Tag: heat

  • ಯಾದಗಿರಿಯಲ್ಲಿ ವಿಪರೀತ ಬಿಸಿಲಿನಿಂದ ಮೀನುಗಳ ಮಾರಣಹೋಮ

    ಯಾದಗಿರಿಯಲ್ಲಿ ವಿಪರೀತ ಬಿಸಿಲಿನಿಂದ ಮೀನುಗಳ ಮಾರಣಹೋಮ

    ಯಾದಗಿರಿ: ರಾಜ್ಯದೆಲ್ಲೆಡೆ ಮಳೆರಾಯನ ಅಬ್ಬರ ಜೋರಾಗಿದ್ರೆ, ಯಾದಗಿರಿ (Yadagiri) ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಕೆರೆಯಲ್ಲಿನ ಮೀನುಗಳ (Fish) ಮಾರಣ ಹೋಮವಾಗಿದೆ.

    ಯಾದಗಿರಿಯ ಹೃದಯ ಭಾಗದಲ್ಲಿರುವ ಲುಂಬಿನಿವನ ಕೆರೆಯಲ್ಲಿ ಘಟನೆ ನಡೆದಿದೆ. ಬಿಸಿಲಿನ ತಾಪಮಾನದಿಂದ ಆಕ್ಸಿಜನ್ ಕೊರತೆಯುಂಟಾಗಿ ಸಾವಿರಾರು ಮೀನುಗಳು ಕೆರೆಯಲ್ಲಿ ಸಾವನ್ನಪ್ಪಿವೆ. ಮಳೆ ಕೊರತೆಯಿಂದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಇರೋ ನೀರೆಲ್ಲಾ ನೀಲಿ ಬಣ್ಣಕ್ಕೆ ತಿರುಗಿದೆ. ಹೀಗಾಗಿ ಬಿಸಿಲಿನ ತಾಪಮಾನ ಹೆಚ್ಚಾಗಿ, ಆಕ್ಸಿಜನ್ ಕೊರತೆಯುಂಟಾಗಿ ಮೀನುಗಳು ಸಾವನ್ನಪ್ಪಿವೆ.

    ಸಾವಿರಾರು ಮೀನುಗಳ ಸಾವಿನಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಮೀನುಗಾರರ ಬದುಕು ಸಂಕಷ್ಟಕ್ಕೀಡಾಗಿದೆ. ಇನ್ನೊಂದೆಡೆ ಕೆರೆಯ ದಡದ ಸುತ್ತ ಸಾವಿರಾರು ಮೀನುಗಳ ಸತ್ತು ಬಿದ್ದಿದ್ರಿಂದ ಇಡೀ ಸುತ್ತಲೂ ಗಬ್ಬೆದ್ದು ನಾರುತ್ತಿದೆ. ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಗದೆ ಮನನೊಂದು ನೇಣಿಗೆ ಕೊರಳೊಡ್ಡಿದ ಯುವಕ

  • ಏರುತ್ತಿದೆ ಶಾಖ, ಕುದಿಯುತ್ತಿದೆ ಧರೆ, ಉರಿಯುತ್ತಿದೆ ಕಾಡು; ದಕ್ಷಿಣ ಭಾರತದಲ್ಲಿ ದಾಖಲೆ ತಾಪಮಾನ – ಎಲ್ಲಿ ಏನಾಗ್ತಿದೆ?

    ಏರುತ್ತಿದೆ ಶಾಖ, ಕುದಿಯುತ್ತಿದೆ ಧರೆ, ಉರಿಯುತ್ತಿದೆ ಕಾಡು; ದಕ್ಷಿಣ ಭಾರತದಲ್ಲಿ ದಾಖಲೆ ತಾಪಮಾನ – ಎಲ್ಲಿ ಏನಾಗ್ತಿದೆ?

    ಮುಂಗಾರು ಕೊರತೆ ಹಿನ್ನೆಲೆ ಬೇಸಿಗೆ ಆರಂಭದಲ್ಲೇ ಅದರ ಪರಿಣಾಮದ ಬಿಸಿ ಜನತೆಗೆ ತಟ್ಟಿದೆ. ತಲೆಯ ನೆತ್ತಿಗೆ ಬಿಸಿಲು ಚುರುಗುಟ್ಟುತ್ತಿದೆ. ನೆಲಕ್ಕೆ ಕಾಲಿಟ್ಟರೆ ಕೆಂಡದ ಮೇಲೆ ನಡೆಯುವಂತಹ ಅನುಭವ. ಕೆರೆ-ಕಟ್ಟೆ, ನದಿ-ತೊರೆಗಳು ಬತ್ತಿವೆ. ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ. ಬಿಸಿಲಿಗೆ ಬೆವರಿಳಿಸುತ್ತಿರುವ ಜನರು ಎಲ್ಲೆಲ್ಲೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದು ಊರಿನ ಕಥೆ. ಹಾಗಾದರೆ ಕಾಡಿನ ಕಥೆಯೇನು?

