Tag: health

  • ನನಗೆ ಕ್ಯಾನ್ಸರ್ ಇರುವುದು ನಿಜ, ಟಿಕೆಟ್ ಕನ್ಫರ್ಮ್ ಆಗಿದೆ: ಮುತ್ತಪ್ಪ ರೈ

    ನನಗೆ ಕ್ಯಾನ್ಸರ್ ಇರುವುದು ನಿಜ, ಟಿಕೆಟ್ ಕನ್ಫರ್ಮ್ ಆಗಿದೆ: ಮುತ್ತಪ್ಪ ರೈ

    ರಾಮನಗರ: ನನಗೆ ಹುಷಾರಿಲ್ಲದಿರುವುದು ನಿಜ. ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನಿಜವಾಗಿದ್ದು, ವಿಲ್ ಪವರ್‍ನಿಂದ ಆರೋಗ್ಯವಾಗಿದ್ದೇನೆ. ಅಲ್ಲದೇ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ್ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ತಮ್ಮ ಆರೋಗ್ಯದ ಬಗ್ಗೆ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಎನ್.ಮುತ್ತಪ್ಪ ರೈ ತಾಲೂಕಿನ ಬಿಡದಿಯ ನಿವಾಸದಲ್ಲಿ ತಿಳಿಸಿದ್ದಾರೆ.

    ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಆರೋಗ್ಯದ ಬಗ್ಗೆ ಕಳೆದ 5 ತಿಂಗಳಿನಿಂದ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು. ಮುತ್ತಪ್ಪ ರೈಗೆ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದಾರೆ ಬದುಕುವುದು ಖಚಿತವಿಲ್ಲ. ಸ್ವಲ್ಪ ದಿನ ಮಾತ್ರ ಬದುಕಿರುತ್ತಾರೆ ಎಂದು ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದವು.

    ಈ ಹಿನ್ನೆಲೆಯಲ್ಲಿ ಇಂದು ತಮ್ಮ ನಿವಾಸದಲ್ಲಿ ಮಾತನಾಡಿದ ಮುತ್ತಪ್ಪ ರೈ ಅವರು, ನನಗೆ ಕ್ಯಾನ್ಸರ್ ಇರುವುದು ನಿಜ. ಕಳೆದ ಮೂರು ತಿಂಗಳ ಹಿಂದೆ ಕುಕ್ಕೆಗೆ ಹೋಗಿ ಬರುವಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ಪರೀಕ್ಷೆಗೆ ಹೋಗಿದ್ದಾಗ ವೈದ್ಯರು ನಿಮಗೆ ಕ್ಯಾನ್ಸರ್ ಇದ್ದು, ಲಿವರ್ ತನಕ ಹರಡಿದೆ. ಬದುಕುವುದು ಬಹುತೇಕ 15 ದಿನಗಳು ಅಷ್ಟೇ ಎಂದು ತಿಳಿಸಿದರು. ಚಿಕಿತ್ಸೆಗಾಗಿ ದೆಹಲಿಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದುಕೊಂಡು ಇಪ್ಪತ್ತು ದಿನದಲ್ಲಿ ಶೇ.90% ರಷ್ಟು ಸುಧಾರಿಸಿದ್ದೆ. ನಂತರ ಮತ್ತೊಂದು ಚೆಕಪ್ ಮಾಡಿದಾಗ ಕ್ಯಾನ್ಸರ್ ಬ್ರೈನ್ ತನಕ ಹರಡಿತ್ತು. ಬಳಿಕ ವೈದ್ಯರು ನೀಡಿದ ಚಿಕಿತ್ಸೆ ಹಾಗೂ ನನ್ನ ವಿಲ್ ಪವರ್ ನಿಂದ ಇಂದು ಕ್ಯಾನ್ಸರ್ ವಿರುದ್ಧ ಜಯಸಿದ್ದು ಆರಾಮಾಗಿ ಬದುಕಿದ್ದೇನೆ ಎಂದರು.

    ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಮುತ್ತಪ್ಪ ರೈ ಕೆಲವು ತಿಂಗಳಿನಿಂದ ಉತ್ತಮ ಆಡಳಿತ ನಡೆಸುತ್ತಿದ್ದರು. ಅದರಲ್ಲೂ ಗ್ರಾಮೀಣ ಭಾಗದ ಕ್ರೀಡಾಪಟುಗಳ ನೆರವಿಗೆ ನಿಲ್ಲುವುದರ ಮೂಲಕ ಉತ್ತಮ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಆದರೆ ಇದೀಗ ಆರೋಗ್ಯದ ಸಮಸ್ಯೆಯಿಂದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಡಿಸಿಎಂ ಅಶ್ವಥ್ ನಾರಾಯಣ್‍ರವರು ಕೂಡಾ ಆ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಸದ್ಯಕ್ಕೆ ಆರಾಮಾಗಿದ್ದು, ನನಗೇನೂ ತೊಂದರೆಯಿಲ್ಲ. ಎಷ್ಟು ದಿನ ಬದುಕುತ್ತೇನೋ ದೇವರಿಗೆ ಗೊತ್ತು ಸಾಯೋದಕ್ಕೆ ಹೆದರುವುದಿಲ್ಲ ಎಂದು ರೈ ಹೇಳಿದರು.

    ತಮ್ಮ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಎರಡು ಸ್ಥಾನವನ್ನು ಹೊಂದಿದ್ದ ಮುತ್ತಪ್ಪ ರೈ ಅವರು ಇದೀಗ ಕೆಎಸ್‍ಎಎ ಜೊತೆಗೆ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಸ್ಥಾನವನ್ನು ಸಹ ತೊರೆದು ಆ ಸ್ಥಾನಕ್ಕೆ ಬೆಂಗಳೂರು ನಗರಾಧ್ಯಕ್ಷರಾಗಿದ್ದ ಜಗದೀಶ್‍ರನ್ನು ಆಯ್ಕೆ ಮಾಡಿದ್ದಾರೆ.

  • ಆರೋಗ್ಯ ಸಚಿವರ ತವರು ಜಿಲ್ಲಾಸ್ಪತ್ರೆ ಈಗ ಹಂದಿಗಳ ವಾಸ ಸ್ಥಳ

    ಆರೋಗ್ಯ ಸಚಿವರ ತವರು ಜಿಲ್ಲಾಸ್ಪತ್ರೆ ಈಗ ಹಂದಿಗಳ ವಾಸ ಸ್ಥಳ

    ಬಳ್ಳಾರಿ: ಸದಾ ಅವ್ಯವಸ್ಥೆಗಳ ಮೂಲಕವೇ ಸುದ್ದಿಯಾಗುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಲ್ಯಾಣ ಕರ್ನಾಟಕದ ಬಹು ದೊಡ್ಡ ಆಸ್ಪತ್ರೆ ಅಂದರೆ ಅದು ಗಣಿ ನಾಡು ಬಳ್ಳಾರಿ ವಿಮ್ಸ್ ಆಸ್ಪತ್ರೆ. ಆದರೆ ಆಸ್ಪತ್ರೆ ಈಗ ಹಂದಿಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ರೋಗಿಗಳಿಗೆ ಆರೋಗ್ಯವನ್ನು ನೀಡಬೇಕಾದ ಆಸ್ಪತ್ರೆಯೇ ರೋಗ ಹರಡುವ ಸ್ಥಳವಾಗಿದೆ.

    ಬಳ್ಳಾರಿ ವಿಮ್ಸ್ ಆಸ್ಪತ್ರೆಯನ್ನು 10 ಎಕೆರೆ ಜಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಆಸ್ಪತ್ರೆಯ ಬಹುತೇಕ ಭಾಗದಲ್ಲಿ ಚರಂಡಿ ನೀರು, ಒಳಚರಂಡಿ ಕೊಳಕು ನೀರು ಹರಿದು ಬರುತ್ತೆ. ಜೊತೆಗೆ ಇದೇ ನೀರಿನಲ್ಲಿ ಹಂದಿಗಳು ವಾಸ ಮಾಡುತ್ತವೆ. ಆಸ್ಪತ್ರೆಯ ಆವರಣದಲ್ಲಿ ಸುಮಾರು ನೂರಕ್ಕೆ ಹೆಚ್ಚು ಹಂದಿಗಳು ದಂಡೆ ಇದೆ. ಹೀಗಿದ್ದರೂ ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಲು ವಿಮ್ಸ್ ಆಡಳಿತ ಮಂಡಳಿ ಮುಂದಾಗಿಲ್ಲ.

