Tag: health

  • ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಬೆಂಗಳೂರು: ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ ಜೀವ ತೆಗೆಯುತ್ತದೆ. ಕಲರ್ ಫುಲ್ ಕ್ರೀಂ ವೆರೈಟಿ ಚೆರ್ರಿಗಳನ್ನು ಹಾಕಿರುವ ಐಸ್ ಕ್ರೀಂ ಗಳನ್ನು ಬಾಯಿ ಚಪ್ಪರಿಸಿ ತಿನ್ನುವ ಮುನ್ನ ಈ ಸ್ಟೋರಿ ಓದಿ.

    ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ ತಿನ್ನುವ ಟ್ರೆಂಡ್ ನಷ್ಟೇ ಜೋರಾಗಿ ಗಾಡಿಯಲ್ಲಿ ಬರುವ ಐಸ್ ಕ್ರೀಂ ತಿನ್ನುವ ಟ್ರೆಂಡ್ ಸಹ ಪ್ರಾರಂಭವಾಗಿದೆ. ಆದರೆ ಇದು ಅಪಾಯಕಾರಿ ಎಂಬುದು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಹಿರಂಗವಾಗಿದೆ.

    ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಹಾಗೂ ಸೆಂಟರ್ ಗಳ ಮುಂದೆ ಹೀಗೆ ಎಲ್ಲ ಕಡೆ ಐಸ್ ಕ್ರೀಂ ಗಾಡಿಯವರು ಕಾಣಸಿಗುತ್ತಾರೆ. ಕಂಡ ತಕ್ಷಣ ವಿವಿಧ ಬಗೆಯ ಐಸ್ ಕ್ರೀಂಗಳನ್ನು ತಿನ್ನಲು ಬಯಸುತ್ತೇವೆ. ಆದರೆ ಟೇಸ್ಟಿ ಎಂದು ತಿನ್ನುವ ಐಸ್ ಕ್ರೀಂ ಗಾಡಿಗಳತ್ತ ಅಥವಾ ಗಾಡಿಗಳಲ್ಲಿನ ಕ್ರೀಂ, ಅದಕ್ಕೆ ಬಳಸುವ ನೀರು, ಪಾಚಿ ಕಟ್ಟಿರುವ ಬಾಕ್ಸ್ ನೋಡಿದರೆ ಖಂಡಿತಾ ಐಸ್ ಕ್ರೀಂ ತಿನ್ನುವ ಗೋಜಿಗೆ ಹೋಗಲ್ಲ.

    ಗಲೀಜು, ಪಾಚಿ ತುಂಬಿರುವ ನೀರು, ತೊಳೆಯದೇ ವರ್ಷ ಆಯಿತೇನೋ ಅನ್ನುವಷ್ಟೂ ಹಳೆಯ, ತುಕ್ಕು ಹಿಡಿದಿರುವ, ಅಲ್ಲಲ್ಲಿ ಕಪ್ಪು ಕಪ್ಪಾಗಿ ಗಲೀಜು ತುಂಬಿರುವ ಐಸ್ ಕ್ರೀಂ ಪೆಟ್ಟಿಗೆಯನ್ನು ಕಂಡರೆ ಗಾಬರಿಯಾಗುತ್ತದೆ. ಐಸ್ ಕ್ರೀಂ ನೋಡಿದರೇನೆ ವಾಕರಿಕೆ ಬರುವಂತೆ ಅನ್ನಿಸುತ್ತದೆ. ಈ ಐಸ್ ಕ್ರೀಂಗೆ ಬಳಸುವ ನೀರಿನಿಂದಲೇ ನಿಮಗೆ ರೋಗ ಬರುತ್ತದೆ. ಐಸ್ ಕ್ರೀಂನ್ನು ಕೋನ್‍ಗೆ ಹಾಕುವ ಚಮಚದೊಳಗೆ ಕೂಡ ಗಲೀಜು ತುಂಬಿರುತ್ತದೆ.

    ಬೆಂಗಳೂರಿನ ಎಂಜಿ ರಸ್ತೆ, ಜಯನಗರದ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಇಂತಹ ಏರಿಯಾದಲ್ಲೇ ಈ ರೀತಿಯಾದರೆ ಇನ್ನು ಗಲ್ಲಿಗಳಲ್ಲಿ ಇನ್ಯಾವ ರೀತಿಯ ಐಸ್ ಕ್ರೀಂ ಸಿಗುತ್ತವೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

    ಈ ಐಸ್ ಕ್ರೀಂ ತಿಂದರೆ ನಿಮ್ಮ ಹೊಟ್ಟೆ ಕೆಡುವುದು, ಆರೋಗ್ಯ ಹದಗೆಡುವುದು ಮಾತ್ರವಲ್ಲ, ಕ್ರೀಂಗಳಿಗೆ ಕಲರ್ ಬರಲು ವಿವಿಧ ರೀತಿಯ ಕೆಮಿಕಲ್ ಸುರಿಯುತ್ತಾರೆ. ಹೀಗಾಗಿ ನೀವು ಇಷ್ಟಪಟ್ಟು ತಿನ್ನುವ ಐಸ್ ಕ್ರೀಂ ನಿಮ್ಮ ಆರೋಗ್ಯ ಕೆಡಿಸಬಹುದು. ಕಂಡ ಕಂಡಲ್ಲಿ ಐಸ್ ಕ್ರೀಂ ತಿನ್ನುವ ಮುನ್ನ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ನಿಮ್ಮ ಆರೋಗ್ಯ ಹದಗೆಡುವುದು ಪಕ್ಕಾ.

  • ನಾಲಿಗೆಗೆ ರುಚಿ, ಜೀವಕ್ಕೆ ಕುತ್ತು – ಹಬ್ಬಕ್ಕೆ ಸಿಹಿ ಖರೀದಿ ಮುನ್ನ ಎಚ್ಚರ

    ನಾಲಿಗೆಗೆ ರುಚಿ, ಜೀವಕ್ಕೆ ಕುತ್ತು – ಹಬ್ಬಕ್ಕೆ ಸಿಹಿ ಖರೀದಿ ಮುನ್ನ ಎಚ್ಚರ

    -ಸಿಹಿ ಹಿಂದಿದೆ ಕಹಿ ಸತ್ಯ

    ಬೆಂಗಳೂರು: ಕುರುಕಲು ತಿಂಡಿ, ಸಿಹಿ ತಿಂಡಿ ಮಾಡೋದು ತುಂಬಾನೇ ಕಷ್ಟ ಎಂದು ಎಷ್ಟೋ ಜನರು ಅಂಗಡಿಗಳಿಂದ ತಂದು ಹಬ್ಬಕ್ಕೆ ಮುಗಿಸುತ್ತಾರೆ. ಬಹುತೇಕ ಗ್ರಾಹಕರು ಮಾರುಕಟ್ಟೆಯಲ್ಲಿ ಸಿಗುವ ತಿಂಡಿಗಳ ಗುಣಮಟ್ಟ ಪರೀಕ್ಷೆ ಮಾಡಲ್ಲ. ಸಿಹಿ ಹಿಂದಿನ ಕಹಿ ಸತ್ಯವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚಾರಣೆ ಮೂಲಕ ಬಟಾಬಯಲು ಮಾಡಿದೆ.

    ಸಿಹಿ ಪದಾರ್ಥಗಳನ್ನು ತಯಾರಿಸುವ ಸ್ಥಳ ನೋಡಿದ್ರೆ ನಾವು ಈ ಆಹಾರವನ್ನ ಇಷ್ಟು ದಿನ ಬಾಯಿ ಚಪ್ಪರಿಸಿ ತಿನ್ನತ್ತಾ ಇದ್ದವಾ ಎಂದು ಶಾಕ್‍ಗೆ ಒಳಗಾಗ್ತೀರಿ. ಗ್ರಾಹಕರನ್ನು ತಮ್ಮ ಉತ್ಪನ್ನಗಳತ್ತ ಸೆಳೆಯಲು ವಿಷಕಾರಿ ಅಂಶಗಳನ್ನು ತಿಂಡಿಯಲ್ಲಿ ಸೇರಿಸಲಾಗುತ್ತದೆ. ತಿಂಡಿ ತಯಾರಿ ಸ್ಥಳ ಸ್ವಚ್ಛತೆ ಎಂಬ ಪದಕ್ಕೆ ಅರ್ಥವೇ ಇಲ್ಲ. ಆಹಾರ ತಯಾರಿಕರು ಸಹ ಯಾವುದೇ ಸ್ವಚ್ಛತೆ ಇಲ್ಲದೇ ತಿಂಡಿ ತಯಾರಿಸುವ ದೃಶ್ಯಗಳು ಪಬ್ಲಿಕ್ ಟಿವಿಯಲ್ಲಿ ಸೆರೆಯಾಗಿವೆ.

