Tag: health

  • ನಾಲ್ಕು ತಿಂಗಳ ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ

    ನಾಲ್ಕು ತಿಂಗಳ ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ

    ಚಿತ್ರದುರ್ಗ: ಮದುವೆಯಾಗಿ ಹಲವು ವರ್ಷಗಳ ನಂತರ ಹುಟ್ಟಿದ ಮಗುವಿನ ಪೋಷಕರು ಖುಷಿಯಾಗಿದ್ದರು. ಆದರೆ ಮಗು ನಾಲ್ಕು ತಿಂಗಳು ತುಂಬುವುದರಲ್ಲಿ ಹೊಕ್ಕಳ ಮೇಲೆ ಗಡ್ಡೆ ಕಾಣಿಸಿಕೊಂಡು ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕಿ ಗ್ರಾಮದ ಮಂಜುನಾಥ್ ಹಾಗೂ ರಂಗಮ್ಮ ಅವರ ಮಗ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೊಕ್ಕಳ ಮೇಲೆ ದಿನೇ ದಿನೇ ದೊಡ್ಡದಾಗುತ್ತಿರೋದ ಗುಳ್ಳೆಯಿಂದ ಮಗು ಪ್ರತಿ ನಿತ್ಯ ನರಕ ಯಾತನೆ ಅನುಭವಿಸುತ್ತಿದೆ. ಮಲ, ಮೂತ್ರ ವಿಸರ್ಜನಾ ಕ್ರಿಯೆಗೆ ಸಾಕಷ್ಟು ಸಂಕಟ ಪಡುತ್ತಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮಂಜುನಾಥ್ ಟ್ರ್ಯಾಕ್ಟರ್ ಚಾಲಕ ಕೆಲಸ ಇದ್ರೆ ಮಾತ್ರ ಜೀವನ ಇಲ್ಲಾ ಅಂದ್ರೆ ಜೀವನ ನಡೆಸೋದು ಕಷ್ಟ. ಮಗನ ಸ್ಥಿತಿಯನ್ನ ಕಂಡು ಯಾರಾದ್ರೂ ಸಹಾಯ ಮಾಡಿ ಅಂತಾ ಅಂಗಲಾಚುತ್ತಿದ್ದಾರೆ.

    ಶಸ್ತ್ರ ಚಿಕಿತ್ಸೆಗೆ ಬೇಕಿದೆ ಸಹಾಯ: ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೆಳ ಭಾಗದಲ್ಲಿ ಇದೇ ರೀತಿ ಗುಳ್ಳೆಯಾದಾಗ ಆಪರೇಷ್ ಮಾಡಿದ್ರು. ಆ ಸಂದರ್ಭದಲ್ಲೇ ಮಗುವಿಗೆ ಮತ್ತೆ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ಹೇಳಿದ್ರು. ಹೆರಿಗೆಗೆ ಸುಮಾರು 30 ಸಾವಿರ ಹಾಗೂ ಮೊದಲ ಆಪರೇಷನ್‍ಗೆ ಸುಮಾರು 20 ಸಾವಿರ ಹಣ ಖರ್ಚು ಮಾಡಿ ಕುಟುಂಬ ಕಂಗಾಲಾಗಿದೆ. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ಬಳಿ ತೋರಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ತಾತ್ಕಾಲಿಕವಾಗಿ ಔಷಧಿ ನೀಡಿದ್ದಾರೆ. ಆದ್ರೆ ಔಷಧಿ ಹಾಕಿದಾಗ ಮಾತ್ರ ಮಗು ಅಳೋದನ್ನ ನಿಲ್ಲಿಸುತ್ತೆ. ಉಳಿದಂತೆ ನೋವಿನಿಂದ ಅಳುತ್ತೆ. ಮಗು ಗುಣ ಮುಖವಾಗಲು ಆರಪೇಷ್ ಮಾಡಿಸಬೇಕು ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.

    ಮಗು ಗುಣಮುಖವಾಗಲು ಆಪರೇಷ್ ಮಾಡ್ಲೇಬೇಕು. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಆರಪೇಷನ್‍ಗಾಗಿ 20 ರಿಂದ 30 ಸಾವಿರ ಹಣ ಖರ್ಚಾಗಲಿದೆ. ಯಾರಾದ್ರೂ ಸಹಾಯ ಮಾಡಿದ್ರೆ ಮಂಜುನಾಥ್ ರಂಗಮ್ಮ ದಂಪತಿಯ ಬಾಳಲ್ಲಿ ಬೆಳಕು ಮೂಡಲಿದೆ.

     

  • ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಕಾರವಾರ: ಮುಪ್ಪು ಆವರಿಸಿದಾಗ ಮಕ್ಕಳು ತಮ್ಮ ಆಸರೆಗೆ ಇರಬೇಕು ಎಂದು ಪ್ರತಿಯೊಬ್ಬ ಹೆತ್ತವರು ಬಯಸುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೇರಿ ಗ್ರಾಮದಲ್ಲಿರುವ ಕುಟುಂಬದಲ್ಲಿ ಬೆಳೆದು ನಿಂತ ಮೂವರು ಮಕ್ಕಳನ್ನ ಕಡು ಬಡತನದ ಮುಪ್ಪಿನಲ್ಲೂ ಪೊಷಕರೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ. ಎಂಡೋಸಲ್ಫಾನ್ ನಿಂದಾಗಿ ಮೂವರು ಮಕ್ಕಳಿಗೆ ಬುದ್ದಿಮಾಂದ್ಯತೆ ಆವರಿಸಿದ್ದು ಈ ಕುಟುಂಬದ ಬೆಳಕನ್ನೇ ಕಿತ್ತುಕೊಂಡಿದೆ.

    ಕಿತ್ತು ತಿನ್ನುವ ಬಡತನದ ಸ್ಥಿತಿಯಲ್ಲೂ ತನ್ನ ಮೂವರು ಮಕ್ಕಳನ್ನು ಸಾಕಿ ಸಲುಹುತ್ತಿರುವ 52 ವರ್ಷದ ತಾಯಿ ವತ್ಸಲಾ. ತಂದೆ ಚಂದ್ರಕಾಂತ್ ಲಕ್ಷ್ಣಣ್ ಶೇಟ್ ವಯಸ್ಸು 60. ವತ್ಸಲಾ ಮತ್ತು ಚಂದ್ರಕಾಂತ್ ದಂಪತಿ ತಮ್ಮ ಮೂವರು ಮಕ್ಕಳಾದ ನಾಗರಾಜ್, ಹೇಮಲತಾ, ಜಗದೀಶ್ ಎಂಬುವವರೊಂದಿಗೆ ವಾಸವಾಗಿದ್ದಾರೆ. ಇನ್ನು ಈ ಕುಟುಂಬ ಜೀವನೋಪಯಾಕ್ಕಾಗಿ ಕೂಲಿ ಕೆಲಸವನ್ನು ನಂಬಿಕೊಂಡಿದೆ. ಲಕ್ಷ್ಮಣ್ ಅವರು ಚೀರೆಕಲ್ಲು ಕೋರೆಯಲ್ಲಿ ಕಲ್ಲು ಕೀಳುವ ಕೆಲಸ ಮಾಡಿದರೆ, ವತ್ಸಲಾ ಸಹ ಮಕ್ಕಳ ಆರೈಕೆ ಜೊತೆ ಕೂಲಿ ಕೆಲಸ ಮಾಡುತ್ತಾರೆ.

    ಈ ಕುಟುಂಬಕ್ಕೆ ಇರಲು ಸಹ ಒಂದು ಸ್ವಂತ ಮನೆಯಿಲ್ಲ. ಅರಣ್ಯ ಒತ್ತುವರಿ ಪ್ರದೇಶದಲ್ಲಿ ಚಿಕ್ಕ ಗೂಡನ್ನ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಮೊದಲು ಒಂದು ಗಂಡುಮಗುವಿನ ಜನನವಾಯ್ತು. ಆದ್ರೆ ಆ ಮಗು ಎಂಡೋಸಲ್ಫಾನ್ ನಿಂದ ಬುದ್ದಿಮಾಂದ್ಯತೆಯಿಂದ ಹುಟ್ಟಿರುವುದನ್ನ ವೈದ್ಯರು ತಿಳಿಸಿದ್ರು. ಹೀಗಾಗಿ ಒಂದರ ಮೇಲಂತೆ ಮೂರು ಮಕ್ಕಳು ಜನಿಸಿದ್ರೂ ಎಲ್ಲಾ ಮಕ್ಕಳೂ ಬುದ್ದಿಮಾಂದ್ಯರಿದ್ದು ಇದರಲ್ಲಿ 31 ವರ್ಷದ ಹೇಮಲತಾ ಹಾಗೂ 29 ವರ್ಷದ ಜಗದೀಶ್ ಬುದ್ದಿಮಾಂದ್ಯತೆಯ ಜೊತೆಯಲ್ಲಿ ಇರುಳುಗಣ್ಣಿನ ಸಮಸ್ಯೆ ಯಿಂದ ಬಳಲಿದ್ರೆ 33 ವರ್ಷದ ಹಿರಿಯ ಮಗ ನಾಗರಾಜ್ ಬುದ್ದಿಮಾಂದ್ಯತೆಯನ್ನ ಹೊಂದಿದ್ದು ಇವರನ್ನ ನೋಡಿಕೊಳ್ಳುವ ಹೊಣೆಭಾರ ವತ್ಸಲಾ ಮೇಲಿದೆ.

