Tag: health

  • ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಸೋಂಕು – ಆತಂಕದಲ್ಲಿ ಕಾಫಿನಾಡ ಜನ

    ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಸೋಂಕು – ಆತಂಕದಲ್ಲಿ ಕಾಫಿನಾಡ ಜನ

    ಚಿಕ್ಕಮಗಳೂರು: ಒಂದೇ ವಾರದಲ್ಲಿ ಚಿಕ್ಕಮಗಳೂರಿನ (Chikkamagaluru) ಇಬ್ಬರಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) (KFD) ಪತ್ತೆಯಾಗಿದ್ದು, ಮಲೆನಾಡು ಭಾಗದ ಜನರು ಆತಂಕಕ್ಕೀಡಾಗಿದ್ದಾರೆ.

    ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಮೊಟ್ಟೆ ಇಡುವ ಉಣ್ಣೆ ಜನವರಿ ವೇಳೆಗೆ ಮರಿಯಾಗಿ ಹರಡುತ್ತವೆ. ಬೇಸಿಗೆ ತಿಂಗಳಾದ ಮಾರ್ಚ್-ಏಪ್ರಿಲ್-ಮೇ ತಿಂಗಳಲ್ಲಿ ಮತ್ತಷ್ಟು ವ್ಯಾಪಕ ಹರಡಲಿದೆ. ಮಳೆಗಾಲದಲ್ಲಿ ಈ ಉಣ್ಣೆ ಇರುವುದಿಲ್ಲ. ಈ 2024ರಲ್ಲಿ ಆಗಿಂದಾಗ ವರ್ಷಪೂರ್ತಿ ಮಳೆ ಸುರಿದಿದ್ದರೂ ಸಹ, ಈ ವರ್ಷ ಆರಂಭದಲ್ಲಿ ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಪತ್ತೆಯಾಗಿದೆ. ಇದರಿಂದ ಕಾಡಂಚಿನ ಕುಗ್ರಾಮಗಳಲ್ಲಿ ಆತಂಕ ಎದುರಾಗಿದೆ.

    ಇಬ್ಬರಿಗೆ ಕೆಎಫ್‌ಡಿ ಪಾಸಿಟಿವ್: ಜಿಲ್ಲೆಯ ಎನ್‌ಆರ್ ಪುರ (NR Pura) ತಾಲೂಕಿನ ಮೇಲ್ಪಾಲ್ ಸಮೀಪದ ಕರ್ಕೇಶ್ವರ ಗ್ರಾಮದ 46 ವರ್ಷದ ಓರ್ವ ವ್ಯಕ್ತಿ ಹಾಗೂ ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಸಮೀಪದ ಹಳ್ಳಿಯ 25 ವರ್ಷದ ಯುವಕನಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದೆ. ಓರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೋರ್ವ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರಿಗೂ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಪಾಸಿಟಿವ್ ಪತ್ತೆಯಾಗಿರೋ ಇಬ್ಬರು ಕೂಲಿ ಕಾರ್ಮಿಕರು. ಓರ್ವ ಅಡಿಕೆ ಮರ ಹತ್ತಿ ಅಡಿಕೆ ಗೊನೆ ಕೀಳುವ ಕೊನೆಕಾರ. ಮತ್ತೋರ್ವ ಕಾಫಿತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕ. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಾಗಿ ಕೆಎಫ್‌ಡಿ ಕಾಣಿಸಿಕೊಳ್ಳಲಿದೆ. ಇದು ಮಾರಣಾಂತಿಕ ವೈರಸ್ ಅಲ್ಲದಿದ್ದರೂ, ಆರೋಗ್ಯದ ಬಗ್ಗೆ ನಿಗಾ ವಹಿಸದಿದ್ದರೆ ತೀವ್ರತನವಾದ ಅನಾರೋಗ್ಯ ಎದುರಿಸುವ ಸಂದರ್ಭ ಬರಬಹುದು. ಅದರಲ್ಲೂ ಪ್ರಮುಖವಾಗಿ ಶುಗರ್, ಬಿಪಿ, ಹೃದಯಸಂಬಂಧಿ ಕಾಯಿಲೆಯವರು, ಮದ್ಯ ವ್ಯಸನಿಗಳು ಸೇರಿದಂತೆ ಗಂಭೀರ ಕಾಯಿಲೆ ಇರುವವರು ಎಚ್ಚರದಿಂದ ಇರಬೇಕು.