    ರಿಯಾಲಿಟಿ ಚೆಕ್:1 ಸಿಹಿ ತಿನಿಸು
    ಸ್ಥಳ: ಬಿನ್ನಿಮಿಲ್ ರೈಲ್ವೇ ರೋಡ್

    ರಸವತ್ತಾದ ಬಾದುಶಾ, ಘಮಘಮ ಅನ್ನೋ ಲಡ್ಡು, ಕಟುಂ ಕಟುಂ ಅನ್ನೊ ಶೇಂಗಾ. ಅಹಾ ನೋಡುತ್ತಾ ಇದ್ದರೆ ಯಾರಿಗೆ ತಾನೆ ಬಾಯಲ್ಲಿ ನೀರು ಬರಲ್ಲ ಹೇಳಿ. ಬೆಂಗಳೂರಿನ ಬಿನ್ನಿಮಿಲ್ ರೈಲ್ವೇ ಟ್ರ್ಯಾಕ್‍ಗಳ ಹಿಂದೆ ಇರೋ ಸ್ಟಾರ್ ಸ್ವೀಟ್ಸ್ ಮಳಿಗೆಯಲ್ಲಿ ಇದಿಷ್ಟೇ ಅಲ್ಲಾ ಬಗೆಬಗೆಯ ಭೋಜನ, ಸ್ವೀಟ್ಸ್ ಎಲ್ಲದರ ದರ್ಶನವಾಗುತ್ತದೆ. ಬರೋಬ್ಬರಿ 60ಕ್ಕೂ ಹೆಚ್ಚು ಕಡೆಗಳ ಸಿಹಿ ತಿಂಡಿ ಇಲ್ಲಿ ತಯಾರಾಗುತ್ತದೆ. ನೊಡೋಕೆ ಅಂದವಾಗಿದೆ. ಆದರೆ ಇದನ್ನ ತಯಾರಿಸೊದು ನೋಡಿದ್ರೆ ನಿಮಗೆ ಸ್ವೀಟ್ಸ್‍ನ ಮೇಲೆ ರೇಜಿಗೆ ಹುಟ್ಟುತ್ತದೆ.

    ಸ್ವಚ್ಛತೆ ಇಲ್ಲದ ನಲ್ಲಿ ನೀರು, ಅಡುಗೆ ಮಾಡುವ ಸ್ಥಳದ ಪಕ್ಕದಲ್ಲೇ ಪಾಚಿ ಕಟ್ಟಿನಿಂತಿದೆ. ಕೊಳೆಯಾಗಿರೊ ಪ್ಲಾಸ್ಟಿಕ್ ಬಿಂದಿಗೆ ಮೂಲಕವೇ ತಿಂಡಿ ತಯಾರಿಕೆಗೆ ನೀರು ಪೂರೈಸಲಾಗುತ್ತದೆ. ಅಲ್ಲಿರುವ ಗ್ರೈಂಡರ್ ತೊಳೆದು ಅದೆಷ್ಟೋ ದಿನ ಆಯ್ತು ನೀವು ಲೆಕ್ಕ ಹಾಕಬೇಕು. ಇಷ್ಟು ಮಾತ್ರವಲ್ಲದೇ ಹದವಾದ ಹಿಟ್ಟನ್ನ ಉಂಡೆ ಮಾಡುವ ಕಾರ್ಮಿಕರು ತಮ್ಮ ಮೈ ಬೆವರನ್ನ ಹಿಂಡಿ ತಿಂಡಿಗೆ ಬೆರಸಿ ಅಡುಗೆ ಸಿದ್ಧ ಮಾಡ್ತಾರೆ. ಅದನ್ನ ನಾವು ನೀವು ಬಾಯಿ ಚಪ್ಪರಿಸಿ ತಿನ್ನುತ್ತೇವೆ. ಕೆ.ಆರ್ ಮಾರುಕಟ್ಟೆ ಮಿಲ್‍ಗಳಲ್ಲಿ ಸಿಗುವ ಎಣ್ಣೆ ಎಂದು ಹೇಳಿ ಕಳಪೆ ಮಟ್ಟದ ಎಣ್ಣೆಯನ್ನ ಬಳಸುತ್ತಾರೆ. ಇಲ್ಲಿಯವರೇ ಬೆಂಗಳೂರಿನ ಬಹುತೇಕ ಸ್ವೀಟ್ ಮಾರ್ಟ್ ಗಳಿಗೆ ತಿಂಡಿಯನ್ನು ರವಾನಿಸುತ್ತಾರೆ.

    ರಿಯಾಲಿಟಿ ಚೆಕ್:2 – ಖಾರದ ತಿಂಡಿ
    ಸ್ಥಳ: ಕೆ.ಪಿ ಅಗ್ರಹಾರ

    ಮಸಾಲೆ ಶೇಂಗಾ ಬೀಜ ತಿನ್ನದೇ ಇರೋರು ಉಂಟಾ? ಕಡಲೆ ಬೀಜವನ್ನು ಬಡವರ ಬಾದಾಮಿ ಅಂತಾ ಕರಿತಾರೆ. ಆದರೆ ಅದು ತಯಾರಾಗೊದು ನೋಡಿದರೆ ಇನ್ನ್ಮುಂದೆ ನೀವು ಅದನ್ನ ತಿನ್ನೋ ಧೈರ್ಯ ಮಾಡಲ್ಲ. ಕೊಳೆಮೆತ್ತ ಕೈಯಲ್ಲಿ ತಿರುಗಿಸಿ ತಿರುಗಿಸಿ ಮಸಾಲೆ ಹಾಕ್ತಾರೆ. ಇದಕ್ಕೆ ನೀರು ಹಾಕಲು ಬಳಸುವ ಪ್ಲಾಸ್ಟಿಕ್ ಮಗ್ ನೋಡಿದ್ರೆ ವಾಕರಿಕೆ ಬರೋದು ಗ್ಯಾರೆಂಟಿ. ಈ ಮಧ್ಯೆ ಒಲೆ ಉರಿಸಲು ಕಟ್ಟಿಗೆ ಹೊಟ್ಟು ಬೇರೆ ತಂದು ಹಾಕಿದ್ದಾರೆ. ಈ ಧೂಳು ನೇರವಾಗಿ ಪಕ್ಕದಲ್ಲಿಯೇ ತಯಾರುಗುವ ತಿಂಡಿಯಲ್ಲಿ ಸೇರುತ್ತದೆ.

    ಇದೇ ಏರಿಯಾದಲ್ಲಿ ಕೇವಲ ಒಂದು ರೂಪಾಯಿಗೆ ಸಂಡಿಗೆ, ಬರ್ಫಿಗಳು ಸಿಗುತ್ತದೆ. ಒಟ್ಟು 60 ಕಡೆಗಳಲ್ಲಿ ಈ ಕಂಪನಿ ನಡೆಯುತ್ತಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿಯೇ ಈ ಪರಿಯ ಡರ್ಟಿ ಫುಡ್ ರೆಡಿಯಾಗುತ್ತದೆ.

