್‌ ಡು ಪ್ಲೆಸಿಸ್‌ (Faf du Plessis) ಸ್ಫೋಟಕ ಅರ್ಧ ಶತಕದ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ (RCB) ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಹೈದರಾಬಾದ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.180 ರನ್‌ ರೇಟ್‌ನೊಂದಿಗೆ 4ನೇ ಸ್ಥಾನಕ್ಕೆ ಜಿಗಿದಿದೆ. ಇದರಿಂದ ಪ್ಲೇ ಆಫ್‌ ಹಾದಿ ಮತ್ತಷ್ಟು ಸುಗಮವಾಗಿಸಿಕೊಂಡಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಉತ್ತಮ ರನ್‌ರೇಟ್‌ನೊಂದಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದು, 4ನೇ ಸ್ಥಾನಕ್ಕಾಗಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಪೈಪೋಟಿ ನಡೆದಿದೆ. ಇತ್ತಂಡಗಳಿಗೂ ತಲಾ ಒಂದೊಂದು ಪಂದ್ಯ ಬಾಕಿಯಿದೆ. 13 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್‌ 14 ಅಂಕ ಪಡೆದು -0.128 ರನ್‌ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಸೋತು ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‌ನಿಂದ ಹೊರಬೀಳಲಿದೆ. ಗೆದ್ದರಷ್ಟೇ ಪ್ಲೇ ಆಫ್‌ ತಲುಪಲಿದೆ.

    ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ಹೆನ್ರಿಚ್‌ ಕ್ಲಾಸೆನ್‌ (Heinrich Klaasen) ಭರ್ಜರಿ ಶತಕದೊಂದಿಗೆ 20 ಓವರ್‌ಗಳಲ್ಲಿ 186 ರನ್‌ ಗಳಿಸಿತ್ತು. 187 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿ ಗೆದ್ದು ಬೀಗಿತು.

    ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ (RCB) ಪರ ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಹೈದರಾಬಾದ್‌ ಬೌಲರ್‌ಗಳನ್ನು ಚೆಂಡಾಡಿದರು. ಇವರಿಬ್ಬರ ಹೊಡೆತಕ್ಕೆ ಹೈದರಾಬಾದ್‌ ತಂಡ ಮಕಾಡೆ ಮಲಗಿತು.

    ಭರ್ಜರಿ ಸಿಕ್ಸರ್‌, ಬೌಂಡರಿ ಚಚ್ಚಿದ ವಿರಾಟ್‌, ಡುಪ್ಲೆಸಿಸ್‌ 108 ಎಸೆತಗಳಲ್ಲಿ 172 ರನ್‌ಗಳ ಜೊತೆಯಾಟವಾಡಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಕಿಂಗ್‌ ಕೊಹ್ಲಿ 63 ಎಸೆತಗಳಲ್ಲಿ 100 ರನ್‌ (12 ಬೌಂಡರಿ, 4 ಸಿಕ್ಸರ್‌) ಚಚ್ಚಿದರೆ, ಫಾಫ್‌ ಡು ಪ್ಲೆಸಿಸ್‌ 47 ಎಸೆತಗಳಲ್ಲಿ ಸ್ಫೋಟಕ 71 ರನ್‌ (7 ಬೌಂಡರಿ, 2 ಸಿಕ್ಸರ್‌) ಬಾರಿಸಿ ಮಿಂಚಿದರು. ಕೊನೆಯಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ 5 ರನ್‌ ಹಾಗೂ ಮೈಕಲ್‌ ಬ್ರೇಸ್‌ವೆಲ್‌ 4 ರನ್‌ ಗಳಿಸಿ ಅಜೇಯರಾಗುಳಿದರು.

    2016ರ ಐಪಿಎಲ್‌ ಆವೃತ್ತಿಯಲ್ಲಿ 4 ಶತಕಗಳನ್ನು ಸಿಡಿಸಿದ್ದ ಚೇಸ್‌ ಮಾಸ್ಟರ್‌ ಕೊಹ್ಲಿ ‌ಒಂದೇ ಸೀಸನ್‌ನಲ್ಲಿ 973 ರನ್‌ ಗಳಿಸಿ ಯಾರೂ ಮುರಿಯದ ದಾಖಲೆ ಮಾಡಿದ್ದಾರೆ. ಆ ಬಳಿಕ 2019ರ ಐಪಿಎಲ್‌ನಲ್ಲಿ ಒಂದು ಶತಕ ಗಳಿಸಿದ್ದರು. 2023ರ ಐಪಿಎಲ್‌ ಆವೃತ್ತಿಯಲ್ಲಿ ಮತ್ತೊಮ್ಮೆ ಶತಕ ಸಿಡಿಸಿ ಮಿಂಚಿದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ಒಂದೆಡೆ ವಿಕೆಟ್‌ ಕಳೆದುಕೊಂಡರೆ, ಮತ್ತೊಂದೆಡೆ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ 11 ರನ್‌, ರಾಹುಲ್‌ ತ್ರಿಪಾಠಿ 15 ರನ್‌, ಏಡನ್‌ ಮಾರ್ಕ್ರಮ್‌ 18 ರನ್‌ ಗಳಿಸಿ ಕೈಕೊಟ್ಟರು.‌ ಬಳಿಕ ಕಣಕ್ಕಿಳಿದ ಹೆನ್ರಿಚ್‌ ಕ್ಲಾಸೆನ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

