Tag: heavy rain

  • ಆಂಧ್ರ, ಒಡಿಶಾಕ್ಕೆ ಅಪ್ಪಳಿಸಲಿದೆ `ಮೊಂಥಾ’ ಸೈಕ್ಲೋನ್ – ಕರ್ನಾಟಕ ಸೇರಿ ತಮಿಳುನಾಡಿಗೆ ಮಳೆಯಾರ್ಭಟ

    ಆಂಧ್ರ, ಒಡಿಶಾಕ್ಕೆ ಅಪ್ಪಳಿಸಲಿದೆ `ಮೊಂಥಾ’ ಸೈಕ್ಲೋನ್ – ಕರ್ನಾಟಕ ಸೇರಿ ತಮಿಳುನಾಡಿಗೆ ಮಳೆಯಾರ್ಭಟ

    ನವದೆಹಲಿ: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರಪ್ರದೇಶ ಹಾಗೂ ಒಡಿಶಾಕ್ಕೆ ಮೊಂಥಾ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ಕರ್ನಾಟಕ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ಮಂಗಳವಾರ (ಅ.28) ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ತೀರ ಪ್ರದೇಶಕ್ಕೆ ಮೊಂಥಾ ಚಂಡಮಾರುತ 110 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದ್ದು, ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 26 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರಾಕಾರ ಮಳೆ, ಅತೀ ವೇಗದ ಗಾಳಿ ಮತ್ತು ಸಂಭವನೀಯ ಪ್ರವಾಹದ ಸಾಧ್ಯತೆ ಇದೆ ಎಂದು ಹವಾಮಾವ ಇಲಾಖೆ ತಿಳಿಸಿದೆ. ಇದನ್ನೂ ಓದಿ: Cyclone Montha| ಎರಡು ದಿನ ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಕಾಕಿನಾಡ ಬಳಿಯ ಮಚಲಿಪಟ್ನಂ ಮತ್ತು ಕಳಿಂಗಪಟ್ನಂ ನಡುವೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಕಿನಾಡ, ಕೋನ ಸೀಮಾ, ಎಲುರು, ಪಶ್ಚಿಮ ಗೋದಾವರಿ, ಕೃಷ್ಣ, ಗುಂಟೂರು, ಬಾಪಟ್ಲಾ, ಪ್ರಕಾಶಂ ಮತ್ತು ಎಸ್‌ಪಿಎಸ್‌ಆರ್ ನೆಲ್ಲೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮಳೆ ಮುನ್ಸೂಚನೆ ಹಿನ್ನೆಲೆ ಆಂಧ್ರಪ್ರದೇಶದ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಸಮುದ್ರ ತೀರ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಿದ್ದು, ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಮುಂದಿನ ಮೂರ್ನಾಲ್ಕು ದಿನ ಕರ್ನಾಟಕದಲ್ಲೂ ಮಳೆಯಬ್ಬರ:
    ಮೊಂಥಾ ಚಂಡಮಾರುತದಿಂದ ಮುಂದಿನ ಮೂರ್ನಾಲ್ಕು ದಿನ ಕರ್ನಾಟಕದಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಅಲ್ಲಲ್ಲಿ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

    ಒಡಿಶಾ, ತಮಿಳುನಾಡಿನಲ್ಲೂ ಹೈ ಅಲರ್ಟ್:
    ಮೊಂಥಾ ಚಂಡಮಾರುತ ಹಿನ್ನೆಲೆ ಒಡಿಶಾ, ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಕಾರಣ ಒಡಿಶಾ ಸರ್ಕಾರವು ಎಲ್ಲಾ ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಕಾಲೇಜುಗಳಿಗೆ ಅ.30ರವರೆಗೆ ರಜೆ ನೀಡಲಾಗುವುದು ಎಂದು ತಿಳಿಸಿದೆ. ಇನ್ನೂ ಸೋಮವಾರ (ಅ.27) ಹಾಗೂ ಮಂಗಳವಾರ (ಅ.28) ತಮಿಳುನಾಡು, ಪುದುಚೇರಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.ಇದನ್ನೂ ಓದಿ: ಪುನಾರಚನೆಗೆ ಅವಕಾಶ ನೀಡಿದ್ರೆ ಸಿಎಂ ಸ್ಥಾನ ಅಬಾಧಿತ, ಇಲ್ಲದೇ ಇದ್ರೆ ರಾಜಕೀಯ ಚಟುವಟಿಕೆ: ರಾಜಣ್ಣ

  • ಕೊಪ್ಪಳ | ಮಳೆಗೆ ಲಕ್ಷಾಂತರ ಮೌಲ್ಯದ ಭತ್ತ ನಾಶ – ಆತ್ಮಹತ್ಯೆಗೆ ಯತ್ನಸಿದ ರೈತ

    ಕೊಪ್ಪಳ | ಮಳೆಗೆ ಲಕ್ಷಾಂತರ ಮೌಲ್ಯದ ಭತ್ತ ನಾಶ – ಆತ್ಮಹತ್ಯೆಗೆ ಯತ್ನಸಿದ ರೈತ

    ಕೊಪ್ಪಳ: ಧಾರಾಕಾರ ಮಳೆಯಿಂದಾಗಿ ಭತ್ತದ ಬೆಳೆ ನಾಶವಾದ ಹಿನ್ನೆಲೆ ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ನಡೆದಿದೆ.