    ಚಿಕಿತ್ಸೆಗಾಗಿ ರಾಯಚೂರು. ಬಳ್ಳಾರಿ ಪಕ್ಕದ ಆಂಧ್ರ ಪ್ರದೇಶದ ಸಾವಿರಾರು ಜನ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಹೀಗೆ ಚಿಕಿತ್ಸೆಗೆ ಬಂದವರು ರೋಗಿಗಳ ಜೊತೆಯಲ್ಲಿ ಅವರ ಸಂಬಂಧಿಕರು ಸಹ ಆಸ್ಪತ್ರೆಗೆ ಬಂದಿರುತ್ತಾರೆ. ಆದರೆ ಬಂದವರಿಗೆ ಆಸ್ಪತ್ರೆಯಲ್ಲಿ ಮಲಗುವ ವ್ಯವಸ್ಥೆ ಇರುವುದಿಲ್ಲ.

    ಹೀಗಾಗಿ ಜನ ಆಸ್ಪತ್ರೆಯ ಕೊಳಕು ನೀರು ಇರುವ ಪಕ್ಕದ ಜಾಗದಲ್ಲಿಯೇ ಇದೇ ಆವರಣದಲ್ಲಿ ಮಲಗುತ್ತಾರೆ. ಇಲ್ಲಿಯೇ ಊಟ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಹೀಗಾಗಿ ರೋಗಿಗಳ ಜೊತೆಯಲ್ಲಿ ಬಂದವರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದ ಅತಿ ದೊಡ್ಡ ಆಸ್ಪತ್ರೆ ಅವ್ಯವಸ್ಥೆ ಗಮನಕ್ಕೆ ಬಂದರೂ ಆರೋಗ್ಯ ಸಚಿವ ಶ್ರೀರಾಮುಲು ಸುಮ್ಮನಿದ್ದಾರೆ. ಸರ್ಕಾರ ಉಳಿಸುವ ಮಂತ್ರಿಗಿರಿ ಪಡೆಯುವಲ್ಲಿ ಕಾಲ ಕಳೆಯುವ ಈ ಮಂತ್ರಿಗಳಿಗೆ ಈ ಆಸ್ಪತ್ರೆಯ ಪರಿಸ್ಥಿತಿ ಯಾಕೆ ಕಾಣುತಿಲ್ಲಾ ಎಂಬುದು ಜನರ ಪ್ರಶ್ನೆಯಾಗಿದೆ.

  • ಜೀವನ್ಮರಣ ಹೋರಾಟದಲ್ಲಿ ಗೆದ್ದ ತನ್ವೀರ್ ಸೇಠ್- ಮೈಸೂರಿಗೆ ಆಗಮನ

    ಜೀವನ್ಮರಣ ಹೋರಾಟದಲ್ಲಿ ಗೆದ್ದ ತನ್ವೀರ್ ಸೇಠ್- ಮೈಸೂರಿಗೆ ಆಗಮನ

    ಮೈಸೂರು: ದುಷ್ಕರ್ಮಿ ನಡೆಸಿದ ಕೊಲೆ ಯತ್ನದಿಂದ ಜೀವನ್ಮರಣ ಹೋರಾಟದಲ್ಲಿದ್ದ ಶಾಸಕ ತನ್ವೀರ್ ಸೇಠ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

    ಹೆಚ್ಚಿನ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ವಿದೇಶಕ್ಕೆ ತೆರಳಿದ್ದ ಅವರು ವಿಶ್ರಾಂತಿ ಮುಗಿಸಿ ಇಂದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಷ್ಟು ದಿನ ಅವರು ದುಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕಳೆದ ವರ್ಷದ ನವೆಂಬರ್ 18ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು.