    ಈ ರೀತಿಯ ಆಹಾರ ಸೇವನೆ ಮಾಡುವರಿಂದ ನ್ಯೂಮೆನಿಯಾ, ಹೊಟ್ಟೆ ನೋವು ಸೇರಿದಂತೆ ರೋಗಗಳು ಕಾಣಿಸಿಕೊಳ್ಳುತ್ತವೆ. ಸಾರ್ವಜನಿರಕರು ಮಾರುಕಟ್ಟೆಯಲ್ಲಿ ತಿಂಡಿಯನ್ನು ಖರೀದಿಸುವ ಮುನ್ನ ಗುಣಮಟ್ಟತೆಯನ್ನು ಪರೀಕ್ಷಿಸಬೇಕು. ಈ ರೀತಿಯ ಕಲಬೆರಕೆ ಆಹಾರ ಸೇವನೆಯಿಂದ ಮಕ್ಕಳ ಬೆಳವಣಿಗೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಪೋಷಕರು ಮನೆಯಲ್ಲಿಯೇ ಮಕ್ಕಳಿಗೆ ತಿಂಡಿ ಮಾಡಿ ಕೊಡುವುದು ಉತ್ತಮ ಎಂದು ಆಹಾರ ತಜ್ಞ ರಘು ಹೇಳುತ್ತಾರೆ.

    https://www.facebook.com/publictv/videos/762906560806201/

  • ಡಿಕೆಶಿ ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು

    ಡಿಕೆಶಿ ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು

    ನವದೆಹಲಿ: ಜಾರಿ ನಿರ್ದೇಶನಾಲುಯದ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈ ಬಿಪಿ, ಹೈ ಶುಗರ್ ನಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಸೆಪ್ಟೆಂಬರ್ 17ರವರೆಗೂ ಕಸ್ಟಡಿ ವಿಸ್ತರಣೆಯಾದ ಬಳಿಕ ಶನಿವಾರ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಮುಂದಾಗಿದ್ದರು. ಬೆಳಗ್ಗೆ 9:30 ವೇಳೆಗೆ ತುಘಲಕ್ ರೋಡ್ ಪೋಲಿಸ್ ಠಾಣೆಯಿಂದ ಡಿಕೆ ಶಿವಕುಮಾರ್ ಕರೆದುಕೊಂಡು ಹೋದ ಇಡಿ ಅಧಿಕಾರಿಗಳು 11 ಗಂಟೆ ಬಳಿಕ ವಿಚಾರಣೆ ಆರಂಭಿಸಿದ್ದರು. ಮಧ್ಯಾಹ್ನ ಒಂದು ಗಂಟೆ ಬಳಿಕ ಡಿಕೆ ಶಿವಕುಮಾರ್ ಗೆ ಜ್ವರ ಮತ್ತು ಹೈ ಬಿಪಿಯಾಗಿ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಕೋರ್ಟ್ ನಿರ್ದೇಶನದಂತೆ ಇಡಿ ಅಧಿಕಾರಿಗಳು ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಎರ್ಮಜೆನ್ಸಿ ವಾರ್ಡ್ ಗೆ ಡಿಕೆ ಶಿವಕುಮಾರ್ ಅವರನ್ನ ದಾಖಲು ಮಾಡಲಾಯಿತು. ಸುಮಾರು ಏಳು ಗಂಟೆ ಬಳಿಕ ಸಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಿದ ವೈದ್ಯರು ಕಡ್ಡಾಯವಾಗಿ ವಿಶ್ರಾಂತಿ ಪಡೆಯಲೇಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ವೈದ್ಯರ ಸಲಹೆ ಹಿನ್ನೆಲೆ ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 11 ಗಂಟೆಯ ಬಳಿಕ ಮತ್ತೆ ವಿಚಾರಣೆ ಆರಂಭವಾಗುವ ಸಾಧ್ಯತೆಗಳಿವೆ.

    ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಭೇಟಿಯಾಗಿದ್ದರು. ಆಸ್ಪತ್ರೆಗೆ ಆಗಮಿಸಿದ ಪತ್ನಿ ಮತ್ತು ಮಕ್ಕಳು ಡಿಕೆಶಿಯವರ ಆರೋಗ್ಯ ವಿಚಾರಿಸಿದರು.

  • ಆರೋಗ್ಯ ಜೀವನಕ್ಕಾಗಿ ಬೆಂಡೆಕಾಯಿ ಸೇವಿಸಿ

    ಆರೋಗ್ಯ ಜೀವನಕ್ಕಾಗಿ ಬೆಂಡೆಕಾಯಿ ಸೇವಿಸಿ

    ಬೆಂಡೆಕಾಯಿ ಎಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸಿದ ಅಡುಗೆಗಳು. ಪಲ್ಯ, ಸಾಂಬರ್, ಸೂಪ್, ಸಲಾಡ್ ಹೀಗೆ ಡಿಫರೆಂಟ್ ಆಗಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತದೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿಯ ಆರೋಗ್ಯಕರ ಅಂಶಗಳು ಒಳಗೊಂಡಿರುತ್ತವೆ. ಬೆಂಡೆಕಾಯಿ ಬರೀ ಬಾಯಿರುಚಿಗಷ್ಟೇ ಸೀಮಿತವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂಬ ವಿಚಾರ ಹಲವರಿಗೆ ತಿಳಿದಿರಲ್ಲ.

    ಹೌದು. ಬೆಂಡೆಕಾಯಿಯಲ್ಲಿ ಕಬ್ಬಿಣದ ಅಂಶ, ಫೈಬರ್ ಅಂಶ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಆದ್ದರಿಂದ ಇದು ಹೃದಯಕ್ಕೆ, ಕರುಳಿಗೆ ಒಳ್ಳೆಯದು. ದೇಹದ ತೂಕ ಇಳಿಸಲು ಕೂಡ ಬೆಂಡೆಕಾಯಿ ಉಪಯುಕ್ತ. ಅಷ್ಟೇ ಅಲ್ಲದೆ ಇದು ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದೊಳ್ಳೆಯ ಮದ್ದಾಗಿದೆ.

    ಬೆಂಡೆಕಾಯಿಯಲ್ಲಿ ಅಡಗಿರುವ ಆರೋಗ್ಯ ಗುಣಗಳೇನು?
    ಹೃದಯಕ್ಕೆ ಒಳ್ಳೆದು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೆಂಡೆಕಾಯಿ ಬಹಳ ಒಳ್ಳೆಯದು. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಇದನ್ನು ಸೇವಿಸಿದವರಿಗೆ ಹೃದಯಾಘಾತವಾಗುವ ಸಂಭವ ಕಡಿಮೆ ಇರುತ್ತದೆ. ಇದನ್ನೂ ಓದಿ:ಬೆಂಡೆಕಾಯಿ ಸೇವಿಸಿ ದೇಹದ ತೂಕ ಇಳಿಸಿಕೊಳ್ಳಿ

    ಕರುಳಿನ ಕ್ಯಾನ್ಸರ್ ನಿವಾರಿಸುತ್ತೆ: ದೊಡ್ಡ ಕರುಳಿನ ಕ್ಯಾನ್ಸರ್ ದೂರ ಮಾಡಲು ಬೆಂಡೆಕಾಯಿ ಒಳ್ಳೆಯ ಮದ್ದಾಗಿದೆ. ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದವರು ಬೆಂಡೆಕಾಯಿಯನ್ನು ಸೇವಿಸಿದರೆ ಒಳ್ಳೆಯದು. ಯಾಕೆಂದರೆ ಬೆಂಡೆಕಾಯಿ ಸೇವಿಸಿದರೆ ಕರುಳಿನಲ್ಲಿರುವ ಟಾಕ್ಸಿಕ್ ಅಂಶವನ್ನು ಹೋಗಲಾಡಿಸಿ, ಕರುಳಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ.

    ಜೀರ್ಣಕ್ರಿಯೆಗೆ ಉತ್ತಮ: ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಅಡಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ. ಹಾಗೆಯೇ ಮಲಬದ್ಧತೆ ಸಮಸ್ಯೆಯನ್ನು ಕೂಡ ದೂರ ಮಾಡಲು ಬೆಂಡೆಕಾಯಿ ಉತ್ತಮ ಔಷಧಿಯಾಗಿದೆ.

    ರಕ್ತಹೀನತೆಯನ್ನು ತಡೆಗಟ್ಟುತ್ತದೆ: ಬೆಂಡೆಕಾಯಿಯಲ್ಲಿರುವ ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ, ಇದು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಹೀಗಾಗಿ ರಕ್ತಹೀನತೆಯಿಂದ ದೇಹವನ್ನು ರಕ್ಷಿಸವಲ್ಲಿ ಬೆಂಡೆಕಾಯಿ ಸಹಕಾರಿಯಾಗಿದೆ.

    ತೂಕ ಇಳಿಸಲು ಸಹಕಾರಿ: ತೂಕ ಇಳಿಸಿಕೊಳ್ಳುವವರು ಬೆಂಡೆಕಾಯಿ ಸೇವನೆ ಮಾಡಬಹುದು. ಯಾಕೆಂದರೆ ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಆದರೆ ಫೈಬರ್ ಅಂಶ ಹೇರಳವಾಗಿರುತ್ತದೆ. ಇದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.