    ವನ್ಯಜೀವಿಗಳು ನೀರು-ಆಹಾರ ಅರಸಿ ಹೆಚ್ಚೆಚ್ಚಾಗಿ ಊರುಗಳ ಕಡೆ ದಾಂಗುಡಿ ಇಡುತ್ತಿವೆ. ಕಾಡುಗಳಲ್ಲಿ ಕಿಚ್ಚು ಹೊತ್ತಿ ಉರಿಯುತ್ತಿವೆ. ಹಸಿರು-ಉಸಿರಿನ ತಾಣಗಳು ಈಗ ಜ್ವಾಲಾಮುಖಿ ಕೇಂದ್ರದಂತಾಗುತ್ತಿವೆ. ಎಲ್ಲೆಡೆ ಬಿರು ಬೇಸಿಗೆ ತಾಪದ ಬಿಸಿ ತಾಗುತ್ತಿದೆ. ಇದು ಕಾಡಿನ ಕಥೆ. ಹಾಗಾದರೆ ಎಲ್ಲೆಲ್ಲಿ ಏನಾಗುತ್ತಿದೆ?

    ಸುಮಾರು ಒಂದು ವಾರದಿಂದ ತಮಿಳುನಾಡಿನ ನೀಲಗಿರಿಯ ಕುನ್ನೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ ವಾರದಂದು ರಾಜ್ಯ ಅರಣ್ಯ ಇಲಾಖೆ ನಡೆಸಿದ ಕಾರ್ಯಾರಣೆಯಲ್ಲಿ ಭಾರತೀಯ ವಾಯುಪಡೆಯು ಸೇರಿಕೊಂಡಿತ್ತು. ‘ಬಾಂಬಿ ಬಕೆಟ್’ ಕಾರ್ಯಾಚರಣೆ ಮೂಲಕ ಕಾಡ್ಗಿಚ್ಚನ್ನು ನಂದಿಸಲು Mi-17 V5 ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿತ್ತು. ಅದು ಸುಮಾರು 16,000 ಲೀಟರ್ ನೀರನ್ನು ಬೆಂಕಿಯ ಮೇಲೆ ಸುರಿಸಿತು.

    ಏನಿದು ಬಾಂಬಿ ಬಕೆಟ್?
    ಬಾಂಬಿ ಬಕೆಟ್ ಅನ್ನು ಹೆಲಿಕಾಪ್ಟರ್ ಬಕೆಟ್ ಅಥವಾ ಹೆಲಿಬಕೆಟ್ ಎಂದೂ ಕರೆಯುತ್ತಾರೆ. ಇದು ಬಾರೀ ಪ್ರಮಾಣದ ನೀರು ತುಂಬಿಕೊಳ್ಳುವ ಸಾಧನ. ಹೆಲಿಕಾಪ್ಟರ್ ಕೆಳಗಡೆ ಹಗ್ಗದ ಸಹಾಯದಿಂದ ಇದನ್ನು ನೇತು ಹಾಕಲಾಗಿರುತ್ತದೆ. ನದಿ, ಕೆರೆ ಅಥವಾ ಯಾವುದಾದರೂ ಕೊಳದಲ್ಲಿ ನೀರನ್ನು ‘ಬಾಂಬಿ ಬಕೆಟ್’ನಲ್ಲಿ ತುಂಬಿಕೊಂಡು ಬೆಂಕಿ ಹೊತ್ತಿ ಉರಿಯುವ ಸ್ಥಳದಲ್ಲಿ ಸುರಿಯುವುದು. ವೈಮಾನಿಕ ಕಾರ್ಯಾರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯಾಚರಣೆಯ ವಿಧಾನವೇ ‘ಬಾಂಬಿ ಬಕೆಟ್’ ಆಪರೇಷನ್. ರಸ್ತೆ ಸಾರಿಗೆ ಮೂಲಕ ತಲುಪಲು ಕಷ್ಟಕರವಾದ ಅಥವಾ ಅಸಾಧ್ಯವಾದ ಕಾಡ್ಗಿಚ್ಚುಗಳ ಕಾರ್ಯಾರಣೆಗೆ ಬಾಂಬಿ ಬಕೆಟ್ ವಿಶೇಷವಾಗಿ ಸಹಾಯಕವಾಗಿದೆ. ಪ್ರಪಂಚದಾದ್ಯಂತ ಕಾಡಿನ ಬೆಂಕಿಯ ವಿರುದ್ಧ ಹೋರಾಡಲು ಹೆಲಿಕಾಪ್ಟರ್‌ಗಳನ್ನು ಆಗಾಗ್ಗೆ ನಿಯೋಜಿಸಲಾಗುತ್ತದೆ.

    ‘ಬೆಂಕಿ ತಿಂಗಳುಗಳು’
    ನವೆಂಬರ್‌ನಿಂದ ಜೂನ್ ವರೆಗೆ ಭಾರತದಲ್ಲಿ ಕಾಡ್ಗಿಚ್ಚಿನ ಕಾಲವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ನೂರಾರು, ಸಾವಿರ ಸಣ್ಣ ಮತ್ತು ದೊಡ್ಡ ಪ್ರಮಾಣದ ಬೆಂಕಿ ಹೊತ್ತಿ ಉರಿಯುತ್ತದೆ. ಬೇಸಿಗೆ ಆರಂಭದ ಫೆಬ್ರವರಿಯಿಂದ ಏಪ್ರಿಲ್-ಮೇ ವರೆಗಿನ ಮಾಸಗಳನ್ನು ಸಾಮಾನ್ಯವಾಗಿ ‘ಬೆಂಕಿಯ ತಿಂಗಳುಗಳು’ ಎಂದು ಕರೆಯಲಾಗುತ್ತಿದೆ.

    ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ) ಪ್ರಕಟಿಸಿದ ದ್ವೈವಾರ್ಷಿಕ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ವರದಿ (ಐಎಸ್‌ಎಫ್‌ಆರ್) ತನ್ನ 2019 ರ ವರದಿಯಲ್ಲಿ, ಭಾರತದ 36% ಕ್ಕಿಂತ ಹೆಚ್ಚು ಅರಣ್ಯ ಪ್ರದೇಶವು ಆಗಾಗ್ಗೆ ಬೆಂಕಿಗೆ ಗುರಿಯಾಗುತ್ತದೆ ಎಂದು ದಾಖಲಿಸಿದೆ. ಸುಮಾರು 4% ರಷ್ಟು ಭಾಗವು ‘ಅತ್ಯಂತ ಬೆಂಕಿ ಪೀಡಿತ’ ಪ್ರದೇಶವಾಗಿದೆ. 6% ‘ಅತೀ ಹೆಚ್ಚು ಬೆಂಕಿ ಪೀಡಿತ’ ಪ್ರದೇಶ ಎಂದು ಹೇಳಲಾಗಿದೆ. ಜಾಗತಿಕವಾಗಿ ನೋಡುವುದಾದರೆ, ಒಟ್ಟು ಅರಣ್ಯ ಪ್ರದೇಶದ ಸುಮಾರು 3% ಅಥವಾ ಸುಮಾರು 98 ಮಿಲಿಯನ್ ಹೆಕ್ಟೇರ್ ಅರಣ್ಯವು 2015 ರಲ್ಲಿ ಬೆಂಕಿಯ ಕೆನ್ನಾಲಗೆಯಲ್ಲಿ ಸುಟ್ಟು ಕರಕಲಾಗಿದೆ. ಹೆಚ್ಚಿನ ಅನಾಹುತಗಳು ಉಷ್ಣವಲಯದ ಪ್ರದೇಶಗಳಲ್ಲೇ ಸಂಭವಿಸಿವೆ.

    ಭಾರತದ ಎಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸುತ್ತೆ?
    ಎಫ್‌ಎಸ್‌ಐ ಪ್ರಕಾರ, ಒಣ ಎಲೆಯುದುರುವ ಕಾಡುಗಳಲ್ಲಿ ತೀವ್ರವಾದ ಬೆಂಕಿ ಕಾಣಿಸಿಕೊಳ್ಳುತ್ತದೆ. ಆದರೆ ನಿತ್ಯಹರಿದ್ವರ್ಣ, ಅರೆ-ನಿತ್ಯಹರಿದ್ವರ್ಣ ಮತ್ತು ಮಲೆನಾಡಿನ ಸಮಶೀತೋಷ್ಣ ಕಾಡುಗಳು ಕಡಿಮೆ ಪ್ರಮಾಣದ ಬೆಂಕಿ ಹಾನಿಗೆ ಒಳಗಾಗುತ್ತವೆ. ಈಶಾನ್ಯ ಭಾರತ, ಒಡಿಶಾ, ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರಾಖಂಡದ ಕಾಡುಗಳು ನವೆಂಬರ್‌ನಿಂದ ಜೂನ್ ಅವಧಿಯಲ್ಲಿ ಬೆಂಕಿಗೆ ಹೆಚ್ಚು ಗುರಿಯಾಗುತ್ತವೆ.

    2023 ರ ಮಾರ್ಚ್‌ನಲ್ಲಿ ಗೋವಾದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಉಂಟಾಗಿತ್ತು. ಅದು ಮಾನವ ನಿರ್ಮಿತ ಎಂಬುದು ತನಿಖೆಯಿಂದ ತಿಳಿಯಿತು. 2021 ರಲ್ಲೂ ವನ್ಯಜೀವಿ ಅಭಯಾರಣ್ಯಗಳು ಸೇರಿದಂತೆ ಉತ್ತರಾಖಂಡ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್-ಮಣಿಪುರ ಗಡಿ, ಒಡಿಶಾ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಸರಣಿ ಕಾಡ್ಗಿಚ್ಚುಗಳು ಸಂಭವಿಸಿದ್ದವು. ಆ ವರ್ಷದಲ್ಲಿ ದೊಡ್ಡ ಪ್ರಮಾಣದ ಕಾಡ್ಗಿಚ್ಚು ಇವಾಗಿದ್ದವು.

    ಈ ವರ್ಷ ಕಾಡ್ಗಿಚ್ಚಿನ ಪರಿಸ್ಥಿತಿ ಹೇಗಿದೆ?
    ಎಫ್‌ಎಸ್‌ಐ ಅಂಕಿಅಂಶಗಳ ಪ್ರಕಾರ ಕಳೆದ ಒಂದು ವಾರದಲ್ಲಿ, ಮಿಜೋರಾಂ (3,738), ಮಣಿಪುರ (1,702), ಅಸ್ಸಾಂ (1,652), ಮೇಘಾಲಯ (1,252), ಮತ್ತು ಮಹಾರಾಷ್ಟ್ರ (1,215) ನಲ್ಲಿ ಅತಿ ಹೆಚ್ಚು ಕಾಡ್ಗಿಚ್ಚುಗಳು ವರದಿಯಾಗಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿರುವ ಉಪಗ್ರಹದ ಮಾಹಿತಿ ಪ್ರಕಾರ, ಮಾರ್ಚ್ ಆರಂಭದಿಂದಲೂ ಮಹಾರಾಷ್ಟ್ರದ ಕೊಂಕಣ ಬೆಲ್ಟ್, ದಕ್ಷಿಣ ಕರಾವಳಿ ಗುಜರಾತ್, ಗಿರ್ ಸೋಮನಾಥ ಮತ್ತು ಪೋರ್ಬಂದರ್, ದಕ್ಷಿಣ ರಾಜಸ್ಥಾನ ಮತ್ತು ದಕ್ಷಿಣಕ್ಕೆ ಹೊಂದಿಕೊಂಡಂತೆ ಕಾಡ್ಗಿಚ್ಚು ಹೆಚ್ಚುತ್ತಿದೆ ಎಂದು ತೋರಿಸಿದೆ. ಮಧ್ಯಪ್ರದೇಶದ ಪಶ್ಚಿಮ ಜಿಲ್ಲೆಗಳು, ಕರಾವಳಿ ಮತ್ತು ಒಳಭಾಗ ಒಡಿಶಾ ಹಾಗೂ ಪಕ್ಕದ ಜಾರ್ಖಂಡ್‌ನಲ್ಲೂ ಕಾಡ್ಗಿಚ್ಚು ಸಂಭವಿಸಿದೆ. ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಹೆಚ್ಚಿನ ಅರಣ್ಯ ಪ್ರದೇಶಗಳು ಕಳೆದ ವಾರದಲ್ಲಿ ಬೆಂಕಿಯ ದುರ್ಘಟನೆಗಳನ್ನು ಕಂಡಿವೆ.

    ದಕ್ಷಿಣ ಭಾರತದಲ್ಲಿ ಹೇಗಿದೆ?
    ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಎಫ್‌ಎಸ್‌ಐ ಪ್ರಕಾರ, ದಕ್ಷಿಣ ಭಾರತದಲ್ಲಿನ ಅರಣ್ಯಗಳು ಬೆಂಕಿಗೆ ಗುರಿಯಾಗುವುದು ಕಡಿಮೆ. ಏಕೆಂದರೆ, ಇಲ್ಲಿನ ಸಸ್ಯವರ್ಗದ ಪ್ರಕಾರವು ಮುಖ್ಯವಾಗಿ ನಿತ್ಯಹರಿದ್ವರ್ಣ ಅಥವಾ ಅರೆ-ನಿತ್ಯಹರಿದ್ವರ್ಣದ್ದಾಗಿದೆ. ತಮಿಳುನಾಡಿನ ಕಾಡುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡ್ಗಿಚ್ಚಿನ ವರದಿಗಳು ಹೆಚ್ಚಾಗಿವೆ.

    ಈ ಬೆಂಕಿ ಅನಾಹುತಗಳಿಗೆ ಕಾರಣವೇನು?
    ಕಾಡಿನ ಬೆಂಕಿಗೆ ಮಾನವ ನಿರ್ಮಿತ ಮತ್ತು ನೈಸರ್ಗಿಕ ಕಾರಣಗಳಿವೆ. ಬಿಸಾಡಿದ ಸಿಗರೇಟುಗಳು, ಕ್ಯಾಂಪ್ ಫೈರ್‌ಗಳು, ಭಗ್ನಾವಶೇಷಗಳನ್ನು ಸುಡುವುದು ಮತ್ತು ಇದೇ ರೀತಿಯ ಇತರ ಪ್ರಕ್ರಿಯೆಗಳಂತಹ ಮಾನವನ ಅಜಾಗರೂಕತೆಯ ಪರಿಣಾಮವಾಗಿ ಹೆಚ್ಚಿನ ಅರಣ್ಯ ಬೆಂಕಿಗಳು ಉಂಟಾಗುತ್ತವೆ. ನೈಸರ್ಗಿಕ ಕಾರಣಗಳಲ್ಲಿ ಮಿಂಚು ಸಾಮಾನ್ಯ ಮೂಲವಾಗಿದೆ.

    ಕಾಡ್ಗಿಚ್ಚು ಹರಡಲು ಅನುಕೂಲಕರ ವಾತಾವರಣ ಬೇಕು. ಬಿಸಿ ಮತ್ತು ಶುಷ್ಕ ತಾಪಮಾನ, ಹೆಚ್ಚಿನ ಮರದ ಸಾಂದ್ರತೆಯು ಕಾಡಿನ ಬೆಂಕಿಯ ಹರಡುವಿಕೆಗೆ ಸಹಾಯ ಮಾಡುವ ಪ್ರಮುಖ ಅಂಶಗಳು. ಈ ವರ್ಷ ಹೆಚ್ಚಿನ ಶುಷ್ಕತೆ, ಸಾಮಾನ್ಯ ದಿನಕ್ಕಿಂತ ಹೆಚ್ಚಿನ ತಾಪಮಾನ, ಬೇಸಿಗೆಯ ಆರಂಭಿಕ ಹಂತದಲ್ಲಿ ಬಿಸಿ ಗಾಳಿಯು ದಕ್ಷಿಣ ಭಾರತದಲ್ಲಿ ಕಾಡ್ಗಿಚ್ಚಿನ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.