    ಘಟನೆಯಲ್ಲಿ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ತನ್ವೀರ್ ಸೇಠ್ ಜೀವನ್ಮರಣ ಹೋರಾಟ ಆರಂಭಿಸಿದ್ದರು. ಆಗ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಇವತ್ತು ಭಾರತಕ್ಕೆ ವಾಪಾಸ್ ಬಂದಿರುವ ಸೇಠ್ ರಾತ್ರಿ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.

  • ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಉಡುಪಿ: ನಮ್ಮ ಮನೆಯಲ್ಲಿ ಕೃಷ್ಣ ಪೂಜೆಯನ್ನು ಮಾಡಿದ್ದರು ಎಂದು ಹೇಳಿ ಪೇಜಾವರ ಶ್ರೀಗಳನ್ನು ನೆನಪಿಸಿಕೊಂಡು ಮಾಜಿ ಸಚಿವ ರಾಮ್ ದಾಸ್ ಕಣ್ಣೀರು ಹಾಕಿದರು.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೈಸೂರಿಗೆ ಭೇಟಿ ಕೊಟ್ಟಾಗ ಕಾರಾಗೃಹಕ್ಕೆ ಭೇಟಿ ಕೊಟ್ಟು ಅಲ್ಲಿ ಯೋಗ ಕೇಂದ್ರ ಹಾಗೂ ಡಿಜಿಟಲ್ ಲೈಬ್ರರಿಯನ್ನು ತೆರೆದಿದ್ದರು. ಕೈದಿಗಳ ಮನಸು ಪರಿವರ್ತನೆಗೆ ಸಾಕಷ್ಟು ಶ್ರಮ ಪಟ್ಟಿದ್ದರು ಎಂದು ಹೇಳುತ್ತಾ ಶ್ರೀಗಳ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದರು.

    ಅವರು ಈ ಒಂದು ಯುಗದಲ್ಲಿ ಪ್ರವರ್ತಕರಾಗಿ ಎಲ್ಲ ರೀತಿಯ ಜ್ಞಾನವನ್ನು ಹೊಂದಿ ಸಮಾಜದ ಮಧ್ಯದಲ್ಲಿ ಯಾವುದೇ ಬೇಧ-ಭಾವವಿಲ್ಲದೆ ಕಟ್ಟಕಡೆಯ ವ್ಯಕ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಶ್ರೀಗಳ ಕೊನೆಯಾಸೆಯಂತೆ ಇಂದು ಬೆಳಗ್ಗೆ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ವೆಂಟಿಲೇಟರ್ ಸಹಿತ ಅಂಬುಲೆನ್ಸ್ ನಲ್ಲಿ ಪೇಜಾವರ ಮಠಕ್ಕೆ ಶಿಫ್ಟ್ ಮಾಡಲಾಯಿತು. ಸದ್ಯ ಮಠದ ಆಚರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಮಠಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಅವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮಠಕ್ಕೆ ಬರಬೇಡಿ, ಅಜ್ಜರ ಕಾಡು ಮೈದಾನಕ್ಕೆ ಬನ್ನಿ ಎಂದು ಕಿರಿಯ ಶ್ರೀಗಳು ಭಕ್ತರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.

    ಇತ್ತ ಅಜ್ಜರ ಕಾಡು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ ಶ್ರೀಗಳು ಕೃಷ್ಣೈಕ್ಯರಾಗಿದ್ದು, ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

  • ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಸದ್ಯ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಇತ್ತ ಭಕ್ತರು ಮಠದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

    ಪೇಜಾವರ ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಸ್ಥಳಾಂತರಿಸಲಾಗಿದೆ. ವೆಂಟಿಲೇಟರ್ ಸಹಿತ ಆಸ್ಪತ್ರೆಯಿಂದ ಶ್ರೀಗಳನ್ನು ಕರೆದುಕೊಂಡು ಬಂದಿದ್ದು, ಸದ್ಯ ಮಠದೊಳಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ 6 ವೈದ್ಯರ ತಂಡ ಆಗಮಿಸಿದೆ.

    ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮಠಕ್ಕೆ ಸಾವಿರಾರು ಭಕ್ತರು ದೌಡಾಯಿಸಿದ್ದು, ಪೂಜೆ ನಡೆಯುತ್ತಿದೆ. ಇನ್ನೊಂದೆಡೆ ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ ಎಂದು ಭಕ್ತರು ಹಾಗೂ ಪೂರ್ವಾಶ್ರಮದ ಸಂಬಂಧಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಇಂದು ಬೆಳಗ್ಗೆಯಿಂದ ಭಕ್ತರಿಗೆ ಮಠಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಜೊತೆಗೆ ಪೇಜಾವರ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 700 ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮಠದ ಸುತ್ತ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಪೇಜಾವರ ಮಠದೊಳಗೆ ಭಕ್ತರ್ಯಾರು ಬರಬಾರದು, ಪೇಜಾವರ ಶ್ರೀ ಚಿಕಿತ್ಸೆಗೆ ತೊಂದರೆ ಮಾಡಬಾರದು ಎಂದು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಶ್ರೀ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಎಂದಿಗಿಂತ ಶೀಘ್ರವಾಗಿ ಪೂಜೆಯನ್ನು ಪಲಿಮಾರು ಸ್ವಾಮೀಜಿ ನೆರವೇರಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಚೇತರಿಕೆಗಾಗಿ ವಿಶೇಷ ಪೂಜೆ, ಪಾರಾಯಣ ಮಾಡಲಾಗುತ್ತಿದೆ. ಇತ್ತ ಪೇಜಾವರ ಶ್ರೀಗಳನ್ನು ಮಠಕ್ಕೆ ಕರೆತರುವ ವಿಚಾರ ಗೊತ್ತಾಗುತ್ತಿದ್ದಂತೆ, ದೂರದೂರಿನಿಂದ ಕೃಷ್ಣಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜೊತೆಗೆ ಕೃಷ್ಣನ ಸನ್ನಿಧಾನದಲ್ಲಿ ಭಕ್ತರಿಂದ ಪ್ರಾರ್ಥನೆ ಮಾಡಲಾಗುತ್ತಿದೆ.

  • ಪೇಜಾವರಶ್ರೀ ಆರೋಗ್ಯ ಕ್ಷೀಣ- ಕಸ್ತೂರ್ಬಾ ಮೆಡಿಕಲ್ ಕಾಲೇಜು

    ಪೇಜಾವರಶ್ರೀ ಆರೋಗ್ಯ ಕ್ಷೀಣ- ಕಸ್ತೂರ್ಬಾ ಮೆಡಿಕಲ್ ಕಾಲೇಜು

    ಉಡುಪಿ: ಕಳೆದ ಶುಕ್ರವಾರ ತೀವ್ರ ಉಸಿರಾಟ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿತಿಯಲ್ಲಿ ಕಳೆದೆರಡು ದಿನದಿಂದ ಬೆಳವಣಿಗೆಯಾಗಿಲ್ಲ.

    ಎಂಟನೇ ದಿನದ ಹೆಲ್ತ್ ಬುಲೆಟಿನ್ ನಲ್ಲಿ ಕೆಎಂಸಿ ವೈದ್ಯರು ಈ ವರದಿ ಕೊಟ್ಟಿದ್ದಾರೆ. ಪೇಜಾವರಶ್ರೀಗಳ ಆರೋಗ್ಯ ಸ್ಥಿತಿಯು ತೀರಾ ಗಂಭೀರವಾಗಿದೆ. ಶ್ರೀಗಳ ಪ್ರಜ್ಞೆಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

    ಪೇಜಾವರಶ್ರೀ ದೇಹ ಸ್ಥಿತಿಯಲ್ಲಿ ನಿನ್ನೆಯಿಂದ ಇಳಿಮುಖವಾಗಿದೆ. ಚಿಕಿತ್ಸೆ ಮುಂದುವರಿಸಿದ್ದಾರೆ. ಶ್ರೀಗಳ ದೇಹ ಚಿಕಿತ್ಸೆಗೆ ಸ್ಪಂದಿಸಬಹುದು ಎಂಬ ನಿರೀಕ್ಷೆಯಿದೆ. ಏಮ್ಸ್ ಜೊತೆಯೂ ಗಂಟೆಗೊಮ್ಮೆ ಸಂಪರ್ಕದಲ್ಲಿದ್ದೇವೆ ಎಂದು ವಿವರಿಸಿದ್ದಾರೆ. ಬೆಂಗಳೂರು ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರು ಇಂದು ಮಣಿಪಾಲಕ್ಕೆ ಆಗಮಿಸಿ ಪರಿಶೀಲಿಸಿದ್ದರು.

  • ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ವೆಂಟಿಲೇಟರ್ ಮೂಲಕವೇ ಉಸಿರಾಟ

    ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ವೆಂಟಿಲೇಟರ್ ಮೂಲಕವೇ ಉಸಿರಾಟ

    – ಉಡುಪಿಗೆ ಇಂದು ಉಮಾಭಾರತಿ ಭೇಟಿ?

    ಉಡುಪಿ: ಪೇಜಾವರಶ್ರೀ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮಧ್ಯರಾತ್ರಿ ತಪಾಸಣೆ ನಡೆಸಿದ ತಜ್ಞ ವೈದ್ಯರು ಕೊಂಚಮಟ್ಟಿನ ಚೇತರಿಕೆ ಗುರುತಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಶ್ರೀಗಳಿಗೆ ಔಷಧಿ ಪ್ರಮಾಣ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದ್ದು, ಇಂದು ಈ ಬಗ್ಗೆ ವೈದ್ಯತಂಡ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಶ್ರೀಗಳಿಗೆ ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆ ಮುಂದುವರಿದಿದೆ ಎಂದು ಶ್ರೀಗಳ ಆಪ್ತ ಸಹಾಯಕರು ಮಾಹಿತಿ ನೀಡಿದ್ದಾರೆ.

    ಪೇಜಾವರಶ್ರೀ ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ಕೇಂದ್ರ ಮಾಜಿ ಸಚಿವೆ ಉಮಾಭಾರತಿ ಉಡುಪಿಗೆ ಆಗಮಿಸುವ ಸಾಧ್ಯತೆಗಳಿದೆ. ಪೇಜಾವರ ಶ್ರೀಗಳಿಂದ ದೀಕ್ಷೆ ಪಡೆದಿರುವ ಉಮಾಭಾರತಿ, ಇಂದು ಗುರುಗಳ ದರ್ಶನ ಪಡೆಯಲಿದ್ದಾರೆ. ರೈಲಿನ ಮೂಲಕ ಉಡುಪಿಗೆ ಧಾವಿಸುತ್ತಿರುವ ಉಮಾಭಾರತಿ ಅವರು ಸಂಜೆ ಕೆಎಂಸಿಗೆ ಭೇಟಿ ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಶುಕ್ರವಾರ ಮುಂಜಾನೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶ್ರೀಗಳ ಎದೆಯಲ್ಲಿ ಕಟ್ಟಿದ ಕಫ ನಿಧಾನವಾಗಿ ಕರಗುತ್ತಿದೆ. ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ, ಎರಡು ದಿನದಿಂದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ ಎಂದು ಸ್ವಾಮೀಜಿ ಆಪ್ತ ಸಹಾಯಕ ವಿಷ್ಣುಮೂರ್ತಿ ಆಚಾರ್ಯ ಭಾನುವಾರ ಹೇಳಿದ್ದರು.

  • ಪೇಜಾವರಶ್ರೀ ರಾಮಮಂದಿರದ ಭೂಮಿಪೂಜೆ ಮಾಡಬೇಕು – ಮಂತ್ರಾಲಯ ಶ್ರೀ

    ಪೇಜಾವರಶ್ರೀ ರಾಮಮಂದಿರದ ಭೂಮಿಪೂಜೆ ಮಾಡಬೇಕು – ಮಂತ್ರಾಲಯ ಶ್ರೀ

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಉಸಿರಾಟ ಸಮಸ್ಯೆಯಿಂದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಮಂತ್ರಾಲಯ ಮಠಾಧೀಶ ಸುಬುಧೇದ್ರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಮಂತ್ರಾಲಯದಲ್ಲಿ ದೈನಂದಿನ ಪೂಜೆ ಮುಗಿಸಿ ಬಂದಿದ್ದೇವೆ. ಶ್ರೀಗಳನ್ನು ಕಣ್ಣಾರೆ ನೋಡಿ ಈಗ ತೃಪ್ತಿ ಆಯಿತು. ಕ್ರಮ ಕ್ರಮವಾಗಿ ಗುಣಮುಖ ಆಗ್ತಾಯಿದ್ದಾರೆ. ಮಠದ ವತಿಯಿಂದ ಹೋಮ, ಜಪ, ಧಾರ್ಮಿಕ ವಿಧಿ ವಿಧಾನ ಏರ್ಪಡಿಸಿದ್ದೇವೆ. ಶಾಖಾಮಠ, ಭಕ್ತರು ಮತ್ತು ವಿದ್ವಾಂಸರಿಗೆ ಕರೆ ಕೊಟ್ಟು ಪ್ರಾರ್ಥನೆಗಳನ್ನು ಮಾಡಿದ್ದೇವೆ. ವೈದ್ಯ ತಂಡ ತುಂಬಾ ಶ್ರಮ ವಹಿಸುತ್ತಿದೆ. ಕೆಎಂಸಿ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

    ಕಿರಿಯ ಸ್ವಾಮೀಜಿಗಳಿಗೂ ಧೈರ್ಯ ನೀಡಿದ್ದೇವೆ. ದೇವರು ಅವರನ್ನು ಬೇಗ ಗುಣಮುಖವಾಗುವಂತೆ ಮಾಡಲಿ. ಪೇಜಾವರ ಶ್ರೀ ರಾಮಮಂದಿರಕ್ಕೆ ಧಾರ್ಮಿಕ ಲೌಕಿಕ ಹೋರಾಟ ಮಾಡಿದ ಹಿರಿಯ ವ್ಯಕ್ತಿ. ರಾಮಮಂದಿರ ನಿರ್ಮಾಣವಾಗಲಿ, ಪೇಜಾವರ ಶ್ರೀಗಳೇ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿ ಎಂದು ಮಂತ್ರಾಲಯ ಸ್ವಾಮೀಜಿ ಹಾರೈಸಿದರು.

  • ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವೃದ್ಧಿ- ಕೃಷ್ಣಾಪುರ ಶ್ರೀ

    ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವೃದ್ಧಿ- ಕೃಷ್ಣಾಪುರ ಶ್ರೀ

    ಉಡುಪಿ: ಪೇಜಾವರ ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಎಂಸಿಯಲ್ಲಿ ಕಳೆದೆರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಗಳ ಎದೆಯಲ್ಲಿರುವ ಕಫ ನೀರಾಗುತ್ತಿದೆ. ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೇಜಾವರ ಕಿರಿಯಶ್ರೀ, ಕೃಷ್ಣಾಪುರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವಯೋ ಸಹಜದಿಂದಾಗಿ ನಿಧಾನವಾಗಿ ಗುಣಮುಖರಾಗಲು ಆಗುತ್ತಿದ್ದಾರೆ. ಭಕ್ತರು ಯಾರು ಕೂಡ ಉದ್ವೇಗಕ್ಕೆ ಒಳಗಾಗಬೇಡಿ. ಎಲ್ಲರೂ ಅಲ್ಲಲ್ಲೇ ಪ್ರಾರ್ಥನೆ ಮಾಡಿ ಎಂದು ಹೇಳಿದರು. ವೆಂಟಿಲೇಟರ್ ನಲ್ಲೆ ಉಸಿರಾಟ ಮುಂದುವರಿಸಲಾಗಿದೆ. ನಾವೂ ಪೂಜೆ ಮಾಡುತ್ತಿದ್ದೇವೆ. ಕರ್ನಾಟಕ ಅಲ್ಲದೇ ಇತರ ರಾಜ್ಯಗಳಲ್ಲೂ ಪ್ರಾರ್ಥನೆ ನಡೆಯುತ್ತಿದೆ ಎಂದು ತಿಳಿಸಿದರು.

    ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಶ್ರೀಗಳ ಆರೋಗ್ಯ ವಿಚಾರಿಸಿ, ಚೇತರಿಕೆ ನಿಧಾನವಾಗಿ ಆಗುತ್ತಿದೆ. ಬೇಗ ಚೇತರಿಕೆ ಆಗುವಂತೆ ದೇವರು ಮಾಡಲಿ. ಮತ್ತೆ ಅವರು ಬಂದು ನಮಗೆಲ್ಲರಿಗೂ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು. ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಬಂದು ಪೇಜಾವರಶ್ರೀ ಆರೋಗ್ಯದ ಕಾಳಜಿ ತೋರಿದ್ದಾರೆ.

    ಕಳೆದ ಎರಡು ದಿನಗಳಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಸುಶ್ರೀಂದ್ರ ತೀರ್ಥ, ಸೋದೆ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಕಾಣಿಯೂರು ವಿದ್ಯಾವಲ್ಲಭ ಶ್ರೀ, ಅದಮಾರು ಮಠದ ವಿಶ್ವಪ್ರಿಯ ಮತ್ತು ಈಶಪ್ರಿಯ ತೀರ್ಥ ಸ್ವಾಮೀಜಿಗಳು ಬಂದು ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

  • ಎದೆಯಲ್ಲಿದ್ದ ಕಫ ನೀರಾಗುತ್ತಿದೆ- ಚಿಕಿತ್ಸೆಗೆ ಪೇಜಾವರ ಶ್ರೀಗಳು ಸ್ಪಂದನೆ

    ಎದೆಯಲ್ಲಿದ್ದ ಕಫ ನೀರಾಗುತ್ತಿದೆ- ಚಿಕಿತ್ಸೆಗೆ ಪೇಜಾವರ ಶ್ರೀಗಳು ಸ್ಪಂದನೆ

    ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ. ಕಳೆದ 48 ಗಂಟೆಯಲ್ಲಿ ಹೆಚ್ಚು ಚೇತರಿಸಿಕೊಂಡಿದ್ದು, ಮಣಿಪಾಲ ಕೆಎಂಸಿ ಬಾಳಿಗಾ ಬ್ಲಾಕ್ ಐಸಿಯುನಲ್ಲಿ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶ್ರೀಗಳ ಎದೆಯಲ್ಲಿ ಕಟ್ಟಿದ ಕಫ ನಿಧಾನವಾಗಿ ಕರಗುತ್ತಿದೆ. ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ, ಎರಡು ದಿನದಿಂದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ ಎಂದು ಸ್ವಾಮೀಜಿ ಆಪ್ತ ಸಹಾಯಕ ವಿಷ್ಣುಮೂರ್ತಿ ಆಚಾರ್ಯ ಹೇಳಿದ್ದಾರೆ.

    ವಿಶ್ವಪ್ರಸನ್ನ ತೀರ್ಥರಿಂದ ವಿಶೇಷ ಪೂಜೆ:
    ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಪೇಜಾವರ ಮಠದಲ್ಲಿ ಪೂಜೆ, ಪುನಸ್ಕಾರ ಮುಂದುವರಿದಿದೆ. ಪೇಜಾವರ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೇವರಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ, ಹಿರಿಯ ಶ್ರೀಗಳು ಆರೋಗ್ಯವಂತರಾಗಿ ಮಠಕ್ಕೆ ವಾಪಸ್ ಆಗಬೇಕು ಎಂದು ದೇವರಲ್ಲಿ ಕೇಳಿಕೊಂಡಿದ್ದಾರೆ. ಪೂಜೆಯಲ್ಲಿ ಮಠದ ಶಿಷ್ಯರು, ಸಿಬ್ಬಂದಿ ಭಾಗಿಯಾಗಿದ್ದಾರೆ.

    ಹೆಲ್ತ್ ಬುಲೆಟಿನ್ ರಿಲೀಸ್:
    ಕೆಎಂಸಿ ಆಸ್ಪತ್ರೆ ಐದನೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ. ವೈದ್ಯರು 48 ಗಂಟೆಗಳ ಅವಲೋಕನಾ ಅವಧಿ ಮುಗಿಸಿದ್ದು, ಈ ಹೆಲ್ತ್ ಬುಲೆಟಿನ್ ಬಹಳ ಮಹತ್ವ ಪಡೆದಿದೆ.