    ವಯೋಸಹಜ ಅನಾರೋಗ್ಯ: ಒಂದರ ನಂತರ ಹುಟ್ಟಿದ ಮೂರು ಮಕ್ಕಳೂ ಸಹ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿದ್ದರೆ, ಮನೆಯ ಯಜಮಾನ ಚಂದ್ರಕಾಂತ್ ಚಿಕ್ಕ ಅಪಘಾತದಲ್ಲಿ ಕೈಗೆ ಪೆಟ್ಟಾಗಿ ರಾಡನ್ನ ಹಾಕಿಸಿಕೊಳ್ಳಬೇಕಾಯ್ತು, ಇನ್ನು ಸರ್ಕಾರ ಚೀರೇಕಲ್ಲಿನ ಗಣಿಗಾರಿಕೆ ನಿಷೇಧಿಸಿದ್ದರಿಂದ ಇರುವ ಕೆಲಸವೂ ಇಲ್ಲದಂತಾಗಿದೆ. ಜೊತೆಯಲ್ಲಿ ಇಬ್ಬರಿಗೂ ವಯೋಸಹಜತೆಯಿಂದಾಗಿ ಆರೋಗ್ಯ ಹದಗೆಟ್ಟಿದ್ದು ಇಬ್ಬರೂ ಕೆಲಸ ಮಾಡಲು ಸಾಧ್ಯವಾಗದೇ ಮನೆಯಲ್ಲಿರುವಂತೆ ಮಾಡಿದೆ. ಒಂದು ಕಡೆ ಬೆಳದು ನಿಂತ ಈ ಮಕ್ಕಳ ಪೋಷಣೆ ಇನ್ನೊಂದೆಡೆ ತಮ್ಮ ನಂತರ ಇವರ ಪಾಲನೆಯ ಚಿಂತೆ ಹೀಗೆ ಎಂದು ಚಂದ್ರಕಾಂತ್ ಮತ್ತು ವತ್ಸಲಾ ದಂಪತಿ ಚಿಂತೆಯಲ್ಲಿದ್ದಾರೆ.

    ಹುಸಿ ಭರವಸೆ: ಇವರಿಗೆ ಸ್ಥಳೀಯ ಶಾಸಕರಿಂದ ಹಿಡಿದು ಕೆಲವು ರಾಜಕಾರಣಿಗಳು ಸಹಾಯ ಮಾಡುವ ಭರವಸೆ ನೀಡಿದ್ರು. ಆದ್ರೆ ಕೇವಲ ಪ್ರಚಾರಕ್ಕೆ ಇವರನ್ನ ಬಳಸಿಕೊಂಡು ನಂತರ ಯಾವ ಸಹಾಯವನ್ನೂ ಮಾಡಲಿಲ್ಲ. ಇನ್ನು ಕೂಲಿ ಕೆಲಸ ಮಾಡುತಿದ್ದ ಇವರಿಗೆ ಆರೋಗ್ಯ ಹದಗೆಟ್ಟು ಜೀವನ ನೆಡೆಸದಷ್ಟು ಸಂಕಷ್ಟ ಎದುರಾಗಿದೆ. ಜೊತೆಯಲ್ಲಿ ಜೀವನ ಸಾಗಿಸಲು ಇದ್ದ ಮನೆಕೂಡ ಶಿಥಿಲಾವಸ್ಥೆ ತಲುಪಿದ್ದು ಆಗಲೋ ಈಗಲೂ ಬೀಳುವ ಸ್ಥಿತಿಯಲ್ಲಿದೆ.

    ಪುಟ್ಟ ಅಂಗಡಿಯ ಕನಸು: ಮೂರು ಮಕ್ಕಳ ವೈದ್ಯಕೀಯ ವೆಚ್ಚ ನೋಡಿಕೊಲ್ಳಲು ಕಷ್ಟವಾಗುತಿದ್ದು, ಸರ್ಕಾರದಿಂದ ಬರುತ್ತಿರುವ ಸಹಾಯ ಹಣವೂ ಸಾಲುತಿಲ್ಲ. ತಮ್ಮ ಆರೋಗ್ಯ ಹದಗೆಡುತ್ತಿರುವುದರಿಂದ ಮೂರು ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಇವರನ್ನ ಕಾಡುತ್ತಿದೆ. ಊರಿನಲ್ಲಿ ಚಿಕ್ಕದೊಂದು ಅಂಗಡಿ ಇಟ್ಟು ಮಕ್ಕಳ ಭವಿಷ್ಯ ರೂಪಿಸುವುದರ ಜೊತೆ ತಮ್ಮ ಬದುಕು ಕಟ್ಟಿಕೊಳ್ಳು ಹಂಬಲ ಈ ದಂಪತಿಯದು. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ಆರ್ಥಿಕ ಸಹಾಯ ಬಯಸಿದ್ದಾರೆ. ಇನ್ನು ಇದೇ ಊರಿನ ವೆಂಕಟರಮಣ ವೈದ್ಯ ಎಂಬುವವರು ಇವರ ಸಹಾಯಕ್ಕೆ ಬಂದಿದ್ದು ಅಂಗಡಿ ನೆಡೆಸಲು ಜಾಗವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಲ್ಲದೇ ಗ್ರಾಮ ಪಂಚಾಯ್ತಿಯಿಂದ ಮನೆ ಕಟ್ಟಿಸಿಕೊಡುವ ಪ್ರಯತ್ನದಲ್ಲಿದ್ದಾರೆ.

    ಆರೋಗ್ಯ ಸರಿಯಿಲ್ಲದ ಕಾರಣ ಕೂಲಿ ಕೆಲಸ ಕಷ್ಟಸಾಧ್ಯ. ಹೀಗಾಗಿ ಚಿಕ್ಕದೊಂದು ಅಂಗಡಿ ಇಟ್ಟುಕೊಂಡರೆ ಕುಳಿತಲ್ಲಿ ಕೆಲಸ ಮಾಡಿಕೊಳ್ಳಬಹುದು. ಜೊತೆಯಲ್ಲಿ ಮಕ್ಕಳನ್ನೂ ಇದರಲ್ಲಿ ತೊಡಗಿಸಿಕೊಂಡು ಕ್ರೀಯಾ ಶೀಲರಾಗಿರುವಂತೆ ನೋಡಿಕೊಂಡು ಬದುಕು ರೂಪಿಸಿಕೊಳ್ಳುವ ಆಸೆಯಿದೆ.

     

  • ಅಡ್ಡದಾರಿ ಮೂಲಕ ಸರ್ಕಾರದ ದುಡ್ಡು ಹೊಡೆಯುತ್ತಿದೆ ಜಿವಿಕೆ

    ಅಡ್ಡದಾರಿ ಮೂಲಕ ಸರ್ಕಾರದ ದುಡ್ಡು ಹೊಡೆಯುತ್ತಿದೆ ಜಿವಿಕೆ

    – ನಡುರೋಡಲ್ಲಿ ರೋಗಿಗಳ ಶಿಫ್ಟಿಂಗ್
    – ಪಬ್ಲಿಕ್ ಟಿವಿಯಲ್ಲಿ 108 ಆಂಬ್ಯುಲೆನ್ಸ್ ಕರ್ಮಕಾಂಡ

    * ರಕ್ಷಾ ಕಟ್ಟೆಬೆಳಗುಳಿ

    ಬೆಂಗಳೂರು: ಪ್ರಾಣ ರಕ್ಷಣೆಗಾಗಿ ಮೀಸಲಿರೋ 108 ಅಂಬುಲೆನ್ಸ್‍ಗಳು ಪ್ರಾಣ ಭಕ್ಷಕನ ರೀತಿ ಕೆಲಸ ಮಾಡ್ತಾ ಇವೆ. ಸರ್ಕಾರಕ್ಕೆ ಹೆಚ್ಚೆಚ್ಚು ಟ್ರಿಪ್‍ಗಳನ್ನು ತೋರಿಸೋ ನಿಟ್ಟಿನಲ್ಲಿ ರಸ್ತೆ ಮಧ್ಯದಲ್ಲೇ ರೋಗಿಗಳ ಶಿಫ್ಟಿಂಗ್ ನಡೆಯುತ್ತಿದೆ.