    1901 ರ ಬಳಿಕ ಹೆಚ್ಚಿದ ತಾಪಮಾನ!
    ಕಳೆದ ತಿಂಗಳು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅಸಾಧಾರಣ ಬಿಸಿ ವಾತಾವರಣ ಕಂಡುಬಂದಿದೆ. 1901 ರ ಬಳಿಕ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಈ ಪ್ರಮಾಣದ ಬಿಸಿ ವಾತಾವರಣದ ಅನುಭವವಾಗಿದೆ. ಕಳೆದ ಎರಡು ತಿಂಗಳಲ್ಲಿ ದಾಖಲಾದ ಗರಿಷ್ಠ, ಕನಿಷ್ಠ ಮತ್ತು ಸರಾಸರಿ ತಾಪಮಾನವು ದಕ್ಷಿಣದ ರಾಜ್ಯಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚಾಗಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಶಾಖದ ವಾತಾವರಣ ಉಂಟಾಗಲು ಇದು ಮುಖ್ಯ ಕಾರಣ.

    ಆಂಧ್ರಪ್ರದೇಶದ ಪಶ್ಚಿಮ ಭಾಗ ಮತ್ತು ನೆರೆ ರಾಜ್ಯ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವಾರ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟಿತ್ತು. ಮಳೆಯ ಕೊರತೆ ಮತ್ತು ಹೆಚ್ಚಿನ ತಾಪಮಾನದ ಕಾರಣದಿಂದಾಗಿ ದಕ್ಷಿಣ ಭಾರತದಲ್ಲಿ ಶಾಖದ ವಾತಾವರಣ ಇರಲಿದೆ ಎಂದು ಹೇಳಿದೆ.

    ಬಿಆರ್‌ಟಿಯಲ್ಲಿ 50 ಎಕರೆ ಬೆಂಕಿಗಾಹುತಿ
    ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈಚೆಗೆ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಸುಮಾರು 50 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಪುಣಜನೂರಿನಿಂದ ಬೇಡಗುಳಿಗೆ ಹೋಗುವ ರಸ್ತೆಯ ವ್ಯಾಪ್ತಿಯ ಕುರಿಮಂದೆ, ಕುಂಬಳಕಾಯಿ ಗುಡ್ಡ ಪ್ರದೇಶದ ಮೂರ್ನಾಲ್ಕು ಕಡೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಧಗಿಸುತ್ತಿದ್ದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.

  • ರಣ ಬಿಸಿಲಿಗೆ ತತ್ತರಿಸಿದ ಕೊಡಗಿನ ಜನ

    ರಣ ಬಿಸಿಲಿಗೆ ತತ್ತರಿಸಿದ ಕೊಡಗಿನ ಜನ

    ಮಡಿಕೇರಿ: ರಾಜ್ಯದೆಲ್ಲೆಡೆ ವಿಧಾನಸಭಾ ಚುನಾವಣೆಯ ಕಾವು ರಂಗೇರಿದ್ದರೆ, ಪ್ರಕೃತಿ ತವರು ಕೊಡಗು (Kodagu) ಜಿಲ್ಲೆಯಲ್ಲಿ ಮಾತ್ರ ಚುನಾವಣಾ (Election) ಕಣ ಮಂಕಾಗಿದ್ದು, ರಣಬಿಸಿಲು ಜಿಲ್ಲೆಯ ಜನರನ್ನು ತತ್ತರಿಸುವಂತೆ ಮಾಡಿದೆ.

    ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬಿಸಿಲು ಹೆಚ್ಚಾಗುತ್ತಿದೆ. ತಂಪಾದ ಗಾಳಿ ಬೇಕು ಎಂದು ಬಯಸಿರುವ ಜನ, ಫ್ಯಾನ್ ಹಾಗೂ ಎಸಿ ಮೊರೆ ಹೋಗಿದ್ದಾರೆ. ಛತ್ರಿ ಇಲ್ಲದೇ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ

    ಪಶ್ಚಿಮಘಟ್ಟ (Western Ghats) ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಅತೀ ಹೆಚ್ಚು ಬಿಸಿಲು ಕಂಡುಬರುತ್ತಿದೆ. ಈವರೆಗೂ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸರಿಯಾಗಿ ಆಗದಿರುವುದರಿಂದ ತಾಪಮಾನ ಹೆಚ್ಚುತ್ತಲೇ ಇದೆ. ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಗರಿಷ್ಠ ತಾಪಮಾನ 36 ರಿಂದ 40 ಡಿಗ್ರಿಯ ನಡುವೆ ಇದೆ. ಅಂದರೆ ಪ್ರತಿದಿನ 36 ಡಿಗ್ರಿಗೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಸದಾ ತಂಪಾಗಿರುತ್ತಿದ್ದ ಕೊಡಗು ಕಾದ ಕಬ್ಬಿಣದಂತಾಗಿದೆ.

