Tag: health

  • ಋತುಚಕ್ರದ ಹೊಟ್ಟೆ ನೋವಿಗೆ ಇಲ್ಲಿದೆ ಮನೆ ಮದ್ದು

    ಋತುಚಕ್ರದ ಹೊಟ್ಟೆ ನೋವಿಗೆ ಇಲ್ಲಿದೆ ಮನೆ ಮದ್ದು

    ಋತುಚಕ್ರದ ಸಮಯದಲ್ಲಿ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಹೊಟ್ಟೆನೋವಿನಿಂದ ಬಳಲುತ್ತಾರೆ. ಈ ಸಮಯದಲ್ಲಿ ಕೆಳಹೊಟ್ಟೆಯಲ್ಲಿ ವಿಪರೀತವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಕೆಲವರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಮಾತ್ರೆ ಸೇವಿಸುವುದರಿಂದ ಪೂರ್ಣವಾಗಿ ಹೊಟ್ಟೆ ನೋವು ಕಡಿಮೆಯಾಗಲ್ಲ ಬದಲಾಗಿ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ ಋತುಚಕ್ರದ ವೇಳೆ ಹೊಟ್ಟೆನೋವು ಕಡಿಮೆ ಮಾಡಲು ಮನೆಯಲ್ಲಿಯೇ ತಯಾರಿಸಬಹುದಾದ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

    * ಒಂದು ಲೋಟ ಬಿಸಿ ನೀರಿಗೆ ಅರ್ಧ ನಿಂಬೆ ರಸವನ್ನು ಹಿಂಡಿ. ಬಳಿಕ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

    * ತುಂಬಾ ಹೊಟ್ಟೆ ಇದ್ದರೆ ಎಳನೀರಿಗೆ ಗ್ಲೂಕೋಸ್ ಹಾಕಿ, ಮಿಕ್ಸ್ ಮಾಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಜೊತೆಗೆ ಸುಸ್ತು ಕಡಿಮೆಯಾಗುತ್ತದೆ.

    * ಎರಡು ಮೂರು ಪುದೀನಾ ಎಲೆಗಳನ್ನು ಹಾಕಿ ಒಂದು ಕಪ್ ಟೀ ಮಾಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

    * ಹಸಿ ಪುದೀನಾ ಎಲೆಗಳನ್ನು ತೆಗೆದುಕೊಂಡು ಜಗಿದರೂ ಒಳ್ಳೆಯದು.


    * ಒಂದು ಲೋಟ ನೀರಿಗೆ ಕೆಲವು ಪುದೀನಾ ಎಲೆಗಳನ್ನು ಹಾಕಿ ಕೆಲವು ಹೊತ್ತು ಕುದಿಸಿರಿ, ಬಳಿಕ ಆ ನೀರನ್ನು ಕುಡಿಯಿರಿ. ಋತುಚಕ್ರದ ವೇಳೆ ಹೊಟ್ಟೆನೋವಿಗೆ ಇದು ಕೂಡ ಉತ್ತಮ ಪರಿಹಾರವಾಗಿದೆ.

    * ಒಂದು ಚಮಚ ಅಲೋವೆರಾ ರಸಕ್ಕೆ ಒಂದು ಟೀಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.

    * ಇಂತಹ ಸಮಯದಲ್ಲಿ ತುಳಸಿ ಎಲೆಯನ್ನು ಸೇವಿಸುವುದು ಉತ್ತಮ.

    * ಒಂದು ಲೋಟ ನೀರಿಗೆ ಜೀರಿಗೆಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಮುಟ್ಟಿನ ನೋವು ಸಹಜವಾಗಿ ಕಡಿಮೆಯಾಗುತ್ತದೆ.

    * ಋತುಚಕ್ರದ ಸಮಯದಲ್ಲಿ ಅಧಿಕವಾಗಿ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಅದರಲ್ಲೂ ಪಪ್ಪಾಯ ತಿಂದರೆ ನೋವು ಬೇಗ ಕಡಿಮೆಯಾಗುತ್ತದೆ.

    * ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಮೆಂತ್ಯೆ ಬೆರೆಸಿ ನೆನೆಹಾಕಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

    * ಒಂದು ಲೋಟ ಕ್ಯಾರೇಟ್ ಜ್ಯೂಸ್ ಕುಡಿದರೆ ಇಂತಹ ಸಮಯದಲ್ಲಿ ನೋವು ನಿವಾರಣೆಯಾಗುತ್ತದೆ.

    * ಒಂದು ಇಂಚು ಹಸಿ ಶುಂಠಿಯ ಸಿಪ್ಪೆ ತೆಗೆದು ಬಳಿಕ ಅದನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿರಿ. ಬಳಿಕ ಆ ನೀರನ್ನು ಸೋಸಿ, ಬಿಸಿಬಿಸಿಯಿರುವಾಗಲೇ ಕುಡಿಯಿರಿ. ಹೀಗೆ ಮಾಡಿ ದಿನಕ್ಕೆ ಎರಡು ಬಾರಿ ಕುಡಿದರೆ ನೋವು ಕಡಿಮೆಯಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಚ್1ಎನ್1 ಮತ್ತೆ ಸದ್ದು ಮಾಡುತ್ತಿದೆ. ಸರ್ಕಾರಗಳು ಸಾಕಷ್ಟು ಎಚ್ಚರಿಕೆಗಳನ್ನು ಕೈಗೊಂಡರೂ ಮತ್ತಷ್ಟು ಜನರಿಗೆ ಈ ಸೋಂಕು ತಗಲುತ್ತಿದೆ. ಹೀಗಾಗಿ ಇಲ್ಲಿ ಏನಿದು ಹಂದಿ ಜ್ವರ? ಹೇಗೆ ಬರುತ್ತದೆ? ಬಂದ ಮೇಲೆ ಏನು ಮಾಡಬೇಕು ಎನ್ನುವ ಬಗ್ಗೆ ವಿವರಣೆಯಲ್ಲಿ ನೀಡಲಾಗಿದೆ.

