Tag: health

  • ನೂರು ವರ್ಷದ ದಾಖಲೆ ಸೈಡಿಗಟ್ಟಿದ ನಿನ್ನೆಯ ಬಿಸಿಲು!

    ನೂರು ವರ್ಷದ ದಾಖಲೆ ಸೈಡಿಗಟ್ಟಿದ ನಿನ್ನೆಯ ಬಿಸಿಲು!

    -ಕಾಯಿಲೆ ಬರುತ್ತೆ ಹುಷಾರು…!

    ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಗುರುವಾರದ ಬಿಸಿಲಿನ ತಾಪ ನೂರು ವರ್ಷದ ದಾಖಲೆಯನ್ನು ಮುರಿದಿದೆ.

    ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಿಸಿಲು ನೂರು ವರ್ಷದ ದಾಖಲೆಯನ್ನು ಮುರಿದಿದೆ. ವಾಡಿಕೆಗಿಂತ ಬರೋಬ್ಬರಿ ಎರಡರಿಂದ ಐದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ.

    ದಕ್ಷಿಣ ಒಳನಾಡಿನ ಭಾಗದಲ್ಲಿ 1996 ರಲ್ಲಿ 37.3 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ವಾಡಿಕೆಯ ಪ್ರಕಾರ ಮಾರ್ಚ್ ಮೊದಲ ವಾರದಲ್ಲಿ 32 ರಿಂದ 33 ಡಿಗ್ರಿ ಇರಬೇಕಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬರೋಬ್ಬರಿ 37, 38, 40 ಡಿಗ್ರಿ ತಾಪಮಾನ ರೆಕಾರ್ಡ್ ಆಗಿದೆ. ಆದರೆ ಕರಾವಳಿ ಭಾಗ ಸೇರಿದಂತೆ ಉತ್ತರ ಒಳನಾಡಿನಲ್ಲಿ ಕೊಂಚ ಬಿಸಿಲಿನ ಪ್ರಮಾಣ ತಗ್ಗಿದೆ. ಹೀಟ್ ವೇವ್ (ಬಿಸಿ ಗಾಳಿ) ಸೃಷ್ಟಿಯಾಗಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಬಿಸಿಲು ಏರಲಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣವೂ ಇಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕಾಯಿಲೆ ಬರುತ್ತೆ ಹುಷಾರು:
    * ಬಿಸಿಲು ಪ್ರಮಾಣ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ವಾತಾವರಣದಲ್ಲಿ ತೇವಾಂಶದ ಪ್ರಮಾಣವೂ ಇಲ್ಲ. ಆದ್ದರಿಂದ ನಾನಾ ಕಾಯಿಲೆ ಬರುತ್ತದೆ. ಮುಖ್ಯವಾಗಿ ಡಿ-ಹೈಡ್ರೇಟ್ ಅಥವಾ ದೇಹ ನಿರ್ಜಲೀಕರಣ ವಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ನೀರು ಸೇವಿಸಿರಿ.
    * ಮಧ್ಯಾಹ್ನ ಒಂದರಿಂದ ಮೂರು ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುತ್ತದೆ. ಈ ವೇಳೆ ಸಾಧ್ಯವಾದಷ್ಟು ಹೊರಗಡೆ ಹೋಗೋದನ್ನು ಕಡಿಮೆ ಮಾಡಿ. ಇಂತಹ ಸಂದರ್ಭಗಳಲ್ಲಿ ಬಿಸಿಲನ್ನು ತಡೆಯಲು ಛತ್ರಿ, ಸನ್ ಗ್ಲಾಸ್ ಬಳಸಿ.
    * ವಯಸ್ಸಾದವರು, ಮಕ್ಕಳು ಹಾಗೂ ಕಾಯಿಲೆಯಿಂದ ಬಳಲುತ್ತಿರುವವರು ಬಿಸಿಲನ್ನು ಅವೈಡ್ ಮಾಡೋದು ಉತ್ತಮ.
    * ದೇಹಕ್ಕೆ ಹಿತಕರವಾದ ತೆಳು ಕಾಟನ್ ಬಟ್ಟೆ ಧರಿಸಿ.
    * ನೀರಿನಂಶವಿರುವ ಹಣ್ಣನ್ನು ಹೆಚ್ಚು ಸೇವಿಸಿ.
    * ಜಂಕ್ ಫುಡ್ ಮುಟ್ಟಬೇಡಿ. ಕರಿದ ಪದಾರ್ಥಗಳು ತಿನ್ನಬೇಡಿ.
    * ಅಲರ್ಜಿ ಸಮಸ್ಯೆ, ಕಣ್ಣಿನ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುವುರಿಂದ ಆರೋಗ್ಯದ ಬಗ್ಗೆ ಗಮನ ಇರಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

    ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

    ರಾಯಚೂರು: 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ  ಜಿಲ್ಲೆಯ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಇಂದು ಮಧ್ಯಾಹ್ನದ ಸಮಯದಲ್ಲಿ ಬಾಲಕಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆಕೆಯನ್ನು ಹಿಂಬಾಲಿಸಿದ ಆದೇ ಗ್ರಾಮದ ಯಮನಪ್ಪ (20), ರಂಗಪ್ಪ (21) ಮತ್ತು ಮಂಜು (20) ಮೂವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಆದೇ ಗ್ರಾಮದ ಯುವಕರಾದ ಕಾರಣ ಬಾಲಕಿ ಪೋಷಕರಿಗೆ ಕೃತ್ಯದ ಬಗ್ಗೆ ಹೇಳಿದ್ದು, ಪೋಷಕರು ಸಿರವಾರ ಪೊಲೀಸರಿಗೆ ದೂರು ನೀಡಿದ್ದಾರೆ.

    ಆರೋಪಿಗಳ ಕೃತ್ಯದಿಂದ ನಿತ್ರಾಣಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸದ್ಯ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂಬ ಮಾಹಿತಿ ಲಭಿಸಿದೆ. ಪ್ರಕರಣದ ಬಗ್ಗೆ ದೂರು ದಾಖಲಿಸಿ ಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೇ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ವರೋಗಕ್ಕೂ ಪನ್ನೀರು ಎಳನೀರು