    ಮುಂಜಾಗೃತ ಕ್ರಮ ಏನು?: ಕಾಫಿ-ಅಡಿಕೆ ತೋಟಕ್ಕೆ ಕೂಲಿಗೆ ಹೋಗುವವರು. ಕಾಡಿಗೆ ಸೌದೆಗೆ ಹೋಗುವವರು. ದನಕರು ಮೇಯಿಸಲು ಕಾಡಿಗೆ ಹೋಗುವವರು ಆರೋಗ್ಯ ಇಲಾಖೆ ಕೊಡುವ ಎಣ್ಣೆಯನ್ನು ದೇಹ-ಕೈ-ಕಾಲಿಗೆ ಹಚ್ಚಿಕೊಂಡು ಹೋಗಬೇಕು. ಸಂಜೆ ಮನೆಗೆ ಬಂದ ತಕ್ಷಣ ಬಟ್ಟೆಯನ್ನ ಬಿಸಿ ನೀರಿನಲ್ಲಿ ಹಾಕಿ, ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು.

    ವೈರಸ್ ಎಲ್ಲೆಲ್ಲಿ ಇದೆ: ಈ ಮಂಗನ ಕಾಯಿಲೆ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡದಲ್ಲಿ ಮಾತ್ರ ಹೆಚ್ಚಾಗಿ ಇರೋದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್ಆರ್ ಪುರ ವೈರಸ್‌ ಕಾಣಿಸಿಕೊಂಡಿದೆ. ಇದರಿಂದಾಗಿ ಆರೋಗ್ಯ ಇಲಾಖೆ ಹಳ್ಳಿಗರಲ್ಲಿ ಜಾಗೃತಿ ಮೂಡಿಸಿ ದೀಪಂ ಆಯಿಲ್ ಕೊಡುತ್ತಿದೆ.

    ಮಳೆ ವಾತಾವರಣ ಕೂಡ ವೈರಸ್ ಪರ: 2024ರಲ್ಲಿ ಆಗಾಗ ವರ್ಷ ಪೂರ್ತಿ ಮಳೆಯಾಗಿದೆ. ಜನವರಿ ಮೂರನೇ ವಾರವಾದ್ರೂ ಸಹ ಮೋಡಕವಿದ ವಾತಾವರಣ, ಚಳಿ ವೈರಸ್‌ಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುತ್ತಿದೆ. ನವೆಂಬರ್-ಡಿಸೆಂಬರ್-ಜನವರಿಯಲ್ಲಿ ಮೊಟ್ಡೆಯಾಗುವ ಸಮಯವಾಗಿದ್ದು ಈ ವಾತಾವರಣ ಕೂಡ ಬೇಸಿಗೆ ವೇಳೆಗೆ ವೈರಸ್ ಹೆಚ್ಚಾಗಿ ಹರಡಬಹುದು ಎಂದು ಅಂದಾಜಿಸಲಾಗಿದೆ.

  • ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು – ಶರಣಾದ ನಕ್ಸಲರ ಗೋಳು

    ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು – ಶರಣಾದ ನಕ್ಸಲರ ಗೋಳು

    ಚಿಕ್ಕಮಗಳೂರು: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಎದುರು ಶರಣಾದ ಆರು ಜನ ನಕ್ಸಲರನ್ನು (Naxalites) ಚಿಕ್ಕಮಗಳೂರು (Chikkamagaluru) ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ (Health) ತಪಾಸಣೆಗೆ ಒಳಪಡಿಸಲಾಗಿದೆ.

    ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಆರೂ ಮಂದಿ ನಕ್ಸಲರನ್ನು ಗುರುವಾರ ರಾತ್ರಿಯೇ ನಗರಕ್ಕೆ ಕರೆತರಲಾಗಿತ್ತು. ಅವರನ್ನು ರಾಮನಹಳ್ಳಿ ಡಿಎಆರ್ ಘಟಕದಲ್ಲಿ ಇರಿಸಲಾಗಿತ್ತು. ಎಸ್‌ಪಿ ಡಾ.ವಿಕ್ರಮ್ ಅಮಟೆ ಅವರು ಶುಕ್ರವಾರ ಬೆಂಗಳೂರಿಗೆ ತೆರಳಿದ್ದರಿಂದ ಶನಿವಾರ ಅವರನ್ನು ಎಸ್‌ಪಿ ಅವರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಯಿತು. ಬಳಿಕ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

    ಆರೋಗ್ಯ ತಪಾಸಣೆ ವೇಳೆ ಸಣ್ಣಪುಟ್ಟ ನೋವುಗಳ ಬಗ್ಗೆ ವೈದ್ಯರ ಬಳಿ ನಕ್ಸಲರು ಹೇಳಿಕೊಂಡಿದ್ದಾರೆ. ಮುಂಡಗಾರು ಲತಾಗೆ ಥೈರಾಯ್ಡ್ ಸಮಸ್ಯೆ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿದ್ದಾರೆ. ಇನ್ನೊಬ್ಬರಿಗೆ ಕೈ ಮೇಲೆ ಗನ್ ಶಾಟ್ ಆಗಿರುವುದು ಪತ್ತೆಯಾಗಿದೆ. ಆರು ಮಂದಿಯಲ್ಲಿ ಬಹುತೇಕರಿಗೆ ಬಿಪಿ, ಶುಗರ್ ಇರುವುದು ಕೂಡ ಪತ್ತೆಯಾಗಿದೆ.

    ನಕ್ಸಲರ ವಿಚಾರಣೆ ನಡೆಸುವ ಹಿನ್ನೆಲೆ ಎನ್ಐಎ ಕೋರ್ಟ್‌ನಿಂದ ಅನುಮತಿ ಪಡೆದು ನಗರಕ್ಕೆ ಕರೆತರಲಾಗಿದೆ. ಶರಣಾದವರ ಪೈಕಿ ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ ನಾಲ್ವರ ಮೇಲೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಮುಂಡಗಾರು ಲತಾ ವಿರುದ್ಧ 33, ವನಜಾಕ್ಷಿ ವಿರುದ್ಧ 15 ಹಾಗೂ ಸುಂದರಿ ಮತ್ತು ಜಯಣ್ಣ ವಿರುದ್ಧ ತಲಾ 3 ಪ್ರಕರಣಗಳಿವೆ.

    ವಸಂತ್ ಹಾಗೂ ಜಿಶಾ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ತನಿಖಾಧಿಕಾರಿಗಳು ಸ್ಥಳ ಮಹಜರಿಗೆ ಕರೆದುಕೊಂಡು ಹೋಗದಿರುವ ಹಿನ್ನೆಲೆಯಲ್ಲಿ ಆರೂ ಮಂದಿ ಡಿಆರ್ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. 14 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ನಕ್ಸಲರ ವಿರುದ್ಧದ ಪ್ರಕರಣಗಳ ಬಗ್ಗೆ ನಗರದಲ್ಲಿಯೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಶೃಂಗೇರಿ, ಜಯಪುರ, ಕೊಪ್ಪ ಠಾಣೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಅಕ್ರಮ ಬಂದೂಕಿನ ಪ್ರಕರಣದ ವಿಚಾರಣೆ ಇಲ್ಲ
    ಜಯಪುರ ಸಮೀಪ ಕಿತ್ತಲೆಗಂಡಿ ಅರಣ್ಯದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದ ಬಂದೂಕುಗಳ ಬಗ್ಗೆ ಈಗ ಯಾವುದೇ ವಿಚಾರಣೆ ನಡೆಯುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಎಫ್‌ಎಸ್‌ಎಲ್‌ ವರದಿ ಬಂದ ನಂತರ ಬಂದೂಕುಗಳ ಕುರಿತು ತನಿಖೆ ನಡೆಯುತ್ತದೆ ಎನ್ನಲಾಗುತ್ತಿದೆ. ಬಂದೂಕು, ಮದ್ದುಗುಂಡುಗಳು ಪತ್ತೆಯಾದಾಗ ಅಪರಿಚಿತರ ಬಂದೂಕು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

  • ಶಿವಣ್ಣಗೆ 6 ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ

    ಶಿವಣ್ಣಗೆ 6 ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ

    – ಶಿವಣ್ಣ ಕ್ಯಾನ್ಸರ್‌ ಮುಕ್ತ ಅಂತ ವೈದ್ಯರು ಹೇಳಿದ್ದಾರೆ

    ಬೆಂಗಳೂರು: ನಟ ಶಿವರಾಜ್‌ಕುಮಾರ್‌ (Shivarajkumar) ಅವರಿಗೆ 6 ಆಪರೇಷನ್‌ ಮಾಡಲಾಗಿದ್ದು 190 ಹೊಲಿಗೆ ಹಾಕಲಾಗಿದೆ. ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ, ಹೃದಯದಲ್ಲಿ ಒಂದು ಸ್ಟಂಟ್ ಇದ್ದು ಜ.25 ರಂದು ಬೆಂಗಳೂರಿಗೆ (Bengaluru) ಬರುತ್ತಾರೆ ಎಂದು ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.

    ಶಿವಣ್ಣ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದೂವರೆ ಗಂಟೆ ಆಪರೇಷನ್‌ಗೆ ಪ್ಲ್ಯಾನ್‌ ಮಾಡಿದ್ದರು. ಆದರೆ ನಾಲ್ಕು ಮುಕ್ಕಾಲು ಗಂಟೆಗೆ ಆಪರೇಷನ್‌ ಮುಗಿಯಿತು. ಮ್ಯಾನ್ಯುವಲಿ ಮಾಡಬೇಕಾ? ಅಥವಾ ರೋಬೋಟಿಕ್ ಮಾಡಬೇಕಾ ಅಂತ ಎರಡು ಪ್ರಕಾರದ ಚರ್ಚೆ ನಡೆಯಿತು. ರೋಬೋಟಿಕ್‌ ಆದರೆ ಏಳೆಂಟು ಹೋಲ್ ಮಾಡಿ ದೇಹವನ್ನು ಉಲ್ಟಾ ಮಲಗಿಸಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಕೊನೆಗೆ ಮ್ಯಾನ್ಯುವಲ್ ಮಾಡುವುದು ಸೂಕ್ತ ಅಂತ ನಿರ್ಧಾರ ಮಾಡಲಾಯಿತು ಎಂದರು.  ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್‌

     

    ಶಿವಣ್ಣ ಗೆ 63 ವಯಸ್ಸು, ಈಗ ವಾಪಸ್ ಬಂದಮೇಲೆ 36 ರ ರೀತಿ ಕಾಣಿಸುತ್ತಾರೆ. ವೈದ್ಯರ ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಶಿವಣ್ಣ ಫೋಟೋ ಜೊತೆಗೆ ವೈದ್ಯರ ಫೋಟೋ ಕೂಡ ಇಲ್ಲಿ ಅಭಿಮಾನಿಗಳು ಪೂಜೆ ಮಾಡಿದ್ದರು. ಅದನ್ನು ನೋಡಿ ವೈದ್ಯರು ಪಾಪ ಕಣ್ಣೀರು ಹಾಕಿಕೊಂಡರು ಎಂದು ತಿಳಿಸಿದರು. ಇದನ್ನೂ ಓದಿ: ಅಮೆರಿಕದಲ್ಲಿ ಸರ್ಜರಿ ನಂತರ ಡಿಸ್ಚಾರ್ಜ್‌ ಆದ ನಟ ಶಿವಣ್ಣ

    ಶಿವಣ್ಣ ಕ್ಯಾನ್ಸರ್‌ ಮುಕ್ತ ಅಂತ ವೈದ್ಯರು ಹೇಳಿದ್ದಾರೆ. ನಾವು ನಾಲ್ಕೈದು ಕಿಮೀ ನಡೆದುಕೊಂಡು ವಾಕಿಂಗ್ ಮಾಡುತ್ತಿದ್ದೆವು. ಮುರುಗೇಶ್ ಮನೋಹರ್ ಸರ್ಜರಿ ಮಾಡಿದ್ದ ಅವರು ಮೂಲತಃ ಬೇಲೂರಿನವರು. ಮದ್ರಾಸ್‌ನಲ್ಲಿ ಹುಟ್ಟಿ ಬೆಳೆದರೂ ಆಗಾಗ ಭಾರತಕ್ಕೆ ಬಂದರು ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ಸಲ ಬಂದಾಗ ಭೇಟಿ ಆಗುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

  • ಕಾರವಾರ | ಕಾರ್ಖಾನೆಯಲ್ಲಿ ಕ್ಲೋರಿನ್ ಸೋರಿಕೆ – 18 ಕಾರ್ಮಿಕರು ಅಸ್ವಸ್ಥ

    ಕಾರವಾರ | ಕಾರ್ಖಾನೆಯಲ್ಲಿ ಕ್ಲೋರಿನ್ ಸೋರಿಕೆ – 18 ಕಾರ್ಮಿಕರು ಅಸ್ವಸ್ಥ

    ಕಾರವಾರ: ಕ್ಲೋರಿನ್ ಸೋರಿಕೆಯಾಗಿ (Chlorine leak) 18 ಜನ ಕಾರ್ಮಿಕರು ಅಸ್ವಸ್ಥರಾದ ಘಟನೆ ಕಾರವಾರದ (Karwar) ಬಿಣಗಾದಲ್ಲಿನ ಗ್ರಾಸಿಂ ಇಂಡಸ್ಟ್ರೀಸ್‍ನಲ್ಲಿ (Grasim Industrie) ನಡೆದಿದೆ.

    ಶನಿವಾರ ಮಧ್ಯಾಹ್ನದ ವೇಳೆ ಕಾರ್ಖಾನೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ಕ್ಲೋರಿನ್ ಸ್ಟೋರ್‍ನಲ್ಲಿ ಲೀಕ್ ಆಗಿದೆ. ಇದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ 18 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಕಾರ್ಮಿಕರು ಕರ್ನಾಟಕ, ಉತ್ತರಪ್ರದೇಶ, ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.

    ಅಸ್ವಸ್ಥಗೊಂಡ 14 ಕಾರ್ಮಿಕರಿಗೆ ಕಾರವಾರದ ಕ್ರಿಮ್ಸ್ ಆಸ್ಪತ್ರೆ ಹಾಗೂ ಗ್ರಾಸಿಂ ಪ್ರಥಮ ಚಿಕಿತ್ಸಾ ಘಟಕದಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕರು ಉಸಿರಾಟ, ಕೆಮ್ಮಿನಿಂದ ಬಳಲುತಿದ್ದಾರೆ. ಯಾರ ಜೀವಕ್ಕೂ ಆಪಾಯವಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಕ್ಲೋರಿನ್ ಲೀಕ್ ಆದರೂ ಕಾರ್ಖಾನೆ ಆಡಳಿತ ಸೈರನ್ ಸಹ ಹಾಕದೇ ನಿರ್ಲಕ್ಷ ಮಾಡಿದ್ದಾರೆ. ಇದರಿಂದ ಕಾರ್ಮಿಕರಿಗೆ ಹಾಗೂ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಕಾರ್ಖಾನೆ ಎದುರು ಕಾರ್ಮಿಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

  • ಶಿವಮೊಗ್ಗ | ಕಳೆದ 4 ತಿಂಗಳ ಹಿಂದೆಯೇ ಐವರು ಮಕ್ಕಳಲ್ಲಿ HMPV ಪತ್ತೆ: ಡಾ.ಸರ್ಜಿ

    ಶಿವಮೊಗ್ಗ | ಕಳೆದ 4 ತಿಂಗಳ ಹಿಂದೆಯೇ ಐವರು ಮಕ್ಕಳಲ್ಲಿ HMPV ಪತ್ತೆ: ಡಾ.ಸರ್ಜಿ

    ಶಿವಮೊಗ್ಗ: ನಗರದಲ್ಲಿ (Shivamogga) ಕಳೆದ ಸೆಪ್ಟೆಂಬರ್‌ನಿಂದ ನವೆಂಬರ್‌ ತಿಂಗಳವರೆಗೆ ಐವರು ಮಕ್ಕಳಲ್ಲಿ HMPV ಸೋಂಕು ತಗುಲಿರುವುದು ದೃಢವಾಗಿತ್ತು. ಈ ಮಕ್ಕಳು ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಸೋಂಕಿನ ಕುರಿತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಎಮ್‌ಎಲ್‌ಸಿ ಹಾಗೂ ಮಕ್ಕಳ ತಜ್ಞ ಡಾ.ಧನಂಜಯ್‌ ಸರ್ಜಿ (Dr.Sarji)ತಿಳಿಸಿದ್ದಾರೆ.

    ಸೋಂಕು ತಗುಲಿದ್ದ ಎಲ್ಲಾ ಮಕ್ಕಳು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಇದು ಸಾಮಾನ್ಯ ವೈರಸ್.‌ ಕೆಮ್ಮು, ಶೀತ, ಜ್ವರ ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು, ಹಿರಿಯರು ಎಚ್ಚರಿಕೆ ವಹಿಸಬೇಕು. ಈ ವೈರಸ್‌ ಬಗ್ಗೆ ಜನ ಆತಂಕ ಪಡಬೇಕಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಚಿಕಿತ್ಸೆಗೆ ದಾಖಲಾಗಿದ್ದ ಮಕ್ಕಳ ಸ್ವ್ಯಾಬ್‌ ಪರೀಕ್ಷೆ ಮಾಡಿದಾಗ ಐವರಲ್ಲಿ ಹೆಚ್‌ಎಂಪಿವಿ ಸೋಂಕು ತಗುಲಿರುವುದು ಗೊತ್ತಾಗಿತ್ತು. ಅವರಿಗೆಲ್ಲ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಜನ ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

  • ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆ – ದೃಢಪಡಿಸಿದ ICMR

    ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆ – ದೃಢಪಡಿಸಿದ ICMR

    ನವದೆಹಲಿ/ ಬೆಂಗಳೂರು: ಚೀನಾದಲ್ಲಿ ಕಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಟ್ರಾವೆಲ್‌ ಹಿಸ್ಟರಿ ಇಲ್ಲದ ಎರಡು ಪ್ರಕರಣಗಳು ಪತ್ತೆಯಾಗಿದೆ.

    ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿದ್ದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ದೃಢಪಡಿಸಿದೆ. 3 ತಿಂಗಳ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರೆ 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಐಸಿಎಂಆರ್‌, ದೇಶದಾದ್ಯಂತ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡಲು ICMR ನ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಎರಡೂ ಪ್ರಕರಣಗಳನ್ನು ಗುರುತಿಸಲಾಗಿದೆ. HMPV ಭಾರತ ಸೇರಿದಂತೆ ವಿಶ್ವಾದ್ಯಂತ ಹರಡಿದ್ದು, ಹಲವು ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

    HMPV ಒಂದು ಉಸಿರಾಟದ ವೈರಸ್ ಆಗಿದ್ದು ಅದು ಸಾಮಾನ್ಯವಾಗಿ ಶೀತವನ್ನು ಹೋಲುವ ಸೌಮ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಮಕ್ಕಳು, ಹಿರಿಯರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಬೇಗ ಹರಡಬಹುದು.

     

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಪರೀಕ್ಷೆಗೆ ಮಕ್ಕಳ ಸ್ವಾಬ್‌ ಅನ್ನು ಪುಣೆ ಲ್ಯಾಬ್‌ಗೆ ಕಳುಹಿಸುವ ಬಗ್ಗೆ ಚರ್ಚೆಮಾಡುತ್ತೇವೆ. ಐಸಿಎಂಆರ್, ಕೇಂದ್ರ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್ ಮಾಡಿದರೂ ಮಕ್ಕಳು, ವಯಸ್ಸಾದವರಲ್ಲೂ ಸಿಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ, ಈ ಸಂಬಂಧ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದ್ದೇವೆ ಎಂದು ತಿಳಿಸಿದರು.

  • ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?

    ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?

    ಬೆಂಗಳೂರು: ನಗರದ 8 ತಿಂಗಳ ಮಗುವಿನಲ್ಲಿ (8 Month Old Baby) ಹೆಚ್‌ಎಂಪಿ ವೈರಸ್ (HMPV) ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ (Health Department) ಅಲರ್ಟ್ ಆಗಿದ್ದು ಜಿಲ್ಲಾವಾರು ಮಾಹಿತಿಯನ್ನು ಕೇಳಿದೆ.

    ಸರ್ಕಾರಿ ಅಥವಾ ಖಾಸಗಿ ಆಸ್ಫತ್ರೆಗಳಲ್ಲಿ ವೈರಸ್ ಪತ್ತೆಯಾದ ಬಗ್ಗೆ ಎಲ್ಲಾ ಡಿಹೆಚ್‌ಓಗಳಿಂದ ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಪ್ರತಿಯೊಂದು ಡೇಟಾ ಕೂಡ ಪತ್ತೆ ಮಾಡಬೇಕು. ವೈರಸ್ ಪತ್ತೆಯಾದ್ರೆ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

    ಏನು ಮಾಡಬೇಕು?
    – ಕೆಮ್ಮುವಾಗ ಅಥವಾ ಸೀನುವಾಗ, ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ.
    – ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಹೆಚ್ಚಾಗಿ ತೊಳೆಯಿರಿ.
    – ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ.
    – ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ.
    – ಮನೆಯಲ್ಲಿಯೇ ಇರಿ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ.
    – ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.


    ಏನು ಮಾಡಬಾರದು?
    – ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ.
    – ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್, ಲಿನಿನ್ ಇತ್ಯಾದಿಗಳನ್ನು ಹಂಚಿಕೊಳ್ಳುವುದು.
    – ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸುವುದು.
    – ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು.
    – ವೈದ್ಯರನ್ನು ಸಂಪರ್ಕಿಸದೆ ಔಷಧಿ ಸೇವಿಸುವುದು.

  • ಸಂಕ್ರಾಂತಿ ವೇಳೆಗೆ ದರ್ಶನ್ ಬೆನ್ನುನೋವಿಗೆ ಆಪರೇಷನ್ ಫಿಕ್ಸ್

    ಸಂಕ್ರಾಂತಿ ವೇಳೆಗೆ ದರ್ಶನ್ ಬೆನ್ನುನೋವಿಗೆ ಆಪರೇಷನ್ ಫಿಕ್ಸ್

    ಮೈಸೂರು: ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‍ನಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಗೆ ಬಂದಿರುವ ನಟ ದರ್ಶನ್ (Darshan) ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

    ಸಂಕ್ರಾಂತಿ ಹಬ್ಬದ ವೇಳೆಯ ದರ್ಶನ್‍ಗೆ ಆಪರೇಷನ್ ಫಿಕ್ಸ್ ಆಗಿದ್ದು, ಮೈಸೂರಿನ (Mysuru) ಆಸ್ಪತ್ರೆಯೊಂದರಲ್ಲಿ ಆಪರೇಷನ್‍ಗೆ ಒಳಗಾಗಲಿದ್ದಾರೆ. ಅಪರೇಷನ್ ಮಾಡಿದ ಒಂದೂವರೆ ತಿಂಗಳು ಫೈಟ್ ದೃಶ್ಯದಲ್ಲಿ ದರ್ಶನ್ ಭಾಗಿಯಾಗುವಂತಿಲ್ಲ. ಕೇವಲ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎಂದು ದರ್ಶನ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಅಜಯ್ ಹೆಗ್ಡೆ ಮಾಹಿತಿ ನೀಡಿದ್ದಾರೆ.