    ಏನಿದು ಎಚ್1ಎನ್1?
    ಮಲೇರಿಯಾ ಜ್ವರ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುವುದು ನಿಮಗೆ ಗೊತ್ತಿರಬಹುದು. ಆದರೆ ಹಂದಿಜ್ವರ ಸೊಳ್ಳೆಯಿಂದ ಬರುವುದಿಲ್ಲ. ಒಂದು ವೈರಾಣುವಿನಿಂದ ಈ ಜ್ವರ ಬರುತ್ತದೆ.ಈ ವೈರಸ್‍ಗೆ ಎಚ್1ಎನ್1 ಎಂದು ಕರೆಯುತ್ತಾರೆ.

    ಹಂದಿ ಜ್ವರ ಎಂದು ಕರೆಯೋದು ಯಾಕೆ?
    ಈ ಎಚ್1ಎನ್1 ವೈರಾಸ್ ಮೊದಲು ಹಂದಿಗಳ ಶ್ವಾಸಕೋಶಕ್ಕೆ ತಗಲಿ ನಂತರ ಮನುಷ್ಯನಿಗೆ ಹರಡಿದೆ ಎಂದು ಶಂಕಿಸಿ ಈ ರೋಗಕ್ಕೆ ‘ಹಂದಿ ಜ್ವರ’ ಎಂದು ಕರೆಯಲಾಗುತ್ತಿದೆ.

    ಮೊದಲು ಹಂದಿ ಜ್ವರ ಪತ್ತೆಯಾಗಿದ್ದು ಎಲ್ಲಿ?
    2009ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅಮೆರಿಕ ಗಡಿಯಲ್ಲಿರುವ ಮೆಕ್ಸಿಕೋ ದೇಶದ ರಾಜಧಾನಿ ಮೆಕ್ಸಿಕೋ ನಗರದಲ್ಲಿ ಹಂದಿ ಜ್ವರ ಮೊದಲು ಕಾಣಿಸಿಕೊಂಡಿತು. ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‍ನಲ್ಲಿ ಪತ್ತೆಯಾಯಿತು.

    ಮಾನವರಿಗೆ ಹಂದಿ ಜ್ವರ ಬರುತ್ತಾ?
    ಹಂದಿಯಿಂದ ಮಾನವನಿಗೆ ಜ್ವರ  ಹರಡುವುದಿಲ್ಲ. ಆದರೆ ಸೋಂಕು ತಗಲುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಈ ಸೋಂಕು ತಗುಲಿದ ವ್ಯಕ್ತಿಗಳಿಗೆ ಹಂದಿಗಳ ಒಡನಾಟ ಹೆಚ್ಚಿದ್ದರೆ ಬೇಗನೆ ಸೋಂಕು ಹರಡುತ್ತದೆ. ಮೆಕ್ಸಿಕೋ ನಗರದಲ್ಲಿ ಹಂದಿ ಸಾಕಾಣೆ ಮಾಡುವ ಮಂದಿಗೆ ಮೊದಲು ಸೋಂಕು ತಗಲಿ ನಂತರ ಈ ಸೋಂಕು ವಿಶ್ವಕ್ಕೆ ಪಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.

    ಹಂದಿ ಜ್ವರ ಹೇಗೆ ಬರುತ್ತೆ? ಬಂದ ಮೇಲೆ ಏನಾಗುತ್ತೆ?
    ಈ ವೈರಸ್ ಮೊದಲು ಮೂಗು ಅಥವಾ ಬಾಯಿಯ ಮೂಲಕ ನಮ್ಮ ದೇಹಕ್ಕೆ ಲಗ್ಗೆ ಇಡುತ್ತದೆ. ಲಗ್ಗೆ ಇಟ್ಟ ವೈರಸ್ ರಕ್ತದಲ್ಲಿ ಸಂತಾನೋತ್ಪತಿ ಮಾಡುತ್ತದೆ. ಇದಾದ ಬಳಿಕ ಮೊದಲು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ವೈರಾಣು ದಾಳಿ ಜಾಸ್ತಿ ಆದಂತೆ ಉಸಿರಾಟದ ತೊಂದರೆ, ಸಣ್ಣ ಜ್ವರ ಸುಸ್ತು ಕಾಣಿಸುತ್ತದೆ. ಸಾಧಾರಣವಾಗಿ ಜ್ವರ ಬಂದರೆ ಒಂದೆರಡು ದಿನದಲ್ಲಿ ಕಡಿಮೆ ಆಗುತ್ತದೆ. ಆದರೆ ಈ ಜ್ವರದಲ್ಲಿ ಮೊದಲು ಚಳಿ, ಗಂಟಲುರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶ್ಶಕ್ತಿ, ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ ಆಗುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಆರೋಗ್ಯವಾಗಿದ್ದ ವ್ಯಕ್ತಿಯ ದೇಹದಲ್ಲಿ ದಿಢೀರ್ ಆಗಿ ಈ ರೀತಿಯ ಬದಲಾವಣೆ ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಹೋಗುವುದು ಉತ್ತಮ.

    ಜ್ವರ ಬಂದಿದೆ ಎಂದು ತಿಳಿಯೋದು ಹೇಗೆ?
    ಈ ಮೇಲಿನ ಲಕ್ಷಣ ಕಂಡುಬಂದವರು ಹೆದರುವ ಅಗತ್ಯವಿಲ್ಲ. ಆಸ್ಪತ್ರೆಗೆಂದು ಪರೀಕ್ಷೆಗೆ ತೆರಳಿದ ಸೋಂಕು ಪೀಡಿತ ಶಂಕೆ ಹೊಂದಿರುವ ವ್ಯಕ್ತಿಗಳ ಮೂಗಿನ ಸ್ರಾವ ಅಥವಾ ಉಗುಳಿನ ಮಾದರಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯಲ್ಲಿ ಹಂದಿಜ್ವರ ಬಂದಿದೆಯೋ ಅಥವಾ ಬಂದಿಲ್ಲವೋ ಎನ್ನುವುದನ್ನು ತಿಳಿಸುತ್ತಾರೆ.