    ಕೊಪ್ಪಳ (Koppal) ತಾಲೂಕಿನ ಬಸಾಪುರ (Basapur) ಗ್ರಾಮದ ರೈತ ಲಕ್ಷ್ಮಣ ರಾಜರಾಮಪೇಟೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಇದನ್ನೂ ಓದಿ:ಬೆಂಗಳೂರು-ಬೀದರ್ ವಿಶೇಷ ರೈಲು ಸೇವೆ ವಿಸ್ತರಣೆ

    ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಸರ್ವೇ ನಂ. 24 ಮತ್ತು 25ರಲ್ಲಿ ಒಟ್ಟು 8 ಎಕರೆಯಲ್ಲಿ ಭತ್ತ ಬೆಳೆಯಲು ರೈತ ಲಕ್ಷಂತರ ರೂ. ಖರ್ಚು ಮಾಡಿದ್ದಾರೆ. ಜೊತೆಗೆ ರೈತ ಸುಮಾರು 4 ಲಕ್ಷ ರೂ. ಸಾಲ ಮಾಡಿದ್ದಾನೆ. ಈ ನಡುವೆ ಸತತ ಮಳೆಯಿಂದ ಭತ್ತ ನೆಲಕಚ್ಚಿದ್ದು, ಕಟಾವು ಮಾಡುವುದು ಕಷ್ಟ ಸಾಧ್ಯವಾಗಿದೆ. ಇದರಿಂದ ನೊಂದ ರೈತ ಲಕ್ಷ್ಮಣ ಅವರು ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಲು ಮುಂದಾಗಿದ್ದಾರೆ. ವಿಷಯ ತಿಳಿದ ಪಕ್ಕದ ಜಮೀನಿನವರು ರೈತನಿಗೆ ಬುದ್ಧಿವಾದ ಹೇಳಿ, ಅವಘಡ ತಪ್ಪಿಸಿದ್ದಾರೆ.

    ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆ ತಾಲೂಕಿನಲ್ಲಿ ಭತ್ತ ಬೆಳೆದ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಆದರೆ, ತೆನೆ ಬಂದ ವೇಳೆ ಮಳೆಯಾಗಿದ್ದರಿಂದ ಭತ್ತದ ಬೆಳೆ ಕಟಾವು ಮಾಡಲು ಸಮಸ್ಯೆಯಾಗಿದೆ. ನಾಲ್ಕೈದು ದಿನದಿಂದ ಗಾಳಿ ಸಹಿತ ಮಳೆ ಸುರಿದು, ಭತ್ತದ ಬೆಳೆ ನೆಲಕಚ್ಚಿದೆ. ಕೆಲವೆಡೆ ಅರ್ಧದಷ್ಟು ನೆಲ ಕಚ್ಚಿದ್ದರೆ ಮತ್ತಷ್ಟು ಕಡೆ ಸಂಪೂರ್ಣ ಬೆಳೆ ನೆಲಕ್ಕುರುಳಿದೆ. ತಾಲೂಕಾದ್ಯಂತ ಭತ್ತದ ಬೆಳೆ ನೆಲಕಚ್ಚಿದ್ದು, ರೈತರು ಸಮಸ್ಯೆ ಎದುರಿಸುವಂತಾಗಿದೆ. ದೀಪಾವಳಿ ನಂತರ ಭತ್ತದ ಬೆಳೆ ಕಟಾವು ಮಾಡಬೇಕು ಎಂದುಕೊಂಡಿದ್ದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಸತತ ಮಳೆಯಾದ ಹಿನ್ನೆಲೆ ಕೊಪ್ಪಳ ತಾಲೂಕಿನ ಹಿಟ್ನಾಳ, ಹುಲಿಗಿ, ಅಗಳಕೇರಾ, ಬಂಡಿ ಹರ್ಲಾಪುರ, ಬಸಾಪುರ, ರಾಜರಾಮಪೇಟೆ, ಮಹ್ಮದ್ ನಗರ, ನಾರಾಯಣ ಪೇಟೆ, ಅಯೋಧ್ಯ ಗ್ರಾಮದಲ್ಲಿ ಸುಮಾರು ನೂರಕ್ಕೂ ಅಧಿಕ ರೈತರ ಜಮೀನಿನಲ್ಲಿ ಭತ್ತ ನೆಲಕಚ್ಚಿದೆ.ಇದನ್ನೂ ಓದಿ: Kurnool Bus Fire | ದುರಂತಕ್ಕೀಡಾದ ಖಾಸಗಿ ಬಸ್ ಮೇಲಿದೆ 23 ಸಾವಿರಕ್ಕೂ ಹೆಚ್ಚು ದಂಡ

     

  • ರಾಜ್ಯದ ಹಲವೆಡೆ ವರುಣಾರ್ಭಟ – ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

    ರಾಜ್ಯದ ಹಲವೆಡೆ ವರುಣಾರ್ಭಟ – ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

    ರಾಜ್ಯದ ಹಲವೆಡೆ ಭಾನುವಾರ (ಅ.19) ಸುರಿದ ಮಳೆಗೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ಧಾರಾಕಾರ ಮಳೆಗೆ ರೈತರ ಜಮೀನುಗಳು ಜಲಾವೃತವಾಗಿವೆ. ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಮನೆಗಳು ಜಲಾವೃತವಾಗಿವೆ. ಗದ್ದೆಗಳು, ತೋಟಗಳಿಗೆ ನೀರು ನುಗ್ಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

    ಹಾಸನ ಜಿಲ್ಲೆಯ ವಿವಿಧೆಡೆ ಭಾನುವಾರ (ಅ.19) ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹೊಳೆನರಸೀಪುರ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕೆರೆಕೋಡಿ ಬಿದ್ದಿದೆ. ಇದರಿಂದಾಗಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ನೂರಾರು ಎಕರೆ ಪ್ರದೇಶದ ರೈತರ ಜಮೀನು ಸಂಪೂರ್ಣ ಜಲಾವೃತಗೊಂಡಿದೆ. 150ಕ್ಕೂ ಹೆಚ್ಚು ಪ್ರದೇಶದಲ್ಲಿರುವ ಕೆರೆ ಇದಾಗಿದ್ದು, ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಮನೆಯಿಂದ ಆಚೆ ಬರಲಾರದ ಸ್ಥಿತಿ ನಿರ್ಮಾಣವಾಗಿದ್ದು ಅಡಿಕೆ, ತೆಂಗಿನ ತೋಟ, ಹೊಲ, ಗದ್ದೆಗಳು ಸಂಪೂರ್ಣ ಜಲಾವೃತವಾಗಿದೆ.ಇದನ್ನೂ ಓದಿ: ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು – 11ಕ್ಕೂ ಹೆಚ್ಚು ಜನ ಅಸ್ವಸ್ಥ

    ಅರಸೀಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲಿ ಬಂದಿವೆ. ಕಳೆದ ಎರಡು ದಿನಗಳಿಂದ ಶಂಕರಲಿಂಗಪ್ಪ ಎಂಬುವವರ ಮನೆಗೆ ನೀರು ನುಗ್ಗುತ್ತಿದ್ದು, ರಾತ್ರಿಯಿಡಿ ನೀರು ಹೊರಹಾಕಲು ಕುಟುಂಬಸ್ಥರು ಹರಸಾಹಸ ಪಟ್ಟಿದ್ದಾರೆ. ಹೊಳೆನರಸೀಪುರ ಪಟ್ಟಣದ ಕಾರ್ಖಾನೆ ಬೀದಿಯಲ್ಲೂ ಮಂಜು ಎಂಬುವವರ ಮನೆಗೂ ನೀರು ನುಗ್ಗಿದೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ನೀರು ಹೊರಹಾಕುವ ಕಾರ್ಯ ಮಾಡಿದರು.

    ಇನ್ನೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲೂ ವ್ಯಾಪಕ ಮಳೆಯಾಗಿದೆ. ಮಿಂಚು, ಗುಡುಗು, ಸಿಡಿಲು ಹಾಗೂ ಗಾಳಿಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿದ್ದು, ತೆಂಗು ಹಾಗೂ ಕೃಷಿ ಜಮೀನುಗಳು ಜಲಾವೃತವಾಗಿದೆ. ತಾಲೂಕಿನ ಬಹುತೇಕ ಕೆರೆಕಟ್ಟೆಗಳಲ್ಲಿ ಶೇ.50 ರಿಂದ 60ರಷ್ಟು ನೀರು ಸಂಗ್ರಹವಾಗಿದೆ. ಒಂದ್ಕಡೆ ರೈತರ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ರೆ, ಮತ್ತೊಂದು ಕಡೆ ಉತ್ತಮ ಮಳೆಯಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.

    ಚಿತ್ರದುರ್ಗ ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಅರಳೀಕೆರೆ ಸಮೀಪ ಹಳ್ಳತುಂಬಿ ಹರಿಯುತ್ತಿದೆ. ಹಳ್ಳದ ನೀರು ಹರಿದು ಟೊಮೆಟೊ, ಈರುಳ್ಳಿ ಬೆಳೆ ಜಲಾವೃತವಾಗಿದೆ. ಹಿರಿಯೂರು ತಾಲ್ಲೂಕಿನ ಅರಳೀಕೆರೆ ಗೊಲ್ಲರಹಟ್ಟಿಯ ಮುದ್ದಣ್ಣಗೆ ಸೇರಿದ ಎರಡು ಎಕರೆಯಲ್ಲಿ ಬೆಳೆದ ಟೊಮ್ಯಾಟೊ ಜಲಾವೃತದಿಂದ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ಮತ್ತು ದಾಳಿಂಬೆ ಬೆಳೆಗಾರರಿಗೂ ಸಂಕಷ್ಟ ಎದುರಾಗಿದೆ.ಇದನ್ನೂ ಓದಿ: ಶಿವಮೊಗ್ಗ | ಕಾರ್ಗಲ್‌ ಬಳಿ ಪ್ರವಾಸಿಗರ ಬಸ್ ಪಲ್ಟಿ – 18 ಮಂದಿಗೆ ಗಾಯ