    ಕೂದಲ ಆರೈಕೆಗೆ ಉತ್ತಮ: ಕೂದಲು ಉದುರುವಿಕೆ, ಕಡಿಮೆ ಕೂದಲು ಹೀಗೆ ಕೂದಲು ಸಮಸ್ಯೆಯಿಂದ ಬಳಲುವವರಿಗೆ ಬೆಂಡೆಕಾಯಿ ಉತ್ತಮ ಮದ್ದು. ದಟ್ಟ ಹಾಗೂ ಕಪ್ಪನೆಯ ಕೂದಲನ್ನು ಬಯಸುವವರು ಬೆಂಡೆಕಾಯಿ ಸೇವನೆ ಮಾಡಬೇಕು. ಇದು ಕೂದಲಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ ಬೆಂಡೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ನಿಂಬೆ ರಸವನ್ನು ಸೇರಿಸಿ, ಆ ರಸ ತಲೆಗೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ತೊಳೆದರೆ ಕೂದಲುದುರುವುದು ಕಡಿಮೆಯಾಗುತ್ತದೆ.

    ಇಷ್ಟೆಲ್ಲ ಆರೋಗ್ಯಕರ ಅಂಶವನ್ನು ತನ್ನಲ್ಲಿ ಬಚ್ಚಿಟ್ಟಿಕೊಂಡಿರುವ ಬೆಂಡೆಕಾಯಿಯನ್ನು ನೀವೂ ತಿನ್ನಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.

  • ಆರೋಗ್ಯದ ಜೊತೆ ಬ್ಯೂಟಿಗೂ ಪಪ್ಪಾಯವೇ ಮದ್ದು

    ಆರೋಗ್ಯದ ಜೊತೆ ಬ್ಯೂಟಿಗೂ ಪಪ್ಪಾಯವೇ ಮದ್ದು

    ಸಾಮಾನ್ಯವಾಗಿ ಮನೆಯಲ್ಲಿರುವ ತರಕಾರಿ, ಹಣ್ಣುಗಳಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದೇ ರೀತಿ ಪರಂಗಿ ಹಣ್ಣಿನಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಇದರಲ್ಲಿ ಅತೀ ಹೆಚ್ಚು ಔಷಧಿಯ ಸತ್ವಗಳಿವೆ. ಪಪ್ಪಾಯದಲ್ಲಿ ವಿಟಮಿನ್ ಎ ಸತ್ವ ಹೆಚ್ಚಾಗಿರುವುದರಿಂದ ಬಹುಮುಖ್ಯವಾಗಿ ನಮ್ಮ ಕಣ್ಣಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಬಹಳಷ್ಟು ಸಹಕಾರಿಯಾಗಿದೆ.

    ಪಪ್ಪಾಯ ಹಣ್ಣು, ಪಪ್ಪಾಯ ಎಲೆಗಳು ಹಾಗೂ ಪಪ್ಪಾಯ ಬೀಜಗಳು ಔಷಧಿಯ ಗುಣವನ್ನು ಹೊಂದಿವೆ. ಪಪ್ಪಾಯದಲ್ಲಿ ಪ್ರೊಟೀನ್, ಕೊಬ್ಬು, ವಿಟಮಿನ್ ಸಿ, ಫಾಸ್ಫರಸ್, ಕಬ್ಬಿಣ, ಕಾರ್ಬೋಹೈಡ್ರೇಟ್, ನಿಯಾಸಿನ್ ಹಾಗೂ ಖನಿಜಾಂಶಗಳು ಯಥೇಚ್ಛವಾಗಿರುತ್ತವೆ.

    ಪಪ್ಪಾಯ ಸೇವನೆಯ ಉಪಯೋಗಗಳು:
    * ಬಹುಮುಖ್ಯವಾಗಿ ಪಪ್ಪಾಯ ಸೇವನೆಯಿಂದ ಕರುಳಿನ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ.
    * ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕ್ರಮೇಣ ನಿವಾರಿಸುತ್ತದೆ.
    * ಬೊಜ್ಜು ಕರಗಿಸಲು ಪಪ್ಪಾಯ ದಿವ್ಯ ಔಷಧಿ. ಅಲ್ಲದೆ ದೇಹದ ಉತ್ತಮ ಬೆಳವಣಿಗೆಗೆ ಪೂರಕವಾದ ಮೆಗ್ನೀಷಿಯಂ, ಕಬ್ಬಿಣಾಂಶಗಳನ್ನು ಒದಗಿಸುತ್ತದೆ.
    * ತಿಂಗಳಿಗೆ ಅಥವಾ ಎರಡು ತಿಂಗಳಿಗೊಮ್ಮೆ ಹಣ್ಣಿನೊಂದಿಗೆ ಕೆಲವು ಬೀಜಗಳನ್ನು ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಯಾಗುತ್ತದೆ.
    * ಚರ್ಮ ಬಣ್ಣ ಕಳೆದುಕೊಂಡಿದ್ದರೆ ಅಥವಾ ಅಂಗೈ ಹಳದಿ ಬಣ್ಣಕ್ಕೆ ತಿರುಗಿದ್ದರೆ ಇದನ್ನು ಸೇವಿಸಬಹುದು.
    * ಅರೆಪಕ್ವ ಹಣ್ಣನ್ನು ತುರಿದು ಗಾಯಗಳಿಗೆ ಹಚ್ಚಿದರೆ ಗಾಯಗಳು ಬೇಗನೆ ವಾಸಿಯಾಗುತ್ತದೆ.
    * ಪಪ್ಪಾಯ ಕಾಯಿಯ ರಸವನ್ನು ಕಜ್ಜಿ, ತುರಿಕೆಗಳಂತಹ ಚರ್ಮ ಸಮಸ್ಯೆಗಳಿಗೆ ಲೇಪಿಸಿದರೆ ಉಪಶಮನವಾಗುತ್ತದೆ.
    * ನಿಯಮಿತ ಸೇವನೆಯಿಂದ ಇರುಳು ಕುರುಡುತನ ಕಡಿಮೆಯಾಗುತ್ತದೆ.
    * ಪಪ್ಪಾಯ ಬೀಜವನ್ನು ಒಣಗಿಸಿ ಆ ಪುಡಿಯನ್ನು ಜೇನುತುಪ್ಪದಲ್ಲಿ ಸೇವಿಸಿದರೆ ಮಹಿಳೆಯರ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.
    * ಪಪ್ಪಾಯದ ನಿಯಮಿತ ಸೇವನೆಯಿಂದ ಡಯಾಬಿಟಿಸ್ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.


    * ಪಪ್ಪಾಯ ಕಾಯಿಯ ನಿರಂತರ ಸೇವನೆಯಿಂದ ಕ್ಯಾನ್ಸರ್ ನಿಂದ ಗುಣಮುಖರಾಗಬಹುದು.
    * ಪಪ್ಪಾಯದಲ್ಲಿನ ಫೈಬರ್ ಜೊತೆ ಪಪೇನ್ ಅಂಶ ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿನ ನೋವನ್ನು ಶಮನಗೊಳಿಸುತ್ತದೆ.
    * ಇದರ ಎಲೆಗಳನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ಕಾಯಿಲೆಗಳ ವಿರುದ್ಧ ಹೋರಾಡುವ ಪ್ರತಿರೋಧಕ ಅಂಶಗಳನ್ನು ಹೆಚ್ಚಿಸುತ್ತದೆ.
    * ಪಪ್ಪಾಯ ಎಲೆಗಳ ಜ್ಯೂಸ್ ಸೇವನೆಯಿಂದ ಡೆಂಗ್ಯೂ ಮತ್ತು ಮಲೇರಿಯಾ ಕಾಯಿಲೆಗಳು ನಿವಾರಣೆಯಾಗುತ್ತದೆ.

    ಪಪ್ಪಾಯ ಬ್ಯೂಟಿ ಟಿಪ್ಸ್:
    ಪಪ್ಪಾಯದಲ್ಲಿರುವ ಅಂಶಗಳು ಕೇವಲ ದೇಹದ ಆರೋಗ್ಯವನ್ನು ಕಾಪಾಡುವುದಲ್ಲದೇ ಚರ್ಮದ ಚೈತನ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಲವಾರು ಸೌಂದರ್ಯವರ್ಧಕಗಳಲ್ಲಿ ಪಪ್ಪಾಯವನ್ನು ತಪ್ಪದೇ ಬಳಸುತ್ತಾರೆ.

    * ಪಪ್ಪಾಯ ಹಣ್ಣಿನ ರಸದೊಂದಿಗೆ ಮೊಸರು ಮಿಕ್ಸ್ ಮಾಡಿ ಹೇರ್ ಪ್ಯಾಕ್ ತಯಾರಿಸಿ ತಿಂಗಳಿಗೊಮ್ಮೆ ತಲೆಯ ಬುಡಕ್ಕೆ ಹಚ್ಚಿ ಕಡಲೆಹಿಟ್ಟಿನಿಂದ ತೊಳೆಯುವುದರಿಂದ ತಲೆಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
    * ಜೇನುತುಪ್ಪದೊಂದಿದೆ ಪಪ್ಪಾಯ ಹಣ್ಣನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
    * ಮುಖದಲ್ಲಿ ಎಣ್ಣೆಯ ಅಂಶ ಅಥವಾ ಜಿಡ್ಡಿನ ಅಂಶ ಹೆಚ್ಚಾಗಿದೆ ಎನ್ನುವವರು ಬ್ಲ್ಯಾಕ್ ಟೀ ಸೋಸಿ ಅದಕ್ಕೆ ಪಪ್ಪಾಯಿ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ತಣ್ಣೀರಿನಿಂದ ತೊಳೆಯುತ್ತಾ ಬಂದರೆ ಜಿಡ್ಡಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
    * ಪ್ರತಿದಿನ ಪಪ್ಪಾಯವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಸನ್‍ಬರ್ನ್ ಆಗುವುದನ್ನು ತಡೆಗಟ್ಟುತ್ತದೆ.
    * ಪಪ್ಪಾಯ ಸಿಪ್ಪೆಗಳಿಂದ ಕೈ ಮತ್ತು ಕಾಲುಗಳನ್ನು ಉಜ್ಜುವುದರಿಂದ ಚರ್ಮದ ಮೇಲಿರುವ ಕಪ್ಪು ಮಾಯವಾಗುತ್ತದೆ.

  • ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ: ಬಿಗ್-ಬಿ

    ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ: ಬಿಗ್-ಬಿ

    ಮುಂಬೈ: ಬಾಲಿವುಡ್ ಬಿಗ್- ಬಿ ಅಮಿತಾಬ್ ಬಚ್ಚನ್ ಅವರ ಲಿವರ್ ಶೇ. 75ರಷ್ಟು ಹಾಳಾಗಿದ್ದು, ಕೇವಲ ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದಾರೆ.

    ಅಮಿತಾಬ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ 11ನೇ ಸೀಸನ್ ಸೋಮವಾರ ರಾತ್ರಿಯಿಂದ ಶುರುವಾಗಿದೆ. ಈ ವೇಳೆ ಅವರು ತಮ್ಮ ಆರೋಗ್ಯದ ಬಗ್ಗೆ ಬಹಿರಂಗವಾಗಿ ತಿಳಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತಾಬ್, ಜನರು ತಮ್ಮ ದೇಹದ ರೆಗ್ಯೂಲರ್ ಚೆಕಪ್ ಮಾಡಿಸುತ್ತಾನೆ ಇರಬೇಕು ಎಂದರು. ಬಳಿಕ ತಮ್ಮ ಉದಾಹರಣೆ ನೀಡಿ, ನನ್ನ ಲಿವರ್ ಶೇ. 75ರಷ್ಟು ಹಾಳಾಗಿದ್ದು, ಕೇವಲ ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ ಎಂದು ವಿಷಯ ನನಗೆ ತಿಳಿಯಿತು. ನನಗೆ ಟ್ಯೂಬರ್‌ಕ್ಯೂಲೋಸಿಸ್‌ ಸಮಸ್ಯೆ ಹಾಗೂ ಹಲವು ಸಮಸ್ಯೆಗಳು ಇದೆ. ಸಮಯಕ್ಕೆ ಸರಿಯಾಗಿ ರೋಗಗಳು ಪತ್ತೆಯಾದರೆ ಅವುಗಳ ಚಿಕಿತ್ಸೆ ಸಾಧ್ಯ ಎಂದು ಹೇಳಿದ್ದಾರೆ.

    ಅಮಿತಾಬ್ ಅವರು 76ನೇ ವಯಸ್ಸಿನಲ್ಲೂ ಫಿಟ್ ಆಗಿರುತ್ತಾರೆ. ಅಲ್ಲದೆ ನಿರಂತರವಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಅಮಿತಾಬ್ ಅವರಿಗೆ ಹಲವು ಸಮಸ್ಯೆಗಳು ಇದೆ. ಆದರೆ ಅವರು ತಮ್ಮ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ಸದ್ಯ ಅಮಿತಾಬ್ ‘ಬದ್ಲಾ’ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ‘ಗುಲಾಬೋ ಸಿತಾಬೋ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಚಿತ್ರಗಳನ್ನು ಹೊರತುಪಡಿಸಿ ಅಮಿತಾಬ್, ‘ಬ್ರಹ್ಮಾಸ್ತ್ರ’, ‘ಚೆಹರೆ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ಬಾಳೆಹಣ್ಣಿನ ಸಿಪ್ಪೆಯಿಂದ ಆಗುವ ಆರೋಗ್ಯಕರ ಅನುಕೂಲ

    ಬಾಳೆಹಣ್ಣಿನ ಸಿಪ್ಪೆಯಿಂದ ಆಗುವ ಆರೋಗ್ಯಕರ ಅನುಕೂಲ

    -ಮೊಡವೆ ನಿವಾರಣೆ, ಫಳಫಳ ಹಲ್ಲುಗಳಿಗಾಗಿ ಮದ್ದು ಬಾಳೆ ಸಿಪ್ಪೆ

    ಸಾಮಾನ್ಯವಾಗಿ ನಾವು ಬಳಸಿದ ಪ್ರತಿಯೊಂದು ವಸ್ತುವೂ ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಉಪಯೋಗಕ್ಕೆ ಬರುತ್ತವೆ. ಅದರಲ್ಲೂ ನಾವು ಬಳಸುವ ಹಣ್ಣುಗಳಂತೂ ತುಂಬಾ ಉಪಯೋಗಕ್ಕೆ ಬರುತ್ತವೆ. ಆದರೆ ಅದರಿಂದ ಆಗುವ ಅನುಕೂಲಗಳನ್ನು ತಿಳಿಯದೆ ನಾವು ಉಪಯೋಗವಾಗುವ ವಸ್ತು ಅಥವಾ ಹಣ್ಣುಗಳನ್ನು ಬಿಸಾಕುತ್ತೇವೆ. ಅದೇ ರೀತಿ ಎಲ್ಲರೂ ಮನೆಯಲ್ಲಿ ಬಾಳೆ ಹಣ್ಣು ಇದ್ದೆ ಇರುತ್ತದೆ. ಊಟ ಆದ ಮೇಲೆ ತಿಂದು ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ. ಇದನ್ನು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರವಾಗಿದೆ.

    ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇರುತ್ತದೆ. ಅಷ್ಟೇ ಅಲ್ಲದೇ ಮೆಗ್ನಿಷಿಯಂ, ಪೊಟ್ಯಾಶಿಯಂ, ನಾರಿನಾಂಶ ಮತ್ತು ಪ್ರೋಟಿನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ಆದ್ದರಿಂದ ಬಾಳೆ ಹಣ್ಣಿನ ಸಿಪ್ಪೆಯಿಂದ ಏನೆಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

    1. ಹೊಳೆಯುವ ಹಲ್ಲುಗಳಿಗಾಗಿ: ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಎರಡರಿಂದ ಮೂರು ನಿಮಿಷದ ತನಕ ಹಲ್ಲುಗಳ ಮೇಲೆ ಉಜ್ಜಿ. ಆಮೇಲೆ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ನಿಮ್ಮ ಹಲ್ಲುಗಳನ್ನು ತೊಳೆಯಿರಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ.

    2. ಮೊಡವೆಯ ಸಮಸ್ಯೆ ಪರಿಹಾರ: ಸಾಮಾನ್ಯವಾಗಿ ಯುವತಿ ಮತ್ತು ಯುವಕರಿಗೆ ಮೊಡವೆಗಳ ಸಮಸ್ಯೆ ಇರುತ್ತದೆ. ಹೀಗಾಗಿ ಮೊಡವೆಗಳು ಉಂಟಾದಾಗ ಬಾಳೆಹಣ್ಣಿನ ಸಿಪ್ಪೆಯ ಚಿಕ್ಕ ತುಂಡನ್ನು ತೆಗೆದುಕೊಂಡು ನಿಮ್ಮ ಮುಖದಲ್ಲಿ ಮೊಡವೆ ಇರುವ ಜಾಗದ ಮೇಲೆ ಸ್ವಲ್ಪ ಹೊತ್ತು ನಿಧಾನವಾಗಿ ಮಸಾಜ್ ಮಾಡಿ. ಅದನ್ನು ಹಾಗೆಯೇ 10 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಆಮೇಲೆ ಶುದ್ಧವಾದ ನೀರಿನಿಂದ ಮುಖವನ್ನು ತೊಳೆಯಿರಿ. ಒಂದು ವಾರ ಹೀಗೆ ಮಾಡುತ್ತಿದ್ದರೆ ಮುಖದಲ್ಲಿರುವ ಮೊಡವೆ ನಿಧಾನಕ್ಕೆ ಹೋಗುತ್ತವೆ.

    3. ಆರೋಗ್ಯಕರವಾದ ಚರ್ಮಕ್ಕೆ: ಒಂದು ತಾಜಾವಾದ ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಒಂದು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ. ನಂತರ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಐದು ನಿಮಿಷ ಬಿಟ್ಟು, ನೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ದಿನ ಹೀಗೆ ಮಾಡಿ. ಇದು ನಿಮ್ಮ ಮುಖದ ನೆರಿಗೆಯನ್ನು ಕಡಿಮೆ ಮಾಡುವುದಲ್ಲದೇ, ಕಾಂತಿಯನ್ನು ಹೆಚ್ಚಿಸುತ್ತದೆ.

    4. ಚರ್ಮದ ಗಂಟು ನಿವಾರಣೆ: ನಿಮಗೆ ಚರ್ಮದ ಗಂಟಿನಿಂದ ಯಾವುದೇ ಸಮಸ್ಯೆಯಾಗುತ್ತಾ ಇದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಇದನ್ನು ನಿವಾರಣೆ ಮಾಡಬಹುದು. ಭಾದಿತ ಜಾಗದಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ ಮತ್ತು ಇದು ಬೇಗನೆ ನಿವಾರಣೆಯಾಗುವುದು. ಬಾಳೆಹಣ್ಣಿನಲ್ಲಿ ನೋವುನಿವಾರಕ ಗುಣಗಳು ಇವೆ. ಹೀಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ನೋಯುತ್ತಿರುವ ಮಚ್ಚೆಗೆ ಉಜ್ಜಿದರೆ ನೋವು ಕಡಿಮೆಯಾಗುವುದು.

    5. ಕಪ್ಪುಕಲೆ ನಿವಾರಣೆ: ಒಂದು ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪು, ಅರ್ಧಚಮಚ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಕಲೆ ರಹಿತ ಮುಖ ನಿಮ್ಮದಾಗುತ್ತದೆ.

    6. ತ್ವಚೆಗಾಗಿ: ಒಂದು ಬಾಳೆಹಣ್ಣಿನ ಸಿಪ್ಪೆ ಮತ್ತು ಮೂರು ಚಮಚ ಲಿಂಬೆ ರಸವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಕಳೆದ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಚರ್ಮದಲ್ಲಿ ಬದಲಾವಣೆ ಬರಲು ನೀವು ಇದನ್ನು ದಿನನಿತ್ಯ ಬಳಸಿಕೊಳ್ಳಬಹುದು.

    7. ಎಣ್ಣೆಯುಕ್ತ ಚರ್ಮಕ್ಕೆ: ಕೆಲವರಿಗೆ ಚರ್ಮವು ಎಣ್ಣೆಯಾಗಿರುತ್ತದೆ. ಅವರು ಮಿಕ್ಸಿಯಲ್ಲಿ ಬಾಳೆಹಣ್ಣಿನ ಸಿಪ್ಪೆ ರುಬ್ಬಿಕೊಳ್ಳಿ. ನಂತರ ರುಬ್ಬಿಕೊಂಡಿರುವ ಬಾಳೆಹಣ್ಣಿನ ಸಿಪ್ಪೆಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ. ಇದು ತುಂಬಾ ಒಣಗಿದಂತೆ ಇರುತ್ತದೆ. ಆಗ ಇದಕ್ಕೆ ನಿಮಗೆ ಬೇಕಾದಷ್ಟು ನೀರು ಹಾಕಿಕೊಳ್ಳಿ. ಇದನ್ನು ಮುಖ ಹಾಗೂ ಚರ್ಮಕ್ಕೆ ಹಚ್ಚಿಕೊಳ್ಳಿ. ತಣ್ಣೀರಿನಿಂದ ತೊಳೆಯಿರಿ. ಇದರಿಂದ ಎಣ್ಣೆಯುಕ್ತ ಚರ್ಮ ನಿವಾರಣೆಯಾಗುತ್ತದೆ.

    8. ತೂಕ ಇಳಿಕೆ: ಬಾಳೆಹಣ್ಣಿನ ಸಿಪ್ಪೆಯನ್ನು ತೂಕ ಕಳೆದುಕೊಳ್ಳಲು ಬಳಸಬಹುದು. ಪ್ರತಿ ದಿನ ಎರಡು ಬಾಳೆಹಣ್ಣುಗಳನ್ನು ಮಧ್ಯಾಹ್ನದ ಊಟದ ವೇಳೆ ಸೇವಿಸಿ. ಇದರ ಸಿಪ್ಪೆಗಳನ್ನು ಪ್ರತ್ಯೇಕವಾಗಿ ಸೇವಿಸಿ. ರಾತ್ರಿ ವೇಳೆ ಊಟ ಮಾಡಬೇಡಿ. ಯಾಕೆಂದರೆ ಬಾಳೆಹಣ್ಣಿನ ಸಿಪ್ಪೆಯು ಸರಿಯಾಗಿ ಕರಗಬೇಕು. ಅಧ್ಯಯನಗಳ ಪ್ರಕಾರ ಈ ಆಹಾರ ಕ್ರಮದಿಂದ ಸುಮಾರು 2.5 ಕೆಜಿಯಷ್ಟು ತೂಕ ಕಳೆದುಕೊಳ್ಳಬಹುದು.

    9. ಕೀಟಗಳ ಕಡಿತಕ್ಕೆ: ಯಾವುದೇ ಕೀಟಗಳು ಕಚ್ಚಿದರೆ ಆ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ. ಇದರಿಂದ ತುರಿಕೆ ಮತ್ತು ನೋವುಗಳು ತಕ್ಷಣ ನಿವಾರಣೆಯಾಗುತ್ತದೆ.

    10. ಕಣ್ಣಿನ ರಕ್ಷಣೆ: ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಸುತ್ತ ಲೇಪಿಸುವುದರಿಂದ ಯು.ವಿ.ಕಿರಣಗಳಿಂದ ರಕ್ಷಣೆ ಪಡೆಯಬಹುದು. ಹೀಗೆ ಮಾಡುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಬಿಡಿ, ನಂತರ ಹಚ್ಚಿ. ಹೀಗೆ ಮಾಡುವುದರಿಂದ ಕಣ್ಣಿನ ಪೊರೆ ಬರದಂತೆ ಸಹ ತಡೆಯಬಹುದು.

    11. ಹೊಳಪಿಗಾಗಿ: ಶೂ, ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ತಕ್ಷಣ ಹೊಳಪು ನೀಡಲು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಇದಕ್ಕಾಗಿ ಸಿಪ್ಪೆಯನ್ನು ಅವುಗಳ ಮೇಲೆ ಉಜ್ಜಿದರೆ ಹೊಳಪು ಬರುತ್ತದೆ.