    ಕ್ಲಾಸೆನ್‌ 51 ಎಸೆತಗಳಲ್ಲಿ 104 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದರು. ಕೊನೆಯಲ್ಲಿ ಗ್ಲೇನ್‌ ಫಿಲಿಪ್ಸ್‌ 5 ರನ್‌ ಗಳಿಸಿ ಔಟಾದರೆ, ಹ್ಯಾರಿ ಬ್ರೂಕ್‌ 27 ರನ್‌ ಗಳಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮೈಕೆಲ್‌ ಬ್ಲೇಸ್‌ವೆಲ್‌ 2 ಓವರ್‌ಗಳಲ್ಲಿ 13 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ಶಹಬಾಜ್‌ ಅಹ್ಮದ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ರಿಂಕು, ರಾಣಾ ಬ್ಯಾಟಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – KKRಗೆ 5 ರನ್‌ಗಳ ರೋಚಕ ಜಯ

    ರಿಂಕು, ರಾಣಾ ಬ್ಯಾಟಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – KKRಗೆ 5 ರನ್‌ಗಳ ರೋಚಕ ಜಯ

    ಹೈದರಾಬಾದ್‌: ರಿಂಕು ಸಿಂಗ್‌ (Rinku Singh), ನಾಯಕ ನಿತೀಶ್‌ ರಾಣಾ (Nitish Rana) ಸಂಘಟಿತ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿತು.

    ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ ಗುರಿ ಪಡೆದ ಸನ್‌ ರೈಸರ್ಸ್‌ ಹೈದರಾಬಾದ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ತಂದ ಮೊದಲ 10 ಓವರ್‌ಗಳಲ್ಲಿ 75 ರನ್‌ ಗಳಿಸಿತ್ತು. ಇನ್ನೂ 60 ಎಸೆತಗಳಲ್ಲಿ 97 ರನ್‌ಗಳ ಅಗತ್ಯವಿತ್ತು. ರನ್‌ ಗಳಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಏಡನ್‌ ಮಾರ್ಕ್ರಮ್‌ ಹಾಗೂ ಹೆನ್ರಿಕ್ ಕ್ಲಾಸೆನ್ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ತಂಡಕ್ಕೆ ಮತ್ತಷ್ಟು ರನ್‌ ಸೇರ್ಪಡೆಯಾಯಿತು. ತಂಡದಲ್ಲಿ ಗೆಲುವಿನ ಆಸೆಯೂ ಚಿಗುರಿತ್ತು.

    11 ರಿಂದ 19ನೇ ಓವರ್‌ವರೆಗೆ ಕ್ರಮವಾಗಿ 15, 12, 12, 10, 10, 4, 8, 5, 12 ರನ್‌ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿದ್ದಾಗ ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ತಲಾ ಒಂದೊಂದು ರನ್‌ ಸೇರ್ಪಡೆಯಾಯಿತು. ಆದ್ರೆ ಕ್ರೀಸ್‌ನಲ್ಲಿದ್ದ ಅಬ್ದುಲ್ ಸಮದ್‌ 3ನೇ ಎಸೆತವನ್ನು ಸಿಕ್ಸ್‌ ಸಿಡಿಸಲು ಯತ್ನಿಸಿ ಬೌಂಡರಿ ಲೈನ್‌ ಕ್ಯಾಚ್‌ ನೀಡಿ ನಿರಾಸೆ ಮೂಡಿಸಿದರು. ಬಳಿಕ 3 ಎಸೆತದಲ್ಲಿ ಒಂದೊಂದು ರನ್‌ ಗಳಷ್ಟೇ ಗಳಿಸಲಾಗಿ ತಂಡ ಸೊಲೊಪ್ಪಿಕೊಂಡಿತು.

    ಹೈದರಾಬಾದ್‌ ಪರ ಮಯಾಂಕ್‌ ಅಗರ್ವಾಲ್‌ 18 ರನ್‌, ರಾಹುಲ್‌ ತ್ರಿಪಾಠಿ 20 ರನ್‌, ಏಡನ್‌ ಮಾರ್ಕ್ರಮ್‌ 41 ರನ್‌, ಹೆನ್ರಿಕ್ ಕ್ಲಾಸೆನ್ 36 ರನ್‌ ಹಾಗೂ ಅಬ್ದುಲ್‌ ಸಮದ್‌ 21 ರನ್‌ ಗಳಿಸಿದರು.

    ಕೆಕೆಆರ್‌ ಪರ ವೈಭವ್‌ ಅರೋರ, ಶಾರ್ದೂಲ್‌ ಠಾಕೂರ್‌ ತಲಾ 2 ವಿಕೆಟ್‌ ಪಡೆದರೆ, ಹರ್ಶಿತ್‌ ರಾಣಾ, ರಸ್ಸೆಲ್‌, ಅನುಕುಲ್‌ ರಾಯ್‌ ಹಾಗೂ ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ನಿತೀಶ್‌ ರಾಣಾ, ರಿಂಕು ಸಿಂಗ್ ಹಾಗೂ ಆ್ಯಂಡ್ರೆ ರಸ್ಸೆಲ್‌ ಬ್ಯಾಟಿಂಗ್‌ ನೆರವಿನಿಂದ 170 ರನ್‌ಗಳ ಗಡಿದಾಟುವಲ್ಲಿ ಯಶಸ್ವಿಯಾಯಿತು.

    ಕೆಕೆಆರ್‌ ಪರ ನಾಯಕ ರಿಂಕು ಸಿಂಗ್‌ 46 ರನ್‌ (35 ಎಸೆತ, 4 ಬೌಂಡರಿ, 1 ಸಿಕ್ಸರ್‌), ನಿತೀಶ್‌ ರಾಣಾ 42 ರನ್‌ (31 ಎಸೆತ, 3 ಬೌಂಡರಿ, 3 ಸಿಕ್ಸರ್‌), ರಸ್ಸೆಲ್‌ 24 ರನ್‌ ಹಾಗೂ ಜೇಸನ್‌ ರಾಯ್‌ 20 ರನ್‌ ಗಳಿಸಿ ತಂಡಕ್ಕೆ ನೆರವಾದರು.

    ಹೈದರಾಬಾದ್‌ ಪರ ಮಾರ್ಕೊ ಜಾನ್ಸೆನ್‌, ಟಿ. ನಟರಾಜನ್‌ ತಲಾ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ಕಾರ್ತಿಕ್‌ ತ್ಯಾಗಿ, ಏಡನ್‌ ಮಾರ್ಕ್ರಮ್‌, ಮಯಾಂಕ್‌ ಮಾರ್ಕಂಡೆ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಔಟ್ ಸೈಡ್ ವೈಡ್ ಎಸೆತವನ್ನು ಬೌಂಡರಿಗೆ ಅಟ್ಟಿದ ಕ್ಲೇಸೆನ್- ಕೊಹ್ಲಿ ರಿಯಾಕ್ಷನ್ ಹೀಗಿದೆ ನೋಡಿ: ವೈರಲ್ ವಿಡಿಯೋ

    ಔಟ್ ಸೈಡ್ ವೈಡ್ ಎಸೆತವನ್ನು ಬೌಂಡರಿಗೆ ಅಟ್ಟಿದ ಕ್ಲೇಸೆನ್- ಕೊಹ್ಲಿ ರಿಯಾಕ್ಷನ್ ಹೀಗಿದೆ ನೋಡಿ: ವೈರಲ್ ವಿಡಿಯೋ

    ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಯುವ ಆಟಗಾರ ಚಹಲ್ ಔಟ್ ಪಿಚ್ ಎಸೆತವನ್ನು ಆಫ್ರಿಕಾ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಹೆನ್ರಿಕ್ ಕ್ಲೇಸೆನ್ ಬೌಂಡರಿಗಟ್ಟಿದ ದೃಶ್ಯವನ್ನು ನೋಡಿ ಅಚ್ಚರ್ಯಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜೊಹಾನ್ಸ್ ಬರ್ಗ್‍ನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಹೆನ್ರಿಕ್ ಕ್ಲೇಸನ್ ಆಕರ್ಷಕ ಬ್ಯಾಟಿಂಗ್ ಮಾಡಿ ಮಿಂಚಿದರು. ಪಂದ್ಯದ ವೇಳೆ 22ನೇ ಓವರ್ ನಲ್ಲಿ ಚಹಲ್ ಪಿಚ್ ಹೊರಗಡೆ ಹೋಗುವಂತೆ ಬಾಲ್ ಎಸೆದಿದ್ದರು. ಆದರೆ ವೈಡ್ ಹೋಗುತ್ತಿರುವ ಬಾಲ್‍ ನ್ನು ಕ್ಲೇಸನ್ ಅದ್ಭುತವಾಗಿ ಬೌಂಡರಿಗೆ ಬಾರಿಸಿದ್ದರು.

    https://twitter.com/ImSriram_/status/962418657081966592?

    ಕ್ಲೇಸನ್ ಬಾರಿಸಿದ್ದ ಪರಿಯನ್ನು ಕಂಡ ಕಂಡ ಕೊಹ್ಲಿ ಕ್ಷಣ ಕಾಲ ಆಶ್ಚರ್ಯಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಹ್ಲಿ ರಿಯಾಕ್ಷನ್ ಬಗ್ಗೆ ಅಭಿಮಾನಿಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    https://twitter.com/AligningWealth/status/962415657596932100