    ಸರ್ವರೋಗಕ್ಕೂ ಪನ್ನೀರು ಎಳನೀರು

    ಬೇಸಿಗೆ ಬಿಸಿಲಿಗೆ ಎನಾದರೂ ತಂಪು ಪಾನೀಯ ಕುಡಿಯೋಕೆ ಸಿಕ್ರೆ ಸಾಕಪ್ಪ ಅಂತ ಬಹಳಷ್ಟು ಮಂದಿ ಕೂಲ್ ಡ್ರಿಂಕ್ಸ್ ಮೊರೆ ಹೋಗ್ತಾರೆ. ಫ್ರಿಡ್ಜನಲ್ಲಿ ಇಟ್ಟ ಐಸ್ ಬಳಸುವ ತಂಪಾದ ಪಾನೀಯಗಳನ್ನು ಕುಡಿದ ಕ್ಷಣ ಹಾಯಾಗಿ ಅನಿಸುತ್ತೆ. ಆದರೆ ನೀವು ಕುಡಿಯುವ ಕೂಲ್ ಡ್ರಿಂಕ್ಸ್ ನಿಂದ ಆರೋಗ್ಯಕ್ಕೆ ಎಷ್ಟು ಹಾನಿ ಅಂತ ಯೋಚಿಸೊಲ್ಲ. ಸುಮ್ಮನೆ ಕೆಮಿಕಲ್ ಮಿಶ್ರಿತ, ತುಂಬಾ ದಿನಗಳಿಂದ ಸ್ಟೋರ್ ಮಾಡಿಡುವ ಪಾನೀಯಗಳನ್ನು ಕುಡಿಯುವ ಬದಲು ಆರೋಗ್ಯಕ್ಕೆ ಹಿತವಾದ ಎಳನೀರನ್ನು ಕುಡಿಯಿರಿ. ಕೆಲವರಿಗೆ ಎಳನೀರಿನ ವಿಶೇಷತೆ ಗೊತ್ತಿರಲ್ಲ. ಯಾಕೆ ಎಳನೀರು ಆರೋಗ್ಯಕ್ಕೆ ಸ್ನೇಹಿ ಎಂಬ ವಿಚಾರವು ತಿಳಿದಿರಲ್ಲ.

    ಅದಕ್ಕೆ ನಾವು ಎಳನೀರು ಯಾಕೆ ಕುಡಿಬೇಕು? ಅದರ ಮಹತ್ವ ಏನು? ಇದರ ಉಪಯೋಗವೇನು ಅಂತ ನಿಮಗೆ ತಿಳಿಸುತ್ತೇವೆ. ನೋಡೋಕೆ ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಆದ್ರೆ ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ವರ್ಷವಿಡಿ ದೊರೆಯುತ್ತದೆ. ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ. ಎಳನೀರಿನ ಉಪಯೋಗ ಕೇವಲ ಕುಡಿಯುವುದಕ್ಕಲ್ಲ, ಸರಿಯಾಗಿ ಬಳಸಿದರೆ ದೇಹದ ಹೊರಭಾಗಗಳಾದ ಚರ್ಮ ಮತ್ತು ಕೂದಲ ಆರೈಕೆಗೂ ಒಳ್ಳೆಯದು.

    ಏಳನೀರ ಉಪಯೋಗಗಳೇನು?

    ದೇಹಕ್ಕೆ ಬೇಕಾದ ಬಹುತೇಕ ನೀರಿನ ಅಗತ್ಯತೆಗಳನ್ನು ಪೂರೈಸುತ್ತದೆ:
    ಎಳನೀರು ಒಂದು ಜೀವಾಮೃತ. ಇದರಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ದೈಹಿಕ ಚಟುವಟಿಕೆಗಳಿಗೆ ಈ ನೀರು ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಶರೀರ ತನ್ನ ಚಟುವಟಿಕೆಗಳನ್ನು ಹೆಚ್ಚು ಸಮಯ ನಿರ್ವಹಿಸುವುದಕ್ಕೆ ಸಹಾಯ ಮಾಡುತ್ತದೆ. ಹೆಚ್ಚಿನ ದೈಹಿಕ ಶ್ರಮವುಳ್ಳ ಕೆಲಸಕ್ಕೆ ಪ್ರತಿದಿನ ಒಂದಾದರೂ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ.

    ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ:
    ಎಳನೀರಿನಲ್ಲಿ ಫೋಲಿಕ್ ಆ್ಯಸಿಡ್, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ಇದೆ. ಇವುಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ. ಇದರಿಂದ ಆಹಾರಗಳ ಉತ್ತಮ ಅಂಶಗಳು ದೇಹಕ್ಕೆ ಸುಲಭವಾಗಿ ಲಭ್ಯವಾಗಿ ಆರೋಗ್ಯ ವೃದ್ಧಿಸುತ್ತದೆ.

    ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ:
    ಎಳನೀರಿನಲ್ಲಿ ವಿವಿಧ ಪೌಷ್ಠಿಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಸೋಡಿಯಂ ಇದ್ದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕ್ಲೋರೈಡ್ ಇವೆ. ಆದರಿಂದ ದೇಹಕ್ಕೆ ಶಕ್ತಿ ಒಮ್ಮೆಲೇ ಬಿಡುಗಡೆಯಾಗದೇ ನಿಧಾನಕ್ಕೆ ಶಕ್ತಿ ಪೂರೈಸುತ್ತಾ ಹೋಗುತ್ತದೆ. ಇದೇ ಕಾರಣದಿಂದ ಇಡೀ ದಿನ ದೈಹಿಕ ಕೆಲಸವನ್ನು ಹೆಚ್ಚಿನ ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

    ಮೂಳೆಗಳು ಗಟ್ಟಿಗೊಳ್ಳುತ್ತವೆ:
    ಹಾಲಿನ ಮೂಲಕ ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರಕುತ್ತದೆ. ಆದರೆ ಎಳನೀರು ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ನೀಡುತ್ತದೆ. ಈ ಮೂಲಕ ಮೂಳೆಗಳು ದೃಢವಾಗುವ ಜೊತೆಗೇ ಸ್ನಾಯು ಮತ್ತು ಅಂಗಾಂಶಗಳೂ ಉತ್ತಮಗೊಳ್ಳುತ್ತವೆ.

    ಮಧುಮೇಹವನ್ನು ನಿಯಂತ್ರಿಸುತ್ತದೆ:
    ಎಳನೀರಿನಲ್ಲಿ ಸಕ್ಕರೆ ಕಡಿಮೆ ಪ್ರಮಾಣದಲ್ಲಿರುವುದರಿಂದ ಮಧುಮೇಹಿಗಳೂ (ವೈದ್ಯರ ಸಲಹೆ ಮೇರೆಗೆ) ನಿಗದಿತ ಪ್ರಮಾಣದಲ್ಲಿ ಎಳನೀರು ಸೇವಿಸಬಹುದು. ಇದರಿಂದ ರಕ್ತಸಂಚಾರ ಉತ್ತಮಗೊಳ್ಳುವುದರಿಂದ ನಿಧಾನಕ್ಕೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

    ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ:
    ಚರ್ಮದ ಆರೈಕೆಗೆ ದೇಹದ ಒಳಗಿನಿಂದಲೇ ಹೆಚ್ಚಿನ ನೀರಿನ ಪೂರೈಕೆ ಆಗಬೇಕು. ಆಗ ಮಾತ್ರ ತ್ವಚೆಯ ಅಂದ ಚಂದ ವೃದ್ಧಿಯಾಗುತ್ತದೆ. ಎಳನೀರಿನ ಸೇವನೆಯಿಂದ ಚರ್ಮಕ್ಕೆ ಅವಶ್ಯವಾದ ನೀರು ಲಭ್ಯವಾಗುವ ಮೂಲಕ ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡುತ್ತದೆ. ಆಗ ಚರ್ಮ ಕಾಂತಿಯುಕ್ತವಾಗುತ್ತದೆ. ಒಣಗಿದ ಮತ್ತು ಬಿಳಿಚಿದ ಚರ್ಮವೂ ನಿಧಾನಕ್ಕೆ ಸೆಳೆತ ಪಡೆದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

    ಕೂದಲು ಉದುರುವುದನ್ನು ತಡೆಯುತ್ತದೆ:
    ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಇದರಿಂದ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ ಮತ್ತು ಉತ್ತಮ ಗುಣಮಟ್ಟದ ಕೂದಲು ಬೆಳೆಯಲು ನೆರವಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ. ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಈ ಪೋಷಕಾಂಶಗಳು ಕೂದಲಿಗೆ ಹೊಳಪು ನೀಡುವಲ್ಲಿ ಮತ್ತು ಸಾಫ್ಟ್ ಮಾಡುವಲ್ಲಿ ಉಪಯುಕ್ತವಾಗಿದೆ.

    ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ:
    ಒಂದು ವೇಳೆ ಯೂರಿಕ್ ಆ್ಯಸಿಡ್ ಅಥವಾ ಸಿಸ್ಟೈನ್ (uric acid or cystine) ಎಂಬ ಲವಣದಿಂದ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರಿಗಿಂತ ಉತ್ತಮವಾದ ಔಷದಿ ಇನ್ನೊಂದಿಲ್ಲ. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಶಿಯಂ ಈ ಲವಣಗಳನ್ನು ಕರಗಿಸಿಕೊಂಡು ಮೂತ್ರಪಿಂಡಗಳನ್ನು ಕಲ್ಲುಗಳಿಂದ ಮುಕ್ತಿಗೊಳಿಸುತ್ತದೆ.

    ಎಳನೀರಿನಲ್ಲಿರುವ ಈ ನೈಸರ್ಗಿಕ ಪೌಷ್ಠಿಕಾಂಶಗಳು ದುಬಾರಿ ಪಾನೀಯಗಳಲ್ಲಿ ಸಿಗುವುದಿಲ್ಲ. ಅಲ್ಲದೆ ದೇಹದ ಆರೋಗ್ಯವನ್ನು ವೃದ್ದಿಸಿಕೊಳ್ಳಲು ಎಳನೀರು ಎಷ್ಟು ಉಪಯುಕ್ತ ಅಂತ ನಿಮಗೆ ಗೊತ್ತಾಗಿದೆ ಅಲ್ವ. ಹಾನಿಕಾರಕ ಕೂಲ್ ಡ್ರಿಂಕ್ಸ್‍ಗಳನ್ನು ಬಿಟ್ಟು ಈಗಲಾದರೂ ಆರೋಗ್ಯಕ್ಕೆ ಹಿತವಾದ ಎಳನೀರು ಕುಡಿಯಿರಿ ಉತ್ತಮ ಆರೋಗ್ಯವನ್ನು ಪಡೆಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ ಕುಮಾರ್, ಪಾರ್ವತಮ್ಮ ಇಲ್ಲದೆ ಅನಾಥಳಾಗಿದ್ದೇನೆ- ವಿಜಯಲಕ್ಷ್ಮಿ ಕಣ್ಣೀರು

    ರಾಜ್ ಕುಮಾರ್, ಪಾರ್ವತಮ್ಮ ಇಲ್ಲದೆ ಅನಾಥಳಾಗಿದ್ದೇನೆ- ವಿಜಯಲಕ್ಷ್ಮಿ ಕಣ್ಣೀರು

    – ಸುದೀಪ್ ಬಿಟ್ರೆ ನನ್ನ ಮೇಲೆ ಯಾರಿಗೂ ಕರುಣೆ ಇಲ್ವ
    – ಶಿವಣ್ಣ, ರಾಘಣ್ಣ, ಪುನೀತ್, ಯಶ್, ದರ್ಶನ್ ಯಾರೂ ಮಾತಾಡಿಸ್ತಿಲ್ಲ

    ಬೆಂಗಳೂರು: ಸದ್ಯಕ್ಕೆ ನಾನು ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದೇನೆ. ಔಷಧಿ ಬದಲಾಯಿಸಿದ್ದರಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಆದ್ರೆ ಈ ಸಮಯದಲ್ಲಿ ನಾನು ರಾಜ್‍ಕುಮಾರ್ ಮತ್ತು ಪಾರ್ವತಮ್ಮ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಷ್ಟೊಂದು ನೋವು ಅನುಭವಿಸಲು ಅವರಿಬ್ಬರು ಬಿಡುತ್ತಿರಲಿಲ್ಲ. ಅವರಿಲ್ಲದೆ ನಾನು ಅನಾಥೆಯಾಗಿದ್ದೇನೆ ಎಂದು ನಟಿ ವಿಜಯಲಕ್ಷ್ಮಿ ಮತ್ತೆ ಕಣ್ಣೀರು ಹಾಕಿದ್ದಾರೆ.

    ಇಂಡಸ್ಟ್ರಿಯಲ್ಲಿ ಸುದೀಪ್ ಸರ್ ಬಿಟ್ಟು ಬೇರೆ ಯಾರಿಗೂ ಯಾಕೆ ಕರುಣೆ ಬಂದಿಲ್ಲ. ನಾನು ಏನ್ ತಪ್ಪು ಮಾಡಿದ್ದೀನಿ, ಯಾಕೆ ಎಷ್ಟು ಶಿಕ್ಷೆ ಕೊಡುತ್ತಿದ್ದೀರಿ ಎಂದು ವಿಡಿಯೋ ಮಾಡಿ ನಟಿ ವಿಜಯಲಕ್ಷ್ಮಿ ತನ್ನ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

    ಈ ಮಧ್ಯೆ ನನ್ನ ಮನಸ್ಸಿನಲ್ಲಿ ಒಂದು ಚಿಕ್ಕ ಕೊರಗು ಇದೆ. ನಾನಿರುವ ಪರಿಸ್ಥಿತಿಯಲ್ಲಿ ಶೀಘ್ರವೇ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ನನ್ನ ಬಳಿ ಇರುವುದಕ್ಕೆ ಮನೆಯಿಲ್ಲ. ಬಾಡಿಗೆ ಮನೆಗೆ ಹೋಗೋಣ ಎಂದರೆ ಅಡ್ವಾನ್ಸ್ ಕೊಡುವುದಕ್ಕೂ ಹಣ ಇಲ್ಲ. ಈ ಬಗ್ಗೆ ನಾನು ಮೂರು ತಿಂಗಳಿಂದ ಹೇಳುತ್ತಿದ್ದೇನೆ. ಆದ್ರೆ ಯಾರ ಬಳಿ ಹೇಳಿದರೂ ಮೊದಲಿಗೆ ಮಾತನಾಡುತ್ತಾರೆ. ನಂತರ ಅವರು ನನ್ನ ಫೋನ್ ರಿಸೀವ್ ಮಾಡುವುದಿಲ್ಲ. ಮನೆ ಇಲ್ಲದ ಕಾರಣ ನಾನು ಮನೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನನ್ನ ಆರೋಗ್ಯ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸುದೀಪ್ ಸರ್ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಸಹಾಯ ಮಾಡುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ರಾಜ್‍ಕುಮಾರ್ ಮತ್ತು ಪಾರ್ವತಮ್ಮ ಅವರು ಇರುತ್ತಿದ್ದರೆ ನಾನು ಇಷ್ಟೊಂದು ನೋವು ಅನುಭವಿಸಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಕಿಚ್ಚ

    ಸುದೀಪ್ ಸರ್ ಬಿಟ್ಟರೆ ಶಿವಣ್ಣ, ರಾಘಣ್ಣ, ಪುನೀತ್, ಯಶ್, ದರ್ಶನ್ ತುಂಬಾ ಜನರು ಇದ್ದಾರೆ. ಆದರೆ ಯಾರು ನನ್ನ ಬಳಿ ಮಾತನಾಡುತ್ತಿಲ್ಲ. ಶೀಘ್ರದಲ್ಲೇ ನಾನು ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಸುದೀಪ್ ಕೊಟ್ಟ ಒಂದು ಲಕ್ಷವನ್ನು ಆಸ್ಪತ್ರೆಗೆ ಕೊಟ್ಟಿದ್ದೇನೆ. ನಾನು ಮನೆಗೆ ಹೋಗಬೇಕು. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ನೆರವಿಗೆ ಧಾವಿಸಿದ ಫಿಲ್ಮ್ ಚೇಂಬರ್

    ವಿಜಯಲಕ್ಷ್ಮಿ ಅವರು ತೀವ್ರ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ಖರ್ಚು ಭರಿಸುವ ಹಣವಿಲ್ಲದೆ ವಿಜಯಲಕ್ಷ್ಮಿ ಅವರ ಸಹೋದರಿ ಚಿತ್ರರಂಗದ ಸಹಾಯ ಕೋರಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯಿಂದ ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಆಗಮಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು- ಸಹಾಯಕ್ಕಾಗಿ ಚಿತ್ರರಂಗದ ಮೊರೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಜೆಟ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಸಿಕ್ಕಿದ್ದೇನು?

    ಬಜೆಟ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಸಿಕ್ಕಿದ್ದೇನು?

    ಬೆಂಗಳೂರು: ಇಂದು ಸಿಎಂ ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ನಲ್ಲಿ 2019-20ನೇ ಸಾಲಿನ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ರಾಜ್ಯ ಸರ್ಕಾರದಿಂದ 950 ಕೋಟಿ ರೂ. ಹಾಗೂ ಕೇಂದ್ರದಿಂದ ಕೇವಲ 409 ಕೋಟಿ ರೂ. ಅನುದಾನ ದೊರೆಯಲಿದೆ.

    ಮಂಗಳೂರು, ತುಮಕೂರು, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಟ್ಟು 10 ಜಿಲ್ಲೆಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಸ್ತನರೇಖನ ವ್ಯವಸ್ಥೆ ಮಾಡಲು ಸಿಎಂ ಘೋಷಿಸಿದ್ದಾರೆ. ಇನ್ನೂ ತುಮಕೂರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 60 ಕೋಟಿ ರೂ.ಗಳ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸುವಂತೆ ತಿಳಿಸಿದ್ದಾರೆ.

    * ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯನ್ನ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು 50 ಕೋಟಿ ರೂ.ಅನುದಾನ.
    * ರಕ್ತ ಸಂಗ್ರಹಣೆ, ಶೇಖರಣೆ, ಮತ್ತು ವಿತರಣೆಗಾಗಿ ನಾಲ್ಕು ವಿಭಾಗೀಯ ಮಾದರಿ ರಕ್ತನಿಧಿ ಕೇಂದ್ರಗಳ ಸ್ಥಾಪನೆಗೆ 10 ಕೋಟಿ ರೂ. ಅನುದಾನ.
    * ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯನ್ನು 250 ಹಾಸಿಗೆಗಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರೂ. ಅನುದಾನ.
    * ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ವೇರ್‍ಹೌಸಿಂಗ್ ಸೊಸೈಟಿಯನ್ನ ನಿಗಮವನ್ನಾಗಿ ಮಾರ್ಪಾಡು.
    * ತಜ್ಞರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಆಯ್ದ 11 ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಡಿ.ಎನ್.ಬಿ. ಕೇಂದ್ರಗಳ ಪ್ರಾರಂಭ.

    * ವಿಜಯಪುರ ಜಿಲ್ಲೆಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಸೌಲಭ್ಯವುಳ್ಳ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ಪ್ರಾರಂಭ.
    * ಬೆಂಗಳೂರಿನ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಕ್ರೀಡಾ ರೋಗಿಗಳ ವಿಭಾಗ ಪ್ರಾರಂಭ ಹಾಗೂ ರೋಬೋಟಿಕ್ ಶಸ್ತ್ರ ಚಿಕಿತ್ಸೆ ಸೌಲಭ್ಯ ಒದಗಿಸಲು 10 ಕೋಟಿ ರೂ. ಅನುದಾನ.
    * ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸೂಕ್ತ ಆರೈಕೆಗಾಗಿ 49 ತಾಲೂಕು ಆಸ್ಪತ್ರೆಗಳಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರಗಳ ಸ್ಥಾಪನೆಗೆ 1 ಕೋಟಿ ರೂ. ಅನುದಾನ.
    * ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಮಂಗನ ಕಾಯಿಲೆಯ ಸಂಶೋಧನಾ ಮತ್ತು ಚಿಕಿತ್ಸಾ ಘಟಕ ಪ್ರಾರಂಭ.
    * ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಕ್ಷ-ಕಿರಣ ಕೇಂದ್ರಗಳ ಸುರಕ್ಷತೆಯನ್ನು ಅಟಾಮಿಕ್ ಎನರ್ಜಿ ರೀಸರ್ಚ್ ಬೋರ್ಡ್ ಮಾರ್ಗದರ್ಶನದಂತೆ ಮಾಡುವ ನಿಟ್ಟಿನಲ್ಲಿ ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪನೆ.
    * ಆಶಾ ಕಾರ್ಯಕರ್ತೆಯರ ಗೌರವಧನವನ್ನ 500 ರೂ.ಗಳಷ್ಟು ಹೆಚ್ಚಳ: 1ನೇ ನವೆಂಬರ್ 2019 ರಿಂದ ಜಾರಿಗೆ ಬರಲಿದ್ದು, 25 ಕೋಟಿ ರೂ.ಗಳ ಅನುದಾನ ನಿಗದಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದನಕ್ಕೆ ಹಾಜರಾದ ಬಳಿಕ ಆನಂದ್ ಸಿಂಗ್ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು

    ಸದನಕ್ಕೆ ಹಾಜರಾದ ಬಳಿಕ ಆನಂದ್ ಸಿಂಗ್ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು

    ಬೆಂಗಳೂರು: ಬಳ್ಳಾರಿಯ ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಮತ್ತೆ ಈಗ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆನಂಗ್ ಸಿಂಗ್ ಅವರು ಇಂದು ಕಪ್ಪು ಬಣ್ಣದ ಗ್ಲಾಸ್ ಧರಿಸಿ ಅಧಿವೇಶನಕ್ಕೆ ಹಾಜರಾಗಿದ್ದರು. ಕಲಾಪಕ್ಕೆ ಹಾಜರಾಗಿ ಓಡಾಟ ಹೆಚ್ಚಾಗಿದ್ದರಿಂದ ಅವರಿಗೆ ವಾಂತಿ ಹಾಗೂ ಎದೆ ನೋವು ಕಾಣಿಸಿಕೊಂಡಿದೆ. ಹಾಗಾಗಿ ಅವರು ವೈದ್ಯರ ಸಲಹೆ ಮೆರೆಗೆ ಮತ್ತೆ ಅಪೋಲೋ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಸದ್ಯ ಆನಂದ್ ಸಿಂಗ್ ಓಪಿಡಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡಯುತ್ತಿದ್ದಾರೆ.

    ಆನಂದ್ ಅವರ ಪಕ್ಕೆಲುಬು ಮುರಿದಿದ್ದರಿಂದ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಇಂದು ಕಲಾಪದಲ್ಲಿ ಭಾಗವಹಿಸಿಲು ಆನಂದ್ ಸಿಂಗ್ ವಿಧಾನಸೌಧ ಮೆಟ್ಟಿಲು ಹತ್ತಿದ್ದರಿಂದ ಅವರಿಗೆ ನೋವು ಹೆಚ್ಚಾಗಿತ್ತು. ಇದರಿಂದ ಅವರು ಮನೆಗೆ ತೆರಳುತ್ತಿದ್ದಂತೆ ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ವೈದ್ಯರ ಸಲಹೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅಪೋಲೋ ಆಸ್ಪತ್ರೆಯ ವೈದ್ಯರು ಒಂದು ವಾರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಆನಂದ್ ಸಿಂಗ್ ಸಹ ಇನ್ನೂ ಒಂದು ವಾರ ಚಿಕಿತ್ಸೆ ನಡೆಯಲಿದೆ ಎಂದು ತಿಳಿಸಿದ್ದರು. ಈ ಮಧ್ಯೆ ಆನಂದ್ ಸಿಂಗ್ ಮಂಗಳವಾರ ಆಸ್ಪತ್ರೆಯಿಂದ ದಿಢೀರನೇ ಡಿಸ್ಚಾರ್ಜ್ ಆಗಿದ್ದರು.

    ಜನವರಿ 19ರ ರಾತ್ರಿ ಈಗಲ್ ಟನ್ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಕುಡಿದು ಗಲಾಟೆ ನಡೆಸಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸ್ ವಿಶೇಷ ತಂಡಗಳ ಹುಡುಕಾಟ ನಡೆಸುತ್ತಿವೆ. ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.

    ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಅಮಾನತು ಮಾಡಲಾಗಿದೆ. ಕೆಪಿಸಿಸಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ಶಾಸಕ ಗಣೇಶ್ ಅವರನ್ನು ಅಮಾನತು ಮಾಡುವ ನಿರ್ಧಾರವನ್ನು ಕೈಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವೇಗೌಡರ ಆರೋಗ್ಯ ವಿಚಾರಿಸಿದ ನಟ ಶಿವಣ್ಣ

    ದೇವೇಗೌಡರ ಆರೋಗ್ಯ ವಿಚಾರಿಸಿದ ನಟ ಶಿವಣ್ಣ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಪತ್ನಿ ಗೀತಾ ಹಾಗೂ ಮಧು ಬಂಗಾರಪ್ಪ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

    ದೇವೇಗೌಡರಿಗೆ ಸ್ನಾಯು ಸೆಳೆತವಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಕಾಲು ಉದಿಕೊಂಡ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ದಂಪತಿ, ಮಧು ಬಂಗಾರಪ್ಪ ಭೇಟಿ ನೀಡಿ ಪದ್ಮನಾಭ ನಗರದ ನಿವಾಸಕ್ಕೆ ಆಗಮಿಸಿ ದೇವೇಗೌಡರ ಜೊತೆ ಮಾತನಾಡಿದ್ದಾರೆ.

    ದೆಹಲಿಯಿಂದ ಶುಕ್ರವಾರವಷ್ಟೇ ವಾಪಾಸ್ಸಾಗಿದ್ದ ದೇವೇಗೌಡರಿಗೆ ಶನಿವಾರ ಸ್ನಾಯು ಸೆಳೆತವಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಶನಿವಾರ ಬೆಳಗ್ಗೆ ಕೊಠಡಿ ಬಳಿ ದೇವೇಗೌಡರು ಹೋಗುತ್ತಿದ್ದ ವೇಳೆ ಕಾಲು ಎಡವಿದ್ದರಿಂದ ಅವರ ಕಾಲಿಗೆ ಏಟಾಗಿದ್ದು, ಕಾಲು ಊದಿಕೊಂಡಿತ್ತು. ಕಾಲು ನೋವಿನ ನಡುವೆಯೂ ಜನರಿಗೆ ಬೇಸರ ಆಗಬಾರದೆಂದು ತಮ್ಮ ನಿವಾಸಕ್ಕೆ ಬಂದಿರುವ ಜನರ ಸಮಸ್ಯೆಯನ್ನು ಆಲಿಸುತ್ತಿದ್ದರು.