    ಹೌದು. ಜನರ ಜೀವ ರಕ್ಷಣೆಕಾಗಿ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸೋ 108 ಆಂಬ್ಯುಲೆನ್ಸ್ ಗಳಲ್ಲಿ ಇತ್ತೀಚೆಗೆ ಶುರುವಾಗಿರೋ ಮತ್ತೊಂದು ಕರ್ಮಕಾಂಡ ಇದು. ರಾಜ್ಯದಲ್ಲಿ ಒಟ್ಟು 717 108 ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. ಈ ವಾಹನಗಳ ಮೇಲುಸ್ತುವಾರಿ ವಹಿಸಿರೋ ಜಿವಿಕೆ ಸಂಸ್ಥೆ ಸರ್ಕಾರಕ್ಕೆ ಹೆಚ್ಚು ಶೆಡ್ಯೂಲ್‍ಗಳನ್ನು ತೋರಿಸೋಕೆ ಒಂದು ಪೇಷೆಂಟ್‍ನ ಎರಡು 108 ಆಂಬ್ಯುಲೆನ್ಸ್ ಆಸ್ಪತ್ರೆಗೆ ಸಾಗಿಸೋ ಕೆಲಸ ಮಾಡ್ತಿದ್ದು, ರೋಗಿಗಳ ಜೀವದೊಂದಿಗೆ ಆಟವಾಡ್ತಿದ್ದಾರೆ. ಇತ್ತ ಇದೇ ಶಿಫ್ಟಿಂಗ್ ವಿಚಾರದಿಂದ 108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಸ್ಥಳೀಯರಿಂದ ಥಳಿತಕೊಳಗಾದ ಘಟನೆಗೆಳು ಸಹ ನಡೆದಿವೆ.

    ಶವ ಸಾಗಿಸೋಕ್ಕೆ ತಯಾರಿ: ಈಗಾಗ್ಲೇ 717, 108 ಆಂಬ್ಯುಲೆನ್ಸ್ ಗಳನ್ನು ಮೇಲುಸ್ತುವಾರಿ ಹೊತ್ತಿರೋ ಪರರಾಜ್ಯದ ಜಿವಿಕೆ, ಭ್ರಷ್ಟಾಚಾರ, ಹಾಗೂ ರೊಗಿಗಳ ಬಗೆಗಿನ ನಿರ್ಲಕ್ಷ್ಯಕ್ಕೆ ಹೆಸರಾಗಿರೋ ಜೆವಿಕೆಗೆ ರಾಜ್ಯದ ತಾಲೂಕು ಆಸ್ಪತ್ರೆಗಳ 800 ಆಂಬ್ಯುಲೆನ್ಸ್ ಗಳು ಹಾಗೂ ಮುಕ್ತಿ ವಾಹನದ ಉಸ್ತುವಾರಿಯನ್ನು ನೀಡೋಕೆ ಸರ್ಕಾರ ಚಿಂತನೆ ನಡೆಸಿದೆ. ಹಾಗಾಗಿ ಶವವನ್ನು ಸಹ 108 ಆಂಬ್ಯುಲೆನ್ಸ್ ಗಳಲ್ಲಿ ಸಾಗಿಸುವಂತೆ ಸೂಚನೆ ನೀಡಿದ್ದಾರಂತೆ.

    108 ಆಂಬ್ಯುಲೆನ್ಸ್ ನಲ್ಲಿ ಜಿವಿಕೆ ನಡೆಸುತ್ತಿರೋ ಕರ್ಮಕಾಂಡ ಇಷ್ಟಕ್ಕೆ ಮುಗಿಯೋದಿಲ್ಲ, ದುರಸ್ಥಿತಿಯಲ್ಲಿರೋ, ವಾಹನಗಳ ಬಗ್ಗೆ ಕಂಪ್ಲೇಟ್ ಮಾಡಿದ್ರೂ ಕೇಳೋರಿಲ್ಲ. ಕೆಲವೊಂದು ಬಾರಿ 108 ಆಂಬ್ಯುಲೆನ್ಸ್‍ಗಳಲ್ಲಿ ರೋಗಿಗಳಿದ್ದಾಗ ಕೆಟ್ಟು ನಿಂತು ಪರದಾಡೋ ಪರಿಸ್ಥಿತಿ ಸಿಬ್ಬಂದಿಯದ್ದು.

    https://www.youtube.com/watch?v=x_qQg8Ybbqs

  • ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

    ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

    -ಮಂಡ್ಯದಲ್ಲಿ ಅಕ್ಕಿಯಲ್ಲಿ ಸಿಕ್ತು ಪ್ಲಾಸ್ಟಿಕ್!

    ಚಿಕ್ಕಬಳ್ಳಾಪುರ: ನೀವು ಬಳಸುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್ ಎಂಬುದನ್ನು ಒಮ್ಮೆ ನೀರಿಗೆ ಹಾಕಿ ಪರೀಕ್ಷೆ ಮಾಡಿ. ಕೆಲವು ದಿನಗಳ ಹಿಂದೆ ಅನ್ನಭಾಗ್ಯದ ಉಪ್ಪು ನೀಲಿ ಬಣ್ಣಕ್ಕೆ ತಿರುಗಿದ ಸುದ್ದಿ ಪ್ರಕಟವಾಗಿತ್ತು. ಇದೀಗ ಸಕ್ಕರೆಯ ಸರದಿ. ಚಿಕ್ಕಬಳ್ಳಾಪುರ ನಗರದ ಹೋಟೆಲ್‍ವೊಂದರಲ್ಲಿ ಸಕ್ಕರೆ ಹಸಿರು ಬಣ್ಣಕ್ಕೆ ತಿರುಗಿ ಜನರಲ್ಲಿ ಆತಂಕ ಉಂಟುಮಾಡಿದೆ.

    ಇಂದು ಬೆಳಗ್ಗೆ ಗ್ರಾಹಕ ಸ್ನೇಕ್ ಪ್ರಥ್ವಿರಾಜ್ ಎಂಬವರು ಮೊಸರಿನ ಜೊತೆ ಸಕ್ಕರೆ ಮಿಶ್ರಣ ಮಾಡಿ ಸೇವಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೆರೆಡು ಬಾರಿ ಇದೇ ರೀತಿ ಮೊಸರು ಹಾಗೂ ನೀರಿಗೆ ಸಕ್ಕರೆ ಮಿಶ್ರಣ ಮಾಡಿ ಪರಿಶೀಲನೆ ನಡೆಸಿದಾಗ ಸಕ್ಕರೆ ಮಿಶ್ರಿತ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ಸಕ್ಕರೆಯಲ್ಲಿ ಯಾವೋದೋ ಕೆಮಿಕಲ್ ಸೇರಿರಬೇಕೆಂಬ ಅನುಮಾನ ಮೂಡಿದೆ. ಹೀಗಾಗಿ ಸಂಬಂಧಪಟ್ಟವರು ಸಕ್ಕರೆಯ ಗುಣಮಟ್ಟದ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

    ಪ್ಲಾಸ್ಟಿಕ್ ಅಕ್ಕಿ: ಪಡಿತರದಾರರಿಗೆ ಸೊಸೈಟಿಯಲ್ಲಿ ವಿತರಿಸಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿಯ ನಿವಾಸಿ ಪುಟ್ಟರಾಜು ಅವರು ಮಾರ್ಚ್ 23 ರಂದು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ಕೆಜಿ ಅಕ್ಕಿ ತೆಗೆದುಕೊಂಡಿದ್ದರು.

    ಕೆಲ ದಿನದ ಬಳಿಕ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮಿಲ್ ಮಾಡಿಸಿಕೊಂಡು ಮನೆಗೆ ತಂದಿದ್ದಾರೆ. ಮನೆಯಲ್ಲಿ ರೊಟ್ಟಿ ಮಾಡಲು ಮುಂದಾದಾಗ ಪ್ಲಾಸ್ಟಿಕ್ ವಸ್ತು ಸಿಕ್ಕಿದೆ. ಬಳಿಕ ಮಿಲ್ ಮಾಡಿಸಿದ ಅಕ್ಕಿಯನ್ನು ಪರಿಶೀಲನೆ ನಡೆಸಿದಾಗ ಸುಮಾರು ಒಂದು ಹಿಡಿಯಷ್ಟು ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ ಎಂದು ಹೇಳಲಾಗಿದೆ.

    https://www.youtube.com/watch?v=2xgKCWaCgJs

     

  • ಬಿಸಿಲ ಧಗೆ ಡೇಂಜರ್ – ಕೂಲ್ ಆಗೋಕೆ ನೀವೀ ಸುದ್ದಿ ಓದ್ಲೇಬೇಕು!

    ಬಿಸಿಲ ಧಗೆ ಡೇಂಜರ್ – ಕೂಲ್ ಆಗೋಕೆ ನೀವೀ ಸುದ್ದಿ ಓದ್ಲೇಬೇಕು!