    ಫೆಬ್ರವರಿಯಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಚಿತ್ರೀಕರಣಕ್ಕೂ ಮುನ್ನ ಅಪರೇಷನ್ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆಪರೇಷನ್ ಬಳಿಕ 3 ದಿನ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

    ಈಗ ದರ್ಶನ್ ವರ್ಕೌಟ್ ಶುರು ಮಾಡಿದ್ದಾರೆ. ಆದರೆ ಅಪ್ಪರ್ ಬಾಡಿ, ಲೋಯರ್ ಬಾಡಿ ವರ್ಕೌಟ್ ಮಾಡಲು ಬಿಟ್ಟಿಲ್ಲ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

  • ಚೀನಿ ವೈರಸ್‌ಗೆ ಭಯಪಡಬೇಡಿ, ಸಾಮಾನ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ: ಕೇಂದ್ರ ಆರೋಗ್ಯ ಸಂಸ್ಥೆ

    ಚೀನಿ ವೈರಸ್‌ಗೆ ಭಯಪಡಬೇಡಿ, ಸಾಮಾನ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ: ಕೇಂದ್ರ ಆರೋಗ್ಯ ಸಂಸ್ಥೆ

    ನವದೆಹಲಿ: ಚೀನಾದಲ್ಲಿ(China Virus) ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ಅಧಿಕಾರಿ ಡಾ ಅತುಲ್ ಗೋಯೆಲ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವೈರಸ್‌ (Virus) ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ತಿಳಿಸಿದರು.

    ನಾವು ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸ್‌ ದಾಖಲಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು.

    HMPVಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ, ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ತಡೆಗಟ್ಟುವಿಕೆ ಮುಖ್ಯವಾಗಿದೆ. ಚೀನಾದಲ್ಲಿ HMPV ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಇದು ಯಾವುದೇ ಇತರ ಉಸಿರಾಟದ ವೈರಸ್‌ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ ಮತ್ತು ವಯಸ್ಸಾದವರಲ್ಲಿ ಮತ್ತು ಚಿಕ್ಕವರಲ್ಲಿ ಇದು ಜ್ವರಕ್ಕೆ ಕಾರಣವಾಗಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಚೀನಾದಲ್ಲಿ ಆರ್ಭಟಿಸುತ್ತಿದೆ ಹೊಸ ವೈರಸ್‌| ಸಾವಿರಾರು ಮಂದಿ ಆಸ್ಪತ್ರೆ ಪಾಲು – ವೈರಸ್ ಲಕ್ಷಣಗಳೇನು?

    ಚಳಿಗಾಲದಲ್ಲಿ ಉಸಿರಾಟದ ವೈರಸ್ ಸೋಂಕುಗಳು ಉಲ್ಬಣವಾಗುವುದು ಸಾಮಾನ್ಯ. ಯಾರಿಗಾದರೂ ಕೆಮ್ಮು ಮತ್ತು ಶೀತ ಇದ್ದರೆ ಅವರು ಇತರ ಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. ಕೆಮ್ಮು, ಶೀತ ಬಂದಾಗ ಪ್ರತ್ಯೇಕ ಕರವಸ್ತ್ರ ಅಥವಾ ಟವೆಲ್ ಬಳಸಿ ಎಂದು ಸಲಹೆ ನೀಡಿದರು.

    ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಉಸಿರಾಟದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ.

     

  • ಚೀನಾದಲ್ಲಿ ಆರ್ಭಟಿಸುತ್ತಿದೆ ಹೊಸ ವೈರಸ್‌| ಸಾವಿರಾರು ಮಂದಿ ಆಸ್ಪತ್ರೆ ಪಾಲು – ವೈರಸ್ ಲಕ್ಷಣಗಳೇನು?

    ಚೀನಾದಲ್ಲಿ ಆರ್ಭಟಿಸುತ್ತಿದೆ ಹೊಸ ವೈರಸ್‌| ಸಾವಿರಾರು ಮಂದಿ ಆಸ್ಪತ್ರೆ ಪಾಲು – ವೈರಸ್ ಲಕ್ಷಣಗಳೇನು?

    ಬೀಜಿಂಗ್‌: ಕೋವಿಡ್‌ (Covid) ತವರು ದೇಶ ಚೀನಾದಲ್ಲಿ (China) ಹೆಚ್‌ಎಂಪಿವಿ (HMPV) ಹೆಸರಿನ ಹೊಸ ವೈರಸ್ ವಿಜೃಂಭಿಸುತ್ತಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜಗತ್ತು ಮತ್ತೆ ಆತಂಕಕ್ಕೆ ಒಳಗಾಗಿದೆ.

    ಈ ಹೊತ್ತಲ್ಲೇ, ಶ್ವಾಸಕೋಶ ಸಂಬಂಧಿ ರೋಗಗಳಿಂದ ತಮ್ಮ ದೇಶದ ಸಾವಿರಾರು ಮಂದಿ ಆಸ್ಪತ್ರೆ (Hospital) ಸೇರುತ್ತಿರುವುದು ನಿಜ ಎಂಬುದನ್ನು ಚೀನಾ ಒಪ್ಪಿಕೊಂಡಿದೆ. ಹೆಚ್‌ಎಂಪಿವಿ ವೈರಸ್ ಸೋಕಿದ ಸಾವಿರಾರು ಮಂದಿ ಆಸ್ಪತ್ರೆ ಸೇರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ.

    ಹೆಚ್‌ಎಂಪಿವಿ ವೈರಸ್ ಏನು ಎತ್ತ?
    ಹೆಚ್‌ಎಂಪಿವಿ ಅಂದರೆ ಹ್ಯೂಮನ್ ಮೆಟಾನ್ಯೂಮೋ ವೈರಸ್. ಇದು ಪಕ್ಷಿ, ಜಲಚರಗಳಲ್ಲಿ ಶ್ವಾಸಕೋಶ ವ್ಯಾಧಿಗಳನ್ನು ಉಂಟು ಮಾಡುವ ವೈರಸ್ ಆಗಿದೆ. ಹೆಚ್‌ಎಂಪಿವಿ ವೈರಸ್‌ ಚೀನಾಗೆ ಹೊಸದೇನು ಅಲ್ಲ. 2021ರಲ್ಲಿ ಮೊದಲ ಬಾರಿ ಮಕ್ಕಳಲ್ಲಿ ಈ ವೈರಸ್ ಅನ್ನು ಡಚ್ ಸಂಶೋಧಕರು ಪತ್ತೆ ಹಚ್ಚಿದ್ದರು. ಆದರೆ ಇದು ಹೇಗೆ ಸೋಕುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ವಿಫಲರಾಗಿದ್ದರು.

    ಹೆಚ್‌ಎಂಪಿವಿ ವೈರಸ್ ನಿಯಂತ್ರಣಕ್ಕೆ ವ್ಯಾಕ್ಸಿನ್, ಔಷಧಿ ಕಂಡು ಹಿಡಿದಿಲ್ಲ. ಶೀತ-ಕೆಮ್ಮು, ಜ್ವರ, ಸೀನುವಿಕೆ, ಮೂಗು ಸೋರುವಿಕೆ ಇದರ ಪ್ರಮುಖ ಲಕ್ಷಣ. ಇದು ನ್ಯೂಮೋನಿಯಾ, ಬ್ರಾಂಕೈಟಿಸ್‌ಗೆ ದಾರಿ ಮಾಡಿಕೊಡಬಹುದು.  ಇದನ್ನೂ ಓದಿ: BBK 11: ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿಯ ಭಾಗ್ಯ

    ಸದ್ಯಕ್ಕೆ ಚೀನಾದ ಉತ್ತರ ಭಾಗದಲ್ಲಿ ಮಾತ್ರ ಕಂಡು ಬಂದಿದ್ದು ವಯಸ್ಸಿನ ಬೇಧವಿಲ್ಲದೇ ಎಲ್ಲರಿಗೂ ಈ ವೈರಸ್ ಸೋಕುತ್ತಿದೆ. ಮುಖ್ಯವಾಗಿ ಮಕ್ಕಳು, ವಯೋವೃದ್ಧರನ್ನು ಹೆಚ್ಚು ಕಾಡುತ್ತಿದೆ.

    ಕೇಸ್‌ಗಳನ್ನು ಟ್ರೇಸ್ ಮಾಡುವುದರಲ್ಲಿ ವೈದ್ಯಕೀಯ ಸಿಬ್ಬಂದಿ ಬ್ಯುಸಿಯಾಗಿದ್ದು ಹೊಸ ವೈರಸ್ ಮಾರಣಾಂತಿಕವೇ ಎಂಬುದು ಇನ್ನೂ ಖಚಿತವಾಗಿಲ್ಲ. ಈಗಾಗಲೇ ಮಾಸ್ಕ್ ಧರಿಸಿ ಎಂಬ ಮಾರ್ಗಸೂಚಿ ಬಿಡುಗಡೆಯಾಗಿದ್ದು ಸ್ವಚ್ಛತೆ, ಭೌತಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.