  • ಡೆಂಗ್ಯೂ ಜ್ವರಕ್ಕೆ ಮನೆ ಮದ್ದು

    ಡೆಂಗ್ಯೂ ಜ್ವರಕ್ಕೆ ಮನೆ ಮದ್ದು

    ಡೆಂಗ್ಯೂ ಜ್ವರ ಈ ಹೆಸರು ಕೇಳಿದ ತಕ್ಷಣವೇ ಎಲ್ಲರೂ ಬೆಚ್ಚಿಬೀಳುತ್ತಿದ್ದಾರೆ. ಈ ಜ್ವರವನ್ನು ಚಿಕಿತ್ಸೆಗಿಂತ ಆರೈಕೆಯಲ್ಲೇ ಓಡಿಸಬೇಕು. ಈ ಜ್ವರ ಹೆಚ್ಚಾಗಿ ಚಿಕ್ಕ ಮಕ್ಕಳು, ವಯೋವೃದ್ಧರನ್ನು ಬಾಧಿಸುತ್ತದೆ. ಯಾಕೆಂದರೆ ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪಕ್ವಾವಾಗಿರುವುದಿಲ್ಲ. ವಯೋವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತಿರುತ್ತದೆ.

    ಈ ಜ್ವರಕ್ಕೆ ಕಾರಣ ಈಡಿಸ್ ಈಜಿಪ್ತಿ (Aedes aegypti) ಎಂಬ ಹೆಸರಿನ ಭಯಾನಕ ಹೆಣ್ಣು ಸೊಳ್ಳೆ. ಇದು ಯಾವುದೇ ವಾತಾವರಣದಲ್ಲಿ ಬದುಕಬಲ್ಲದು. ಈ ಸೊಳ್ಳೆಗಳಿಗೆ ಸಂತಾನೋತ್ಪತ್ತಿ ವೇಳೆ ಅಗತ್ಯವಿರುವ ರಕ್ತಕ್ಕಾಗಿ ಮನುಷ್ಯರನ್ನು ಕಚ್ಚಿ ರಕ್ತವನ್ನು ಹೀರುತ್ತವೆ. ಈ ಸೊಳ್ಳೆಗಳು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಮೊಣ ಕೈ, ಮೊಣಕಾಲಿನ ಭಾಗದಲ್ಲಿ ಕಚ್ಚುತ್ತವೆ. ನೀವು ಇವನ್ನು ನೋಡಿ ಹೊಡೆಯುವಷ್ಟರಲ್ಲಿ ರಕ್ತ ಹೀರಿ ಓಡುತ್ತವೆ. ಆದ್ದರಿಂದ ಈ ಜ್ವರಕ್ಕೆ ಇಂತದ್ದೇ ಎಂಬ ಔಷಧಿ ಎಲ್ಲೂ ಇಲ್ಲ.

    ರಕ್ತದಲ್ಲಿನ ಪ್ಲೇಟ್‍ ಲೆಟ್ಸ್ ಗಳನ್ನು ಹೆಚ್ಚಿಸಿಕೊಳ್ಳುವ ಹೊರತು ಯಾವುದೇ ಚಿಕಿತ್ಸೆ ಇಲ್ಲ. ವೈರಸ್ ನಿಮ್ಮ ದೇಹ ಹೊಕ್ಕ ತಕ್ಷಣವೇ ನಿಮಗೆ ತಿಳಿಯದಂತೆ ರಕ್ತಕಣಗಳು ಕುಗ್ಗುತ್ತಾ ಹೋಗುತ್ತದೆ. ಆದರೆ ಸೂಕ್ತ ಎಚ್ಚರಿಕೆ ವಹಿಸುವುದರ ಜೊತೆ ತಕ್ಷಣಕ್ಕೆ ಚಿಕಿತ್ಸೆ ಪಡೆದರೆ ಭಯ ಪಡುವ ಅಗತ್ಯವಿಲ್ಲ. ಮುಖ್ಯವಾಗಿ ಇದು ಅಂಟುಜ್ವರ ಅಲ್ಲ ಅಂದರೆ ಜ್ವರ ಪೀಡಿತರಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಜ್ವರಪೀಡಿತರನ್ನು ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗ ಮಾತ್ರ ಹರಡುತ್ತದೆ.

    ಡೆಂಗ್ಯೂ ಜ್ವರದ ಲಕ್ಷಣಗಳು:
    * ಅಧಿಕ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತವೆ.
    * ಮಾಂಸಖಂಡಗಳಲ್ಲಿ, ಕೈ, ಕಾಲುಗಳ ಕೀಲುಗಳಲ್ಲಿ ನೋವು ಉಂಟಾಗುತ್ತದೆ.
    * ಕಣ್ಣಿನಲ್ಲಿ ಹೇಳಲಾಗದ ನೋವು, ಉರಿಯಾಗುತ್ತದೆ.
    * ಕೆಮ್ಮು, ಗಂಟಲು ಕೆರೆತ ಬರುತ್ತದೆ.
    * ಕೆಲವರಿಗೆ ವಾಂತಿ, ತಲೆ ಸುತ್ತು ಕಾಣಿಸಿಕೊಳ್ಳುತ್ತವೆ.

    ಡೆಂಗ್ಯೂ ಜ್ವರಕ್ಕೆ ಮನೆ ಮದ್ದು: ಈ ಜ್ವರ ಇರುವ ಬಗ್ಗೆ ಗೊತ್ತಾದ ಮೇಲೆ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿ ಪಡೆದು ವಿಶ್ರಾಂತಿಗೆ ಸೂಚಿಸಲಾಗುತ್ತದೆ. ಜೊತೆಗೆ ಸಾಕಷ್ಟು ನೀರು ಮತ್ತು ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ, ಸಿಟ್ರಸ್ ಅಂಶ ಇರುವ, ನೀರಿನಾಂಶ ಜಾಸ್ತಿ ಇರುವ ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಆದರೆ ಎಣ್ಣೆ, ಮಸಾಲೆಯುಕ್ತ ಆಹಾರವನ್ನು ವರ್ಜಿಸಿದರೆ ಉತ್ತಮ.

    ಯಾವ ಆಹಾರಗಳನ್ನು ಸೇವಿಸಬೇಕು: 
    * ಕಿತ್ತಳೆ ಹಣ್ಣು ಸೇವನೆಯಿಂದ ಡೆಂಗ್ಯೂ ಬೇಗ ಗುಣವಾಗುತ್ತದೆ. ವಿವಿಧ ವಿಟಮಿನ್ ಮತ್ತು ಖನಿಜಾಂಶ ಭರಿತ ಪೌಷ್ಟಿಕ ಹಣ್ಣು, ಅಧಿಕ ನಾರಿನಂಶ, ವಿಟಮಿನ್ ಸಿ ಇರುವ ಮೂಸಂಬಿ, ನಿಂಬೆ ರಸ, ಅನಾನಸ್, ಕಿವಿ ಫ್ರೂಟ್, ದ್ರಾಕ್ಷಿ, ಚಕ್ಕೋತ ಹಣ್ಣುಗಳ ರಸ, ಹಣ್ಣು ಸೇವನೆಯಿಂದ ಅವಶ್ಯ ಪೋಷಕಾಂಶ ದೊರೆಯುತ್ತದೆ.
    * ಎಳನೀರು ಸೇವನೆಯಿಂದ ದೇಹದಲ್ಲಿ ಡೆಂಗ್ಯೂನಿಂದ ಕಡಿಮೆ ಆಗಿದ್ದ ನೀರಿನಾಂಶ ಹೆಚ್ಚಳವಾಗುತ್ತದೆ. ದಿನಕ್ಕೆ 2-3 ಎಳನೀರು ಕುಡಿಯಿರಿ.
    * ದಾಳಿಂಬೆ ಹಣ್ಣಿನ ಬೀಜಗಳು ಕಬ್ಬಿಣಾಂಶದ ಪ್ರಮುಖ ಮೂಲವಾಗಿವೆ. ದಾಳಿಂಬೆ ರಸ, ಹಣ್ಣು ಸೇವನೆಯಿಂದ ರಕ್ತಕಣಗಳನ್ನು ನಿಯಂತ್ರಣದಲ್ಲಿಡಬಹುದು. ಆಯಾಸವನ್ನೂ ಕಡಿಮೆಗೊಳಿಸುತ್ತದೆ.
    * ಡೆಂಗ್ಯೂದಿಂದ ಬಳಲುತ್ತಿರುವವರಿಗೆ ಪಪ್ಪಾಯ ಎಲೆ ಮತ್ತು ಬೀಜಗಳ ರಸವೂ ಅತ್ಯುತ್ತಮ ಔಷಧಿ. ಪಪ್ಪಾಯ ಎಲೆಯ ರಸ, ಪಪ್ಪಾಯ ಹಣ್ಣಿನ ಜ್ಯೂಸ್ ಸೇವನೆ ಉತ್ತಮ.
    * ಮೊಳಕೆ ಕಾಳುಗಳ ಸೇವನೆ ಉತ್ತಮ.
    * ಗಂಟೆಗೊಂದು ಲೋಟ ನೀರು ಕುಡಿಯುವುದು.
    * ಡೆಂಗ್ಯೂ ಜ್ವರ ಕಡಿಮೆ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.
    * ತರಕಾರಿ ಜ್ಯೂಸ್, ಸೂಪ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

    ಮುಂಜಾಗ್ರತಾ ಕ್ರಮಗಳೇನು?:
    * ಡೆಂಗ್ಯೂ ಹರಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ನೀವು ಎಚ್ಚರಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಬೇಕು.
    * ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು.
    * ಮನೆಯ ಸುತ್ತಮುತ್ತ ನಿಂತಿರುವ ನೀರಿನ ನೆಲೆಗಳನ್ನು ನಾಶ ಪಡಿಸಬೇಕು.
    * ತೆಂಗಿನ ಚಿಪ್ಪು, ಟಯರ್‍ಗಳು, ಚಿಕ್ಕ ಗುಂಡಿಗಳು, ಬೇಡ ಎಂದು ಬಿಸಾಡಿದ ಪ್ಲಾಸ್ಟಿಕ್ ಬಕೆಟ್, ಜಗ್ ಇತ್ಯಾದಿಗಳ ಸಂಗ್ರಹ ಬೇಡ.
    * ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಸಿಂಪಡಿಸಿ.
    * ಮಕ್ಕಳಿಗೆ ಉದ್ದ ತೋಳಿನ ಬಟ್ಟೆ, ಸಾಕ್ಸ್ ಹಾಕಿರಿ.
    * ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿರಿ.

    ಒಟ್ಟಿನಲ್ಲಿ ಡೆಂಗ್ಯೂ ಜ್ವರ ಬಂತೆಂದರೆ ಭಯ ಪಡುವುದು ಬೇಡ. ದಿನ ನಿತ್ಯದ ಆಹಾರ ಕ್ರಮ, ನಾಲಿಗೆ ರುಚಿಯನ್ನು ನಿಯಂತ್ರಣದಲ್ಲಿಡುವುದರಿಂದ ಡೆಂಗ್ಯೂವನ್ನು ಹೊಡೆದೋಡಿಸಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಭೇಟಿ ಮಾಡಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ಮನೆ ಮದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಸಲಹೆಗಳನ್ನೂ ಪಾಲಿಸಿದರೆ ನೀವು ಡೆಂಗ್ಯೂ ಜ್ವರದಿಂದ ಪಾರಾಗಬಹುದು.

  • ಮುಂಗಾರಿಗೆ ರುಚಿರುಚಿಯಾಗಿ ಪೆಪ್ಪರ್ ರಸಂ ಮಾಡುವ ವಿಧಾನ

    ಮುಂಗಾರಿಗೆ ರುಚಿರುಚಿಯಾಗಿ ಪೆಪ್ಪರ್ ರಸಂ ಮಾಡುವ ವಿಧಾನ

    ಮುಂಗಾರು ಮಳೆ ಪ್ರಾರಂಭವಾಗಿದೆ. ಪ್ರತಿದಿನ ಜಿಟಿ ಜಿಟಿ ಮಳೆಯಾಗುತ್ತಿರುತ್ತದೆ. ಜೊತೆಗೆ ಬೆಚ್ಚನೆಯ ವಾತಾವರಣ. ಹೀಗಾಗಿ ಮೆನೆಯಲ್ಲಿ ಮಕ್ಕಳಿಗೆ, ಮನೆಯವರಿಗೆ ನೆಗಡಿ, ಕೆಮ್ಮು ಮತ್ತು ಗಂಟಲು ಕಿರಿಕಿರಿ ಉಂಟಾಗುತ್ತಾರೆ. ಇವುಗಳೆಲ್ಲವನ್ನು ತಡೆಯಬೇಕಾದರೆ ಮನೆಯಲ್ಲಿ ಆಗಾಗ ಮೆಣಸಿನ ರಸಂ ಮಾಡಿ ಕೊಡಿ. ಇದರಿಂದ ಕೆಮ್ಮು ಮತ್ತು ಗಂಟಲು ಕಿರಿಕಿರಿ ಕಡಿಮೆಯಾಗುತ್ತದೆ. ಮುಂಗಾರಿನ ವಾತಾವರಣಕ್ಕೂ ತುಂಬಾ ರುಚಿಯಾಗಿರುತ್ತದೆ. ಆದ್ದರಿಂದ ನಿಮಗಾಗಿ ಮೆಣಸಿನ ರಸಂ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಾಗ್ರಿಗಳು:
    1. ಕಾಳು ಮೆಣಸು – 2 ಚಮಚ
    2. ಜೀರಿಗೆ – 1 ಚಮಚ
    3. ಶುಂಠಿ -ಸ್ವಲ್ಪ
    4. ಬೆಳ್ಳುಳ್ಳಿ – 6-7
    5. ಅರಿಶಿಣ -ಚಿಟಿಕೆ
    6. ಹುಣಸೆ ರಸ – 2 ಚಮಚ
    7. ಉಪ್ಪು – ರುಚಿಗೆ ತಕ್ಕಷ್ಟು
    8. ಬೆಲ್ಲ – 2 ಚಮಚ
    9. ಕೊತ್ತಂಬರಿ ಸುಪ್ಪು -ಸ್ವಲ್ಪ

    ಮಾಡುವ ವಿಧಾನ
    * ಮೊದಲಿಗೆ ಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಎಲ್ಲವನ್ನೂ ಜಜ್ಜಿಕೊಂಡು ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಒಂದು ಪ್ಯಾನ್‍ಗೆ ಎರಡು ಲೋಟ ನೀರು ಹಾಕಿ ಕ್ಯಾಪ್ ಮುಚ್ಚಿ 2 ರಿಂದ 3 ನಿಮಿಷ ಕಾಯಿಸಿ.
    * ನೀರು ಕುದಿಯುತ್ತಿದ್ದಾಗ ಜಜ್ಜಿಕೊಂಡಿದ್ದ ಮಿಶ್ರಣ, ಚಿಟಿಕೆ ಅರಿಶಿಣ, ಹುಣಸೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಎಲ್ಲವನ್ನು ಮಿಕ್ಸ್ ಮಾಡಿ. ಕ್ಯಾಪ್ ಮುಚ್ಚಿ 5 ನಿಮಿಷ ಬೇಯಿಸಿ. ನಂತರ ಒಗ್ಗರಣೆ ಹಾಕಿ.

    ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
    1. ತುಪ್ಪ – 1 ಚಮಚ
    2. ಸಾಸಿವೆ – 1 ಚಮಚ
    3. ಒಣ ಮೆಣಸಿನ ಕಾಯಿ – 1
    4. ಕರಿಬೇವು – 3-4
    5 ಇಂಗು – ಚಿಟಿಕೆ

    * ಒಂದು ಸಣ್ಣ ಬೌಲ್‍ಗೆ ತುಪ್ಪ, ಸಾಸಿವೆ, ಒಣ ಮೆಣಸಿನ ಕಾಯಿ, ಕರಿಬೇವು, ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ ಕುದಿಯುದ್ದಿದ್ದ ರಸಂಗೆ ಒಗ್ಗರಣೆ ಹಾಕಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಪೆಪ್ಪರ್ ರಸಂ ಸವಿಯಲು ಸಿದ್ಧ.
    * ಈ ರಸಂ ಅನ್ನು ಅನ್ನಕ್ಕೆ ಮಿಕ್ಸ್ ಮಾಡಿಕೊಂಡು ತಿನ್ನಬಹುದು. ಜೊತೆಗೆ ಬರಿ ರಸಂ ಅನ್ನು ಸವಿಯಬಹದು. ಇದು ಆರೋಗ್ಯಕ್ಕೂ ಒಳ್ಳೆಯದು.