    ಕಾಲಿನ ನೋವು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಪ್ರಧಾನಿ ದೇವೇಗೌಡ ಅವರು ದೆಹಲಿಗೆ ತೆರಳಲಿದ್ದಾರೆ. ನಾಳೆ ಸಂಸತ್‍ನ ಅಧಿವೇಶನದಲ್ಲಿ ದೇವೇಗೌಡರು ಬಜೆಟ್ ಕುರಿತ ಚರ್ಚೆಯಲ್ಲಿ ಭಾಷಣ ಮಾಡುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜಯನಗರದಲ್ಲೊಂದು ಅವಳಿ ಪಾರ್ಕ್

    ಜಯನಗರದಲ್ಲೊಂದು ಅವಳಿ ಪಾರ್ಕ್

    -ಇಲ್ಲಿಯ ಗಿಡಗಳ ಪರಿಮಳದಿಂದ ಚರ್ಮವ್ಯಾಧಿ, ಅಸ್ತಮಾ ನಿವಾರಣೆಯಂತೆ!

    ಬೆಂಗಳೂರು: ನಗರದಲ್ಲಿ ವಾಕಿಂಗ್, ಜಾಗಿಂಗ್ ಅಂದರೆ ನೆನಪಾಗೋದು ಪಾರ್ಕ್ ಗಳು. ನಗರದಲ್ಲಿ ಸಿಕ್ಕಾಪಟ್ಟೆ ಪಾರ್ಕ್ ಗಳಿವೆ. ಆದರೆ ಜಯನಗರದಲ್ಲಿರುವ ಪಾರ್ಕ್‌ಗೆ ಕಾಲಿಟ್ಟರೇ ಸಾಕು ನಿಮಗೆ ಅಂಟಿದ ರೋಗಗಳೆಲ್ಲ ಮಾಯವಾಗತ್ತವೆ.

    ಹೌದು..ಜಯನಗರದ ಯಡಿಯೂರು ವಾರ್ಡ್ ನ ಲಕ್ಷಣರಾವ್ ಉದ್ಯಾನವನದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಚ್ಚ ಹಸಿರು, ಕಾಲಿಡುತ್ತಿದ್ದಂತೆ ಮನ ತಣಿಸುವ ಆಹ್ಲಾದಕರ ವಾತಾವರಣ, ಹಸಿರ ಹುಲ್ಲಿಗೂ ಹೊಸ ಹುರುಪು, ಈಗ ತಾನೇ ಕಣ್ ಬಿಟ್ಟು ಚಿಗುರಿಗೂ ಚೇತನ. ಒಟ್ಟಿನಲ್ಲಿ ಕಾಂಕ್ರೀಟ್ ಕಾಡಿನಲ್ಲಿ ಅರಳಿನಿಂತಿರುವ ಪ್ರಕೃತಿ ವನಗಳು ಎಂಬಂತೆ ಭಾಸವಾಗುತ್ತದೆ.

    ಈ ಜೋಡಿ ಪಾರ್ಕ್ ಗಳ ಹೆಸರು ಧನ್ವಂತರಿ ಹಾಗೂ ಸಂಜೀವಿನಿ. ಸಿಲಿಕಾನ್ ಸಿಟಿ ಜನ ಒತ್ತಡದ ಬದುಕು ಹಾಗೂ ಮಾಲಿನ್ಯದಿಂದಾಗಿ ಅನೇಕ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದೆಲ್ಲದಕ್ಕೆ ಸಲ್ಯೂಶನ್ ಎಂಬಂತೆ ತಲೆಯೆತ್ತಿದೆ ಈ ಉದ್ಯಾನವನ. ಇದು ಸಾಮಾನ್ಯವಾದ ಪಾರ್ಕ್ ಅಲ್ಲ, ಬದಲಾಗಿ ವಿಶೇಷ ಔಷಧಿಯುಕ್ತ ಸಸ್ಯರಾಶಿಗಳ ವನ. ಈ ಪ್ರಕೃತಿ ವನಗಳು, ಡಿಸೆಂಬರ್ ನಲ್ಲಿ ಉದ್ಘಾಟನೆಗೊಂಡಿದ್ದು, 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವಿದ್ಯಾರ್ಥಿನಿ ನಿಸರ್ಗ ಹೇಳಿದ್ದಾರೆ.

    300ಕ್ಕೂ ಹೆಚ್ಚು ಆರ್ಯುವೇದದ ಔಷಧಿ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಇದರ ಮತ್ತೊಂದು ವಿಶೇಷ ವೆಂದರೆ ಈ ಗಿಡಗಳ ಪರಿಮಳದಿಂದಲೇ ಚರ್ಮವ್ಯಾಧಿ, ಅಸ್ತಮಾದಂತಹ ಅದೆಷ್ಟೋ ಕಾಯಿಲೆಗಳು ವಾಸಿಯಾಗುತ್ತವೆಯಂತೆ. ಹೀಗಾಗಿ ಪ್ರತಿನಿತ್ಯ ಬೆಳ್ಳಿಗ್ಗೆ ಹಾಗೂ ಸಂಜೆ ನೂರಾರು ವಾಯು ವಿಹಾರಿಗಳು ಇಲ್ಲಿಗೆ ಬಂದು 1.5 ಕಿ.ಮೀ ನಡೆದು ಸ್ವಚ್ಛ ಆರೋಗ್ಯಕರ ಗಾಳಿ ಸೇವಿಸುತ್ತಾರೆ ಎಂದು ಸ್ಥಳೀಯ ಸುಧಾಕರ್ ಪೈ ತಿಳಿಸಿದ್ದಾರೆ.

    ಆರ್ಯುವೇದದಿಂದಲೇ ಆರೋಗ್ಯವೆಂದು ಜನರು ಮತ್ತೆ ಪ್ರಕೃತಿ ಚಿಕಿತ್ಸೆಯತ್ತಾ ಹೊರಳುತ್ತಿದ್ದಾರೆ. ಶುದ್ಧ ಗಾಳಿ ನೀಡುತ್ತಿರುವ ಇಂತಹ ಸಸ್ಯರಾಶಿಯನ್ನು ಉಳಿಸಿ-ಬೆಳೆಸಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಣ್ಮನ ಸೆಳೆಯುವ ಸೌಂದರ್ಯಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

    ಕಣ್ಮನ ಸೆಳೆಯುವ ಸೌಂದರ್ಯಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

    ನಾವು ಚೆನ್ನಾಗಿ ಕಾಣಬೇಕು ಅಂತ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಎಲ್ಲರೂ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು, ಇನ್ನೂ ಚೆನ್ನಾಗಿ ಕಾಣಬೇಕು ಅಂತ ಅದೆಷ್ಟೋ ದುಬಾರಿ ಔಷಧಿಗಳನ್ನ, ಕ್ರೀಮ್‍ಗಳನ್ನ ಹಾಗೂ ಕೆಮಿಕಲ್ ಮಿಶ್ರಿತ ಕಾಸ್ಮೆಟಿಕ್ಸ್‍ಗಳನ್ನು ಬಳಸುತ್ತಾರೆ. ಅದರಲ್ಲೂ ಮಹಿಳೆಯರು ಸೌಂದರ್ಯದ ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಶ್ಯಾಂಪೂ, ಸ್ಕ್ರಬ್ ಅಂತ ಸಾಕಷ್ಟು ಹಣ ಖರ್ಚು ಮಾಡ್ತಾರೆ. ಇದೆಲ್ಲ ಸಾಲಲ್ಲ ಅಂತ ಬ್ಯೂಟಿ ಪಾರ್ಲರ್‍ಗೆ ಹೋಗಿ ಬ್ಯೂಟಿಷನ್ ಸಲಹೆ ಪಡೆಯುತ್ತಾರೆ.

    ಮಾರುಕಟ್ಟೆಯಲ್ಲಿ ವಿಧವಿಧವಾದ ಬ್ಯೂಟಿ ಪ್ರೊಡಕ್ಟ್ಸ್ ದೊರೆಯುತ್ತದೆ. ಅದರಲ್ಲಿ ಕೆಮಿಕಲ್ ಅಂಶ ಸಾಕಷ್ಟು ಇರುತ್ತೆ, ಇದರಿಂದ ತ್ವಚೆಯ ಸೌಂದರ್ಯ ಹಾಳಾಗುತ್ತದೆ. ಅಲ್ಲದೆ ಆರೋಗ್ಯದ ಮೇಲೂ ಈ ಪ್ರೊಡಕ್ಟ್ಸ್ ಪರಿಣಾಮ ಬೀರುತ್ತೆ. ಆದ್ರೆ ಇತ್ತೀಚೆಗೆ ಇವನ್ನೆಲ್ಲ ಅರಿತ ಜನರು ನೈಸರ್ಗಿಕವಾಗಿ ತಯಾರಾಗುವ ಬ್ಯೂಟಿ ಪ್ರೊಡಕ್ಟ್ಸ್ ಗಳ ಮೊರೆ ಹೋಗ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ನೈರ್ಸಗಿಕ ಅಂತ ಹೆಸರಿನಲ್ಲಿ ವಂಚನೆ ಮಾಡುತ್ತಿರೋ ಪ್ರೊಡಕ್ಟ್ಸ್ ಗಳ ಸಂಖ್ಯೆಯೇ ಹೆಚ್ಚಾಗಿದೆ.

    ಏನಪ್ಪಾ ಮಾಡೋದು, ಹೇಗೆ ನ್ಯಾಚುರಲ್ ಆಗಿ ಸೌಂದರ್ಯ ಪಡೆಯೋದು ಅಂತ ಯೊಚನೆ ಮಾಡ್ತಿದ್ದೀರಾ? ಇನ್ಮುಂದೆ ಆ ಚಿಂತೆ ಬಿಡಿ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು, ಎಲ್ಲರ ಕಣ್ಮನ ಸೆಳೆಯುವ ಆಕರ್ಷಕ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಲು ನೈಸರ್ಗಿಕವಾದ ಸುಲಭವಾದ ಬ್ಯೂಟಿ ಟಿಪ್ಸ್‍ಗಳು ಇಲ್ಲಿದೆ.

    5 ನ್ಯಾಚುರಲ್ ಬ್ಯೂಟಿ ಟಿಪ್ಸ್ ಯಾವುದು?

    1. ಕೂದಲ ಸೌಂದರ್ಯಕ್ಕೆ ಬಾಳೆಹಣ್ಣು ಮತ್ತು ಮೊಟ್ಟೆ ಹೇರ್ ಮಾಸ್ಕ್:
    ಕೂದಲು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲು ಉದುರುತ್ತಿದೆ, ಡ್ಯಾಮೇಜ್ ಆಗಿದೆ. ಆದ್ರೆ ಏನ್ ಮಾಡೋದು ಎಂದು ಚಿಂತೆ ಮಾಡೋದನ್ನ ಬಿಡಿ. ಇದಕ್ಕೆ ನಮ್ಮ ಬಳಿ ಒಂದು ಸಿಂಪಲ್ ಔಷಧಿ ಇದೆ. ಅದೇ ಬಾಳೆಹಣ್ಣು ಮತ್ತು ಮೊಟ್ಟೆ ಹೇರ್ ಮಾಸ್ಕ್. ಒಂದು ಕೋಳಿ ಮೊಟ್ಟೆ ಜೊತೆಗೆ ಬಾಳೆಹಣ್ಣನ್ನು ಸ್ಮ್ಯಾಷ್ ಮಾಡಿ. ಬಳಿಕ ಸ್ವಲ್ಪ ಗಟ್ಟಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಆ ಮಿಶ್ರಣವನ್ನು ನಿಮ್ಮ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಂಡು 10ರಿಂದ 30 ನಿಮಿಷ ಹಾಗೆಯೇ ಬಿಡಿ. ನಂತರ ತಲೆ ಸ್ನಾನ ಮಾಡಿ. ಹೀಗೆ ವಾರಕ್ಕೆ ಒಮ್ಮೆ ಈ ಹೇರ್ ಮಾಸ್ಕ್ ಬಳಸಿದರೆ ಕೂದಲ ಅಂದ ಚೆಂದ ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

    2. ಸಿಂಪಲ್ ಜೇನುತುಪ್ಪ ಫೇಸ್ ಪ್ಯಾಕ್:
    ಶುದ್ಧ ಜೇನುತುಪ್ಪದಲ್ಲಿ ನೈಸರ್ಗಿಕವಾದ ಬ್ಯಾಕ್ಟಿರಿಯಾ ವಿರುದ್ಧ ಹೊರಾಡುವ ಶಕ್ತಿ ಇರುತ್ತದೆ. ಅಲ್ಲದೆ ವೇಗವಾಗಿ ಕೋಮಲ ತ್ವಚೆ ಹಾಗೂ ಆಕರ್ಷಕ ಸೌಂದರ್ಯ ಪಡೆಯಲು ಇದು ಸಹಾಯ ಮಾಡುತ್ತದೆ. ವಾರಕ್ಕೊಮ್ಮೆ ಒಂದು ಚಮಚ ಶುದ್ಧ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. 5-10 ನಿಮಿಷ ಅದನ್ನ ಹಾಗೆ ಬಿಡಬೇಕು. ಬಳಿಕ ಉಗುರು ಬೆಚ್ಚನೆಯ ನೀರಲ್ಲಿ ಮುಖ ತೊಳೆದರೆ, ಡ್ರೈ ಸ್ಕಿನ್ ನಿವಾರಣೆಯಾಗಿ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.

    3. ಬಾಡಿ ಸ್ಕ್ರಬ್:
    2-3 ಚಮಚ ಆಲಿವ್ ಎಣ್ಣೆಗೆ ಸ್ವಲ್ಪ ಕಲ್ಲುಪ್ಪು ಬೆರೆಸಬೇಕು. ಬಳಿಕ ಈ ಮಿಶ್ರಣವನ್ನು ಇಡೀ ಮೈಗೆ ಹಚ್ಚಿ ಮಸಾಜ್ ಮಾಡಬೇಕು. 10- 30 ನಿಮಿಷಗಳ ಬಳಿಕ ಸ್ನಾನ ಮಾಡಿ. ಹೀಗೆ ವಾರಕ್ಕೆ 1-2 ಬಾರಿ ಮಾಡಿದರೆ ಡೆಡ್ ಸ್ಕಿನ್ ಹೋಗಿ ಕೋಮಲ ತ್ವಚೆ ನಿಮ್ಮದಾಗುತ್ತದೆ. ಅಷ್ಟೇ ಅಲ್ಲದೆ ಆಲಿವ್ ಎಣ್ಣೆಯನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

    4. ನ್ಯಾಚುರಲ್ ಕಂಡಿಷನರ್:
    ತೆಂಗಿನ ಎಣ್ಣೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇರುತ್ತದೆ. ತಲೆ ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ. ಬಳಿಕ ನಿಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ನಂತರ 2-3 ಗಂಟೆಗಳು ಹಾಗೆಯೇ ಬಿಡಿ, ಬಳಿಕ ಶೀಗೆಕಾಯಿ ಅಥವಾ ಕಡಿಮೆ ಕೆಮಿಕಲ್ ಇರುವ ಶ್ಯಾಂಪೂವನ್ನು ಬಳಸಿ ತಲೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ಅಲ್ಲದೇ ಕೂದಲ ಅಂದವೂ ಹೆಚ್ಚಾಗುತ್ತದೆ.

    5. ಸಿಂಪಲ್ ಶೇವಿಂಗ್ ಕ್ರೀಮ್:
    ಶೇವ್ ಮಾಡುವಾಗ ಅನೇಕ ಶೇವಿಂಗ್ ಕ್ರೀಮ್‍ಗಳನ್ನು ಬಳಸುತ್ತೇವೆ. ಇಂತಹ ಕ್ರೀಮ್‍ಗಳಲ್ಲಿ ಕೆಮಿಕಲ್ ಅಂಶ ಹೆಚ್ಚಾಗಿರುತ್ತದೆ. ಇದರಿಂದ ತ್ವಚೆಗೆ ಹಾನಿ ಉಂಟಾಗುತ್ತದೆ. ಉತ್ತಮ ಆರೋಗ್ಯಕರ ತ್ವಚೆಯನ್ನು ಪಡೆಯಲು ತೆಂಗಿನ ಎಣ್ಣೆ ಸಹಾಯ ಮಾಡುತ್ತದೆ. ಹೌದು ಶೇವ್ ಮಾಡಿದ ನಂತರ ಸ್ವಲ್ಪ ತೆಂಗಿನ ಎಣ್ಣೆಯನ್ನು ಶೇವ್ ಮಾಡಿದ ಭಾಗಕ್ಕೆ ಹಚ್ಚಿ, 5 – 10 ನಿಮಿಷದ ಬಳಿಕ ಮುಖ ತೊಳೆದರೆ ತ್ವಚೆಗೆ ಒಳ್ಳೆಯದು.

    ಹೀಗೆ ಮನೆಯಲ್ಲಿ ಸಿಗುವ ಸಿಂಪಲ್ ಪದಾರ್ಥಗಳನ್ನು ಬಳಸಿ ನಿಮ್ಮ ಸೌಂದರ್ಯದ ಆರೈಕೆ ಮಾಡಿ. ಕೆಮಿಕಲ್ ಮಿಶ್ರಿತ ಬ್ಯೂಟಿ ಪ್ರೊಡಕ್ಟ್ಸ್ ಗಳ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಪದಾರ್ಥವನ್ನು ಬಳಸಿದರೆ ತ್ವಚೆ ಹಾಗೂ ದೇಹದ ಸೌಂದರ್ಯವನ್ನು ಸುಲಭವಾಗಿ ವೃದ್ಧಿಸಿಕೊಳ್ಳಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಬೆಳಗ್ಗಿಗಿಂತ ಈಗ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದ್ದು, ಯಾರೂ ಕೂಡ ಮಠದತ್ತ ಬರಬೇಡಿ ಎಂದು ವೈದ್ಯ ಪರಮೇಶ್ ಅವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಆರೋಗ್ಯ ಸರಿಯಿಲ್ಲ ಎಂದು ಮಾಧ್ಯಮದ ಮೂಲಕ ತಿಳಿದುಕೊಂಡು ಎಲ್ಲರೂ ಬಂದು ಇಲ್ಲಿ ಇದ್ದುಕೊಂಡು ಅನಾನುಕೂಲ ಮಾಡಿಕೊಳ್ಳಬಾರದು. ಯಾಕಂದ್ರೆ ಇದರಿಂದ ಮಠದ ವ್ಯವಸ್ಥೆಗೂ ಅನಾನುಕೂಲವಾಗುತ್ತದೆ. ಹೀಗಾಗಿ ದಯವಿಟ್ಟು ಯಾರೂ ಮಠಕ್ಕೆ ಬಂದು ಶ್ರೀಗಳ ದರ್ಶನಕ್ಕಾಗಿ ಕಾಯಬೇಡಿ. ಮಠಕ್ಕೆ ದಯಮಾಡಿ ಯಾರೂ ಬರಬೇಡಿ. ಅಂತಹ ಏನಾದ್ರೂ ತೊಂದರೆಗಳಿದ್ದರೆ ನಾವೇ ಮಾಧ್ಯಮದ ಮುಖಾಂತರ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಾಮೀಜಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದೇವೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನ ಬಿಜಿಎಸ್ ಹಾಗೂ ಕೆಲ ತಜ್ಞ ವೈದ್ಯರನ್ನು ಬರಲು ಹೇಳಿದ್ದೇವೆ. ಈ ಮೂಲಕ ಚಿಕಿತ್ಸೆಗೆ ಸಲಹೆ ಕೊಡುವಂತೆ ಕೇಳಿಕೊಂಡಿದ್ದೇವೆ. ಹೀಗಾಗಿ ಅವರು ಶ್ರೀಘ್ರವೇ ತುಮಕೂರಿಗೆ ಬರಲಿದ್ದಾರೆ. ಇದಕ್ಕಾಗಿ ಸ್ವಲ್ಪ ಸಮಯ ಬೇಕು. ಸ್ವಾಮೀಜಿಗಳ ಆರೋಗ್ಯ ಗಂಭೀರವಾಗಿದ್ದರೂ ನಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದ್ರೆ ಸದ್ಯಕ್ಕೆ ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಂತಹ ಏನಾದ್ರೂ ತೊಂದರೆಗಳಾದರೆ ಚಿಕಿತ್ಸೆಯಲ್ಲಿ ಸರಿಯಾಗಿಲ್ಲ ಅಥವಾ ಸಮಸ್ಯೆಗಳಾದ್ರೆ ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv