Tag: heart operation

  • ಬ್ಲೂ ಬೇಬಿ ಸಿಂಡ್ರೋಮ್ – ಸಿದ್ದಾರ್ಥ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

    ಬ್ಲೂ ಬೇಬಿ ಸಿಂಡ್ರೋಮ್ – ಸಿದ್ದಾರ್ಥ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

    ತುಮಕೂರು: ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ್ದ ಆರೂವರೆ ವರ್ಷದ ಬಾಲಕಿಗೆ ಸಿದ್ಧಾರ್ಥ ಹಾರ್ಟ್ ಸೆಂಟರ್‍ನಲ್ಲಿ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೊಂದು ಐತಿಹಾಸಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮೈಲಿಗಲ್ಲು ಎಂದು ಸಾಹೇ ಕುಲಾಧಿಪತಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

    ನಗರದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಟ್ಟಿನಿಂದಲೇ ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ್ದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಜನನಿ(ಹೆಸರು ಬದಲಾಗಿದೆ) ಮೂಲತಃ ಈ ಮಗು ತುಮಕೂರು ಜಿಲ್ಲೆಯವರಾಗಿದ್ದು, ಶಸ್ತ್ರಚಿಕಿತ್ಸೆಯು ಸುದೀರ್ಘವಾಗಿ 5 ಗಂಟೆಗಳ ಕಾಲ ನಡೆಸಲಾಯಿತು. ಮಗುವು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದಿದ್ದಾರೆ.

     

    ತುಮಕೂರಿನಿಂದ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾವುದೇ ಹಾರ್ಟ್ ಸೆಂಟರ್ ಇಲ್ಲದೆ ಇರುವುದು ಬೇಸರ ಸಂಗತಿಯಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ತುಮಕೂರು ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜನಸಾಮಾನ್ಯರಿಗೆ ಹಾರ್ಟ್ ಸೆಂಟರ್ ತೆರೆದು ಆಸ್ಪತ್ರೆಯಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವುದಕ್ಕೆ ರೋಗಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್ – ಬೆಂಗ್ಳೂರಲ್ಲಿ 10 ದಿನದಲ್ಲಿ 499 ಮಂದಿಯಲ್ಲಿ ಸೋಂಕು

    ಕೋವಿಡ್ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಡಿಯಾಕ್ ಪ್ರೊಂಟಿಟ್ ವಿಭಾಗದಲ್ಲಿ 60 ಐಸಿಯು ಬೆಡ್‍ಗಳನ್ನು ಏರ್ಪಡಿಸಲಾಗಿದೆ. ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳ ಸೇವೆ ಆಸ್ಪತ್ರೆಯಲ್ಲಿ ದೊರೆಯಲಿದೆ. ವಿಮಾ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಜನಸಾಮಾನ್ಯರು ಬಳಸಿಕೊಳ್ಳಬಹುದು ಎಂದು ಪರಮೇಶ್ವರ್ ಮನವಿ ಮಾಡಿದ್ದಾರೆ.

    ಕಾರ್ಡಿಯಾಕ್ ಪ್ರೋಂಟಿಟ್ ಸಂಸ್ಥೆಯ ನಿರ್ದೇಶಕ ತಮೀಮ್ ಅಹಮದ್ ಮಾತನಾಡಿ, ಹಾರ್ಟ್ ಸೆಂಟರ್‍ನಲ್ಲಿ ಈವರೆಗೂ ಸುಮಾರು 27ಕ್ಕೂ ಹೆಚ್ಚು ತೆರೆದ ಹೃದಯ ಶಸ್ತ್ರಚಿಕಿತ್ಸೆ, 50ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ, ಅಂಜಿಯೋಗ್ರಾಮ್ ಸೇರಿದಂತೆ ಇದುವರೆಗೂ ಸುಮಾರು 300ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಸಿದ್ಧಾರ್ಥ ಹಾರ್ಟ್ ಸೆಂಟರ್ 24 ಗಂಟೆಗಳ ತುರ್ತುನಿಗಾಘಟಕ, ಪ್ರಯೋಗಾಲಯಗಳು, ವಿಕಿರಣ ಘಟಕ, ಸಿಟಿ ಸ್ಕ್ಯಾನರ್, ಎಂ.ಆರ್.ಐ ಸ್ಕ್ಯಾನರ್ ಸೌಲಭ್ಯ ಒಳಗೊಂಡಿದೆ. ಪೂರ್ಣ ಪ್ರಮಾಣದ ರೋಗಪತ್ತೆ, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ, ಶಾಶ್ವತ ಪೇಸ್ಮೇಕರ್ ಅಳವಡಿಕೆ, ವಾಲ್‍ವ್ಲೋಪ್ಲಾಸ್ಟಿ ಸೌಲಭ್ಯವೂ ಲಭ್ಯವಿದೆ ಎಂದು ತಿಳಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಪಿ.ಕೆ.ಡಾ ದೇವದಾಸ್ ಮತ್ತು ಪ್ರಾಂಶುಪಾಲ ಡಾ. ಎ.ಜಿ.ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು. ಇದನ್ನೂ ಓದಿ:ಕೊರೊನಾದಿಂದ ಮನೆಯವರು ಬರದೆ ಖಿನ್ನತೆ – ಕೈದಿಗಳಿಗೆ ಯೋಗ, ಧ್ಯಾನ ತರಬೇತಿ

  • ಹೃದಯದ ಚಿಕಿತ್ಸೆಗೆ ಸಹಾಯ ಕೋರಿ ಮೋದಿಗೆ ಬಾಲಕ ಪತ್ರ

    ಹೃದಯದ ಚಿಕಿತ್ಸೆಗೆ ಸಹಾಯ ಕೋರಿ ಮೋದಿಗೆ ಬಾಲಕ ಪತ್ರ

    ಕೊಪ್ಪಳ: ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕನೊಬ್ಬ ಚಿಕಿತ್ಸೆಗೆ ಹಣವಿಲ್ಲದೆ ಸಹಾಯ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.

    ಕೊಪ್ಪಳ ತಾಲೂಕಿನ ಬೋಚನಳ್ಳಿ ಗ್ರಾಮದ ಭೀಮಪ್ಪ, ಪ್ರಧಾನಿಗೆ ಪತ್ರ ಬರೆದು ತನ್ನ ಹೃದಯ ಚಿಕಿತ್ಸೆಗೆ ಸಹಾಯ ಕೋರಿದ್ದಾನೆ. ಕಡು ಬಡವರಾಗಿರುವ ಭೀಮಪ್ಪ ಕುಟುಂಬ ಕೂಲಿ ನಾಲಿ ಮಾಡಿಕೊಂಡೆ ಜೀವನ ನಡೆಸುತ್ತಿದೆ.

    ಭೀಮಪ್ಪ ಒಂದು ವರ್ಷ ಇರುವಾಗಲೇ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಈಗಾಗಲೇ ಭೀಮಪ್ಪ ತಂದೆ-ತಾಯಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಅಲ್ಲದೆ ತಮ್ಮ ಬಳಿ ಇದ್ದ ಜಮೀನು ಮಾರಿಕೊಂಡಿದ್ದಾರೆ. ಜೊತೆಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ.

    ಇನ್ನೂ ಭೀಮಪ್ಪ ಹೃದಯ ಚಿಕಿತ್ಸೆಗೆ 31 ಲಕ್ಷ ಹಣ ಬೇಕಾಗಿದೆ. ಹೃದಯ ಬದಲಾವಣೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದು ಅದಕ್ಕಾಗಿ 31 ಲಕ್ಷ ಖರ್ಚಾಗುತ್ತೆ. ಆದರೆ ಚಿಕಿತ್ಸೆಗೆ ಹಣ ಇಲ್ಲದೆ ಭೀಮಣ್ಣ ಕುಟುಂಬಸ್ಥರು ಕಂಗಾಲಾಗಿದ್ದಾರೆ.

    ಹಾಗಾಗಿ ಭೀಮಪ್ಪ ತನ್ನ ಚಿಕಿತ್ಸೆಗೆ ಸಹಾಯ ಕೋರಿ ಪ್ರಧಾನಿಗೆ ಪತ್ರ ಬರೆದು ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾನೆ.

  • ಹೃದಯ ಶಸ್ತ್ರಚಿಕಿತ್ಸೆಗೆ ಸಿಎಂ ನೆರವು – ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದ ಬಾಲಕಿ

    ಹೃದಯ ಶಸ್ತ್ರಚಿಕಿತ್ಸೆಗೆ ಸಿಎಂ ನೆರವು – ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದ ಬಾಲಕಿ

    ಮಂಡ್ಯ: ತನ್ನ ಹೃದಯ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದ ಸಿಎಂ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಲು, ಬಾಲಕಿಯೊಬ್ಬಳು ಜೆಡಿಎಸ್ ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದು ನೆರೆದವರ ಗಮನ ಸೆಳೆದಿದ್ದಾಳೆ.

    ಹೊಸಕೋಟೆಯ ಹೆಮ್ಮಂಡಳ್ಳಿಯ ನಿವಾಸಿ ಸಂಪಂಗಿ, ಸಂಧ್ಯಾರಾಣಿ ದಂಪತಿ ಪುತ್ರಿ ಮೋನಿಕಾಗೆ ಸಿಎಂ ಹೃದಯ ಶಸ್ತ್ರಚಿಕಿತ್ಸೆಗೆ ಹಣ ನೀಡಿ ಜೀವ ಉಳಿಸಿದ್ದರು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಹೃದಯ ಶಸ್ತ್ರಚಿಕತ್ಸೆ ಮಾಡಿಸಲು ಸಿಎಂ ನೆರವಾಗಿದ್ದರು. ಸಿಎಂ ಮಾಡಿದ ಸಹಾಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

    ಇಂದು ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಈ ವೇಳೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮೋನಿಕಾ ಜೆಡಿಎಸ್ ಚಿಹ್ನೆ ಆಗಿರುವ ತೆನೆ ಹೊತ್ತ ಮಹಿಳೆ ರೀತಿ ಬಂದು ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸಿದ್ದಾಳೆ.

  • ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿದ್ದ ಬಾಲಕಿ ಮೊಗದಲ್ಲಿ ಮೂಡಿತು ಬೆಳಕು!

    ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿದ್ದ ಬಾಲಕಿ ಮೊಗದಲ್ಲಿ ಮೂಡಿತು ಬೆಳಕು!

    ಬೆಂಗಳೂರು: ಹೃದಯದಲ್ಲಿ ರಂಧ್ರವಾಗಿ ಓಡಾಡಲು ಆಗದೇ ಕಷ್ಟಪಡುತ್ತಿದ್ದ 13 ವರ್ಷದ ಪುಟ್ಟ ಹುಡುಗಿಯ ಮೊಗದಲ್ಲಿ ಈಗ ಬೆಳಕು ಮೂಡಿದೆ.

    13 ವರ್ಷದ ಜ್ಯೋತಿ ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲುಗೇಟ್ ನಲ್ಲಿ ತಾಯಿ ಸೆಲ್ವಮ್ಮ ಜೊತೆ ವಾಸವಾಗಿದ್ದಾಳೆ. ಬಾಲಕಿಗೆ ತಂದೆ ಇಲ್ಲ, ಮನೆಕೆಲಸ ಮಾಡಿ ತಾಯಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗಿ ಆಟ ಆಡಿ ಪಾಠ ಕಲಿಯೋ ಆಸೆಯಾಗಿತ್ತು. ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರ ಇರೋದ್ರಿಂದ ಆಟ ಪಾಠಗಳಿಂದ ದೂರ ಉಳಿದು ಓಡಾಡಲು ಆಗದೇ ಬಾಲಕಿ ಕುಟುಂಬ ಕಣ್ಣೀರುಡುತ್ತಿತ್ತು.

    ಹೃದಯ ಚಿಕಿತ್ಸೆಗೆ ನಾನಾ ಆಸ್ಪತ್ರೆಗೆ ಅಲೆದಾಡಿದರೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಲು ಸೂಚಿಸಿದ್ದರೂ, ಬಾಲಕಿ ಉಳಿಯುವ ಭರವಸೆಯನ್ನು ನೀಡಿರಲಿಲ್ಲ. ಬಾಲಕಿ ಜ್ಯೋತಿ, ಅಮ್ಮ ನಾನು ಬದುಕಬೇಕು. ಓದಿ ನಿಮ್ಮನ್ನೆಲ್ಲಾ ಸಾಕಬೇಕು ಎಂದು ಕಣ್ಣೀರು ಹಾಕಿ ಹೇಳುವುದನ್ನು ಕಂಡು ತಾಯಿ ಜೀವನ ಮರುಗಿತ್ತು. ಮನೆಯಲ್ಲಿ ಕಡುಬಡತನವಿದ್ದು ವಯಸ್ಸಾದ ತಂದೆ ತಾಯಿಯನ್ನ ಸಾಕುತ್ತಿದ್ರು ಮಗಳ ವ್ಯಥೆಯನ್ನು ಕಂಡು ದಿನಾಲೂ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದ ಸೆಲ್ವಮ್ಮ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದು ಮಗಳ ಚಿಕಿತ್ಸೆಗೆ ಆಳಲು ತೋಡಿಕೊಂಡಿದ್ರು.

    ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಾ ಇರೋ ಈ ಬಾಲಕಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯಾಗಿ ಎಲ್ಲಾ ಮಕ್ಕಳಂತಾಗಲಿ ಎನ್ನುವ ಉದ್ದೇಶದಿಂದ ಈಕೆಯ ನೋವಿನ ಕಥೆ ಪ್ರಸಾರವಾಗಿತ್ತು. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಸಿಎನ್ ಮಂಜುನಾಥ್ ಬಾಲಕಿಗೆ ಚಿಕಿತ್ಸೆ ನೀಡುವ ಭರವಸೆ ನೀಡಿದರು. ಅಂದು ಉಚಿತ ಶಸ್ತ್ರ ಚಿಕಿತ್ಸೆ ನೀಡುತ್ತೇವೆ ಎಂದು ಕೊಟ್ಟ ಮಾತಿನಂತೆ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ. ಈಗ ಬಾಲಕಿ ಜ್ಯೋತಿ ಆರೋಗ್ಯವಾಗಿದ್ದು ಎಲ್ಲಾ ಮಕ್ಕಳಂತೆ ಆಟ-ಪಾಠಗಳಲ್ಲಿ ತೊಡಗಲು ಚಿಕಿತ್ಸೆ ಯಶಸ್ವಿಯಾಗಿದೆ.

    ಚಿಕಿತ್ಸೆ ಪಡೆದ ಬಾಲಕಿ ಜ್ಯೋತಿ ಖುಷಿಯಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸಿ ಮುಂದೆ ಡಾಕ್ಟರ್ ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು ಪಬ್ಲಿಕ್ ಟಿವಿಯ ಈ ಕಾರ್ಯಕ್ಕೆ ಧನ್ಯವಾದ ಹೇಳಿದ್ದಾಳೆ. ಮಗಳ ಚಿಕಿತ್ಸೆ ಯಶಸ್ವಿಯಾಗಿದ್ದು ತಾಯಿ ಸಂತಸಗೊಂಡಿದ್ದು, ಎಲ್ಲ ಮಕ್ಕಳಂತೆ ನನ್ನ ಮಗಳು ಓಡಾಡ್ತಾಳೆ, ಮಾತನಾಡುತ್ತಾಳೆ ಈ ಹಿಂದೆ ಇದ್ದ ಮಗಳಿಗಿಂತ ಈಗಿರೋ ಮಗಳನ್ನು ನೋಡಲು ಖುಷಿಯಾಗುತ್ತಿದೆ ಎನ್ನುತ್ತಾ ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಒಟ್ಟಾರೆ ಕಡು ಬಡತನದಲ್ಲಿದ್ದ ಈ ಬಾಲಕಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರು ಹಾಗೂ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್‍ರವರಿಗೆ ಧನ್ಯವಾದ. ನೊಂದವರ ಬಾಳಿಗೆ ಬೆಳಕಾಗುವ ಕಾರ್ಯಕ್ರಮದ ಶ್ರಮಕ್ಕೆ ಪ್ರತಿಫಲ ದೊರೆತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=nzHgYXD2xno

  • ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಉಡುಪಿ: ಜಿಲ್ಲೆಯ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರಿಂದ 11 ದಿನಗಳ ಹಸುಗೂಸಿಗೆ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಹುಟ್ಟಿನಲ್ಲೇ ಇದ್ದ ಕಂಟಕದಿಂದ ಮಗುವಿನ ಪ್ರಾಣ ಉಳಿದಿದೆ.

    ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹುಟ್ಟಿದ ಮಗುವಿನ ಉಸಿರಾಟದಲ್ಲಿ ಸಮಸ್ಯೆ ಕಾಣುತ್ತಿತ್ತು. ಹೃದಯದ ಬಡಿತ ವಿಪರೀತವಾಗಿತ್ತು. ದೇಹದ ಎಲ್ಲಾ ಭಾಗದ ಚರ್ಮ ತಣ್ಣಗಾಗಿತ್ತು. ಕೂಡಲೇ ಮಗುವನ್ನು ಕೆಎಂಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ, ದೊಡ್ಡ ರಕ್ತನಾಳ ಸ್ಥಾನ ಪಲ್ಲಟವಾಗಿದೆ. ಮಗುವಿನ ತಾಯಿ ಗರ್ಭ ಧರಿಸಿದ ಸಂದರ್ಭ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

    ಹೀಗಾಗಿ ಹೃದಯದ ಆಪರೇಶನ್ ಮಾಡಲು ನಿರ್ಧಾರ ಮಾಡಿದ್ದಾರೆ. ಪುಟ್ಟ ಮಗು ಆಗಿದ್ದರಿಂದ 10 ದಿನಗಳ ಕಾಲ ನಿಗಾ ಘಟಕದಲ್ಲಿಟ್ಟು, ಬಳಿಕ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ಈ ಆಪರೇಷನ್ ಯಶಸ್ವಿಯಾಗಿ ನಡೆದಿದೆ. ಮಣಿಪಾಲ ಕಾರ್ಡಿಯಾಕ್ ಸರ್ಜನ್ ಡಾ. ಅರವಿಂದ ಬಿಷ್ಣೋಯ್ ಬಹಳ ಮುತುವರ್ಜಿಯಿಂದ ಆಪರೇಶನ್ ಮಾಡಿದ್ದಾರೆ.  ಇದನ್ನೂ ಓದಿ: ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಮಕ್ಕಳ ತಜ್ಞ ಡಾ, ಲೆಸ್ಲೀ ಲೂಯೀಸ್, ಹೃದ್ರೋಗ ತಜ್ಞ ಪದ್ಮಕುಮಾರ್, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ ವೈದ್ಯರು ಬಹಳ ರಿಸ್ಕ್ ತೆಗೆದುಕೊಂಡು ಮಗುವಿನ ಜೀವ ಉಳಿಸಿದ್ದಾರೆ. ಈಗ ಮಗು ಆರೋಗ್ಯಯುತವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಕ್ಕಳ ಆರೋಗ್ಯ ವಿಮೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

    ಉಡುಪಿಯ ಆಸ್ಪತ್ರೆಯಲ್ಲಿ ಮಗು ಹುಟ್ಟಿದಾಗ ಮಗುವಿನಲ್ಲಿ ಸಮಸ್ಯೆ ಇರುವುದಾಗಿ ತಂದೆ ತಾಯಿಯವರಿಗೆ ಕಂಡು ಬಂತು. ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಹ ಹೆಚ್ಚಿನ ಚಿಕಿತ್ಸೆ ಸೂಚಿಸಿದರು. ಮಗು ವೇಗವಾಗಿ ಉಸಿರಾಡುತ್ತಿತ್ತು, ಕೆಲವೊಮ್ಮೆ ಉಸಿರಾಡಲು ಕಷ್ಟಪಡುತ್ತಿತ್ತು, ಹೃದಯ ಬಡಿತ ತೀವ್ರವಾಗಿತ್ತು ಮತ್ತು ಚರ್ಮ ತಣ್ಣಗಿತ್ತು. ತಕ್ಷಣ ಮಗುವಿನ ಹೆತ್ತವರು ಕಸ್ತೂರ್ಬಾ ಆಸ್ಪತ್ರೆಯ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಶಿಶುರೋಗ ತಜ್ಞರಾದ ಡಾ. ಲೆಸ್ಲಿ ಲೂಯಿಸ್‍ವರನ್ನು ಕಂಡರು. ಹೃದ್ರೋಗ ತಜ್ಞರಾದ ಡಾ. ಪದ್ಮಕುಮಾರ್‍ರವರು ತಪಾಸಣೆ ನಡೆಸಿ `ಮಗು ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರೀಸ್ (ಟಿಜಿಎ) ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಗಂಭೀರ ಜನ್ಮಜಾತ ಹೃದಯ ನ್ಯೂನತೆಯಿಂದ ಬಳಲುತ್ತಿದೆ’ ಎಂದು ಅಭಿಪ್ರಾಯಪಟ್ಟರು.

    ಆರಂಭಿಕ ಹಂತಗಳಲ್ಲಿ ಇದನ್ನು ಕಂಡುಕೊಳ್ಳುವ ಏಕೈಕ ಮಾರ್ಗವೆಂದರೆ ಭ್ರೂಣದ ಹೃದಯ ಎಕೋಕಾರ್ಡಿಯೋಗ್ರಫಿ, ಇದನ್ನು ಹೆಚ್ಚು ಅಪಾಯದ ಗರ್ಭಧಾರಣೆ ಹೊಂದಿರುವ ಗರ್ಭಿಣಿ ರೋಗಿಗಳಿಗೆ ಅಂದರೆ ಹೈ ರಿಸ್ಕ್ ಪ್ರೆಗ್ನೆನ್ಸಿ ಪೇಶೆಂಟುಗಳಿಗೆ ಮಾಡಲಾಗುವುದು. ಈ ಸೌಲಭ್ಯ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಿಬ್ಬಂದಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಾತ್ರ ಇರುವುದು ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಟಾಮ್ ಅಭಿಪ್ರಾಯಪಟ್ಟರು. ವೈದ್ಯರ ಮೀಟಿಂಗ್ ನಲ್ಲಿ ಏನು ಮಾಡಬಹುದು ಎಂಬ ಚರ್ಚೆ ಅಂದು ಆರಂಭವಾಯ್ತು.

    ಗರ್ಭ ಧರಿಸಿದ ಮೊದಲ 8 ವಾರಗಳಲ್ಲಿ ಭ್ರೂಣದ ಹೃದಯದ ಅಸಹಜ ಬೆಳವಣಿಗೆಯಿಂದಾಗಿ ಹೃದಯದಿಂದ ಶ್ವಾಸಕೋಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತವನ್ನು ಕೊಂಡೊಯ್ಯುವ ದೊಡ್ಡ ರಕ್ತನಾಳಗಳು ಅದಲು ಬದಲಾಗುತ್ತವೆ. ದೇಹದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಸಮರ್ಪಕವಾಗಿರಲಿಲ್ಲ ಮತ್ತು ಶಿಶುಗಳ ಸುಸಜ್ಜಿತ ತೀವ್ರ ನಿಘಾ ಘಟಕದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಅವಶ್ಯಕ ಆರೈಕೆಯನ್ನು ಒದಗಿಸಿದ ನಂತರ ಮಗುವನ್ನು ಹೃದಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಈ ರೀತಿಯ ಪ್ರಕರಣಗಳನ್ನು ಮೊದಲು ಬೆಂಗಳೂರಿಗೆ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗುತ್ತಿತ್ತು. ಆದರೆ ಬೆಂಗಳೂರಿಗೆ ಹೋಗುವ ತನಕ ಶಿಶು ಬದುಕುಳಿಯುವ ಭರವಸೆ ಇರುತ್ತಿರಲಿಲ್ಲ. ಇದಲ್ಲದೆ, ಸಾರಿಗೆ ವ್ಯವಸ್ಥೆಗಳಿಗೆ, ವೈದ್ಯರು, ದಾದಿಯರು ಮತ್ತು ಇತರೆ ಅಗತ್ಯ ವೆಚ್ಚವು ಸುಮಾರು 60000 – ವರೆಗೆ ಆಗುತ್ತದೆ ಎಂದು ಮನಗಂಡ ವೈದ್ಯರು ಮಗುವನ್ನು ಉಳಿಸಲು ಮುಂದಾದರು.

    ತಜ್ಞರ ಪ್ರಕಾರ, ಇಂತಹ ಶಿಶುಗಳು ಒಂದು ತಿಂಗಳು ಮೀರಿ ಬದುಕುವುದಿಲ್ಲ. ಮತ್ತು ಶಿಶುಗಳ ಉಳಿವಿಗಾಗಿ ಶಸ್ತ್ರಚಿಕಿತ್ಸೆಯೊಂದೇ ಏಕೈಕ ಮಾರ್ಗವಾಗಿದೆ. ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಕನ್ಸಲ್ಟಂಟ್ ಕಾರ್ಡಿಯಾಕ್ ಸರ್ಜನ್ ಆಗಿರುವ ಡಾ. ಅರವಿಂದ ಬಿಷ್ಣೋಯ್‍ಯವರು ಸಾಮಾನ್ಯವಾಗಿ, ಕಡಿಮೆ ಆಮ್ಲಜನಕಯುಕ್ತ ರಕ್ತ (ನೀಲಿ) ದೇಹದ ಭಾಗಗಳಿಂದ ಬಲ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ, ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಅಲ್ಲಿಂದ ಅದನ್ನು ಹೃದಯವು ಪಲ್ಮನರಿ ಅಪಧಮನಿಗೆ ಪಂಪ್ ಮಾಡುತ್ತದೆ ಮತ್ತು ಅಲ್ಲಿ ಅದು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ. ಆಮ್ಲಜನಕದಿಂದ ಸಮೃದ್ಧವಾದ ರಕ್ತವು (ಕೆಂಪು) ಶ್ವಾಸಕೋಶಗಳಿಂದ ಎಡ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ ಮತ್ತು ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಬಳಿಕ ಹೃದಯವು ಅದನ್ನು ಅಯೋರ್ಟಾಕ್ಕೆ ಪಂಪ್ ಮಾಡಿ ದೇಹದ ಉಳಿದ ಭಾಗಗಳಿಗೆ ಕಳುಹಿಸುತ್ತದೆ. ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರಿ ಅಥವಾ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿಯಲ್ಲಿ ಅಯೋರ್ಟಾವು ಬಲ ಹೃತ್ಕುಕ್ಷಿಗೆ ಮತ್ತು ಪಲ್ಮನರಿ ಅಪಧಮನಿ ಎಡ ಹೃತ್ಕುಕ್ಷಿಗೆ ಜೋಡಣೆಯಾಗಿರುತ್ತದೆ. ಅಂದರೆ ಇದು ಹೃದಯದ ಸಾಮಾನ್ಯ ಚಟುವಟಿಕೆಗೆ ವಿರುದ್ಧವಾಗಿತ್ತು. ಅಪಧಮನಿಗಳನ್ನು ಅದಲು ಬದಲು ಮಾಡುವುದನ್ನು ಒಳಗೊಂಡಿರುವ ಬಹಳ ಸಂಕೀರ್ಣವಾದ ಟಿಜಿಎ ಶಸ್ತ್ರಚಿಕಿತ್ಸೆಗೆ ಒಳಗಾದ ಶಿಶುಗಳು ಸಹಜ ಬೆಳವಣಿಗೆ ಹೊಂದುತ್ತಾರೆ. ಎಂಬುದಾಗಿ ಡಾ. ಅರವಿಂದ ಬಿಷ್ಣೋಯ್ ಹೇಳಿದರು.

    11 ದಿನದ ಮಗುವಿನ ಶಸ್ತ್ರಚಿಕಿತ್ಸೆಯ ಬಳಿಕ ಡಾ. ಲೆಸ್ಲಿ ಲೂಯಿಸ್‍ರವರ ನೇತೃತ್ವದಲ್ಲಿ ಶಿಶುರೋಗ ತಜ್ಞರು ಮಗು ಚೇತರಿಸಿಕೊಳ್ಳಲು ಅಗತ್ಯವಿರುವ ಆರೈಕೆಯನ್ನು ಒದಗಿಸಿದರು. ಈಗ ಮಗು ಈಗ ಚೆನ್ನಾಗಿ ಚೇತರಿಸಿಕೊಂಡಿದೆ. ಆಪರೇಶನ್ ಆಗಿ ಒಂದು ವಾರ ನಿಗಾ ಘಟಕದಲ್ಲಿ ಮಗುವಿಗೆ ಶುಶ್ರೂಶೆ ನೀಡಲಾಗಿದೆ. ಈಗ ಮಗು ಶೇ. 90 ಸುಧಾರಿಸಿದೆ ದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಮಾಹಿತಿ ನೀಡಿದರು.

    ಟಿಜಿಎ ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿ ಬಹಳ ಅಪರೂಪವಾಗಿ ಸಂಭವಿಸುತ್ತದೆ. ಇಂಥ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ವಿಶೇಷ ಕೌಶಲ ಮತ್ತು ನಿಖರತೆಯ ಅವಶ್ಯಕತೆ ಇರುತ್ತದೆ. ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮುಂಚೆ ಮತ್ತು ನಂತರ ನೀಡುವ ಆರೈಕೆಯು ಮಗು ಚೇತರಿಸಿಕೊಳ್ಳುವಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ ಎಂದು ಹೇಳಿದರು.

  • ಇಂದು ಮಾಜಿ ಸಿಎಂ ಹೃದಯಕ್ಕೆ ಶಸ್ತ್ರ ಚಿಕಿತ್ಸೆ- ಜ್ಯೋತಿಷಿ ಮಾತು ನಂಬಿ ಸಮಯ ನಿಗದಿ

    ಇಂದು ಮಾಜಿ ಸಿಎಂ ಹೃದಯಕ್ಕೆ ಶಸ್ತ್ರ ಚಿಕಿತ್ಸೆ- ಜ್ಯೋತಿಷಿ ಮಾತು ನಂಬಿ ಸಮಯ ನಿಗದಿ

    ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿಗೆ ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ.

    ಆಪರೇಷನ್‍ಗೆ ದಿನಾಂಕ ಅಂತಿಮಗೊಳಿಸಿದ್ದು ವೈದ್ಯರಲ್ಲ ಬದಲಿಗೆ ಜ್ಯೋತಿಷಿಗಳಂತೆ. ದೇವರು, ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೆಚ್‍ಡಿಕೆ ಆಪರೇಷನ್‍ಗೂ ಒಳ್ಳೆಯ ದಿನಕ್ಕಾಗಿ ಜ್ಯೋತಿಷಿಗಳ ಮೊರೆ ಹೋಗಿತ್ತು. ಇದೇ ಮಾರ್ಚ್, ಆಗಸ್ಟ್‍ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೂ ಹೃದಯದ ಐರೋಟಿಕ್ ವಾಲ್ವ್ ಶಸ್ತ್ರಚಿಕಿತ್ಸೆಗೆ ಸೆಪ್ಟೆಂಬರ್ 23ರಂದು ಸಮಯ ನಿಗದಿ ಮಾಡಿದ್ದರು.

    ಇಂದು ತದಿಗೆ ಜೊತೆಗೆ ಕಾವೇರಿ ಪುಷ್ಕರದ ಕೊನೆಯ ದಿನ. ಜ್ಯೋತಿಷ್ಯದ ಪ್ರಕಾರ ಒಳ್ಳೆಯ ದಿನ. ಈ ಹಿನ್ನೆಲೆಯಲ್ಲಿ ಜ್ಯೋತಿಷಿಗಳ ಸಲಹೆಯಂತೆ ಹೆಚ್‍ಡಿಕೆ ಇಂದಿನ ದಿನವನ್ನು ಆಪರೇಷನ್‍ಗಾಗಿ ಆಯ್ಕೆ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ 9.30ರೊಳಗೆ ರಾಹುಕಾಲ ಆರಂಭವಾಗಲಿದೆ. ಅದಕ್ಕೂ ಮೊದಲೇ ಹೆಚ್‍ಡಿಕೆ ಆಪರೇಷನ್ ಥಿಯೇಟರ್‍ಗೆ ಹೋಗಲಿದ್ದಾರೆ.

    ಬೆಂಗಳೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ ಸಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಅಪೋಲೋ ಆಸ್ಪತ್ರೆಯ ಡಾ.ಸತ್ಯಕಿ ಮತ್ತವರ ವೈದ್ಯರ ತಂಡ ಆಪರೇಷನ್ ಮಾಡಲಿದೆ. 4 ಗಂಟೆ ಆಪರೇಷನ್ ನಡೆಯಲಿದೆ. ನಾಲ್ಕು ದಿನಗಳ ವಿಶ್ರಾಂತಿ ಬಳಿಕ ಸಿಂಗಾಪುರ್‍ಗೆ ಹೋಗಿ ಒಂದಷ್ಟು ದಿನ ವಿಶ್ರಾಂತಿ ಪಡೆಯಲು ಹೆಚ್‍ಡಿಕೆ ತೀರ್ಮಾನಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ಶೀಘ್ರ ಗುಣಮುಖರಾಗಲಿಯೆಂದು ಇತ್ತ ಕಾರ್ಯಕರ್ತರು ಹೋಮ ಹವನ ಮಾಡಿಸ್ತಿದ್ದಾರೆ.

    ಎಂಎಲ್‍ಸಿ ಶರವಣ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ, ಇತರೆ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ಮುಸ್ಲಿಮರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕುರುಕ್ಷೇತ್ರದ ಸೆಟ್‍ನಲ್ಲಿದ್ದ ಪುತ್ರ ನಟ ನಿಖಿಲ್ ಹೈದರಾಬಾದ್‍ನಿಂದ ಬಂದು ಆರೋಗ್ಯ ವಿಚಾರಿಸಿದ್ರು. ಆಸ್ಪತ್ರೆಗೆ ದಾಖಲಾಗೋ ಮುನ್ನ ಹೆಚ್‍ಡಿಕೆ ತಾಯಿ ಚನ್ನಮ್ಮರ ಆಶೀರ್ವಾದ ಪಡೆದ್ರು.