Tag: hector valer pinto

  • ಕೌಟುಂಬಿಕ ಹಿಂಸಾಚಾರ ಆರೋಪ: ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ ಪೆರು ಪ್ರಧಾನಿ ವಜಾ

    ಲಿಮಾ: ಕೌಟುಂಬಿಕ ಹಿಂಸಾಚಾರದ ಆರೋಪದ ಹಿನ್ನೆಲೆಯಲ್ಲಿ ತಾವು ನೇಮಿಸಿದ ಮೂರು ದಿನದಲ್ಲೇ ಪೆರು ಪ್ರಧಾನ ಮಂತ್ರಿಯನ್ನು ಪೆರುವಿಯನ್‌ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲ್ಲೋ ತೆಗೆದುಹಾಕಿದ್ದಾರೆ.

    ಹೆಕ್ಟರ್ ವ್ಯಾಲರ್ ಪಿಂಟೋ ಅವರು ಫೆ.1ರಂದು ಪೆರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಾದ ಮೂರು ದಿನದಲ್ಲೇ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಲಾಗಿದೆ. 2016ರಲ್ಲಿ ಕೌಟುಂಬಿಕ ಹಿಂಸಾಚಾರದ ಗಂಭೀರ ಆರೋಪ ಪಿಂಟೋ ಅವರ ಮೇಲಿತ್ತು.

    ನಾನು ಸಂಪುಟವನ್ನು ಪುನಾರಚನೆ ಮಾಡಲು ನಿರ್ಧರಿಸಿದ್ದೇನೆ. ಪ್ರಧಾನಿ ಹೆಕ್ಟರ್‌ ವ್ಯಾಲರ್‌ ಪಿಂಟೋ ಅವರನ್ನು ವಜಾಗೊಳಿಸಲಾಗಿದೆ ಎಂದು ಅಧ್ಯಕ್ಷ ಪೆಡ್ರೋ ಘೋಷಿಸಿದ್ದಾರೆ.

    ಸರ್ಕಾರದಲ್ಲಿ ವ್ಯಾಲರ್‌ ಪಿಂಟೋ ಅವರ ಕುರಿತು ವಿರೋಧ ಪಕ್ಷಗಳು ಮತ್ತು ಸಂಪುಟದ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು.

    62 ವರ್ಷ ವಯಸ್ಸಿನ ಪಿಂಟೋ ವಿರುದ್ಧ, 2016ರಲ್ಲಿ ಅವರ ಪತ್ನಿ ಮತ್ತು ಪುತ್ರಿ ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಿದ್ದರು ಎಂಬ ಬಗ್ಗೆ ವರದಿಗಳಾಗಿದ್ದವು. ಪರಿಣಾಮವಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಿಂಟೋ ಅವರ ಮೇಲೆ ಒತ್ತಡ ಹಾಕಲಾಗಿತ್ತು. ಆದರೆ ತಮ್ಮ ಮೇಲಿನ ಆರೋಪವನ್ನು ಪಿಂಟೋ ಅಲ್ಲಗಳೆದಿದ್ದಾರೆ.