    ಮಂಡ್ಯದಲ್ಲಿ ಕಳೆದ ರಾತ್ರಿ ಹಲವೆಡೆ ಮಳೆಯಾಗಿದ್ದು, ನಾಗಮಂಗಲದ ಟಿಬಿ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆ ಕಟ್ಟಲು ವ್ಯಕ್ತಿಯೊಬ್ಬ ಚರಂಡಿಗೆ ಮಣ್ಣು ತುಂಬಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ 7-8 ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಇಡೀ ನಿದ್ದೆ ಇಲ್ಲದೆ ಇಲ್ಲಿನ ಜನರು ಕಂಗಾಲಾಗಿದ್ರು. ಮನೆಯಲ್ಲಿದ್ದ ದವಸ-ಧಾನ್ಯಗಳು ನೀರು ಪಾಲಾಗಿದೆ. ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮುಚ್ಚಿರುವ ಚರಂಡಿಯನ್ನು ಸರಿಪಡಿಸುವಂತೆ ಆಗ್ರಹಿಸಿದರು.

    ಕಾಫಿನಾಡು ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಭಾರೀ ಮಳೆಯಾಗಿದೆ. ಕಡೂರು ತಾಲೂಕಿನ ಎಸ್.ಮಾದಾಪುರ ಕೆರೆ ಸಂಪೂರ್ಣ ಭರ್ತಿಯಾಗಿದೆ. ಒಂದೇ ರಾತ್ರಿ ಸುರಿದ ಮಳೆಗೆ ಸುಮಾರು 15 ಎಕರೆ ವಿಸ್ತೀರ್ಣದ ಕೆರೆ ಭರ್ತಿಯಾಗಿದೆ. ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿನಲ್ಲಿ ಕೆರೆ ಕೋಡಿ ಬಿದ್ದಿದ್ದನ್ನು ಕಂಡು ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಚಾಮರಾಜನಗರದಲ್ಲಿ ಸತತ ಮಳೆಯಿಂದಾಗಿ ತಮಿಳುನಾಡಿನ ದಿಂಬಂ ಘಾಟ್‌ನಲ್ಲಿ ಮಣ್ಣು ಕುಸಿದಿದೆ. ಪರಿಣಾಮ ಕರ್ನಾಟಕ-ತಮಿಳುನಾಡಿಗೆ ಸಂಚಾರ ಮಾಡುವವರಿಗೆ ಸಂಕಷ್ಟ ಎದುರಾಗಿದೆ. ಮಣ್ಣು ರಸ್ತೆಗೆ ಬಿದ್ದಿರುವ ಹಿನ್ನಲೆ, ಟ್ರಾಫಿಕ್ ಜಾಮ್ ಉಂಟಾಗಿದೆ.

    ಇನ್ನೂ ಬೆಂಗಳೂರಿಗೆ ಇಂದು ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿಗಿಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿಯು ಗಂಟೆಗೆ 30-40ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.ಇದನ್ನೂ ಓದಿ: ದೇವಿರಮ್ಮ ಬೆಟ್ಟ ಏರುವಾಗ ಇಬ್ಬರು ಅಸ್ವಸ್ಥ – ಬೆಟ್ಟದಿಂದ ಹೊತ್ತುತಂದ ಅಗ್ನಿಶಾಮಕ ಸಿಬ್ಬಂದಿ

  • ಅತಿವೃಷ್ಟಿಯಿಂದ ಹಾನಿ – ಕರ್ನಾಟಕಕ್ಕೆ SDRFನಿಂದ 384 ಕೋಟಿ ರೂ. ಬಿಡುಗಡೆ

    ಅತಿವೃಷ್ಟಿಯಿಂದ ಹಾನಿ – ಕರ್ನಾಟಕಕ್ಕೆ SDRFನಿಂದ 384 ಕೋಟಿ ರೂ. ಬಿಡುಗಡೆ

    ನವದೆಹಲಿ: ಕರ್ನಾಟಕದಲ್ಲಿ (Karnataka) ಅತಿವೃಷ್ಟಿಯಿಂದ ಹಾನಿಯುಂಟಾಗಿರುವ ಹಿನ್ನೆಲೆ ಎಸ್‌ಡಿಆರ್‌ಎಫ್‌ನಿಂದ (SDRF) ರಾಜ್ಯಕ್ಕೆ 384 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.

    ನೈಋತ್ಯ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಒಟ್ಟು 1,950 ಕೋಟಿ ಮುಂಗಡೆಯಾಗಿ ಬಿಡುಗಡೆ ಮಾಡಲು ಗೃಹಸಚಿವ ಅಮಿತ್ ಶಾ (Amit Shah) ಅನುಮತಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮಹಾರಾಷ್ಟ್ರಕ್ಕೆ (Maharashtra) 1,566.40 ಕೋಟಿ ರೂ. ಅನುಮೋದಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ – ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು

    ಈ ವರ್ಷ, ಕೇಂದ್ರವು ಈಗಾಗಲೇ ಎಸ್‌ಡಿಆರ್‌ಎಫ್ ಅಡಿಯಲ್ಲಿ 27 ರಾಜ್ಯಗಳಿಗೆ 13,603.20 ಕೋಟಿ ರೂ. ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ 15 ರಾಜ್ಯಗಳಿಗೆ 2,189.28 ಕೋಟಿ ರೂ. ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಳೆಯಾಟದಲ್ಲಿ ಗೆದ್ದ ಆಸ್ಟ್ರೇಲಿಯಾ – ಭಾರತದ ವಿರುದ್ಧ 7 ವಿಕೆಟ್‌ಗಳ ಗೆಲುವು

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರವಾಹ, ಭೂಕುಸಿತ, ಮೇಘಸ್ಫೋಟದಿಂದ ತೊಂದರೆಗೊಳಗಾದ ಜನರಿಗೆ ಎಲ್ಲಾ ರೀತಿಯ ಸಹಾಯ ನೀಡಲು ಕೇಂದ್ರ ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೈಡ್ರಾಮಾ; ಜಾರಕಿಹೊಳಿ v/s ಸವದಿ-ಕತ್ತಿ ಬಣ ಜಟಾಪಟಿ

  • ಗಡಿಜಿಲ್ಲೆ ಬೀದರ್‌ನಲ್ಲಿ ಮಾಂಜ್ರಾ ಪ್ರವಾಹದ ಎಫೆಕ್ಟ್‌ – ಲಕ್ಷಾಂತರ ಮೌಲ್ಯದ ಬೆಳೆ ಸರ್ವನಾಶ

    ಗಡಿಜಿಲ್ಲೆ ಬೀದರ್‌ನಲ್ಲಿ ಮಾಂಜ್ರಾ ಪ್ರವಾಹದ ಎಫೆಕ್ಟ್‌ – ಲಕ್ಷಾಂತರ ಮೌಲ್ಯದ ಬೆಳೆ ಸರ್ವನಾಶ

    ಬೀದರ್: ಜಿಲ್ಲೆಯಲ್ಲಿ ಸಂಭವಿಸಿದ್ದ ಮಾಂಜ್ರಾ ಪ್ರವಾಹದಿಂದಾಗಿ ಲಕ್ಷಾಂತರ ಮೌಲ್ಯದ ಬೆಳೆ ಸರ್ವನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ಸಾವಿರಾರು ಎಕರೆಯಲ್ಲಿ ಪ್ರವಾಹದ ನೀರು ಬರೋಬ್ಬರಿ 10 ದಿನಗಳ ಕಾಲ ನಿಂತು ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಸೋಯಾ, ಕಬ್ಬು, ಹೆಸರು, ತೊಗರಿ ಸೇರಿದಂತೆ ಎಲ್ಲಾ ಬೆಳೆಗಳು ಕೊಳೆತು ಕಪ್ಪಾಗಿ ಹೋಗಿದೆ.ಇದನ್ನೂ ಓದಿ:ಬಿಹಾರ ವಿಧಾನಸಭೆ ಚುನಾವಣೆ; ಎನ್‌ಡಿಎ-ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಲೆಕ್ಕಾಚಾರ

    ಹುಲಸೂರು, ಭಾಲ್ಕಿ, ಔರಾದ್, ಬೀದರ್ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಲಕ್ಷ ಲಕ್ಷ ಎಕರೆ ಬೆಳೆಗಳು ಮಾಂಜ್ರಾ ಪ್ರವಾಹದ ಪಾಲಾಗಿದೆ. ಬೀದರ್ ತಾಲೂಕಿನ ಹಿಪ್ಪಳಗಾಂವ್ ಗ್ರಾಮದ ಕಲ್ಯಾಣರಾವ್ ಪಾಟೀಲ್, ರಾಮಶೆಟ್ಟಿ ಬಿರಾದರ್ಷ, ಶಿವರಾಜ್ ಬಿರಾದರ್, ಸಂಜುಕುಮಾರ್ ದನ್ಗರ್ ಸೇರಿದಂತೆ 800ಕ್ಕೂ ಅಧಿಕ ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಸರ್ವನಾಶವಾಗಿದೆ.

    40 ವರ್ಷದಲ್ಲೇ ಈ ಬಾರಿ ಮಾಂಜ್ರಾ ಪ್ರವಾಹ ಬಂದಿದ್ದು, ನದಿ ದಡದಲ್ಲಿರುವ ಸಾವಿರಾರು ಎಕರೆ ಬೆಳೆಗಳು ಹಾಳಾಗಿದೆ. ಸಿದ್ದರಾಮಯ್ಯ ಮೇಲಿಂದ ಬಂದು ಮೇಲೆಯೇ ಹೋದರು. ಇಷ್ಟೊಂದು ಬೆಳೆ ಹಾನಿಯಾದರೂ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಕ್ಷೇತ್ರದ ಶಾಸಕ ಹಾಗೂ ಸಚಿವ ರಹೀಂಖಾನ್ ಒಂದು ಬಾರಿಯೂ ಬಂದಿಲ್ಲ ಎಂದು ಜಿಲ್ಲೆಯ ರೈತರು ಹಿಡಿಶಾಪ ಹಾಕುತ್ತಿದ್ದಾರೆ.ಇದನ್ನೂ ಓದಿ: ರಾಯಚೂರಿನಲ್ಲಿ ನಿಲ್ಲದ ಮನೆಗಳ್ಳರ ಹಾವಳಿ – ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ನಿವಾಸಿಗಳು ಶಾಕ್‌

  • `ಶಕ್ತಿ’ ಚಂಡಮಾರುತ ಎಫೆಕ್ಟ್ – ಗಡಿಜಿಲ್ಲೆ ಬೀದರ್‌ನಲ್ಲಿ ವರುಣನ ಅಬ್ಬರ ಜೋರು

    `ಶಕ್ತಿ’ ಚಂಡಮಾರುತ ಎಫೆಕ್ಟ್ – ಗಡಿಜಿಲ್ಲೆ ಬೀದರ್‌ನಲ್ಲಿ ವರುಣನ ಅಬ್ಬರ ಜೋರು

    ಬೀದರ್: ಅರಬ್ಬಿ ಸಮುದ್ರದಲ್ಲಿ ಶಕ್ತಿ (Shakti) ಚಂಡಮಾರುತದ ಹಿನ್ನೆಲೆ ಗಡಿಜಿಲ್ಲೆ ಬೀದರ್‌ನಲ್ಲಿ (Bidar) ವರುಣಾರ್ಭಟ ಜೋರಾಗಿದೆ.

    ಸೋಮವಾರ (ಅ.6) ಬೆಳಗ್ಗೆಯಿಂದ ಬಿಟ್ಟು ಬಿಡದೇ ಧಾರಾಕಾರ ಮಳೆ ಸುರಿಯುತ್ತಿದ್ದು, ಗುಡುಗು, ಬಿರುಗಾಳಿ ಸಹಿತ ವರುಣ ಅಬ್ಬರಿಸುತ್ತಿದ್ದಾನೆ. ಬೀದರ್, ಹುಮ್ನಾಬಾದ್, ಬಸವ ಕಲ್ಯಾಣ, ಭಾಲ್ಕಿ, ಔರಾದ್ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.ಇದನ್ನೂ ಓದಿ: ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

    ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡುವಂತಾಗಿದ್ದು, ಇತ್ತ ಕಚೇರಿ ಕೆಲಸಗಳಿಗೆ ಹೋಗಲು ಜನರು ಕೂಡ ಹೈರಾಣಾಗುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಇಂದು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

  • Darjeeling Flood | 24/7 ಕಂಟ್ರೋಲ್‌ ರೂಮ್‌ ಓಪನ್‌ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ

    Darjeeling Flood | 24/7 ಕಂಟ್ರೋಲ್‌ ರೂಮ್‌ ಓಪನ್‌ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ (Darjeeling) ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾರ್ವಜನಿಕರ ಸಹಾಯಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee), 24/7 ಕಂಟ್ರೋಲ್‌ ರೂಮ್‌ ತೆರೆದಿದ್ದಾರೆ.

    ಈಗಾಗಲೇ‌ ಪರಿಸ್ಥಿತಿಯನ್ನು ಕಂಟ್ರೋಲ್‌ ರೂಮ್‌ (Control Room) ಮೂಲಕ ಮೇಲ್ವಿಚಾರಣೆ ಮಾಡುತ್ತಿದ್ದು, ಸೋಮವಾರ (ಅ.6) ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

    ಶನಿವಾರ ರಾತ್ರಿ ಸುರಿದ ಹಠಾತ್‌ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಬಂಗಾಳದ ಉತ್ತರ ಮತ್ತು ದಕ್ಷಿಣದ ಹಲವಾರು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ಇದು ನಿಜಕ್ಕೂ ದುಃಖಕರವಾಗಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬೇಸರ ಹೊರಹಾಕಿದ್ದಾರೆ.

    ಉತ್ತರ ಬಂಗಾಳದಲ್ಲಿ 12 ಗಂಟೆಗಳಲ್ಲಿ 300 MMಗೂ ಅಧಿಕ ಮಳೆಯಾಗಿದೆ. ಇದರಿಂದ ಸಂಕೋಶ್ ನದಿ, ಭೂತಾನ್ ಮತ್ತು ಸಿಕ್ಕಿಂನಿಂದ ನದಿ ನೀರಿನ ಹರಿವಿನಲ್ಲೂ ಏರಿಕೆಯಾಗಿದೆ. ಹಠಾತ್ ಪ್ರವಾಹದಿಂದ ನಮ್ಮ ಕೆಲ ಸಹೋದರ-ಸಹೋದರಿಯರನ್ನ ಕಳೆದುಕೊಂಡಿದ್ದೇವೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ ತಿಳಿಸುತ್ತೇನೆ. ಅಲ್ಲದೇ ಆ ಕುಟುಂಬಗಳಿಗೆ ಅಗತ್ಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.

    ಸಿಕ್ಕಿಂ ಸಂಪರ್ಕ ಕಡಿತ
    ಡಾರ್ಜಲಿಂಗ್‌ನಲ್ಲಿ ಸಂಭವಿಸಿದ ಈ ವಿಪತ್ತು ಹಿಮಾಲಯ ರಾಜ್ಯವಾದ ಸಿಕ್ಕಿಂ ಜೊತೆಗಿನ ಸಂಪರ್ಕ ಕಡಿತಗೊಳಿಸಿದೆ. ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಸ್ತೆ, ಡಾರ್ಜಿಲಿಂಗ್ ಮತ್ತು ಸಿಲಿಗುರಿಯನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಗಳು ರಸ್ತೆ ತಡೆಗಳಿಗೆ ಕಾರಣವಾಗಿವೆ. ದುರ್ಗಾ ಪೂಜೆಯ ನಂತರ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸುತ್ತಾರೆ. ಈ ವಿಪತ್ತಿನಲ್ಲಿ ಅನೇಕ ಪ್ರವಾಸಿಗರು ಸಿಲುಕಿಕೊಳ್ಳುವ ಸಾಧ್ಯತೆಯಿದೆ.

  • ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    – `ಶಕ್ತಿ’ ಹೆಸರು ಕೊಟ್ಟಿದ್ದೇ ಲಂಕಾ; ಅ.7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ

    ಮುಂಬೈ: ಅರಬ್ಬಿ ಸಮುದ್ರದಲ್ಲಿ ಶಕ್ತಿ ಚಂಡಮಾರುತ (Shakti Cyclone) ಅಬ್ಬರ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಅ.7ರ ವರೆಗೆ ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಇದು ಮುಂಗಾರು ಬಳಿಕ ಅರಬ್ಬಿ ಸಮುದ್ರದಲ್ಲಿ ಅಪ್ಪಳಿಸುವ ಮೊದಲ ಚಂಡಮಾರುತವಾಗಿದೆ.

    ಚಂಡಮಾರುತ ಬೀಸುವ ಹಿನ್ನೆಲೆ ಮುಂಬೈ (Mumbai), ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಮತ್ತು ಸಿಂಧುದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಮಹಾರಾಷ್ಟ್ರದ ಒಳಭಾಗಗಳಲ್ಲಿ, ಅದ್ರಲ್ಲೂ ಮುಖ್ಯವಾಗಿ ಪೂರ್ವ ವಿದರ್ಭ ಮತ್ತು ಮರಾಠವಾಡದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

    ಉತ್ತರ ಕೊಂಕಣದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಸ್ಥಳೀಯ ಆಡಳಿತ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

    ಗುಜರಾತ್‌ಗೆ ಅಪ್ಪಳಿಸಲಿದೆ ಚಂಡಮಾರುತ
    ಹವಾಮಾನ ಇಲಾಖೆ (IMD) ವಿಜ್ಞಾನಿ ಅಭಿಮನ್ಯು ಚೌಹಾಣ್ ಪ್ರಕಾರ, ಈಶಾನ್ಯ ಅರೇಬಿಯನ್‌ ಸಮುದ್ರದಲ್ಲಿ (Arabian Sea) ಚಂಮಾರುತ ತೀವ್ರಗೊಂಡಿದೆ. ಗಂಟೆಗೆ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಅಕ್ಟೋಬರ್‌ 6ರಂದು ಬೆಳಗ್ಗಿನ ವೇಳೆಗೆ ಚಂಡಮಾರುತವು ಗುಜರಾತ್‌ ಕಡೆಗೆ ಬೀಸುವ ನಿರೀಕ್ಷೆಯಿದೆ. ಆದಾಗ್ಯೂ ರಾಜ್ಯದಲ್ಲಿ ಮಳೆಯ ಪರಿಣಾಮ ಕಡಿಮೆ ಇರಲಿದ್ದು, ಗಾಳಿಯು ಗಂಟೆಗೆ 40-55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಶಕ್ತಿ ಚಂಡಮಾರುತ ಎದುರಿಸಲು ಸಕಲ ತಯಾರಿ
    ಇನ್ನೂ ಶಕ್ತಿ ಚಂಡ ಮಾರುತ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ (Maharashtra Government) ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಬೇಕು, ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನ ಸ್ಥಳಾಂತರಿಸಲು ಕ್ರಮ ವಹಿಸಬೇಕು, ಮೀನುಗಾರರು ಸಮುದ್ರಕ್ಕಿಳಿದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ‌

    ಸೈಕ್ಲೋನ್‌ ಶಕ್ತಿ ಈಗ ಎಲ್ಲಿದೆ?
    ಹವಾಮಾನ ಇಲಾಖೆ ಪ್ರಕಾರ, ಶಕ್ತಿ ಚಂಡಮಾರುತವು ಪ್ರಸ್ತುತ ಗುಜರಾತ್‌ನ ನಲಿಯಾದಿಂದ ನೃಋತ್ಯಕ್ಕೆ ಸುಮಾರು 270 ಕಿಮೀ ದೂರದಲ್ಲಿ, ಪೋರ್‌ಬಂದರ್‌ನಿಂದ ಪಶ್ಚಿಮಕ್ಕೆ 300 ಕಿಮೀ ಮತ್ತು ದಕ್ಷಿಣಕ್ಕೆ 360 ಕಿಮೀ ದೂರದಲ್ಲಿದೆ. ಸುಮಾರು 8 ಕಿಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸುತ್ತಿದ್ದು, 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದನ್ನೂ ಓದಿ: ಪಾಕಿನ ಎಫ್‌-16 , ಜೆಎಫ್‌-17 ಯುದ್ಧ ವಿಮಾನಗಳನ್ನು ಹೊಡೆದಿದ್ದೇವೆ: ಏರ್ ಚೀಫ್ ಮಾರ್ಷಲ್

    `ಶಕ್ತಿ’ ಹೆಸರು ಕೊಟ್ಟಿದ್ದೇ ಶ್ರೀಲಂಕಾ
    ʻಶಕ್ತಿʼ ಚಂಡಮಾರುತದ ಹೆಸರು ಗಮನ ಸೆಳೆದಿದೆ. ಆದ್ರೆ ಚಂಡಮಾರುತಕ್ಕೆ ʻಶಕ್ತಿʼ ಎಂದು ಹೆಸರು ಕೊಟ್ಟಿದ್ದೇ ಶ್ರೀಲಂಕಾ. ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಏಷ್ಯಾ ಮತ್ತು ಪೆಸಿಫಿಕ್‌ನ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ನಿರ್ವಹಿಸುವ ಸಂಘಟಿತ ವ್ಯವಸ್ಥೆಯ ಅಡಿಯಲ್ಲಿ ಶ್ರೀಲಂಕಾ ʻಶಕ್ತಿʼ ಎಂದು ಹೆಸರಿಸಿದೆ. 2020ರಲ್ಲಿ ಪರಿಚಯಿಸಲಾದ ಈ ಸಂಘಟಿತ ವ್ಯವಸ್ಥೆಯು ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದೆ.

    ಚಂಡಮಾರುತವನ್ನು ಸುಲಭವಾಗಿ ಗುರುತಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದಕ್ಕೆ ಹೆಸರುಗಳನ್ನು ನೀಡಲಾಗುತ್ತದೆ. ಈ ಋತುವಿನ ಮೊದಲ ಚಂಡಮಾರುತ ಇದಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಅಬ್ಬರ – ಮಹಾರಾಷ್ಟ್ರದಲ್ಲಿ ಅ.7ರವರೆಗೆ ಭಾರೀ ಮಳೆ ಸಾಧ್ಯತೆ

  • ರಾಜ್ಯದ ಹವಾಮಾನ ವರದಿ 02-10-2025

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 28-21
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 26-20
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 26-20
    ರಾಮನಗರ: 29-21
    ಹಾಸನ: 24-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 26-20

    ಕೋಲಾರ: 27-21
    ತುಮಕೂರು: 26-20
    ಉಡುಪಿ: 28-23
    ಕಾರವಾರ: 29-24
    ಚಿಕ್ಕಮಗಳೂರು: 23-18
    ದಾವಣಗೆರೆ: 26-22

    ಹುಬ್ಬಳ್ಳಿ: 28-21
    ಚಿತ್ರದುರ್ಗ: 27-21
    ಹಾವೇರಿ: 28-22
    ಬಳ್ಳಾರಿ: 31-23
    ಗದಗ: 28-21
    ಕೊಪ್ಪಳ: 21-22

    ರಾಯಚೂರು: 31-24
    ಯಾದಗಿರಿ: 29-23
    ವಿಜಯಪುರ: 30-22
    ಬೀದರ್: 27-23
    ಕಲಬುರಗಿ: 29-23
    ಬಾಗಲಕೋಟೆ: 31-22

  • ರಾಯಚೂರು | ಟೀ ಕುಡಿಯಲು ಅಂಗಡಿಗೆ ತೆರಳಿದ್ದಾಗ ಕುಸಿದ ಛಾವಣಿ – ವೃದ್ಧೆ ಸಾವು

    ರಾಯಚೂರು | ಟೀ ಕುಡಿಯಲು ಅಂಗಡಿಗೆ ತೆರಳಿದ್ದಾಗ ಕುಸಿದ ಛಾವಣಿ – ವೃದ್ಧೆ ಸಾವು

    ರಾಯಚೂರು: ಟೀ ಕುಡಿಯಲು ಅಂಗಡಿಗೆ ತೆರಳಿದ್ದಾಗ ಪಕ್ಕದ ಮನೆ ಛಾವಣಿ ಹಾಗೂ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು (Raichuru) ಗಂಜ್ ವೃತ್ತದ ಬಳಿ ನಡೆದಿದೆ.

    ಮೃತ ವೃದ್ಧೆಯನ್ನು ಎಲ್‌ಬಿಎಸ್ ನಗರದ ನಿವಾಸಿ 60 ವರ್ಷದ ಈಶಮ್ಮ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಪಿಲ್ ಶರ್ಮಾಗೆ ಬೆದರಿಕೆಯೊಡ್ಡಿ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟದ್ದ ವ್ಯಕ್ತಿ ಬಂಧನ

    ಮೃತ ಈಶಮ್ಮ ಟೀ ಕುಡಿಯಲು ಅಂಗಡಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ಟೀ ಅಂಗಡಿಯ ಪಕ್ಕದ ಮನೆ ಛಾವಣಿ, ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಈಶಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಂಡಿಗಳದ್ದೇ ಕಾರುಬಾರು – ಸಿಎಂ, ಡಿಸಿಎಂ ಸಿಟಿ ರೌಂಡ್ಸ್