    – ಜನರಿಗೆ ಬಿಸಿಲಾಘಾತದ ಮುನ್ನೆಚ್ಚರಿಕೆ ನೀಡಿದ ರಾಜ್ಯ ಸರ್ಕಾರ

    – ಹೀಟ್ ಸ್ಟ್ರೋಕ್ ತಂದೀತು ಜೀವಕ್ಕೇ ಕುತ್ತು

    – ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸುತ್ತೋಲೆ

    ಪವಿತ್ರ ಕಡ್ತಲ

    ಬೆಂಗಳೂರು: ಭೀಕರ ಬಿಸಿಲಿನಿಂದ ಕಂಗೆಡುತ್ತಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ತೀವ್ರ ಬಿಸಿಲ ಧಗೆಯ ಮುನ್ನೆಚ್ಚರಿಕೆ ನೀಡಿದೆ. ಸುಡುಬಿಸಿಲಿನ ತಾಪದಿಂದ ಎದುರಾಗಬಹುದಾದ ಅಪಾಯಕಾರಿ ಪರಿಣಾಮಗಳ ಬಗ್ಗೆ ವಿವರಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಬೇಸಿಗೆ ತಾಪ ಹೆಚ್ಚುತ್ತಿರುವುದರಿಂದ ಬಯಲು ಸೀಮೆ ಹಾಗೂ ಕರಾವಳಿ ಪ್ರದೇಶದಲ್ಲಿ ಹೀಟ್ ಸ್ಟ್ರೋಕ್ ಹಾಗೂ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತದೆ. ಹೀಗಾಗಿ ಆಯಾಯಾ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಸರ್ಜನ್, ತಾಲೂಕು ಆಸ್ಪತ್ರೆಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದೆ.

    ಅಧಿಕಾರಿಗಳು ಏನ್ಮಾಡಬೇಕು?: ಕಡ್ಡಾಯವಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಮಾದರಿ ಪರೀಕ್ಷೆ ಹಾಗೂ ಕ್ಲೋರಿನೆಷನ್ ಮಾಡಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ಒಆರ್‍ಎಸ್, ಐವಿ ದ್ರವ, ಔಷಧಿಗಳ ದಾಸ್ತಾನು ಮಾಡಿಕೊಳ್ಳಬೇಕು. ಹೀಟ್ ಸ್ಟ್ರೋಕ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಅಗತ್ಯ ಚಿಕಿತ್ಸೆಗೆ ಅಡ್ಮಿಟ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಹೀಟ್ ಸ್ಟ್ರೋಕ್ ಎಂದರೇನು?: ಮಳೆ ಬರುವಾಗ ಸಾಂಕ್ರಾಮಿಕ ರೋಗ ಬರುವಂತೆ ಭೀಕರ ತಾಪಮಾನದ ಸಂದರ್ಭದಲ್ಲಿ ಯೂ ಸಾಕಷ್ಟು ಕಾಯಿಲೆ ಬರುತ್ತದೆ. ಹೀಟ್ ಸ್ಟ್ರೋಕ್ ಎಂದರೆ ಶಾಖಾಘಾತ ಅಥವಾ ಬಿಸಿಲಾಘಾತ. ಇದರಿಂದ ಪ್ರಾಣ ಹಾನಿಯಾಗುವ ಸ್ಥಿತಿಯೂ ಇದೆ. ದೇಹವು ಅತಿಯಾದ ಉಷ್ಣತೆಗೆ ಒಡ್ಡಿಕೊಂಡಾಗ ಅದರ ಶಾಖ ನಿಯಂತ್ರಣ ವ್ಯವಸ್ಥೆ ವಿಫಲವಾಗುತ್ತದೆ. ಅತಿ ಹೆಚ್ಚಿನ ಚಟುವಟಿಕೆಯಿಂದ ದೇಹ ಅಥವಾ ಹೊರಗಿನ ಅತಿ ಹೆಚ್ಚಿದ ಉಷ್ಣತೆಯಿಂದ ದೇಹದ ಪ್ರಮುಖ ಅಂಗಗಳು ವಿಫಲವಾಗುತ್ತವೆ. ತುಂಬ ಉಷ್ಣತೆಯ ಪರಿಸರದಲ್ಲಿ ಕೆಲಸ ಮಾಡುವುದು, ಜತೆಗೆ ದ್ರವಾಹಾರ ಸೇವನೆಯ ಕೊರತೆಯು ಇದಕ್ಕೆ ಕಾರಣ. ಸೂರ್ಯನ ತಾಪಮಾನ ಎಫೆಕ್ಟ್ ನಿಂದಾಗಿ ಇಡೀ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇದ್ರಿಂದ ಅತಿ ಸುಸ್ತು, ತಲೆ ನೋವು ವಾಕರಿಕೆ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಕುಸಿದು ಬಿದ್ದು ಅಂಗಾಂಗಗಳು ನಿಷ್ಕ್ರಿಯಗೊಂಡು ಮಾತು ನಿಂತು ಹೋಗುತ್ತದೆ. ಈ ಸಮತದಲ್ಲಿ ತಡ ಮಾಡದೆ ಆಸ್ಪತ್ರೆಗೆ ಸೇರಿಸಿಕೊಳ್ಳಬೇಕು.

    ಲಕ್ಷಣಗಳೇನು?: ಬಿಸಿಲಿನ ತಾಪಮಾನಕ್ಕೆ ವಿಪರೀತ ತಲೆನೋವು, ತಲೆ ಸುತ್ತುವುದು, ಎಷ್ಟೇ ಶೆಖೆಯಿದ್ದರೂ ಬೆವರಿಳಿಯದೆ ಕಾಡುವ ಆಯಾಸ, ಮಾಂಸ ಖಂಡಗಳು ಶಕ್ತಿ ಕಳೆದುಕೊಳ್ಳುವುದು, ವಾಂತಿ ಕಾಣಿಸಿಕೊಳ್ಳುವುದು, ದೇಹದ ಉಷ್ಣತೆ ಮತ್ತು ಹೃದಯ ಬಡಿತ ಹೆಚ್ಚಾಗುವುದು, ದೀರ್ಘವಾದ ತೀವ್ರ ಉಸಿರಾಟ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಇಲ್ಲದಿದ್ದಲ್ಲಿ ಮೂರ್ಚೆ ಬೀಳುವುದು ಅಥವಾ ಪ್ರಜ್ಞೆ ತಪ್ಪಬಹುದು.

    ಬಿಸಿಲಾಘಾತ ನಿಮಗಾಗದಿರಲು ಹೀಗೆ ಮಾಡಿ.

    1. ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಿ
    2. ಬಿಸಿಲಿನಲ್ಲಿ ಕೆಲಸ ಮಾಡುವಾಗ ಸದಾ ಕೈಗೆಟಕುವಂತೆ ಕುಡಿಯುವ ನೀರು ಜೊತೆಗಿರಲಿ
    3. ನಿಧಾನವಾಗಿ, ಧಾರಾಳವಾಗಿ ಉಪ್ಪು ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಪಾನಕ ಕುಡಿಯಿರಿ. ಸಾಫ್ಟ್ ಡ್ರಿಂಕ್‍ಗಳನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ. ಕಾಫಿ, ಟೀ ಸಾಧ್ಯವಾದಷ್ಟೂ ಕಡಿಮೆ ಕುಡಿಯಿರಿ.
    4. ಹತ್ತಿಯ ನುಣುಪಾದ ಬಟ್ಟೆ/ಟಿಶ್ಯೂ ಕರವಸ್ತ್ರದಿಂದ ಬೆವರು ಒರೆಸಿ
    5. ನೀರು ಮಜ್ಜಿಗೆ/ ಎಳನೀರು ಕುಡಿಯುವುದೂ ಆರೋಗ್ಯಕರ
    6. ಬೆಚ್ಚಗಿನ ಮಸಾಲೆ ರಹಿತ ಶುದ್ಧ ಆಹಾರ ಸೇವಿಸಿ
    7. ಗಾಳಿಯಾಡುವಂತಹ ಪಾದರಕ್ಷೆಗಳನ್ನೇ ಬಳಸಿ
    8. ನಿಮ್ಮ ಜೊತೆಗಿನ ಯಾವುದೇ ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿಗೆ ಕೊಂಡೊಯ್ಯಿರಿ
    9. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆತ್ತಿ
    10. ಆ ವ್ಯಕ್ತಿಯ ಹಣೆ, ಕತ್ತು, ಪಾದ, ತೊಡೆಯ ಭಾಗವನ್ನು ಒದ್ದೆ ಬಟ್ಟೆಯಿಂದ ಒರೆಸಿ
    11. ನಿಧಾನವಾಗಿ ಸ್ವಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ಕುಡಿಸಿ
    12. ಹತ್ತಿರದ ವೈದ್ಯರನ್ನು ಕರೆಸಿ ಅಥವಾ ಆಸ್ಪತ್ರೆಗೆ ಸೇರಿಸಿ

    ಬಿಸಿಲಾಘಾತವಾಗಿದ್ರೆ ಹೀಗೆ ಮಾಡಿ!: ಹೀಟ್ ಸ್ಟ್ರೋಕ್ ಗೆ ಒಳಗಾದವರ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ ತೆಗೆಯಿರಿ. ತಂಪಾದ ನೆರಳಿರುವ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಹಾಕಿ. ತಣ್ಣಗಿನ ನೀರನ್ನು ಆ ವ್ಯಕ್ತಿಯ ಮೇಲೆ ಸಿಂಪಡಣೆ ಮಾಡಿ. ಯಾವುದೇ ಔಷಧ ನೀಡಬೇಡಿ. ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡಲೇಬೇಡಿ. ಪ್ರಜ್ಞೆ ಬಂದ ಮೇಲೆ ನಿಧಾನವಾಗಿ ಶುದ್ಧವಾದ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಿರಿ. ಯಾವುದೇ ಕಾರಣಕ್ಕೂ ಆತುರ ಬೇಡವೇ ಬೇಡ.

    ಹೀಗಾದ್ರೆ ಮಾತ್ರ ಡಾಕ್ಟರ್ ನೋಡ್ಲೇಬೇಕು!: ಚರ್ಮ ಕೆಂಪಗಾದರೆ, ಬೆವರಿನ ಪ್ರಮಾಣ ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀವ್ರವಾದ ಉಸಿರಾಟವಿದ್ದರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಲೇಬೇಕು.

    ಇದನ್ನು ಮಾತ್ರ ಮಾಡಲೇಬೇಡಿ: ಬಿಗಿಯಾದ ಗಾಢ ಬಣ್ಣದ ಬಟ್ಟೆ ಧರಿಸಬೇಡಿ. ಕುಷನ್‍ಯುಕ್ತ ಕುರ್ಚಿಯಲ್ಲಿ ಕುಳಿತುಕೊಳ್ಳಬೇಡಿ. ಬಾಯಾರಿದಾಗ ಕಡ್ಡಾಯವಾಗಿ ನೀರನ್ನು ಕುಡಿಯಿರಿ. ಆದರೆ ಸೋಡಾ, ಸಾಫ್ಟ್ ಡ್ರಿಂಕ್ ಮಾತ್ರ ಬೇಡವೇ ಬೇಡ. ಬೆವರೊರೆಸಲು ಒರಟಾದ ಬಟ್ಟೆ ಉಪಯೋಗಿಸಬೇಡಿ. ಕಾಫಿ, ಟೀ ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬೇಡಿ. ಬಿಸಿಲಿನ ವೇಳೆ ಮಸಾಲೆಯುಕ್ತ ಆಹಾರ ತಿನ್ನಬೇಡಿ. ಮಾಂಸಾಹಾರ ವರ್ಜಿಸಿ, ಮದ್ಯಪಾನವಂತೂ ಬೇಡವೇ ಬೇಡ. ಬಿಗಿಯಾದ, ಗಾಳಿಯಾದ ಚಪ್ಪಲಿ, ಶೂ ಧರಿಸಬೇಡಿ.

    ಹೀಗೂ ಆಗುವ ಸಾಧ್ಯತೆ ಇದೆ: ಬಿಸಿಲಾಘಾತವಾದಾಗ ಎಚ್ಚರ ತಪ್ಪುವುದು ವಯಸ್ಸಾದವರಲ್ಲಿನ ಮೊದಲ ಲಕ್ಷಣ. ಹೀಟ್ ಸ್ಟ್ರೋಕ್ ಹೆಚ್ಚಾದರೆ ಮುಂದೆ ಮಾನಸಿಕ ಗೊಂದಲ, ಹೈಪರ್ ವೆಂಟಿಲೇಷನ್, ಸ್ನಾಯು ಸೆಳೆತ, ಕೈ ಕಾಲುಗಳಲ್ಲಿ ನೋವಿನಿಂದ ಕೂಡಿದ ಹರಿತ, ಸೆಳೆತವಾಗಬಹುದು. ಪರಿಸ್ಥಿತಿ ವಿಪರೀತವಾದರೆ ಕೆಲವು ಬಾರಿ ಕೋಮಾಗೂ ಜಾರಬಹುದು.

  • ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಎಚ್1ಎನ್1 ಮತ್ತೆ ಸದ್ದು ಮಾಡುತ್ತಿದೆ. ಸರ್ಕಾರಗಳು ಸಾಕಷ್ಟು ಎಚ್ಚರಿಕೆಗಳನ್ನು ಕೈಗೊಂಡರೂ ಮತ್ತಷ್ಟು ಜನರಿಗೆ ಈ ಸೋಂಕು ತಗಲುತ್ತಿದೆ. ಹೀಗಾಗಿ ಇಲ್ಲಿ ಏನಿದು ಹಂದಿ ಜ್ವರ? ಹೇಗೆ ಬರುತ್ತದೆ? ಬಂದ ಮೇಲೆ ಏನು ಮಾಡಬೇಕು ಎನ್ನುವ ಬಗ್ಗೆ ವಿವರಣೆಯಲ್ಲಿ ನೀಡಲಾಗಿದೆ.

    ಏನಿದು ಎಚ್1ಎನ್1?
    ಮಲೇರಿಯಾ ಜ್ವರ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುವುದು ನಿಮಗೆ ಗೊತ್ತಿರಬಹುದು. ಆದರೆ ಹಂದಿಜ್ವರ ಸೊಳ್ಳೆಯಿಂದ ಬರುವುದಿಲ್ಲ. ಒಂದು ವೈರಾಣುವಿನಿಂದ ಈ ಜ್ವರ ಬರುತ್ತದೆ.ಈ ವೈರಸ್‍ಗೆ ಎಚ್1ಎನ್1 ಎಂದು ಕರೆಯುತ್ತಾರೆ.

    ಹಂದಿ ಜ್ವರ ಎಂದು ಕರೆಯೋದು ಯಾಕೆ?
    ಈ ಎಚ್1ಎನ್1 ವೈರಾಸ್ ಮೊದಲು ಹಂದಿಗಳ ಶ್ವಾಸಕೋಶಕ್ಕೆ ತಗಲಿ ನಂತರ ಮನುಷ್ಯನಿಗೆ ಹರಡಿದೆ ಎಂದು ಶಂಕಿಸಿ ಈ ರೋಗಕ್ಕೆ ‘ಹಂದಿ ಜ್ವರ’ ಎಂದು ಕರೆಯಲಾಗುತ್ತಿದೆ.

    ಮೊದಲು ಹಂದಿ ಜ್ವರ ಪತ್ತೆಯಾಗಿದ್ದು ಎಲ್ಲಿ?
    2009ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅಮೆರಿಕ ಗಡಿಯಲ್ಲಿರುವ ಮೆಕ್ಸಿಕೋ ದೇಶದ ರಾಜಧಾನಿ ಮೆಕ್ಸಿಕೋ ನಗರದಲ್ಲಿ ಹಂದಿ ಜ್ವರ ಮೊದಲು ಕಾಣಿಸಿಕೊಂಡಿತು. ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‍ನಲ್ಲಿ ಪತ್ತೆಯಾಯಿತು.

    ಮಾನವರಿಗೆ ಹಂದಿ ಜ್ವರ ಬರುತ್ತಾ?
    ಹಂದಿಯಿಂದ ಮಾನವನಿಗೆ ಜ್ವರ  ಹರಡುವುದಿಲ್ಲ. ಆದರೆ ಸೋಂಕು ತಗಲುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಈ ಸೋಂಕು ತಗುಲಿದ ವ್ಯಕ್ತಿಗಳಿಗೆ ಹಂದಿಗಳ ಒಡನಾಟ ಹೆಚ್ಚಿದ್ದರೆ ಬೇಗನೆ ಸೋಂಕು ಹರಡುತ್ತದೆ. ಮೆಕ್ಸಿಕೋ ನಗರದಲ್ಲಿ ಹಂದಿ ಸಾಕಾಣೆ ಮಾಡುವ ಮಂದಿಗೆ ಮೊದಲು ಸೋಂಕು ತಗಲಿ ನಂತರ ಈ ಸೋಂಕು ವಿಶ್ವಕ್ಕೆ ಪಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.

    ಹಂದಿ ಜ್ವರ ಹೇಗೆ ಬರುತ್ತೆ? ಬಂದ ಮೇಲೆ ಏನಾಗುತ್ತೆ?
    ಈ ವೈರಸ್ ಮೊದಲು ಮೂಗು ಅಥವಾ ಬಾಯಿಯ ಮೂಲಕ ನಮ್ಮ ದೇಹಕ್ಕೆ ಲಗ್ಗೆ ಇಡುತ್ತದೆ. ಲಗ್ಗೆ ಇಟ್ಟ ವೈರಸ್ ರಕ್ತದಲ್ಲಿ ಸಂತಾನೋತ್ಪತಿ ಮಾಡುತ್ತದೆ. ಇದಾದ ಬಳಿಕ ಮೊದಲು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ವೈರಾಣು ದಾಳಿ ಜಾಸ್ತಿ ಆದಂತೆ ಉಸಿರಾಟದ ತೊಂದರೆ, ಸಣ್ಣ ಜ್ವರ ಸುಸ್ತು ಕಾಣಿಸುತ್ತದೆ. ಸಾಧಾರಣವಾಗಿ ಜ್ವರ ಬಂದರೆ ಒಂದೆರಡು ದಿನದಲ್ಲಿ ಕಡಿಮೆ ಆಗುತ್ತದೆ. ಆದರೆ ಈ ಜ್ವರದಲ್ಲಿ ಮೊದಲು ಚಳಿ, ಗಂಟಲುರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶ್ಶಕ್ತಿ, ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ ಆಗುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಆರೋಗ್ಯವಾಗಿದ್ದ ವ್ಯಕ್ತಿಯ ದೇಹದಲ್ಲಿ ದಿಢೀರ್ ಆಗಿ ಈ ರೀತಿಯ ಬದಲಾವಣೆ ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಹೋಗುವುದು ಉತ್ತಮ.

    ಜ್ವರ ಬಂದಿದೆ ಎಂದು ತಿಳಿಯೋದು ಹೇಗೆ?
    ಈ ಮೇಲಿನ ಲಕ್ಷಣ ಕಂಡುಬಂದವರು ಹೆದರುವ ಅಗತ್ಯವಿಲ್ಲ. ಆಸ್ಪತ್ರೆಗೆಂದು ಪರೀಕ್ಷೆಗೆ ತೆರಳಿದ ಸೋಂಕು ಪೀಡಿತ ಶಂಕೆ ಹೊಂದಿರುವ ವ್ಯಕ್ತಿಗಳ ಮೂಗಿನ ಸ್ರಾವ ಅಥವಾ ಉಗುಳಿನ ಮಾದರಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯಲ್ಲಿ ಹಂದಿಜ್ವರ ಬಂದಿದೆಯೋ ಅಥವಾ ಬಂದಿಲ್ಲವೋ ಎನ್ನುವುದನ್ನು ತಿಳಿಸುತ್ತಾರೆ.

    ಹಂದಿಜ್ವರ ಬಂದ ಮೇಲೆ ಏನ್ ಮಾಡಬೇಕು?
    ಹಂದಿ ಜ್ವರ ಬಂದವರು ಮೊದಲು ಮಾಡಬೇಕಾದ ಕೆಲಸ ಮಾಸ್ಕ್ ಧರಿಸುವುದು. ಮಾಸ್ಕ್ ಧರಿಸುವುದರಿಂದ ವೈರಾಣು ಬೇರೆಯವರಿಗೆ ಹರಡುವುದನ್ನು ತಡೆಯಬಹುದು. ಇದರ ಜೊತೆ ರೋಗಿಯ ಹತ್ತಿರವೇ ಓಡಾಟ ನಡೆಸುವ ವ್ಯಕ್ತಿಗಳೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ. ರೋಗಿಗಳು ಹೆಚ್ಚು ಹೆಚ್ಚು ಬಿಸಿ ನೀರನ್ನು ಸೇವಿಸಬೇಕಾಗುತ್ತದೆ. ಮಕ್ಕಳು, ಹಿರಿಯ ವ್ಯಕ್ತಿಗಳು, ಗರ್ಭಿಣಿಯರಲ್ಲಿ ರೋಗ ನೀರೋಧಕ ಶಕ್ತಿ ಕಡಿಮೆ ಇರುವ ಕಾರಣ ಇವರು ರೋಗಿಗಳು ಇರುವ ಕೊಠಡಿಯನ್ನು ಪ್ರವೇಶಿಸದೇ ಇರುವುದು ಉತ್ತಮ.

    ಸಾವು ಖಚಿತವೇ?
    ಹಂದಿ ಜ್ವರ ಬಂದವರೆಲ್ಲ ಭಯ ಪಡುವ ಅಗತ್ಯವಿಲ್ಲ. ಈ ಜ್ವರ ಪೀಡಿತರಿಗೆ ವೈದ್ಯರು ಟ್ಯಾಮಿಫ್ಲೂ ಮಾತ್ರೆಯನ್ನು ನೀಡುತ್ತಾರೆ. ಈ ಮಾತ್ರೆಯ ರಿಟೇಲ್ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಆದರೆ ಕೆಲ ವೈದ್ಯರು ಅಕ್ರಮವಾಗಿ ಈ ಮಾತ್ರೆಯನ್ನು ಸಾಮಾನ್ಯ ಜ್ವರ ಬಂದರೂ ನೀಡುತ್ತಿದ್ದಾರೆ. ಹೀಗಾಗಿ ಹಂದಿಜ್ವರ ಬಂದ ಮೇಲೆ ಈ ಮಾತ್ರೆಯನ್ನು ಮೊದಲೇ ಸೇವಿಸುತ್ತಿದ್ದವರು ಮತ್ತೊಮ್ಮೆ ಸೇವಿಸಿದರೆ ಟ್ಯಾಮಿಫ್ಲೂ ಮಾತ್ರೆ ಕೆಲಸ ಮಾಡುವುದಿಲ್ಲ. ಹೀಗಾಗಿ ವೈದ್ಯರು ಸೂಚಿಸಿದ ಬಳಿಕವಷ್ಟೇ ಈ ಮಾತ್ರೆಯನ್ನು ಸೇವಿಸಬೇಕಾಗುತ್ತದೆ. ಒಂದರಿಂದ ಮೂರು ದಿನಗಳ ಕಾಲ ಈ ವೈರಾಣು ಸಿಕ್ಕಾಪಟ್ಟೆ ಕ್ರಿಯಾಶೀಲವಾಗಿರುತ್ತದೆ, ನಂತರ ವೈರಾಣು ಸತ್ತುಹೋಗಿ ಒಂದು ವಾರದಲ್ಲಿ ಮನುಷ್ಯ ಮೊದಲಿನಂತೆ ಆರೋಗ್ಯವಾಗಿರುತ್ತಾನೆ. ಆದರೆ ಚಿಕಿತ್ಸೆ ಪಡೆಯದಿದ್ದರೆ ಮಾತ್ರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

    ನಗರದಲ್ಲೇ ಹೆಚ್ಚು ಏಕೆ?
    ನಗರಗಳಲ್ಲಿ ಜನ ಸಂಚಾರ ಹೆಚ್ಚು. ಉದ್ಯೋಗಕ್ಕಾಗಿ ಪ್ರಯಾಣ ಮಾಡುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಮಹಾನಗರಗಳಲ್ಲಿ ಹಂದಿ ಜ್ವರ ಹೆಚ್ಚಾಗಿ ಕಂಡುಬರುತ್ತಿದೆ.

    ರೋಗ ಬಾರದಂತೆ ತಡೆಯಲು ಏನು ಮಾಡಬಹುದು?
    – ಹೊರಗೆ ಸಿಕ್ಕಿದಲ್ಲೆಲ್ಲ ಉಗುಳುವ ಅಭ್ಯಾಸವನ್ನು ಬಿಡಬೇಕು
    – ಸೀನುವಾಗ, ಕೆಮ್ಮುವಾಗ ಕರವಸ್ತ್ರವನ್ನು ಅಥವಾ ಯಾವುದಾದರೂ ಬಟ್ಟೆಯನ್ನು ಬಾಯಿ ಹಾಗೂ ಮೂಗಿಗೆ ಅಡ್ಡ ಹಿಡಿಯಬೇಕು.
    – ಧರಿಸಿರುವ ಮಾಸ್ಕನ್ನು ಪ್ರತಿದಿನ ಬದಲಿಸಬೇಕು. ಜಾಸ್ತಿ ಜನ ಸಂದಣಿ ಇರುವ ಪ್ರದೇಶಗಳಿಗೆ ಹೋಗದೇ ಇರುವುದು ಉತ್ತಮ. ಹೋದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
    – ಸ್ವಚ್ಛವಾಗಿರುವ ಸೋಪಿನಲ್ಲಿ ಕೈಯನ್ನು ತೊಳೆಯುತ್ತಿರಬೇಕು
    – ದೂರದ ಪ್ರಯಾಣವನ್ನು ಕಡಿಮೆ ಮಾಡಿ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳಿ.

    ಇದೂವರೆಗೆ ಎಷ್ಟು ಜನ ಮೃತಪಟ್ಟಿದ್ದಾರೆ?
    ಯುರೋಪಿಯನ್ ಸೆಂಟರ್ ಫಾರ್ ಡಿಸಿಸ್ ಆಂಡ್ ಪ್ರಿವೆಂನ್ಷನ್ ಆಂಡ್ ಕಂಟ್ರೋಲ್ ನೀಡಿದ ವರದಿಯಂತೆ ಈ ರೋಗ ಕಂಡು ಬಂದ ಆರಂಭದ ವರ್ಷವಾದ 2009ರಲ್ಲಿ ವಿಶ್ವದಲ್ಲಿ 14,286 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 33,761 ಮಂದಿಗೆ ಹಂದಿ ಜ್ವರ ಬಾಧಿಸಿದ್ದು, 2035 ಮಂದಿ ಮೃತಪಟ್ಟಿದ್ದಾರೆ ಎಂದು 2015ರ ಮಾರ್ಚ್‍ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.

    ಕರ್ನಾಟಕದಲ್ಲಿ ಎಷ್ಟು ಮಂದಿಗೆ ಬಂದಿದೆ?
    ಕರ್ನಾಟಕದಲ್ಲಿ 2016ರಲ್ಲಿ 110 ಮಂದಿಗೆ ಕಾಣಿಸಿದ್ದರೂ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿರಲಿಲ್ಲ. 2017ರಲ್ಲಿ 871 ಮಂದಿಗೆ ಕಾಣಿಸಿಕೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾರ್ಚ್‍ನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ತಿಳಿಸಿದೆ.

     

  • ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    -ಹೆಚ್ಚು ನೀರು ಕುಡಿಯದ ಜನರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ

    -ಬಿಸಿಲು ಹಾಗೂ ಅಶುದ್ಧ ನೀರು ಕಾಯಿಲೆಗೆ ಕಾರಣ

    -ಬೇಕರಿ, ಹೋಟೆಲ್ ಅಡುಗೆಮನೆ ಕೆಲಸಗಾರರು ಹಾಗೂ ರೈತರು ಹೆಚ್ಚು ಬಾಧಿತರು

    ರಾಯಚೂರು: ಕರ್ನಾಟಕ ರಾಜ್ಯದ ಬಿಸಿಲನಾಡು ಎಂದು ರಾಯಚೂರು ಜಿಲ್ಲೆಯನ್ನು ಕರೆಯುತ್ತಾರೆ. ನಿಜ, ಆದ್ರೆ ಆ ಬಿಸಿಲು ರಾಯಚೂರಿನ ಜನರ ಮೇಲೆ ಏನೆಲ್ಲಾ ಪರಿಣಾಮಗಳನ್ನ ಬೀರುತ್ತಿದೆ ಗೊತ್ತಾ? ಇಲ್ಲಿನ ಬಿಸಿಲಿನಿಂದಾಗಿಯೇ ಜನ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯ ಮೂರು ತಿಂಗಳಲ್ಲಿ ಸಾವಿರಾರು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ರೋಗಿಗಳಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿರುವುದು ದುರಂತ.

    ವೈದ್ಯರೇ ಹೇಳುವ ಹಾಗೇ ಬೇಸಿಗೆಯಲ್ಲಿ ರೋಗಿಗಳ ಸಂಖ್ಯೆ ಇತರೆ ದಿನಗಳಿಗಿಂದ ಶೇಕಡಾ 100 ರಷ್ಟು ಹೆಚ್ಚಾಗಿರುತ್ತದೆ. ಜಿಲ್ಲೆಯ ಶೇಕಡಾ 50 ರಷ್ಟು ಜನರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಹದ ನಿರ್ಜಲೀಕರಣ. ಬೇಸಿಗೆಯಲ್ಲಿ ದೇಹದಿಂದ ಬೆವರು, ಮೂತ್ರ, ಉಸಿರಾಟದ ಮೂಲಕ ಹೆಚ್ಚು ನೀರು ಹೊರಹೋಗುತ್ತದೆ. ಹೆಚ್ಚೆಚ್ಚು ನೀರು ಕುಡಿಯದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆ ಆರಂಭದಿಂದ ಪ್ರತೀ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸರಿಸುಮಾರು ಮೂರದಿಂದ ನಾಲ್ಕು ಸಾವಿರ ಜನ ಮೂತ್ರಪಿಂಡ ಸಮಸ್ಯೆ ಹಾಗೂ ಕಿಡ್ನಿ ಸ್ಟೋನ್‍ನಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ರಾಯಚೂರು ಸೇರಿದಂತೆ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ವಿಪರೀತ ಮಟ್ಟಕ್ಕೆ ಮುಟ್ಟಿದೆ.

    ಹೊಲದಲ್ಲಿ ಕೆಲಸ ಮಾಡುವ ರೈತರು, ಕೃಷಿ ಕೂಲಿ ಕಾರ್ಮಿಕರು, ಬೇಕರಿಗಳಲ್ಲಿ, ಹೋಟೆಲ್ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರಲ್ಲಿ ಹಾಗೂ ಹೆಚ್ಚು ಮಾಂಸ ಪದಾರ್ಥ ಸೇವೆನೆ ಮಾಡುವವರನ್ನ ಮೂತ್ರಪಿಂಡ ಸಮಸ್ಯೆ ಕಾಡುತ್ತಿದೆ. ಕಾಲ್ಶಿಯಂ ಹಾಗೂ ಯೂರಿಕ್ ಆಸಿಡ್ ಸ್ಟೋನ್‍ಗಳು ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ್ಯ ಮಾಡುವವರು ಮೂತ್ರಪಿಂಡಗಳನ್ನೇ ಕಳೆದುಕೊಳ್ಳುತ್ತಿದ್ದಾರೆ.

    ಬಿಸಿಲಿನ ಜೊತೆ ಗ್ರಾಮೀಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಕೊರತೆ ಸಹ ಕಿಡ್ನಿ ಸ್ಟೋನ್‍ಗೆ ಕಾರಣವಾಗಿದೆ. ಕೆಲ ರೋಗಿಗಳಿಗೆ ಹೊಟ್ಟೆ ನೋವು, ಜ್ವರದಂತ ಲಕ್ಷಣಗಳು ಕಾಣಿಸಿಕೊಂಡರೆ, ಇನ್ನೂ ಕೆಲವರಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಮೂತ್ರಪಿಂಡಗಳ ಗಂಭೀರ ಸಮಸ್ಯೆ ಒಮ್ಮೆಲೆ ಎದುರಾಗುತ್ತಿದೆ ಎಂದು ಮೂತ್ರಪಿಂಡ ತಜ್ಞ ಡಾ.ತಾನಾಜಿ ಕಲ್ಯಾಣಕರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಬಿಸಿಲೂರ ಜನರಿಗೆ ಬಿಸಿಲಿನಿಂದ ಕಿಡ್ನಿ ಸ್ಟೋನ್ ಜೊತೆ ಜೊತೆಗೆ ಸನ್ ಸ್ಟ್ರೋಕ್, ರಕ್ತದೊತ್ತಡ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ಬಿಸಿಲಿನ ತಾಪ ಹಾಗೂ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹೆಚ್ಚೆಚ್ಚು ನೀರು, ತಂಪು ಪಾನೀಯ, ಎಳನೀರು ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ.

     

  • ಆರೋಗ್ಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಆರೋಗ್ಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾಸೌಧದಲ್ಲಿ 2017-18ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿರುವ ಅನುದಾನದ ಮಾಹಿತಿ ಇಲ್ಲಿದೆ.

    ಒಟ್ಟು ಅನುದಾನ: 5118 ಕೋಟಿ ರೂ.

    • ಆಶಾ ಕಾರ್ಯಕರ್ತರು ಈಗಾಗಲೇ ಪಡೆಯುತ್ತಿರುವ ಪ್ರೋತ್ಸಾಹ ಧನದ ಜೊತೆ 1000 ರೂ ಗೌರವಧನ.
    • ತಲಾ 25 ಕೋಟಿ ವೆಚ್ಚದಲ್ಲಿ 5 ಸೂಪರ್ ಸ್ಪೆಷಾಲಿಸಿ ಆಸ್ಪತ್ರೆ – ದಾವಣಗೆರೆ, ರಾಮನಗರ, ತುಮಕೂರು, ವಿಜಯಪುರ ಮತ್ತು ಕೋಲಾರದಲ್ಲಿ ಸ್ಥಾಪನೆ.
    • ಮಂಗಳೂರು ವೆನ್ಲಾಕ್ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದು.
    • 15 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದೂರು ಇರುವ ಗ್ರಾಮಗಳಲ್ಲಿ 150 ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಸ್ಥಾಪನೆ.
    • 10 ರಿಂದ 15 ಕಿ.ಮೀ ಸುತ್ತಳತೆಯಲ್ಲಿ 35 ಸಾವಿರ ಜನಸಂಖ್ಯೆಗೆ ಒಂದರಂತೆ ಆಂಬುಲೆನ್ಸ್ ಸೇವೆ.
    • 64 ಸಂಚಾರಿ ಆರೋಗ್ಯ ಘಟಕಗಳ ಆರಂಭ.
    • ಎಸ್‍ಇ/ಎಸ್‍ಟಿ ಜನಸಂಖ್ಯೆ ಹೊಂದಿರುವ ಗ್ರಾಮಗಳ ಜನರ ಆರೋಗ್ಯ ಸೇವೆಗೆ 25.34ಕೋಟಿ ಅನುದಾನ.
    • ಬೆಳಗಾವಿಯ ಲಸಿಕಾ ಸಂಸ್ಥೆಯ ಆವರಣದಲ್ಲಿ 5 ಕೋಟಿ ವೆಚ್ಚದಲ್ಲಿ ಆಯುಷ್ ಔಷಧ ತಯಾರಿಕಾ ಕೇಂದ್ರಗಳ ಸ್ಥಾಪನೆ.
    • 4.5 ಕೋಟಿ ವೆಚ್ಚದಲ್ಲಿ 150 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶವಾಗಾರ ನಿರ್ಮಾಣ.
    • ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಗಳ ಸಂಯೋಜಿತ ಆಯುಷ್ ಆಸ್ಪತ್ರೆಗಳ ಸ್ಥಾಪನೆಗೆ 6 ಕೋಟಿ ರೂ.
    • ರಾಜ್ಯದಲ್ಲಿ ಜನೌಷಧ ಔಷಧ ಮಳಿಗೆಗಳು ಮತ್ತು 200 ಜನರಿಕ್ ಔಷಧಿ ಮಳಿಗೆಗಳ ಸ್ಥಾಪನೆ

    ವೈದ್ಯಕೀಯ ಶಿಕ್ಷಣ:

    • ಕಲಬುರಗಿ, ಮೈಸೂರು, ಬೆಳಗಾವಿಯಲ್ಲಿ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ 310 ಕೋಟಿ ರೂ.
    • ಇಂದಿರಾನಗರದಲ್ಲಿ 35 ಕೋಟಿ ವೆಚ್ಚದಲ್ಲಿ ಕರ್ನಾಟಕ ಇನ್ಸ್ ಸ್ಟಿಟ್ಯೂಟ್ ಆಫ್ ಎಂಡೋಕ್ರೈನಾಲಿಜಿಯ ಹೊಸ ಆಸ್ಪತ್ರೆ.
    • ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ 5 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋದನ ಕೇಂದ್ರ ಘಟಕ.
    • ಮಿಂಟೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ.
    • ಬೆಂಗಳೂರಿನ ಕ್ಷಯ ರೋಗ ಆಸ್ಪತ್ರೆ ಆವರಣದಲ್ಲಿ 10 ಕೋಟಿ ವೆಚ್ಚದಲ್ಲಿ ಚರ್ಮರೋಗ ಸಂಸ್ಥೆ.
    • ಬಳ್ಳಾರಿ ವಿಮ್ಸ್ ಭೋದನಾ ಆಸ್ಪತ್ರೆ 25 ವೆಚ್ಚದಲ್ಲಿ ನವೀಕರಣ.

  • ಸಿಕ್ಸ್ ಪ್ಯಾಕ್ ಮಾಡೋಕೆ ಹೋಗಿ ಪ್ರಾಣ ತೆತ್ತ ಬೆಂಗಳೂರು ಯುವಕ

    ಸಿಕ್ಸ್ ಪ್ಯಾಕ್ ಮಾಡೋಕೆ ಹೋಗಿ ಪ್ರಾಣ ತೆತ್ತ ಬೆಂಗಳೂರು ಯುವಕ

    ಬೆಂಗಳೂರು: ಸಿಕ್ಸ್ ಪ್ಯಾಕ್ ಹುಚ್ಚಿಗೆ ಬಿದ್ದು ಸ್ಟಿರಾಯ್ಡ್ ತೆಗೆದುಕೊಂಡು ರಿಯಾಕ್ಷನ್ ಆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಯವಕರೊಬ್ಬರು ಮೃತಪಟ್ಟಿದ್ದಾರೆ.

    ಕಬ್ಬನ್ ಪೇಟೆ ನಿವಾಸಿ ಕಿರಣ್ ಮೃತಪಟ್ಟ ಯುವಕ. ಕುಮಾರಸ್ವಾಮಿ ಲೇಔಟ್ ನಲ್ಲಿರುವ ಫಿಟ್ನೆಸ್ ಜಿಮ್ ಗೆ ಕಳೆದ ಮೂರು ತಿಂಗಳಿನಿಂದ ಹೋಗುತ್ತಿದ್ದ ಕಿರಣ್  ಟ್ರೈನರ್ ಸಲಹೆಯ ಮೇರೆಗೆ ಸ್ಟಿರಾಯ್ಡ್ ತೆಗೆದುಕೊಂಡಿದ್ದರು.

    ಸ್ಟಿರಾಯ್ಡ್ ತೆಗೆದುಕೊಂಡ ಪರಿಣಾಮ ಕಿರಣ್ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ದಿಢೀರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದ ಕಿರಣ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

  • ಕೆಸಿಎಫ್ ವತಿಯಿಂದ ಮೆಕ್ಕಾದಲ್ಲಿ ರಕ್ತದಾನ ಶಿಬಿರ

    ಕೆಸಿಎಫ್ ವತಿಯಿಂದ ಮೆಕ್ಕಾದಲ್ಲಿ ರಕ್ತದಾನ ಶಿಬಿರ

    ಸೌದಿ ಅರೇಬಿಯಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಡೇ ಪ್ರಯುಕ್ತ ಕೆಸಿಎಫ್ ಮಕ್ಕತುಲ್ ಮುಕರ್ರಮ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ ಮೆಕ್ಕಾದ ಝಾಹಿರ್ ನಲ್ಲಿರುವ ಕಿಂಗ್ ಅಬ್ದುಲ್ ಅಜೀಝ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಈ ಪವಿತ್ರ ಭೂಮಿಯಲ್ಲಿ ಉದ್ಯೋಗ ಮಾಡಲು ದೊರಕಿದ ಸದಾವಕಾಶವನ್ನು ಬಳಸಿ ಕೆಸಿಎಫ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಅತ್ಯಂತ ಮಹತ್ವ ಪೂರ್ಣವಾದ ಕಾರ್ಯಗಳನ್ನು ನಡೆಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ. ತಾಯ್ನಾಡಿನಲ್ಲೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಹಕರಿಸುತ್ತಾ ಅನಾಥ, ನಿರ್ಗತಿಕರ ಕಣ್ಣೀರೊರೆಸುವ ಕಾರ್ಯಗಳಲ್ಲಿ ಕೆಸಿಎಫ್ ಮುಂದಾಗಿದೆ ಎಂದರು.

    ಅನ್ನದಾನ, ಶಿಕ್ಷಣ ಇವುಗಳಿಗಿಂತ ಅತ್ಯಂತ ಮಹತ್ವದ್ದಾಗಿದೆ ರಕ್ತದಾನ. ಅನ್ನವು ಸರ್ಕಾರದಿಂದಲೇ ದಾನವಾಗಿ ಲಭಿಸಿದರೆ ಶಿಕ್ಷಣ ಸೈಬರ್ ಕೇಂದ್ರಗಳಲ್ಲಿ ಹೇರಳವಾಗಿ ದೊರೆಯಬಹುದು. ಆದ್ರೆ ರಕ್ತವು ಈ ರೀತಿ ಲಭಿಸದು. ಆದ್ದರಿಂದ ರಕ್ತ ದಾನ ಅತ್ಯಂತ ಮಹತ್ವಪೂರ್ಣ ದಾನವಾಗಿದೆ. ಇದನ್ನು ಆಯೋಜಿಸಿದ ಕೆಸಿಎಫ್ ನಿಜಕ್ಕೂ ಅಭಿನಂದನಾರ್ಹ ಎಂದರು. ಇನ್ನು ಮುಂದಕ್ಕೂ ಕೆಸಿಎಫ್ ಮಾದರಿ ಯೋಗ್ಯ ಸಂಘಟನೆಯಾಗಿ ಬೆಳೆದು ಬರಲಿ ಎಂದು ಹಾರೈಸಿ ರಕ್ತ ತಪಾಸಣೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

    ಬಳಿಕ ದಾರುಲ್ ಉಲೂಮ್ ರಹ್ಮಾನಿಯ ದಾವಣಗೆರೆ ಇದರ ಪ್ರಿನ್ಸಿಪಾಲ್ ಬಿ.ಎ ಇಬ್ರಾಹಿಮ್ ಸಖಾಫಿ ದಾವಣಗೆರೆ ಮಾತಾಡಿ, ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಹಿಂದುಳಿದ ಉತ್ತರ ಕರ್ನಾಟಕವನ್ನು ಪ್ರತೇಕವಾಗಿ ಗಮನವಿಟ್ಟು ಹಾಗೂ ಹಜ್ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಕಾರ್ಯಚರಿಸುತ್ತಾ ಬಂದಿರುವ ಕೆ.ಸಿ.ಎಫ್ ಎಂಬ ಸಂಘಟನೆಯನ್ನು ಬಿಟ್ಟು ಬೇರೆ ಯಾವ ಸಂಘಟನೆಯು ಕೊಲ್ಲಿ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ, ಇಸ್ಲಾಮಿನಲ್ಲಿ ರಕ್ತವನ್ನು ಯಾವತ್ತೂ ವ್ಯಾಪಾರ ಮಾಡಬಾರದು. ಅದನ್ನು ದಾನವಾಗಿ ಕೊಡಬಹುದೆಂದು ನಮ್ಮ ಉಲಾಮಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿ ಕೆ.ಸಿ.ಎಫ್ ಸೇವೆಯನ್ನು ಅಭಿನಂದಿಸಿ ಶುಭ ಹಾರೈಸಿದರು.

    ನಂತರ ಕೆಸಿಎಫ್ ಮೆಕ್ಕಾ ಸೆಕ್ಟರಿನ 20 ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಕೋಶಾಧಿಕಾರಿ ಸುಲೈಮಾನ್ ಪಾದೆಕಲ್ಲು, ಶಿಕ್ಷಣ ವಿಭಾಗ ಕನ್ವೀನರ್ ಮುಸ್ತಾಕ್ ಸಾಗರ್, ಸಾಂತ್ವನ ವಿಭಾಗ ಕನ್ವೀನರ್ ಮೂಸಾ ಹಾಜಿ ಕಿನ್ಯ ಹಾಗೂ ಕೆ.ಸಿ.ಎಫ್ ಜಿದ್ದಾ ಝೋನ್ ಸಾರ್ವಜನಿಕ ಸಂಪರ್ಕ ಚೇರ್ಮನ್ ಇಬ್ರಾಹಿಮ್ ಕಿನ್ಯ ಹಾಗೂ ಕೆ.ಸಿ.ಎಫ್ ಸದಸ್ಯರು ಉಪಸ್ಥಿತರಿದ್ದರು.