    ಇನ್ನೂ ಕಳೆದ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಎಲ್ಲೆಡೆ ಮುಂಗಾರು ಪೂರ್ವ ಮಳೆಯಾಗಿತ್ತು. ಹಾಗಾಗಿ ಹೆಚ್ಚಿನ ಬಿಸಿಲಿದ್ದರೂ ಇಷ್ಟೊಂದು ಸೆಕೆಯ (Heat) ಅನುಭವ ಆಗುತ್ತಿರಲಿಲ್ಲ. ಆದರೆ, ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಕೆಲವು ಭಾಗಗಳಲ್ಲಿ ಬಿಟ್ಟರೆ ಬಹುತೇಕ ಕಡೆ ಒಂದು ಮಳೆಯೂ ಆಗಿಲ್ಲ. ಇದರಿಂದಾಗಿ ತಾಪಮಾನದಲ್ಲಿ ಏರಿಕೆಯಾಗಿದ್ದು ಜನ ಕಂಗಾಲಾಗಿದ್ದಾರೆ.

    ಅಲ್ಲದೇ ಜಿಲ್ಲೆಯಲ್ಲಿ ಜಲ ಮೂಲಗಳು ಬತ್ತಿ ಹೋಗುತ್ತಿದ್ದು, ಇದೇ ರೀತಿಯಲ್ಲಿ ಸೂರ್ಯನ ತಾಪ ಏರಿಕೆ ಆದರೆ ಆರೋಗ್ಯದ ಸಮಸ್ಯೆಗಳು ಎದುರಾಗಲಿದೆ ಎಂದು ಜಿಲ್ಲೆಯ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲದಲ್ಲಿ ಪಿಎಫ್‍ಐ ಜಾಲ ವ್ಯಾಪಕವಾಗಿ ಹಬ್ಬಿತ್ತು: ಅರುಣ್ ಸಿಂಗ್

  • ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಪಾಟ್ನಾ: ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.

    ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ ಅವರು ಸೋಮವಾರ ಜಿಲ್ಲಾದ್ಯಂತ ಸೆಕ್ಷನ್ 144 ಜಾರಿ ಮಾಡಿದ್ದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಪ್ರಕಟಣೆ ಹೊರಡಿಸಿದ್ದರು.

    ಅಲ್ಲದೆ ಪ್ರಕಟಣೆಯಲ್ಲಿ ತಿಳಿಸಿರುವ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಎಂಎನ್‍ಆರ್‍ಇಜಿಎ ಕಾರ್ಯಕ್ರಮಗಳ ಅಡಿಯಲ್ಲಿ ಬೆಳಗ್ಗೆ 10.30ರ ಬಳಿಕ ಯಾವುದೇ ತೆರೆದ ಸ್ಥಳಗಳಲ್ಲಿ ಕಾರ್ಮಿಕರು ಕೆಲಸ ಮಾಡಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಅಷ್ಟೇ ಅಲ್ಲದೆ, ಜೂನ್ 22ರವರೆಗೆ ಬಿಹಾರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಮೂಲಕ ಬಿಸಿಲ ಝಳಕ್ಕೆ ಮೃತಪಡುವವರ ಸಂಖ್ಯೆ ತಗ್ಗಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

    ಹಾಗೆಯೇ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಗಯಾದ ಅನುಗ್ರಹ ನಾರಾಯಣ ಮಗಧ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಅವರಿಗೆ ಸರ್ಕಾರದಿಂದ ಅಗತ್ಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಸಿಲ ತಾಪಕ್ಕೆ ಬಲಿಯಾದ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಧನವನ್ನು ಘೋಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಪ್ರತಿಕ್ರಿಯಿಸಿ, ಜನರು ಬಿಸಿಲಿಗೆ ಹೋಗುವುದಕ್ಕಿಂತ ನೆರಳು ಇರುವ ಪ್ರದೇಶದಲ್ಲಿ ಇರುವುದು ಸೂಕ್ತ. ಅತಿಯಾದ ಬಿಸಿಲ ತಾಪಕ್ಕೆ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಮೆದುಳು ಸಂಬಂಧಿ ರೋಗಗಳು ಬರುತ್ತವೆ ಎಂದು ಹೇಳಿದ್ದಾರೆ.

  • ಬೆಳಗಾವಿ: ಗ್ರಾಮಸ್ಥರೊಬ್ಬರ ಮನೆಯ ನಿರ್ದಿಷ್ಟ ಪ್ರದೇಶದ ಭೂಮಿಯಲ್ಲಿ ಕಾವು, 68 ಡಿಗ್ರಿ ಉಷ್ಣಾಂಶ

    ಬೆಳಗಾವಿ: ಗ್ರಾಮಸ್ಥರೊಬ್ಬರ ಮನೆಯ ನಿರ್ದಿಷ್ಟ ಪ್ರದೇಶದ ಭೂಮಿಯಲ್ಲಿ ಕಾವು, 68 ಡಿಗ್ರಿ ಉಷ್ಣಾಂಶ

    ಬೆಳಗಾವಿ: ಜಿಲ್ಲೆಯ ಗ್ರಾಮಸ್ಥರೊಬ್ಬರ ಮನೆಯ ನಿರ್ದಿಷ್ಟ ಪ್ರದೇಶದಲ್ಲಿ ಭೂಮಿ ಕಾದು ಕೆಂಡದಂತಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ.

    ತಾಲೂಕಿನ ಹಂಗರಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೀಮಸೇನ ಲಕ್ಷ್ಮಣ್ ಕಾಂಬ್ಳೆ ಅವರಿಗೆ ಸೇರಿದ ಮನೆಯಲ್ಲಿ ಶುಕ್ರವಾರ ಸಂಜೆಯಿಂದ ಮನೆಯ ನಿರ್ದಿಷ್ಟ ಜಾಗದ ಭೂಮಿಯಲ್ಲಿ ಕಾವು ಬರುತ್ತಿದೆ. ಈ ಜಾಗದಲ್ಲಿ ನೀರು ಹಾಕಿದ್ರೂ ಬಿಸಿಯಾಗುತ್ತಿದೆ. ಸ್ಥಳದಲ್ಲಿ ಭೂಮಿ ಅಗೆದರು ಬಿಸಿ ಉಂಟಾಗುತ್ತಿದೆ. ಬಿಸಿಯಾದ ಜಾಗದಲ್ಲಿ ಉಷ್ಣಾಂಶ ಬರೋಬ್ಬರಿ 68 ಡಿಗ್ರಿ ದಾಖಲಾಗಿದೆ. ಆದ್ರೆ ಗ್ರಾಮದ ಹೊರಗೆ ಮೊಡ ಕವಿದ ವಾತಾವರಣವಿದೆ.

    ಸ್ಥಳಕ್ಕೆ ಎಸಿ ರಾಜಶ್ರೀ ಜೈನಾಪುರ, ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಶೀಲನೆ ನಡೆಸುತ್ತಿದ್ದಾರೆ. ಈ ವಿಸ್ಮಯ ನೋಡಲು ಲಕ್ಷ್ಮಣ್ ಕಾಂಬ್ಳೆ ಅವರ ಮನೆ ಮಂದೆ ಸಾಕಷ್ಟು ಜನ ಜಮಾಯಿಸಿದ್ದಾರೆ.

    ಎರಡು ವಾರಗಳ ಹಿಂದೆ ಮೈಸೂರಿನ ಬೆಲವತ್ತ ಗ್ರಾಮದಲ್ಲಿ ಭೂಮಿಯಿಂದ ಹೊರಬರುತ್ತಿದ್ದ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 14 ವರ್ಷದ ಬಾಲಕ ಹರ್ಷಲ್ ಮೃತಪಟ್ಟಿದ್ದ. ಇಲ್ಲಿನ ಕುಂಬಾರ ಕೊಪ್ಪಲು ನಿವಾಸಿ ಸೋಮಣ್ಣ ಎಂಬವರಿಗೆ ಸೇರಿದ 4 ಎಕರೆ ಜಮೀನಿನನಲ್ಲಿ ಈ ವಿಚಿತ್ರ ಘಟನೆ ನಡೆದಿತ್ತು. ಹರ್ಷಲ್ ಸಾವಿಗೂ ಮುನ್ನ ನಡೆದ ಘಟನೆಯ ಬಗ್ಗೆ ವಿವರಿಸಿದ್ದ.

    `ಅಣೆಕಟ್ಟಿನ ಬಳಿಯಿರೋ ತೋಟದಲ್ಲಿ ಕ್ರಿಕೆಟ್ ಆಟವಾಡಲೆಂದು 5, 6 ಮಂದಿ ಗೆಳೆಯರು ಸೇರಿ ಹೋಗಿದ್ವಿ. ಆಟವಾಡುತ್ತಿದ್ದ ವೇಳೆ ಯಶವಂತ್ ಅಣ್ಣ ಬಾಲ್ ಜೋರಾಗಿ ಹೊಡೆದರು. ಬಾಲ್ ತರಲು ಹೋದೆವು. ಈ ವೇಳೆ ಮನೋಜ್ ಬಾಲ್ ತೆಗೆದುಕೊಂಡು ಬರಲು ಹೋಗಿ ಮಣ್ಣಿನಲ್ಲಿ ಸಿಲುಕಿಕೊಂಡು ಕಿರುಚಿದ. ತಕ್ಷಣ ಅವನನ್ನು ಎತ್ತಿಕೊಳ್ಳಲು ನಾನು ಹೋದೆ. ಆದ್ರೆ ಅವನು ನನ್ನ ಕೈಗೆ ಸಿಕ್ಕಿಲ್ಲ. ಇತ್ತ ನಾನು ನಿಂತಲ್ಲಿ ಮಣ್ಣು ಕುಸಿಯುತ್ತಿದ್ದು ಕಾಲು ಬೆಂಕಿಯಲ್ಲಿ ಬೇಯುತ್ತಿತ್ತು. ಈ ವೇಳೆ ಆ ಕಡೆಯಿಂದ ಎದ್ದು ಬಂದು ಮನೋಜ್ ನನ್ನನ್ನು ಹೇಗೋ ಮೇಲಕ್ಕೆತ್ತಿದ. ಎದ್ದ ಬಳಿಕ ರೋಡಿನ ವೆರೆಗೆ ನಡೆದುಕೊಂಡು ಬಂದು ಅಲ್ಲಿ ಇಬ್ಬರು ಅಣ್ಣಂದಿರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡೆವು. ಹಾಗಾಗಿ ಅವರು ನಮ್ಮನ್ನ ಆಸ್ಪತ್ರೆಗೆ ಸೇರಿಸಿದ್ರು ಅಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹರ್ಷಲ್ ಘಟನೆಯ ಬಗ್ಗೆ ವಿವರಿಸಿದ್ದ.

  • ಸುಡುಬಿಸಿಲಿಗೆ ದ್ವಿಚಕ್ರ ವಾಹನಗಳಿಗೂ ಬಂತು ಛತ್ರಿ

    ಸುಡುಬಿಸಿಲಿಗೆ ದ್ವಿಚಕ್ರ ವಾಹನಗಳಿಗೂ ಬಂತು ಛತ್ರಿ

    ಬೆಂಗಳೂರು: ಈಗಂತೂ ನೆತ್ತಿ ಸುಡೋ ಬಿಸಿಲು. ಕಾರಿನಲ್ಲಿ ಹೋಗೋರೇನೂ ಏಸಿ ಹಾಕ್ಕೊಳ್ತಾರೆ. ನಡೆದುಕೊಂಡು ಹೋಗೋರು ಛತ್ರಿ ಹಿಡ್ಕೊಂಡು ಹೋಗಬಹುದು. ಆದ್ರೆ ದ್ವಿಚಕ್ರ ವಾಹನಗಳಲ್ಲಿ ಓಡಾಡೋರು ಏನ್ಮಾಡ್ಬೇಕು? ಇದಕ್ಕೂ ಒಂದು ಐಡಿಯಾ ಬಂದಿದೆ. ಬೆಂಗಳೂರಿನಲ್ಲಿ ಸ್ಪೆಷಲ್ ಬೈಕ್ ಛತ್ರಿ ಬಂದಿದೆ.

    ಬಿಸಿಲು ಕಾದ ಕೆಂಡದಂತಿರುವಾಗ ದ್ವಿಚಕ್ರ ವಾಹನಗಳಲ್ಲಿ ಹೋಗೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ. ಇದಕ್ಕಾಗಿ ಈ ಸ್ಪೆಷಲ್ ಕೊಡೆ ಬಂದಿದೆ. ದಾಸರಹಳ್ಳಿಯ ಬ್ರೌನಿ ಅನ್ನೋರು ಈ ಕೊಡೆಯನ್ನು ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿ ಹೊಸ ಅವಿಷ್ಕಾರ ಮಾಡಿದ್ದಾರೆ. ಸದ್ಯ ಈ ಸಮ್ಮರ್ ಸ್ಪೆಷಲ್ ಛತ್ರಿಗೆ ಫುಲ್ ಡಿಮ್ಯಾಂಡ್ ಇದೆ. ಇದನ್ನ ತೈವಾನ್‍ನಿಂದ ತರಿಸಲಾಗುತ್ತಿದ್ದು, ಎಷ್ಟೇ ವೇಗದಲ್ಲಿ ಹೋದ್ರೂ ಛತ್ರಿ ಅಲ್ಲಾಡಲ್ಲ. ಇಬ್ಬರು ಕುಳಿತುಕೊಳ್ಳಬಹುದಾದ ಜಾಗದಲ್ಲಿ ಛತ್ರಿಯ ನೆರಳು ಬೀಳುತ್ತೆ, ಜೊತೆಗೆ ಸೂರ್ಯನ ಕಿರಣವನ್ನೂ ತಡೆಯೋ ಶಕ್ತಿ ಈ ಛತ್ರಿಗಿದೆಯಂತೆ.

    ಇನ್ನು ಹುಡ್ಗೀರಂತೂ ಈ ಟೂ ವೀಲರ್ ಛತ್ರಿಗೆ ಫುಲ್ ಫಿದಾ ಆಗಿದ್ದಾರೆ. ಕೇವಲ ಸ್ಕೂಟಿ, ಸ್ಕೂಟರ್‍ಗಳಿಗೆ ಮಾತ್ರವಲ್ಲ ಬೈಕ್‍ಗಳಿಗೂ ಇದನ್ನು ಆಳವಡಿಸಬಹುದಾಗಿದೆ. ಸ್ಕೂಟಿ ಛತ್ರಿಗಾದ್ರೆ ಎರಡು ಸಾವಿರ, ಬೈಕಿಗಾದ್ರೇ ಮೂರು ಸಾವಿರ ರೂಪಾಯಿ ನೀಡಬೇಕಾಗುತ್ತೆ. ಸದ್ಯ ಈ ಟೂ ವೀಲರ್ ಛತ್ರಿ ಟ್ರೆಂಡ್ ಆಗಿದೆ. ವಾಹನ ಸವಾರರಿಗೂ ಖುಷಿ ಕೊಡುತ್ತಿದೆ.

    ಬೇಸಿಗೆಯಲ್ಲಿ ಕೂಲ್ ಆಗಿರಬೇಕು ಅಂತಾ ಅಂದುಕೊಳ್ಳೋರು ಈ ಸ್ಪೆಷಲ್ ಛತ್ರಿಯನ್ನ ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿಕೊಂಡು ಹಾಯಾಗಿ ರೌಂಡ್ ಹೊಡೀಬಹುದು.