    ಹಂದಿಜ್ವರ ಬಂದ ಮೇಲೆ ಏನ್ ಮಾಡಬೇಕು?
    ಹಂದಿ ಜ್ವರ ಬಂದವರು ಮೊದಲು ಮಾಡಬೇಕಾದ ಕೆಲಸ ಮಾಸ್ಕ್ ಧರಿಸುವುದು. ಮಾಸ್ಕ್ ಧರಿಸುವುದರಿಂದ ವೈರಾಣು ಬೇರೆಯವರಿಗೆ ಹರಡುವುದನ್ನು ತಡೆಯಬಹುದು. ಇದರ ಜೊತೆ ರೋಗಿಯ ಹತ್ತಿರವೇ ಓಡಾಟ ನಡೆಸುವ ವ್ಯಕ್ತಿಗಳೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ. ರೋಗಿಗಳು ಹೆಚ್ಚು ಹೆಚ್ಚು ಬಿಸಿ ನೀರನ್ನು ಸೇವಿಸಬೇಕಾಗುತ್ತದೆ. ಮಕ್ಕಳು, ಹಿರಿಯ ವ್ಯಕ್ತಿಗಳು, ಗರ್ಭಿಣಿಯರಲ್ಲಿ ರೋಗ ನೀರೋಧಕ ಶಕ್ತಿ ಕಡಿಮೆ ಇರುವ ಕಾರಣ ಇವರು ರೋಗಿಗಳು ಇರುವ ಕೊಠಡಿಯನ್ನು ಪ್ರವೇಶಿಸದೇ ಇರುವುದು ಉತ್ತಮ.

    ಸಾವು ಖಚಿತವೇ?
    ಹಂದಿ ಜ್ವರ ಬಂದವರೆಲ್ಲ ಭಯ ಪಡುವ ಅಗತ್ಯವಿಲ್ಲ. ಈ ಜ್ವರ ಪೀಡಿತರಿಗೆ ವೈದ್ಯರು ಟ್ಯಾಮಿಫ್ಲೂ ಮಾತ್ರೆಯನ್ನು ನೀಡುತ್ತಾರೆ. ಈ ಮಾತ್ರೆಯ ರಿಟೇಲ್ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಆದರೆ ಕೆಲ ವೈದ್ಯರು ಅಕ್ರಮವಾಗಿ ಈ ಮಾತ್ರೆಯನ್ನು ಸಾಮಾನ್ಯ ಜ್ವರ ಬಂದರೂ ನೀಡುತ್ತಿದ್ದಾರೆ. ಹೀಗಾಗಿ ಹಂದಿಜ್ವರ ಬಂದ ಮೇಲೆ ಈ ಮಾತ್ರೆಯನ್ನು ಮೊದಲೇ ಸೇವಿಸುತ್ತಿದ್ದವರು ಮತ್ತೊಮ್ಮೆ ಸೇವಿಸಿದರೆ ಟ್ಯಾಮಿಫ್ಲೂ ಮಾತ್ರೆ ಕೆಲಸ ಮಾಡುವುದಿಲ್ಲ. ಹೀಗಾಗಿ ವೈದ್ಯರು ಸೂಚಿಸಿದ ಬಳಿಕವಷ್ಟೇ ಈ ಮಾತ್ರೆಯನ್ನು ಸೇವಿಸಬೇಕಾಗುತ್ತದೆ. ಒಂದರಿಂದ ಮೂರು ದಿನಗಳ ಕಾಲ ಈ ವೈರಾಣು ಸಿಕ್ಕಾಪಟ್ಟೆ ಕ್ರಿಯಾಶೀಲವಾಗಿರುತ್ತದೆ, ನಂತರ ವೈರಾಣು ಸತ್ತುಹೋಗಿ ಒಂದು ವಾರದಲ್ಲಿ ಮನುಷ್ಯ ಮೊದಲಿನಂತೆ ಆರೋಗ್ಯವಾಗಿರುತ್ತಾನೆ. ಆದರೆ ಚಿಕಿತ್ಸೆ ಪಡೆಯದಿದ್ದರೆ ಮಾತ್ರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

    ನಗರದಲ್ಲೇ ಹೆಚ್ಚು ಏಕೆ?
    ನಗರಗಳಲ್ಲಿ ಜನ ಸಂಚಾರ ಹೆಚ್ಚು. ಉದ್ಯೋಗಕ್ಕಾಗಿ ಪ್ರಯಾಣ ಮಾಡುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಮಹಾನಗರಗಳಲ್ಲಿ ಹಂದಿ ಜ್ವರ ಹೆಚ್ಚಾಗಿ ಕಂಡುಬರುತ್ತಿದೆ.

    ರೋಗ ಬಾರದಂತೆ ತಡೆಯಲು ಏನು ಮಾಡಬಹುದು?
    – ಹೊರಗೆ ಸಿಕ್ಕಿದಲ್ಲೆಲ್ಲ ಉಗುಳುವ ಅಭ್ಯಾಸವನ್ನು ಬಿಡಬೇಕು
    – ಸೀನುವಾಗ, ಕೆಮ್ಮುವಾಗ ಕರವಸ್ತ್ರವನ್ನು ಅಥವಾ ಯಾವುದಾದರೂ ಬಟ್ಟೆಯನ್ನು ಬಾಯಿ ಹಾಗೂ ಮೂಗಿಗೆ ಅಡ್ಡ ಹಿಡಿಯಬೇಕು.
    – ಧರಿಸಿರುವ ಮಾಸ್ಕನ್ನು ಪ್ರತಿದಿನ ಬದಲಿಸಬೇಕು. ಜಾಸ್ತಿ ಜನ ಸಂದಣಿ ಇರುವ ಪ್ರದೇಶಗಳಿಗೆ ಹೋಗದೇ ಇರುವುದು ಉತ್ತಮ. ಹೋದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
    – ಸ್ವಚ್ಛವಾಗಿರುವ ಸೋಪಿನಲ್ಲಿ ಕೈಯನ್ನು ತೊಳೆಯುತ್ತಿರಬೇಕು
    – ದೂರದ ಪ್ರಯಾಣವನ್ನು ಕಡಿಮೆ ಮಾಡಿ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳಿ.

    ಇದೂವರೆಗೆ ಎಷ್ಟು ಜನ ಮೃತಪಟ್ಟಿದ್ದಾರೆ?
    ಯುರೋಪಿಯನ್ ಸೆಂಟರ್ ಫಾರ್ ಡಿಸಿಸ್ ಆಂಡ್ ಪ್ರಿವೆಂನ್ಷನ್ ಆಂಡ್ ಕಂಟ್ರೋಲ್ ನೀಡಿದ ವರದಿಯಂತೆ ಈ ರೋಗ ಕಂಡು ಬಂದ ಆರಂಭದ ವರ್ಷವಾದ 2009ರಲ್ಲಿ ವಿಶ್ವದಲ್ಲಿ 14,286 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 33,761 ಮಂದಿಗೆ ಹಂದಿ ಜ್ವರ ಬಾಧಿಸಿದ್ದು, 2035 ಮಂದಿ ಮೃತಪಟ್ಟಿದ್ದಾರೆ ಎಂದು 2015ರ ಮಾರ್ಚ್‍ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.

    ಕರ್ನಾಟಕದಲ್ಲಿ ಎಷ್ಟು ಮಂದಿಗೆ ಬಂದಿದೆ?
    ಕರ್ನಾಟಕದಲ್ಲಿ 2016ರಲ್ಲಿ 110 ಮಂದಿಗೆ ಕಾಣಿಸಿದ್ದರೂ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿರಲಿಲ್ಲ. 2017ರಲ್ಲಿ 871 ಮಂದಿಗೆ ಕಾಣಿಸಿಕೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾರ್ಚ್‍ನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ತಿಳಿಸಿದೆ.

     

  • ನೀವು ನಿಜವೆಂದು ನಂಬಿರುವ ಸೌಂದರ್ಯದ 5 ಟಿಪ್ಸ್ ಶುದ್ಧ ಸುಳ್ಳು

    ನೀವು ನಿಜವೆಂದು ನಂಬಿರುವ ಸೌಂದರ್ಯದ 5 ಟಿಪ್ಸ್ ಶುದ್ಧ ಸುಳ್ಳು

    ಬೆಂಗಳೂರು: ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ.

    1. ನಿಮ್ಮ ಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು:
    ಜನರು ಪಿಂಪಲ್ ಫ್ರೀ ತ್ವಚೆ ಪಡೆಯಲು ನಿಂಬೆಹಣ್ಣಿನಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಏಕೆಂದರೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುತ್ತದೆ. ಹಾಗಾಗಿ ಅದನ್ನು ತ್ವಜೆ ಮೇಲೆ ನೇರವಾಗಿ ಉಜ್ಜುವುದು ಒಳ್ಳೆಯದಲ್ಲ. ನಿಂಬೆಹಣ್ಣನ್ನು ನೇರವಾಗಿ ಸ್ಕೀನ್‍ಗೆ ಉಜ್ಜುವುದರ ಬದಲು ಅದನ್ನು ಗ್ಲಿಸರಿನ್ ಅಥವಾ ಫೇಸ್‍ಪ್ಯಾಕ್‍ನಲ್ಲಿ ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.

    2. ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆ ಮಾಯ:
    ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆಗಳು ಮಾಯವಾಗುತ್ತದೆ ಎಂದು ತುಂಬಾ ಜನ ನಂಬುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಪದೇ ಪದೇ ನೀರಿನಿಂದ ಮುಖ ತೊಳೆದರೆ ನಿಮ್ಮ ಸ್ಕಿನ್‍ಗೆ ಬೇಕಾದ ಆಯಿಲ್ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ಸ್ಕೀನ್ ಡ್ರೈ ಆಗಿ ಮೊಡವೆ ಜಾಸ್ತಿಯಾಗುವ ರೀತಿ ಮಾಡುತ್ತದೆ. ಹೀಗಾಗಿ ದಿನಕ್ಕೆ 2 ಅಥವಾ 3 ಬಾರಿ ಮಾತ್ರ ಫೇಸ್ ವಾಶ್ ಮಾಡಬೇಕು.

    3. ಸ್ಕ್ರಬ್ ಹಾಗೂ ಫೇಶಿಯಲ್‍ನಿಂದ ಪಿಂಪಲ್ ಫ್ರೀ:
    ಸ್ಕ್ರಬ್, ಕ್ಲೀನಿಂಗ್ ಹಾಗೂ ಫೇಶಿಯಲ್ ಮಾಡುವುದರಿಂದ ಪಿಂಪಲ್ ಕಡಿಮೆಯಾಗುತ್ತದೆ ಎಂದು ಎಲ್ಲರು ನಂಬುತ್ತಾರೆ. ಆದರೆ ಇದರಿಂದ ನಿಮ್ಮ ಹಣ ಮಾತ್ರ ವ್ಯರ್ಥ ಆಗುವುದು ಹೊರತು ಪಿಂಪಲ್ ದೂರವಾಗುವುದಿಲ್ಲ. ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಯ ಪೋರ್ ಓಪನ್ ಆಗಿ ನಿಮ್ಮ ಸ್ಕೀನ್ ಅನ್ನು ಸೆನ್ಸಿಟಿವ್ ಮಾಡುತ್ತದೆ. ಅಲ್ಲದೇ ಇದರಿಂದ ನಿಮ್ಮ ಮುಖದ ಮೇಲೆ ಇನ್ನಷ್ಟೂ ಪಿಂಪಲ್ ಜಾಸ್ತಿ ಮಾಡುತ್ತದೆ.

    4. ಫೇರ್ ನೆಸ್ ಕ್ರೀಂ ಬೆಳ್ಳಗೆ ಮಾಡುತ್ತದೆ:
    ಫೇರ್ ನೆಸ್ ಕ್ರೀಂ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ ಎಂದು ಅಂದುಕೊಂಡಿದ್ದಾರೆ. ಆದರೆ ಈ ಕ್ರೀಂಗಳು ಹಾಗೇ ಮಾಡುವುದಿಲ್ಲ. ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಗಳನ್ನು ಮಾರಾಟ ಮಾಡಲು ಈ ರೀತಿಯ ಐಡಿಯಾ ಉಪಯೋಗಿಸುತ್ತಾರೆ. ಈ ಕ್ರೀಂಗಳನ್ನು ಉಪಯೋಗಿಸಿದ್ದರೆ ಅದು ನಿಮ್ಮ ತ್ವಚೆಯ ಫಿಗ್ಮೆಂಟೇಶನ್‍ನನ್ನು ತೆಗೆಯುತ್ತದೆ. ಹಾಗಾಗಿ ಕ್ರೀಂಗಳ ಬದಲು ನಿಮ್ಮ ಬಗ್ಗೆ ನೀವು ವಿಶ್ವಾಸವನ್ನು ಹೊಂದಿರಿ.

    5. ಕ್ಲೌಡಿ ಡೇ ದಿನ ಸನ್‍ಸ್ಕ್ರೀನ್ ಬಳಸಬಾರದು:
    ಸನ್ ಸ್ಕ್ರೀನ್ ಉಪಯೋಗಿಸುವುದರಿಂದ ಅದು ನಮ್ಮನ್ನು ಅಲ್ಟ್ರಾವೈಲೆಟ್ ಕಿರಣಗಳಿಂದ ಕಾಪಾಡುತ್ತದೆ. ಬಿಸಿಲು ಇದ್ದಾಗ ಮಾತ್ರ ಜನರು ಸನ್ ಸ್ಕ್ರೀನ್ ಉಪಯೋಗಿಸುತ್ತಾರೆ. ಮೋಡ ಕವಿದ ದಿನವೂ ಕೂಡ ಸೂರ್ಯನ ಕಿರಣವೂ ನಮ್ಮ ಮೇಲೆ ಸುಲಭವಾಗಿ ಬೀಳುತ್ತದೆ. ಹಾಗಾಗಿ ನೀವು ದಿನವೂ ಸನ್ ಸ್ಕ್ರೀನ್‍ನನ್ನು ಉಪಯೋಗಿಸುವುದನ್ನು ಮರೆಯಬೇಡಿ. ಹೀಗಾಗಿ ಕ್ಲೌಡಿ ಡೇ ದಿನ ಸನ್‍ಸ್ಕ್ರೀನ್ ಬಳಸಬಾರದು ಎಂಬುವುದು ಶುದ್ಧ ಸುಳ್ಳಾಗಿದೆ.

    ಈ ಎಲ್ಲಾ ಟಿಪ್ಸ್ ಜನರು ನಿಜವೆಂದು ನಂಬಿದ್ದರು. ಆದರೆ ಇದು ಶುದ್ಧ ಸುಳ್ಳು ಎಂಬುದು ಈಗ ಗೊತ್ತಾಗಿದೆ. ಸದ್ಯ ನೀವು ಕೂಡ ಈ ಟಿಪ್ಸ್ ನನ್ನು ಅನುಸರಿಸಿದರೆ ಸುಂದರವಾಗಿ ಕಾಣಿಸಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಲಾರದ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಠಿಕತೆ

    ಕೋಲಾರದ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಠಿಕತೆ

    ಕೋಲಾರ: ಇದು ರಾಜ್ಯದಲ್ಲೇ ಹಿಂದುಳಿದ ಹಾಗೂ ಬರಪೀಡಿತ ಜಿಲ್ಲೆ, ಇಲ್ಲಿ ಹನಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹುಟ್ಟುವ ಮಕ್ಕಳು ಕೂಡಾ ಅಪೌಷ್ಠಕತೆಯ ಶಾಪಕ್ಕೆ ತುತ್ತಾಗುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರು ವಿಷವಾಗಿ ಹೋಗಿದೆ. ಇದರಿಂದ ಇಲ್ಲಿ ಹುಟ್ಟೋ ಮಕ್ಕಳು ಕೂಡಾ ಅಪೌಷ್ಠಿಕತೆಗೆ ತುತ್ತಾಗುತ್ತಿದ್ದಾರೆ.

    ಈವರೆಗೆ 7000 ಮಕ್ಕಳಲ್ಲಿ ಅಪೌಷ್ಠಿಕತೆ ಕಂಡು ಬಂದಿದ್ದು, ಅವರಲ್ಲಿ 130 ಜನ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದು ಎಲ್ಲಾ ವರ್ಗದ ಮಕ್ಕಳಲ್ಲೂ ಕಾಣಿಸಿಕೊಂಡಿದ್ದು, ಹೃದಯ ಸಂಬಂಧಿ ಸಮಸ್ಯೆ, ಪೌಷ್ಠಿಕ ಆಹಾರದ ಕೊರತೆ, ಶಾರೀರಿಕ, ಮಾನಸಿಕ ತೊಂದರೆ ಜೊತೆಗೆ ತಾಯಂದಿರು ಸರಿಯಾಗಿ ಎದೆಹಾಲು ಉಣಿಸದಿರೋದೇ ಅಪೌಷ್ಟಿಕತೆಗೆ ಕಾರಣವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೆಪ್ಟಂಬರ್ ತಿಂಗಳನ್ನು ವಿಶೇಷವಾಗಿ ಅಪೌಷ್ಠಿಕ ಮಕ್ಕಳ ಪೋಷಣಾ ಮಾಸ ಎಂದು ಆಚರಿಸುತ್ತಿದೆ. ಈ ಮೂಲಕ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.

    ಜಿಲ್ಲೆಯಲ್ಲಿ ಒಟ್ಟು 2 ಸಾವಿರದ 61 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 6 ವರ್ಷದ ಒಳಗಿನ 64 ಸಾವಿರದ 344 ಮಕ್ಕಳಿದ್ದಾರೆ. ಈ ಮಕ್ಕಳ ಮೇಲೆ ತೂಕ ಮತ್ತು ಬೆಳವಣಿಗೆ ಆಧಾರದಲ್ಲಿ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಸಮೀಕ್ಷೆ ನಡೆಸಿದೆ. ಈ ಮಕ್ಕಳಲ್ಲಿ ತೀವ್ರ ಕಡಿಮೆ ತೂಕವಿರುವವರನ್ನು ಗುರುತಿಸಿ, 14 ದಿನಗಳ ಕಾಲ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಿಕೊಂಡು ಆಹಾರದ ಜೊತೆಗೆ ಚಿಕಿತ್ಸೆ ನೀಡಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದುನಿಯಾ ವಿಜಿ ಆರೋಗ್ಯದಲ್ಲಿ ಏರುಪೇರು

    ದುನಿಯಾ ವಿಜಿ ಆರೋಗ್ಯದಲ್ಲಿ ಏರುಪೇರು

    ಬೆಂಗಳೂರು: ಜೈಲಿನ ಆಹಾರ ಧಿಕ್ಕರಿಸಿದ್ದ ದುಜಿಯಾ ವಿಜಿ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ.

    ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿದ್ದರು. ಅಲ್ಲದೇ ಬ್ಯಾರಕ್‍ಗೆ ಹೋಗಲ್ಲ ಎಂದಿದ್ದಕ್ಕೆ ಅವರಿಗೆ ಸೆಲ್ ನೀಡಲಾಗಿತ್ತು. ನಂತರ ಮನೆಯ ಊಟ, ತಿಂಡಿ ಬೇಕೆಂದು ಹಠ ಹಿಡಿದಿದ್ದರು. ಹೀಗಾಗಿ ದುನಿಯಾ ವಿಜಯ್‍ಗೆ ರವಿ ಹಾಗೂ ಸ್ನೇಹಿತರು ಮನೆಯಿಂದ ಊಟ ತಂದುಕೊಟ್ಟಿದ್ದಾರೆ.

    ಮನೆಯಿಂದ ತಂದ ಆಹಾರವನ್ನು ಜೈಲಿನ ಒಳಗಡೆ ತರಲು ಜೈಲಾಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಸೋಮವಾರ ಸರಿಯಾದ ಆಹಾರ ದೊರೆಯದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ದುನಿಯಾ ವಿಜಿ ಪ್ರತಿ ದಿನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಆಹಾರ ಸೇವಿಸುತ್ತಿದ್ದರು. ಪ್ರತಿದಿನ ಅವರು ಐದು ಬಾರಿ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಈಗ ಜೈಲಿನ ನಿಯಮಗಳ ಪ್ರಕಾರವೇ ಆಹಾರವನ್ನು ಸೇವಿಸಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ್ಶನ್ ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ- ಪತ್ನಿ ವಿಜಯಲಕ್ಷ್ಮಿ ವಿವರಿಸಿದ್ದು ಹೀಗೆ

    ದರ್ಶನ್ ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ- ಪತ್ನಿ ವಿಜಯಲಕ್ಷ್ಮಿ ವಿವರಿಸಿದ್ದು ಹೀಗೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ಹೊರವಲಯದ ಹಿನಕಲ್ ಬಳಿ ಈ ಅಪಘಾತ ನಡೆದಿದ್ದು, ದರ್ಶನ್ ಅವರ ಬಲಗೈ ಮೂಳೆ ಮುರಿದಿದೆ. ಸದ್ಯ ದರ್ಶನ್ ಅವರ ಜೊತೆ ಪತ್ನಿ ವಿಜಯಲಕ್ಷ್ಮಿ ಮಾತನಾಡಿ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದರು.

    ದರ್ಶನ್ ಅವರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಸದ್ಯ ಅವರಿಗೆ ಏನೂ ಆಗಿಲ್ಲ, ಅವರು ಕ್ಷೇಮವಾಗಿದ್ದಾರೆ. ಅಭಿಮಾನಿಗಳು ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ದರ್ಶನ್ ಅವರ ಕೈಗೆ ಪೆಟ್ಟಾಗಿ ಮೂಳೆಗೆ ಏಟು ಬಿದಿದ್ದೆ. ಸ್ವಲ್ಪ ವಿಶ್ರಾಂತಿ ಪಡೆದರೆ ಅವರು ಬೇಗ ಗುಣವಾಗುತ್ತಾರೆ ಎಂದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ತಿಳಿಸಿದರು. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತ

    ಸದ್ಯ ದರ್ಶನ್ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಒಂದು ಗಂಟೆ ನಂತರ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತದೆ. ದರ್ಶನ್ ಅವರ ತಾಯಿ, ತಮ್ಮ ದಿನಕರ್ ಕೂಡ ಆಸ್ಪತ್ರೆಗೆ ಬರುತ್ತಿದ್ದಾರೆ. ಅಲ್ಲದೇ ಹಿರಿಯ ನಟ ದೇವರಾಜ್ ಅವರ ಬಗ್ಗೆಯೂ ಮಾತನಾಡಿದರು. ದೇವರಾಜ್ ಅವರು ಕ್ಷೇಮವಾಗಿದ್ದಾರೆ. ಅವರ ಕುಟುಂಬದವರು ಕೂಡ ಇಲ್ಲಿಯೇ ಇದ್ದಾರೆ. ದೇವರಾಜ್ ಹಾಗೂ ಪ್ರಜ್ವಲ್ ಕ್ಷೇಮವಾಗಿದ್ದಾರೆ ಎಂದರು. ಇದನ್ನೂ ಓದಿ: ದರ್ಶನ್ ಕಾರ್ ಅಪಘಾತದ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಹೀಗಂದ್ರು

    ಭಾನುವಾರ ದರ್ಶನ್, ದೇವರಾಜ್ ಹಾಗು ಪ್ರಜ್ವಲ್ ದೇವರಾಜ್ ಅವರು ಮೃಸೂರಿನ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದರು. ಅಷ್ಟೇ ಅಲ್ಲದೇ ಪ್ರಾಣಿಗಳನ್ನು ದತ್ತು ಪಡೆದುಕೊಂಡು ಅರಮೆನೆಯ ಸುತ್ತ ಓಡಾಡಿ, ಮಾವಾಡಿಗಳಿಗೆ ಊಟ ಮಾಡಿಸಿ, ಯದುವೀರ್ ಅವರೊಡನೆ ಮಾತನಾಡಿ ಇಂದು ಬೆಳಗಿನ ಜಾವ ಹೊರಟ್ಟಿದ್ದರು. ಒಂದೇ ಕಾರಿನಲ್ಲಿ ದರ್ಶನ್, ನಟರಾದ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮೈಸೂರಿನ ಹೊರವಲಯದ ಹಿನಕಲ್ ಬಳಿ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಪಘಾತದ ಬಳಿಕ ನಾಪತ್ತೆಯಾಗಿದ್ದ ದರ್ಶನ್ ಕಾರ್ ಪತ್ತೆ

    ಪರಿಣಾಮ ಅಪಘಾತದಲ್ಲಿ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಈ ಘಟನೆಯಲ್ಲಿ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆದಿದ್ದಾರೆ. ಮೈಸೂರಿನಲ್ಲಿ ಮುಂಜಾನೆ ಮಳೆಯಾಗುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದ ಪರಿಣಾಮ ಅಪಘಾತವಾಗಿದೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವ ಡಿಕೆಶಿಯ ಆರೋಗ್ಯ ವಿಚಾರಿಸಿದ್ರು ಸಿಎಂ ಕುಮಾರಸ್ವಾಮಿ

    ಸಚಿವ ಡಿಕೆಶಿಯ ಆರೋಗ್ಯ ವಿಚಾರಿಸಿದ್ರು ಸಿಎಂ ಕುಮಾರಸ್ವಾಮಿ

    ಬೆಂಗಳೂರು: ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಇಂದು ಬೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಎಚ್‍ಡಿಕೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಬೇಗ ಗುಣಮುಖರಾಗುವಂತೆ ಹೇಳಿರುವುದಾಗಿ ತಿಳಿಸಿದ್ದಾರೆ. ಭೇಟಿ ವೇಳೆ ಸಿಎಂ ಅವರಿಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಾಥ್ ನೀಡಿದ್ದಾರೆ.

    ಫುಡ್ ಪಾಯ್ಸನ್‍ನಿಂದ ಅನಾರೋಗ್ಯಕ್ಕೊಳಗಾಗಿ ಮೂರು ದಿನಗಳ ಹಿಂದೆ ಡಿಕೆಶಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇರಿಕೆ ಕಂಡುಬಂದಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.

    ಏನಾಗಿತ್ತು?:
    ಕಲಬುರಗಿಯಲ್ಲಿ ಪ್ರವಾಸ ಮುಗಿಸಿದ ಬಳಿಕ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿಗೆ ಬಂದ ಬಳಿಕ ತೀವ್ರವಾಗಿ ವಾಂತಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಂದು ನಡೆದಿದ್ದ ಕನಕಪುರ ಕಾರ್ಯಕ್ರಮ ರದ್ದುಗೊಳಿಸಿ, ಕಗ್ಗಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ ಬಳಿಕ ಸಚಿವರಿಗೆ ಕನಕಪುರದ ಸ್ವಗೃಹದಲ್ಲಿ ಐವರು ವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಲಾಗಿತ್ತು.

    ಹೈದರಾಬಾದ್ ನಿಂದ ಹೊರಟಿದ್ದ ವಿಮಾನದಲ್ಲಿ ಸ್ಯಾಂಡ್ ವಿಚ್ ತಿಂದ ಪರಿಣಾಮ ಸಚಿವರ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿತ್ತು. ಪರಿಣಾಮ ನಿತ್ರಾಣಗೊಂಡಿರುವ ಶಿವಕುಮಾರ್ ಅವರಿಗೆ ವೈದ್ಯರು ಗ್ಲುಕೋಸ್ ಹಾಕಿ, ಚಿಕಿತ್ಸೆ ನೀಡಿದ್ದರು. ಸದ್ಯ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಆರೋಗ್ಯದಲ್ಲಿ ಏರುಪೇರು!

    ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಆರೋಗ್ಯದಲ್ಲಿ ಏರುಪೇರು!

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ವಿ.ಕೆ. ಶಶಿಕಲಾರವರ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರು ಜೈಲಿನಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿ ಖೈದಿಯಾಗಿರುವ ಶಶಿಕಲಾರವರ ಆರೋಗ್ಯದಲ್ಲಿ ಶುಕ್ರವಾರ ಬೆಳಗ್ಗೆ ಏರುಪೇರು ಕಂಡುಬಂದಿದೆ. ಪದೇ ಪದೇ ಅವರ ಬಿಪಿ ಹಾಗೂ ಶುಗರ್ ಪ್ರಮಾಣ ಹೆಚ್ಚಳವಾಗುತ್ತಿದ್ದು, ಹೀಗಾಗಿ ವೈದ್ಯರು ಜೈಲಿನಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲಿನ ಮೂಲಗಳು ಮಾಹಿತಿ ನೀಡಿವೆ.

    ಶಶಿಕಲಾ ಕಳೆದ ಆರು ತಿಂಗಳ ಹಿಂದೆ ಅತಿಯಾದ ಶುಗರ್ ಕಾಣಿಸಿಕೊಂಡು ಚೆಂತರಿಸಿಕೊಂಡಿದ್ದರು. ಒಂದು ವೇಳೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರದಿದ್ದರೆ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸುವ ಕುರಿತು ಜೈಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ಆರೋಗ್ಯ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡಿದ ರಾಜನಾಥ್ ಸಿಂಗ್ 

    ವಾಜಪೇಯಿ ಆರೋಗ್ಯ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡಿದ ರಾಜನಾಥ್ ಸಿಂಗ್ 

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಕ್ಷೀಣಿಸುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಗೊಂದಲವನ್ನು ಉಂಟು ಮಾಡಿದೆ.

    ವಾಜಪೇಯಿ ಅವರ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಇಂದು ಬಿಜೆಪಿ ದೇಶದ ಸ್ಥಾಪಿಸುವರಲ್ಲಿ ಅಟಲ್ ಜೀ ಮೊದಲ ಸ್ಥಾನದಲ್ಲಿ ಬರುತ್ತಾರೆ. ಬಿಜೆಪಿ ಆಧಾರ ಸ್ತಂಭವಾಗಿದ್ದಂತಹ ಹಿರಿಯ ನಾಯಕ, ಮಾಜಿ ಪ್ರಧಾನಿಗಳು ಇಂದು ನಮ್ಮ ಮಧ್ಯೆಯಿಲ್ಲ. ಅವರಿಗೆ ಶ್ರದ್ಧಾಂಜಲಿ ಕೋರುತ್ತೇನೆ ಅಂತಾ ಹೇಳಿದರು. ಆದ್ರೆ ಆಸ್ಪತ್ರೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗಗೊಂಡಿಲ್ಲ.

    ವಾಜಪೇಯಿ ಅವರ ಆರೋಗ್ಯದಲ್ಲಿ ನಿನ್ನೆ ಮತ್ತೆ ಏರುಪೇರಾಗಿದ್ದು, ಸ್ಥಿತಿ ಗಂಭೀರವಾಗಿರುವುದಾಗಿ ಏಮ್ಸ್ ಆಸ್ಪತ್ರೆ ಪ್ರಕಟಿಸಿತ್ತು. ಆದ್ರೆ ಇಂದು ಮತ್ತೆ ಅವರ ಸ್ಥಿತಿ ಗಂಭೀರವಾಗಿದ್ದು, ಗಣ್ಯಾತೀಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿತ್ತು. ಮಾಜಿ ಪ್ರಧಾನಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಪ್ರದೇಶದಲ್ಲಿ ನಡೆಯುವ ಬಿಜೆಪಿಯ ಎಲ್ಲಾ ಚುನಾವಣಾ ಯಾತ್ರೆಗಳನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಇಂದಿನ ಎಲ್ಲಾ ಬಿಜೆಪಿ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಪ್ರಧಾನಿ ಕಾರ್ಯಾಲಯ ಕೂಡ ಪ್ರಕಟಣೆ ಹೊರಡಿಸಿತ್ತು.

    ಗ್ವಾಲಿಯರ್ ಮತ್ತು ಆಗ್ರಾದಲ್ಲಿರುವ ವಾಜಪೇಯಿ ಸಂಬಂಧಿಕರು ಶೀಘ್ರವೇ ಆಸ್ಪತ್ರೆಗೆ ಬರುವಂತೆ ಏಮ್ಸ್ ಸೂಚನೆ ನೀಡಿತ್ತು. ಈಗಾಗಲೇ ಆಸ್ಪತ್ರೆಗೆ ಆರೋಗ್ಯ ಸಚಿವ ಜೆ.ಪಿ ನಡ್ವಾ, ಎಲ್ ಕೆ ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಜಪೇಯಿ ಕುಟುಂಬಸ್ಥರು ಈಗಾಗಲೇ ಜಮಾಯಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.

    ಆಸ್ಪತ್ರೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಬಿಜೆಪಿ ನಾಯಕರ ದಂಡೇ ಆಸ್ಪತ್ರೆಗೆ ಹರಿದುಬರುತ್ತಿದೆ. ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಆಮ್ಲಜನಕದ ಬೆಂಬಲ ನೀಡಲಾಗುತ್ತಿದೆ ಎಂದು ಬುಧವಾರ ಏಮ್ಸ್ ಆಸ್ಪತ್ರೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ಆರೋಗ್ಯದಲ್ಲಿ ಏರುಪೇರು- ದಾವಣಗೆರೆ, ಚಿತ್ರದುರ್ಗದಲ್ಲಿ ವಿಶೇಷ ಪೂಜೆ

    ವಾಜಪೇಯಿ ಆರೋಗ್ಯದಲ್ಲಿ ಏರುಪೇರು- ದಾವಣಗೆರೆ, ಚಿತ್ರದುರ್ಗದಲ್ಲಿ ವಿಶೇಷ ಪೂಜೆ

    ದಾವಣಗೆರೆ/ ಚಿತ್ರದುರ್ಗ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.

    ಅಜಾತಶತ್ರು ವಾಜಪೇಯಿ ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ದಾವಣಗೆರೆಯ ನಿಟ್ಟುವಳ್ಳಿ ಆಂಜನೇಯ ದೇವಸ್ಥಾನದಲ್ಲಿ ಈ ವಿಶೇಷ ಪೂಜೆಯನ್ನು ನೆರವೇರಿಸುತ್ತಿದ್ದಾರೆ.

    ಚಿತ್ರದುರ್ಗ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕೂಡ ಪೂಜೆ ಸಲ್ಲಿಸುತ್ತಿದ್ದಾರೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ ಹಾಗೂ ಕಾರ್ಯಕರ್ತರಿಂದ ಈ ಪೂಜೆ ನಡೆಯುತ್ತಿದೆ. ಅಜಾತಶತ್ರು ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಚೇತರಿಕೆ ಕಾಣಲಿ. ಆರೋಗ್ಯವಾಗಿ ಗುಣಮುಖರಾಗಲಿ ಅಂತ ಪೂಜೆ ಸಲ್ಲಿಸಲಾಗುತ್ತಿದೆ.

    ಮಧ್ಯಪ್ರದೇಶದಲ್ಲಿ ನಡೆಯುವ ಬಿಜೆಪಿಯ ಎಲ್ಲಾ ಚುನಾವಣಾ ಯಾತ್ರೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೇ ಇಂದಿನ ಎಲ್ಲಾ ಬಿಜೆಪಿ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಪ್ರಧಾನಿ ಕಾರ್ಯಾಲಯ ಈಗಾಗಲೇ ಪ್ರಕಟಣೆ ಹೊರಡಿಸಿದೆ. ಗ್ವಾಲಿಯರ್ ಮತ್ತು ಆಗ್ರಾದಲ್ಲಿರುವ ವಾಜಪೇಯಿ ಸಂಬಂಧಿಕರು ಶೀಘ್ರವೇ ಆಸ್ಪತ್ರೆಗೆ ಬರುವಂತೆ ಏಮ್ಸ್ ಸೂಚನೆ ನೀಡಿದೆ. ಈಗಾಗಲೇ ಆಸ್ಪತ್ರೆಗೆ ಆರೋಗ್ಯ ಸಚಿವ ಜೆ.ಪಿ ನಡ್ವಾ, ಎಲ್ ಕೆ ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಜಪೇಯಿ ಕುಟುಂಬಸ್ಥರು ಈಗಾಗಲೇ ಜಮಾಯಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.

    ಆಸ್ಪತ್ರೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಬಿಜೆಪಿ ನಾಯಕರ ದಂಡೇ ಆಸ್ಪತ್ರೆಗೆ ಹರಿದುಬರುತ್ತಿದೆ. ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಆಮ್ಲಜನಕದ ಬೆಂಬಲ ನೀಡಲಾಗುತ್ತಿದೆ ಎಂದು ಬುಧವಾರ ಏಮ್ಸ್ ಆಸ್ಪತ್ರೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv